ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಯಕ್ಷಗಾನ ಕಲಾರಂಗ : ಯಕ್ಷ ಸನ್ಮಾನ

ಲೇಖಕರು :
ರಾಜ್ ಕುಮಾರ್
ಬುಧವಾರ, ನವ೦ಬರ್ 12 , 2014
ಯಕ್ಷಗಾನ ಲೋಕದ ಪ್ರತಿಷ್ಠಿತ ಸಂಸ್ಥೆಯೊಂದರ ಕಾರ್ಯಕ್ರಮ ಆದಿತ್ಯವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು. ಹಾಗಾಗಿ ಅದನ್ನು ಕಾಣುವ ಒಂದು ಅವಕಾಶವೂ ಒದಗಿಬಂತು. ಯಕ್ಷಗಾನ ಕಲಾರಂಗ ಉಡುಪಿ, ಯಕ್ಷಗಾನದ ಒಂದು ಪ್ರತಿಷ್ಠಿತ ಸಂಸ್ಥೆ. ಹಾಗಾಗಿ ಅದರ ಕಾರ್ಯಕ್ರಮಗಳು ಸಹಜವಾಗಿ ಬಹಳ ನಿರೀಕ್ಷೆಯನ್ನು ಹುಟ್ಟು ಹಾಕಿತ್ತು. ನಲ್ವತ್ತರ ಪ್ರಬುದ್ಧ ವಯಸ್ಸಿನ ಒಂದು ಸಂಸ್ಥೆಯ ಸಂಭ್ರಮದ ಕಾರ್ಯಕ್ರಮ. ಸಂಭ್ರಮದ ಸ್ಮರಣೆಯಲ್ಲಿ ಯಕ್ಷಗಾನ ರಂಗದ ಬಹುಮಾನ್ಯ ಹಿರಿಯ ಕಲಾವಿದರಿಗೆ ಸನ್ಮಾನ. ಪ್ರತಿಯೊಬ್ಬ ಯಕ್ಷಗಾನ ಅಭಿಮಾನಿಯೂ ಅಭಿಮಾನ ಪಟ್ಟುಕೊಳ್ಳಬೇಕಾದ ಒಂದು ಕಾರ್ಯಕ್ರಮ. ಇದು ಯಕ್ಷಗಾನ ಕಲಾರಂಗದ ಶಿಸ್ತುಬದ್ಧ ಚಟುವಟಿಕೆಗೆ ಸಾಕ್ಷಿ ಎಂಬಂತೆ ಕಾರ್ಯಕ್ರಮ ಸಂಘಟಿಸಲ್ಪಟ್ಟಿತ್ತು. ಕೇವಲ ನಲ್ವತ್ತರ ಸಂಭ್ರಮ ಮಾತ್ರವಲ್ಲ ಉಡುಪಿಯ ಒಂದು ಸಂಘಟನೆ ತನ್ನ ಕಾರ್ಯಕ್ರಮವನ್ನು ಬೆಂಗಳೂರಿಗೆ ವಿಸ್ತರಿಸಿ ಒಂದು ಯಶಸ್ವೀ ಕಾರ್ಯಕ್ರಮವನ್ನು ಸಂಘಟಿಸುವುದು ಸಹ ಒಂದು ಸಂಭ್ರಮವಾಗಿತ್ತು.

ನಿಗದಿತ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭವಾಗಿತ್ತು. ಆರಂಭದಲ್ಲಿ ಪಂಚಶರ ಪಂಚಶಿರವೆಂಬ ಪ್ರಸಂಗ ತೆಂಕುತಿಟ್ಟಿನ ಕ್ರಮದಲ್ಲಿ ಜರಗಿ ನಂತರ ಸಾಕ್ಷ್ಯಚಿತ್ರ ಮತ್ತು ಸಭಾ ಕಾರ್ಯಕ್ರಮದೊಂದಿಗೆ ಸನ್ಮಾನ ಕಾರ್ಯಕ್ರಮ. ಆನಂತರ ಶ್ರೀಕೃಷ್ಣ ಸಂಧಾನ ಎಂಬ ಯಕ್ಷಗಾನ ಬಡಗುತಿಟ್ಟಿನ ಕ್ರಮದಲ್ಲಿ ಜರಗಿತ್ತು. ಬಹಳಷ್ಟು ಸಮಯಕ್ಕೆ ಆರಂಭವಾಗಿ ಹಾಗೇ ಮುಕ್ತಾಯವನ್ನು ಕಂಡರೂ ಸನ್ಮಾನ ಕಾರ್ಯಕ್ರಮ ಒಂದಷ್ಟು ಹೊತ್ತು ಲಂಬಿಸಿತು.

ವೇದಿಕೆಯ ಮುಕ್ಕಾಲು ಭಾಗ ಸನ್ಮಾನಿತರು, ಅಭ್ಯಾಗತರು, ಅತಿಥಿವರೇಣ್ಯರಿಂದ ತುಂಬಿಕೊಂಡು ಅತ್ಯಂತ ವಿಶಿಷ್ಟ ಕಾರ್ಯಕ್ರಮ ಎನಿಸಿತು. ಹದಿನೇಳು ಮಂದಿ ಯಕ್ಷಗಾನದ ವಿಶಿಷ್ಟರಿಗೆ ಸನ್ಮಾನ. ಇದುವೇ ಕಲ್ಪನೆಗೆ ಮೀರಿದ ಕಾರ್ಯಕ್ರಮ. ಸರಕಾರದ ರಾಜ್ಯೋತ್ಸವ ಪ್ರಶಸ್ತಿಗೆ ಇದೇ ರೀತಿ ಸನ್ಮಾನಿತರಿಂದ ವೇದಿಕೆ ತುಂಬಿರುವುದು ಬಿಟ್ಟರೆ ಮತ್ತೆ ಆ ಬಗೆಯಲ್ಲಿ ಕಾಣುವುದು ಸಾಧ್ಯವಿಲ್ಲ ಎಂದೇ ಹೇಳಬೇಕು. ಯಕ್ಷಗಾನದ ಕಾರ್ಯಕ್ರಮ ಈ ಸರಕಾರೀ ಕಾರ್ಯಕ್ರಮವನ್ನು ಮೀರಿಸುವ ರೀತಿಯಲ್ಲಿ ವ್ಯವಸ್ಥಿತವಾಗಿ ನಡೆದುದು ಒಂದು ಹೆಗ್ಗಳಿಕೆಯೇ ಸರಿ. ಇಷ್ಟು ದೊಡ್ಡಮಟ್ಟಿಗೆ ಅಷ್ಟೇ ವ್ಯವಸ್ಥಿತವಾಗಿ ಒಂದು ಸನ್ಮಾನ ಕಾರ್ಯಕ್ರಮ ಕಾಣುವುದು ಸಾಧ್ಯವೇ ಇಲ್ಲ ಎನ್ನಬಹುದು. ಸನ್ಮಾನಿತರೆಲ್ಲರೂ ಇಂತಹ ಮನ್ನಣೆಗೆ ಅತ್ಯಂತ ಅರ್ಹರೆನ್ನುವುದು ಒಂದು ಮಾತಾದರೆ ಅವರನ್ನು ಆಯ್ಕೆ ಮಾಡಿ ಒಂದು ಸೂರಿನಡಿಯಲ್ಲಿ ಅವರನ್ನು ಗೌರವಿಸಿದ್ದು ಕೂಡ ಅಷ್ಟೇ ಮಹತ್ವವನ್ನು ಕಾಣುತ್ತದೆ.

ಈ ಕಾರ್ಯಕ್ರಮವನ್ನು ಒಂದು ಸನ್ಮಾನ ಕಾರ್ಯಕ್ರಮವಾಗಿಯೇ ಕಾಣಬೇಕು. ಯಾಕೆಂದರೆ ಒಂದು ದೊಡ್ದ ಯಕ್ಷಗಾನವನ್ನು ನೋಡಬೇಕು ಎಂದು ಬಂದವರಿಗೆ ಕಾರ್ಯಕ್ರಮ ಆ ಒಂದು ನಿರೀಕ್ಷೆಯನ್ನು ಪೂರೈಸಲಿಲ್ಲ ಎಂದೇ ಹೇಳಬೇಕು. ಯಕ್ಷಗಾನವನ್ನು ಕಂಡ ತೃಪ್ತಿಯಂತು ಸಿಕ್ಕಿರಲಾರದು ಎಂದೇ ನನ್ನ ಅನಿಸಿಕೆ. ತೆಂಕು ತಿಟ್ಟಿನ ’ಪಂಚಶರ ಪಂಚ ಶಿರ’ ಕೆಲವೊಮ್ಮೆ ಯಕ್ಷಗಾನದಂತೆ ಕೆಲವೊಮ್ಮೆ ಗೀತನಾಟಕದಂತೆ ಇನ್ನು ಕೆಲವೊಮ್ಮೆ ನಾಟಕದಂತೆ ಭಾಸವಾಗಿತ್ತು.

ಈ ಕಾರ್ಯಕ್ರಮ ರೂಪಿಸುವವಲ್ಲಿ ಬಹಳಷ್ಟು ಶ್ರಮ ವಿನಿಯೋಗವಾಗಿದೆ ಎಂದು ಕಾರ್ಯಕ್ರಮ ಕಂಡಾಗ ಅನಿಸಿತು. ಹಿಮ್ಮೇಳ ಅತ್ಯಂತ ಉತ್ತಮವಾಗಿದ್ದರೂ ಸ್ವತಂತ್ರ ಮನೋಭಾವದ ಕೊರತೆ ಕಾಣುತ್ತಿತ್ತು. ತೆಂಕುತಿಟ್ಟಿನ ಅತ್ಯಂತ ವೈಶಿಷ್ಟ್ಯತೆಯ ಕಿರೀಟವೇಷ ಬಣ್ಣದವೇಷವನ್ನು ತೋರಿಸುವುದಕ್ಕಷ್ಟೇ ಈ ಪ್ರಸಂಗ ಸೀಮಿತವಾದ ಹಾಗಿತ್ತು. ಅವುಗಳ ಯಾವ ಪರಿಣಾಮವೂ ಪ್ರೇಕ್ಷಕನಲ್ಲಿ ಆಗಲೇ ಇಲ್ಲ. ಹೆಚ್ಚೆಂದರೆ ಒಂದು ಪೌರಾಣಿಕ ನಾಟಕವನ್ನು ನೋಡಿದ ಅನುಭವಾಗಿತ್ತು. ಯಕ್ಷಗಾನ ಎಂದರೆ ಕೇವಲ ವೇಷ ನಾಟ್ಯ ಇಷ್ಟಕ್ಕೆ ಸೀಮಿತವಲ್ಲ. ಎಲ್ಲದರಲ್ಲೂ ಹೊಸತನ್ನು ನವ್ಯರೀತಿಯಲ್ಲಿ ಕೊಡಬೇಕು ಎನ್ನುವ ಕಳಕಳಿಯಲ್ಲಿ ಯಕ್ಷಗಾನ ಕೇವಲ ವೇಷಕ್ಕಷ್ಟೇ ಸೀಮಿತವಾಗಿತ್ತು.

ದೇವೇಂದ್ರನ ಒಡ್ದೋಲಗ ಉತ್ತಮ ಎನ್ನಬಹುದಾದರೂ ಬಣ್ಣದ ಅಸುರ ವೇಷಗಳ ರಂಗ ಪ್ರವೇಶ ಅಷ್ಟು ಪರಿಣಾಮಕಾರಿಯಾಗಿರಲಿಲ್ಲ. ಬಹಳ ಹಿಂದೆ ರಂಗ ತುಂಬಿದ ದೇವೇಂದ್ರನ ಒಡ್ದೋಲಗ ಕಂಡ ನೆನಪು ಪುನಃ ಮರುಕಳಿಸಿತು. ಈಗೀಗ ದೇವೇಂದ್ರನ ಒಡ್ದೊಲಗ ಎಂದರೆ ದೇವೇಂದ್ರನ ಎಡಬಲಕ್ಕಷ್ಟೇ ಸೀಮಿತವಾಗಿರುತ್ತದೆ. ಇಲ್ಲಿ ಕಡಿಮೆಯ ಸಮಯಾವಕಾಶದಲ್ಲೂ ಮಿತಿಯೊಳಗೆ ಸಾಂಪ್ರದಾಯಿಕ ಒಡ್ಡೋಲಗವನ್ನು ತೋರಿಸುವ ಪ್ರಯತ್ನ ಶ್ಲಾಘನೀಯ. ಆದರೂ ಎಲ್ಲವೂ ಕಿರೀಟ ವೇಷ(ರಾಜವೇಷ) ವನ್ನೇ ತೋರಿಸಿದ್ದು ದೇವೇಂದ್ರನನ್ನು ಅವುಗಳ ಮಧ್ಯೆ ಹುಡುಕುವಂತೆ ಮಾಡಿತ್ತು.

ಇನ್ನು ದೇವ ದಾನವರ ಯುದ್ದದ ಸನ್ನಿವೇಶ ಯಕ್ಷಗಾನ ಎಂದು ಒಪ್ಪಿಕೊಳ್ಳುವಲ್ಲಿ ಮನಸ್ಸಿಗೆ ಬಹಳ ಕಷ್ಟವಾಗುತ್ತದೆ. ಆ ಬಗೆಯ ಯುದ್ದ ಸನ್ನಿವೇಶ ಸಿನಿಮಾದಲ್ಲಷ್ಟೇ ಕಾಣಬಹುದು. ಇದು ಅಷ್ಟು ಪರಿಣಾಮಕಾರಿಯಾಗಿ ಮೂಡಿಬರಲಿಲ್ಲ ಮಾತ್ರವಲ್ಲ ಇದನ್ನು ಇನ್ನು ಯಾರೂ ಅನುಸರಿಸದಿರಲಿ ಎಂದೇ ಆಶಯ. ದೊಡ್ಡ ದೊಡ್ದ ಕಲಾವಿದರ ಆಟ ಉಂಟು ಅಂತ ಬಂದವರಿಗೆ ಆ ಕಲಾವಿದರನ್ನು ಈಬಗೆಯಲ್ಲಿ ಕಂಡು ಬಹಳ ನಿರಾಶೆಯೇ ಆಯಿತು ಎನ್ನಬೇಕು. ಯಕ್ಷಗಾನದ ದೃಷ್ಟಿಕೋನವನ್ನು ಕೆಲವೊಮ್ಮೆ ಬದಿಗಿಟ್ಟು ನೋಡಿದಲ್ಲಿ ಕಾರ್ಯಕ್ರಮ ಅತ್ಯುತ್ತಮ ಎನ್ನಬಹುದು. ಒಂದೇ ತೆರನಾದ ಏಕತಾನತೆ ಅನುಭವಿಸಿದ್ದ ಪ್ರೇಕ್ಷಕನಿಗೆ ಇದು ಭಿನ್ನವಾದ ಅನುಭವವಾಗಿರಬಹುದು

ಎಲ್ಲಾ ಕಾರ್ಯಕ್ರಮದಲ್ಲೂ ಎದ್ದು ಕಂಡ ಅಂಶವೆಂದರೆ ಸಂಸ್ಥೆಯ ಒಂದು ಸಾಮಾಜಿಕ ಕಳಕಳಿ. ಅದನ್ನು ಪ್ರಾಮಾಣಿಕವಾಗಿ ಗುರುತಿಸಿ ಪ್ರತ್ಯೇಕವಾಗಿ ಶ್ಲಾಘಿಸಬೇಕು. ಯಕ್ಷಗಾನಕ್ಕೆ ಒಂದು ಪ್ರತ್ಯೇಕ ಅಕಾಡೆಮಿಯ ಸ್ಥಾಪನೆ, ಇದು ಬಹಳ ಹಿಂದಿನ ಬೇಡಿಕೆ. ಆ ಬೇಡಿಕೆಯನ್ನು ಮಾನ್ಯ ಸಂಸ್ಕೃತಿ ಸಚಿವರಿಗೆ ಈ ಸಂದರ್ಭದಲ್ಲಿ ಮನವಿ ಪೂರ್ವಕವಾಗಿ ಸಲ್ಲಿಸಿ ಸರಕಾರದ ಬಹಳ ಹತ್ತಿರದ ಬಾಗಿಲನ್ನು ಯಕ್ಷಗಾನ ಕಲಾರಂಗ ಬಡಿದಿದೆ ಎನ್ನಬಹುದು. ಇದಕ್ಕಿಂತ ಪರೀಣಾಮಕಾರಿಯಾಗಿ ಮನವಿಯನ್ನು ಸಲ್ಲಿಸುವುದು ಹೇಗೆ ಎಂದು ಯೋಚಿಸಲು ಸಾಧ್ಯವಿಲ್ಲ. ಆದರೂ ಮಾನ್ಯ ಸಚಿವರು, ಯಕ್ಷಗಾನದಂತೆಯೇ ಹಾಡಿನಿಂದ ಸಂಗೀತದಿಂದ ನಾಟ್ಯದಿಂದ ವೈಶಿಷ್ಟ್ಯ ಬೀರುವ ಕಲೆ ಇನ್ನು ಬೇರೆಯೂ ಇದೆ ಎಂದು ಹೇಳುವಲ್ಲಿ ಅಡ್ಡಗೋಡೆಯ ಮೇಲೆ ದೀಪ ಇಟ್ಟಿದ್ದಾರೆ ಎಂದೇ ಹೇಳಬಹುದು. ಆದರೂ ಕೊನೆಯಲ್ಲಿ ಪೇಜಾವರ ಶ್ರೀಗಳು ತಮ್ಮ ಆಶೀರ್ವಚನದಲ್ಲಿ ಇದಕ್ಕೆ ಸೂಕ್ತ ಉತ್ತರವನ್ನು ಪರೋಕ್ಷವಾಗಿ ನೀಡಿದ್ದಾರೆ. ಇಂದು ಕರಾವಳಿಯ ಭಾಗದಲ್ಲಿ ಯಕ್ಷಗಾನದ ಪ್ರಭಾವದಿಂದ ಪೌರಾಣಿಕ ಪಾತ್ರಗಳಾದ ಕೃಷ್ನ ರಾಮ ಕರ್ಣ ಅರ್ಜುನರನ್ನು ಅವರ ವ್ಯಕ್ತಿತ್ವ ವಿಶೇಷವನ್ನು ಪರಿಚಯಿಸುವ ಅಗತ್ಯವಿಲ್ಲ. ಇದು ಸಚಿವೆಗೆ ನೀಡಿದ ಪರೋಕ್ಷ ಉತ್ತರ ಎಂದೇ ಪರಿಗಣಿಸಬೇಕು.

ಇಷ್ಟು ಮಾತ್ರವಲ್ಲ ಬ್ರಹತ್ ಸಂಖ್ಯೆಯ ಕಲಾವಿದರನ್ನು ಕೇವಲ ಸನ್ಮಾನಕ್ಕಾಗಿ ದೂರದ ಊರಿನಿಂದ ಶ್ರಮವಹಿಸಿ ಈ ರಾಜಧಾನಿಯ ಮಡಿಲಿಗೆ ಕರೆತಂದು, ಅದೇ ರೀತಿ ಆದರ ಉಪಚಾರಕ್ಕೆ ಕೊರತೆಯಿಲ್ಲದಂತೆ ಅವರನ್ನು ನೋಡಿಕೊಂಡು ಒಂದು ಕಾರ್ಯಕ್ರಮ ನೆರವೇರಿಸುವುದು ಸಂಸ್ಥೆಯ ಇಚ್ಚಾಶಕ್ತಿಗೆ ಹಿಡಿದ ಕನ್ನಡಿ ಅಂತಲೇ ಹೇಳಬೇಕು. ಯಕ್ಷಗಾನಕ್ಕೆ ಸಂಬಂಧಿಸಿ ಇದು ಬಹಳ ಶ್ಲಾಘನೀಯ ಎಂದೇ ನನ್ನ ಅನಿಸಿಕೆ. ಇದನ್ನು ಯಕ್ಷಗಾನ ಕಾರ್ಯಕ್ರಮ ಎಂದು ಕಾಣದೇ ಒಂದು ಯಕ್ಷಗಾನದ ಬೃಹತ್ ಸನ್ಮಾನ ಕಾರ್ಯಕ್ರಮ ಎಂದೇ ಕಾಣಬೇಕು. ಮಾತ್ರವಲ್ಲ ಒಂದು ಯಕ್ಷಗಾನದ ಒಂದು ಸಂಸ್ಥೆ ಯಾವರೀತಿ ಕಾರ್ಯ ನಿರ್ವಹಿಸಬೇಕು, ಯಾವುದೆಲ್ಲ ಶಿಸ್ತು ಕ್ರಮಗಳನ್ನು ಅನುಸರಿಸಬೇಕು, ಒಂದು ಕಾರ್ಯಕ್ರಮದ ಮತ್ತು ಕಲೆಯ ಗೌರವವನ್ನು ಸಂಸ್ಕೃತಿಯನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ತೋರಿಸಿಕೊಡಲು ಈ ಕಾರ್ಯಕ್ರಮ ಒಂದು ಮಾದರೀ ಕಾರ್ಯಕ್ರಮ ಎಂದು ಹೇಳಬಹುದು. ವರ್ಷವಿಡೀ ಹಲವಾರು ಯಕ್ಷಗಾನ ಕಾರ್ಯಕ್ರಮಗಳನ್ನು ನೋಡುವ ಅವಕಾಶವಿರುತ್ತದೆ. ಹಾಗಾಗಿ ಯಕ್ಷಗಾನದ ಹೆಸರಲ್ಲಿ ಅದಕ್ಕೆ ಸೀಮಿತವಾಗಿ ಇಂತಹ ಕಾರ್ಯಕ್ರಮ ಸೂಕ್ತವಾಗಿದೆ ಎಂದು ಹೇಳಬಹುದು.

ಒಂದು ಸಂಸ್ಥೆ ತನ್ನ ಕಾರ್ಯ ಚಟುವಟಿಕೆಗಳನ್ನು ಪರಿಚಯಿಸಲು ಇಂತಹ ವೇದಿಕೆಯನ್ನು ರೂಪಿಸುವುದು ಬಹಳ ಸೂಕ್ತವೇ ಆಗಿದೆ. ಯಾಕೆಂದರೆ, ಒಂದು ದಿನದ ಯಕ್ಷಗಾನ ಕಾರ್ಯಕ್ರಮಕ್ಕಿಂತ ಅದು ನೆರವೇರಿಸುವ ಕಾರ್ಯ ಚಟುವಟಿಕೆಗಳು ಬಹಳ ಪ್ರಾಮುಖ್ಯತೆಯನ್ನುಗಳಿಸುತ್ತದೆ. ವಿಶೇಷವಾಗಿ ಉಡುಪಿಯ ಯಕ್ಷಗಾನ ಕಲಾರಂಗ ಆರೀತಿಯಲ್ಲಿ ಕಾರ್ಯ ಪ್ರವೃತ್ತವಾಗಿದೆ ಎಂಬುದು ಶ್ಲಾಘನೀಯ. ಹಾಗಾಗಿ ಯಕ್ಷಗಾನ ಕಾರ್ಯಕ್ರಮವಾಗಿ ನೋಡದೇ ಇದನ್ನು ಅತ್ಯಂತ ವಿಶಿಷ್ಟ ಕಾರ್ಯಕ್ರಮ ಎಂದು ಪರಿಗಣಿಸಿ ಆ ದೃಷ್ಟಿಕೋನದಿಂದಲೇ ಅನುಭವಿಸಬೇಕು. ಇದೊಂದು ಅತ್ಯುತ್ತಮ ಅರ್ಥ ಪೂರ್ಣ ಸನ್ಮಾನ ಕಾರ್ಯಕ್ರಮ ಎಂದು ಹೇಳಬಹುದು.

*****************

ಪಡುವಲಪಾಯ ಯಕ್ಷಗಾನಕ್ಕೆ ಮೀಸಲಾದ ಅಕಾಡೆಮಿ ಸ್ಥಾಪನೆಗೆ ಯಕ್ಷಗಾನ ಕಲಾರ೦ಗದ ಒತ್ತಾಯಪೂರ್ವಕ ಮನವಿ. ಮ೦ಡನೆ - ಶ್ರೀ ಲಕ್ಷ್ಮಿನಾರಾಯಣ ಸಾಮಗರು, ನಿಕಟಪೂರ್ವ ಅಧ್ಯಕ್ಷರು, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಕೃಪೆ : http://yakshachintana.blogspot.in


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ