ಬಡಗು ತಿಟ್ಟಿನ ಮಾಂತ್ರಿಕ ಚೆಂಡೆ ವಾದಕ ರಾಮಕೃಷ್ಣ ಮಂದಾರ್ತಿ
ಲೇಖಕರು : ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಗುರುವಾರ, ನವ೦ಬರ್ 27 , 2014
|
ಭಾಗವತರು ಮತ್ತು ಕಲಾವಿದರ ಮಟ್ಟದಲ್ಲಿ ವಾದನಗಾರರು ಗುರುತಿಸಲ್ಪಡುವುದಿಲ್ಲ ಎಂದು ವಾದನಗಾರರ ಅಳಲಿರುವ ಸುಮಾರು ಎಂಬತ್ತರ ದಶಕದಲ್ಲಿ ವಾದನಗಾರರು ಗುರುತಿಸಲ್ಪಡುವಂತೆ ಬಡಗುತಿಟ್ಟಿನಲ್ಲಿ ಪ್ರಯತ್ನಿಸಿರುವ ಕೆಮ್ಮಣ್ಣು ಆನಂದ, ಹೊಳೆಗದ್ದೆ ಗಜಾನನ, ಹುಂಚದಕಟ್ಟೆ ಶ್ರೀನಿವಾಸ ಆಚಾರ್, ಬೇಳಂಜೆ ತಿಮ್ಮಪ್ಪ ನಾಯಕ್, ದುರ್ಗಪ್ಪ ಗುಡಿಗಾರ್, ಶಂಕರ ಭಾಗವತ, ಕರ್ಕಿ ಪ್ರಭಾಕರ ಭಂಡಾರಿ ಮುಂತಾದ ಖ್ಯಾತನಾಮ ವಾದನಗಾರರೊಂದಿಗೆ ಕೇಳಿ ಬರುವ ಇನ್ನೊಂದು ಹೆಸರು ರಾಮಕೃಷ್ಣ ಮಂದಾರ್ತಿಯವರದ್ದು.
|
ಬಡಗುತಿಟ್ಟಿನ ಚಂಡೆಯ ಮಾಂತ್ರಿಕ ಕೆಮ್ಮಣ್ಣು ಆನಂದರು ನಿಧನರಾದ ನಂತರ ಆ ಸ್ಥಾನವನ್ನು ಸಮರ್ಥವಾಗಿ ತುಂಬಿದವರು ಮಂದಾರ್ತಿಯವರು. ಸದ್ಯ ವೃತ್ತಿಯಿಂದ ನಿವೃತ್ತಿಯಾದ ಅವರು ದಾಸದ್ವಯರು, ಮರಿಯಪ್ಪಾಚಾರ್, ಗುಂಡ್ಮಿ ಕಾಳಿಂಗ ನಾವಡರಿಂದ ಇಂದಿನ ಎಲ್ಲಾ ಯುವ ಭಾಗವತರಿಗೆ ಸಾಥ್ ನೀಡಿ ಮೂರೂ ತಲೆಮಾರಿನ ಭಾಗವತರುಗಳಿಗೆ ಚಂಡೆಯ ಸಾಥ್ ನೀಡಿ ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಲವಳ್ಳಿ ವೆಂಕಟೇಶ ರಾವ್, ಶಿರಿಯಾರ ಮಂಜು ನಾಯ್ಕ್ , ಐರೋಡಿ ಗೋವಿಂದಪ್ಪ , ತೀರ್ಥಳ್ಳಿ ಗೋಪಾಲಾಚಾರ್, ಬಳ್ಕೂರು ಕ್ರಷ್ಣ ಯಾಜಿ ಸಹಿತ ಮೂರೂ ತಲೆಮಾರಿನ ಕಲಾವಿದರನ್ನು ತನ್ನ ಚಂಡೆಯ ನಿನಾದದಿಂದ ಕುಣಿಸಿದವರು.
ಬಾಲ್ಯ , ಶಿಕ್ಷಣ ಮತ್ತು ಕಲಾಸೇವೆ
ಬಡಗುತಿಟ್ಟು ಯಕ್ಷಗಾನದ ತವರೂರು ಶ್ರೀ ದುರ್ಗಾಪರಮೇಶ್ವರಿಯ ನೆಲೆವೂರಾದ ಶ್ರೀ ಕ್ಷೇತ್ರ ಮಂದಾರ್ತಿಯಲ್ಲಿ 1960ರಲ್ಲಿ ಪದ್ಮನಾಭಯ್ಯ - ರಾಧಾ ಬಾಯಿ ದಂಪತಿಗಳ ಮಗನಾಗಿ ಜನಿಸಿದ ಇವರು ಚೆಂಡೆಯ ಜನಕ ದಿ. ಕಮ್ಮಣ್ಣು ಆನಂದರಿಂದ ಪ್ರಾಥಮಿಕ ವಾದನ ಅಭ್ಯಾಸ ಮಾಡಿ, ಶ್ರುತಿಬ್ರಹ್ಮ ಸುರಗಿಕಟ್ಟೆ ಬಸವ ಗಾಣಿಗರಿಂದ ಶ್ರುತಿಲಯಗಳ ಅನುಭವ ಪಡೆದು ಶ್ರೀ ಮಂದಾರ್ತಿ ಮೇಳದಲ್ಲಿ ಪ್ರಥಮವಾಗಿ ಚೆಂಡೆಯ ಕೋಲು ಹಿಡಿದರು.
ಎಂಟು ವರ್ಷ ತವರು ಮೇಳ ಮಂದಾರ್ತಿಯಲ್ಲಿ, ಏಳು ವರ್ಷ ಮಾರಣಕಟ್ಟೆ ಮೇಳದಲ್ಲಿ ತಿರುಗಾಟ ಮಾಡಿದ ಇವರ ಗರಿಷ್ಟ ತಿರುಗಾಟ ಶ್ರೀ ಸಾಲಿಗ್ರಾಮ ಮೇಳದಲ್ಲಿ ಅದೂ ಕಾಳಿಂಗ ನಾವಡರ ಸಹವರ್ತಿಯಾಗಿ. ಅಲ್ಲಿ ಕೆಮ್ಮಣ್ಣು ಆನಂದ, ಹುಂಚದಕಟ್ಟೆ ಶ್ರೀನಿವಾಸ ಆಚಾರ್, ಮರವಂತೆ ದಾಸರಿಂದ ತೆರವಾದ ಸ್ಥಾನವನ್ನು ಸಮರ್ಥವಾಗಿ ತುಂಬಿದವರು ಕಾಳಿಂಗ ನಾವಡರು, ಶಂಕರ ಭಾಗವತ ಯಲ್ಲಾಪುರ ಮತ್ತು ರಾಮಕೃಷ್ಣ ಮಂದಾರ್ತಿಯವರು. ಹತ್ತು ವರ್ಷಗಳ ಕಾಲ ಪ್ರಭಾಕರ ಭಂಡಾರಿಯವರ ಮದ್ದಳೆಗೆ ಇವರ ಚೆಂಡೆ ಸಾಲಿಗ್ರಾಮ ಮೇಳದಲ್ಲಿ ಘನ ಗಂಬೀರದ ಬ್ರಹ್ಮ ಹಿಮ್ಮೇಳವಾಗಿತ್ತು.
ಏರಿಳಿತ ಶ್ರುತಿಯ ಪರಿಪೂರ್ಣ ಚೆಂಡೆ ವಾದಕ
ಅಗ್ರ ಶ್ರೇಣಿಯ ಹಿಮ್ಮೇಳ ಮುಮ್ಮೇಳದೊಂದಿಗೆ ಪಳಗಿದ ಇವರು ತನ್ನ ವಿದ್ವತ್ ಶೀಲ ಚೆಂಡೆವಾದನದಿಂದ ವಿದ್ಯುತ್ತ್ ಸಂಚಾರ ಮಾಡಬಲ್ಲ ನವಿರಾದ ನುಡಿಗಾರಿಕೆಯಲ್ಲಿ ಭಾಗವತರ ಗಾನಾನುವರ್ತಿಯಾಗಿ ಚೆಂಡೆಯ ಸಾಥ್ ನೀಡುವ ಕಲಾವಿದರಾಗಿ ಗುರುತಿಸಿಕೊಳ್ಳಲು ಹೆಚ್ಚು ಸಮಯ ಬೇಕಾಗಲಿಲ್ಲ. ಪಾತ್ರಾನುಗುಣವಾಗಿ ವ್ಯಕ್ತಿಗೆ ನಿಷ್ಟರಾಗಿ ಕಲಾವಿದರನ್ನು ಮೆರೆಸುವ ಅನುಭವಿ ಚೆಂಡೆವಾದಕರಾಗಿ ಅತಿ ಬೇಗನೆ ಗುರುತಿಸಿಕೊಂಡರು. ಏಳು ಚೆಂಡೆಗಳನ್ನು ಶ್ರುತಿಯ ಏರಿಳಿತಕ್ಕೆ ಹೊಂದಿಸಿಕೊಂಡು ಏಕ ಕಾಲದಲ್ಲಿ ಭಾರಿಸಿದ ಖ್ಯಾತಿ ಇವರದ್ದು. ಸಪ್ತ ಚೆಂಡೆಗಳಲ್ಲಿ ದಾಖಲಾರ್ಹ ಸಾಧನೆ ಇವರದ್ದು.
|
ರಾಮಕೃಷ್ಣ ಮಂದಾರ್ತಿ |
 |
ಜನನ |
: |
1960 |
ಜನನ ಸ್ಥಳ |
: |
ಮಂದಾರ್ತಿ
ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ
|
ಕಲಾಸೇವೆ:
ಅಪ್ರತಿಮ ಚೆ೦ಡೆವಾದಕರಾಗಿ ಮಂದಾರ್ತಿ, ಮಾರಣಕಟ್ಟೆ ಸಾಲಿಗ್ರಾಮ ಸೇವೆ ಸಲ್ಲಿಸಿದ್ದಾರೆ.
|
ಪ್ರಶಸ್ತಿಗಳು:
ಉಡುಪಿ ಯಕ್ಷಗಾನ ಕಲಾಕ್ಷೇತ್ರದ ನಿಟ್ಟೂರು ಭೋಜಪ್ಪ ಸುವರ್ಣ ಪ್ರಶಸ್ತಿ ಸಹಿತ ಹಲವಾರು ಸನ್ಮಾನಗಳು
|
|
|
ಕುಂದಾಪುರ ಆಡು ಮಾತಿನಂತೆ “ಆಟಕ್ಕೆ ಅಬ್ರ-ತೋಟಕ್ಕೆ ಗೊಬ್ರ” ಎಂಬಂತೆ ಬಡಗಿನ ಹಿಮ್ಮೇಳಕ್ಕೊಂದು ಅಬ್ಬರ ನೀಡಿದ ಚೆಂಡೆವಾದಕರಿವರು. ಬಹುದೂರದಲ್ಲಿದ್ದರೂ ಇದು ರಾಮಕೃಷ್ಣರ ಚೆಂಡೆವಾದನವೆಂದು ಯಕ್ಷಗಾನದ ಅಲ್ಪ ಜ್ಞಾನವಿರುವವೆರೂ ಕೂಡ ಗುರುತಿಸುವಂತ ಪರಿಪೂರ್ಣ ನುಡಿತ ಇವರದ್ದು. ಚೆಂಡೆ ಸ್ವತಂತ್ರವಾದನವಲ್ಲ. ಚೆಂಡೆ ನಾಟ್ಯಕ್ಕೆ ಉತ್ಸಾಹ ನೀಡಿದರೂ ಅದಕ್ಕೆ ನಾದ ಮಾಧುರ್ಯ ಬರುವುದು, ಬಿಗಿತ ಸಿಗುವುದು ಮದ್ದಳೆಯ ಪೆಟ್ಟಿನೊಂದಿಗೆ ಸೇರಿಕೊಂಡಾಗ ಮಾತ್ರ. ಆಗ ಅಲ್ಲಿ ಒಂದು ಶ್ರುತಿ ಸಾಮರಸ್ಯದ ಗುಂಗು ಏರ್ಪಡುತ್ತದೆ, ಕೇವಲ ಬಡಿಯುವೂದೇ ವಾದನವಲ್ಲ ಎಂಬ ಅಂಶಗಳ ಬಗ್ಗೆ ಸಂಪೂರ್ಣ ಅರಿವಿದ್ದ ಇವರದ್ದು ಮದ್ದಳೆಯ ನಾದಕ್ಕನುಗುಣವಾಗಿ ನುಡಿಸುವ ಪರಿಪೂರ್ಣ ವಾದನ.
ನಯ ನಾಜೂಕಿನ ಪೆಟ್ಟು, ದಸ್ತನ್ನೇ ಧ್ವನಿಸುವ ನುಡಿತ, ಪದ್ಯ ಸಾಹಿತ್ಯ ಕೇಳುವಂತೆ ಚೆಂಡೆ ನುಡಿಸುವ ಕುಶಲತೆ, ಸಿಂಗಲ್ ಮತ್ತು ಡಬ್ಬಲ್ ಪೆಟ್ಟುಗಳನ್ನರಿತ ಅಪರೂಪದ ಕಲಾವಿದರಿವರು. ಏರು ಚೆಂಡೆಯ ಗಿಮಿಕ್ಸ್ ನಿಂದ ಬೆಳಗ್ಗಿನ ಜಾವದಲ್ಲಿ ಮಲಗಿದ ಪ್ರೇಕ್ಷಕರನ್ನು ಬಡಿದೆಬ್ಬಿಸಬಲ್ಲ ಚಾಕಚಕ್ಯತೆ ಇವರ ಚೆಂಡೆ ವಾದನದಲ್ಲಿ ಇದೆ. ಶ್ರುತಿ ಇಳಿಸಿದಾಗ ಚೆಂಡೆಯ ನಾದ ಕಡಿಮೇ ಆದರೂ ಸಹ ಇಳಿ ಶ್ರುತಿಯ ಭಾಗವತರಿಗೆ ಭಾರಿಸುವಾಗಲೂ, ಕರುಣಾ ರಸದ ಪದ್ಯಗಳಿಗೆ ಭಾರಿಸುವಾಗಲೂ ಇವರ ಚೆಂಡೆಯಲ್ಲಿ ಹೊಸದೊಂದು ನಾದಲೋಕ ಸೃಷ್ಟಿಯಾಗುತ್ತದೆ. ಸ್ವತಹ ಚೆಂಡೆಯ ಮುಚ್ಚಿಗೆ ಮಾಡಲು ತಿಳಿದಿರುವ ಇವರು ಚೆಂಡೆಯ ಒಳಹೊರಗನ್ನು ತಿಳಿದ ಪರಿಪೂರ್ಣ ವಾದಕರು.
ನಿವೃತ್ತ ಜೀವನ ಹಾಗೂ ಪ್ರಶಸ್ತಿಗಳು
ಈ ತಲೆಮಾರಿನ ಕಲಾವಿದರಲ್ಲಿ ಇವರೊಂದಿಗೆ ಪಳಗಿದ ಕೋಟ ಶಿವಾನಂದ, ಹಳ್ಳಾಡಿ ರಾಕೇಶ ಮಲ್ಯ, ಕಾಡೂರು ರವಿ ಆಚಾರ್ಯರಲ್ಲಿ ಇವರ ವಾದನ ಶೈಲಿಯನ್ನು ಗುರುತಿಸ ಬಹುದಾಗಿದೆ. ನಿತ್ಯದ ಬದುಕಿನಲ್ಲಿ ವೃತ್ತಿ ಜೀವನದಲ್ಲಿ ಶಿಸ್ತು ಸಮಯ ಪ್ರಜ್ಞೆ, ಸರಳತೆಗಳನ್ನು ಅಳವಡಿಸಿಕೊಂಡು ಕಲಾ ಜೀವನದಲ್ಲಿ ಅಜಾತಶತ್ರುವಾಗಿ ಮೆರೆದ ಇವರು ಎಂದೂ ಸಹ ಒಪ್ಪಿದ ಕಾರ್ಯಕ್ರಮಕ್ಕೆ ಗೈರು ಹಾಜರಾದವರಲ್ಲ.
ಸದ್ಯ ಶ್ರೀ ಕ್ಷೇತ್ರ ಮಂದಾರ್ತಿಯಲ್ಲಿ ಹಣ್ಣು ಕಾಯಿ ಅಂಗಡಿ ನಡೆಸುತ್ತಿರುವ ಇವರಿಗೆ ವೃತ್ತಿ ಜೀವನದಲ್ಲಿ, ಉಡುಪಿ ಯಕ್ಷಗಾನ ಕಲಾಕ್ಷೇತ್ರದ ನಿಟ್ಟೂರು ಭೋಜಪ್ಪ ಸುವರ್ಣ ಪ್ರಶಸ್ತಿ ಸಹಿತ ಹಲವಾರು ಸನ್ಮಾನಗಳು ಸಂದಿವೆ.
ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ವತಿಯಿಂದ ಪ್ರತಿವರ್ಷ ನೀಡುವ ಯಕ್ಷಾಂಗಣ ಪ್ರಶಸ್ತಿ ಈ ಬಾರಿ ಬಡಗುತಿಟ್ಟಿನ ಚಂಡೆ ಗಾರುಡಿಗ ರಾಮಕೃಷ್ಣ ಮಂದಾರ್ತಿ ಇವರಿಗೆ ಸಲ್ಲುತ್ತಿದೆ. ಪ್ರಶಸ್ತಿ ಪ್ರದಾನ ಡಿ. 13 ಶನಿವಾರ ಕುಂದಾಪುರದ ಕಲಾಮಂದಿರದಲ್ಲಿ ನೆರವೇರಲಿದೆ. ಇಂತಹ ಅಭಿಜಾತ ಕಲಾವಿದನನ್ನು ಸನ್ಮಾನಿಸಿ ಯಕ್ಷಾಂಗಣ ಟ್ರಷ್ಟ್ ಧನ್ಯವಾಗಿದೆ.
****************
ರಾಮಕೃಷ್ಣ ಮಂದಾರ್ತಿಯವರ ಕೆಲವು ದೃಶ್ಯಾವಳಿಗಳು
ಕಾಳಿ೦ಗ ನಾವಡರೊಡನೆ
****************
|
|
|