ತೆಕ್ಕಟ್ಟೆ ಬಾಬಣ್ಣ ಮು೦ತಾದ ಹಿರಿಯರಿ೦ದ ಪ್ರಭಾವಿತರಾಗಿ 14ನೇ ವರ್ಷದಲ್ಲೇ ಯಕ್ಷಗಾನದ ಪಾದರ್ಪಣೆ ಮಾಡಿ ಹಂತಹಂತವಾಗಿ ಯಶಸ್ಸಿನ ಏಣಿ ಏರಿದವರು. ಬಡತನವಿದ್ದರೂ ಯಕ್ಷಗಾನ ಕಲೆಗಾಗಿ ಜೀವನ ಪರ್ಯಂತ ಸೇವೆಗೈದ ಗಾಣಿಗರು ಸ್ವಪ್ರತಿಭೆಯಿಂದ ಯಕ್ಷಗಾನದಲ್ಲಿ ಶಾಶ್ವತ ಸ್ಥಾನ ಪಡೆದವರು. ಎಲ್ಲ ಕಲಾವಿದ ಹಾಗೂ ಹಿಮ್ಮೇಳದವರ ನಡುವೆ ಸೌಹಾರ್ದ ಬಾಂಧವ್ಯ ಬೆಳೆಸುತ್ತಿದ್ದ ಗಾಣಿಗರಿಂದ ಇಡೀ ಪ್ರದರ್ಶನ ಜನಮೆಚ್ಚುಗೆಗೆ ಪಾತ್ರವಾಗುತ್ತಿತ್ತು. ಕಲಾ ಪಾರಂಗತರಾಗಿ ಎರಡನೇ ವೇಷಧಾರಿಯಾಗಿ ರಂಗಸ್ಥಳದ ರಾಜನೆಂದು ಜನಮನ್ನಣೆ ಗಿಟ್ಟಿಸಿದವರು.
ಹಾರಾಡಿ ರಾಮ ಗಾಣಿಗರು ಯಕ್ಷಗಾನ ಕ್ಷೇತ್ರಕ್ಕೆ ಪ್ರಥಮ ರಾಷ್ಟ್ರ ಪ್ರಶಸ್ತಿ ತಂದಿತ್ತು ಕಲೆಯ ಘನತೆಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದವರು. ಅವರು ಹುಟ್ಟಿ ಇಂದಿಗೆ 112 ವರ್ಷ ಸಂದಿದೆ ಅವರ ಜನ್ಮ ಶತಾಬ್ದಿ ರಾಷ್ಟ್ರದ ರಾಜದಾನಿ ದೆಹಲಿ, ರಾಜ್ಯದ ರಾಜದಾನಿ ಹಾಗೂ ಇತರೆಲ್ಲಡೆ ನೆಡೆದಿದೆ ಕನ್ನಡ ಚಲನಚಿತ್ರ ತಾರೆ ಡಾ. ರಾಜ್ ಕುಮಾರ್ ಬಗ್ಗೆ ಕನ್ನಡಿಗರು ಎಷ್ಟು ಗೌರವ ಇರಿಸಿದ್ದರೋ ಅಷ್ಟೇ ಅಭಿಮಾನವನ್ನು ತಾರಾಮೌಲ್ಯವನ್ನು ಯಕ್ಷಗಾನದಲ್ಲಿ ಗಳಿಸಿದ ಏಕೈಕ ವ್ಯಕ್ತಿ ರಾಮಗಾಣಿಗರು. ಸುಮಾರು ಏಳು ತಲೆಮಾರು ಯಕ್ಷಗಾನದ ಇತಿಹಾಸವಿರುವ ಹಾರಾಡಿ ಮನೆತನದಲ್ಲಿ ಸುಮಾರು ಎರಡು ಮೇಳಕ್ಕಾಗುವಷ್ಟು ಕಲಾವಿದರಿದ್ದ ಕುಟುಂಬವದು. ರಾಮ ಗಾಣಿಗರ ಸಮಕಾಲೀನರಾದ ಕುಷ್ಟ ಗಾಣಿಗರು ಆ ಕಾಲದ ಪ್ರಸಿದ್ದ ಪುರುಷ ವೇಷಧಾರಿ, ನಾರಾಯಣ ಗಾಣಿಗರು ಸ್ತ್ರೀವೇಷಧಾರಿ, ಅಣ್ಣಪ್ಪ ಗಾಣಿಗರು ಭಾಗವತರು, ಮಹಾಬಲ ಗಾಣಿಗರು ಬಡಗುತಿಟ್ಟಿನ ಕೋರೆ ಮುಂಡಾಸು ಖ್ಯಾತಿಯವರು..
ರಾಮಗಾಣಿಗರ ಬಹುಪಾಲು ಸುಮಾರು 45 ವರ್ಷ ತಿರುಗಾಟ ಮಂದಾರ್ತಿ ಮೇಳದಲ್ಲಿಯೇ. ತಮ್ಮ ಕಲಾನೈಪುಣ್ಯತೆಯಿಂದ ಶ್ರೀ ಕ್ಷೇತ್ರಕ್ಕೂ ಮಂದಾರ್ತಿ ಮೇಳಕ್ಕೂ ಕೀರ್ತಿ ತಂದಿತ್ತವರು. ರಾಮ ಗಾಣಿಗರ ಕಾಲದಲ್ಲಿ ಮಂದಾರ್ತಿ ಮೇಳ ಯಕ್ಷಗಾನದಲ್ಲಿ ಅಪೂರ್ವ ಸ್ಥಾನ ಗಳಿಸಿತ್ತು. ರಾಮನವರಿಂದ ಮೇಳಕ್ಕೆ ಮೆರುಗು, ಮಂದಾರ್ತಿ ದೇವಿಯಿಂದ ರಾಮನವರಿಗೆ ಹುರುಪು ಹೀಗೆ ಒಂದಕ್ಕೊಂದು ಪೂರಕವಾಗಿ ಮಂದಾರ್ತಿ ಮೇಳವೆಂದರೆ ಹರಾಡಿ ರಾಮ, ರಾಮನೆಂದರೆ ಮಂದಾರ್ತಿ ಮೇಳ ಎನ್ನುವಷ್ಟು ಅಪೂರ್ವ ಸಂಬಂದ ನಿರ್ಮಾಣವಾಗಿತ್ತು. ಮಂದಾರ್ತಿ ಮೇಳದ ಯಜಮಾನರಾಗೀಯೂ ಕೆಲವು ಕಾಲ ಸೇವೆ ಸಲ್ಲಿಸಿದ್ದರು. ಕುಂಜಾಲು ಶೇಷಗಿರಿ ಕಿಣಿ, ಜಾನುವಾರುಕಟ್ಟೆ ಬಾಗವತರು ಹಿರಿಯಡ್ಕ ಗೋಪಾಲರಾಯರ ಹಿಮ್ಮೇಳದಲ್ಲಿ ಕರ್ಣಾರ್ಜುನದ ಕರ್ಣನ ಪಾತ್ರ ಗಾಣಿಗರಿಗೆ ಇನ್ನಿಲ್ಲದ ಹೆಸರು ತಂದು ಕೊಟ್ಟಿತ್ತು.
ದೀರ್ಘಕಾಲ ಎರಡನೇ ವೇಷಧಾರಿಯಾಗಿ ಮೆರೆದ ಅವರ ದ್ರೌಪದಿ ಪ್ರತಾಪದ ಭೀಮ, ಜಾಂಬವ, ಬೀಷ್ಮ. ಹಿರಣ್ಯಕಶ್ಶಪು, ರುಕ್ಮಾಂಗದ ಮುಂತಾದ ಪಾತ್ರವನ್ನು ಇಂದಿಗೂ ಜನ ನೆನಪಿಸುತ್ತಾರೆ. 1960ರಲ್ಲಿ ಸ೦ಗೀತ ನಾಟಕ ಅಕಾಡೆಮಿ ಪ್ರಶಸ್ತಿಯಿ೦ದ ಪುರಸ್ಕೃತರಾದ ಪ್ರಥಮ ಯಕ್ಷಗಾನ ಕಲಾವಿದರೆನಿಸಿಕೊ೦ಡರು. ಒಟ್ಟಾರೆಯಾಗಿ ಸಹಕಲಾವಿದರಿಗೆ ಬೇಕಾದವರಾಗಿ ಯಜಮಾನರಿಗೂ ಮೇಳಕ್ಕೂ ನಿಷ್ಟರಾಗಿ ಗುಡಿದು ಅಜರಾಮರರಾದ ಗಾಣಿಗರು 1963ರಲ್ಲಿ ಇಹಲೋಕದ ಯಾತ್ರೆ ಮುಗಿಸಿದರು.
ರಾಜ ಮಹಾರಾಜರ ಕಾಲದಲ್ಲಿ ಗಾಣಿಗ ಸಮುದಾಯವು ಒಂದು ವಿಶ್ವಾಸಾರ್ಹ ಸಮುದಾಯವಾಗಿತ್ತು. ಇದನ್ನು ಸೋಮ ಕ್ಷತ್ರಿಯ ಸಮುದಾಯ ಎಂದು ಕರೆಯಲಾಗುತ್ತಿತ್ತು. ಹಾರಾಡಿ ಕುಷ್ಟ ಗಾಣಿಗ ಮತ್ತು ಹಾರಾಡಿ ರಾಮ ಗಾಣಿಗರ ಪ್ರಯತ್ನದಿಂದಾಗಿ ಇಂದು ಇದು ಸಮಾಜದಲ್ಲಿ ಪ್ರತಿಷ್ಟೆಯನ್ನು ಪಡೆದಿದೆ. ಯಕ್ಷಗಾನ ಕಲೆಯಲ್ಲಿ ಈ ಸಮಾಜದ ಕೊಡುಗೆ ಅಪಾರ, ಅಲ್ಲದೆ ಯಕ್ಷಗಾನದ ಉಳಿವಿಗಾಗಿ ಇದು ಸತತ ಪ್ರಯತ್ನ ಮಾಡುತ್ತಾ ಇದೆ. ಯಕ್ಷಗಾನಕ್ಕೆ ಪ್ರಥಮ ರಾಷ್ಟ್ರೀಯ ಪ್ರಶಸ್ತಿ ತಂದ ಹೆಗ್ಗಳಿಕೆ ಈ ಸಮಾಜಕ್ಕಿದೆ. ಯಕ್ಷಗಾನದಲ್ಲಿ “ಹಾರಾಡಿ ರಾಮ ಗಾಣಿಗ” ಪ್ರಶಸ್ತಿಯನ್ನು ಕೊಡಬೇಕೆಂದು ದಿವಂಗತ ವಿ. ಎಸ್. ಆಚಾರ್ಯರ ಕನಸಿನ ಯೋಜನೆಯಾಗಿತ್ತು. ಅವರ ಕನಸನ್ನು ನನಸಾಗಿಸಲು ಕರ್ನಾಟಕ ಸರಕಾರವು ಒಂದು ಕಮಿಟಿಯನ್ನು ರಚಿಸಿ, ಅವರ ಹೆಸರಿನಲ್ಲಿ ರೂಪಾಯಿ ಒ೦ದು ಲಕ್ಷ ನಗದು, ಫಲಕ ಒಳಗೊಂಡ ವಾರ್ಷಿಕ ಪ್ರಶಸ್ತಿಯನ್ನು ಬಡಗು ಮತ್ತು ತೆಂಕು ತಿಟ್ಟಿನ ಪ್ರತಿಭಾವಂತ ಕಲಾವಿದರಿಗೆ ನೀಡುತ್ತಿದೆ.
|
ಹಾರಾಡಿ ರಾಮ ಗಾಣಿಗ |
 |
ಜನನ |
: |
1902 |
ಜನನ ಸ್ಥಳ |
: |
ಹಾರಾಡಿ, ಕುಂದಾಪುರ ತಾಲೂಕು
ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ
|
ಕಲಾಸೇವೆ:
ಯಕ್ಷಗಾನಕ್ಕೆ ಪ್ರಥಮ ರಾಷ್ಟ್ರೀಯ ಪ್ರಶಸ್ತಿ ತಂದ, ಯಕ್ಷಗಾನಕ್ಕೆ ತಾರಾಮೌಲ್ಯವನ್ನಿತ್ತ ಧೀಮ೦ತ ಕಲಾವಿದ, ೪೫ ವರ್ಷಗಳ ಕಾಲ ಮ೦ದಾರ್ತಿ ಮೇಳದಲ್ಲಿ ಪ್ರಧಾನ ವೇಷಧಾರಿಯಾಗಿ, ಮೇಳದ ಯಜಮಾನರಾಗಿ ದುಡಿಮೆ
|
ಪ್ರಶಸ್ತಿಗಳು:
- 1960ರಲ್ಲಿ ಸ೦ಗೀತ ನಾಟಕ ಅಕಾಡೆಮಿ ಪ್ರಶಸ್ತಿ
- ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ
|
ಮರಣ ದಿನಾ೦ಕ |
: |
1963 |
|
|