ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಬಲಿಪ ಅಮೃತ ಭವನ

ಲೇಖಕರು :
ರಾಜ್ ಕುಮಾರ್
ಬುಧವಾರ, ಜನವರಿ 21 , 2015

ಜನ ಜೀವನದಲ್ಲಿ ಸಂಸ್ಕೃತಿ ಜೀವಂತವಾಗಿ ಇದೆ ಎಂದಾದರೆ ಅಲ್ಲಿ ಕಲೆಯೂ ತನ್ನ ಪ್ರಭಾವವನ್ನು ಬೀರಿ ಬೆಳೆದಿದೆ ಎಂದರ್ಥ. ಕಲೆಗೂ ಜನ ಜೀವನಕ್ಕೂ, ಆ ಜೀವನವು ಬಿಂಬಿಸುವ ಸಂಸ್ಕೃತಿಗೂ ಅವಿನಾಭಾವ ಸಂಬಂಧ. ಅದಕ್ಕಾಗಿ ಕಲೆಯನ್ನು ಜನಜೀವನದ ಕನ್ನಡಿ ಎಂದು ಕರೆಯುವುದು. ಸಂಸ್ಕೃತಿಯ ಬೇರುಗಳು ಜನ ಜೀವನದಲ್ಲಿ ವಿಶಾಲವಾಗಿಯೂ ಆಳವಾಗಿಯೂ ಹಬ್ಬಿರುತ್ತದೆ. ಕಲೆ, ಆ ಬೇರಿಗೆ ಜೀವ ಜಲದಂತೆ. ಒಬ್ಬ ಕಲಾವಿದ ಸಮಾಜದಿಂದ ಗುರುತಿಸಲ್ಪಟ್ಟಾಗ, ಆತನ ಕಲೆಯನ್ನು ಗುರುತಿಸಿದಂತೆ. ಆ ಕಲಾವಿದನನ್ನು ಅಂಗೀಕರೀಸಿದಾಗ ಆ ಕಲೆ ಆತನಿಂದ ಜೀವಸೆಲೆಯನ್ನು ಹೀರಿಕೊಂಡಿದೆ ಎಂದು ಭಾವಿಸಬಹುದು.

ಕಲೆ ಗೌರವಿಸಲ್ಪಟ್ಟಾಗ ಸಂಸ್ಕೃತಿಯೂ ಗೌರವಿಸಲ್ಪಟ್ಟಂತೆ. ಕಲಾವಿದನಿಂದ ಕಲೆ ಪ್ರಕಾಶಿಸಿದಂತೆ ಆ ಮುಖೇನ ಸಂಸ್ಕೃತಿಯ ದರ್ಶನವೂ ಸಾಧ್ಯವಾಗುತ್ತದೆ. ಅದರಲ್ಲೂ ಪರಂಪರೆಯಿಂದ ಹುಟ್ಟಿಕೊಂಡು ಬೆಳೆದು ಬಂದ ಕಲೆಯಲ್ಲಿ ಸಂಸ್ಕೃತಿಯ ಪ್ರಭಾವೇ ಪ್ರತಿಫಲಿಸಲ್ಪಡುತ್ತದೆ. ಸಂಸ್ಕೃತಿಯ ಸುಸ್ಥಿತಿಯಲ್ಲಿ ಕಲಾವಿದನ ಅಸ್ತಿತ್ವವೂ ಬಹಳ ಪ್ರಧಾನವಾಗಿರುತ್ತದೆ. ಹಾಗಾಗಿ ಕಲೆಯೊಂದಿಗೆ ಕಲಾವಿದನನ್ನು ಗೌರವಿಸಿದಾಗ ಸಂಸ್ಕೃತಿಯ ಜೀವಂತಿಕೆಯನ್ನೂ ಅಲ್ಲಿ ಕಾಣಬಹುದು. ಶುದ್ದ ಸಂಸ್ಕೃತಿ ಎಂಬುದು ಉಜ್ವಲ ಜನಜೀವನದ ಸಂಕೇತ.

ಕರ್ನಾಟಕದ ಕರಾವಳಿಯ ಜನಪ್ರಿಯ ಕಲೆ ಯಕ್ಷಗಾನ. ಇಲ್ಲಿನ ಸಂಸ್ಕೃತಿಯ ಇನ್ನೊಂದು ಮುಖವಾದ ಯಕ್ಷಗಾನ ಗೌರವಿಸಲ್ಪಟ್ಟು ಅಭಿಮಾನದಿಂದ ಕಂಡಾಗ ಶುದ್ದ ಸಂಸ್ಕೃತಿಯ ಅಭಿಮಾನವೂ ವ್ಯಕ್ತವಾಗುತ್ತದೆ. ಕಲೆಯನ್ನು ಗೌರವಿಸುವುದು ಕಲಾವಿದನನ್ನು ಗೌರವಿಸುವುದೂ ಸಂಸ್ಕೃತಿಯ ಇನ್ನೊಂದು ಅಂಗವಾಗಿರುತ್ತದೆ.

ಸಂಸ್ಕೃತಿ ಮತ್ತು ಕಲೆಯ ಅವಿನಾಭಾವ ಸಂಬಂಧಂತೆ ಯಕ್ಷಗಾನದಲ್ಲೂ ಒಂದು ಅವಿನಾಭಾವ ಸಂಬಧವನ್ನು ಕಾಣಬಹುದು. ಯಕ್ಷಗಾನದ ಹಲವು ಕಲಾವಿದರನ್ನು ಕಂಡಾಗ ಯಕ್ಷಗಾನದ ಸ್ವರೂಪವನ್ನೇ ಕಂಡಂತೆ ಭಾಸವಾಗುತ್ತದೆ. ಕಲೆಗೂ ಕಲಾವಿದನೀಗೂ ಇರುವ ಅವಿನಾಭಾವ ಸಂಭಂಧ ಅಂತಹದು . ಅಂತಹ ಕಲಾವಿದರಲ್ಲಿ ಹಿರಿಯ ಭಾಗವತ ಶ್ರೀ ಬಲಿಪ ನಾರಾಯಣ ಭಾಗವತರು ಅಗ್ರಗಣ್ಯರು. ಪರಂಪರೆಯಿಂದ ಬೆಳೆದು ಬಂದ ಕಲೆ ಯಕ್ಷಗಾನದಲ್ಲಿ ಅದೇ ಪರಂಪರೆಯ ಹಾಡುಗಾರಿಕೆಯಿಂದ ಗುರುತಿಸಲ್ಪಡುವವರು ಬಲಿಪ್ಪರು. ಇವರು ಇದ್ದಲ್ಲಿ ಸೂಕ್ಷ್ಮವಾಗಿಯಾದರೂ ಯಕ್ಷಗಾನದ ವಾತಾವರಣ ನಿರ್ಮಾಣವಾಗಿಬಿಡುತ್ತದೆ. ಯಕ್ಷಗಾನವೂ ವ್ಯಕ್ತಿಯೂ ಅನ್ವರ್ಥವಾಗಿ ಬೆಳೆದ ಬಗೆ ಇದು. ಯಕ್ಷಗಾನವನ್ನು ಅಭಿಮಾನದಿಂದ ಅಪ್ಪಿಕೊಂಡಂತೆ ಅಭಿಮಾನಿಗಳು ಇವರ ಭಾಗವತಿಕೆಯನ್ನು ಒಂದರ್ಥದಲ್ಲಿ ತಬ್ಬಿಕೊಂಡಿದ್ದಾರೆ ಅಂತಲೇ ಹೇಳಬಹುದು. ಈ ಅಭಿಮಾನದ ಸಂಕೇತವೆಂಬಂತೆ ಅಭಿಮಾನಿಗಳೆಲ್ಲರೂ ಸೇರಿ ತಮ್ಮ ಅಭಿಮಾನದ ದ್ಯೋತಕವನ್ನು ಶ್ರೀಬಲಿಪ್ಪರಿಗೆ ಅತ್ಯಂತ ವಿಶಿಷ್ಟವಾಗಿ ಸಲ್ಲಿಸಲಿದ್ದಾರೆ.

ಬಲಿಪ್ಪರ ನಿವಾಸದ ಮಗ್ಗುಲಲ್ಲೇ ತಲೆ ಎತ್ತಿ ನಿಂತಿದೆ ಬಲಿಪ ಅಮೃತ ಭವನ. ಬಲಿಪ ಎಂಬುದು ಯಕ್ಷಗಾನಕ್ಕೆ ಅಮೃತ ಸದೃಶವಾದಂತಹ ಹೆಸರು. ಯಕ್ಷಗಾನದಲ್ಲಿ ಬಲಿಪ ಎಂಬ ಹೆಸರೇ ಒಂದು ಪರಂಪರೆಯನ್ನು ಸಾರುತ್ತದೆ. ಯಕ್ಷಗಾನದಂತಹ ಪರಂಪರೆಯ ಕಲೆಯಲ್ಲಿ ಒಂದು ಪ್ರಾಚೀನ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿದೆ ಬಲಿಪ ಮನೆತನ. ಅದರಲ್ಲೂ ಈಗಿನ ಹಿರಿಯ ಬಲಿಪ ನಾರಾಯಣ ಭಾಗವತರು ಯಕ್ಷಗಾನದಲ್ಲಿ ಸರಿ ಸುಮಾರು ಒಂದು ಮನುಷ್ಯ ಜನ್ಮದ ಅವಧಿಯನ್ನು ಯಕ್ಷಗಾನಕ್ಕೆ ಮೀಸಲಾಗಿರಿಸಿ ಅದನ್ನೇ ಬದುಕು ಎಂದು ತೋರಿಸಿಕೊಟ್ಟವರು. ಯಕ್ಷಗಾನದಲ್ಲಿ ಆಗಲಿ ಅಥವಾ ಇತರ ಯಾವುದೇ ಪ್ರಾಕಾರಗಳಲ್ಲಾಗಲೀ ಒಬ್ಬ ಕಲಾವಿದ ಹೇಗಿರಬೇಕು ಎಂಬುದನ್ನು ತನ್ನ ಸಾಧನೆಯಿಂದಲೂ ತನ್ನ ವೈಯಕ್ತಿಕ ನಿಸ್ವಾರ್ಥ ಗುಣಗಳಿಂದಲೂ ತೋರಿಸಿಕೊಟ್ಟವರು ಬಲಿಪ್ಪರು.

ಯಕ್ಷಗಾನದಲ್ಲಿ ಹಲವಾರು ಬದಲವಾಣೆಗಳು ಆವಿಷ್ಕಾರಗಳು ಬೆಳೆದು ಬಂದಿರಬಹುದು. ಕಲೆ ಮಾತ್ರವಲ್ಲ ಕಲಾವಿದರು ಮತ್ತು ಅವರ ಶೈಲಿಗಳು ವೈಯಕ್ತಿಕವಾದ ಗುಣ ಸ್ವಭಾವಗಳು ಬದಲಾವಣೆ ಕಂಡಿರಬಹುದು. ಆದರೆ ಬಲಿಪ್ಪರು ಮಾತ್ರ ಬದಲಾಗದೇ ವಯಸ್ಸು ಒಂದು ಬಿಟ್ಟರೆ ಅದೇ ಬಲಿಪ್ಪರಾಗಿ ಇಂದಿಗೂ ಉಳಿದು ಬಿಟ್ಟಿದ್ದಾರೆ. ಮುಖದಲ್ಲಿ ಕಾಣುವ ಮುಗ್ಧ ನಗು ಇದೆಲ್ಲವನ್ನೂ ಸಾರಿ ಸಾರಿ ಹೇಳಿಬಿಡುತ್ತದೆ. ಇಂತಹ ಓರ್ವ ಮಹಾನ್ ಕಲಾವಿದನಿಗೆ ಅಭಿಮಾನಿಗಳು ಕೇವಲ ಅವರ ಮೇಲಿನ ಅಭಿಮಾನದಿಂದ ಮಾತ್ರವಲ್ಲ ಯಕ್ಷಗಾನದ ಮೇಲಿನ ಅಭಿಮಾನದಿಂದಲೂ ಒಂದು ಭವನ ನಿರ್ಮಾಣವನ್ನು ಗೈದು ತೋರಿಸಿದ್ದಾರೆ. ಇದೀಗ ಈ ಭವನ ಪೂರ್ಣಗೊಂಡು ಸಮರ್ಪಣೆಗೆ ಸಿದ್ದವಾಗಿ ಎದ್ದುನಿಂತಿದೆ. ಸುತ್ತಲೂ ತೋಟ ಗುಡ್ಡದ ಹಸಿರಿನ ನಡುವೆ ಶುದ್ದ ಗುರುಕುಲದ ಸ್ಮೃತಿಯನ್ನು ಮೂಡಿಸುತ್ತಾ ಈ ಭವನ ಎದ್ದು ನಿಂತಿದೆ. ಇದಕ್ಕಾಗಿ ಅನುದಾನವನ್ನು ಕೊಡುಗೆಯನ್ನು ನೀಡಿದಂತಹ ಯಕ್ಷಗಾನ ಮಿತ್ರರಲ್ಲಿ ಅಭಿಮಾನಿಗಳಲ್ಲಿ ಇದೀಗ ಒಂದು ಧನ್ಯತಾಭಾವ.

ಯಕ್ಷಗಾನದಲ್ಲಿ ಹಲವು ರೀತಿಯ ಸನ್ಮಾನ ಪುರಸ್ಕಾರಗಳು ಸಂದಿರಬಹುದು, ಆದರೆ ಓರ್ವ ಕಲಾವಿದನಿಗೆ ಈ ರೀತಿಯ ಒಂದು ಪುರಸ್ಕಾರ ಸಲ್ಲುವುದು ಇತಿಹಾಸದಲ್ಲಿ ಇದು ಮೊದಲು ಎನ್ನಬಹುದು. ಮಾತ್ರವಲ್ಲ ಸನ್ಮನಸ್ಸಿನ ವ್ಯಕ್ತಿಯಾಗಿ ಶಕ್ತಿಯಾಗಿ ಬಲಿಪ್ಪರಂತಹ ಒಬ್ಬ ಪರಿಪೂರ್ಣ ಕಲಾವಿದರು, ಇದಕ್ಕೆ ಸಂಪೂರ್ಣ ಅರ್ಹರೆಂಬುದು ಅತಿಶಯದ ಮಾತಲ್ಲ. ಹಾಗಾಗಿ ಯಾವುದೇ ಹಿಂಜರಿಕೆ ಇಲ್ಲದೆ ಇದಕ್ಕೆ ಸಂಪನ್ಮೂಲ ಕ್ರೋಢೀಕರಿಸಲ್ಪಟ್ಟಿದೆ. ಇದಕ್ಕಾಗಿ ಇದರ ಸಂಚಾಲಕ ಸಮಿತಿ ಮತ್ತು ಬಲಿಪ ಮಿತ್ರವೃಂದ ಬಹಳಷ್ಟು ಶ್ರಮವಶಿಸಿ ಮುತುವರ್ಜಿಯಿಂದ ದುಡಿದಿದೆ. ಯಕ್ಷಗಾನದಲ್ಲಿ ಕ್ರಿಯಾತ್ಮಕವಾದ ಒಂದು ಗೌರವ ಹೇಗೆ ಸಲ್ಲಿಸಬಹುದು ಎಂಬುದಕ್ಕೆ ಇದು ಉತ್ತಮ ನಿದರ್ಶನವಾಗಬಲ್ಲುದು.

ಆಡಂಬರದ ಸನ್ಮಾನ ಪುರಸ್ಕಾರಗಳಿಗಿಂತ ಇಂತಹ ಕ್ರಿಯಾತ್ಮಕವಾದ ಸನ್ಮಾನ ಸಲ್ಲಬೇಕು. ಆಗ ಕಲಾವಿದನಿಗೂ ಆಮೂಲಕ ಕಲೆಗೂ ನೈಜ ರೀತಿಯ ಅಭಿಮಾನದ ಸಲ್ಲಿಕೆಯಾಗುತ್ತದೆ. ಸಾವಿರ ಸಾವಿರ ಖರ್ಚು ಮಾಡುವುದು ಹಿರಿಮೆಯಲ್ಲ. ಅದರ ವಿನಿಯೋಗ ಸಮರ್ಪಕವಾಯಿತೇ ಎಂಬುದು ಗಮನಾರ್ಹ ಸಂಗತಿ. ಅದ್ಧೂರಿಯ ಸಮಾರಂಭ ಮಾಡಿ ಒಂದಷ್ಟು ಆಡಂಬರದ ಅಬ್ಬರವನ್ನು ಪ್ರದರ್ಶಿಸಿ ಕೊನೆಯಲ್ಲಿ ಕಲಾವಿದನ ಜೇಬಿಗಿಳಿಯುವುದು ಬೆರಳೆಣಿಕೆ ಮಾತ್ರ. ಆದರೆ ಇಲ್ಲಿ ಅಭಿಮಾನ ಶಾಶ್ವತವಾಗಿ ನೆಲೆಯೂರುವಂತೆ ಸುಂದರ ಭವನ ನಿರ್ಮಾಣವಾಗಿ ಇದೇ ಪೆಬ್ರವರಿ ಒಂದನೇ ತಾರೀಕಿಗೆ ಸಮರ್ಪಣೆಗೊಳ್ಳಲಿದೆ. ಯಕ್ಷಗಾನ ಅಭಿಮಾನಿಗಳಿಗೆ ಇದೊಂದು ಸಂತಸದ ಸಂಭ್ರಮದ ವಿಷಯ. ಆಡುವ ಮಾತಿಗಿಂತ ಆಡದೇ ಇರುವ ಮಾತು ಹೆಚ್ಚು ಪರಿಣಾಮಕಾರಿಯಾಗಿರುವಂತೆ, ಭಾಗವತರ ಮುಖವನ್ನೊಮ್ಮೆ ನೋಡಿದರೆ ಈ ಮಾತಿನ ಸತ್ಯ ಅರಿವಾಗುತ್ತದೆ. ಧನ್ಯತೆಯ ಕಿರುನಗೆಯೊಂದು ಅಲ್ಲಿ ಮೂಡುತ್ತದೆ.

ಭಾಗವತ ಶಿರೋಮಣಿಯ ಈ ಅಮೃತ ಭವನವು ಯಕ್ಷಗಾನಕ್ಕೆ ಅಮೃತ ಸಿಂಚನವನ್ನು ನೀಡಲಿ ಎಂದು ಹಾರೈಸುತ್ತಾ, ದೇಣಿಗೆಯನ್ನು ನೀಡಿ ಪ್ರೋತ್ಸಾಹಿಸಿದ ಮಿತ್ರರು, ಯಕ್ಷಗಾನ ಅಭಿಮಾನಿಗಳು, ಇದಕ್ಕಾಗಿ ಎಲೆ ಮರೆಯ ಕಾಯಿಯಂತೆ ನಿಸ್ವಾರ್ಥವಾಗಿ ದುಡಿದವರು, ಹೀಗೆ ಪ್ರತಿಯೊಬ್ಬರಿಗೂ ಈ ಮೂಲಕ ಹೃತ್ಪೂರ್ವಕ ಕೃತಜ್ಞತೆಗಳು.











ಕೃಪೆ : http://yakshachintana.blogspot.in


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
shivashankara A.R.(3/31/2015)
very good work done for BALIPA BHAGAVATHARU, the living legend of yakshagana. This artcile of rajkumar is good




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ