ಉಭಯತಿಟ್ಟುಗಳಲ್ಲಿ 'ರಾಜಾಹಾಸ್ಯ' ಎಂಬ ನೆಗಳ್ತೆಯನ್ನು ಪಡೆದ ಪೆರುವಡಿ ನಾರಾಯಣ ಭಟ್ಟರು ಮಾತಿಗಿಳಿದರೆ ಒಂದು ಕಾಲಘಟ್ಟದ ಯಕ್ಷಗಾನದ ಬದುಕು, ಸಾಮಾಜಿಕ ಜವಾಬ್ದಾರಿ, ಕಲಾವಿದನ ಹೊಣೆ.. ಹೀಗೆ ಮಿಂಚುತ್ತದೆ. 'ಹಾಸ್ಯವೆಂದರೆ ವಿಕಾರವಲ್ಲ. ಅದೊಂದು ರಸ. ಅದನ್ನು ಕಲಾವಿದ ಅನುಭವಿಸಬೇಕು. ಕಲಾವಿದನ ಅಭಿವ್ಯಕ್ತಿಯಂತೆ ಪ್ರೇಕ್ಷಕನೂ ಅನುಭವಿಸಬೇಕು. ಯಕ್ಷಗಾನದ ಹಾಸ್ಯವೆಂದರೆ ನಕ್ಕು ನಲಿವ ಹಾಸ್ಯವಲ್ಲ. ಸಮಾಜದ ವಿಕಾರಗಳನ್ನು ಎತ್ತಿ ತೋರಿಸಿ, ಅದನ್ನು ತಿದ್ದುವ ಕೆಲಸವನ್ನೂ ಹಾಸ್ಯಗಾರ ಮಾಡಬೇಕಾಗುತ್ತದೆ' ಎನ್ನುತ್ತಾರೆ.
ಪೆರುವಡಿಯವರ ತಿರುಗಾಟದ ಕಾಲದ ಸಾಮಾಜಿಕ ವ್ಯವಸ್ಥೆಗಳು ತಪ್ಪನ್ನು ಎತ್ತಿ ತೋರಿದಾಗ ಒಪ್ಪಿಕೊಳ್ಳುವ, ರಂಗದ ಅಭಿವ್ಯಕ್ತಿಯನ್ನು 'ಕಲೆ' ಎಂದು ಸ್ವೀಕರಿಸುವ ಮನಃಸ್ಥಿತಿಯಿತ್ತು. ಈಗ ಕಾಲ ಬದಲಾದುದೋ, 'ಬೌದ್ಧಿಕವಾಗಿ ಮುಂದುವರಿದ' ಫಲವೋ ಗೊತ್ತಿಲ್ಲ, ರಂಗದ ಅಭವ್ಯಕ್ತಿಗೆ ಜಾತಿಯನ್ನೋ, ಅಂತಸ್ತನ್ನೋ ಪೋಣಿಸುವ ವಿಪರೀತ ಸ್ಥಿತಿಯನ್ನು ಕಾಣಬಹುದು. ಪಾತ್ರವೊಂದು ಪ್ರೇಕ್ಷಕರ ಅಭಿರುಚಿಯಂತೆ, ಆಸಕ್ತಿಯಂತೆ ರಂಗದಲ್ಲಿ ಓಡಾಡುವಂತಹ ಪರೋಕ್ಷ ನಿಯಂತ್ರಣ.
ಪೆರುವಡಿಯವರು ಹಾಸ್ಯಕ್ಕೆ ಗೌರವವನ್ನು ತಂದು ಕೊಟ್ಟ ಹಾಸ್ಯಗಾರ. ದಕ್ಷಾಧ್ವರ ಪ್ರಸಂಗದಲ್ಲಿ ಬರುವ 'ಬ್ರಾಹ್ಮಣ'ನ ಅಭಿವ್ಯಕ್ತಿಯಲ್ಲಿ ಗೇಲಿಯಿಲ್ಲ, ಶ್ರೀ ರಾಮ ವನಗಮನ ಪ್ರಸಂಗದ 'ಗುಹ' ಪಾತ್ರವು ಜಾತಿಯನ್ನು ಲೇವಡಿ ಮಾಡುವುದಿಲ್ಲ. ಜರಾಸಂಧ ಪ್ರಸಂಗದ 'ಶೇಂದಿ ಮಾರಾಟಗಾರ' ಪಾತ್ರವು ಯಾವುದೇ ವರ್ಗವನ್ನು ನೋಯಿಸುವುದಿಲ್ಲ. ಆದರೆ ಆ ಪಾತ್ರದ ಸುತ್ತ ಮುತ್ತ ಇರುವ ವಿಕಾರಗಳನ್ನು ಎತ್ತಿ ತೋರಿಸುತ್ತಿದ್ದರು. ಹೀಗೆ ಮಾಡುತ್ತಿದ್ದಾಗಲೆಲ್ಲಾ ವಿಪರೀತದ ಸೋಂಕಿಲ್ಲ. ನಕ್ಕು ನಲಿಯುವುದಿಲ್ಲ!
'ಪಾಪಣ್ಣ ವಿಜಯ' ಪ್ರಸಂಗದ 'ಪಾಪಣ್ಣ' ಪಾತ್ರವು ಪೆರುವಡಿಯವರ ರಂಗಛಾಪನ್ನು ಎತ್ತರಕ್ಕೇರಿಸಿತು. ಹೆಸರಿನೊಂದಿಗೆ 'ಪಾಪಣ್ಣ ಭಟ್ರು' ಹೊಸೆಯಿತು. ಒಂದು ವರ್ಷವಲ್ಲ, ಹಲವು ಕಾಲ ಈ ಪ್ರಸಂಗವು ವಿಜೃಂಭಿಸಿತು. 'ಇದನ್ನು ಮೊದಲು ಆಡುವಾಗ ಹೆದರಿಕೆಯಿತ್ತು. ಪೌರಾಣಿಕ ಪ್ರಸಂಗವನ್ನು ಒಪ್ಪಿಕೊಂಡ ಕಲಾಭಿಮಾನಿಗಳು ಸಾಮಾಜಿಕ ಕಥೆಯನ್ನು ರಂಗದಲ್ಲಿ ಸ್ವೀಕರಿಸಬಹುದೇ? ಇದಕ್ಕಾಗಿ ಕಾಫಿ ಎಸ್ಟೇಟ್ನಲ್ಲಿ ಮೊದಲ ಪ್ರಯೋಗವನ್ನು ಮಾಡಿದೆವು. ಹತ್ತಾರು ಪ್ರದರ್ಶನವಾದ ಬಳಿಕ ಧೈರ್ಯ ಬಂತು' ಎಂದು ಪಾಪಣ್ಣನ ಬದುಕನ್ನು ಮುಂದಿಡುತ್ತಾರೆ.
ಪೆರುವಡಿಯವರದು ಸಹಜ ಹಾಸ್ಯ. ಕೃಷ್ಣಲೀಲೆ ಪ್ರಸಂಗದ 'ವಿಜಯ', ಕೃಷ್ಣಾರ್ಜುನ ಕಾಳಗದ 'ಮಕರಂದ', ದೇವ ದೂತ, ರಾಕ್ಷಸದೂತ.. ಹೀಗೆ ಪ್ರತೀ ಪಾತ್ರಗಳಿಗೂ ಪ್ರತ್ಯಪ್ರತ್ಯೇಕವಾದ ಅಭಿವ್ಯಕ್ತಿ. ರಂಗದಲ್ಲಿ ದೊರೆಯನ್ನೋ, ರಾಜನನ್ನೋ ಮೀರಿಸುವ ಆಳಲ್ಲ. ದೇವೇಂದ್ರನ ಸ್ಥಾನಗೌರವವನ್ನು ಅರಿತ ದೇವದೂತ. ನಾರದನಂತಹ ಭಕ್ತಿ ಹಿನ್ನೆಲೆಯ ಪಾತ್ರಗಳಲ್ಲಿ ಹಾಸ್ಯದ ಸೋಂಕಿಲ್ಲ. ಶ್ರೀದೇವಿಯಲ್ಲಿ ಸಂಧಾನಕ್ಕೆ ಬರುವ ಶುಂಭನ ಸಚಿವ 'ಸುಗ್ರೀವ' ಹಾಸ್ಯಗಾರನಾಗುವುದಿಲ್ಲ! ಹೀಗೆ ಒಂದಲ್ಲ ಒಂದು ಪಾತ್ರಗಳನ್ನು ಹಿಡಿದು ಮಾತನಾಡಿದರೆ ಪೆರುವಡಿಯವರ ಪಾತ್ರವೈಶಿಷ್ಟ್ಯದ ಪಾರಮ್ಯ ಅರ್ಥವಾಗುತ್ತದೆ.
ಪೆರುವೋಡಿ ನಾರಾಯಣ ಭಟ್
ಜನನ ದಿನಾ೦ಕ
:
1927
ಜನನ ಸ್ಥಳ
:
ಪದ್ಯಾಣ, ಬ೦ಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ , ಕರ್ನಾಟಕ ರಾಜ್ಯ
ಕಲಾಸೇವೆ
:
ಪ್ರಸಿಧ್ಧ ಧರ್ಮಸ್ಥಳ ಮೇಳವು ಸೇರಿ, ಹಲವಾರು ಮೇಳಗಳಲ್ಲಿ ಕಲಾವಿದನಾಗಿ ದುಡಿಮೆ.
ಪ್ರಶಸ್ತಿಗಳು:
ಹಲಾವಾರು ಸ೦ಘ-ಸ೦ಸ್ಥೆಗಳಿ೦ದ ವಿವಿಧ ಪ್ರಶಸ್ತಿಗಳು
ಬಾಲ್ಯ ಮತ್ತು ಶಿಕ್ಷಣ
ಪ್ರಸಿದ್ಧ ಪದ್ಯಾಣ ಮನೆತನ. 1927ರಲ್ಲಿ ಜನನ. ಆರರ ತನಕ ವಿದ್ಯಾಭ್ಯಾಸ. ಸಂಕಯ್ಯ ಭಾಗವತರು ಮತ್ತು ಈಶ್ವರ ಭಾಗವತರು ಇವರ ಅಜ್ಜ. ಎಂಟನೇ ವರುಷದಿಂದ ತಾಳಮದ್ದಳೆಯಲ್ಲಿ ಭಾಗಿ. ಸ್ವಲ್ಪ ಸಂಸ್ಕೃತ ಅಭ್ಯಾಸ. ಕುರಿಯ ವಿಠಲ ಶಾಸ್ತ್ರಿಗಳ 'ಕೃಷ್ಣ'ನ ಪಾತ್ರದಿಂದ ಪ್ರಭಾವಿ. ಪಾತ್ರದ ಗುಂಗು ಅಂಟಿತು. ಅದು ಬಿಡಿಸಲಾರದ ಅಂಟು. ಬಣ್ಣದ ಗೀಳು ಹೆಚ್ಚಾಯಿತು. ಮೇಳ ಕೈಬೀಸಿ ಕರೆಯಿತು. ಪಾರಂಪರಿಕವಾದ ಆರಂಭಿಕ ಕಲಿಕೆ. ಮುಂದೆ ದೇಹ, ಭಾಷೆ, ಶಾರೀರಗಳು ಹಾಸ್ಯ ರಸದ ಒತ್ತಿಗಿದ್ದುದರಿಂದ 'ಹಾಸ್ಯಗಾರ'ರಾದುದು ಇತಿಹಾಸ.
ವೃತ್ತಿ ಹಾಗೂ ಕಲಾಸೇವೆ
ಶ್ರೀ ಧರ್ಮಸ್ಥಳ ಮೇಳದಿಂದ ವ್ಯವಸಾಯ. ಬದುಕಿಗಾಗಿ ಹಲವು ಮೇಳಗಳಿಗೆ 'ಜಂಪಿಂಗ್'. ಮುಂದೆ ಮೂಲ್ಕಿ ಮೇಳದ ಯಜಮಾನಿಕೆ. ಹಾಸ್ಯಗಾರ ಮಾತ್ರವಲ್ಲ, 'ಮೇಳದ ಯಜಮಾನ'ನೆಂಬ ಹೆಗ್ಗಳಿಕೆ. ಮನೆತನಕ್ಕೂ, ಕಲಾಭಿಮಾನಿಗಳಿಗೂ ಮಾನ. ಡಾ.ಶೇಣಿಯವರಿಗೆ ಸಾಥ್ ಆಗಿದ್ದ ಬಪ್ಪನಾಡು ಕ್ಷೇತ್ರ ಮಹಾತ್ಮೆ ಪ್ರಸಂಗವನ್ನು ಹಿರಿಯರು ಈಗಲೂ ಜ್ಞಾಪಿಸಿಕೊಳ್ಳುತ್ತಾರೆ. 'ಇವರ ಯಜಮಾನಿಕೆಯ ಮೂಲ್ಕಿ ಮೇಳದ ಅಂದಿನ ಆಟಗಳ ಸ್ವಾರಸ್ಯಗಳು, ಯಶಸ್ಸು, ಸಂಪಾದನೆ, ಕಲಾವಿದರನ್ನು ಗುರುತಿಸುವ ಪರಿಯನ್ನು ಕಂಡಾಗ ಯಕ್ಷಗಾನಕ್ಕಾಗ ಸಂಭ್ರಮದ ದಿನಗಳು. ಆರ್ಥಿಕವಾಗಿ ಅಲ್ಲದಿದ್ದರೂ ಮಾನಸಿಕವಾಗಿ ಖುಷಿ ಕೊಟ್ಟ ದಿನಮಾನಗಳು' ಎನ್ನುತ್ತಾರೆ ಒಡನಾಡಿ ಹಿರಿಯರಾದ ಪಾತಾಳ ವೆಂಕಟ್ರಮಣ ಭಟ್.
ದೇಹ ಮಾಗಿದೆ. ಕೌಟುಂಬಿಕ ಹೊಣೆ ಹೆಗಲೇರಿದೆ. ರಂಗದಲ್ಲಿ ಭಾಗವಹಿಸಲು ವಯಸ್ಸು ಅಡ್ಡಿಯಾಗಿದೆ. ದೇಹ ಓಕೆ ಅಂದರೂ, ಮನಸ್ಸು ಮುಷ್ಕರ ಹೂಡುತ್ತದೆ. ಹಾಗಾಗಿ ಪೆರುವಡಿಯವರು ಸ್ವಲ್ಪ ಮಟ್ಟಿಗೆ ರಂಗದಿಂದ ದೂರ. ಆದರೆ ಸುತ್ತೆಲ್ಲಾ ನಡೆಯುವ ಪ್ರದರ್ಶನಗಳಿಗೆ ಈಗಲೂ ಭೇಟಿ ನೀಡುವುದು, ಪ್ರದರ್ಶನವನ್ನು ಆಸ್ವಾದಿಸುವುದು, ಬಣ್ಣದ ಮನೆಗೆ ಹೋಗಿ ನೆನಪಿನ ಬುತ್ತಿಯನ್ನು 'ಅಗತ್ಯ ಬಿದ್ದರೆ' ಬಿಚ್ಚುವುದು, ತಾನು ನಿರ್ವಹಿಸುತ್ತಿದ್ದ ಪಾತ್ರಗಳು ರಂಗದಲ್ಲಿ ಇತರರಿಂದ ಕಳಪೆಯಾಗಿ ನಿರ್ವಹಿಸಲ್ಪಟ್ಟಾಗ ಮಮ್ಮಲ ಮರುಗುವುದು, ಆಪ್ತರಲ್ಲಿ ಮನಬಿಚ್ಚಿ ಮಾತನಾಡುವುದು.. ಈ ಹಿರಿಯರ ಇಳಿ ವಯಸ್ಸಿನ ಚಟುವಟಿಕೆ.
ಹಾಸ್ಯಬ್ರಹ್ಮ ಪೆರುವೋಡಿ ನಾರಾಯಣ ಭಟ್ಟರಿಗೆ ಸಂದ ಪುರಸ್ಕಾರಗಳು ಹಲವು. ಸರಕಾರಿ ಮುದ್ರೆಯ ಪುರಸ್ಕಾರಗಳನ್ನು ಎತ್ತಿ ಹೇಳುವಷ್ಟಿಲ್ಲ! ಇತರ ಪ್ರಶಸ್ತಿಗಳು, ಸಂಮಾನಗಳು, ಗೌರವಗಳು ಸಾಲು ಸಾಲು. 'ನನ್ನನ್ನು. ನನ್ನ ಹಾಸ್ಯವನ್ನು ಕಲಾಭಿಮಾನಿಗಳು ಸ್ವೀಕರಿಸಿದ್ದಾರಲ್ಲಾ, ಅದೇ ದೊಡ್ಡ ಪ್ರಶಸ್ತಿ. ಹಳಬರು ಸಿಕ್ಕಾಗಲೆಲ್ಲಾ ಅಂದಿನ ಅಭಿವ್ಯಕ್ತಿಯನ್ನು ನೆನಪಿಸಿ ಗಂಟೆಗಟ್ಟಲೆ ಮಾತನಾಡುತ್ತಾರಲ್ಲಾ.. ಇದಕ್ಕಿಂತ ಹಿರಿದಾದ ಗೌರವ ಇನ್ನೇನು ಬೇಕು ಹೇಳಿ' ಎನ್ನುತ್ತಾರೆ.
****************
ಪೆರುವೋಡಿ ನಾರಾಯಣ ಭಟ್ ರವರ ಕೆಲವು ದೃಶ್ಯಾವಳಿಗಳು
ಬಾಹುಕನ ಪಾತ್ರದಲ್ಲಿ
ಎಡನೀರು ಮಠಾಧೀಶರಾದ ಪೂಜ್ಯ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿಯವರಿಂದ ಸನ್ಮಾನ ಸಮಾರ೦ಭದಲ್ಲಿ
ಕಟೀಲು ಸಿತ್ಲ ರಂಗನಾಥ ರಾವ್ ರವರು ನಡೆಸಿಕೊಟ್ಟ ಸುಧೀರ್ಘ ಸ೦ದರ್ಶನ
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.