ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಪಾತಾಳ ಪ್ರಶಸ್ತಿ ಪುರಸ್ಕೃತ ಸಹೃದಯೀ ಕಲಾವಿದ - ಭಾಸ್ಕರ ಜೋಶಿ ಶಿರಳಗಿ

ಲೇಖಕರು :
ನಾ.ಕಾರ೦ತ, ಪೆರಾಜೆ
ಮ೦ಗಳವಾರ, ಡಿಸೆ೦ಬರ್ 16 , 2014

ಉಡುಪಿ ರಾಜಾಂಗಣದಲ್ಲಿ ಚಿಟ್ಟಾಣಿ ಪಾತ್ರ ವೈಭವದ ಕ್ಷಣ. ಅಂದು `ಚಕ್ರಚಂಡಿಕೆ` ಪ್ರಸಂಗ. ಐವತ್ತೆಂಟರ ಶಿರಳಗಿ ಭಾಸ್ಕರ ಜೋಶಿ ಹದಿನೆಂಟರ ಹೆಣ್ಣಾಗಿ ಕುಣಿದರು. ಚಿಟ್ಟಾಣಿಯವರೊಂದಿಗೆ ಸರಸವಾಡಿದರು. ಪ್ರಸಂಗದ ಒಂದು ಸನ್ನಿವೇಶದ ವಿನ್ಯಾಸದ ಗಟ್ಟಿತನಕ್ಕೆ ಬೆರಗಾದೆ. ಬಣ್ಣದ ಮನೆಯಲ್ಲಿ ವೇಷ ಕಳಚಿದ ಜೋಶಿ, `ನಾಳೆ ಬೇಗ ಮನೆ ಸೇರಬೇಕ್ರಿ, ಅಡಿಕೆ ಕೊಯ್ಲು ಆಗ್ತಿದೆ. ಜನ ಸಿಕ್ತಿಲ್ಲ. ಒಟ್ಟಾರೆ ತಲೆಬಿಸಿ` ಎಂದರು. ಆಗಷ್ಟೇ ರಂಗದಲ್ಲಿ ಅಪ್ಪಟ ಕಲಾವಿದರಾಗಿ ಕುಣಿದ ಜೋಶಿ, ಅಷ್ಟೇ ಕ್ಷಿಪ್ರವಾಗಿ `ಕೃಷಿಕ`ರಾಗಿ ಬದಲಾಗಿದ್ದರು.
ಜೋಶಿ ಒಂದು ಕಾಲಘಟ್ಟದಲ್ಲಿ ರಂಗದಲ್ಲಿ ಮೆರೆದ ಯಶಸ್ವಿ ನಾರಿ. ಆಕರ್ಷಕ ಸ್ವರ, ಹೆಣ್ಣಿಗೊಪ್ಪುವ ಮೈಕಟ್ಟು, ಉತ್ತಮ ಭಾಷೆ. ಚೆಲ್ಲುಚೆಲ್ಲು ಪಾತ್ರಗಳಿಂದ ಗರತಿಯ ತನಕ ಮಿತಿಮೀರದ ಅಭಿವ್ಯಕ್ತಿ. ಹಳೆ ಪ್ರಸಂಗಗಳಲ್ಲಿ ಮಿಂಚಿದಂತೆ ಹೊಸ ಪ್ರಸಂಗಗಳೂ ಹೊಸ ಪಂಚ್. ಬಡಗಿನ ಬಹುತೇಕ ಕಲಾವಿದರೊಂದಿಗೆ ರಂಗದಲ್ಲೂ, ಹೊರಗೂ ಒಡನಾಟ.

ಬಾಲ್ಯ, ಶಿಕ್ಷಣ

ಇವರದು ಕನಸು ಕಾಣುವ ಬದುಕಲ್ಲ. ವರ್ತಮಾನ ಹೇಗುಂಟೋ ಹಾಗೆ ಬದುಕನ್ನು ಕಟ್ಟಿಕೊಳ್ಳುತ್ತಾ ಬಂದವರು. ಏಪ್ರಿಲ್ 30, 1956ರ೦ದು ಉತ್ತರ ಕನ್ನಡದ ಸಿದ್ದಾಪುರ ತಾಲೂಕಿನ ಶಿರಳಗಿಯಲ್ಲಿ ಜನಿಸಿದ ಇವರ ತಂದೆ ನಾರಾಯಣ ಸುಬ್ರಾಯ ಜೋಶಿಯವರ ಪೌರೋಹಿತ್ಯ ವೃತ್ತಿ ಮಾಡುತ್ತಿದ್ದರು. ತಾಯಿ ಗಂಗಾ ಜೋಶಿ. ಕನಸು ಕಾಣುವಷ್ಟು ಅವಕಾಶಗಳು ಅವರಿಗಿರಲಿಲ್ಲ. ಆದರೆ ಬಣ್ಣದ ಹುಚ್ಚು ಚಿಕ್ಕಂದಿನಿಂದಲೂ ಇತ್ತು. ಅದನ್ನು ಕರಗತ ಮಾಡಿಕೊಳ್ಳಲು ತೊಡಗದಿದ್ದರೆ ಅಪ್ಪನ ಹಾದಿಯಲ್ಲೇ ಇವರು ನಡೆಯಬೇಕಿತ್ತು.

ಎಸ್.ಎಸ್.ಎಲ್.ಸಿ.ತನಕ ಓದು. ಹೈಸ್ಕೂಲ್‌ ಮುಗಿದ ನಂತರವೂ ಕಾಡುತ್ತಿದ್ದ ಬಡತನ ಕಾಲೇಜಿಗೆ ಹೋಗಲು ಬಿಡಲಿಲ್ಲ. ಇವರ ಮೊದಲ ರಂಗಪ್ರವೇಶ ನಾಟಕದ ಮೂಲಕ. ಹುಲಿಮನೆ ಸೀತಾರಾಂ ಶಾಸ್ತ್ರಿ ಅವರ ನಿರ್ದೇಶನದ `ಪನ್ನಾದಾಸಿ` ನಾಟಕ ಅದು. ಆಗ ಸ್ತ್ರೀ ಪಾತ್ರವನ್ನು ಪುರುಷರೇ ಮಾಡುತ್ತಿದ್ದರು. ಇವರ ಕಲಾಯಾತ್ರೆ ಸ್ತ್ರೀ ವೇಷದಿಂದಲೇ ಪ್ರಾರಂಭವಾಯಿತು.

ಕೆರೆಮನೆ ಮೇಳದಲ್ಲಿ ಪಾದಾರ್ಪಣೆ

ಅದೇ ವರ್ಷ ಸಿದ್ದಾಪುರ ಕಾಲೇಜಿನಲ್ಲಿ ಹೊಸ್ತೋಟ ಮಂಜುನಾಥ ಭಾಗವತರು ಯಕ್ಷಗಾನ ತರಬೇತಿ ನೀಡುತ್ತಿದ್ದರು. ಅಲ್ಲಿ ಇವರು ಸೇರಿಕೊಂಡರು. ಈ ಸಂದರ್ಭದಲ್ಲಿ ನಾಟಕ ಪ್ರದರ್ಶನ ನಡೆಯುತ್ತಿತ್ತು. ಅದೇ ಊರಿನವರೇ ಆದ ಯಕ್ಷಗಾನ ಕಲಾವಿದ ಕೊಳಗಿ ಅನಂತ ಹೆಗಡೆ ಅವರ ಜೊತೆ ಕೆರೆಮನೆ ಗಜಾನನ ಹೆಗಡೆ ನಾಟಕ ನೋಡಲು ಬಂದರು. ಅವರು ಜೋಶಿಯವರ ಪಾತ್ರ ಮೆಚ್ಚಿ ಕೆರೆಮನೆ ಮೇಳಕ್ಕೆ ಆಹ್ವಾನಿಸಿದರು.

ಇವರ ಕನಸು ಪ್ರಾರಂಭವಾದದ್ದು ಆ ಮೇಳ ಸೇರಿದ ಮೇಲೆ. ಎಲ್ಲರೂ ಮೆಚ್ಚುವ ಸ್ತ್ರೀ ಪಾತ್ರದಾರಿಯಾಗಬೇಕು, ವೃತ್ತಿ ಮೇಳದ ಹ್ಯಾಂಡ್‌ಬಿಲ್‌ನಲ್ಲಿ ಮುಖ್ಯ ಸ್ತ್ರೀ ವೇಷದಾರಿ ಹೆಸರು ಇವರದಾಗಿರಬೇಕು. ದಿನಕ್ಕೆ ನೂರು ರೂಪಾಯಿಗಿಂತ ಹೆಚ್ಚಿಗೆ ಸಂಬಳ ಪಡೆಯಬೇಕು ಎಂಬ ಕನಸನ್ನು ಕಂಡರು. ಮುಂದೆ ಇಡಗುಂಜಿ ಮೇಳದ ತಿರುಗಾಟವು ಹೊಸ ರಂಗ ತಂತ್ರಗಳ ಕಲಿಕೆಗೆ ತಾಣವಾಯಿತು. ಕೆರೆಮನೆ ಮೇಳದಲ್ಲಿ ಜೋಶಿಯವರಿಗೆ ಉತ್ತಮ ಅವಕಾಶಗಳು ಸಿಕ್ಕವು. ಗಜಾನನ ಹೆಗಡೆ, ಶಂಭು ಹೆಗಡೆ, ಮಹಾಬಲ ಹೆಗಡೆ ಯಕ್ಷಗಾನದ ಸೂಕ್ಷ್ಮಗಳನ್ನು ತಿಳಿಸಿ ಕೊಟ್ಟರು.

ಭಾಸ್ಕರ ಜೋಶಿ, ಶಿರಳಗಿ
ಜನನ : ಏಪ್ರಿಲ್ 30, 1956
ಜನನ ಸ್ಥಳ : ಶಿರಳಗಿ, ಸಿದ್ದಾಪುರ ತಾಲೂಕು
ಉತ್ತರ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
ಕಲಾಸೇವೆ:

ಅಪ್ರತಿಮ ಸ್ತ್ರೀ ವೇಷಧಾರಿಯಾಗಿ ಇಡಗುಂಜಿ, ಸಾಲಿಗ್ರಾಮ ಅಮೃತೇಶ್ವರಿ, ಪೆರ್ಡೂರು ಮೇಳಗಳಲ್ಲಿ ಮೂವತ್ತೈದು ವರುಷಗಳ ರಂಗಸಾಧನೆ

ಪ್ರಶಸ್ತಿ, ಪುರಸ್ಕಾರಗಳು :
2014ರ ಪಾತಾಳ ಪ್ರಶಸ್ತಿಯೂ ಸೇರಿ ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನಗಳು

ಡಾ.ಶಿವರಾಮ ಕಾರಂತರ ಒಡನಾಟದಲ್ಲಿ ದೇಶ ವಿದೇಶಗಳ ಸುತ್ತಾಟ

ಒಂದು ವರ್ಷದ ನ೦ತರ ಉಡುಪಿ ಯಕ್ಷಗಾನ ಕೇಂದ್ರದ ತಿರುಗಾಟ ತಂಡವಾದ `ಯಕ್ಷರಂಗ`ಕ್ಕೆ ಸೇರಿದರು. ಅದು ಡಾ.ಶಿವರಾಮ ಕಾರಂತರ ಗರಡಿ. ಯಕ್ಷಗಾನ ಬ್ಯಾಲೆಯು ನೃತ್ಯ, ಸಂಗೀತ ಪ್ರಧಾನ. ಭಾವಾಭಿವ್ಯಕ್ತಿಗೆ ಪ್ರಾಶಸ್ತ್ಯ. ಅಲ್ಲಿ ಕೇವಲ ಯಕ್ಷಗಾನ ಸಂಗೀತದಲ್ಲಿ ಮಾತ್ರ ಪ್ರಸಂಗ ನಡೆಯುತ್ತಿತ್ತು. ಅಭಿನಯ ಪ್ರಧಾನ. ಸಂಭಾಷಣೆ ಇರಲಿಲ್ಲ. ಅದು ಸ್ತ್ರೀ ಪಾತ್ರದ ಸಂವೇದನೆ ಅರ್ಥಮಾಡಿಕೊಳ್ಳಲು ಸಹಕಾರಿಯಾಯಿತು. ತಂಡದಲ್ಲಿ ಸ್ತ್ರೀಪಾತ್ರವನ್ನು ಮಾಡುವ ಸ್ತ್ರೀಯರಿದ್ದರೂ ಭಾಸ್ಕರ ಜೋಶಿಯವರ ಪಾತ್ರಗಳ ಲಾಲಿತ್ಯಗಳಿಂದಾಗಿ ಯಕ್ಷರಂಗದಲ್ಲಿ ಮುಖ್ಯ ಸ್ತ್ರೀ ಪಾತ್ರ ಜೋಶಿಯವರಿಗೇ ಸಿಗುತ್ತಿತ್ತು. ದಮಯಂತಿ, ಚಿತ್ರಾಂಗದೆ, ಅಂಬೆ ಪಾತ್ರಗಳನ್ನು ಮಾಡಿದರು. ಕಾರಂತರ ಜೊತೆ ಹಂಗೇರಿ, ಲಂಡನ್‌, ರಷ್ಯಾ, ಜಪಾನ್‌ ಮುಂತಾದ ದೇಶ ಸುತ್ತಾಡಿ ಬಂದರು.

ಕಾರಂತರೊಂದಿಗಿನ ಆರು ವರುಷದ ತಿರುಗಾಟದ ಒಂದೊಂದು ಕ್ಷಣವೂ ಕಾಡುವ ನೆನಪು. ಚಿಕ್ಕ ಚಿಕ್ಕ ವಿಚಾರಗಳಲ್ಲಿ ರಾಜಿ ಮಾಡಿಕೊಳ್ಳದ ವ್ಯಕ್ತಿತ್ವ. ಬಹುಶಃ ರಂಗದಲ್ಲಿ ನನಗೇನಾದರೂ ಹೆಸರು ಬಂದಿದ್ದರೆ ಅವರ ಒಡನಾಟದ ಜ್ಞಾನ ಸಂಪಾದನೆಯಿಂದ ಸಾಧ್ಯವಾಯಿತು ಎನ್ನಬಹುದು, ಎನ್ನುತ್ತಾರೆ ಭಾಸ್ಕರ ಜೋಶಿ.

ವೃತ್ತಿಪರ ಮೇಳಗಳಲ್ಲಿ ಯಶಸ್ವೀ ತಿರುಗಾಟ

ಯಕ್ಷರಂಗದಲ್ಲಿ ಸಿಮೀತ ಪಾತ್ರಗಳಿಗೆ ಒಗ್ಗಬೇಕಾಯಿತು. ಆದರೂ 6 ವರ್ಷ ಅಲ್ಲಯೇ ಕೆಲಸ ಮಾಡಿದರು. ನಂತರ ಸಾಲಿಗ್ರಾಮ ಮೇಳ. ಅಲ್ಲಿ ಜೋಶಿಯವರಿಗೆ ಹೆಸರು ಬಂತು. ನಂತರ ಅಮೃತೇಶ್ವರಿ, ಪೆರ್ಡೂರು ಮೇಳಗಳಲ್ಲಿ ಯಶಸ್ವೀ ತಿರುಗಾಟ. ಇವರ ವೇಷ ವಿನ್ಯಾಸ ಕ್ಲೀನ್. ಶೃಂಗಾರ, ಕರುಣ, ವೀರ, ರೌದ್ರ ರಸಾಭಿವ್ಯಕ್ತಿಯಲ್ಲಿ ಪ್ರತ್ಯೇಕ ಛಾಪು. ಚುರುಕಿನ ನಡೆ. ಕ್ಷಿಪ್ರವಾಗಿ ಉದುರುವ ಮಾತು. ಪ್ರಭಾವತಿ, ಮೋಹಿನಿ, ಸೈರಂಧ್ರಿ, ದಾಕ್ಷಾಯಿಣಿ.. ಪಾತ್ರಗಳು ಹೆಸರಿನೊಂದಿಗೆ ಹೊಸೆದುಬಿಟ್ಟಿದೆ. ಆಗ ಚಿಟ್ಟಾಣಿ, ಶಿರಿಯಾರ ಮಂಜು ನಾಯ್ಕ, ಕಾಳಿಂಗ ನಾವುಡ, ಧಾರೇಶ್ವರ ಎಲ್ಲರ ಸಹಕಾರ ಮತ್ತು ಮಾರ್ಗದರ್ಶನ ದೊರೆಯಿತು.

ಕೆರೆಮೆನೆ ಮಹಾಬಲ ಹೆಗಡೆಯವರ ಜಮದಗ್ನಿ-ರೇಣುಕೆ` ಈಶ್ವರ-ದಾಕ್ಷಾಯಿಣಿ ಜತೆಗಾರಿಕೆ, ಬ್ರಹ್ಮಕಪಾಲ ಪ್ರಸಂಗದಲ್ಲಿ ಗೋಡೆಯವರ ಬ್ರಹ್ಮನೊಂದಿಗೆ ಶಾರದೆ, ಬಳ್ಕೂರ ಕೃಷ್ಣಯಾಜಿಯವರ ಸುಧನ್ವನೊಂದಿಗೆ ಪ್ರಭಾವತಿ, ಮಹಾಬಲ ಹೆಗಡೆಯವರ ದುಷ್ಟಬುದ್ಧಿ-ವಿಷಯೆ ಜತೆಗಾರಿಕೆಗಳು ಕಾಲದ ಕಥನಗಳು. "ಚೆಲುವೆ ಚಿತ್ರಾವತಿ ಪ್ರಸಂಗದ ಮೊದಲ ಪ್ರದರ್ಶನದಲ್ಲಿ ’ಚಿತ್ರಾವತಿ’ ಮಾಡಿದವರು ಭಾಸ್ಕರ ಜೋಶಿ. ಅವರ ಹೆಸರನ್ನು ನೆನಪಿಸಿರೆ ಸಾಕು, ಫಕ್ಕನೆ ನೆನಪಾಗುವುದು”ದಾಕ್ಷಾಯಿಣಿ’ ಪಾತ್ರ," ಇವರನ್ನು ಹತ್ತಿರದಿಂದ ಬಲ್ಲ ರಾಜಶೇಖರ ಮರಕ್ಕಿಣಿ ನೆನಪಿಸಿಕೊಳ್ಳುತ್ತಾರೆ.

"ಬಾಲ್ಯದಲ್ಲಿ ಒಂದು ಕನಸಿತ್ತು. ಮುಖ್ಯ ಸ್ತ್ರೀಪಾತ್ರಧಾರಿಯಾಗಬೇಕು, ಕರಪತ್ರದಲ್ಲಿ ಮುಖ್ಯ ಸ್ತ್ರೀ ಪಾತ್ರಧಾರಿ ಜಾಗದಲ್ಲಿ ನನ್ನ ಹೆಸರಿರಬೇಕು, ದಿವಸಕ್ಕೆ ಕನಿಷ್ಠ ನೂರು ರೂಪಾಯಿ ಸಂಭಾವನೆ ಸಿಗಬೇಕು. ಇವೆಲ್ಲವೂ ಈಡೇರಿದೆ. ಕನಸು ನನಸಾಗಿದೆ. ಇಳಿ ವಯಸ್ಸಿನಲ್ಲೂ ಮೇಳಗಳಿಗೆ ಬೇಡಿಕೆ ಬರುತ್ತಿದೆ. ತೋಟ, ಆಟ ಎನ್ನುತ್ತಾ ಸಮನ್ವಯ ಮಾಡಿಕೊಳ್ಳುತ್ತಿದ್ದೇನೆ," ಎನ್ನುತ್ತಾರೆ.

ಸ್ವ೦ತ ಭುವನಗಿರಿ ಮೇಳದ ಏಳು - ಬೀಳು

ಮೇಳಗಳ ತಿರುಗಾಟ ಮಾಡುತ್ತಿದ್ದಂತೆ ಸ್ವತಃ ಮೇಳ ಮಾಡಬೇಕೆನ್ನುವ ಕೆಟ್ಟ ತುಡಿತವೊಂದು ಅಪ್ಪಿಕೊಂಡಿತು! `ಭುವನಗಿರಿ ಮೇಳ`ದ ಸಂಪನ್ನತೆ. ಮೂರು ವರುಷದಲ್ಲಿ ಆರು ಲಕ್ಷ ರೂಪಾಯಿ ನಷ್ಟ. ಸಾಲಗಾರನ ಪಟ್ಟ. ಸಾಲ ತೀರಿಸಲು ಪುನಃ ಮೇಳಗಳಲ್ಲಿ ಬಣ್ಣ ಹಚ್ಚುತ್ತಿದ್ದಂತೆ ಅಪಘಾತಕ್ಕೆ ಒಳಗಾದರು. ಪರಿಹಾರಕ್ಕಾಗಿ ಕೋರ್ಟು-ಕಚೇರಿ ಅಲೆದಾಟ. `ನೀನು ಕಲಾವಿದ ಎನ್ನುವುದಕ್ಕೆ ಏನು ಪುರಾವೆ?` ಎಂದಾಗ ನಿರುತ್ತರ. ಸರಿಯಾದ ದಾಖಲೆಯಿಲ್ಲದೆ ವ್ಯಾಜ್ಯ ಕಾಗದದಲ್ಲೇ ಉಳಿಯಿತು. ರಂಗದಲ್ಲಿ ಎತ್ತರಕ್ಕೇರಿದ ಜೋಶಿಯವರ ಕಲಾ ಬದುಕಿನಲ್ಲಿನ ಕೆಲವು ಇಳಿಘಟನೆಗಳಿವು.

ಸಂತೃಪ್ತ ಕುಟು೦ಬ, ಸಹೃದಯೀ ಕೃಷಿಕ

ಸಿದ್ಧಾಪುರ ತಾಲೂಕಿನ ಶಿರಳಗಿಯಲ್ಲಿ ಕೃಷಿ ಪ್ರಧಾನ ವೃತ್ತಿ. ನಿರಂತರ ದುಡಿಮೆ. ಆಲಸ್ಯ ಕಾಣದ ಕೃಷಿಕ. ಆರ್ಥಿಕವಾಗಿ ಹೇಳುವಂತಹ ಸದೃಢರಲ್ಲ. ಮಾನಸಿಕವಾಗಿ ಸಂತೃಪ್ತ. ಸಹಾಯ ಮನೋಭಾವ. ಶುದ್ಧ ಹಸ್ತರು. ನೇರ ವ್ಯವಹಾರ. ಮೇಳಗಳ ಯಜಮಾನರಿಗೆ ಎಂದೂ ಇವರು ತಲೆನೋವಾಗಿಲ್ಲ. ಕಲಾವಿದನಲ್ಲಿ ಇರಲೇಬೇಕಾದ ಗುಣಗಳು ಜೋಶಿಯವರಲ್ಲಿ ಮಿಳಿತವಾಗಿದೆ. ಮಡದಿ ಮಾಲಿನಿ. ಸ್ಪೂರ್ತಿ, ರಘುರಾಮ ಇಬ್ಬರು ಮಕ್ಕಳು.

***************

ಭಾಸ್ಕರ ಜೋಶಿಯವರ ದೃಶ್ಯಾವಳಿ




ಭಾಸ್ಕರ ಜೋಶಿರವರ ಕೆಲವು ಛಾಯಾ ಚಿತ್ರಗಳು



( ಕೃಪೆ : ಅ೦ತರ್ಜಾಲದ ಅನಾಮಿಕ ಯಕ್ಷಗಾನಾಭಿಮಾನಿಗಳು )

ಎಡನೀರು ಶ್ರೀಗಳಿ೦ದ ’ಪಾತಾಳ ಪ್ರಶಸ್ತಿ’ ಪ್ರದಾನ










ಕೃಪೆ : http://yakshamatu.blogspot.in/ , http://oddolaga.blogspot.in/


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ