ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ನೇಪಥ್ಯಕ್ಕೆ ಸರಿದ ತೆಂಕು-ಬಡಗುತಿಟ್ಟುಗಳ ಸವ್ಯಸಾಚಿ ಕಲಾವಿದ ಉದ್ಯಾವರ ಜಯಕುಮಾರ್

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಮ೦ಗಳವಾರ, ಫೆಬ್ರವರಿ 24 , 2015

ಯಕ್ಷಗಾನದ ತೆಂಕು ಬಡಗುತಿಟ್ಟುಗಳ ಸವ್ಯಸಾಚಿ ಸ್ತ್ರೀ ವೇಷಧಾರಿ, ಯಕ್ಷಗಾನಕ್ಕೆ ಗಣನೀಯ ಕೊಡುಗೆ ನೀಡಿದ ಹಾರಾಡಿ ಮತ್ತು ಉದ್ಯಾವರ ಗಾಣಿಗ ಕುಟುಂಬದ ಪ್ರಾತಿನಿಧಿಕ ಕಲಾವಿದ ದೀರ್ಘಕಾಲ ಶ್ರೀ ಕ್ಷೇತ್ರ ದರ್ಮಸ್ಥಳ ಮೇಳವೊಂದರಲ್ಲೇ ತಿರುಗಾಟ ಮಾಡಿದ ಹಿರಿಯ ಕಲಾವಿದ ಉದ್ಯಾವರ ಜಯಕುಮಾರ ಗಾಣಿಗರು ತೀವ್ರ ಅನಾರೋಗ್ಯದಿಂದ ನೇಪಥ್ಯಕ್ಕೆ ಸರಿದಿದ್ದಾರೆ. ತೀವ್ರವಾದ ಕಾಯಿಲೆಯಿಂದ ಬಳಲುತ್ತಿರುವ ಅವರಿಗೆ ಸಂಘ ಸಂಸ್ಥೆಗಳ ಸಹಕಾರ ಸಾಂತ್ವನ ತುರ್ತಾಗಿ ಬೇಕಾಗಿದೆ.

ಕುಷ್ಟ ಗಾಣಿಗರ ಮನೆತನದ ಕುಡಿ

ಬಡಗುತಿಟ್ಟಿನ ದಂತಕಥೆ ಹಾರಾಡಿ ಮನೆತನದ ಕುಷ್ಟ ಗಾಣಿಗರ 37 ಮಂದಿ ಮೊಮ್ಮಕ್ಕಳಲ್ಲಿ ಹಿರಿಯವರಾದ ಇವರೊಬ್ಬರೇ ಯಕ್ಷಗಾನ ರಂಗವನ್ನು ಆರಿಸಿಕೊಂಡವರು. ಜೋಡು ಮುಂಡಾಸು ಖ್ಯಾತಿಯ, ಸ್ತ್ರೀಪಾತ್ರ ಪುರುಷಪಾತ್ರಗಳಲ್ಲಿ ಸೈ ಎಣಿಸಿಕೊಂಡ, ಸುರತ್ಕಲ್ ಮೇಳದ ಯಜಮಾನರ ಪ್ರತಿನಿಧಿಯಾಗಿ ಮೇಳದ ಆಗು ಹೋಗುಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸವ್ಯಸಾಚಿ ಕಲಾವಿದ, ಸುಮಾರು ಐದು ದಶಕಗಳ ಕಾಲ ಕಲಾಸೇವೆಗೈದ ಉದ್ಯಾವರ ಬಸವ ಗಾಣಿಗರು ಜಯಕುಮಾರರ ತಂದೆ.

ಆರಂಭದಲ್ಲಿ ಕಾಲಿಗೆ ಗೆಜ್ಜೆಕಟ್ಟಿ ಬಾಯ್ತುಂಬ ಹರಸಿದವರು ಇವರ ಮಾವ ಖ್ಯಾತ ಮದ್ದಳೆವಾದಕ ಮಂದಾರ್ತಿ ಸಮೀಪದ ಸುರ್ಗಿಕಟ್ಟೆ ಬಸವ ಗಾಣಿಗರು. ಈ ತುಂಬು ಯಕ್ಷಗಾನ ಹಿನ್ನಲೆಯಿಂದ ಬಂದ ಜಯಕುಮಾರರನ್ನು ಯಕ್ಷಗಾನ ರಂಗ ಕೈಬೀಸಿ ಕರೆದದ್ದು ವಿಶೇಷವಲ್ಲ.

ಬಾಲ್ಯ, ಶಿಕ್ಷಣ, ಯಕ್ಷಗಾನ ಪಾದಾರ್ಪಣೆ

ಉಡುಪಿ ತಾಲೂಕಿನ ಹರಾಡಿಯಲ್ಲಿ ಉದ್ಯಾವರ ಬಸವ ಗಾಣಿಗ ಮತ್ತು ಹರಾಡಿ ಲಕ್ಷ್ಮಿಯವರ ಪುತ್ರನಾಗಿ ಜನಿಸಿದ ಜಯಕುಮಾರರು ಏಳನೇ ತರಗತಿ ಓದುತ್ತಿರುವಾಗಲೇ ಹರಾಡಿ ಮನೆಯನದ ರಾಮಗಾಣಿಗರು ಕುಷ್ಟ ಗಾಣಿಗರು ನಾರಾಯಣ ಗಾಣಿಗರು ಮಹಾಬಲ ಗಾಣಿಗರಂತವರು ಮಂದಾರ್ತಿ ಮೇಳದಲ್ಲಿ ಮೆರೆಯುತ್ತಿರುವುದನ್ನು ಕಂಡವರು.

ಇವರೆಲ್ಲರಿಂದ ಪ್ರೇರೇಪಿತರಾದ ಇವರು ಗುರು ವೀರಭದ್ರ ನಾಯಕರಿಂದ ಬಡಗುತಿಟ್ಟಿನ ಹೆಜ್ಜೆಗಾರಿಕೆಯನ್ನೂ, ಧರ್ಮಸ್ಥಳ ಕೇಂದ್ರದಿಂದ ಕುರಿಯ ವಿಠಲಶಾಸ್ತ್ರಿ ಮತ್ತು ಪಡ್ರೆ ಚಂದು ಅವರಿಂದ ತೆಂಕುತಿಟ್ಟು ಹೆಜ್ಜೆಗಾರಿಕೆ ಕಲಿತು, ತಂದೆ ಬಸವಗಾಣಿಗರು ಸೇವೆ ಸಲ್ಲಿಸುತಿದ್ದ ವರದರಾಯ ಪೈಗಳ ಯಜಮಾನಿಕೆಯ ಸುರತ್ಕಲ್ ಮೇಳದಲ್ಲಿ ಗೆಜ್ಜೆ ಕಟ್ಟಿದರು.

ಧರ್ಮಸ್ಥಳ ಮೇಳದಲ್ಲಿ ಸುಧೀರ್ಘ ಸೇವೆ

ನಂತರ ತೆಂಕುತಿಟ್ಟಿನ ಪ್ರಸಿದ್ದ ಮೇಳ ಮೇರು ಕಲಾವಿದರಿದ್ದ ಧರ್ಮಸ್ಥಳ ಮೇಳಕ್ಕೆ ಸೇರ್ಪಡೆಗೊಂಡರು, ಕುಂಬ್ಳೆ ಸುಂದರ ರಾವ್, ಕೆ. ಗೋವಿಂದಭಟ್, ಎಂಪೆಕಟ್ಟೆ ರಾಮಯ್ಯ ರೈ, ಪುತ್ತೂರು ನಾರಾಯಣ ಹೆಗಡೆ, ಕುಂಭ್ಳೆ ಶ್ರೀದರ ರಾವ್, ಕಡತೋಕ ಮಂಜುನಾಥ ಬಾಗವತರು ಚಿಪ್ಪಾರು ಕ್ರಷ್ಣಯ್ಯ ಬಲ್ಲಾಳ್ ಮುಂತಾದ ಘಟಾನುಘಟಿ ಕಲಾವಿದರಿದ್ದ ದರ್ಮಸ್ಥಳ ಮೇಳದಲ್ಲಿ 30 ವರ್ಷ ದೀರ್ಘ ಕಾಲ ಕಲಾಸೇವೆ ಗೈದರು. ಇದಕ್ಕೆ ಪೂಜ್ಯ ಹೆಗ್ಗಡೆಯವರ ಪ್ರೀತಿ ಮತ್ತು ಮಂಜುನಾಥ ಬಾಗವತರ ಸಹಕಾರವೇ ಕಾರಣವೆಂದು ಅವರನ್ನು ಕೃತಜ್ಞತೆಯಿಂದ ನೆನೆಯುತ್ತಾರೆ.

ಉದ್ಯಾವರ ಜಯಕುಮಾರ್
ಜನನ : 1952
ಜನನ ಸ್ಥಳ : ಹಾರಾಡಿ, ಕುಂದಾಪುರ ತಾಲೂಕು
ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ
ಕಲಾಸೇವೆ:
ಅಪ್ರತಿಮ ಸ್ತ್ರೀವೇಷಧಾರಿಯಾಗಿ 41 ವರ್ಷಗಳ ಕಾಲ ದರ್ಮಸ್ಥಳ, ಸುರತ್ಕಲ್, ಎಡನೀರು, ಕದ್ರಿ, ಅಲ್ಲದೇ ಬಡಗಿನ ಸಾಲಿಗ್ರಾಮ, ಮಾರಣಕಟ್ಟೆ, ಸೌಕೂರು ಮೇಳಗಳಲ್ಲಿ ಕಲಾಸೇವೆ.
ಪ್ರಶಸ್ತಿಗಳು:
  • 2015- ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ
  • ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ ಹಾಗೂ ಪ್ರಶಸ್ತಿಗಳು
ತೀವ್ರ ಅನಾರೋಗ್ಯದಿಂದ ಮೇಳ ಬಿಡುವ ಕಾಲದಲ್ಲೂ ಪೂಜ್ಯ ಹೆಗ್ಗಡೆಯವರು ನನ್ನ ಕೈಬಿಡಲಿಲ್ಲ ಎಂಬುದು ಅವರ ಮನದಾಳದ ಮಾತು. ದೀರ್ಘಕಾಲ ಪ್ರಧಾನ ಸ್ತ್ರೀ ವೇಷಧಾರಿಯಾಗಿ ದರ್ಮಸ್ಥಳ ಮೇಳದಲ್ಲಿ ಅವರು ನಿರ್ವಹಿಸುತಿದ್ದ ಕ್ಷೇತ್ರ ಮಹಾತ್ಮೆಯ ಅಮ್ಮುದೇವಿ, ಮಾಲತಿ, ದಕ್ಷಯಜ್ಞದ ದಾಕ್ಷಾಯಣಿ, ಶ್ರೀದೇವಿ, ಕಯಾದು, ಸೀತೆ, ಶಶಿಪ್ರಭೆ, ದಮಯಂತಿ, ಗುಣಸುಂದರಿ ಮುಂತಾದ ಪಾತ್ರಗಳು ಅಪಾರ ಜನಮನ್ನಣೆ ಪಡೆದಿದ್ದವು. ಕುಂಬ್ಳೆ ಸುಂದರ ರಾಯರ ಈಶ್ವರ ಗೋವಿಂದ ಭಟ್ಟರ ದಕ್ಷನ ಪಾತ್ರಕ್ಕೆ ಇವರ ದಾಕ್ಷಾಯಣಿಯ ಪಾತ್ರ ಪ್ರೇಕ್ಷಕರು ಬಹುಕಾಲ ನೆನಪಿಸಿಕೊಳ್ಳುವಂತಹುದಾಗಿತ್ತು.

ತೆ೦ಕು, ಬಡಗು ಎರಡೂ ತಿಟ್ಟುಗಳಿಗೂ ಸೈ

ಸುಮಾರು 41 ವರ್ಷಗಳ ಕಾಲ ದರ್ಮಸ್ಥಳ, ಸುರತ್ಕಲ್, ಎಡನೀರು, ಕದ್ರಿ, ಅಲ್ಲದೇ ಬಡಗಿನ ಸಾಲಿಗ್ರಾಮ, ಮಾರಣಕಟ್ಟೆ, ಸೌಕೂರು ಮೇಳಗಳಲ್ಲಿ ಸೇವೆ ಸಲ್ಲಿಸಿ ಅನಾರೋಗ್ಯದಿಂದ ನಿವೃತ್ತರಾದ ಜಯಕುಮಾರರು, ತೆಂಕು ಬಡಗುತಿಟ್ಟುಗಳ ಅಗ್ರಮಾನ್ಯ ಕಲಾವಿದರ ಒಡನಾಟ, ಅತಿ ಎಣಿಸದ ಸಂಪ್ರದಾಯಬದ್ದ ಪರೀಷ್ಕ್ರತವಾದ ಮಾತುಗಾರಿಕೆ, ಯಾವ ವೇಷಕ್ಕೂ ಹೊಂದುವ ಆಳಂಗ, ಸ್ತ್ರೀ ಸಹಜ ಒಣಪು ವಯ್ಯಾರ, ಅವಶ್ಯವಿದ್ದಾಗ ಯಾವುದೇ ವೇಷಕ್ಕೆ ಸೈ ಎಣಿಸಿ ಮೇಳವೊಂದಕ್ಕೆ ಅತ್ಯುಪಯುಕ್ತ ಕಲಾವಿದರಾಗಿದ್ದರು.

ಕಷ್ಟಕಾಲದಲ್ಲಿ ಹೆಗ್ಗಡೆಯವರ ನೆರವು

ಕಾಯಿಲೆ ಬಿದ್ದಾಗ ಚೈತನ್ಯ ತುಂಬಿ ಹರಸಿದ ಪೂಜ್ಯ ಹೆಗ್ಗಡೆಯವರು ದರ್ಮಸ್ಥಳದಿಂದ ಆರ್ಥಿಕ ನೆರವು ನೀಡುತಿದ್ದಾರೆ. ಮೇಳದ ಸಂಚಾಲಕರಾಗಿದ್ದ ಹರ್ಷೇಂದ್ರ ಕುಮಾರರು ದೈರ್ಯತುಂಬಿ ಆಶೀರ್ವಾದ ಮಾಡಿದ್ದಾರೆ ಎಂದು ಕ್ಷೇತ್ರವನ್ನು ಸ್ಮರಿಸುವ ಗಾಣಿಗರು ತನ್ನ 63ನೇ ವಯಸ್ಸಿನಲ್ಲಿ ಪತ್ನಿ ಸುರಗಿಕಟ್ಟೆ ಬಸವಗಾಣಿಗರ ಪುತ್ರಿ ವಾರಿಜ ಮೂವರು ಮಕ್ಕಳೊಂದಿಗೆ ಉದ್ಯಾವರದಲ್ಲಿ ಚೇತರಿಸಿಕೊಳ್ಳುತಿದ್ದಾರೆ. ಅವರಿಗೆ ಈ ಸಾಲಿನ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಅವರು ಶೀಘ್ರ ಗುಣಮುಖರಾಗಿ ಗೆಜ್ಜೆ ನಾದ ಹರಿಸಲಿ ಎಂದು ಹಾರೈಸೋಣ.

****************





Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Guruprasad(4/27/2016)
GOOD INFORMATION SIR....




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ