ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಮದ್ದಳೆ ಮಾಂತ್ರಿಕ ಲಯಬ್ರಹ್ಮ ಹುಂಚದಕಟ್ಟೆ ಶ್ರೀನಿವಾಸ ಆಚಾರ್ಯ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಮ೦ಗಳವಾರ, ಜೂನ್ 2 , 2015

ಬಡಗುತಿಟ್ಟು ಯಕ್ಷಗಾನದ ಮದ್ದಳೆಯ ಅಪ್ರತಿಮ ಸಾಧಕ, ಅದ್ವೀತೀಯ ಮದ್ದಳೆಗಾರ, ಲಯಬ್ರಹ್ಮ ಹುಂಚದಕಟ್ಟೆ ಶ್ರೀನಿವಾಸ ಆಚಾರ್ಯರು ನಮ್ಮನ್ನಗಲಿ ಸರಿಸುಮಾರು ವರ್ಷ 26 ಸಂದಿದೆ. ಬಡಗುತಿಟ್ಟು ಯಕ್ಷಗಾನಕ್ಕೆ ಮಹಾನ್ ಕಲಾವಿದರನ್ನು ನೀಡಿದ ಮಲೆನಾಡು ಸೀಮೆಯ ತೀರ್ಥಹಳ್ಳಿ ಸಮೀಪ ಹುಂಚದಕಟ್ಟೆಯಲ್ಲಿ ಜನಿಸಿದ ಶ್ರೀನಿವಾಸ ಆಚಾರ್ಯರು ಪರಿಸರದಲ್ಲಿ ನಡೆಯುತ್ತಿರುವ ಯಕ್ಷಗಾನದಿಂದ ಪ್ರಭಾವಿತರಾಗಿ ಮದ್ದಳೆ ವಾದನದ ಆಸಕ್ತಿ ಬೆಳೆಸಿಕೊಂಡವರು. ಹಿರಿಯರಿಂದ ಬಂದ ಸಲ್ಪಮಟ್ಟಿನ ಲಯ ತಾಳದ ಮಾಹಿತಿಯೊಂದಿಗೆ ಯಾವುದೇ ಗಟ್ಟಿಗುರುವಿನ ಸಹಾಯವಿಲ್ಲದೆ ಏಕಲವ್ಯನಂತೆ ಸ್ವಪ್ರಯತ್ನ ಮತ್ತು ಪ್ರತಿಭೆಯಿಂದ ಮದ್ದಳೆಯ ಮಾಂತ್ರಿಕನಾಗಿದ್ದು ಒಂದು ದಂತಕಥೆ.

ಸಾಲಿಗ್ರಾಮ, ಮೂಲ್ಕಿ ಮೇಳದಲ್ಲಿ ಸಾಕಷ್ಟು ಪ್ರಸಿದ್ದಿ

ಆ ಕಾಲದಲ್ಲಿ ಪಾಠಪಠ್ಯದೊಂದಿಗೆ ಯಕ್ಷಗಾನವನ್ನು ಕಲಿಸುವ ವ್ಯವಸ್ಥೆಯೂ ಇಲ್ಲವಾಗಿತ್ತು. ರಂಜದಕಟ್ಟೆ ಮೇಳದಲ್ಲಿ ಒತ್ತು ಮದ್ದಳೆಗಾರರಾಗಿ ಸೇರಿಕೊಂಡ ಇವರು ಕಂಡು, ಕೇಳಿ, ಕಲಿತದ್ದೇ ಹೆಚ್ಚು. ಬಡಗುತಿಟ್ಟಿನ ಪ್ರಸಿಧ್ಧ ಮೇಳವಾದ ಸಾಲಿಗ್ರಾಮ ಮೇಳಕ್ಕೆ ಅವರ ಸೇರ್ಪಡೆ ಸುಮಾರು ಎಪ್ಪತ್ತರ ದಶಕದಲ್ಲಿ. ಅದು ಅವರ ಯಕ್ಷಗಾನ ಬದುಕಿನ ಸುವರ್ಣ ಯುಗವಾಗಿತ್ತು. ಸೋಮನಾಥ ಹೆಗ್ಡೆಯವರ ಯಜಮಾನಿಕೆಯ ಸಾಲಿಗ್ರಾಮ ಮೇಳಕ್ಕೆ ಪ್ರದಾನ ಮದ್ದಳೆಗಾರರಾಗಿ ಸೇರ್ಪಡೆಗೊಂಡ ಇವರು ಮರವಂತೆ ನರಸಿಂಹ ದಾಸರ ಭಾಗವತಿಕೆ, ಕೆಮ್ಮಣ್ಣು ಆನಂದರ ಚೆಂಡೆವಾದನಕ್ಕೆ ಆಚಾರ್ಯರ ಮದ್ದಳೆವಾದನ ಮೆರುಗು ನೀಡಿತ್ತು. ಆ ಕಾಲದ ಗಜಗಟ್ಟಿ ಹಿಮ್ಮೇಳವೆಂಬ ಖ್ಯಾತಿ ಪಡೆಯಿತು. ವಸಂತಸೇನೆ ಮಹಾಸತಿ ಮಂಗಳಾ, ವೀರ ವಜ್ರಾಂಗ ಪ್ರಸಂಗಗಳಲ್ಲಿ ಈ ಇಬ್ಬರು ಮಹನೀಯರ ಮದ್ದಳೆ ಚಂಡೆವಾದನ ಸಾಕಷ್ಟು ಪ್ರಸಿದ್ದಿ ಪಡೆಯಿತು.

ಸೋಮನಾಥ ಹೆಗ್ಡೆಯವರ ಅಚ್ಚುಮೆಚ್ಚಿನ ಕಲಾವಿದರಾದ ಆಚಾರ್ಯರ ಮತ್ತು ಕೆಮ್ಮಣ್ಣು ಆನಂದರ ಮದ್ದಳೆ-ಚೆಂಡೆವಾದನ ಸಾಲಿಗ್ರಾಮ ಮೇಳದ ರಂಗಸ್ಥಳವನ್ನು ಬಹುಕಾಲ ರಂಜಿಸಿತ್ತು. ಚೆಂಡೆ ಮದ್ದಳೆಗಾರರಿಗೆ ಅಷ್ಟೊಂದು ಪ್ರಸಿದ್ದಿ ಇಲ್ಲದ ಆ ಕಾಲದಲ್ಲಿ ಬಡಗುತಿಟ್ಟಿನ ವಾದನಕ್ಕೆ ಆ ಕಾಲದಲ್ಲೇ ಪ್ರಥಮವಾಗಿ ಸ್ಟಾರ್ ವ್ಯಾಲ್ಯು ತಂದವರು ಸಾಲಿಗ್ರಾಮ ಮೇಳದಲ್ಲಿ ಹುಂಚದಕಟ್ಟೆಯವರು. ಅಮೃತೇಶ್ವರಿ ಮೇಳದಲ್ಲಿ ಬೇಳಂಜೆ ತಿಮ್ಮಪ್ಪ ನಾಯ್ಕರು ಎಂದರೆ ಅತಿಶಯೋಕ್ತಿ ಅಲ್ಲ. ಚೆಂಡೆ ಮದ್ದಳೆಯನ್ನು ಬೇರೆ ಬೇರೆಯಾಗಿ ನುಡಿಸುವ ಹೊಸ ಪ್ರಯೋಗಕ್ಕೂ ಇದು ನಾಂದಿಯಾಯಿತು. ಕಾಳಿಂಗ ನಾವಡರಿಗೂ ಒಡನಾಡಿಯಾಗಿ ಮಳೆಗಾಲದ ಆಟಗಳಲ್ಲಿ ನಾವಡರ ಹುಂಚದಕಟ್ಟೆಯವರ ಜೋಡಿ ಅಪಾರ ಯಶಸ್ಸು ಪಡೆಯಿತು. ಬಳಿಕ ಆಗತಾನೇ ಹೊಸದಾಗಿ ಪ್ರಾರಂಭವಾದ ಮೂಲ್ಕಿ ಮೇಳ ಸೇರಿದ ಇವರು ಸುಮಾರು ಮೂರು ಮೇಳಕ್ಕಾಗುವಶ್ಟು ಪ್ರಸಿದ್ದ ಕಲಾವಿದರನ್ನು ಹೊಂದಿದ ಮೂಲ್ಕಿ ಮೇಳದಲ್ಲಿ ನೆಲ್ಲೂರು ಮರಿಯಪ್ಪ ಆಚಾರ್ಯರ ಭಾಗವತಿಕೆಗೆ ಮದ್ದಳೆಗಾರರಾಗಿ ಸೇರಿಕೊಂಡರು. ಮರಿಯಪ್ಪಾಚಾರ್ ಮತ್ತು ಹುಂಚದಕಟ್ಟೆಯವರ ಜೋಡಿ ಬಡಗುತಿಟ್ಟಿನಲ್ಲಿ ಯಶಸ್ವಿ ಜೋಡಿಯಾಗಿ ಹಿಮ್ಮೇಳದಲ್ಲಿ ಹೊಸ ದಾಖಲೆ ನಿರ್ಮಿಸಿತು.
ಹುಂಚದಕಟ್ಟೆ ಶ್ರೀನಿವಾಸ ಆಚಾರ್ಯ
ಜನನ ಸ್ಥಳ : ಹುಂಚದಕಟ್ಟೆ, ತೀರ್ಥಹಳ್ಳಿ
ಶಿವಮೊಗ್ಗ ಜಿಲ್ಲೆ
ಕರ್ನಾಟಕ ರಾಜ್ಯ
ಕಲಾಸೇವೆ:
ಮದ್ದಳೆಯ ಅಪ್ರತಿಮ ಸಾಧಕ, ಸಾಲಿಗ್ರಾಮ, ಅಮೃತೇಶ್ವರಿ, ಮೂಲ್ಕಿ ಮೇಳಗಳಲ್ಲಿ ಸೇವೆ.

ಭಾಗವತಿಕೆಗೂ ಸೈ

1982ರಲ್ಲಿ ಉಡುಪಿಯಲ್ಲಿ ಎರಡು ಗಜಗಟ್ಟಿ ವೃತ್ತಿ ಮೇಳಗಳಾದ ಮೂಲ್ಕಿ ಮತ್ತು ಅಮೃತೇಶ್ವರಿ ಮೇಳಕ್ಕೆ ಜೋಡಾಟವಾದಾಗ ಅಮೃತೇಶ್ವರಿ ಮೇಳದ ಮದ್ದಳೆವಾದಕ ದುರ್ಗಪ್ಪ ಗುಡಿಗಾರರು ಮದ್ದಳೆವಾದನ ಬಿಟ್ಟು ಭಾಗವತಿಕೆಗೆ ಬಂದಾಗ ಎದುರು ಮೇಳದಲ್ಲಿ ಭಾಗವತಿಕೆ ಮಾಡುತಿದ್ದ ಮರಿಯಪ್ಪ ಆಚಾರ್ಯರನ್ನು ಎಬ್ಬಿಸಿ ಸ್ವತ ತಾನೇ ತಾಳ ಹಿಡಿದು ಗುಡಿಗಾರರ ಎದುರು ಭಾಗವತಿಕೆ ಮಾಡಿ ಗುಡಿಗಾರರಿಂದ ಸೈ‌ ಎಣಿಸಿಕೊಂಡಿದ್ದು ಮಾತ್ರವಲ್ಲದೆ ತಾನೊಬ್ಬ ನುರಿತ ಭಾಗವತ ಎನ್ನುದನ್ನು ತೋರಿಸಿ ಕೊಟ್ಟಿದ್ದಾರೆ. ಮೂಲ್ಕಿ ಮೇಳ ನಿಂತು ಹೋದಾಗ ಕೋಟ ವೈಕುಂಠರ ಯಜಮಾನಿಕೆಯ ಬಯಲಾಟ ಮೇಳವಾದ ಅಮೃತೇಶ್ವರಿ ಮೇಳ ಸೇರಿ ಬಳಿಕ ಅನಾರೋಗ್ಯದಿಂದ ಅಲ್ಲಿಯೇ ನಿವೃತ್ತಿಯಾದರು.

ಹುಂಚದಕಟ್ಟೆಯವರಲ್ಲಿ ವಿಶೇಷವಾಗಿ ಗಮಣಿಸಬೇಕಾಗಿದ್ದು ಅಪಾರ ಲಯದ ಹಿಡಿತ ಮತ್ತು ಖಚಿತತೆ. ಅವರ ಏರುಮದ್ದಲೆಯ ನಾದವೈವಿದ್ಯತೆ ವಿಶೇಷವಾದದ್ದು. ಆದಿತಾಳ ಮತ್ತು ರೂಪಕತಾಳದ ಪದ್ಯಗಳಲ್ಲಿ ಅವರ ಬಿಡ್ತಿಗೆಗಳು ಬೇರೆ ವಾದನಗಾರರಲ್ಲಿ ಗುರುತಿಸಲಾಗದ್ದು. ಆದಿತಾಳದ ಮುಕ್ತಾಯಕ್ಕೆ ಭಾಗವತರ ಬಾಯಿತಾಳದ ಅಗತ್ಯವೇ ಬೇಡವಾಗಿತ್ತು. ಮದ್ದಳೆಗಾರಿಕೆಯಲ್ಲಿ ಶುಧ್ಧತೆ ಮತ್ತು ಬಧ್ಧತೆಯನ್ನು ಕಾಪಾಡಿಕೊಂಡು ಬಂದ ಆಚಾರ್ಯರ ಮದ್ದಳೆ ವಾದನದ ನಾದ ಕರ್ಣಾನಂದ ನೀಡುತಿತ್ತು. ಅಪಾರ ತಾಳದ ಹಿಡಿತ ಮತ್ತು ಲಯಬ್ರಹ್ಮನೆನಿಸಿದ ಭಾಗವತ ಮರವಂತೆ ನರಸಿಂಹದಾಸರು ತನ್ನ ತಾಳದ ಲಯ ಅಲುಗಾಡಿಸುವ ಶಕ್ತಿ ಇರುವುದಿದ್ದರೆ ಅದು ಹುಂಚದಕಟ್ಟೆಯವರಿಗೆ ಮಾತ್ರ ಎಂದು ಹೇಳುತಿದ್ದರು.

ಅದಕ್ಕೆ ಸಾಕ್ಷಿ ಎಂಬಂತೆ 1990ರ ಸುಮಾರಿಗೆ ಉಡುಪಿಯಲ್ಲಿ ನೆಡೆದ ಹಿರಿಯ ಭಾಗವತರ ಗಾನವೈವಿದ್ಯದಲ್ಲಿ ಭಾಗವತರಾದ ಮರಿಯಪ್ಪಾಚರ್ ಮತ್ತು ನರಸಿಂಹದಾಸರಿಗೆ ಮದ್ದಳೆಗಾರರಾಗಿ ಸಹಕರಿಸಿದ ಆಚಾರ್ಯರು ಅಂದು ದಾಸರ ರುಕ್ಮಾಂಗದ ಚರಿತ್ರೆಯ ಮೋಹಿನಿಯ “ವರ ಮನೋಹರ ಲಾಲಿಸು ಸುಂದರಕಾಯ ಪರಿಪೂರ್ಣ ದಯವಿರಿಸು” ಪದ್ಯಕ್ಕೆ ಆಚಾರ್ಯರ ವಾದನ ನಿಜ ಅರ್ಥದಲ್ಲಿ ಪರಿಪೂರ್ಣವೇ ಆಗಿತ್ತು. ಇಂತಹ ಸಿದ್ದಿ ಪ್ರಸಿಧ್ಧಿಯನ್ನು ಗಿಟ್ಟಿಸಿಕೊಂಡ ಆಚಾರ್ಯರ ಕೊನೆಯ ದಿನಗಳು ದುರಂತದಾಯಕವಾಗಿತ್ತು. ಜೀವಿತದಲ್ಲಿ ಸರಕಾರದ ಮಾಶಾಸನವಾಗಲಿ, ಪ್ರಶಸ್ತಿ ಪುರಸ್ಕಾರವಾಗಲೀ ಎಲ್ಲಿಯೂ ಯಾವ ಸಂಘಸಂಸ್ಥೆಯಿಂದಲೂ, ಯಾವ ಪ್ರಶಸ್ತಿ ಸನ್ಮಾನಗಳಿಗೆ ಭಾಜನರಾಗದಿದ್ದದ್ದು ವ್ಯವಸ್ಥೆಯ ದೌರ್ಭಾಗ್ಯ ಎನ್ನಬೇಕು.

ಮಂದಾರ್ತಿಯಲ್ಲಿ ಸಂಸ್ಮರಣೆ ಕಾರ್ಯಕ್ರಮ

ಅವರು ನಿಧನರಾಗಿ 26 ವರ್ಷಗಳ ನಂತರ ಮದ್ದಳೆಯ ಮಾಯಾಲೋಕಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದ ಅವರ ಸಂಸ್ಮರಣೆ ಭಾಗವತ ಸುಬ್ರಹ್ಮಣ್ಯ ಆಚಾರ್ಯರ ನೇತೃತ್ವದಲ್ಲಿ ಯಕ್ಷಗಾನದ ತವರೂರು ಮಂದಾರ್ತಿಯಲ್ಲಿ, ಮೇ 31ರ೦ದು ಸ೦ಯೋಜಿಸಲಾಯಿತು. ಸಂಸ್ಮರಣೆ ಕಾರ್ಯಕ್ರಮದ ನಂತರ ನಡುಮನೆಯಲ್ಲಿ ಯಕ್ಷಗಾಯನ ಖ್ಯಾತಿಯ ನಗರ ಸುಬ್ರಮಣ್ಯ ಆಚಾರ್ಯ , ತೆಂಕಿನ ಪ್ರಸಿದ್ದ ಬಾಗವತ ಪಟ್ಲ ಸತೀಶ ಶೆಟ್ಟಿ, ಬಡಗಿನ ಸುರೇಶ ಶೆಟ್ಟಿ ಭಾಗವತಿಕೆಗೆ ಹಿರಿಯ ಕಲಾವಿದ ತೀರ್ಥಳ್ಳಿ ಗೋಪಾಲಾಚಾರ್ ಮತ್ತು ತೆಂಕು ಬಡಗಿನ ಯುವಪ್ರತಿಭೆ ಸಂತೋಷ ಕುಲಶೇಖರ ಯಕ್ಷನೃತ್ಯ ಕಾರ್ಯಕ್ರಮ ನೀಡಿದರು.


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
vinayaka s bhat(6/26/2015)
avara maddaley audio or video upload madi
Abhimani(6/9/2015)
utthama parichayaathmaka gaurava poorna lekhana
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ