ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಗ೦ಧರ್ವ ಗಾಯಕ ಪದ್ಯಾಣ ಗಣಪತಿ ಭಟ್‌

ಲೇಖಕರು :
ಎಂ. ಶಾಂತಾರಾಮ ಕುಡ್ವ
ಬುಧವಾರ, ಡಿಸೆ೦ಬರ್ 25 , 2013

"ಪದ್ಯಾಣ' ಪದವೇ ಸಂಗೀತ ಶ್ರೋತೃಗಳಲ್ಲಿ ಸಂಚಲನೆಯನ್ನುಂಟು ಮಾಡುವಂಥದ್ದು. ಪದ್ಯಾಣ ಕುಟುಂಬ ದಲ್ಲಿ ಜನಿಸಿದವರೆಲ್ಲರೂ ಸಂಗೀತ ಅಥವಾ ಯಕ್ಷಗಾನ ಕಲಾವಿದರೇ ಆಗಿರು ವುದು ವಾಸ್ತವ ಸಂಗತಿ. ಕಳೆದ 40 ವರ್ಷಗಳಿಂದಲೂ ಯಕ್ಷರಂಗದಲ್ಲಿ ಭಾಗವತರಾಗಿ ಮಿಂಚುತ್ತಿರುವ ಪದ್ಯಾಣ ಗಣಪತಿ ಭಟ್ಟರು ವೃತ್ತಿಪರ ಭಾಗವತರಾಗಿ ತೆಂಕಿನಲ್ಲಿ ಪದ್ಯಾಣ ಶೈಲಿಯನ್ನೇ ಹುಟ್ಟು ಹಾಕಿದ ಮೇರು ಕಲಾವಿದ.

ಇವರು ಹಾಡುಗಾರಿಕೆಗೆ ಕುಳಿತ ರೆಂದರೆ ಶ್ರೋತೃಗಳಿಗೆ ರಸದೌತಣ. ಸಾಹಿತ್ಯಾಂಶ ಪೋಷಣೆ, ಹಿತಮಿತ ರಾಗ ಸಂಯೋಜನೆ, ಸ್ಪಷ್ಟ ಉಚ್ಛಾರದೊಂದಿಗೆ ಸಾತ್ಯಕ್ಕೆ ಪ್ರಾಧಾನ್ಯ, ಅರ್ಥಾಭಿವ್ಯಕ್ತಿಯುಕ್ತ ಯತಿವಿನ್ಯಾಸ, ತಾಳಶುದ್ಧತೆ, ರಸರಂಜನೆಗೆ ಪೂರಕವಾಗುವ ತಾಳದ ಕಸರತ್ತುಗಳು, ಸ್ವರಗಳ ಸೂಕ್ತ ಏರಿಳಿತ, ದ್ರುತ ವಿಲಂಬಿತ ಕ್ರಮಗಳು, ವಿಶೇಷ ರಾಗಗಳ ಸಮುಚಿತ ಬಳಕೆ, ಪರಂಪರೆಗೆ ಬದ್ಧವಾದ ಭಾಗವತಿಕೆ ಯೊಂದಿಗೆ ರಂಗನಿರ್ದೇಶನ ಇವೆಲ್ಲವೂ ಪದ್ಯಾಣರನ್ನು ಎತ್ತರಕ್ಕೆ ಏರಿಸಿದ ಅಂಶಗಳು.

ಬಾಲ್ಯ ಮತ್ತು ಶಿಕ್ಷಣ

ಪದ್ಯಾಣ ತಿರುಮಲೇಶ್ವರ ಭಟ್ಟ ಮತ್ತು ಸಾವಿತ್ರಿ ದಂಪತಿಯ ಮೂರನೇ ಮಗನಾಗಿ 1955ರಲ್ಲಿ ಜನನ. ಆ ಕಾಲದಲ್ಲಿ ಭಾಗವತಿಕೆಗೆ ಹೆಸರಾಗಿದ್ದ ಅಜ್ಜ ಪುಟ್ಟು ನಾರಾಯಣ ಭಟ್ಟರಿಂದಲೇ ಭಾಗವತಿಕೆಯ ಪ್ರಾಥಮಿಕ ಪಾಠ. ಅಜ್ಜನ ಶಿಷ್ಯರಾಗಿದ್ದ ಮಾಂಬಾಡಿ ನಾರಾಯಣ ಭಾಗವತರಲ್ಲಿ ಮುಂದಿನ ಅಭ್ಯಾಸ. ಎರಡು ವರ್ಷಗಳಲ್ಲೇ ಭಾಗವತಿಕೆಯ ಸೂಕ್ಷ್ಮಪಾಠ, ತಾಳಗತಿ ಹಾಗೂ ಪಟ್ಟುಗಳಲ್ಲಿ ಪರಿಣತಿಯತ್ತ ಸಾಗಿದ ಗಣಪತಿ ಭಟ್ಟರು 1971ರಲ್ಲಿ ಅಂದರೆ, ತಮ್ಮ 16ರ ಹರೆಯದಲ್ಲೇ ಚೌಡೇಶ್ವರೀ ಮೇಳದಲ್ಲಿ ಸಂಗೀತಗಾರರಾಗಿ ಸೇರಿ ಮುಂದಿನ ವರ್ಷ ಕುಂಡಾವು ಮೇಳ ಪ್ರವೇಶಿಸಿ ಅಲ್ಲಿ 2 ವರ್ಷ ಸೇವೆ ಸಲ್ಲಿಸಿದರು. ಮುಂದೆ ಕಸ್ತೂರಿ ವರದರಾಯ ಪೈ ಯಾಜಮಾನ್ಯದ ಸುರತ್ಕಲ್‌ ಮೇಳ ಸೇರಿದ ಪದ್ಯಾಣ ತನ್ನ ವ್ಯವಸಾಯ ಜೀವನದುದ್ದಕ್ಕೂ ಸಿದ್ಧಿ- ಪ್ರಸಿದ್ಧಿ ಸಹಿತ ಅಪಾರ ಯಶಸ್ಸು ಪಡೆದರು.

ಶಾಲೆಯಿಂದ ಹೊರದಬ್ಬಿದ ಶಿಕ್ಷಕರೇ ಸಮ್ಮಾನಿಸಿದ್ದು

''ನಾನು ಹೈಸ್ಕೂಲು ಮೆಟ್ಟಲೇರಿದ್ದೇ ಒಂದು ದೊಡ್ಡ ಸಂಗತಿ. ಅಲ್ಲೊಮ್ಮೆ ನಾನು ಕುಶಾಲಿಗೆ ಸಿಗರೇಟ್‌ ಎಳೆದೆ. ಆಗ ನನ್ನ ಶಿಕ್ಷಕರಾಗಿದ್ದ ಕಾರ್ಕಡ ಶ್ರೀನಿವಾಸ ಉಡುಪರು ನನ್ನನ್ನು ಮನೆಯವರನ್ನು ಕರೆದುಕೊಂಡು ಬಾ ಎಂದು ಮನೆಗೆ ಅಟ್ಟಿದರು. ಹಾಗೆ ಶಾಲೆ ಬಿಟ್ಟವ ಮತ್ತೆ ಭಾಗವತನಾದೆ. ಸುರತ್ಕಲ್‌ ಮೇಳದಲ್ಲಿ ಸುಮಾರು 12 ವರ್ಷ ಸರ್ವೀಸು ಆಗಿರಬೇಕು. ಕೋಟದಲ್ಲಿ ನನಗೆ ಮೇಳದ ಆಟದಲ್ಲಿ ಸನ್ಮಾನ ಏರ್ಪಡಿಸಿದ್ದರು. ಸಮ್ಮಾನ ಮಾಡಿದವರು ಯಾರು ಗೊತ್ತೇ? ಅದೇ ಉಡುಪರು. ಅವರು ನನ್ನಪ್ಪಿಕೊಂಡ ಆ ಕ್ಷಣ ಇಬ್ಬರ ಕಣ್ಣುಗಳಲ್ಲೂ ನೀರು ಸುರಿದಿತ್ತು. ಆ ಕ್ಷಣವನ್ನು ನಾನೆಂದಿಗೂ ಮರೆಯಲಾರೆ'' - ಪದ್ಯಾಣ

ಶೇಣಿಯವರಿ೦ದ ಸೈ ಎಣಿಸಿಕೊ೦ಡ ಹಾಡುಗಾರಿಕೆ

ಯಕ್ಷಗಾನದ ಭೀಷ್ಮ ನಾಮಾಂಕಿತ ಉದ್ದಾಮ ಕಲಾವಿದ ಡಾ| ಶೇಣಿ ಗೋಪಾಲಕೃಷ್ಣ ಭಟ್ಟ, ಯಕ್ಷರಂಗದ ದಂತಕಥೆ, ಪ್ರಕಾಂಡ ವಿದ್ವಾಂಸ ಎನಿಸಿದ ಶಂಕರನಾರಾಯಣ ಸಾಮಗ, ತೆಕ್ಕಟ್ಟೆ ಆನಂದ ಮಾಸ್ತರ್‌, ಕುಂಬ್ಳೆ ಸುಂದರ ರಾವ್‌ ಮೊದಲಾದ ಕಲಾವಿದರ ಒಡನಾಟದಿಂದ ಸುರತ್ಕಲ್‌ ಮೇಳದಲ್ಲಿ ವಿಜೃಂಭಿಸಿದ ಪದ್ಯಾಣರ ಸಾಧನೆ ಅನನ್ಯ. ಏರುಕಂಠ, ಇಂಪಾದ ರಾಗ, ಭಾವನಾತ್ಮಕ ಹಾಗೂ ಸಾಹಿತ್ಯಾತ್ಮಕವಾಗಿ ಹಾಡುವ ವಿಶಿಷ್ಟ ಶೈಲಿಯಿಂದ ಪದ್ಯಾಣರು ಶ್ರೇಷ್ಠ ಭಾಗವತರಾಗಿ ಮೂಡಿಬಂದರು.

ಪದ್ಯಾಣ ಗಣಪತಿ ಭಟ್
ಜನನ : 1955
ಜನನ ಸ್ಥಳ : ಪದ್ಯಾಣ,
ಬ೦ಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ

ಕಲಾಸೇವೆ:
40 ವರ್ಷಗಳ ಸುದೀರ್ಘ ಕಾಲ ಭಾಗವತರಾಗಿ ಕುಂಡಾವು, ಚೌಡೇಶ್ವರೀ, ಸುರತ್ಕಲ್‌, ಮಂಗಳಾದೇವಿ, ಕರ್ನಾಟಕ, ಎಡನೀರು, ಹೊಸನಗರ ಮೇಳ ಮೇಳದಲ್ಲಿ ದುಡಿಮೆ.

ಪ್ರಶಸ್ತಿಗಳು:
  • ದ. ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
  • ಈಟಿವಿಯ "ಎದೆ ತುಂಬಿ ಹಾಡುವೆನು' ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ ಮೊದಲ ಯಕ್ಷಗಾನ ಭಾಗವತ
  • ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ

ಅಷ್ಟು ಸುಲಭವಾಗಿ ಯಾರನ್ನೂ ಮೆಚ್ಚದ ಡಾ| ಶೇಣಿಯವರಿಂದಲೇ ಸೈ ಅನ್ನಿಸಿಕೊಂಡ ಭಾಗವತ ಪದ್ಯಾಣ. ತಮ್ಮನ್ನು ಯಾರಾದರೂ ತಾಳ ಮದ್ದಳೆಗೆ ಆಹ್ವಾನಿಸಿದರೆ ಭಾಗವತರು ಯಾರು ಎಂದು ವಿಚಾರಿಸಿ ಪದ್ಯಾಣರನ್ನು ಕರೆಯಿರಿ, ತಾಳಮದ್ದಳೆ ಯಶಸ್ವಿಯಾಗುತ್ತದೆ ಎಂದು ಶಿಫಾರಸು ಮಾಡುತ್ತಿದ್ದರೆಂದರೆ ಪದ್ಯಾಣರ ಹಿರಿಮೆ ವೇದ್ಯವಾದೀತು. ಪಾತ್ರದೊಳಗೊಂದಾಗಿ ಹಾಡುವ ಪದ್ಯಾಣರ ಶೈಲಿಗೆ ಪ್ರೇಕ್ಷಕರು ಮಂತ್ರಮುಗ್ಧರಾಗಿ ಬಿಡುತ್ತಾರೆ.

ಕಲಾಸೇವೆ, ಅಪಾರ ಶಿಷ್ಯ ವರ್ಗ

ಅನಿವಾರ್ಯವಾಗಿ ಸುರತ್ಕಲ್‌ ಮೇಳ ತಿರುಗಾಟ ನಿಲ್ಲಿಸಿದಾಗ ಮೇಳದೊಂದಿಗೆ ನಿರಂತರ 26 ವರ್ಷಗಳ ಒಡನಾಟ ಒಮ್ಮೆಲೇ ಕಡಿದುಬಿದ್ದಂತಾಗಿ ಪದ್ಯಾಣರು ನೊಂದಿದ್ದರು. ಬಳಿಕ ಮಂಗಳಾದೇವಿ, ಕರ್ನಾಟಕ, ಎಡನೀರು ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ವಿಜೃಂಭಿಸಿದ ಪದ್ಯಾಣರು ಇದೀಗ 5 ವರ್ಷಗಳಿಂದ ಪದ್ಯಾಣ ಮನೆತನದವರೇ ಆದ ಟಿ. ಶಾಮ ಭಟ್‌ ಅವರ ಪೋಷಕಾಶ್ರಯದಲ್ಲಿ ನಡೆಯುತ್ತಿರುವ ಹೊಸನಗರ ಮೇಳದಲ್ಲಿ ಪ್ರಧಾನ ಭಾಗವತರು.

ಯಕ್ಷಗಾನದಲ್ಲಿ ಅಷ್ಟೇನೂ ಬಳಕೆಯಲ್ಲಿಲ್ಲದ ಕೆಲವು ರಾಗಗಳನ್ನು ಬಳಸಿದ ಕೀರ್ತಿ ಪದ್ಯಾಣರದ್ದು. ಸಿಂಹೇಂದ್ರ ಮಧ್ಯಮ, ವೃಂದಾವನ ಸಾರಂಗ್‌, ಯಮನ್‌ ಕಲ್ಯಾಣಿ, ರೇವತಿ ಮೊದಲಾದ ರಾಗ ಪ್ರಕಾರಗಳನ್ನು ಅವರು ಭಾಗವತಿಕೆಯಲ್ಲಿ ದುಡಿಸಿಕೊಂಡವರು. ವಾಸಂತಿ ರಾಗವನ್ನು ಯಕ್ಷಗಾನದಲ್ಲಿ ಪ್ರಪ್ರಥಮ ವಾಗಿ ಅಳವಡಿಸಿದ ಕೀರ್ತಿ ಪದ್ಯಾಣರದ್ದು.

ಯಾವುದೇ ಅನುಕರಣೆ, ಗಿಮಿಕ್‌ ಗಳಿಗೆ ಮಾರು ಹೋಗದೆ, ಸಂಪ್ರದಾಯ ಶೈಲಿಯಲ್ಲಿ, ಮೂಲರಾಗಕ್ಕೆ ಲೋಪ ಬಾರದಂತೆ ತಮ್ಮ ಪ್ರತಿಭೆಯಿಂದಲೇ ಭಾಗವತಿಕೆಯಲ್ಲಿ ಪರಿಪೂರ್ಣತೆ ಸಾಧಿಸುತ್ತಾ ಬಂದ ಪದ್ಯಾಣರು ಪತ್ನಿ ಶೀಲಾಶಂಕರಿ, ಮಕ್ಕಳಾದ ಸ್ವಸ್ತಿಕ್‌, ಕಾರ್ತಿಕ್‌ ಇವರೊಂದಿಗೆ ಸುಖೀ ಸಂಸಾರಿ. ಪ್ರಸಿದ್ಧ ಭಾಗವತರಾದ ಕಿಗ್ಗ ಹಿರಿಯಣ್ಣ ಆಚಾರ್ಯ, ಹರಿಯಪ್ಪ ರೈ, ರವಿಚಂದ್ರ ಕನ್ನಡಿಕಟ್ಟೆ, ಪ್ರಫ‌ುಲ್ಲಚಂದ್ರ ನೆಲ್ಯಾಡಿ, ಪುತ್ತೂರು ರಮೇಶ ಭಟ್‌, ಸಾಯಿನಾಥ ನಾವಡ ಮೊದಲಾದವರು ಸೇರಿದಂತೆ 80ಕ್ಕೂ ಅಧಿಕ ಶಿಷ್ಯರನ್ನು ಪದ್ಯಾಣ ಹೊಂದಿದ್ದಾರೆ.

ಸನ್ಮಾನ ಹಾಗೂ ಪ್ರಶಸ್ತಿಗಳು

ದ. ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಪದ್ಯಾಣರು ದುಬೈ, ಮಸ್ಕತ್‌, ಕುವೈಟ್‌ ಮೊದಲಾದ ವಿದೇಶಗಳಲ್ಲಿ ಪ್ರದರ್ಶನ ನೀಡಿ ಸಮ್ಮಾನಿತರಾಗಿದ್ದಾರೆ.

ಮುಂಬೈ, ದಿಲ್ಲಿ, ಕಾಸರಗೋಡು, ಶಿವಮೊಗ್ಗ, ಮಂಗಳೂರು ಸೇರಿದಂತೆ ನಾಡಿನ ಹಲವೆಡೆ ಅಭಿಮಾನಿಗಳ ಗೌರವ ಸಮ್ಮಾನಗಳನ್ನು ಅವರು ಸ್ವೀಕರಿಸಿದ್ದಾರೆ.

ಈಟಿವಿಯ "ಎದೆ ತುಂಬಿ ಹಾಡುವೆನು' ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ ಮೊದಲ ಯಕ್ಷಗಾನ ಭಾಗವತ ಎಂಬ ಕೀರ್ತಿಯೊಂದಿಗೆ ಕಾರ್ಯಕ್ರಮದ ನಿರ್ವಾಹಕ ಡಾ| ಎಸ್‌.ಪಿ. ಬಾಲಸುಬ್ರಹ್ಮಣ್ಯ ಅವರ ಮುಕ್ತ ಶ್ಲಾಘನೆಗೆ ಪಾತ್ರರಾದವರು ಪದ್ಯಾಣ.

****************

ಈಟಿವಿಯ "ಎದೆ ತುಂಬಿ ಹಾಡುವೆನು' ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ ಸ೦ದರ್ಭದಲ್ಲಿ ಹಾಡುಗಾರಿಕೆ

ಪದ್ಯಾಣ ಗಣಪತಿ ಭಟ್ ರವರ ಕೆಲವು ಭಾವಚಿತ್ರಗಳು (ಕೃಪೆ : ಅ೦ತರ್ಜಾಲದ ಅನಾಮಿಕ ಮಿತ್ರರು)
ತೆ೦ಕುತಿಟ್ಟಿನ ಇನ್ನೋರ್ವ ಶ್ರೇಷ್ಠ ಭಾಗವತ ಪುತ್ತಿಗೆ ರಘುರಾಮ ಭಾಗವತರೊ೦ದಿಗೆ.
ಒಂದು ಅಪೂರ್ವವಾದ ಫೋಟೋ.. ಪದ್ಯಾಣ ಗಣಪತಿ ಭಟ್ ಮದ್ದಳೆ ವಾದಕರಾಗಿ. ಭಾಗವತಿಕೆಯಲ್ಲಿ ಪುತ್ತಿಗೆ ರಘುರಾಮ ಹೊಳ್ಳ ಹಾಗೂ ಚೆ೦ಡೆಯಲ್ಲಿ ಗಣಪತಿ ಭಟ್’ರವರ ಚಿಕ್ಕಪ್ಪ ಪದ್ಯಾಣ ಶ೦ಕರನಾರಾಯಣ ಭಟ್......
ಯುವ ಭಾಗವತ ಹೊಸಮೂಲೆ ಗಣೇಶ್ ಭಟ್ ಹಾಗೂ ಪುತ್ತೂರು ಶ್ರೀಧರ ಭ೦ಡಾರಿಯವರೊ೦ದಿಗೆ
ಸಮಾರ೦ಭವೊ೦ದರಲ್ಲಿ ಸನ್ಮಾನ.
ಕೃಪೆ : http://www.udayavani.com


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
karthik(10/1/2014)
u hav gav importnt information about PADYANA Im really happy with these info. Yakshaganam Gelge
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ