ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಹಿರಿಯ ಸ್ತ್ರೀವೇಷಧಾರಿ ವಂಡ್ಸೆ ನಾರಾಯಣ ಗಾಣಿಗ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಶುಕ್ರವಾರ, ಒಕ್ಟೋಬರ್ 31 , 2014

ಯಕ್ಷಗಾನಕ್ಕೆ ಒಲಿದು ಬಂದ ಈ ವರ್ಷದ ರಾಜ್ಯ ಪ್ರಶಸ್ತಿಗಳಲ್ಲಿ ಒಂದು ಬಡಗುತಿಟ್ಟಿನ ಹಿರಿಯ ಸ್ತ್ರೀವೇಷಧಾರಿ ವಂಡ್ಸೆ ನಾರಾಯಣ ಗಾಣಿಗರಿಗೆ ಸಹಜವಾಗಿಯೇ ಸಂದಿದೆ.

ಸುಮಾರು 75 ವರ್ಷ ಪ್ರಾಯದ ನಾರಾಯಣ ಗಾಣಿಗರು ಐದು ದಶಕಗಳ ಕಾಲ ತಮ್ಮ ಪಾದರಸ ಸದೃಶವಾದ ವ್ಯಕ್ತಿತ್ವ, ಸ್ತ್ರೀಸಹಜ ಹಾವಭಾವ ಒನುಪು, ವೈಯ್ಯಾರ, ಕುಣಿತ, ಮಾತುಗಾರಿಕೆಯಿಂದ, ಪ್ರಸಿಧ್ಧ ಸ್ತ್ರೀ ವೇಷಧಾರಿಯಾಗಿ, ತೆಂಕು ಮತ್ತು ಬಡಗುತಿಟ್ಟಿನ ರಂಗಸ್ಥಳವನ್ನು ಶ್ರೀಮಂತಗೊಳಿಸಿದವರು. ಎಲೆಮರೆಯ ಕಾಯಿಯಾಗಿ ನಿವೃತ್ತ ಜೀವನವನ್ನು ಸಾಗಿಸುತ್ತಿರುವ ಗಾಣಿಗರು ಬಯಲಾಟ ರಂಗಸ್ಥಳದ ಅಪ್ರತಿಮ ಸ್ತ್ರೀ`ವೇಷಧಾರಿಯಾಗಿ ಜನಮನ ಸೂರೆಗೊಂಡವರು.

ಸಾಮಾನ್ಯವಾಗಿ ಗಾಣಿಗ ಸಮಾಜದ ಎಲ್ಲಾ, ಕಲಾವಿದರಲ್ಲಿ, ಬಡಗು ತಿಟ್ಟಿನ ಒಂದು ಪ್ರಭೇದವಾದ ಹಾರಾಡಿ ಶೈಲಿಯೇ ಹೆಚ್ಚು ಕಂಡುಬರುತ್ತಿದೆಯಾದರೂ, ಇದಕ್ಕೆ ಅಪವಾದವೆಂಬಂತೆ ವಂಡ್ಸೆ ಮತ್ತು ಹೆರಂಜಾಲಿನ ಗಾಣಿಗ ಕಲಾವಿದರಲ್ಲಿ ವೀರಭದ್ರ ನಾಯ್ಕರ ಮಟ್ಪಾಡಿ ಶೈಲಿಯನ್ನೇ ಹೆಚ್ಚು ಗುರುತಿಸಬಹುದಾಗಿದೆ.

ಈ ನಿಟ್ಟಿನಲ್ಲಿ ಕೀರ್ತಿಶೇಷ ದಶಾವತಾರಿ ಹೆರಂಜಾಲು ವೆಂಕಟರಮಣ ಗಾಣಿಗ ಮತ್ತು ವಂಡ್ಸೆ ನಾರಾಯಣ ಗಾಣಿಗರು ಸಮಕಾಲೀನ ಸ್ತ್ರೀವೇಷಧಾರಿಗಳಾಗಿದ್ದು ಇಬ್ಬರ ಕುಣಿತದಲ್ಲಿ ಬಡಗಿನ ಇನ್ನೊ೦ದು ಪ್ರಭೇದವಾದ ಮಟಪಾಡಿ ತಿಟ್ಟಿನ ನರ್ತನ ಶೈಲಿಯನ್ನು ಗುರುತಿಸಬಹುದಾಗಿದೆ. ಇದಕ್ಕೆ ಕಾರಣ ಇವರುಗಳು ಯಕ್ಷಗಾನದ ನೃತ್ಯ ಅಭ್ಯಾಸ ಮಾಡಿದ್ದು ಗುರು ವೀರಭದ್ರ ನಾಯಕ್ ಮತ್ತು ಮಟಪಾಡಿ ಶ್ರೀನಿವಾಸ ನಾಯಕರಲ್ಲಿ. ಹಾಗಾಗಿ ಈ ಈರ್ವರು ಮಹಾನ್ ಕಲಾವಿದರಲ್ಲಿ ಪರಂಪರೆಯ ಮಟ್ಪಾಡಿ ಶೈಲಿಯ ಕುಣಿತವನ್ನು ಗಮನಿಸ ಬಹುದಾಗಿದೆ.

ಬಾಲ್ಯ, ಶಿಕ್ಶಣ ಮತ್ತು ಯಕ್ಷಗಾನ ಪಾದಾರ್ಪಣೆ

ಕುಂದಾಪುರ ತಾಲೂಕಿನ ಕೊಲ್ಲೂರು ಸಮೀಪ ವಂಡ್ಸೆ ಎಂಬ ಕುಗ್ರಾಮದಲ್ಲಿ ಯಕ್ಷಗಾನೀಯ ಗಾಣಿಗ ಕುಟುಂಬದ ಶೇಷಗಾಣಿಗ ಪಣಿಯಮ್ಮ ದಂಪತಿಗಳ ಪುತ್ರನಾಗಿ 1937ರಲ್ಲಿ ಜನಿಸಿದ ನಾರಾಯಣ ಗಾಣಿಗರು ಯಕ್ಷಗಾನ ವಲಯಕ್ಕೆ ವಂಡ್ಸೆ ನಾಣು ಎಂದೇ ಪರಿಚಿತರು. ಬಣ್ಣದ ಜಗತ್ತಿನ ಆಕರ್ಷಣೆ, ಮತ್ತು ಕಿತ್ತು ತಿನ್ನುವ ಬಡತನದಿಂದ ಪ್ರಾಥಮಿಕ ಅಭ್ಯಾಸಕ್ಕೆ ಶರಣುಹೊಡೆದು ಗುರು ವೀರಭದ್ರ ನಾಯಕರಲ್ಲಿ ಶಿಷ್ಯನಾಗಿ ಸೇರಿಕೊಂಡು ಯಕ್ಷಗಾನ ತಾಳ ಲಯಗಳ ಪ್ರಾಥಮಿಕ ದೀಕ್ಷೆ ಪಡೆದರು.

ಬ್ರಹ್ಮಾವರ ಶ್ರೀನಿವಾಸ ನಾಯಕರಲ್ಲಿ ವೇಷಗಾರಿಕೆ ಮತ್ತು ಮಾತುಗಾರಿಕೆ ಅಭ್ಯಾಸಮಾಡಿ, ಮಾರಣಕಟ್ಟೆ ಮೇಳದಲ್ಲಿ ಕೋಡಂಗಿಯಾಗಿ ಗೆಜ್ಜೆ ಕಟ್ಟಿದರು. ಅಲ್ಲಿ ಅಭಿಮನ್ಯು, ಚಂದ್ರಹಾಸ ಪ್ರಹ್ಲಾದ, ಲವಕುಶ, ಪ್ರಸೇನ, ರತಿ, ಜಾಂಬವತಿ, ಕನಕಾಂಗಿ ಮುಂತಾದ ಬಾಲಪಾತ್ರಗಳನ್ನು ನಿರ್ವಹಿಸಿ ಹಂತಹಂತವಾಗಿ ಮೇಲೇರಿಬಂದರು.

ಅಲ್ಲಿನ ಆ ಕಾಲದ ಮೇರು ಕಲಾವಿದರಾದ ಮರವಂತೆ ನರಸಿಂಹದಾಸ, ಶೀನ ದಾಸ, ವೀರಭದ್ರ ನಾಯ್ಕ್, ಉಡುಪಿ ಬಸವ, ಮೊಳಹಳ್ಲಿ ಹೆರಿಯ, ಮಾರ್ಗೋಳಿ ಗೋವಿಂದ ಸೇರೆಗಾರ್, ಅರಾಟೆ ಮಂಜುನಾಥ ಮುಂತಾದವರ ಒಡನಾಡಿಯಾಗಿ ಪರಿಪಕ್ವ ಸ್ತ್ರೀವೇಷಧಾರಿಯಾಗಿ ರೂಪುಗೊಂಡರು. ಶ್ರದ್ದೆ ಮತ್ತು ನಿಷ್ಟೆಯಿಂದ ಸತತ ಹತ್ತು ವರ್ಷ ಮಾರಣಕಟ್ಟೆ ಮೇಳದಲ್ಲಿ ತಿರುಗಾಟ ಮಾಡಿದರು.

ವಂಡ್ಸೆ ನಾರಾಯಣ ಗಾಣಿಗ
ಜನನ : 1937
ಜನನ ಸ್ಥಳ : ವಂಡ್ಸೆ, ಕೊಲ್ಲೂರು
ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ,
ಕರ್ನಾಟಕ ರಾಜ್ಯ

ಕಲಾಸೇವೆ:
ಮಾರಣಕಟ್ಟೆ, ಇಡಗುಂಜಿ, ಇರಾ ಸೋಮನಾಥೇಶ್ವರ, ಸುರತ್ಕಲ್, ಕರ್ನಾಟಕ, ಕೂಡ್ಲು ಮಂದಾರ್ತಿ ಮೇಳಗಳಲ್ಲಿ ಅಪ್ರತಿಮ ಸ್ತ್ರೀವೇಷಧಾರಿಯಾಗಿ ಕಲಾಸೇವೆ.
ಪ್ರಶಸ್ತಿಗಳು:
  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ - 2014
  • ಉಡುಪಿಯ ಯಕ್ಷಗಾನ ಕಲಾರಂಗ ಪ್ರಶಸ್ತಿ
  • ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ
  • ಕಾರ್ಕಡ ಶ್ರೀನಿವಾಸ ಉಡುಪರ ಸಂಸ್ಮರಣಾ ಪ್ರಶಸ್ತಿ
  • ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ ಹಾಗೂ ಪ್ರಶಸ್ತಿಗಳು

ದಿಗ್ಗಜರ ಒಡನಾಟ

ಗಾಣಿಗರ ಕಲಾ ನೈಪುಣ್ಯತೆಗೆ ಮೆಚ್ಚಿ ಕೆರೆಮನೆಯ ಹಿರಿಯ ಕಲಾವಿದರಾದ ಶಿವರಾಮ ಹೆಗಡೆಯವರು ಇವರನ್ನು ಗುರುತಿಸಿದ್ದು ಇವರ ಕಲಾ ನೈಪುಣ್ಯತೆಗೆ ಸಾಕ್ಷಿ. ಅವರ ಅಪೇಕ್ಷೆಮೇರೆಗೆ ಇಡಗುಂಜಿ ಮೇಳ ಸೇರಿದ ಗಾಣಿಗರು ಅಲ್ಲಿ ಕೆರೆಮನೆ ಮಹಾಬಲ ಹೆಗಡೆ, ಮೂರುರು ದೇವರು ಹೆಗಡೆ, ಗುರು ನಾರ್ಣಪ್ಪ ಉಪ್ಪೂರರ ಒಡನಾಡಿಯಾಗಿ ಪ್ರಭುದ್ದ ಸ್ತ್ರೀವೇಷಧಾರಿಯಾಗಿ ಮೂಡಿಬಂದರು.

ಗಾಣಿಗರ ಅದಮ್ಯ ಕಲಿಕೆಯ ಹಂಬಲ ತೆಂಕುತಿಟ್ಟಿನ ಇರಾ ಸೋಮನಾಥೇಶ್ವರ ಮೇಳದಲ್ಲಿ ಮುಖ್ಯ ಸ್ತ್ರೀವೇಷಧಾರಿಯಾಗಿ ಸೇರುವಂತೆ ಮಾಡಿತು. ಅಲ್ಲಿನ ಎರಡು ವರ್ಷ ಅವರಿಗೆ ತೆಂಕುತಿಟ್ಟನ್ನು ಸಮಗ್ರವಾಗಿ ಪರಿಚಯಿಸಿತು. ಅಗರಿ ಶ್ರೀನಿವಾಸ ಬಾಗವತ್, ಶ್ರೇಣಿ ಗೋಪಾಲಕೃಷ್ಣ ಭಟ್, ಕೋಳ್ಯೂರು ರಾಮಚಂದ್ರರಾವ್, ಸಾಮಗರಂತ ಮೇರು ಕಲಾವಿದರೊಂದಿಗೆ ತೆಂಕಿನ ಸುರತ್ಕಲ್. ಕರ್ನಾಟಕ ಮೇಳ ಮತ್ತು ಕೂಡ್ಲು ಮೇಳಗಳಲ್ಲಿ ತಿರುಗಾಟ ಮಾಡಿದರು.

ತೆ೦ಕು ತಿಟ್ಟಿನಲ್ಲಿಯೂ ಕಲಾಸೇವೆ

ಶ್ರೀ ಧರ್ಮಸ್ಥಳ ಮೇಳದಲ್ಲಿ ಮುಖ್ಯ ಸ್ತ್ರೀವೇಷಧಾರಿಯಾಗಿ ತಿರುಗಾಟ ಮಾಡಿದ ಇವರು ಕಡತೋಕ ಮಂಜುನಾಥ ಬಾಗವತ, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ಪುತ್ತೂರು ನಾರಾಯಣ ಹೆಗಡೆ, ಎಂಪೆಕಟ್ಟೆ ರಾಮಯ್ಯ ರೈ, ಕುಂಬ್ಳೆ ಸುಂದರ ರಾವ್, ಗೋವಿಂದ ಭಟ್, ಪಾತಾಳ ವೆಂಕಟರಮಣ ಭಟ್, ಮುಂತಾದ ಅಗ್ರಶ್ರೇಣಿಯ ಕಲಾವಿದರೊಂದಿಗೆ “ರಂಬಾ-ರೂಪ-ರೇಖಾ”, ಪಾಪಣ್ಣ ವಿಜಯ, ಮಹಾಬ್ರಾಹ್ಮಣ ಮುಂತಾದ ಪ್ರಸಂಗಗಳ ಇವರ ಪಾತ್ರಗಳು ಅಪಾರ ಜನ ಮನ್ನಣೆ ಗಳಿಸಿದವು. ತೆಂಕಿನ ಮಹಾನ್ ಕಲಾವಿದರಾದ ಅಳಿಕೆ ರಾಮಯ್ಯ ರೈ, ಮಲ್ಪೆ ಸಾಮಗರು, ಬೋಳಾರ ನಾರಾಯಣ ಶೆಟ್ಟರಂತ ಮಹಾನ್ ಕಲಾವಿದರ ಒಡನಾಟದ ಬಾಗ್ಯವೂ ಈ ಮೂಲಕ ಅವರಿಗೆ ದೊರೆಯಿತು.

ಹೊಸ ಪದ್ಯಗಳ ಆವಿಷ್ಕಾರ

ತನ್ನ ನಿವೃತ್ತಿಯ ಕೊನೆಯವರೆಗೂ ಬಡುಗುತಿಟ್ಟಿನ ಶ್ರೀ ಮಂದಾರ್ತಿ ಮೇಳದಲ್ಲಿ ಬಹುಕಾಲ ಸೇವೆ ಸಲ್ಲಿಸಿದ ಗಾಣಿಗರು ತನ್ನ ಸಹೋದರ ಸಂಬಂದಿ ವಂಡ್ಸೆ ಮುತ್ತ ಗಾಣಿಗ, ಮೊಳಹಳ್ಳಿ ಹೆರಿಯನೊಂದಿಗೆ ಅಬಿನಯಿಸಿದ ಚಂದ್ರಾವಳಿ ಪಾತ್ರ ಮೆಚ್ಚುಗೆಗೆ ಪಾತ್ರವಾಗಿತ್ತು. ಶ್ವೇತಕುಮಾರ ಚರಿತ್ರೆ ಪ್ರಸಂಗದಲ್ಲಿ ಅರಾಟೆ ಮಂಜುನಾಥರ ತ್ರಿಲೋಕ ಸುಂದರಿ, ಮೊಳಹಳ್ಳಿ ಹೆರಿಯನವರ ಶ್ವೇತಕುಮಾರ, ಉಡುಪಿ ಬಸವನವರ ಯಮ ಹಾಗೂ ಗಾಣಿಗರ ಶಿವೆಯ ಪಾತ್ರ ಜನಮೆಚ್ಚುಗೆ ಪಡೆದು ಬಹುಪಾಲು ತಿರುಗಾಟದಲ್ಲಿ ಪ್ರದರ್ಶನಗೊಂಡಿದ್ದು ಒಂದು ದಾಖಲೆ.

ಕೆರೆಮನೆ ಮಹಾಬಲ ಹೆಗಡೆಯವರಿಂದ ಅಭ್ಯಾಸಮಾಡಿ ಶಿವೆಯ ಪಾತ್ರಕ್ಕೆ ಹೊಸ ಪದ್ಯಗಳನ್ನು ಸೇರ್ಪಡೆಮಾಡಿ ರಂಗದಲ್ಲಿ ಅಳವಡಿಸಿದ್ದು ಇವರ ಹೆಗ್ಗಳಿಕೆ. ಯಕ್ಷಗಾನದಲ್ಲಿ ಶ್ರುತಿಬದ್ದವಾಗಿ ತಾಳಬದ್ದವಾಗಿ ವರಕವಿ ಬೇಂದ್ರೆಯವರ ಕವನಗಳನ್ನು ಅರವತ್ತರ ದಶಕದಲ್ಲೇ ರಂಗದಲ್ಲಿ ಹಾಡಿ ಕುಣಿದ ಅಪರೂಪದ ಕಲಾವಿದರಾದ ಇವರು “ಬಾ ಭ್ರಮರ ಪರಾಗವಿದೆ” ಮುಂತಾದ ಆದುನಿಕ ಪ್ರಸಂಗಗಳಲ್ಲಿ ಬಳಸುವ ಪದ್ಯಗಳನ್ನು ನಲವತ್ತು ವರ್ಷದ ಹಿಂದೆಯೇ ರಂಗದಲ್ಲಿ ಬಳಸಿ ಟೀಕೆಗೂ ಪ್ರಶಂಸೆಗೂ ಒಳಗಾದ ಅತೀ ಹಿರಿಯ ಕಲಾವಿದರಲ್ಲಿ ಗಾಣಿಗರೂ ಒಬ್ಬರು.

ಸನ್ಮಾನಗಳು ಹಾಗೂ ಪ್ರಶಸ್ತಿಗಳು

ಡಾ. ಶಿವರಾಮ ಕಾರಂತರ ಕಲ್ಪನೆಯ ಬ್ಯಾಲೆಗಳಲ್ಲಿ ದುಡಿದ ಹಿರಿಯ ಕಲಾವಿದರಲ್ಲಿ ಗಾಣಿಗರೂ ಒಬ್ಬರು. ಕೋಟೆ ಕರ್ಣ, ಅಶ್ವತ್ತಾಮ, ನಳ ಮುಂತಾದ ಪಾತ್ರಗಳನ್ನು ಅಲ್ಲಿ ಸಮರ್ಥವಾಗಿ ನಿರ್ವಹಿಸಿ ಕಾರಂತರ ಹೊಸತನಕ್ಕೆ ಜೀವತುಂಬಿದರು. ಕಾರಂತರೊಂದಿಗೆ ದೇಶವಿದೇಶಗಳಲ್ಲಿ ಯಕ್ಷಗಾನದ ಕಂಪನ್ನು ಹರಡಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ.

ತನ್ನ ಸುದೀರ್ಘ ಯಕ್ಷಗಾನ ತಿರುಗಾಟದಲ್ಲಿ ಹಲವಾರು ಸನ್ಮಾನಗಳಿಗೆ ಭಾಜನರಾದ ಇವರನ್ನು ಉಡುಪಿಯ ಯಕ್ಷಗಾನ ಕಲಾರಂಗ ತನ್ನ ಬೆಳ್ಳಿಹಬ್ಬದಂದು ಇಪ್ಪತ್ತೈದು ಕಲಾವಿದರೊಂದಿಗೆ ಇವರನ್ನು ಸನ್ಮಾನಿಸಿತ್ತು. ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿಗೂ ಭಾಜನರಾದ ಇವರಿಗೆ ಕಾರ್ಕಡ ಶ್ರೀನಿವಾಸ ಉಡುಪರ ಸಂಸ್ಮರಣಾ ಪ್ರಶಸ್ತಿಯೂ ಸಂದಿದೆ. ರಾಜ್ಯ ಪ್ರಶಸ್ತಿ ಗಾಣಿಗರ ಕಿರೀಟಕ್ಕೆ ಇನ್ನೊಂದು ಗರಿ ಮೂಡಿಸಿದೆ.




Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Ram Hegde Keremane.(11/1/2014)
ಶ್ರಿ ವಂಡ್ಸೆ ನಾರಾಯಣ ಗಾಣಿಗರ ಕುರಿತು,ನೀವು ಬರೆದ ಲೇಖನ ನೋಡಿ ಸಂತೋಷಪಟ್ಟೆ.ತುಂಬು ತಲೆಕೂದಲುಗಳನ್ನು ಇಳಿಬಿಟ್ಟ ,ನನ್ನ ಬಾಲ್ಯದಲ್ಲಿ ನಾನು ನೋಡಿದ 'ವಂಡ್ಸೆ ನಾಣು' ಅವರು ನನ್ನ ಕಣ್ಣೆದುರು ಬಂದರು.ರಾಜ್ಯೊತ್ಸವ ಪ್ರಶಸ್ತಿ ಈಮೊದಲೇ ಅವರಿಗೆ ಸಿಗಬೇಕಿತ್ತು.ಉತ್ತಮ ಸ್ರೀ ವೇಷಧಾರಿ.




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ