ಯಕ್ಷಗಾನ-ಶಾಸ್ತ್ರೀಯ ಸಂಗೀತಗಳ ಸಮನ್ವಯ ಭಾಗವತ ನಾರಾಯಣ ಶಬರಾಯ
ಲೇಖಕರು : ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಮ೦ಗಳವಾರ, ಮಾರ್ಚ್ 18 , 2014
|
ಯಕ್ಷಗಾನದ ಎರಡು ಪ್ರಮುಖ ತಿಟ್ಟುಗಳಾದ ತೆಂಕು ಮತ್ತು ಬಡಗುತಿಟ್ಟಿನ ಸಮರ್ಥ ಭಾಗವತರಾದ ಶಬರಾಯರು, ತೆಂಕು. ಬಡಗು ಹಾಗೂ ಉತ್ತರ ಕನ್ನಡದ ಮಹಾ ಮಹಾ ಕಲಾವಿದರನ್ನು ರಂಗದಲ್ಲಿ ಕುಣಿಸಿದವರು. ಕಡತೋಕ ಮಂಜುನಾಥ ಭಾಗವತರು ಮತ್ತು ಮರವಂತೆ ನರಸಿಂಹ ದಾಸರ ನಂತರದ ಪೀಳಿಗೆಯಲ್ಲಿ ತೆಂಕು ಮತ್ತು ಬಡಗಿನಲ್ಲಿ ಸಮರ್ಥವಾಗಿ ಹಾಡಬಲ್ಲ ಏಕಮೇವ ಭಾಗವತರು ಇವರೆಂದರೆ ತಪ್ಪಾಗಲಾರದು.
|
ಹಳೆಯ ಸಂಪ್ರದಾಯದ ಪೌರಾಣಿಕ ಪ್ರಸಂಗ ಹಾಗೂ ಆಧುನಿಕ ಮತ್ತು ತುಳು ಪ್ರಸಂಗಗಳಲ್ಲಿ ತನ್ನ ಅಸಾಧಾರಣ ಪ್ರತಿಭೆಯಿಂದ ಜನಮನ್ನಣೆ ಗಳಿಸಿ ಸುಮಾರು 30 ವರ್ಷ ಯಕ್ಷಗಾನ ರಂಗಭೂಮಿಯಲ್ಲಿ ಕೃಷಿ ಮಾಡಿ ಈಗ ತನ್ನದೇ ಕಲ್ಪಣೆಯ “ ಯಕ್ಷ ಸಂಗೀತ ನಾದ ವೈಭವ’ ಎಂಬ ಶೀರ್ಷಿಕೆಯಲ್ಲಿ ಯಕ್ಷಗಾನದ ಭಾಗವತಿಕೆಯನ್ನು ಶಾಸ್ತ್ರೀಯ ಸಂಗೀತದ ವಿವಿದ ವಾದ್ಯಗಳಾದ ಮ್ರದಂಗ, ವಯೋಲಿನ್, ತವಿಲ್ ಮತ್ತು ತೆಂಕು ಬಡಗಿನ ಚೆ೦ಡೆ ಮದ್ದಳೆಯೊಂದಿಗೆ ಹಾಡುವ ವಿಶಿಷ್ಟ ಪ್ರಯೋಗವೊಂದನ್ನು ಸ್ವತಹ ರೂಪಿಸಿ ಈಗಾಗಲೇ ನಾಡಿನಾದ್ಯಂತ ಹಲವಾರು ಕಾರ್ಯಕ್ರಮ ನೀಡಿದ್ದಾರೆ, ನೀಡುತ್ತಲಿದ್ದಾರೆ.
ಬಾಲ್ಯ, ಶಿಕ್ಷಣ ಮತ್ತು ಪಾದಾರ್ಪಣೆ
ದ. ಕ. ಜಿಲ್ಲೆಯ ಸುಳ್ಯ ತಾಲೂಕಿನ ಸುಬ್ರಹ್ಮಣ್ಯದಲ್ಲಿ 1958ರಲ್ಲಿ ಅನಂತರಾಮ ಶಬರಾಯ ಮತ್ತು ಜಯಲಕ್ಷ್ಮಿ ಅಮ್ಮನವರ ಸುಪುತ್ರನಾಗಿ ಜನಿಸಿದ ಶಬರಾಯರು ಬಿ. ಎಸ್ಸಿ. ಪದವೀದರರು. ಹೈಸ್ಕೂಲ್ ಮೆಟ್ಟಲೇರುವ ಮೊದಲೇ ಮೇಳಕ್ಕೆ ಹೋಗುವ ಆ ಕಾಲದಲ್ಲಿ ವಿಜ್ಞಾನ ಪದವೀಧರರಾಗಿ ಯಕ್ಷಗಾನಕ್ಕೆ ಬಂದಿದ್ದೇ ಯಕ್ಷಗಾನದ ಚರಿತ್ರೆಯಲ್ಲಿ ದಾಖಲಿಸಬೇಕಾಗಿದ್ದು. ಕಾಲೇಜಿನಲ್ಲಿರುವಾಗಲೇ ಆಗ ಪ್ರಸಿಧ್ಧಿಯ ಉತ್ತುಂಗದಲ್ಲಿದ್ದ ಕಾಳಿಂಗ ನಾವಡರ ಭಾಗವತಿಕೆಗೆ ಮನಸೋತು , ಭಾಗವತಿಕೆ ಅಬ್ಯಾಸ ಮಾಡಬೇಕೆಂಬ ಉತ್ಕಟ ಆಕಾ೦ಕ್ಷೆಯಿಂದ ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ನಾರ್ಣಪ್ಪ ಉಪ್ಪೂರರ ಶಿಷ್ಯನಾಗಿ ಸೇರಿಕೊಂಡರು.
ಸದಾನಂದ ಐತಾಳ, ಕೆ. ಪಿ. ಹೆಗಡೆ ಮುಂತಾದವರ ತರಬೇತಿಯಿಂದ ಸಮರ್ಥ ಭಾಗವತನಾಗಿ ರೂಪುಗೊಂಡು 1984ರಲ್ಲಿ ಅಧೀಕೃತ ಭಾಗವತರಾಗಿ ಗೋಳಿಗರಡಿ ಮೇಳದಲ್ಲಿ ತಾಳ ಹಿಡಿದರು. ಬಳಿಕ ಅಮೃತೇಶ್ವರಿ ಮೇಳ ಸೇರಿದ ಅವರು ಅಲ್ಲಿ ಕೋಟ ವೈಕುಂಠ, ಎಂ. ಎ. ನಾಯ್ಕ. ಮೊಳಹಳ್ಳಿ ಹಿರಿಯ ಮುಂತಾದ ಹಿರಿಯ ಕಲಾವಿದರ ಒಡನಾಟ ದೊರೆತು ಪೌರಾಣಿಕ ಪ್ರಸಂಗಗಳಲ್ಲಿ ಉತ್ತಮ ಹಿಡಿತ ಸಾಧಿಸಿದರು. ಬಳಿಕ ಕೇವಲ ಒಂದು ಮೇಳವಿದ್ದ ಮಂದಾರ್ತಿ ಮೇಳದಲ್ಲಿ ಪ್ರಧಾನ ಭಾಗವತರಾಗಿ ಎರಡು ವರ್ಷ ತಿರುಗಾಟ ನೆಡೆಸಿದರು.
ಕಲಾಸೇವೆ
ತೊಂಬತ್ತರ ದಶಕದ ಪ್ರಾರಂಭದಲ್ಲಿ ಸಾಲಿಗ್ರಾಮ ಮೇಳದಲ್ಲಿ ಕಾಳಿಂಗ ನಾವಡರ ಆಕಸ್ಮಿಕ ನಿಧನದಿಂದ ತೆರವಾದ ಸ್ಥಾನವನ್ನು ಸಮರ್ಥವಾಗಿ ನಿರಂತರ ಎಂಟು ವರ್ಷ ತುಂಬಿದ ಅವರು ಅಲ್ಲಿ ವಿಶೇಷ ಖ್ಯಾತಿಯನ್ನು ಗಳಿಸಿದರು. ಅಲ್ಲಿ ಹಿರಿಯ ಕಲಾವಿದರಾದ ಜಲವಳ್ಳಿ, ಯಾಜಿ, ರಮೇಶಾಚಾರ್, ಹಳ್ಳಾಡಿ ಜಯರಾಮ ಶೆಟ್ಟಿ, ಬೆಳಿಯೂರ್ ಕೃಷ್ಣಮೂರ್ತಿ, ಅರಾಟೆ ಮಂಜುನಾಥ, ಕೊಂಡದಕುಳಿ ರಾಮಚಂದ್ರ ಹೆಗಡೆ, ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ, ಮುಂತಾದ ಕಲಾವಿದರೊಂದಿಗೆ ಪ್ರದರ್ಶನಗೊಳ್ಳುತಿದ್ದ ವಿಷಮ ಸಮರಂಗ, ವರ್ಣ ವೈಷಮ್ಯ, ಶೃ೦ಗ ಸಾರಂಗ, ಮೇಘ ಮಯೂರಿ, ಸತ್ಯ ಸಂಗ್ರಾಮ, ಧರ್ಮ ಸಂಕ್ರಾಂತಿ ಮುಂತಾದ ಪ್ರಸಂಗಗಳು ಅಪಾರ ಹೊಸ ಪ್ರೇಕ್ಷಕರನ್ನು ಹುಟ್ಟು ಹಾಕಿವೆ.
|
ನಾರಾಯಣ ಶಬರಾಯ |
 |
ಜನನ |
: |
1958 |
ಜನನ ಸ್ಥಳ |
: |
ಸುಬ್ರಹ್ಮಣ್ಯ, ಸುಳ್ಯ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
|
ಕಲಾಸೇವೆ:
ಯಕ್ಷಗಾನ ರಂಗದ ಉಭಯತಿಟ್ಟುಗಳ ಪರಿಪೂರ್ಣ ಭಾಗವತರೆಂದು ಗುರುತಿಸಿಕೊಂಡು ಗೋಳಿಗರಡಿ, ಅಮೃತೇಶ್ವರಿ, ಮಂದಾರ್ತಿ, ಸಾಲಿಗ್ರಾಮ, ಮಂಗಳಾದೇವಿ , ಕರ್ನಾಟಕ ಮೇಳಗಳಲ್ಲಿ 45 ವರ್ಷಕ್ಕೂ ಮಿಕ್ಕಿ ಕಾಲ ಭಾಗವತರಾಗಿ ತಿರುಗಾಟ
|
ಪ್ರಶಸ್ತಿಗಳು:
- ಉಭಯ ಜಿಲ್ಲೆಗಳ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ
- ಕರ್ನಾಟಕ ಸಂಘ ದುಬೈ ಮತ್ತು ಶಾರ್ಜಾದಿಂದ ಸನ್ಮಾನ
- ಕೇರಳ ರಾಜ್ಯದಿಂದ ಪಟ್ಟಾಜೆ ಸ್ಮಾರಕ ಪ್ರಶಸ್ತಿ
- ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ
|
|
|
ಆಗ ತಾನೇ ಹೊಸದಾಗಿ ಪ್ರಾರಂಭಗೊಂಡ ಮಂಗಳಾದೇವಿ ಮೇಳದ ಭಾಗವತರಾಗಿ ತೆಂಕುತಿಟ್ಟನ್ನು ಪ್ರವೇಶಿಸಿದ ಅವರು ಬಾರ್ಕೂರ ಬಂಗಾರಿ, ನೀಲಾವರದ ನೀಲಾಂಬರಿ ಮುಂತಾದ ಪ್ರಸಂಗಗಳ ಮೂಲಕ ತೆಂಕಿನ ಪ್ರಸಿದ್ದ ಭಾಗವತರಾಗಿ ಗುರುತಿಸಿಕೊಂಡರು. ಕಾಲಮಿತಿಯ ವಿನೂತನ ಪ್ರಯೋಗದ ಮೂಲಕ ಕರ್ನಾಟಕ ಮೇಳ ಬಳಿಕ ಎಡನೀರು ಮೇಳದಲ್ಲಿ ಸೇವೆ ಸಲ್ಲಿಸಿ ಮಂದಾರ್ತಿ ಮೇಳದಲ್ಲಿ ಕೊನೆಯ ಒಂದು ವರ್ಷ ತಿರುಗಾಟ ಮಾಡಿ ಮೇಳದ ತಿರುಗಾಟ ನಿಲ್ಲಿಸಿದ್ದಾರೆ.
ದೂರದರ್ಶನದಲ್ಲಿ ಯಕ್ಷಗಾನ ಧಾರವಾಹಿ
ತನ್ನ ಸುದೀರ್ಘ ಅವದಿಯ ಯಕ್ಷ ತಿರುಗಾಟದಲ್ಲಿ ಬೆಂಗಳೂರು ದೂರದರ್ಶನದಲ್ಲಿ ಐದು ಬಾರಿ. ಹಲವು ಬಾರಿ ವಿದೇಶದಲ್ಲಿ, ಚಂದ್ರಶೇಖರ ಕಂಬಾರರ ನಾಟಕದಲ್ಲಿ, ಅಖಿಲ ಬಾರತ ಸಾಹಿತ್ಯ ಸಮ್ಮೇಳನಗಳಲ್ಲಿ ಹೀಗೆ ಹಲವು ಕಡೆ ತನ್ನ ಭಾಗವತಿಕೆಯನ್ನು ಪ್ರದರ್ಶಿಸಿದ್ದಾರೆ. ಸುಮಾರು ನೂರಕ್ಕೂ ಅಧಿಕ ಆಡೀಯೋ ಮತ್ತು ವೀಡಿಯೋ ತಟ್ಟೆಗಳಿಗೆ ತನ್ನ ಸ್ವರ ನೀಡಿದ ಇವರ ಭಾಗವತಿಕೆ ಮತ್ತು ನಿರ್ದೇಶನವಿರುವ ದಶಾವತಾರ ಯಕ್ಷಗಾನ ಧಾರವಾಹಿ ಕಳೆದ ಒಂದು ವರ್ಷದಿಂದ ದೂರದರ್ಶನದ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಇತೀಚಿಗೆ ಅವರ ನಿರ್ದೇಶನದಲ್ಲಿ ತೆಂಕು ಬಡಗಿನ ಕಲಾವಿದರಿಂದ ರಾಮಾಯಣ ಯಕ್ಷಗಾನ ದೂರದರ್ಶನದಲ್ಲಿ ಧಾರವಾಹಿಯಾಗಿ ಪ್ರಸಾರಗೊಳ್ಳುತ್ತಿದೆ.
ಗೌರವ ಮತ್ತು ಸನ್ಮಾನಗಳು
ಶಬರಾಯರ ಕಲಾಸೇವೆಗೆ ಸಂದ ಗೌರವ ಮತ್ತು ಸನ್ಮಾನಗಳು ಹಲವಾರು. ಉಭಯ ಜಿಲ್ಲೆಗಳ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಂಘ ದುಬೈ ಮತ್ತು ಶಾರ್ಜಾದಿಂದ ಯಕ್ಷಗಾನ ಸವ್ಯಾಸಾಚಿ ಬಿರುದಿನೊಂದಿಗೆ ಸನ್ಮಾನ, ಕೇರಳ ರಾಜ್ಯದಿಂದ ಪಟ್ಟಾಜೆ ಸ್ಮಾರಕ ಪ್ರಶಸ್ತಿ, ಪೇಜಾವರ ಮಠದ ಶ್ರೀ ಶ್ರೀ ವಿಶ್ವೇಶ ತೀರ್ಥರಿಂದ ಮತ್ತು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಭೂಷಣ ಸ್ವಾಮೀಜಿಯವರಿಂದ ಸನ್ಮಾನ. ದೆಹಲಿ ತುಳುಕೂಟದ ಸನ್ಮಾನಗಳು ಪ್ರಮುಖವಾದುವುಗಳು. ಉಡುಪಿ ಜಿಲ್ಲೆಯ ಮೂಡುಪೆರಂಪಳ್ಳಿಯಲ್ಲಿ ಪತ್ನಿ ರಾಜಶ್ರೀ ಶಬರಾಯ ಮತ್ತು ಏಕಮಾತ್ರ ಪುತ್ರಿ ಗಾರ್ಗಿ ಯೊಂದಿಗಿನ ಸುಖ ಸಂಸಾರ ಇವರದ್ದು. ಪುತ್ರಿ ಗಾರ್ಗಿ ಶಬರಾಯ ಕರ್ನಾಟಕ ಶಾಸ್ತ್ರೀಯ ಸಂಗೀತದ ಓರ್ವ ಯುವ ಪ್ರತಿಭೆಯಾಗಿದ್ದು ಅನೇಕ ಜಿಲ್ಲಾ ಮಟ್ಟದ ಮತ್ತು ರಾಜ್ಯಮಟ್ಟದ ಸ್ಪರ್ದೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿರುತ್ತಾರೆ.
|
|
|