ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಉಜಿರೆ ಮಹಿಳಾ ಯಕ್ಷಗಾನ ಸಪ್ತಾಹ: ಸ್ಪರ್ಧೆಗೂ ಮಿಗಿಲೆನಿಸಿತು ಪ್ರದರ್ಶನ

ಲೇಖಕರು :
ಲಕ್ಷ್ಮಿ ಮಚ್ಚಿನ
ಶುಕ್ರವಾರ, ಜೂನ್ 5 , 2015
ನಲುವತ್ತು ವರ್ಷಗಳ ಮಹಿಳಾ ಯಕ್ಷಗಾನದ ಇತಿಹಾಸದಲ್ಲಿ ದಾಖಲಾರ್ಹ ಪ್ರದರ್ಶನವಾದದ್ದು ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ನೇತೃತ್ವದಲ್ಲಿ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಶ್ರಯದಲ್ಲಿ ಮೇ 18ರಿಂದ 24ರ ತನಕ ಮಹಿಳಾ ಯಕ್ಷಗಾನ ಬಯಲಾಟ ಸಪ್ತಾಹ.

ಉಜಿರೆಯ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ನಡೆದ ಇದು ಐತಿಹಾಸಿಕ ಮಹಿಳಾ ಯಕ್ಷಗಾನ ಸಮಾವೇಶವಾಗಿತ್ತು. ಕಾಸರಗೋಡು ಒಳಗೊಂಡಂತೆ ಅವಿಭಜಿತ ಜಿಲ್ಲೆಯಿಂದ ತೆಂಕುತಿಟ್ಟಿನ ಆಯ್ದ 15 ಮಹಿಳಾ ಯಕ್ಷಗಾನ ತಂಡಗಳು ಭಾಗವಹಿಸಿದ್ದವು. ಕುರಿಯ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್‌ ನೇತೃತ್ವದ ಈ ಕಾರ್ಯಕ್ರಮ ಸಂತೆಯಲ್ಲಿ ಮೂರು ಮೊಳ ನೇಯ್ದಂತೆ, ಜಾತ್ರೆಯ ಗೌಜಿಯಂತೆ ನಡೆಯಲಿಲ್ಲ. ಪ್ರದರ್ಶನವಾದರೂ ಭಾಗವಹಿಸಿದ ತಂಡಗಳೂ ಸ್ಪರ್ಧಾ ಮನೋಭಾವದಿಂದ, ಪೂರ್ವಸಿದ್ಧತೆಯಿಂದ ಆಗಮಿಸಿದ್ದರು. ಆದ್ದರಿಂದ ಒಟ್ಟು ಪ್ರದರ್ಶನದ ಯಶಸ್ಸಿನಲ್ಲಿ ಪೂರ್ವತಯಾರಿ, ರಂಗ ನಿರ್ದೇಶನದ ಕೊಡುಗೆ ಸ್ಪಷ್ಟವಾಗಿತ್ತು.

ಕುರಿಯ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್‌
( ಚಿತ್ರ ಕೃಪೆ : ರಾಮ್ ನರೇಶ್ ಮ೦ಚಿ )

ಇತಿಹಾಸ

ಯಕ್ಷಗಾನದ ಮೊದಲ ಮಹಿಳಾ ಕಲಾವಿದೆ ಅಕ್ಕಮ್ಮಣ್ಣಿ. ನಾಲ್ಕು ದಶಕಗಳ ಹಿಂದೆ ಇವರು ಗಂಡುಕಲೆಯೆಂದೇ ಪರಿಗಣಿತವಾಗಿದ್ದ ಯಕ್ಷಗಾನದಲ್ಲಿ ಕಾಣಿಸಿಕೊಂಡರು. ಅನಂತರ ಮೂಕಾಂಬಿಕಾ ವಾರಂಬಳ್ಳಿ, ಬಳಿಕ ಲೀಲಾವತಿ ಬೈಪಡಿತ್ತಾಯರು ರಂಗಕ್ಕೆ ಬಂದರು. ಬೈಪಡಿತ್ತಾಯರು ಪೂರ್ಣಪ್ರಮಾಣದ ತಿರುಗಾಟ ನಡೆಸಿದ ಮೊದಲ ಕಲಾವಿದೆ ಎಂಬ ನೆಗಳೆ¤ಯನ್ನು ಪಡೆದವರು. ಅನಂತರದ ದಿನಗಳಲ್ಲಿ ಮಹಿಳೆಯರು ಯಕ್ಷಗಾನದ ಕಡೆಗೆ ಮುಖ ಮಾಡುವುದು ನಿರಂತರವಾಗಿದೆ, ಈಗ ಪೂರ್ಣಪ್ರಮಾಣದ 30ಕ್ಕೂ ಅಧಿಕ ಮಹಿಳಾ ಯಕ್ಷಗಾನ ತಂಡಗಳಿವೆ.

ಮೇ 18ರಂದು ಮಂಗಳೂರಿನ ಯಕ್ಷಾರಾಧನಾ ಕಲಾ ಕೇಂದ್ರದವರಿಂದ ನರಕಾಸುರ ಮೋಕ್ಷ ಪ್ರದರ್ಶನ. ಬೊಂದೇಲು ಸತೀಶ್‌ ಶೆಟ್ಟಿ, ಕೊಂಕಣಾಜೆ ಚಂದ್ರಶೇಖರ ಭಟ್‌, ಭಾಸ್ಕರ ಭಟ್‌ ಕಟೀಲು, ರಾಜೇಂದ್ರ ಕೃಷ್ಣರ ಗುಣಮಟ್ಟದ ಹಿಮ್ಮೇಳ ಸಾರಥ್ಯ. ಪರಂಪರೆಯ ದೇವೇಂದ್ರನ ಒಡ್ಡೋಲಗ, ನರಕಾಸುರನ (ರೇಷ್ಮಾ ಕಾರಂತ್‌) ಬಣ್ಣದ ವೇಷ, ತೆರೆಪೊರಪ್ಪಾಡ್‌, ಕೃಷ್ಣನ (ವಸುಂಧರಾ ಶೆಟ್ಟಿ) ಪರಂಪರೆಯ ಒಡ್ಡೋಲಗ, ಸತ್ಯಭಾಮೆ (ಸುಮಂಗಲಾ ರತ್ನಾಕರ್‌) ಅವರದ್ದು ಉಲ್ಲೇಖನೀಯ ಪಾತ್ರಗಳಾಗಿ ಪ್ರೇಕ್ಷಕರ ಗಮನ ಸೆಳೆದವು, ಒಟ್ಟಂದದಲ್ಲಿ ಚೊಕ್ಕ ಪ್ರದರ್ಶನ ನೀಡಿದರು.

ಪೂರ್ಣಪ್ರಮಾಣದ ತಿರುಗಾಟ ನಡೆಸಿದ ಮೊದಲ ಕಲಾವಿದೆ ಲೀಲಾವತಿ ಬೈಪಡಿತ್ತಾಯರು
ಬಾಲ ಯಕ್ಷಕೂಟ ಕದ್ರಿ ಇವರಿಂದ ನಡೆದ ಚಕ್ರವ್ಯೂಹದಲ್ಲಿ ದಯಾನಂದ ಕೋಡಿಕಲ್‌, ಕೃಷ್ಣರಾಜ ನಂದಳಿಕೆ, ವೇದವ್ಯಾಸ ರಾವ್‌, ಶ್ರೀಶ ನಿಡ್ಲೆಯವರ ಹಿಮ್ಮೇಳ ಏಕತಾನತೆಯಿಂದ ಕೂಡಿದಂತಿದ್ದರೂ ಪೋಷಕ ಹಿಮ್ಮೇಳವಾಗಿತ್ತು.

ಅಭಿಮನ್ಯು (ರಂಜಿತಾ ಎಲ್ಲೂರು) ಅವರ ಅತ್ಯುತ್ತಮ ವಾದ ಪಾತ್ರ ನಿರ್ವಹಣೆ, ತ್ವರಿತ ರಂಗನಡೆ, ನೃತ್ಯಾಭಿನಯ, ಮಾತುಗಾರಿಕೆ, ವೀರರಸ ಪ್ರತಿಪಾದನೆ, ದಣಿವರಿಯದ ಕಸುಬು ಚೆನ್ನಾಗಿತ್ತು. ಅಷ್ಟೇ ಪರಿಣಾಮಕಾರಿಯಾಗಿ ಸುಭದ್ರೆಯ ಭಾಗದ ತಾಯಿ -ಮಗನ ಸಂಭಾಷಣೆಯೂ ಮೂಡಿಬಂತು. ಸುಭದ್ರೆ (ವನಿತಾ ಭಟ್‌), ಸಾರಥಿ (ರಕ್ಷಿತಾ ಎಲ್ಲೂರು), ಕೌರವ (ಪೂರ್ಣಿಮಾ ಶಾಸ್ತ್ರಿ) ಪ್ರದರ್ಶನದ ಯಶಸ್ಸಿಗೆ ಪೂರಕವಾಗಿತ್ತು. ಅಭಿಮನ್ಯು ಪಾತ್ರ ಇಡೀ ಪ್ರಸಂಗವನ್ನು, ತಂಡವನ್ನು ಆಧರಿಸಿತು. ಮಾತುಗಾರಿಕೆಯನ್ನುಳಿದರೆ ಪುರುಷರಿಗೆ ಏನೇನೂ ಕಡಿಮೆಯಿಲ್ಲದ ನಿರ್ವಹಣೆ.

ಮರುದಿನ ಸರಯೂ ಮಹಿಳಾ ಯಕ್ಷ ವೃಂದ ಕೋಡಿಕಲ್‌ನ ಸತ್ವ ಪರೀಕ್ಷೆ. ಹಿಮ್ಮೇಳದಲ್ಲಿ ಅಮೃತಾ ಅಡಿಗ, ಲೋಕೇಶ್‌ ಕಟೀಲ್‌, ಮಧುಸೂದನ ಅಲೆವೂರಾಯ, ಧೀರಜ್‌ ಕೊಟ್ಟಾರಿ ಇದ್ದರು. ಅಡಿಗರ ಭಾಗವತಿಕೆಗೆ ಭರವಸೆಯಿದೆ. ಕೃಷ್ಣ (ರಮ್ಯಾ ಆರ್‌. ಅಲೆವೂರಾಯ), ಅರ್ಜುನ (ಪ್ರತೀಕ್ಷಾ) ಗುರುತಿಸಬಹುದಾದ ಪ್ರದರ್ಶನ. ಕಥಾ ನಿರೂಪಣೆಯಿತ್ತು. ಪೂರ್ವ ತಯಾರಿ ಸ್ವಲ್ಪ ಇದ್ದರೆ ಉತ್ತಮ ತಂಡ.

ಯಕ್ಷ ದೇಗುಲ ಕಾಂತಾವರದ ಷಣ್ಮುಖ ವಿಜಯದಲ್ಲಿ ಪೊಳಲಿ ದಿವಾಕರ ಆಚಾರ್ಯ, ಆನಂದ ಗುಡಿಗಾರ್‌, ಶ್ರೀಶ ರಾವ್‌ ನಿಡ್ಲೆ, ಮಹಾವೀರ ಪಾಂಡಿಯವರ ಸಾಂಪ್ರದಾಯಿಕವಾಗಿ ಚೆನ್ನಾಗಿದ್ದ ಹಿಮ್ಮೇಳ. ಮುಮ್ಮೇಳ ಸಂತುಲಿತ ತಂಡವಾಗಿ ಎಲ್ಲ ಪಾತ್ರಗಳೂ ಒಟ್ಟಂದದ ಸಮಷ್ಟಿ ಪ್ರಯತ್ನ ಮಾಡಿದ್ದು ಕಂಡುಬಂತು. ಹದವರಿತ ನಡೆ, ನೃತ್ಯ, ಮಾತು, ಉತ್ತಮ ಪ್ರಯತ್ನವಿತ್ತು, ತಯಾರಿಯೂ ಇತ್ತು.

ಮೇ 20ರ ಮೊದಲ ಪ್ರದರ್ಶನ ಶ್ರೀ ಕುಮಾರ ಸಾಂಸ್ಕೃತಿಕ ಪ್ರತಿಷ್ಠಾನ, ಕಳಸ-ಹಳುವಳ್ಳಿಯವರ ವೀರ ಬಭುವಾಹನ. ಇದರಲ್ಲಿ ಪ್ರಫುಲ್ಲಚಂದ್ರ ನೆಲ್ಯಾಡಿ, ಶಿತಿಕಂಠ ಭಟ್‌, ಚಂದ್ರಶೇಖರ ಆಚಾರ್ಯರ ಆಕರ್ಷಕ ಹಿಮ್ಮೇಳ ಪ್ರಸಂಗ ಕಳೆ ಕಟ್ಟುವಂತೆ ಮಾಡಿತು.

ಅರ್ಜುನ (ಜ್ಯೋತಿ ಟಿ. ಎನ್‌.)ನ ಒಡ್ಡೋಲಗ ಕುಣಿತ ಉತ್ತಮವಾಗಿತ್ತು; ಗತ್ತು, ಗಾಂಭೀರ್ಯ ಕಾಯ್ದುಕೊಂಡಿತ್ತು. ಮೊದಲ ಭಾಗದ ಬಭುವಾಹನ (ಶ್ರೀರಕ್ಷಾ)ನದ್ದು ಒಳ್ಳೆಯ ನಿರ್ವಹಣೆ, ನೃತ್ಯ, ಅಭಿನಯ. ವೃಷಕೇತು (ದೀಕ್ಷಾ) ಅಭಿನಯ ಚುರುಕಾಗಿತ್ತು. ಚಿತ್ರಾಂಗದೆ (ಅನನ್ಯಾ) ಪೂರಕವಾಗಿದ್ದು ಮಿಕ್ಕುಳಿದವರ ತಂಡಸ್ಫೂರ್ತಿ ಮೆಚ್ಚತಕ್ಕದ್ದು. ಪ್ರಸಂಗ, ಕಥೆ, ಪಾತ್ರ ನಿರೂಪಣೆ ಅತ್ಯುತ್ತಮವಾಗಿತ್ತು.

ಶ್ರೀ ಪಂಚಲಿಂಗೇಶ್ವರ ಯಕ್ಷಗಾನ ಸಂಘ, ಬಾಯಾರು ತಂಡದವರ ಸತಿ ದಾಕ್ಷಾಯಿಣಿ ಅಂದಿನ ಎರಡನೆಯ ಆಖ್ಯಾನ. ಜಿ. ಕೆ. ನಾವಡ, ಶೇಣಿ ಸುಬ್ರಹ್ಮಣ್ಯ ಭಟ್‌, ಚಂದ್ರಶೇಖರ ಭಟ್‌ ಕೊಂಕಣಾಜೆ, ನಾರಾಯಣ ಕುಲಾಲ್‌ ಅವರ ಸತ್ವಯುತ ಹಿಮ್ಮೇಳವು ಮುಮ್ಮೇಳವನ್ನು ಪೋಷಿಸಿತು. ಎಲ್ಲ ಪಾತ್ರಧಾರಿಗಳು ಒಟ್ಟಂದದ ಯಶಸ್ಸಿಗೆ ಪೂರಕವಾಗಿ ಪ್ರಯತ್ನಿಸಿದ್ದರು. ದಾಕ್ಷಾಯಿಣಿ (ಅನಘಾ ಪೆರುವಡಿ)ಯದು ಬಹಳ ಪ್ರೌಢ ಭಾವಾಭಿನಯ, ರಸಪ್ರತಿಪಾದನೆ. ಗತ್ತುಗಾರಿಕೆ, ಶೈಲಿ, ನಿರೂಪಣೆಯಿಂದಾಗಿ ದಕ್ಷ (ನಿಶಾ ಭಟ್‌) ಉತ್ತಮ ನಿರ್ವಹಣೆ. ಈಶ್ವರ (ಅನನ್ಯಾ ಬೊಳಂತಿಮೊಗರು) ಉತ್ತಮ ಪ್ರಯತ್ನ ಇತ್ತು. ವೀರಭದ್ರ (ವೈದೇಹಿ ಪದ್ಯಾಣ) ದಣಿವರಿಯದ ದುಡಿಮೆ. ಪ್ರವೇಶ, ದೊಂದಿ, ಬಾರಣೆ ಇಂತಹ ಸಾಂಪ್ರದಾಯಿಕತೆ ಅಳವಡಿಸಿ ಒಟ್ಟು ಉತ್ತಮ ಪ್ರದರ್ಶನ ಮೂಡಿಬಂತು.

ಸಮಾವೇಶದ ನಾಲ್ಕನೆಯ ದಿನ ಶ್ರೀ ದುರ್ಗಾ ಮಕ್ಕಳ ಮೇಳ, ಕಟೀಲು ಇವರ ದಕ್ಷಾಧ್ವರ ಪ್ರಸಂಗದುದ್ದಕ್ಕೂ ಬಯಲಾಟದ ಪರಂಪರೆ ಅತ್ಯುತ್ತಮವಾಗಿ ಕಂಡು ಬಂತು. ದೇವಿಪ್ರಸಾದ್‌ ಕಟೀಲು, ರಾಜೇಶ್‌ ಕಟೀಲು, ಭಾಸ್ಕರ ಭಟ್‌, ರಾಕೇಶ್‌ ಅವರ ಉತ್ತಮ ಪೂರಕ ಹಿಮ್ಮೇಳ. ದೇವೇಂದ್ರನ ಒಡ್ಡೋಲಗದ ಪಾರಂಪರಿಕ ತೆರೆಕುಣಿತ ಚೆನ್ನಾಗಿತ್ತು. ಮೊದಲನೇ ದಕ್ಷ (ರಕ್ಷಾ), ಎರಡನೇ ದಕ್ಷ (ನವ್ಯಾ) ಇವರ ಗತ್ತುಗಾರಿಕೆ, ರಂಗನಡೆ, ಹಾವಭಾವ ಉತ್ತಮವಾಗಿತ್ತು. ವೀರಭದ್ರ (ಆಶಿತಾ ಸುವರ್ಣ) ಉತ್ತಮ ಬಣ್ಣದ ವೇಷವಾಗಿ ಗಮನಾರ್ಹವಾಗಿತ್ತು.

ಶ್ರೀ ಸಿದ್ಧಿ ವಿನಾಯಕ ಮಹಿಳಾ ಯಕ್ಷಗಾನ ಮಂಡಳಿ, ಗಣೇಶಪುರ ಇವರ ವಿಷ್ಣುಲೀಲೆಯಲ್ಲಿ ಹೊಸಮೂಲೆ ಗಣೇಶ ಭಟ್‌, ಪಡ್ರೆ ಆನಂದ, ಅಡೂರು ಹರೀಶ್‌ ರಾವ್‌, ಸುರೇಶ್‌ ಕಾಮತ್‌ ಅವರ ಸತ್ವಪೂರ್ಣ ಹಿಮ್ಮೇಳವು ಮುಮ್ಮೇಳದ ಪೋಷಣೆಗೆ ನೆರವಾಯಿತು.

ಒಟ್ಟು ತಂಡದಿಂದ ಬಯಲಾಟದೋಪಾದಿಯಲ್ಲಿ ಪ್ರದರ್ಶನ ಮೂಡಿಬಂತು. ಶತ್ರುಪ್ರಸೂದನ (ಮಾಲತಿ ರಾವ್‌) ಕೋಲು ಕಿರೀಟ ವೇಷ ಸರ್ವರೀತಿಯಿಂದಲೂ ಪುರುಷರಿಗೆ ಸರಿಮಿಗಿಲೆನಿ ಸುವ ನಿರ್ವಹಣೆ. ಮೊದಲ ಸುದರ್ಶನ (ದಿಶಾ ಶೆಟ್ಟಿ) ಸಾಕಷ್ಟು ನೃತ್ಯ ವಿಧಾನಗಳು, ಆಂಗಿಕ ಅಭಿನಯಗಳು, ಸ್ವಲ್ಪಾಂಶದ ಅನುಕರಣೆ ಯಿತ್ತಾದರೂ ಸುಪುಷ್ಟವಾಗಿತ್ತು. ಎರಡನೇ ಸುದರ್ಶನ (ಪ್ರಮದಾ ಶೆಟ್ಟಿ) ಉತ್ತಮ ಪುಂಡುವೇಷ, ನೇರ ನೃತ್ಯವಿಧಾನ. ವಿಷ್ಣು (ಶುಭದಾ ಶೆಟ್ಟಿ) ಅನುಭವಯುತ ನಿರ್ವಹಣೆ. ಲಕ್ಷ್ಮೀ (ಡಾ| ವರ್ಷಾ ಶೆಟ್ಟಿ) ನೃತ್ಯ ನಡೆ ವಿಸ್ತಾರವಾಗಿತ್ತು. ಒಟ್ಟು ಪ್ರದರ್ಶನ ಕಳೆ ಕಟ್ಟಿತು.

ಮೇ 22ರಂದು ಶ್ರೀ ಶಾರದಾಂಬಾ ಮಹಿಳಾ ಯಕ್ಷಗಾನ ಸಂಘ, ಬೋಳಂತೂರು ಇವರ ಮಹಾಶೂರ ಭೌಮಾಸುರಕ್ಕೆ ಪುರುಷೋತ್ತಮ ಭಟ್‌, ಕುಸುಮಾಕರ ಮುಡಿಪು, ಪ್ರಕಾಶ ವಿಟ್ಲ, ಶಿವಪ್ಪ‌ ಕಲ್ಲಡ್ಕರ ಹಿಮ್ಮೇಳ. ಶ್ರವಣಸೌಖ್ಯ ಭಾಗವತಿಕೆ, ಅದು ಕೇಳದಂತೆ ನುಂಗಿಹಾಕಿದ ಚೆಂಡೆಪೆಟ್ಟು!

ದೇವೇಂದ್ರ ಒಡ್ಡೋಲಗ, ಭೌಮಾಸುರನ ಬಣ್ಣದ ತೆರೆಕಲಾಸು, ಶ್ರೀಕೃಷ್ಣ ಒಡ್ಡೋಲಗಗಳು ಅಚ್ಚುಕಟ್ಟಾಗಿದ್ದವು. ಶ್ರೀಕೃಷ್ಣ (ವಸುಧಾ ಜಿ. ಎನ್‌.) ನೃತ್ಯ- ಅಭಿನಯದಲ್ಲಿ ಲಾಲಿತ್ಯ, ಹೆಜ್ಜೆಗಾರಿಕೆಯಲ್ಲಿ ತಿದ್ದಿದ ನಡೆ ಕಾಣಿಸಿತು. ಸತ್ಯಭಾಮೆ (ದೀಕ್ಷಾ) ಪೂರಕ ನಿರ್ವಹಣೆ. ಭೌಮಾಸುರ (ಶೋಭಾ ಸಾಲಿಯಾನ್‌) ನದ್ದು ಒಳ್ಳೆಯ ಗತ್ತು ಗಾಂಭೀರ್ಯ.

ನವಗಿರಿ ಯಕ್ಷಗಾನ ಕಲಾ ಮಂಡಳಿ, ಹೊಸಬೆಟ್ಟು ಇವರಿಂದ ನಡೆದ ಸುದರ್ಶನ ಗರ್ವಭಂಗದಲ್ಲಿ ಜಿ. ಕೆ. ನಾವಡ, ಗಣೇಶ್‌ ಕಾರಂತ, ವಿನೋದ್‌ ಕುತ್ತೆತ್ತೂರು, ವಿನಯ ಆಚಾರ್ಯರ ಹಿಮ್ಮೇಳ ಪೋಷಕವಾಗಿತ್ತು. ಮುಮ್ಮೇಳದಲ್ಲಿ ಒಳ್ಳೆಯ ಪ್ರಯತ್ನ ಕಂಡುಬಂತು. ವಿಷ್ಣು (ಅಮೃತಾ ಅಡಿಗ) ಸಾತ್ವಿಕ ಸ್ವಭಾವ, ಹಾವಭಾವ ಚೆನ್ನಾಗಿತ್ತು. ಲಕ್ಷ್ಮೀ (ಅನಘಾÂì ಪೆರುವಡಿ)ಯ ಲಾಲಿತ್ಯಪೂರ್ಣ ನಾಟ್ಯ, ರಂಗನಡೆ; ಶತ್ರುಪ್ರಸೂದನ (ಜ್ಯೋತಿ ಟಿ. ಎನ್‌.) ಬಣ್ಣದ ವೇಷದ ಗಂಭೀರ ನಡೆಗಳಲ್ಲಿ ಸಂತುಲಿತ ತಂಡ ಪ್ರಯತ್ನ ಕಂಡು ಬಂತು.

ಯಕ್ಷದೇವ ಮಿತ್ರಕಲಾ ಮಂಡಳಿ ಬೆಳುವಾಯಿಯವರ ರಾಣಿ ಶಶಿಪ್ರಭೆಯಲ್ಲಿ ಮಹೇಶ್‌ ಕನ್ಯಾಡಿ, ದೇವಾನಂದ ಭಟ್‌, ಶಿತಿಕಂಠ ಭಟ್‌ ಅವರದ್ದು ಒಳ್ಳೆಯ ಪೋಷಕ ಹಿಮ್ಮೇಳ. ಇದೊಂದು ಸಮಷ್ಟಿ ಪ್ರಯತ್ನದ ನಿರ್ವಹಣೆ. ಎಲ್ಲ ಪಾತ್ರಗಳು ಹದವರಿತ ನೃತ್ಯ, ಅಭಿನಯ ಗಳಿಂದ ಪ್ರದರ್ಶನ ನೀಡಿದವು. ಮಾರ್ತಂಡತೇಜ (ಶುಭಾಂಜನ), ಶಶಿಪ್ರಭೆ (ರಕ್ಷಿತಾ ಪ್ರಸಾದ್‌ ಶೆಟ್ಟಿ), ಭ್ರಮರ ಕುಂತಳೆ (ಪಂಚಮಿ ಮಾರೂರು) ನೃತ್ಯಾಭಿನಯ, ಹಾವಭಾವ, ಲಾಲಿತ್ಯಭರಿತವಾಗಿತ್ತು.

ಮೇ 23, ಸಮಾವೇಶದ ಆರನೆಯ ದಿನ ಸನಾತನ ಯಕ್ಷಾಲಯ, ಮಂಗಳೂರಿನ ಸುಧನ್ವಾರ್ಜುನವನ್ನು ಪಟ್ಲ ಸತೀಶ್‌ ಶೆಟ್ಟಿ, ಪದ್ಮನಾಭ ಉಪಾಧ್ಯಾಯ, ದೇವಿಪ್ರಸಾದ ಕಟೀಲು, ಕೇಶವ ಶೆಟ್ಟಿಯವರ ವೃತ್ತಿಪರ ಗಟ್ಟಿ ಹಿಮ್ಮೇಳ ಪೋಷಿಸಿತು. ಅರ್ಜುನನ ಒಡ್ಡೋಲಗ, ತೆರೆಕುಣಿತ, ಹೆಜ್ಜೆಗಾರಿಕೆ, ಸ್ಪಷ್ಟ ಉತ್ತಮ ಕಥಾ ನಿರೂಪಣೆ ಚೆನ್ನಾಗಿತ್ತು. ಸುಧನ್ವ (ಅನನ್ಯಾ ಐತಾಳ) ಪ್ರಸಂಗಪೂರ್ತಿ ಗತಿ, ಲಯ, ಪಾತೌÅಚಿತ್ಯ ಕಾಯ್ದುಕೊಂಡಿತ್ತು. ಪ್ರಭಾವತಿ (ಭೂಮಿಕಾ) ಯದು ಹದವರಿತ ಸ್ತ್ರೀ ಪಾತ್ರ ನಿರ್ವಹಣೆ, ಕೃಷ್ಣ (ಅನನ್ಯಾ ರೈ) ನಗುಮೊಗದ ಅಭಿನಯ ಲಾಲಿತ್ಯಪೂರ್ಣ ಹಿತಮಿತವಾಗಿತ್ತು. ಪ್ರಸಂಗ ಕಳೆಗಟ್ಟಿತು.

ದಿನದ ಎರಡನೆಯ ಪ್ರದರ್ಶನ ನೀಡಿದ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘ, ಬಾಳ- ಕಾಟಿಪಳ್ಳ ಇವರ ಮಹಿಷ ಮರ್ದಿನಿಯನ್ನು ಪುರುಷೋತ್ತಮ ಭಟ್‌, ಮುರಾರಿ ಕಡಂಬಳಿತ್ತಾಯ, ನೆಕ್ಕರೆಮೂಲೆ ಗಣೇಶ ಭಟ್‌, ರಾಕೇಶ್‌ ಅವರ ಸತ್ವಯುತ ಹಿಮ್ಮೇಳ ಕಳೆಗಟ್ಟಿಸಿತು. ದೇವೇಂದ್ರನ ತೆರೆಕಲಾಸು, ಸಭಾಕಲಾಸು ಕುಣಿತಗಳು ಸಾಕಷ್ಟು ತಯಾರಿಯನ್ನು ಸೂಚಿಸುತ್ತಿದ್ದವು. ಮಾಲಿನಿ (ಸುಷ್ಮಾ ಮೈರ್ಪಾಡಿ)ಯ ನೃತ್ಯಾಭಿನಯ, ಹಾವಭಾವ, ಅಂಗೋಪಾಂಗ ಸಮನ್ವಯ, ಮಾತುಗಾರಿಕೆ ಹೀಗೆ ಸರ್ವಾಂಗ ಸುಂದರ ನಿರ್ವಹಣೆ ಮೆಚ್ಚತಕ್ಕದ್ದು. ವಿದ್ಯುನ್ಮಾಲಿ (ಮಾಲತಿ ರಾವ್‌) ವೃತ್ತಿಪರ ಪಾತ್ರಧಾರಿಗೆ ಮಿಗಿಲಾಗಿತ್ತು. ಮಾಲಿನಿ ದೂತ (ರೇವತಿ) ರಸಪ್ರತಿಪಾದನೆ ಚೆನ್ನಾಗಿತ್ತು. ಇಡೀ ತಂಡವನ್ನಾಧರಿಸಿದ ಮಹಿಷಾಸುರ (ಪೂರ್ಣಿಮಾ ರೈ) ನದು ಶ್ರೇಷ್ಠ ಪಾತ್ರ ನಿರ್ವಹಣೆ. ದೊಂದಿ, ರಾಳದ ಉಪಯೋಗ, ರಂಗ ತುಂಬುವ ಗಾಂಭೀರ್ಯ ಅದ್ಭುತ. ಸ್ವರಭಾರದಲ್ಲಷ್ಟೇ ಹೆಣ್ಣೆಂಬ ಭಾವ ಬರಬಹುದು. ಶ್ರೀದೇವಿ (ಸುಮಂಗಲಾ)ಯದು ಗಂಭೀರ ಪಾತ್ರ ನಿರ್ವಹಣೆ. ಉಳಿದಂತೆ ಪೋಷಕ ಪಾತ್ರಗಳೆಲ್ಲ ಉತ್ತಮ ಪೂರಕ ನಿರ್ವಹಣೆ ನೀಡುವ ಮೂಲಕ ಬಯಲಾಟದಂತೆ ಕಳೆಗಟ್ಟಿದ ಪ್ರಸಂಗ.

ಮಹಿಳಾ ಯಕ್ಷಕೂಟ ಕದ್ರಿಯವರ ಅನಭಿಷಿಕ್ತ ದೊರೆ ಪ್ರಸಂಗದಲ್ಲಿ ದಯಾನಂದ ಕೋಡಿಕಲ್‌, ಕೃಷ್ಣರಾಜ ನಂದಳಿಕೆ, ಕಾರ್ತಿಕ್‌ ಕೊರ್ಡೆಲು, ಪೂರ್ಣೇಶ್‌ ಅವರ ಹದವರಿತ ಪೂರಕ ಹಿಮ್ಮೇಳ. ಆರಂಭದಿಂದಲೇ ಕುತೂಹಲ ಮೂಡಿಸಿದ ಕಥೆಯ ಓಘ. ವೃತ್ತಿಪರವಾಗಿ ಕಂಡುಬಂದ ಪ್ರಸಂಗ ನಿರೂಪಣೆ ಈ ಪ್ರದರ್ಶನದ ಹೈಲೈಟ್‌. ಕೌರವ (ರಂಜಿತಾ ಎಲ್ಲೂರು) ಅಪೂರ್ವ ಪ್ರತಿಭೆ. ಅವರದು ಸಮನ್ವಯವುಳ್ಳ ನೃತ್ಯಾಭಿನಯ, ರಂಗ ತುಂಬುವ ಬೀಸುನಡೆ, ಸವ್ಯಾಪಸವ್ಯ ಚಲನೆ, ಭಾವಪೂರ್ಣ ರಸ ಪ್ರತಿಪಾದನೆ ಹಾಗೂ ಪ್ರಸಂಗ ದುದ್ದಕ್ಕೂ ನಿರಾಯಾಸ ಕಸುಬುಗಾರಿಕೆಯಿಂದ ಶ್ರೇಷ್ಠ ನಿರ್ವಹಣೆ. ಪ್ರೇರಣೆ ನೀಡಿದ ಭೀಮ (ವಿದ್ಯಾ), ಭಾವಪೂರ್ಣ ಸಂಜಯ (ಪೂರ್ಣಿಮಾ ಶಾಸ್ತ್ರಿ), ಇವರ ಬೇಹಿನಚರವೂ ಉತ್ತಮವಾಗಿತ್ತು. ಲಾಲಿತ್ಯಪೂರ್ಣ ಕೃಷ್ಣ (ಸ್ವಾತಿ ದೇವಾಡಿಗ), ಚುರುಕು ನೃತ್ಯ ನಡೆಯ ಅಶ್ವತ್ಥಾಮ (ರಕ್ಷಿತಾ ಎಲ್ಲೂರು), ಗಂಭೀರ ಧರ್ಮರಾಜ (ವನಿತಾ), ಗತ್ತಿನ ಬಲರಾಮ (ದುರ್ಗಾಶ್ರೀ) ಹೀಗೆ ಎಲ್ಲ ಪೋಷಕ ಪಾತ್ರಗಳೂ ಸಮಷ್ಟಿಯ ನಿರ್ವಹಣೆ ನೀಡಿ ಈ ಪ್ರದರ್ಶನ ಸಪ್ತಾಹಕ್ಕೆ ಕಲಶವಿಟ್ಟಂತಿತ್ತು.

ಲಕ್ಷ್ಮೀನಾರಾಯಣ ಮಹಿಳಾ ಯಕ್ಷಗಾನ ಸಂಘ, ಮುಂಡಾಜೆಯ ಶ್ರೀಕೃಷ್ಣಲೀಲೆ- ಕಂಸವಧೆಗೆ ಸತ್ಯನಾರಾಯಣ ಪುಣಿಂಚಿತ್ತಾಯ, ಪಡ್ರೆ ಆನಂದ, ಪಡ್ರೆ ಶ್ರೀಧರ, ವೆಂಕಟೇಶ ತುಳಪುಳೆಯವರ ಶ್ರವಣಸೌಖ್ಯ ಹಿಮ್ಮೇಳ. ಮುಮ್ಮೇಳದ ಪ್ರದರ್ಶನವೂ ಉತ್ತಮವಾಗಿತ್ತು. ಕೃಷ್ಣ (ಪಂಚಮಿ ತುಳಪುಳೆ) ಲಾಲಿತ್ಯಪೂರ್ಣವಾಗಿತ್ತು. ಕಂಸ (ನಿಶಾ ಭಟ್‌) ನದು ಆರಂಭದಲ್ಲಿ ಕಿರೀಟ ವೇಷ, ಅನಂತರದ ಕನಸಿನ ಭಾಗದಲ್ಲಿ ನಾಟಕೀಯ ವೇಷ. ಎರಡೂ ಸ್ತರದಲ್ಲಿ ವೇಷಕ್ಕೆ ತಕ್ಕಂತೆ ನೃತ್ಯ, ಅಭಿನಯ, ಗಾಂಭೀರ್ಯತೆಯಿಂದ ಸೊಗಸಾದ ನಿರ್ವಹಣೆಯಿತ್ತು.

ತೆ೦ಕು ತಿಟ್ಟಿನ ಯುವ ಭಾಗವತೆ ಭವ್ಯಶ್ರೀ ಮಂಡೆಕೋಲು

ಗಾನವೈಭವ

ಐವರು ಮಹಿಳಾ ಭಾಗವತರಿಂದ ಗಾನವೈಭವ ಸಮಾವೇಶ ದೊಳಗೆ ಒಂದು ಅಪೂರ್ವ ಪ್ರಯೋಗಕ್ಕೆ ಸಾಕ್ಷಿಯಾಯಿತು. ಸಾಂಪ್ರದಾಯಿಕ ಭಾಗವತಿಕೆಯಲ್ಲಿ ಸಂಗೀತ ಶೈಲಿಯನ್ನು ಅಳವಡಿ ಸಿದ ಹಿರಿಯ ಭಾಗವತ ಲೀಲಾವತಿ ಬೈಪಾಡಿತ್ತಾಯ, ಶುದ್ಧ ಯಕ್ಷಗಾನೀಯ ಮಾಂಬಾಡಿ ಶೈಲಿಯ ದುರ್ಗಾಪರಮೇಶ್ವರಿ ಕುಕ್ಕಿಲ, ಸತ್ವಯುತ ಧ್ವನಿಯ ಭವ್ಯಶ್ರೀ ಮಂಡೆಕೋಲು, ರಾಗಾಲಾಪ ಹಾಗೂ ಸಮರ್ಥವಾಗಿ ಹಿಮ್ಮೇಳವನ್ನು ಬಳಸಿಕೊಂಡ ಕಾವ್ಯಶ್ರೀ, ಹದವರಿತ ಭಾಗವತಿಕೆಯ ಅಮೃತಾ ಅಡಿಗ ಈ ಗಾನವೈಭವದಲ್ಲಿ ದನಿಗೂಡಿಸಿದ್ದರು. ಇದಕ್ಕೆ ಪೂರಕ ಸಾಥ್‌ ನೀಡಿದ್ದು ಜನಾರ್ದನ ತೋಳ್ಪಾಡಿತ್ತಾಯರ ಮದ್ದಳೆ.
ಕಲಾ ಗೌರವ

ಸಮಾರೋಪ ಸಮಾರಂಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆ, ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಕಲೆಗಳಲ್ಲಿ ವಿವಿಧ ಸಾಧನೆಗೈದ ಕೆ. ಆರ್‌. ಶಾಂತಾ, ಲೀಲಾ ಶ್ರೀಧರ ರಾವ್‌, ಶಾಂತಾ ಪಡ್ವೆಟ್ನಾಯ, ಗಿರಿಜಾ ಭಟ್‌, ಶ್ಯಾಮಲಾ ನಾಗರಾಜ್‌, ಮನೋರಮಾ ತೋಳ್ಪಾಡಿತ್ತಾಯ, ವತ್ಸಲಾ ಬಡೆಕಿಲ್ಲಾಯ, ಸುಚಿತ್ರಾ ಹೊಳ್ಳ, ವಿದ್ಯಾ ಮನೋಜ್‌, ಪ್ರಿಯಾ ಸತೀಶ್‌, ಅನಸೂಯಾ ಪಾಠಕ್‌, ಶ್ಯಾಮಲಾ ಕೇಶವ್‌, ಡಾ| ರಜತಾ ರಾವ್‌, ಅನನ್ಯಾ ಭಟ್‌ ಅವರನ್ನು ಗೌರವಿಸಿದರು. ಒಟ್ಟು ಸಪ್ತಾಹ ಹೊಸ ಇತಿಹಾಸಕ್ಕೆ ಸಾಕ್ಷಿಯಾಯಿತು.ಕೃಪೆ : http://udayavani.com
Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ