ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ವೈವಿಧ್ಯಪೂರ್ಣ ನುಡಿತಗಳ ಅಪ್ರತಿಮ ಚೆ೦ಡೆವಾದಕ ಇಡಗುಂಜಿ ಕೃಷ್ಣ ಯಾಜಿ

ಲೇಖಕರು : ರಾಜೇಶ್
ಭಾನುವಾರ, ಮಾರ್ಚ್ 15 , 2015

ವೇಷಧಾರಿಯಾಗಿ ಯಕ್ಷ ರಂಗಕ್ಕೆ ಕಾಲಿಟ್ಟ ಇಡಗುಂಜಿ ಕೃಷ್ಣ ಯಾಜಿ ನಂತರದಲ್ಲಿ ಹೆಸರು ಮಾಡಿದ್ದು ಚೆಂಡೆ ವಾದಕರಾಗಿ. 40 ವರ್ಷಗಳಿಂದ ಚೆಂಡೆ ವಾದಕರಾಗಿದ್ದರೂ ‘ಸಾಧನೆ ಸಾಲದು’ ಎಂಬ ಭಾವ ಅವರದು.

ವೇಷದಾರಿಯಾಗಿ ಪ್ರವೇಶ

ಯಕ್ಷ ರಂಗವನ್ನು ಪ್ರವೇಶಿಸಿದ್ದು ವೇಷಧಾರಿಯಾಗಿ. ಶುರುವಾದದ್ದು ಕೋಡಂಗಿ, ಬಾಲಗೋಪಾಲ, ಪೀಠಿಕಾ ಸ್ತ್ರೀ ವೇಷದಿಂದ. ನಂತರ ಸುಬ್ರಹ್ಮಣ್ಯ, ಚಂದ್ರಹಾಸ, ಅಭಿಮನ್ಯು, ಅರ್ಜುನ ಮುಂತಾದ ವೇಷಗಳು ಬರಲಾರಂಭಿಸಿದವು. ಇದ್ದಕ್ಕಿದ್ದಂತೆ ತಿರುವು ಪಡೆದ ಕಲಾಜೀವನ ಅವರನ್ನು ಬಡಗುತಿಟ್ಟಿನ ಖ್ಯಾತ ಚೆಂಡೆ ವಾದಕರನ್ನಾಗಿ ರೂಪಿಸಿತು.

ಮನಸೆಳೆದ ಮದ್ದಲೆ ವಾದನ

ಹೊನ್ನಾವರ ತಾಲೂಕಿನ ಇಡಗುಂಜಿಯ ಕೃಷ್ಣ ಯಾಜಿ ಅವರದು ಐದು ದಶಕಗಳಿಂದ ಯಕ್ಷಗಾನ ಕಲಾಸೇವೆ. ಕಲಾವಿದನಾಗಿ ಹೆಸರು ಪಡೆಯುತ್ತಿದ್ದ ಕಾಲದಲ್ಲಿಯೇ ಖ್ಯಾತ ಮದ್ದಲೆ ವಾದಕ ಕಿನ್ನೀರು ನಾರಾಯಣ ಹೆಗ್ಡೆ ಅವರ ಮದ್ದಲೆ ವಾದನ ಇವರನ್ನು ಸೆಳೆಯಿತು. ಅವರ ಬಳಿ ಮದ್ದಲೆ ಅಭ್ಯಾಸ. ನಂತರ ಗುಂಡ್ಮಿ ರಾಮಚಂದ್ರ ನಾವಡರಲ್ಲಿ ಚೆಂಡೆ ಹಾಗೂ ಮದ್ದಲೆ ವಾದನದಲ್ಲಿ ವಿಶೇಷ ತರಬೇತಿ. ಆ ನಂತರ ಅವರ ಕಾರ್ಯ ಏನಿದ್ದರೂ ಕುಣಿಯುವುದಲ್ಲ, ಕುಣಿಸುವುದು.

ವಿವಿದ ಮೇಳಗಳಲ್ಲಿ

ನಾಲ್ಕು ದಶಕಗಳಿಂದ ಚೆಂಡೆ ವಾದನದಲ್ಲಿ ಕೃಷ್ಣ ಯಾಜಿ ದೊಡ್ಡ ಹೆಸರು. ಚೆಂಡೆಯೊಂದಿಗೆ ಮಾತನಾಡುವ ಕಲಾ ನೈಪುಣ್ಯ ಅವರಿಗೆ ದಕ್ಕಿದೆ. ನಯ ನಾಜೂಕಿನ ವೈವಿಧ್ಯಪೂರ್ಣ ನುಡಿತಗಳು ಸಿದ್ಧಿಸಿವೆ. ಸಂದರ್ಭಾನುಸಾರವಾಗಿ ಅಬ್ಬರದ ಭೋರ್ಗರೆತ, ಮರುಕ್ಷಣ ಕಲ್ಪನೆಗೂ ನಿಲುಕದ ನಾದಸುಧೆಯ ಪ್ರದರ್ಶನ ಇವರ ಸಾಧನೆಗೆ ಸಾಕ್ಷಿ. ತೆಂಕು ತಿಟ್ಟಿನ ಚೆಂಡೆ ವಾದನದಲ್ಲೂ ಇವರದು ನುರಿತ ಕೈ.

ಇಡಗುಂಜಿ, ಕರ್ಕಿ ಹಾಸ್ಯಗಾರ, ಕಮಲಶಿಲೆ, ಸಾಲಿಗ್ರಾಮ, ಅಮೃತೇಶ್ವರಿ, ಮೂಲ್ಕಿ, ಗುಂಡಬಾಳ ಮೇಳಗಳಲ್ಲಿ ಕೃಷ್ಣ ಯಾಜಿ ಸೇವೆ ಸಲ್ಲಿಸಿದ್ದಾರೆ. ಉಮಾಮಹೇಶ್ವರಿ ಕಲಾವರ್ಧಕ ಸಂಘದ ತಾಳಮದ್ದಲೆ ಕೂಟದಲ್ಲಿ ಪ್ರಧಾನ ಮದ್ದಲೆ ವಾದಕರಾಗಿ, ಶ್ರೀಮಯ ಕಲಾಕೇಂದ್ರ ಗುಣವಂತೆ, ದೇವರು ಹೆಗಡೆ ಯಕ್ಷಗಾನ ಶಾಲೆ ಮುರೂರು ಇಲ್ಲಿ ಯಕ್ಷಗಾನ ಗುರುವಾಗಿ ಇವರು 12-13 ವರ್ಷ ಕಾಲ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ತರಬೇತಿ ನೀಡಿದ್ದಾರೆ.

ಇತ್ತೀಚಿನ ಆವಿಷ್ಕಾರವಾದ ಶತಾವಧಾನಿ ಡಾ.ಆರ್. ಗಣೇಶ್ ಅವರ ನಿರ್ದೇಶನದ ಭಾಮಿನಿ ಹಾಗೂ ಕೃಷ್ಣಾರ್ಪಣ ಕಾರ್ಯಕ್ರಮಗಳಿಗೆ ಚೆಂಡೆವಾದನದ ವಿಶೇಷ ಛಾಪು ಮೂಡಿಸಿದ ಹಿರಿಮೆ ಕೃಷ್ಣ ಯಾಜಿ ಅವರದು. ಗೋಪಾಲಕೃಷ್ಣ ಹೆಗಡೆ ನೇತೃತ್ವದ ‘ಲಯಲಾಸ್ಯ’ ಕಾರ್ಯಕ್ರಮದಲ್ಲಿ ತಬಲಾ ಮತ್ತು ಮೃದಂಗಗಳೊಂದಿಗೆ ಚೆಂಡೆವಾದನದ ವಿಭಿನ್ನ ಆಯಾಮ, ಪಟ್ಟು ಮತ್ತು ಪೆಟ್ಟುಗಳ ಪ್ರದರ್ಶನ ನೀಡಿದ್ದು ಮಹತ್ವಪೂರ್ಣವೆನಿಸಿದೆ.

ವಿಶ್ವದೆಲ್ಲೆಡೆ ಚೆಂಡೆಯ ಮಾರ್ದನಿ

ಯಕ್ಷಗಾನಕ್ಕಷ್ಟೇ ಸೀಮಿತವಾದ ಚೆಂಡೆಯನ್ನು ನಾಟಕರಂಗಕ್ಕೂ ವಿಸ್ತರಿಸುವ ಮೂಲಕ ಹೊಸ ಪ್ರೇಕ್ಷಕರನ್ನು ಕೃಷ್ಣ ಯಾಜಿ ತಲುಪಿದ್ದಾರೆ. ದೆಹಲಿ, ಮುಂಬಯಿ, ಕೋಲ್ಕತ್ತಾ, ಅಮೃತಸರ, ತ್ರಿವೇಂಡ್ರಂ, ಭೋಪಾಲ್, ಝಾನ್ಸಿ, ಬೆಂಗಳೂರು ಮುಂತಾದೆಡೆ ಕಾರ್ಯಕ್ರಮ ನೀಡಿರುವ ಇವರು ವಿದೇಶಗಳಲ್ಲಿಯೂ ಚೆಂಡೆಯ ಸದ್ದು ಮೊಳಗಿಸಿದ್ದಾರೆ.

ಇಡಗುಂಜಿ ಕೃಷ್ಣ ಯಾಜಿ
ಜನನ : -
ಜನನ ಸ್ಥಳ : ಇಡಗುಂಜಿ, ಹೊನ್ನಾವರ ತಾಲೂಕು
ಉತ್ತರ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
ಕಲಾಸೇವೆ:
ಮದ್ದಲೆ ಹಾಗೂ ಚೆಂಡೆ ವಾದನಗಳೆರಡರಲ್ಲೂ ಅತ್ಯುನ್ನತ ಕಲಾವಿದ, ಇಡಗುಂಜಿ, ಕರ್ಕಿ ಹಾಸ್ಯಗಾರ, ಕಮಲಶಿಲೆ, ಸಾಲಿಗ್ರಾಮ, ಅಮೃತೇಶ್ವರಿ, ಮೂಲ್ಕಿ, ಗುಂಡಬಾಳ ಮೇಳಗಳಲ್ಲಿ ಸೇವೆ.

ಪ್ರಶಸ್ತಿ, ಪುರಸ್ಕಾರಗಳು :
  • ಕರ್ನಾಟಕ ರಾಜ್ಯ ಸಂಗೀತ ಅಕಾಡೆಮಿ ಪ್ರಶಸ್ತಿ
  • ಕಿನ್ನೀರು ನಾರಾಯಣ ಹೆಗ್ಡೆ ಪ್ರತಿಷ್ಠಾನದ ಪ್ರಶಸ್ತಿ
  • 2011ರಲ್ಲಿ ಉಡುಪಿ ಕಲಾಕೇಂದ್ರದಿಂದ ಭಾಗವತ ನಾರಾಯಣಪ್ಪ ಉಪ್ಪೂರ ಪ್ರಶಸ್ತಿ
  • 2012ರಲ್ಲಿ ಕಾಶ್ಶಪ ಪ್ರತಿಷ್ಠಾನ ಪ್ರಶಸ್ತಿ
  • ಕಿದ್ಯಾ ಸಂಸ್ಕೃತಿ ಟ್ರಸ್ಟ್ ಗಡಿಗೆಹೊಳೆ ಪ್ರಶಸ್ತಿ
  • ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನಗಳು
ಲಂಡನ್, ಸ್ಪೇನ್, ಫ್ರಾನ್ಸ್, ಚೀನಾ, ನೇಪಾಳ, ಬರ್ಮಾ, ಲಾಹೋತ್ಸೆ, ಮಲೇಶಿಯಾ, ಸಿಂಗಾಪುರ, ಫಿಲಿಪ್ಪೀನ್ಸ್ ರಾಷ್ಟ್ರಗಳಿಗೆ ಇವರು ಇಡಗುಂಜಿ ಮೇಳದೊಂದಿಗೆ ತೆರಳಿದ್ದರು.

ಪ್ರಶಸ್ತಿ ಗೌರವಗಳು

ಕಿನ್ನೀರು ನಾರಾಯಣ ಹೆಗ್ಡೆ ಪ್ರತಿಷ್ಠಾನದ ಪ್ರಶಸ್ತಿಯಲ್ಲಿ ಮೊದಲಿಗರಾದ ಇವರು, 2011ರಲ್ಲಿ ಉಡುಪಿ ಕಲಾಕೇಂದ್ರದಿಂದ ಭಾಗವತ ನಾರಾಯಣಪ್ಪ ಉಪ್ಪೂರ ಪ್ರಶಸ್ತಿ, 2012ರಲ್ಲಿ ಕಾಶ್ಶಪ ಪ್ರತಿಷ್ಠಾನ, ವಿದ್ಯಾ ಸಂಸ್ಕೃತಿ ಟ್ರಸ್ಟ್ ಗಡಿಗೆಹೊಳೆ ಮತ್ತು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಮೊದಲಾದ ಯಕ್ಷರಂಗದ ಸಾಧಕರಿಗೆ ನೀಡುವ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಮದ್ದಲೆ ಹಾಗೂ ಚೆಂಡೆ ವಾದನಗಳೆರಡರಲ್ಲೂ ಅತ್ಯುನ್ನತ ಕಲಾವಿದರಾದರೂ ‘ಸಾಧನೆ ಸಾಲದು’ ಎಂಬ ಮನೋಭಾವ; ವಿನಯ ಮತ್ತು ಶಿಸ್ತು ಜೀವನದ ಜೀವಾಳವಾಗಿರಬೇಕೆಂಬ ಸಂಕಲ್ಪ; ಸೋಲೊಪ್ಪದ ಸಂಯಮದ ಬದುಕು ಇವರದು. ಯಕ್ಷಗಾನ ಕಲೆಗಾಗಿ ಜೀವ ತೇಯುತ್ತಿರುವ ಯಾಜಿಯವರರಿಗೆ ಕಲೆಯೇ ಕಾಯಕ, ಯಕ್ಷಗಾನವೇ ಅನ್ನದ ದಿಕ್ಕು- ಬದುಕಿನ ದಾರಿ.



****************

ಇಡಗುಂಜಿ ಕೃಷ್ಣ ಯಾಜಿಯವರ ಕೆಲವು ದೃಶ್ಯಾವಳಿಗಳು







****************




ಕೃಪೆ : http://kn.wikipedia.org


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Prasanna Bhat Balkal (3/18/2015)
Stree veshada padyagaligoo chande nudisi sai enisikolluva adbhuta kalavidaru intavara ottige Vijaya Vilaasa emba yugala yakshaganadalli tumba program ge bhagavahisida yoga nannadu
Ram Hegde Keremane.(3/15/2015)
ಶ್ರೀ ಕೃಷ್ಣ ಯಾಜಿ ಇಡಗುಂಜಿ,ಓರ್ವ ಅಪರೂಪದ,ಆದರ್ಶಪ್ರಾಯರಾದ ಕಲಾವಿದರು.ಚಂಡೆ-ವಾದನದಲ್ಲಿ ಅಪ್ರತಿಮರು ಹೇಗೋ,ಮದ್ದಲೆಯ ವಾದನದಲ್ಲಿಯೂ ಶ್ರೇಷ್ಠರೇ.ಡಾ.ಕೆರೆಮನೆ ಮಹಾಬಲ ಹೆಗಡೆಯವರ ವಾರ್ಷಿಕ ಸಂಸ್ಮರಣೆ-5 ರ ಸಂದರ್ಭದಲ್ಲಿ(ದಿನಾಂಕ 29-10-2014ರಂದು),ನಮ್ಮ ಪ್ರತಿಷ್ಠಾನದ ಆಟದಲ್ಲಿ ಅವರು ಭಾಗವಹಿಸಿ ತಮ್ಮ ಚಂಡೆವಾದನದ ನೈಪುಣ್ಯತೆಯನ್ನು ಪ್ರದರ್ಶಿಸಿದ್ದರು.ಮೇಲಿನ ವಿಡಿಯೋಕ್ಲಿಪ್ ನಲ್ಲಿ, ಆ ಸಂದರ್ಭದ ಅವರ ಚಂಡೆವಾದನ ಅದು.ತುಂಬಾ ಸಂತೋಷವಾಯಿತು,ಅವರ ಕುರಿತ ಲೇಖನವನ್ನು ನೋಡಿ.
Ram Hegde Keremane(3/15/2015)
ಶ್ರೀ ಕೃಷ್ಣ ಯಾಜಿಯವರು,ಅಪ್ರತಿಮ ಚಂಡೆವಾದಕರು,ಚಂಡೆವಾದನದ ಮರ್ಮವನ್ನು ಚೆನ್ನಾಗಿ ತಿಳಿದುಕೊಂಡವರು.ಖಂಡಿತವಾಗಿಯೂ ಅನೇಕ ಬಗೆಯ ವೈವಿಧ್ಯಮಯ ನುಡಿತಗಳನ್ನು,ಸಮಯಸ್ಫೂರ್ತಿಯಿಂದಲೇ ಹುಟ್ಟಿಸಬಲ್ಲವರು.ಸ್ನೇಹಜೀವಿ,ಸುಸಂಸ್ಕೃತ,ನಿಗರ್ವಿ.ಮದ್ದಲೆವಾದನದಲ್ಲಿಯೂ ಅವರು ಅಪ್ರತಿಮರೇ.




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ