ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಬಡಗು ಬೆಡಗಿನ ಮೋಹಕ ಸ್ತ್ರೀ ವೇಷಧಾರಿ ದಯಾನಂದ ನಾಗೂರ್

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಗುರುವಾರ, ನವ೦ಬರ್ 6 , 2014

ಸುಮಾರು ಎಪ್ಪತ್ತರ ದಶಕದಲ್ಲಿ ಬಡಗುತಿಟ್ಟಿನ ಯಕ್ಷಗಾನ ರಂಗದ ಸ್ತ್ರೀಭೂಮಿಕೆಗೆ ಗಣನೀಯ ಕೊಡುಗೆ ನೀಡಿ ಖ್ಯಾತರಾದ ಅರಾಟೆ ಮಂಜುನಾಥ, ಕೋಟ ವೈಕುಂಠ, ಎಂ. ಎ. ನಾಯಕ್, ವಂಡ್ಸೆ ನಾರಾಯಣ ಗಾಣಿಗ, ಹೆರಂಜಾಲು ಸಹೋದರರು, ರಾಮ ನಾಯರಿ, ಹೊಸಂಗಡಿ ರಾಜೀವ ಶೆಟ್ಟಿ, ನೀಲಾವರ ಮಹಾಬಲ ಶೆಟ್ಟಿ ಮುಂತಾದವರ ಸಾಲಿನಲ್ಲಿ ಕೇಳಿ ಬರುವ ಇನ್ನೊಂದು ಹೆಸರು ಬಡಗಿನ ಮೋಹಕ ಸ್ತ್ರೀ ವೇಷಧಾರಿ ಎಂದು ಚಿರಪರಿಚಿತರಾದ ಸದ್ಯ ನಿವೃತ್ತಿಯಲ್ಲಿರುವ ಹಿರಿಯ ಕಲಾವಿದ ದಯಾನಂದ ನಾಗೂರರು.

ಅನಿರೀಕ್ಷಿತ ರಂಗ ನಿರ್ಗಮನ

ಅದು 1993ರರ ಜುಲಾಯಿ 15. ಮುಂಬೈ ಮಾತುಂಗದ ವಿಶ್ವೇಶ್ವರಯ್ಯ ಸಬಾಂಗಣದಲ್ಲಿ ಕಿಕ್ಕಿರಿದ ಜನಸಂದಣಿ. ಧಾರಾಕಾರವಾಗಿ ಸುರಿಯುವ ಮಳೆಯನ್ನು ಲೆಕ್ಕಿಸದೆ ಬಡಗುತಿಟ್ಟಿನ ಪ್ರಸಿದ್ದ ಸಾಲಿಗ್ರಾಮ ಮೇಳದ ಯಕ್ಷಗಾನವನ್ನು ವೀಕ್ಷಿಸಲು ಸಹಸ್ರಾರು ಜನ ಸೇರಿದ್ದರು. ಸುಮಾರು ಎರಡು ಗಂಟೆಗಳ ಕಾಲ ಅದ್ಬುತವಾಗಿ ನೃತ್ಯ ಮಾಡಿ ಪ್ರೇಕ್ಷಕರನ್ನು ಬೆರಗಾಗಿಸಿದ್ದ ಬಳೆಗಾರರು ಚೌಕಿಗೆ ಬರುತ್ತಿದ್ದಂತೆ ಎದೆ ನೋವೆಂದು ಕುಸಿದರು. ಸಹಕಲಾವಿದರ ಮತ್ತು ವ್ಯವಸ್ಠಾಪಕರ ಸಮಯ ಪ್ರಜ್ನೆಯಿಂದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ‘ತೀವ್ರ ಹ್ರದಯಾಘಾತವಾಗಿದೆ ಇನ್ನು ಯಾವ ಕಾರಣಕ್ಕು ಗೆಜ್ಜೆ ಕಟ್ಟಬಾರದು. ಯಾವುದೇ ಒತ್ತಡಗಳಿಗೂ ಮಣಿಯದೆ ಶಾಂತ ಜೀವನ ನೆಡೆಸಬೇಕು’. ಎಂದು ಸಲಹೆ ನೀಡಿದ ವೈದ್ಯರು ಮೂರು ದಿನಗಳಲ್ಲಿ ಸಾವಿನಂಚಿನಿಂದ ಬದುಕಿನ ದಡಕ್ಕೆ ಸೇರಿಸಿದರು. ಅಂದಿನಿಂದ ಬಡಗುತಿಟ್ಟಿನ ಸಾಂಪ್ರದಾಯದ ಕೊಂಡಿಯೊಂದು ನೇಪಥ್ಯಕ್ಕೆ ಸರಿಯುವಂತಾಯಿತು. ಬಡಗುತಿಟ್ಟಿನ ಪ್ರೇಕ್ಷಕರಿಗೆ ಇದು ಆಘಾತಕರವಾದ ಸುದ್ದಿಯಾಗಿತ್ತು. ಇದು ನಡೆದದ್ದು ಸುಮಾರು ಹದಿನೆಂಟು ವರ್ಷಗಳ ಹಿಂದೆ. ಇದರಿಂದ ಸುಮಾರು ಮೂವತ್ತು ವರ್ಷಗಳ ಕಾಲ ಯಕ್ಷಗಾನ ರಂಗಕ್ಕೆ ನಿರಂತರ ಕಾಣಿಕೆ ಸಲ್ಲಿಸಿದ ಅಭಿಜಾತ ಕಲಾವಿದರೊಬ್ಬರ ರಂಗ ನಿರ್ಗಮನವಾಯಿತು.


ಬಾಲ್ಯ, ಯಕ್ಷಗಾನ ಪಾದಾರ್ಪಣೆ

ದಯಾನಂದ ಬಳೆಗಾರರು ಬಣ್ಣದ ಬದುಕಿನ ಪ್ರಪಂಚ ಹೊಕ್ಕಿದ್ದು ಸುಮಾರು 50 ವರ್ಷಗಳ ಹಿಂದೆ. ಅವರ ಕುಲಕಸುಬು ಬಳೆಗಾರಿಕೆಯಾಗಿದ್ದರೂ ಬಡಗುತಿಟ್ಟಿಗೆ ಅತಿರಥ ಮಹಾರಥ ಕಲಾವಿದರನ್ನು ನೀಡಿದ ಗಂಡುಮೆಟ್ಟಿನ ನೆಲ ಕುಂದಾಪುರ ಪರಿಸರ ಅವರ ಹುಟ್ಟೂರಾದ್ದರಿಂದ ಈ ಕಲೆ ಅವರನ್ನು ಸಹಜವಾಗಿ ಸೆಳೆಯಿತು. ನಾಗೂರರು ಯಕ್ಷರಂಗ ಪ್ರವೇಶ ಮಾಡುವಾಗ ಅವರಿಗಿನ್ನು ಹನ್ನೆರಡೇ ವರ್ಷ. ಹಿರಿಯ ಗುರು ದಶಾವತಾರಿ ಹೆರಂಜಾಲು ವೆಂಕಟರಮಣ ಗಾಣಿಗರ ಶಿಷ್ಯತ್ವ ದೊರೆತದ್ದು ಅವರ ಭಾಗ್ಯವೆನ್ನಬೇಕು. ಖ್ಯಾತ ಸ್ತ್ರೀ ವೇಷಧಾರಿಯಾಗಿ ಮೆರೆಯುತಿದ್ದ ಗಾಣಿಗರು ತನ್ನಲ್ಲಿರುವುದೆಲ್ಲವನ್ನು ದಯಾನಂದರಿಗೆ ಧಾರೆಯೆರೆದರು. ಸ್ತ್ರೀ ಸಹಜವಾದ ರೂಪ, ಅದ್ಬುತ ಕಂಠ ಮಾಧುರ್ಯ, ಅಪೂರ್ವವಾದ ಶ್ರುತಿ ಬಧ್ಧತೆ, ತುಂಬು ಶರೀರ ಶಾರೀರ, ಭಾಷಾ ಶುದ್ಧಿ, ಬಿಂಬ ಶುದ್ಧಿಯ ಪರಾಕಾಷ್ಟೆ ಇವುಗಳಿಂದ ಬಹು ಬೇಗನೆ ಸ್ತ್ರೀ ವೇಷಧಾರಿಯಾಗಿ ಗುರುತಿಸಿಕೊಂಡರು.

ಸುಮಾರು ಏಳು ವರ್ಷ ಇಡಗುಂಜಿ, ಗುಂಡಬಾಳ, ಸಾಲಿಗ್ರಾಮ ಮೇಳಗಳಲ್ಲಿ ಬಾಲಗೋಪಾಲ, ಪೀಠೀಕಾ ವೇಷ ಹೀಗೆ ಹಂತ ಹಂತವಾಗಿ ಮುಂದುವರಿದು 1970ರಲ್ಲಿ ಪ್ರಧಾನ ಸ್ತ್ರೀ ವೇಷಧಾರಿಯಾಗಿ ಮೂಡಿಬಂದರು. ಮಂದಾರ್ತಿ ಮೇಳದ ಮುಖ್ಯ ಸ್ತ್ರೀ ವೇಷಧಾರಿಯಾಗಿ ಸೇರಿದ ಅವರು ಅಲ್ಲಿ ಮರವಂತೆ ಶೀನದಾಸರ ಭಾಗವತಿಕೆಯಲ್ಲಿ ಕೋಡಿಶಂಕರ ಗಾಣಿಗ ಮೊಳಹಳ್ಳಿ ಹೆರಿಯ, ಬೆಲ್ತೂರು ರಮೇಶ, ಮಜ್ಜಿಗೆಬೈಲು ಆನಂದಶೆಟ್ಟಿ ಮುಂತಾದವರ ಒಡನಾಡಿಯಾಗಿ ಅವರು ಅಭಿನಯಿಸುತಿದ್ದ ರುಕ್ಮಾಂಗದ ಚರಿತ್ರೆಯ ಮೋಹಿನಿ, ದಮಯಂತಿ, ಶಶಿಪ್ರಭೆ, ಮೀನಾಕ್ಷಿ ಮುಂತಾದ ಪಾತ್ರಗಳು ಅಪಾರ ಜನಮನ್ನಣೆ ಪಡೆದವು.

ದಯಾನಂದ ನಾಗೂರ್
ಜನನ : ಸುಮಾರು 1950
ಜನನ ಸ್ಥಳ : ನಾಗೂರು
ಕುಂದಾಪುರ ತಾಲೂಕು
ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ

ಕಲಾಸೇವೆ:
ಇಡಗುಂಜಿ, ಗುಂಡಬಾಳ, ಸಾಲಿಗ್ರಾಮ, ಮಂದಾರ್ತಿ ಮೇಳಗಳಲ್ಲಿ ಅಪ್ರತಿಮ ಸ್ತ್ರೀವೇಷಧಾರಿಯಾಗಿ ಕಲಾಸೇವೆ.
ಪ್ರಶಸ್ತಿಗಳು:
  • ಕರ್ನಾಟಕ ಯಕ್ಷಗಾನ‌ ಅಕಾಡೆಮಿ ಪ್ರಶಸ್ತಿ 2013
  • ಉಡುಪಿಯ ಯಕ್ಷಗಾನ ಕಲಾರಂಗ ಪ್ರಶಸ್ತಿ
  • ಕಾರ್ಕಡ ಶ್ರೀನಿವಾಸ ಉಡುಪರ ಸಂಸ್ಮರಣಾ ಪ್ರಶಸ್ತಿ
  • ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ ಹಾಗೂ ಪ್ರಶಸ್ತಿಗಳು

ಜೋಡಾಟದ ಹೆಣ್ಣು ಹುಲಿ

ಕಸೆ ವೇಷಗಳಲ್ಲಿ ‌ಅಪಾರ ಹಿಡಿತವಿದ್ದ ಇವರ ಪ್ರತಾಪದ ದ್ರೌಪದಿ, ಮೀನಾಕ್ಷಿ, ಪದ್ಮಗ೦ಧಿ, ಭ್ರಮರಕುಂತಳೆ, ಪ್ರಮೀಳೆ ಮುಂತಾದ ಪಾತ್ರಗಳು ಬಹು ಪ್ರಸಿಧ್ಧ. ಶೃಂಗಾರ ಪ್ರಧಾನ ಪಾತ್ರಗಳಲ್ಲಿ ಕೋಟ ವೈಕುಂಠನವವರಿಗೆ ಸರಿಮಿಗಿಲೆಣಿಸುವ ಇವರನ್ನು ವೈಕುಂಠನವರ ಉತ್ತರಾಧಿಕಾರಿಯಾಗಿ ವಿಮರ್ಶಕರು ಗುರುತಿಸಿದ್ದಾರೆ. ಮಂದಾರ್ತಿ ಮತ್ತು ಮಾರಣಕಟ್ಟೆ ಮೇಳಗಳಿಗೆ ಜೋಡಾಟಗಳಿಗೆ ವಿಪರೀತ ಬೇಡಿಕೆಯಿದ್ದ ಕಾಲದಲ್ಲಿ ಮಾರಣಕಟ್ಟೆ ಮೇಳದಲ್ಲಿ ಜೋಡಾಟದ ಹುಲಿ ಎಂದೇ ಖ್ಯಾತರಾದ ನೀಲಾವರ ಮಹಾಬಲ ಶೆಟ್ಟರ ಸ್ತ್ರೀಪಾತ್ರಗಳಿಗೆ ಸೂಕ್ತ ಪೈಪೋಟಿಯನ್ನು ಮಂದಾರ್ತಿ ಮೇಳದಿಂದ ನೀಡುತಿದ್ದ ಕಲಾವಿದರಾದ ಇವರ ಮೀನಾಕ್ಷಿಯ ಪಾತ್ರ ಜೋಡಾಟ ಪ್ರಿಯಯರನ್ನು ಬಹುಕಾಲ ರಂಜಿಸಿತ್ತು.

ದಿಗ್ಗಜರ ಒಡನಾಟ

ಎಪ್ಪತ್ತರ ದಶಕದ ಉತ್ತರಾರ್ಧದಲ್ಲಿ ಕಾಳಿಂಗ ನಾವಡರ ಭಾಗವತಿಕೆಯಲ್ಲಿ ಉಚ್ಚ್ರಾಯ ಸ್ಥಿತಿಯಲ್ಲಿದ್ದ ಸಾಲಿಗ್ರಾಮ ಮೇಳಕ್ಕೆ ಇವರ ಸೇರ್ಪಡೆ ಯಕ್ಷಗಾನದ ಸುವರ್ಣಯುಗ ಎನ್ನಬಹುದು. ಹಿರಿಯ ಕಲಾವಿದರಾದ ಜಲವಳ್ಳಿ ವೆಂಕಟೇಶ ರಾವ್, ಚಿಟ್ಟಾಣಿ ರಾಮಚಂದ್ರ ಹೆಗಡೆ, ಐರೋಡಿ ಗೋವಿಂದಪ್ಪ, ಅರಾಟೆ ಮಂಜುನಾಥ. ಕುಮಟ ಗೋವಿಂದ ನಾಯಕ್. ವಾಸುದೇವ ಸಾಮಗ, ರಾಮ ನಾಯರಿ, ಬಲ್ಕೂರು ಕೃಷ್ಣಯಾಜಿ, ಕೊಂಡದಕುಳಿ ರಾಮಚಂದ್ರ ಹೆಗಡೆ. ಹಳ್ಳಾಡಿ ಜಯರಾಮ ಶೆಟ್ಟಿ ಮುಂತಾದವರಿಂದ ಗಜಗಟ್ಟಿ ಮೇಳವಾಗಿದ್ದ ಸಾಲಿಗ್ರಾಮ ಮೇಳದ ನಾಗಶ್ರೀ, ಬನಶಂಕರಿ, ಚೆಲುವೆ ಚಿತ್ರಾವತಿ ಪ್ರಸಂಗದ ಅವರ ಪಾತ್ರಗಳು ಆ ಕಾಲದಲ್ಲಿ ಮನೆಮಾತಾಗಿತ್ತು. ಚೈತ್ರಪಲ್ಲವಿ ಪ್ರಸಂಗದ ಚೈತ್ರಳ ಕರುಣಾಜನಕ ಸನ್ನಿವೇಷದ ಇವರ ಅಭಿನಯ ಪ್ರೇಕ್ಷಕರ ಮನಕರಗಿಸುತಿತ್ತು. ಒಂದೇ ರಾತ್ರಿಯಲ್ಲಿ ಮೂರು ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡದ್ದು ಸಹ ಅವರ ವಿಶೇಷತೆ.

ದೇಶ ವಿದೇಶಗಳಲ್ಲಿ ಪ್ರದರ್ಶನ

1949ರಲ್ಲಿ ಪ್ರೋ. ಬಿ. ವಿ. ಅಚಾರ್ಯರ ಹಾಗೂ ಮಾರ್ತಾ ಆಸ್ಟನ್ ಜತೆಗೆ ಅಮೇರಿಕ, ಕೆನಡ, ಜರ್ಮನಿಯಲ್ಲಿ ಪ್ರದರ್ಶನ ನೀಡಿದ ಬಳೆಗಾರರು ಬಳಿಕ ಹಾಂಕಾಂಗ್, ಜಪಾನ್. ರಶ್ಯ, ಇಟೆಲಿಗಳಲ್ಲಿ ಯಕ್ಷಗಾನದ ಕಂಪನ್ನು ಹರಡಿದ ಕೀರ್ತಿ ಇವರಿಗಿದೆ. ಶಿವರಾಮ ಕಾರಂತರ ಯಕ್ಷಗಾನ ಬ್ಯಾಲೆಗಳಲ್ಲಿ ಭಾಗವಹಿಸಿ ಅಲ್ಲಿನ ಸ್ತ್ರೀಪಾತ್ರಗಳಿಗೆ ಜೀವತುಂಬಿದ್ದಾರೆ. ಕೊಗ್ಗ ಕಾಮತರ ಬೊಂಬೆಯಾಟ ತಂಡದಲ್ಲಿ ಭಾಗವಹಿಸಿದ ಇವರು ಸ್ವಿಟ್ಜರ್ಲೇಂಡ್, ಪ್ರಾನ್ಸ್ ಗಳಲ್ಲಿ ಪ್ರದರ್ಶನ ನೀಡಿದ್ದಾರೆ.

ಕಷ್ಟದ ದಿನಗಳು

ದೀರ್ಘಕಾಲ ಕಲೆಗಾಗಿ ದುಡಿದು ಅನಾರೋಗ್ಯ ಪೀಡಿತರಾಗುವಾಗ ದುಡಿದು ಗಳಿಸಿದ್ದು ಹೊಟ್ಟೆಬಟ್ಟೆಗಷ್ಟೆ ಆಗಿತ್ತು. ಕಲಾವಿದರ ಬದುಕೇ ಹಾಗೆ. ಆದಾಯ ಒಮ್ಮೆಗೆ ಸ್ಠಗಿತವಾದಾಗ ಹೆಂಡತಿ, ಮೂರು ಗಂಡು ಹಾಗು ಒಂದು ಹೆಣ್ಣು ಮಗುವಿನ ಸಂಸಾರ ಮುನ್ನೆಡೆಸುವುದು ಕಷ್ಟವಾದಾಗ ಕುಲಕಸಬು ಬಳೆ ವ್ಯಾಪಾರವೆ ಆಧಾರವಾಯಿತು. ಎಲೆಮರೆಯ ಕಾಯಿಯಂತೆ ಆ ಕಾಲದಲ್ಲಿ ಕಲಾವಿದರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದ ಬಿ, ವಿ. ಅಚಾರ್ಯರ ನೆರವಿನಿಂದ ಕೇಂದ್ರ ಸರ್ಕಾರದ ಮಾಶಾಸನ ಬಂದರೂ ಸಹ 1995ರ ಮಾರ್ಚ್ ನಂತರ ಸರಕಾರದಲ್ಲಿ ಹಣವಿಲ್ಲ ಎಂಬ ನೆಲೆಯಲ್ಲಿ ಅದು ಸಹ ನಿಂತು ಹೋಯಿತು. ಆದರೂ ಹಲವಾರು ಸಂಘ ಸಂಸೆಗಳು ಈ ನಿಟ್ಟಿನಲ್ಲಿ ಸ್ಪಂದಿಸಿವೆ. ಹತ್ತಾರು ಕಡೆ ಸನ್ಮಾನಗಳು ಸಂದಿವೆ.

ಪ್ರಶ೦ಸೆ, ಪ್ರಶಸ್ತಿಗಳು

2013ನೇ ಸಾಲಿನ ಕರ್ನಾಟಕ ಯಕ್ಷಗಾನ‌ ಅಕಾಡೆಮಿ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗದ ದಿ. ಕೋಟ ವೈಕುಂಠ ಪ್ರಶಸ್ತಿ, ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿಗಳು ಇವರಿಗೆ ಯೋಗ್ಯವಾಗಿಯೇ ಸಂದಿವೆ. ಇಷ್ಟೆಲ್ಲ ಸಂಕಷ್ಟಗಳ ನಡುವೆಯೂ ತನ್ನ ಪುತ್ರ ಮಾಧವ ನಾಗೂರರನ್ನು ಉತ್ತಮ ಸ್ತ್ರೀ ವೇಷಧಾರಿಯಾಗಿ ಮಾಡಿ ಯಕ್ಷಗಾನರಂಗಕ್ಕೆ ನೀಡಿದ್ದಾರೆ. ಸ್ಪುರದ್ರೂಪಿಯಾದ ಮಾಧವ ಮಂದಾರ್ತಿ ಮೇಳದ ಕಲಾವಿದನಾಗಿದ್ದು ಭರವಸೆಯ ಕಲಾವಿದನಾಗಿ ಮೂಡಿ ಬರುತಿದ್ದಾನೆ.

****************


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ