ಅಗ್ರಮಾನ್ಯ ಪುಂಡು ವೇಷಧಾರಿ ವಾಲ್ತೂರು ಕುಷ್ಟ ಮಡಿವಾಳ
ಲೇಖಕರು : ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಶುಕ್ರವಾರ, ಡಿಸೆ೦ಬರ್ 12 , 2014
|
ಸುಮಾರು ಐದು ದಶಕಗಳಿಗೂ ಅಧಿಕ ಕಾಲ ಬಡಗು ತಿಟ್ಟು ರಂಗಸ್ಥಳವನ್ನು ತನ್ನ ಪುಂಡು ವೇಷಗಳ ಮೂಲಕ ಪುಡಿಗೈದ ಅಗ್ರಮಾನ್ಯ ಕಲಾವಿದ ವಾಲ್ತೂರು ಕುಷ್ಟ ಮಡಿವಾಳರು ನಿಧನದಿಂದ ಬಡಗುತಿಟ್ಟಿನ ಮಟಪಾಡಿ ಶೈಲಿಯ ಹಿರಿಯ ಪ್ರಾತಿನಿಧಿಕ ಕೊಂಡಿಯೊಂದು ಕಳಚಿದಂತಾಗಿದೆ. ಹಾರಾಡಿ ರಾಮಗಾಣಿಗರೊಂದಿಗೆ ರಂಗಸ್ಥಳ ಹಂಚಿಕೊಂಡ ಮಡಿವಾಳರಿಗೆ ಸ್ವತಹ ರಾಮಗಾಣಿಗರೇ ಶಹಬ್ಬಾಸ್ ಗಿರಿ ನೀಡಿದ್ದರು. ಜಾನುವಾರು ಕಟ್ಟೆ ಭಾಗವತರ ಏರು ಶ್ರುತಿಯ “ಉತ್ತಮ ಮಣಿಪುರದರಸನ ಚಾವಡಿ ಹತ್ತು ಸಾವಿರ ಕಂಬದಿ” ಪದ್ಯಕ್ಕೆ ಹಿರಿಯಡ್ಕ ಗೋಪಾಲರಾಯರ ಏರುಮದ್ದಳೆಯಲ್ಲಿ ಮಡಿವಾಳರು ಪುಂಡುವೇಶದ ಬಬ್ರುವಾಹನನಾಗಿ ಹಾಕುತಿದ್ದ ಮಂಡಿ ಮತ್ತು ದಿಗಣ ಈಗ ನೆನಪು ಮಾತ್ರ. ತನ್ನ ಎಪ್ಪತ್ಮೂರರ ಹರಯದಲ್ಲಿ ಅವರು ಯಕ್ಷಲೋಕಕ್ಕೆ ಇತಿಶ್ರೀ ಹಾಡಿದ್ದಾರೆ
|
ಬಾಲ್ಯ, ಯಕ್ಷಗಾನ ಪಾದಾರ್ಪಣೆ
ಬಡಗುತಿಟ್ಟಿನ ತವರೂರು ಕುಂದಾಪುರ ತಾಲೂಕಿನ ವಾಲ್ತೂರು ಎಂಬಲ್ಲಿ 1941ರಲ್ಲಿ ಗಣಪ ಮಡಿವಾಳ ಮತ್ತು ಬಚ್ಚಿ ಮಡಿವಾಳ್ತಿ ದಂಪತಿಗಳ ಪುತ್ರನಾಗಿ ಜನಿಸಿದ ಕುಷ್ಟ ಮಡಿವಾಳರು ಆಗಿನ ಕಾಲದಲ್ಲಿ ಐದನೇ ತರಗತಿ ವಿದ್ಯಾಭ್ಯಾಸ ಮಾಡಿದ್ದೇ ದೊಡ್ಡ ಸಾಧನೆ. ಚಿಕ್ಕಂದಿನಿಂದಲೇ ಯಕ್ಷಗಾನದ ಮೇಲೆ ವಿಶೇಷ ಆಸಕ್ತಿ ತಳೆದ ಇವರನ್ನು ಹಿರಿಯ ಕಲಾವಿದ ವಂಡ್ಸೆ ಮುತ್ತಗಾಣಿಗರು ಮಾರಣಕಟ್ಟೆ ಮೇಳದಲ್ಲಿ ಗೆಜ್ಜೆ ಕಟ್ಟಿಸಿದರು. ಆಗ ಮಾರಣಕಟ್ಟೆ ಮತ್ತು ಮಂದಾರ್ತಿ ಮೇಳಗಳು ಎರಡು ಪ್ರಬಲ ಶೈಲಿಗಳಿಂದ ಕಂಗೊಳಿಸುತಿದ್ದವು.
ಮಂದಾರ್ತಿ ಮೇಳದಲ್ಲಿ ಹಾರಾಡಿ ರಾಮ ಗಾಣಿಗರು, ಕುಷ್ಟ ಗಾಣಿಗರು, ನಾರಾಯಣ ಗಾಣಿಗ ಮುಂತಾದ ಹಾರಾಡಿ ಶೈಲಿಯ ಕಲಾವಿದರಿದ್ದರೆ, ಮಾರಣಕಟ್ಟೆ ಮೇಳದಲ್ಲಿ ವೀರಭದ್ರ ನಾಯಕರು, ಶ್ರೀನಿವಾಸ ನಾಯಕರು, ಚಂದು ನಾಯಕರಂತ ಮೇರು ಕಲಾವಿದರಿದ್ದರು. ಮಂದಾರ್ತಿ ಮೇಳದಲ್ಲಿ ಶೇಷಗಿರಿ ಕಿಣಿ, ಜಾನುವಾರುಕಟ್ಟೆ ಮುಂತಾದ ಬಾಗವತರು ಮಾರಣಕಟ್ಟೆ ಮೇಳದಲ್ಲಿ ದಾಸ ಭಾಗವತರು ಮೆರೆಯುತಿದ್ದ ಕಾಲವದು. ಇವೆಲ್ಲವೂ ಮಡಿವಾಳರಿಗೆ ಯಕ್ಷಗಾನದ ಸುವರ್ಣಯುಗವಾಗಿತ್ತು.
ತನ್ನ 11ನೇ ವಯಸ್ಸಿನಲ್ಲಿ ಗುರು ವೀರಭದ್ರ ನಾಯಕರ ಶಿಷ್ಯನಾಗಿ ಸೇರಿ ನೃತ್ಯಕಲೆಯನ್ನು ಪರಿಪೂರ್ಣವಾಗಿ ಸಿಧ್ದಿಸಿಕೊಂಡ ಇವರನ್ನು ವೀರಭದ್ರ ನಾಯಕರ ಉತ್ತರಾಧಿಕಾರಿಯನ್ನಾಗಿ ಗುರುತಿಸಲಾಗಿದೆ. ಎರಡೂ ಮೇಳಗಳಲ್ಲಿದ್ದ ಹಾರಾಡಿಯ ಗಾಣಿಗ ಕಲಾವಿದರು, ಉಡುಪಿ ಬಸವ, ಶಿರಿಯಾರ ಮಂಜು, ಕುಂಜಾಲು ರಾಮಕೃಷ್ಣ, ಕೊರ್ಗು ಹಾಸ್ಯಗಾರ್, ಹಳ್ಳಾಡಿ ಮಂಜಯ್ಯ ಶೆಟ್ಟಿ ಮುಂತಾದ ಹಿರಿಯ ಕಿರಿಯ ಕಲಾವಿದರೊಂದಿಗೆ ಮಡಿವಾಳರು ಪರಿಪೂರ್ಣ ಕಲಾವಿದರಾಗಿ ಬೆಳೆದರು.
ಸುದೀರ್ಘ 55 ವರ್ಷ ಕಲಾಸೇವೆ
ಸುದೀರ್ಘ 55 ವರ್ಷ ಮಾರಣಕಟ್ಟೆ, ಮಂದಾರ್ತಿ, ಕಮಲಶಿಲೆ, ಗೋಳಿಗರಡಿ, ಕೊಲ್ಲೂರು, ಅಮೃತೇಶ್ವರಿ, ರಂಜದಕಟ್ಟೆ ಮೇಳದಲ್ಲಿ ಸೇವೆಸಲ್ಲಿಸಿದ ಇವರು ಮಾರಣಕಟ್ಟೆ ಮೇಳವೊಂದರಲ್ಲೇ ನಿರಂತರ 15 ವರ್ಷ ಸೇವೆ ಸಲ್ಲಿಸಿದ್ದರು. ಮಡಿವಾಳರ ಪುಂಡುವೇಷದ ಗಂಡುಗಾರಿಕೆ ಅಸಾಧಾರಣವಾದುದು.
|
ವಾಲ್ತೂರು ಕುಷ್ಟ ಮಡಿವಾಳ |
 |
ಜನನ |
: |
1941 |
ಜನನ ಸ್ಥಳ |
: |
ವಾಲ್ತೂರು
ಕುಂದಾಪುರ ತಾಲೂಕು
ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ
|
ಕಲಾಸೇವೆ:
ಸುದೀರ್ಘ 55 ವರ್ಷ ಮಾರಣಕಟ್ಟೆ, ಮಂದಾರ್ತಿ, ಕಮಲಶಿಲೆ, ಗೋಳಿಗರಡಿ, ಕೊಲ್ಲೂರು, ಅಮೃತೇಶ್ವರಿ, ರಂಜದಕಟ್ಟೆ ಮುಂತಾದ ಮೇಳಗಳಲ್ಲಿ ಮೇರು ಪುಂಡು
ವೇಷಧಾರಿಯಾಗಿ ಕಲಾಸೇವೆ.
|
ಮರಣ ದಿನಾ೦ಕ |
: |
2014 |
|
|
ಬಬ್ರುವಾಹನ, ಲವ ಕುಶ, ಮೈಂದ-ದ್ವಿವಿಜ, ಪ್ರಸೇನ, ಅಭಿಮನ್ಯು ಮೊದಲಾದ ಮೂರನೇ ವೇಷದಲ್ಲಿ ಇವರು ಮೂಡಿಸಿದ ರಂಗ ಶೌರ್ಯದ ಛಾಪು ಇಂದಿಗೂ ಹಸಿರಾಗಿದೆ. ಜೋಡಾಟದ ಹುಲಿ ಎಂದೇ ಖ್ಯಾತರಾದ ಇವರು ಮಂದಾರ್ತಿ ಮೇಳದ ಇನ್ನೊಬ್ಬ ಮೂರನೆ ವೇಷಧಾರಿ ದಿ. ಬೈಕಾಡಿ ಗೋಪ ಮಡಿವಾಳರ ಎದುರಿಗೆ ಮೂರನೇ ವೇಷಧಾರಿಯಗಿ ಕಾಣಿಸಿಕೊಳ್ಳುತಿದ್ದರು.
ಜೋಡಾಟದಲ್ಲಿ ಮಿ೦ಚು
ಬಳಿಕ ಮಂದಾರ್ತಿ ಮೇಳದಲ್ಲಿ ಕುಷ್ಟ ಮಡಿವಾಳ ಮತ್ತು ಗೋಪ ಮಡಿವಾಳರ ಜೋಡಿ ಮೂರನೇ ವೇಷಗಳಾದ ಲವ-ಕುಶ, ರುಕ್ಮಾಂಗ-ಶುಭಾಂಗ, ಮೈಂದ-ದ್ವಿವಿಜ ಮುಂತಾದ ಜೋಡಿ ವೇಷಗಳು ಅಪಾರ ಜನಮನ್ನಣೆ ಪಡೆದಿದ್ದವು. ಮದನಾಕ್ಷಿ, ಮೀನಾಕ್ಷಿ, ಬ್ರಮರಕುಂತಳೆ, ಪದ್ಮಗಂದಿ ಮುಂತಾದ ಗಂಡುಕಳೆಯ ಹೆಣ್ಣು ವೇಷದಲ್ಲೂ ದಾಖಲಾರ್ಹ ಸಾದನೆ ಮಾಡಿದ್ದಾರೆ. ನಿವೃತ್ತಿಯ ಕಾಲದಲ್ಲಿ ಪುರುಷ ವೇಷಗಳನ್ನು ನಿರ್ವಹಿಸುತಿದ್ದ ಅವರು ಈಗಿನ ಕಾಲದ ದಿಡೀರ್ ಎರಡನೇ ವೇಷಧಾರಿಯಾಗಲು ಹಾತೊರೆಯುವ ಕೆಲವು ಕಲಾವಿದರಂತೆ ಎರಡನೇ ವೇಷಗಳನ್ನು ನಿರ್ವಹಿಸಲಿಲ್ಲ. ದೇವೇಂದ್ರ, ಧರ್ಮರಾಯ, ಕೌರವನಂತ ಪೀಠಿಕೆಯ ವೇಷವನ್ನು ರಂಗದ ಕಾವನ್ನು ಉಳಿಸಿಕೊಂಡು ಅವರು ನಿರ್ವಹಿಸುತಿದ್ದ ರೀತಿ ಇತರರಿಗೆ ಅನುಕರಣೀಯ.
ಮರೀಚಿಕೆಯಾದ ಪ್ರಶಸ್ತಿಗಳು
ಪತ್ನಿ ನಾಲ್ಕು ಮಕ್ಕಳನ್ನು ಅಗಲಿರುವ ಮಡಿವಾಳರು ಎಲೆ ಮರೆಯ ಕಾಯಿಯಂತೆ ಬದುಕಿದವರು. ಯಾವುದೆ ಪ್ರಶಸ್ತಿ ಸನ್ಮಾನಗಳಿಗೆ ಹಾತೊರೆದವರಲ್ಲ. ಕಳೆದ ವರ್ಷ ಉಡುಪಿಯಲ್ಲಿ ಮಡಿವಾಳ ಸಮಾಜದವರು ಗುರುಮಾಚಿದೇವ ಸಂಸ್ಥೆಯ ಆಶ್ರಯದಲ್ಲಿ ನೀಡಿದ ಸನ್ಮಾನವೇ ಅವರಿಗೆ ದೊರೆತ ಕೊನೆಯ ಸನ್ಮಾನವಾಗಿತ್ತು. ಅಂದು ಅವರು ನಿರ್ವಹಿಸಿದ ಚಿಕ್ಕ ಪಾತ್ರವೇ ಅವರ ಕೊನೆಯ ಪಾತ್ರವಾಗಿದೆ. ಬಿಲ್ಲವ ಸಂಘಟನೆ ಉಡುಪಿ, ಕುಂದಾಪುರ ಮಡಿವಾಳ ಸಂಘಟನೆ, ಮುಂತಾದ ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ
ದೀರ್ಘಕಾಲ ಬಡಗುತಿಟ್ಟು ರಂಗಸ್ಥಳಕ್ಕೆ ಕೀರ್ತಿ ತಂದಿತ್ತ ಮಡಿವಾಳರ ನಿಧನದಿಂದ ಬಡಗುತಿಟ್ಟು ಬಡವಾಗಿದೆ
|
|
|