ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ನಂದಿದ ಯಕ್ಷರಂಗದ ಜ್ವಾಲೆ, ಮೋಹಕ ಸ್ತ್ರೀ ವೇಷಧಾರಿ ಅರಾಟೆ ಮಂಜುನಾಥ ವಿಧಿವಶ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಶುಕ್ರವಾರ, ಜನವರಿ 30 , 2015
ತನ್ನ ಜೀವಿತದಲ್ಲಿ ದೀರ್ಘಕಾಲ ಸಾಲಿಗ್ರಾಮ ಮೇಳವೊಂದರಲ್ಲೆ ಸೇವೆ ಸಲ್ಲಿಸಿ ಸುಮಾರು ಎಪ್ಪತ್ತು ಎಂಬತ್ತರ ದಶಕದಲ್ಲಿ ಇಂದಿಗೂ ಚಿರನೂತನವಾದ ಪದ್ಮಪಾಲಿ, ನಾಗಶ್ರೀ, ಕಾಂಚನಶ್ರೀ, ಶ್ರೀದೇವಿ ಬನಶಂಕರಿ, ರತಿರೇಖಾ, ಚೆಲುವೆ ಚಿತ್ರಾವತಿ, ಚೈತ್ರ ಪಲ್ಲವಿ, ವಸಂತಸೇನೆ ಮುಂತಾದ ಸಾಮಾಜಿಕ ಪ್ರಸಂಗಗಳಿಗೆ ಅನಿವಾರ್ಯ ಸ್ತ್ರೀ ವೇಷಧಾರಿಯಾಗಿದ್ದ ಮೋಹಕ ನಟ ಅರಾಟೆ ಮಂಜುನಾಥ ನಾಯ್ಕರು ಇನ್ನಿಲ್ಲ.

ಬಡಗುತಿಟ್ಟು ಯಕ್ಷಗಾನದ ಸ್ತ್ರೀವೇಷಧಾರಿಗಳಲ್ಲಿ ಅಗ್ರ ಪಂಕ್ತಿಯ ಹೆಸರು ಅರಾಟೆ ಮಂಜುನಾಥನವರದ್ದು. ಯಕ್ಷಗಾನದ ಇತಿಹಾಸದಲ್ಲಿ ಕಲಾವಿದನೊಬ್ಬ ಅದರಲ್ಲೂ ಸ್ತ್ರೀಪಾತ್ರದಾರಿಯೊಬ್ಬರು ಬಹು ಪ್ರಸಿದ್ದಿ ಪಡೆದು ಸಮಾಜದಲ್ಲಿ ಕಲಾವಿದರ ಗಡಣದಲ್ಲಿ ರಾಜಕೀಯ ರಂಗದಲ್ಲೂ ವಿಶಿಷ್ಟ ವ್ಯಕಿತ್ವದಿಂದ ಮೇರುಪಂಕ್ತಿಯಲ್ಲಿ ಗುರುತಿಸಿಕೊಂಡಿದ್ದು ‌ಅಪರೂಪದ ಸಾಧನೆ. ಯಕ್ಷಲೋಕದ ಮಾಯಾಂಗನೆ, ಮಿನುಗುತಾರೆ ‌ಎಂದು ಅಭಿಮಾನಿಗಳಿಂದ ಕರೆಸಿಕೊಂಡ ಇವರು ಪುಂಡುವೇಷಧಾರಿಯಾಗಿ, ಸ್ತ್ರೀ ವೇಷಧಾರಿಯಾಗಿ, ಮೇಳದ ಸಂಚಾಲಕನಾಗಿ, ಶ್ರೇಷ್ಟ ಸಂಘಟಕನಾಗಿ, ರಾಜ್ಯಾದ್ಯಂತ ದೂರದ ಬೆಂಗಳೂರು ಮುಂಬೈಗಳಲ್ಲಿ ತನ್ನದೇ ಆದ ಅಭಿಮಾನಿಗಳನ್ನು ಹುಟ್ಟುಹಾಕಿದವರು.

ಕರ್ನಾಟಕ ರಾಜ್ಯ ಪ್ರಶಸ್ತಿ, ಶಿರಿಯಾರ ಮಂಜುನಾಯ್ಕ್ ಪ್ರಶಸ್ತಿ , ಉಡುಪಿ ಯಕ್ಷಗಾನ ಕಲಾರಂಗದ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾಕ್ಷೇತ್ರದ ಪ್ರಶಸ್ತಿ, ಶ್ರೀ ಪೇಜಾವರ ಮಠದ ರಾಮ ವಿಠಲ ಪ್ರಶಸ್ತಿ, ಜಾನಪದ ಯಕ್ಷಗಾನ ಅಕಾಡೆಮಿ ಸದಸ್ಯತ್ವ ಸಹಿತ ಯಕ್ಷಗಾನ ಕಲಾವಿದರಲ್ಲೇ ಅತೀ ಹೆಚ್ಚು ಸನ್ಮಾನ ಪಡೆದವರಲ್ಲಿ ಒಬ್ಬರಾಗಿದ್ದಾರೆ. ಶ್ರೀ ಸಾಲಿಗ್ರಾಮ ಮೇಳದಲ್ಲಿ ಜಯಭೇರಿ ಪಡೆದ ಜ್ವಾಲಾ ಪ್ರಸಂಗದ ಅವರು ಅಭಿನಯಿಸಿದ ಛಲದಂಕ ಹೆಣ್ಣು ಜ್ವಾಲೆಯಂತೆ ನಿಜಜೀವನದಲ್ಲೂ ಬದುಕಿದ ಇಂತಹ ಮಹಾನ್ ಕಲಾವಿದ ಕಳೆದ ಏಳು ವರ್ಷದಿಂದ ಪಾರ್ಶ್ವ ವಾಯು ಪೀಡಿತರಾಗಿ ಮಾತನಾಡಲಾಗದೇ ನಡೆಯಲಾರದೇ ಮಂಚದಲ್ಲಿ ಒರಗಿ ಚಡಪಡಿಸುತಿದ್ದರು.

ಯಕ್ಷಗಾನ ಕಾರ್ಯಕ್ರಮವೊಂದರಲ್ಲಿ ಅವರ ನೆಚ್ಚಿನ ಪಾತ್ರವಾದ ಬೀಷ್ಮವಿಜಯದ ಅಂಬೆಯ ಪಾತ್ರದಲ್ಲಿ ಅಭಿನಯಿಸುತ್ತಿರುವಾಗಲೇ ಅಧಿಕ ರಕ್ತದೊತ್ತಡದಿಂದ ರಂಗದಲ್ಲಿ ಕುಸಿದವರು ಮತ್ತೆ ಇನ್ನೊಬ್ಬರ ಸಹಾಯವಿಲ್ಲದೇ ತನ್ನ ದೈನಂದಿನ ಕಾರ್ಯಗಳನ್ನು ಮಾಡಲಾಗದೇ ಆಕಾಶ ನೋಡುತ್ತಾ ಮೂಖ ರೋದನ ಮಾಡುತ್ತಿದ್ದ ಇವರು ಇ೦ದು ವಿಧಿವಶರಾದರು.

ಕುಂದಾಪುರ ತಾಲೂಕಿನ ಗುಲ್ವಾಡಿ ಸಮೀಪದ ಕರ್ಕಿ ರಾಮ ನಾಯ್ಕ ಮತ್ತು ಮಂಜಮ್ಮ ದಂಪತಿಯ ಜೇಷ್ಟ ಪುತ್ರನಾಗಿ 1942ರಲ್ಲಿ ಜನಿಸಿದ ಅರಾಟೆಯವರು ನಾಲ್ಕನೇ ತರಗತಿವರೆಗೆ ಅಭ್ಯಾಸಮಾಡಿ ಮಾರಣಕಟ್ಟೆ ಮೇಳದಲ್ಲಿ ಕೋಡಂಗಿಯಾಗಿ ಗೆಜ್ಜೆ ಕಟ್ಟಿದರು. ಬಾಲ ಗೋಪಾಲ, ಪೀಠಿಕಾ ಸ್ತ್ರೀವೇಷ, ಹೀಗೆ ಹಂತ ಹಂತವಾಗಿ ಮೇಲೇರಿದ ಇವರು ಮಟಪಾಡಿ ಶ್ರೀನಿವಾಸ ನಾಯ್ಕರಲ್ಲಿ ಶಿಷ್ಯರಾಗಿ ಸೇರಿಕೊಂಡು ಹೆಜ್ಜೆಗಾರಿಕೆ ಕಲಿತರು.

ಬಡಗುತಿಟ್ಟಿನಲ್ಲಿ ಆ ಕಾಲದಲ್ಲಿ ಪ್ರಬಲ ಸ್ಪರ್ಧಿಗಳಾಗಿ ಗುರುತಿಸಿಕೊಂಡ ಅರಾಟೆ ಮತ್ತು ವೈಕುಂಠ ಇವರಿಬ್ಬರು ಒಬ್ಬರಿಗೊಬ್ಬರು ಸರಿಮಿಗಿಲೆಣಿಸಿಕೊಂಡಿದ್ದರು. ಅರಾಟೆಯವರು ಪ್ರಬಲ ನೃತ್ಯಗಾರರೆಂದು ಗುರುತಿಸಿಕೊಳ್ಳಲಾಗದಿದ್ದರೂ ತನ್ನ ವೀರೋಚಿತ ಅಭಿನಯ, ವೇಗದ ಕುಣಿತದಿಂದ ಮದನಾಕ್ಷಿ, ಮೀನಾಕ್ಷಿ, ದ್ರೌಪದಿ ಮುಂತಾದ ವೇಷಗಳಲ್ಲಿ ಇನ್ನಿಲ್ಲದ ಯಶಸ್ಸು ಗಳಿಸಿದರು. ದಿ. ಹಾರಾಡಿ ನಾರಾಯಣ ಗಾಣಿಗ, ಕೊಕ್ಕರ್ಣೆ ನರಸಿಂಹ ಕಾಮತ್, ಕೊಳ್ಕೆಬೈಲು ಶೀನ ನಾಯ್ಕ್, ಮಾರ್ಗೋಳಿ ಗೋವಿಂದ ಸೇರೆಗಾರ್, ನೀಲಾವರ ಸುಬ್ಬಣ್ಣ ಶೆಟ್ಟಿ, ಹೆರಂಜಾಲು ವೆಂಕಟರಮಣ, ವಂಡ್ಸೆ ನಾರಾಯಣ ಗಾಣಿಗರಂತ ಸ್ತ್ರೀವೇಷಧಾರಿಗಳು ವಯೋ ಸಹಜದಿಂದ ನೇಪತ್ಯಕ್ಕೆ ಸರಿದಾಗ ಬಡಗುತಿಟ್ಟು ರಂಗಸ್ಥಳಕ್ಕೆ ಸ್ತ್ರೀವೇಷದಲ್ಲಿ ಆಶಾಕಿರಣವಾದವರು ಕೋಟ ವೈಕುಂಠ ಮತ್ತು ಅರಾಟೆ ಮಂಜುನಾಥ ಎಂಬ ಹೆಗ್ಗಳಿಕೆಗೆ ಪಾತ್ರವಾದವರಿವರು.

ಮಾರಣಕಟ್ಟೆ ಮೇಳದಲ್ಲಿ ಗುರು ವೀರಭದ್ರ ನಾಯಕರ ಒಡನಾಟದಲ್ಲಿ ಪರಿಪೂರ್ಣ ಸ್ತ್ರೀವೇಶದಾರಿಯಾಗಿ ಮೂಡಿಬಂದ ಇವರ ಶ್ವೇತ ಕುಮಾರ ಚರಿತ್ರೆಯ ತ್ರಿಲೋಕ ಸುಂದರಿ, ಮೊಳಹಳ್ಳಿ ಹೆರಿಯನವರ ಶ್ವೇತಕುಮಾರ, ಉಡುಪಿ ಬಸವನವರ ಯಮ, ವಂಡ್ಸೆ ನಾರಾಯಣ ಗಾಣಿಗರ ಶಿವೆ ಬಹು ಖ್ಯಾತಿ ಗಳಿಸಿತ್ತು. ಬಳಿಕ ಮರವಂತೆ ನರಸಿಂಹ ದಾಸರೊಂದಿಗೆ ತೆಂಕಿನ ರಾಜ ರಾಜೇಶ್ವರಿ ಮೇಳದಲ್ಲಿ ಸೇವೆ ಸಲ್ಲಿಸಿದರು. ಬಳಿಕ ಕೊಲ್ಲೂರು, ಮಂದಾರ್ತಿ, ಇಡಗುಂಜಿ, ಕುಂಡಾವು, ಸುರತ್ಕಲ್, ಮೂಲ್ಕಿ ಮೇಳಗಳಲ್ಲಿ 40 ವರ್ಷ ಸೇವೆ ಸಲ್ಲಿಸಿದ್ದರು.

ಸಾಲಿಗ್ರಾಮ ಮೇಳ ಮತ್ತು ಅರಾಟೆಯವರಿಗೂ ಅವಿನಾಭಾವ ಸ೦ಬ೦ಧ. ಅವರ ದೀರ್ಘಕಾಲದ ಸೇವೆ ಶ್ರೀ ಸಾಲಿಗ್ರಾಮ ಮೇಳದಲ್ಲಿ. ಅಂದಿನ ಯಜಮಾನರಾದ ಪಳ್ಳಿ ಸೋಮನಾಥ ಹೆಗ್ಡೆಯವರ ನೆಚ್ಚಿನ ಕಲಾವಿದರಾದ ಅವರು ಮೇಳ ದೂರದ ಮುಂಬೈಗೆ ಮಳೆಗಾಲ ಪ್ರಯಾಣ ಬಳಸುವಲ್ಲಿ ಮುಂಚೂಣಿಯಲ್ಲಿದ್ದು ಅಲ್ಲಿನ ಸಂಚಾಲಕತ್ವವನ್ನೂ ವಹಿಸಿಕೊಂಡಿದ್ದರು.

ಪತ್ನಿ ಜಲಜಾಕ್ಷಿ ಮತ್ತು ಮೂವರು ಮಕ್ಕಳು ಹಾಗೂ ಅಪಾರ ಕಲಾಭಿಮಾನಿಗಳನ್ನಗಲಿದ ಶ್ರೀಯುತರ ಆತ್ಮಕ್ಕೆ ಚಿರಶಾ೦ತಿ ಲಭಿಸಲೆ೦ದು ನಾವೆಲ್ಲರೂ ಪ್ರಾರ್ಥಿಸೋಣ.


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Girish(2/1/2015)
Very reasonable and appropriate comment Uday. All yakshagana lovers will never for get the performance of Arrate May his soul rest in peace.
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ