ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಬಣ್ಣದ ಬಿನ್ನಾಣದ ಬೆರಗಿನ ಚಿತ್ರಗಳು

ಲೇಖಕರು : ಎಸ್.ಜಿ. ಭಟ್‌
ಶನಿವಾರ, ನವ೦ಬರ್ 29 , 2014

ಶಾಸ್ತ್ರೀಯವೆಂದು ನಾವಿಂದು ಕರೆಯುವ ಕೆಲವು ಕಲಾಪ್ರಕಾರಗಳಲ್ಲಿ ಮುಖವನ್ನು ಅಂದವಾಗಿಸುವುದಷ್ಟೇ ಪ್ರಸಾದನದ ಮುಖ್ಯ ಉದ್ದೇಶ. ಈ ಕಲೆಗಳಲ್ಲಿ ರಸ ಪ್ರತಿಪಾದನೆಗೆ ಮುಖ ಮತ್ತು ಮುಖದ ಮೇಲಿರುವ ಕಣ್ಣುಗಳು ಪ್ರಧಾನ ಮಾಧ್ಯಮಗಳಾಗಿರುವುದರಿಂದ ಮುಖದ ‘ವರ್ಣಿಕೆ’ ವಿಶೇಷವಾಗಿ ಗಮನಿಸಬೇಕಾದ ಅಂಶವಾಗಿಲ್ಲ. ಆದರೆ ಜಾನಪದವೆಂದು ಅಥವಾ ಜಾನಪದ–ಶಿಷ್ಟ ಕಲೆಗಳ ನಡುವೆ ಓಡಾಡುತ್ತಿರುವ ಕಲಾಪ್ರಕಾರಗಳಲ್ಲಿ ಮುಖವರ್ಣಿಕೆಗೆ ವಿಶೇಷ ಪ್ರಾಧಾನ್ಯವಿದೆ.

ರಾಕ್ಷಸನನ್ನು ಅವರು ಮುಖದ ಚಿತ್ರದಿಂದ ತೋರಿಸುತ್ತಾರೆಯೇ ಹೊರತು ಕೈಯ ಮುದ್ರೆಯಿಂದಲ್ಲ. ಹಾಗಾಗಿ ಜಾನಪದ ಕಲಾವಿದನೊಬ್ಬ ಏಕಕಾಲದಲ್ಲಿ ಎರಡು ಕಲಾಪ್ರಕಾರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುತ್ತಾನೆ. ಒಂದು, ರಂಗದ ಮೇಲಿನ ನಾಟ್ಯಾಭಿನಯದ ಕಲಾಪ್ರಕಾರ. ಎರಡು, ಮುಖದ ಮೇಲೆ ಚಿತ್ರಣ ಮೂಡಿಸುವ ಕಲಾಪ್ರಕಾರ. ಜನಪದ ಕಲಾವಿದನ ಪಾಲಿಗೆ ಮುಖವೇ ಒಂದು ರೀತಿಯ ಕ್ಯಾನ್ವಾಸ್. ಅದರ ಮೇಲೆ ಅದ್ಭುತವಾದ ಚಿತ್ತಾರಗಳನ್ನು ರಚಿಸುತ್ತಾನೆ.

ಒಂದು ಕಲೆಯನ್ನು ಶಾಸ್ತ್ರೀಯಗೊಳಿಸುವಾಗ ಮತ್ತು ಅದಕ್ಕೆ ಖಚಿತವಾದ ಲಕ್ಷಣಸೂತ್ರಗಳನ್ನೂ ಮುದ್ರಾಭಿನಯಗಳನ್ನು ರೂಪಿಸುವಾಗ ನಮಗರಿವಿಲ್ಲದಂತೆಯೇ ಅದರಲ್ಲಿರುವ ಮುಖವರ್ಣಿಕೆಯ ಕಲೆಯನ್ನು ಸರಳಗೊಳಿಸುವ ಅನಿವಾರ್ಯತೆ ಎದುರಾಗುತ್ತದೆ. ಮುಖವರ್ಣಿಕೆಗಳ ಕಲಾತ್ಮಕತೆಯನ್ನು ಗೌರವಿಸಿ ಅದನ್ನು ಉಳಿಸಿಕೊಳ್ಳಬೇಕಾದರೆ ಅಭಿನಯವನ್ನು ಗಾಢವಾಗಿ ಕಾಣಿಸುವ ಅಗತ್ಯವಿರುವುದಿಲ್ಲ. ಯಕ್ಷಗಾನ ಕಲೆಯು ಶಾಸ್ತ್ರೀಯ, ಜಾನಪದ ವಿಭಾಗಗಳ ನಡುವೆ ಓಲಾಡುತ್ತ, ಮುದ್ರಾಭಿನಯಗಳನ್ನು ನಿಖರಗೊಳಿಸುವತ್ತ ಒಲವು ವ್ಯಕ್ತಪಡಿಸುತ್ತಿದ್ದರೂ ಅದರ ಮುಖವರ್ಣಿಕೆ ಮಸುಕಾಗದೆ ಉಳಿದಿರುವುದೊಂದು ವಿಶೇಷ. ಕಥಕಳಿಗೂ ಅಂಥ ಚೈತನ್ಯವಿದೆ.

ಯಕ್ಷಗಾನದಂಥ ಜನಪದ ಕಲೆಯಲ್ಲಿ ರಾವಣನ ಪಾತ್ರಧಾರಿಯೊಬ್ಬ ರಂಗದ ಮೇಲೆ ನಾಟ್ಯ, ವಾಚಿಕಾದಿಗಳಿಂದ ತನ್ನೊಳಗಿನ ಕಲಾವಿದನನ್ನು ಅನಾವರಣಗೊಳಿಸುತ್ತಿರುವಂತೆಯೇ ಮುಖದ ಮೇಲಿನ ಬಣ್ಣಗಾರಿಕೆಯಿಂದ ತಾನೊಬ್ಬ ಚಿತ್ರಕಾರ ಎಂಬುದನ್ನೂ ತೋರಿಸಿಕೊಡುತ್ತಾನೆ. ತೆಂಕುತಿಟ್ಟು ಯಕ್ಷಗಾನದಲ್ಲಿ ದೈತ್ಯ ಪಾತ್ರಗಳು ಚುಟ್ಟಿ ಇಟ್ಟು ರಂಗದ ಮೇಲೆ ಕಾಣಿಸಿಕೊಳ್ಳುವ ಪರಿಪಾಠವಿದೆ. ಸ್ಥೂಲವಾಗಿ ನೋಡಿದರೆ ಎಲ್ಲ ಪಾತ್ರಗಳು ಅಕ್ಕಿಹಿಟ್ಟನ್ನು ಕಲಸಿದ ಮಿಶ್ರಣವನ್ನು ಗಂಟೆಗಟ್ಟಲೆ ಮುಖದ ಮೇಲೆ ಅಂಟಿಸುತ್ತ ಒಂದೇ ರೀತಿಯ ‘ಮುಳ್ಳು’ಗಳನ್ನು ಇಟ್ಟುಕೊಂಡು ಬಂದಂತೆ ತೋರುತ್ತವೆ. ಆದರೆ, ರಾವಣನ ಮುಖವರ್ಣಿಕೆಯೇ ಬೇರೆ, ಬಲಿ ರಾಜನ ಮುಖವರ್ಣಿಕೆಯೇ ಬೇರೆ. ಯಮನ ಬಣ್ಣಗಾರಿಕೆಯೇ ಬೇರೆ, ಮಾಗಧನ ಬಣ್ಣಗಾರಿಕೆಯೇ ಬೇರೆ. ಅವುಗಳು ಬೇರೆ ಬೇರೆ ಎಂದು ಸಾಮಾನ್ಯ ಪ್ರೇಕ್ಷಕನಿಗೆ ಗೊತ್ತಾಗಬೇಕಾದರೆ ಒಂದರ ಜೊತೆಗೆ ಮತ್ತೊಂದನ್ನು ಇಟ್ಟು ನೋಡಬೇಕು! ರಾವಣ, ಮೈರಾವಣ, ಬಲಿ, ಯಮ ಹೀಗೆ ಹಲವಾರು ವೇಷಗಳ ಮುಖವರ್ಣಿಕೆಗಳನ್ನು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಏಕಕಾಲದಲ್ಲಿ ವೀಕ್ಷಿಸುವ ಅವಕಾಶ ಇತ್ತೀಚೆಗೆ ಲಭ್ಯವಾಯಿತು.

ತೆ೦ಕುತಿಟ್ಟಿನ ರಾವಣನ ಮುಖವರ್ಣಿಕೆ
ಈ ಅವಕಾಶವನ್ನು ಕಲ್ಪಿಸಿದ್ದು ಕಲೆ, ಕಲಾವಿದರ ಕ್ಷೇಮಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ಉಡುಪಿಯ ‘ಯಕ್ಷಗಾನ ಕಲಾರಂಗ’. ಕಥಕ್ಕಳಿಯಿಂದ ಗಾಢವಾದ ಪ್ರಭಾವಕ್ಕೊಳಗಾಗಿರುವ (ಅಥವಾ ಒಂದೇ ಮೂಲದಿಂದ ಉದ್ಭವಿಸಿದಂತಿರುವ ಎರಡು ಪ್ರಕಾರಗಳಾದ) ತೆಂಕುತಿಟ್ಟು ಯಕ್ಷಗಾನದ ದೈತ್ಯ ಪಾತ್ರಗಳ ಬಣ್ಣಗಾರಿಕೆಯನ್ನು ಕಲಾತ್ಮಕವಾಗಿ ರೂಪಿಸಿದ ಮೂವರು ಮಾರ್ಗಪ್ರವರ್ತಕರು ಬಣ್ಣದ ಮಾಲಿಂಗ, ಬಣ್ಣದ ಚಂದ್ರಗರಿ ಅಂಬು, ಬಣ್ಣದ ಕುಟ್ಟಪ್ಪು. ನಮ್ಮ ಸದ್ಯದ ಕಲ್ಪನೆಗೆ ನಿಲುಕುವುದು ಈ ಮೂವರು. ಅವರಿಗಿಂತ ಪೂರ್ವದಲ್ಲಿಯೇ ಈ ಮುಖವರ್ಣಿಕೆಯ ಕಲೆ ವಿಕಸನಗೊಳ್ಳುತ್ತ ಬಂದಿರಬಹುದು. ನೂರಾರು ವರ್ಷಗಳ ಹಿಂದಿನ ಬಣ್ಣದ ಪರಂಪರೆ ಇಂದಿಗೂ ಸಮರ್ಥವಾಗಿ ಮುಂದುವರಿಯುತ್ತಿರುವ ಒಂದು ಸೋಜಿಗ. ಕಾಲ ಹಾಳಾಗಿದೆ, ಕಲೆ ನಶಿಸಿದೆ ಎಂದು ಹಳಹಳಿಸುತ್ತಿರುವಾಗಲೇ ಇವತ್ತಿಗೂ ಯುವ ಬಣ್ಣದ ವೇಷಧಾರಿಗಳು ರಂಗದ ಮೇಲೆ ಅರ್ಧಗಂಟೆ ಕೆಲಸವಾದರೂ ನಾಲ್ಕೈದು ಗಂಟೆ ಮುಖವರ್ಣಿಕೆ ಬರೆದು ಕಲಾನಿಷ್ಠೆಯನ್ನು ತೋರುತ್ತಿದ್ದಾರೆ.

ಯಕ್ಷಗಾನದ ಕುರಿತು ಆಳವಾಗಿ ಅಧ್ಯಯನ ಮಾಡಿರುವ ಅಮೆರಿಕದ ಮಾರ್ತಾ ಆಶ್ಯನ್‌ರಂಥ ಘನ ವಿದ್ವಾಂಸರನ್ನು ಆಕರ್ಷಿಸಿದ್ದು ಯಕ್ಷಗಾನದ ದೈತ್ಯ ಪಾತ್ರಗಳು. ಇವರಲ್ಲಿ ಬಣ್ಣದ ಮಾಲಿಂಗ ಈಗ ಬದುಕಿರುತ್ತಿದ್ದರೆ ನೂರರ ಹರೆಯವನ್ನು ದಾಟುತ್ತಿದ್ದರು. ಬಣ್ಣದ ಮಾಲಿಂಗ ಅವರ ಶತಮಾನ ಸ್ಮರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಆಶಯದಲ್ಲಿ ಯಕ್ಷಗಾನ ಕಲಾರಂಗವು ಉಡುಪಿ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಬೆಂಗಳೂರಿನ ಯಕ್ಷಗಾನ ಬಯಲಾಟ ಅಕಾಡೆಮಿಯ ಸಹಯೋಗದೊಂದಿಗೆ, ಮಂಗಳೂರು ವಿ.ವಿ. ಯಕ್ಷಗಾನ ಕೇಂದ್ರದ ಸಹಕಾರದಲ್ಲಿ ತೆಂಕುತಿಟ್ಟಿನ ಬಣ್ಣದ ವೇಷಧಾರಿಗಳ ಸಮಾವೇಶವನ್ನು ಏರ್ಪಡಿಸಿತ್ತು.

ಬಣ್ಣದ ಮಾಲಿಂಗ
ದೈತ್ಯ ಪಾತ್ರಗಳ ಮುಖವರ್ಣಿಕೆಗೆ ಬಣ್ಣದ ಮಾಲಿಂಗರಂಥವರ ಕೊಡುಗೆ ಅಪಾರ. ಆ ಪರಂಪರೆಯನ್ನು ಇಂದಿನ ಯುವ ಕಲಾವಿದರು ಮುಂದುವರಿಸುತ್ತಿದ್ದಾರೆ ಎಂಬುದಕ್ಕೆ ಈ ಕಾರ್ಯಾಗಾರ ಸಾಕ್ಷಿಯಾಯಿತು. ಸುಮಾರು ಮೂವತ್ತೈದು ಮಂದಿ ಬಣ್ಣದ ವೇಷಧಾರಿಗಳು ಐದಾರು ಗಂಟೆಗಳ ಕಾಲ ಕುಳಿತು ಮುಖವರ್ಣಿಕೆ ಬರೆಯುತ್ತ ತಮ್ಮ ‘ದೈತ್ಯ ಪ್ರತಿಭೆ’ಯನ್ನು ಪ್ರಸ್ತುತಪಡಿಸಿದರು. ಯಕ್ಷಗಾನದಲ್ಲಿ ಎಲ್ಲ ವಿಭಾಗಗಳ ಬಗ್ಗೆ ಅಧ್ಯಯನ, ಸಂಶೋಧನೆಗಳು ನಡೆದಿವೆ. ಆದರೆ, ಬಣ್ಣಗಾರಿಕೆಯನ್ನು ವಿಭಾಗೀಕರಿಸಿ, ಬಣ್ಣಗಳ ಬಳಕೆಯ ಸೂಕ್ಷ್ಮವನ್ನು ಅರಿತುಕೊಳ್ಳುವ ಪ್ರಯತ್ನಗಳಾದದ್ದು ವಿರಳ.

ಭಾರತೀಯ ಪರಂಪರೆಯ ಎಲ್ಲ ಕಲೆಗಳಲ್ಲೂ ಐದು ಬಣ್ಣಗಳ ಬಳಕೆ ಪ್ರಧಾನವಾದುದು. ಅದರಲ್ಲಿ ಬಿಳಿಯನ್ನು ಬೆಳಕು, ಕಪ್ಪನ್ನು ಕತ್ತಲು ಎಂದು ಭಾವಿಸಿದರೆ ಉಳಿದದ್ದು ಕೆಂಪು, ಹಸುರು ಮತ್ತು ಹಳದಿ ಬಣ್ಣಗಳು. ಈ ಬಣ್ಣಗಳ ಹಿಂದಿರುವ ಪ್ರಕೃತಿ ತತ್ತ್ವವೇನು, ಹಿರಿಯರು ತಮಗೆ ಅರಿವಿಲ್ಲದೆಯೇ ಅನುಸರಿಸಿದ ಸಿದ್ಧಾಂತಗಳೇನಿರಬಹುದು, ಬಣ್ಣಗಳ ಬಳಕೆಯ ಹಿಂದಿನ ಸಾಂಸ್ಕೃತಿಕ ರಾಜಕೀಯವೇನು? ಮುಂತಾದ ವಿಷಯಗಳ ಬಗ್ಗೆ ಮುಂದೆ ಚರ್ಚೆ ನಡೆಯಬೇಕಾದ ಪ್ರೇರಣೆಯನ್ನು ಈ ಕಾರ್ಯಾಗಾರ ಒದಗಿಸಿತು ಎಂಬುದರಲ್ಲಿ ಎರಡು ಮಾತಿಲ್ಲ. ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಹೇಳುವ ಪ್ರಕಾರ, ‘‘ಬಣ್ಣದ ಮಾಲಿಂಗರ ನೆನಪಿಗೆ ನೂರರ ಹರೆಯ. ಈ ದೈತ್ಯಪ್ರತಿಭೆಯನ್ನು ನೆನಪಿಸಿ, ಕಲಾನಿಷ್ಠೆಯಿಂದ ದುಡಿಯುವ ಕಲಾವಿದರನ್ನು ಗೌರವಿಸುವ ಮೂಲಕ ಯಕ್ಷಗಾನ ಕಲಾರಂಗ ತನ್ನ ನಲ್ವತ್ತರ ಯೌವನವನ್ನು ಸಾರ್ಥಕಪಡಿಸಿಕೊಂಡಿದೆ’’.

************ಕೃಪೆ : http://www.prajavani.com


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ