ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಹನುಮಚರಿತ ಜ್ಞಾನಸತ್ರ

ಲೇಖಕರು : ಗಣರಾಜ ಕು೦ಬ್ಳೆ
ಶುಕ್ರವಾರ, ಜೂನ್ 26 , 2015

ಹಿರಿಯ ಅರ್ಥಧಾರಿ, ಪ್ರವಚನಕಾರ ಅಂಬಾತನಯ ಮುದ್ರಾಡಿಯವರ ಹಿತಮಿತ ಮೃದು ವಚನಗಳು, ಕಾವ್ಯಮಯ ಶೈಲಿ, ವ್ಯಾಖ್ಯಾನದ ಪ್ರಗಲತೆ ತಾಳಮದ್ದಳೆಯಲ್ಲಿ ಇನ್ನೊಂದು ವಿಶೇಷ ಆಕರ್ಷಣೆ ಎನಿಸಿತು. ಸೀತಾನ್ವೇಷಣೆ ಹುಡುಗಾಟದ್ದಲ್ಲ, ಹುಡುಕಾಟದ್ದು. ಕಪಿಗಳೂ ಇಂತಹ ಶ್ರೇಷ್ಠ ಹಾದಿ ಹಿಡಿದದ್ದು ನೋಡಿ ನಾಲ್ಕೂ ವರ್ಣದವರಿಗೆ ಅಚ್ಚರಿಯಾಯಿತಂತೆ. ಮಲಯಾಚಲದ ಅಮೃತಮಯ ಪ್ರಕೃತಿಯ ವರ್ಣನೆಯೊಂದಿಗೆ ತಮ್ಮ ಸುಂದರ ಮಾತಿನ ಮೋಡಿಯನ್ನು ಮಾಡಿದರು.

ಆಂಜನೇಯ ವಾಯುಪುತ್ರ, ಬಲಶಾಲಿ ಎನ್ನುತ್ತಾ ಆತನ ಹುಟ್ಟಿನ ಕತೆಯನ್ನು ತೆರೆತೆರೆದು ವರ್ಣಿಸಿ ಹೊರಗಣ್ಣು, ಒಳಗಣ್ಣಲ್ಲ ಎರಡರಿಂದಾಚೆಗಿನ ತಿಳಿಗಣ್ಣ ತೆರೆದು ನೋಡು ಮುಕ್ಕಣ್ಣ ದರ್ಶನದಿಂದ ಕಾರ್ಯ ಸಾಧನೆ ಮಾಡೆಂದು ಪ್ರೇರಿಸಿದರು.

ಸ್ವಯಂಪ್ರಭೆಯೊಂದಿಗೆ ಸಂವಾದದಲ್ಲಿ ಸಂಯಮ ತೋರಿದ ಜಾಂಬವ ನಿಜಕ್ಕೂ ದೊಡ್ಡವ ಎಂದು ತಿಳಿಯಿತು. ಸ್ವಯಂಪ್ರಭೆ ಪಾತ್ರಧಾರಿ ರವಿ ಅಲೆವೂರಾಯರು ಆಕೆಯ ಗಾಢಗರ್ವವನ್ನು ಹದ ತಪ್ಪದ ವಿನೋದವನ್ನೂ ಒಂದಿಷ್ಟು ದೇಸೀ ಸೊಗಡನ್ನೂ ಬೆರೆಸಿ ರಸಿಕರ ಮುಂದಿಟ್ಟರು. ಜಾಂಬವ, ಹನುಮಾದಿಗಳನ್ನು "ಪದೆ ಪದೇ' ಕೆಣಕಿ ಮಾತಾಡುತ್ತಿದ್ದ ಬಗೆ ತಾಳಮದ್ದಳೆಯ ಕಾವೇರಿಸಿದ್ದು ಸುಳ್ಳಲ್ಲ. ಅಂಗದನ ಪಾತ್ರ ಶ್ರೀಧರ ಡಿ.ಎಸ್‌. ಅವರದು. ಸಂವಾದ ಭಾಗದಲ್ಲಿ ಹನುಮ, ಜಾಂಬವರೊಡನೆ ಬೆರೆತು ಸಾಂದರ್ಭಿಕವಾಗಿ ವಿಚಾರಪ್ರಚೋದಕವಾದ ಅನೇಕ ಸಂಗತಿಗಳನ್ನು ತುಂಬಿಕೊಟ್ಟರು.

ವಾದಿರಾಜ ಕಲ್ಲೂರಾಯರದು ಸಂಪಾತಿಯ ಪಾತ್ರ ನಿರ್ವಹಣೆ. ತನ್ನ ಮೌನವೇ ತಪವಾಗಿ ಮಂತ್ರವಾಗಿ ರಾಮಮಂತ್ರವಾಗಿ ತನ್ನ ಉದ್ಧಾರಕ್ಕೆ ಕಾರಣವಾಯಿತೆಂಬುದನ್ನು ಸುಂದರ ಸುಲಲಿತ ನುಡಿಗಳೊಡನೆ ಭಾವಪೂರ್ಣವಾಗಿ ಮಂಡಿಸಿದರು. ಸುರೇಶ ಕುದ್ರೆಂತಾಯರ ಪಾತ್ರ ಲಂಕಿಣಿ- ಸಂರಕ್ಷಣೆ ನಾರಿಯ ಹೊಣೆ ಎಂಬುದಕ್ಕೆ ಆದಿಮಾಯೆಯೇ ಸಾಕ್ಷಿ ಎನ್ನುತ್ತಾ ಹನುಮಂತ ರಾಕ್ಷಸರ "ಮದ್ಯರಾತ್ರಿ'ಯಲ್ಲಿ ಕಳ್ಳನಂತೆ ಸುಳಿದಾಡುವುದನ್ನು ಆಕ್ಷೇಪಿಸಿದರು. ನಡುವಿರುಳು ರಾಕ್ಷಸರಿಗೆ ಮದ್ಯಗೋಷ್ಠಿಯ ಕಾಲವೆಂಬುದನ್ನು ವಾಚ್ಯ ಗೊಳಿಸದೆ ನಗೆ ಚಿಮ್ಮಿಸಿದರು. ಒಟ್ಟಾರೆ ಕೊನೆಯ ಭಾಗದಲ್ಲಿ ಹಾಸ್ಯ, ಕರುಣ, ವೀರ ರಸಗಳ ಮುಪ್ಪುರಿಯಾಗಿ ತಾಳಮದ್ದಳೆ ಕಳೆಗಟ್ಟಿತು.

ಹನುಮ ಸಾಂತ್ವನ

28-5-2015ರಂದು "ಹನುಮ ಸಾಂತ್ವನ' ವಿದ್ವಾನ್‌ ಗಣಪತಿ ಭಟ್ಟ, ಎ.ಪಿ. ಪಾಠಕ್‌, ಕೃಷ್ಣ ಯಾಜಿ ಇಡಗುಂಜಿಯವರ ಸಮರ್ಥ ಹಿಮ್ಮೇಳದೊಂದಿಗೆ. ಹನುಮಂತನ ಪಾತ್ರಧಾರಿ ವಿದ್ವಾನ್‌ ಉಮಾಕಾಂತ ಭಟ್ಟರು ಇಡಿಯ ಪ್ರಸಂಗವನ್ನು ಆವರಿಸಿಕೊಂಡಿದ್ದರು. "ಲಂಕಿಣಿ' ಹಲವು ಪರಿಯಲ್ಲಿ ಕಾಡಿದವಳು, ಕಾಡುವಳು, ಕಾಯ್ದವಳು ಎನ್ನುತ್ತಾ ಜಾಂಬವರ ಸ್ಫೂರ್ತಿ ಪಡೆದು "ಲಂಕಾಪ್ರವೇಶ' ಎಂಬ ನವ ರೂಪಕ ವೊಂದರ ಸೂತ್ರಧಾರ ಹನುಮನಾಗಬೇಕಾಯಿತು ಎಂದರು. ಕತ್ತಲೆಯ ಅನುಕೂಲದಲ್ಲಿ ಬೆಳಕಿನ ಹುಡುಕಾಟ ತನ್ನದು. ಕುಂಭಕರ್ಣನ ಸುಷುಪ್ತಿ, ಯೋಗಿಗಳಿಗೆ "ಕುಂಭಕ', ತಾಮಸದ ಕಣ್ಣಿಗೆ "ನಿದ್ದೆ'. ಆತ್ಮದಲ್ಲಿ ಮನವನ್ನು ಲೀನಗೊಳಿಸಿದ ಬಗೆ ಒಂದು ಬಗೆಯಾದರೆ ವಿಭೀಷಣನದು ಜಾಗರ. ಅದು ಯೋಗಿಯ ಕಣ್ಣಿಗೆ. ರಕ್ಷಾಮಃ ಎಂದ ರಾಕ್ಷಸರ ನಿಜ ಪ್ರತಿನಿಧಿ ಈತ. ವಿಗತ ಭೀಷಣನಿವ, ಅಂತರಂಗದಲ್ಲಿ ಈತನಿಗೂ ಭಯವಿಲ್ಲ, ಈತನ ಬಗೆಗೆ ಯಾರಿಗೂ ಭಯವಿಲ್ಲ. ಈ ಸುಷುಪ್ತಿ ಹಾಗೂ ಜಾಗರಗಳ ನಡುವೆ ರಾವಣನ ಸ್ವಪ್ನ "ಭ್ರಮೆ' ಎಂದು ಮೂರು ವ್ಯಕ್ತಿತ್ವಗಳನ್ನು ಮೊದಲಿಗೆ ಭಟ್ಟರು ಸ್ಥಾಪಿಸಿದರು.

ವಿದ್ವಾನ್‌ ಉಮಾಕಾಂತ ಭಟ್
ರಾವಣನ ಪಲ್ಲಂಗ "ಸೋಮಯಾಗದ ವೇದಿ'ಯಂತೆ ಉನ್ನತ ಎಂದು ವರ್ಣಿಸಿ, ದೇಹ ಮರೆತು ಮಲಗಿದವಳು ವಿದೇಹ ರಾಜಪುತ್ರಿಯೇ ಎಂದು ಉದ್ಗರಿಸಿದಳು. ಶಿವನ ಜಟೆಯ "ಚಿತ್ಕಲಾ'ದಂತಹ ಶಾಂತಪ್ರಭೆ ಸ್ತ್ರೀಯಲ್ಲಿದೆ. ಆದರೆ ಕುರುಹುಗಳು ವ್ಯತಿರಿಕ್ತ. ಕುರುಹುಗಳು ಯಾವುವು? ಅವುಗಳ ವಿಶೇಷ ಅರ್ಥಗಳೇನೆಂಬುದನ್ನು ಹೇಳದೆ ಅಶೋಕ ವನದೆಡೆಗೆ ಸಾಗಿದರು. ಒಳಗೆ ಶೋಕ, ಹೊರಗೆ ಅಶೋಕ ಲಂಕೆಯ ಸ್ಥಿತಿ; ಹೊರಗೆ ಶೋಕ ಒಳಗೆ ಅಶೋಕ ಸೀತೆಯ ಸ್ಥಿತಿ ಎಂದು ಚಿಂತಿಸಿದರು.

ನಡುವೆ ಸುಂದರ ರಾವಣನ ಶೃಂಗಾರ. ನಿಸರಾಣಿ ರಾಮಚಂದ್ರ ಹೆಗಡೆಯವರು ರಾವಣನ ಪಾತ್ರದಲ್ಲಿ ಹಿಮ್ಮೇಳದ ಮಾರನಾಸ್ತ್ರ ತಾಗಿ... ಮಾತಾಡಬಾರದೇನೆ... ಪದ್ಯಗಳ ಶೃಂಗಾರ ರಸಪ್ರತಿಪಾದನೆಗೆ ಅನುಕೂಲಿಸುವಂತೆ ಮಾತುಗಾರಿಕೆಯನ್ನು ನಿರ್ವಹಿಸಿದರು. ಸೀತೆಯಾಗಿ ಶಶಿಕಾಂತ ಶೆಟ್ಟಿ ಭಾವನಾತ್ಮಕತೆಯನ್ನು ಮರೆದು ಕರುಣರಸಸ್ಯಂದಿಯಾಗಿ ಪ್ರದರ್ಶನ ನೀಡಿದರು.

ಸಮಾರೋಪಕ್ಕೆ ಉಮಾಕಾಂತ ಭಟ್ಟರು ಉನ್ಮಾದ ಕಳೆದು ಉನ್ಮನೀ ಭಾವ ಬರುವಂತೆ ಜೀವೋತ್ಕರ್ಷ ಸಾಂತ್ವನ ನೀಡಿದೆ ಎಂದು ಸೀತೆಯನ್ನು ಪ್ರಶಂಸಿಸುತ್ತಾರೆ. ಹಾಗಾಗಿ ಹನುಮಂತ ಸೀತೆಗೆ ಸಾಂತ್ವನ ನೀಡಿದ್ದಲ್ಲ, ಸೀತೆಯೇ ಸಾಂತ್ವನ ನೀಡಿದ್ದೆಂದಾಗ ಪ್ರಸಂಗಕ್ಕೆ ಹೊಸ ಹೊಳಸು ಸಿಕ್ಕಿದಂತಾಯಿತು. ಸುಬ್ರಹ್ಮಣ್ಯ ಬೈಪಡಿತ್ತಾಯರು ಸರಮೆ ಹಾಗೂ ತ್ರಿಜಟೆಯರನ್ನು ಪ್ರತಿನಿಧಿಸಿದರೆ ಸದಾನಂದ ಶರ್ಮರು ರಾವಣನ ದೂತನಾಗಿ ಕಾಣಿಸಿಕೊಂಡರು.

ಹನುಮ ಸಾಹಸ

29-5-2015ರಂದು ಪಟ್ಲ ಸತೀಶ ಶೆಟ್ಟಿ, ಲಕ್ಷ್ಮೀಶ ಅಮ್ಮಣ್ಣಾಯ, ಮುರಾರಿ ಕಡಂಬಳಿತ್ತಾಯರ ಹಿಮ್ಮೇಳದೊಂದಿಗೆ "ಹನುಮ ಸಾಹಸ' ಪ್ರಸಂಗ ಪ್ರಸ್ತುತಿ.

ಜಬ್ಟಾರ್‌ ಸಮೊ
ಜಬ್ಟಾರ್‌ ಸಮೊ ಅವರ ರಾವಣನ ಪೀಠಿಕೆಯೊಂದಿಗೆ ತೊಡಗಿದ ಪ್ರಸಂಗ ಲಕ್ಷ್ಮಣನೊಂದಿಗಿನ ಯುದ್ಧದಲ್ಲಿ ಸಂವಾದದ ಕಳೆಗಟ್ಟಿ ಗೊಂಡಿತು. ಹರೀಶ ಬಳಂತಿಮೊಗರು ಲಕ್ಷ್ಮಣನಾಗಿ ಕಾಣಿಸಿಕೊಂಡರು.

ಅನಂತರ ರಾಧಾಕೃಷ್ಣ ಕಲ್ಚಾರರ ಹನುಮಂತನ ಪ್ರವೇಶ. ಚುಟುಕಾಗಿ ತನ್ನ ರಂಗಪ್ರವೇಶದ ಔಚಿತ್ಯವನ್ನು ಪ್ರಸ್ತಾಪಿಸಿ ರಾವಣ ನೊಂದಿಗೆ ಸಮರಕ್ಕನುವಾಗುತ್ತಾನೆ ಹನುಮಂತ. ಯಾವುದೇ ಕುತರ್ಕಕ್ಕೆ ಎಡೆಯಿಲ್ಲದಂತೆ ತನ್ನ ಮಾತುಗಳಿಂದ ರಾವಣನನ್ನು ಹಿಡಿದಿಟ್ಟು ಕೊಳ್ಳುತ್ತಾನೆ. ರಾವಣನೂ ಹನುಮಂತನ ಘನತೆಯನ್ನು ಒಪ್ಪಿದ್ದಂತೆ ಯುದ್ಧದಲ್ಲಿ ಸೋತು ಬಿಡುತ್ತಾನೆ. ರಾಮನಾಗಿ ಬಂದ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿವರು ತಮ್ಮ ಸರಳ ಮಾತುಗಾರಿಕೆಯಿಂದ ಪಾತ್ರ ನಿರ್ವಹಿಸಿದರು.

ಕಾಲನೇಮಿ ಹಾಗೂ ರಾವಣನ ಸಂವಾದ ಕೊನೆಯ ಭಾಗದಲ್ಲಿ ಮತ್ತೆ ಪ್ರಸಂಗದ ಕಳೆಯೇರಿಸಿತು. ಮಾರೀಚಸುತ ಕಾಲನೇಮಿಯ ಪಾತ್ರ ಲಕ್ಷ್ಮೀನಾರಾಯಣ ಸಾಮಗರದಾಗಿತ್ತು. ಮಾರೀಚನ ವ್ಯಕ್ತಿತ್ವದ ಪಡಿನೆಳಲಿನಂತೆ ಕಾಲನೇಮಿಯನ್ನು ಚಿತ್ರಿಸುತ್ತ ಸಾಗಿದ ಸಾಮಗರಿಗೆ ಜಬ್ಟಾರರ ಸೂಕ್ತ ಪ್ರತಿಕ್ರಿಯೆಗಳಿಂದ ಸಂವಾದಕ್ಕೆ ಸೊಗಸೇರಿತು.

ಹನುಮ ಭಕ್ತಿ

30-5-2015ರಂದು "ಹನುಮ ಭಕ್ತಿ' ಜನ್ಸಾಲೆ ರಾಘವೇಂದ್ರ ಆಚಾರ್‌, ಸುನೀಲ್‌ ಭಂಡಾರಿ ಹಾಗೂ ಜನಾರ್ದನ ಆಚಾರ್‌ ಇವರ ಸಮರ್ಥ ಹಿಮ್ಮೇಳದೊಂದಿಗೆ ಪ್ರಸ್ತುತಗೊಂಡಿತು.

ಸುಣ್ಣಂಬಳ ವಿಶ್ವೇಶ್ವರ ಭಟ್
ಅಂಜನೆಯಾಗಿ ನಾ. ಕಾರಂತ ಪೆರಾಜೆಯವರು ಶ್ರೀರಾಮ ಸಾಂಗತ್ಯದಿಂದ ಹನುಮ, ಆತನ ತಾಯಿಯಾಗಿ ತಾನು ಧನ್ಯೆಯಾದ ಪರಿಯನ್ನು ಬಣ್ಣಿಸಿ ಮುಂದೆ ಹನುಮಂತನಲ್ಲಿ ಸಂವಾದಕ್ಕಿಳಿಯುತ್ತಾರೆ. ಶಕುಂತ ರಾಜನಿಂದ ಒದಗಿ ಬಂದ ಕಷ್ಟಕ್ಕೆ ಪರಿಹಾರವನ್ನು ಅವನ ಮೂಲಕ ಪಡೆಯುತ್ತಾರೆ.

ಹನುಮಂತನಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್ಟರು ತನ್ನ ಉಭಯ ಸಂಕಟ -ಅತ್ತ ಸ್ವಾಮಿಯನ್ನು ಬಿಡಲಾಗದ; ಇತ್ತ ಮಾತೆಯನ್ನು ಬಿಟ್ಟುಕೊಡಲಾಗದ ಸ್ಥಿತಿಯನ್ನು ತೋಡಿಕೊಂಡು ಯಾವುದು ಪರಿಗ್ರಾಹ್ಯ ಎಂದು ಚಿಂತನೆ ನಡೆಸುತ್ತಾರೆ. ಸೀತಾದೇವಿ ಡಾ| ಪ್ರದೀಪ ಸಾಮಗರದು. ಲವಲವಿಕೆ, ಪಾತ್ರಕ್ಕೊಪ್ಪುವ ಶಾರೀರ, ಭಾಗವತರ ಹಾಡುಗಾರಿಕೆಗೆ ದನಿಗೂಡಿಸುವ ಸೊಗಸುಗಳೊಂದಿಗೆ ಅಂಜನೆ ಯೊಂದಿಗೆ ಮಾತಾಡಿಸುತ್ತಾರೆ. ಕೊನೆಯಲ್ಲಿ ರಾಮನೊಂದಿಗೆ ಸಂವಾದ ಮಾಡುವೆಡೆ ಸಖೀಯಂತೆ ಪಾತ್ರ ವ್ಯಕ್ತಿತ್ವದ ಇನ್ನೊಂದು ಮುಖದರ್ಶನ ಮಾಡಿದರು. ಗಂಡನ ಸಿಟ್ಟಿನ ಗುಟ್ಟು ಏನು ಎಂಬುದನ್ನು ಕೇಳುತ್ತಾ ತನ್ನ ಗುಟ್ಟನ್ನು ಹಾಗೇ ಇರಿಸಿಕೊಂಡು ಸಮಸ್ಯೆಯನ್ನು ಸುಲಭವಾಗಿ ಬಿಡಿಸಿ ಬಿಗಿಯಾಗಿದ್ದ ಒಟ್ಟು ಸಂದರ್ಭವನ್ನು ಅವರು ಸಡಿಲಗೊಳಿಸಿದ ಬಗೆ ರೋಚಕವಾಗಿತ್ತು. ರಾಮ ಸೀತೆಯರ ಸಾತ್ವಿಕ ಸರಸ ವಾಕ್ಸಮರ ಕುತೂಹಲಕಾರಿಯಾಗಿತ್ತು.

ರಾಮನಾಗಿ ಸರ್ಪಂಗಳ ಈಶ್ವರ ಭಟ್ಟರು ಎಲ್ಲೂ ಸಂಯಮ ಕಳೆಯದೆ ಯಜ್ಞರಕ್ಷಣೆಯ ಮೂಲಕ ಧರ್ಮರಕ್ಷಣೆಯನ್ನು ಕಲಿಸಿದ ಗುರು ಕೌಶಿಕರ ಮಾತಿನ ಈಡೇರಿಕೆಗೆ ರಾಮ ಬದ್ಧನಾದುದರ ಔಚಿತ್ಯ ವನ್ನು ಸಿದ್ಧಪಡಿಸಿದರು. ರಾಮನ ಅಭಾವದಲ್ಲಿ ಹನುಮನೇನು ಎಂದು ಪ್ರಶ್ನೆಯನ್ನೆತ್ತಿ ರಾಮ ಪ್ರಭಾವದ ಹಿನ್ನೆಲೆಯನ್ನು ತೋರಿದರು. ಅಂಜನೆ ಯಿಂದ, ಸೂರ್ಯನಿಂದ ಪ್ರೇರಿತನಾಗಿ ರಾಮ ದಾಸ್ಯ, ಸುಗ್ರೀವ ಭೃತ್ಯ ನಾದ ಬಗೆಯನ್ನು ವ್ಯಂಗ್ಯವಾಗಿ ತಿಳಿಸಿದರು. ಸಂಬಂಧಗಳ ಅಸ್ಥಿರತೆಯನ್ನು ಹೇಳಿ ರಾಮನ ವ್ಯಕಿÂತ್ವದಲ್ಲಿ ಮಹಣ್ತೀದ್ದೆನಿಸಿದ- ಧರ್ಮಸಾಧನೆಯಲ್ಲಿ ಪ್ರಿಯರನ್ನೂ ತ್ಯಜಿಸುವ ಧೀರತೆಯನ್ನು ಎತ್ತಿಹಿಡಿದರು. ಭಾಸ್ಕರ ರೈ ಕುಕ್ಕವಳ್ಳಿಯವರ ಸುಗ್ರೀವ ಸಂಧಾನ ಅಚ್ಚುಕಟ್ಟಾಗಿ ನಿರೂಪಿತವಾಯಿತು.

ರಾಮ -ಹನುಮರ ಯುದ್ಧ ಮಾತಿನ ಚಕಮಕಿಯೊಂದಿಗೆ ರಸ ಪೋಷಣೆ ನೀಡಿತು. ಹನುಮಂತ ಆಶ್ರಿತನನ್ನು ರಕ್ಷಿಸಿದ್ದು ರಾಮನ ಬಂಟನಾಗಿಯೇ ಎಂದರೆ ರಾಮನನ್ನು ವಿರೋಧಿಸಿದರೆ ಬಂಟನಾಗಿ ಹೇಗೆ ಉಳಿದಾನೆಂದು ರಾಮನ ಪ್ರಶ್ನೆ. ರಾಮನೆಂದರೆ ದಶರಥ ಪುತ್ರ ರಾಮನಲ್ಲ. ತಾರಕ ಮಂತ್ರದ ಅಧಿಷ್ಠಾತೃ ರಾಮ ಎಂದು ಹನುಮನ ಮತ. ವ್ಯಕ್ತಿಯಾಗಿ ನಂಬಿದ್ದಲ್ಲ, ಶಕ್ತಿಯಾಗಿ ತಿಳಿದು ನಂಬಿದ್ದೆಂದು ಸಮರ್ಥನೆ.

ಕೌಶಿಕನ ಪಾತ್ರವಿಲ್ಲದಿದ್ದರೂ ಪ್ರಾಸಂಗಿಕವಾಗಿ ಪ್ರಸ್ತಾಪವಿತ್ತು. ಸೀತೆಯ ವರವೂ ಫ‌ಲಿಸಿದ್ದು ತಾಯ್ತನಕ್ಕೆ ದೊರೆತ ಪೂಜ್ಯ ಸ್ಥಾನದಿಂದ ಎಂಬ ಹೊಳಹು ವಿಶಿಷ್ಟವಾಗಿತ್ತು.

ಹನುಮ ಸಂಧಾನ

31-5-2015ರಂದು ಹನುಮ ಸಂಧಾನ (ವೀರಮಣಿ ಕಾಳಗ) ಪ್ರಸಂಗ. ಕೆ.ಜೆ. ಕೃಷ್ಣ , ಕೆ.ಜೆ. ಸುಧೀಂದ್ರ ಅವರ ಚೆಂಡೆಮದ್ದಳೆ ವಾದನದೊಂದಿಗೆ ಸುಶ್ರಾವ್ಯವಾಗಿ ಭಾಗವತಿಕೆ ಮಾಡಿದವರು ಕೆ.ಜೆ. ಗಣೇಶರು. ಹನುಮಂತನಾಗಿ ಹಿರಣ್ಯ ವೆಂಕಟೇಶ ಭಟ್ಟರು, ಹನುಮಂತನಲ್ಲಿ ಧ್ಯೇಯಕ್ಕೆ ವಿರುದ್ಧವಾದ ಭಾವಪ್ರಕಾಶವಿಲ್ಲ. "ವಾಲಾಸನ'ವೆಂಬುದು ಪ್ರತ್ಯೇಕ ಆಸನವೇನಲ್ಲ. ರಾಜನನ್ನು ಕಾಣುವುದ ಕ್ಕಾಗಿ ತುಸು ಎತ್ತರ ಎಂದು ಸಯುಕ್ತಿಕವಾಗಿ ಪ್ರತಿಪಾದನೆ ಮಾಡಿದರು. ವೀರಮಣಿಯಾಗಿ ಉಜಿರೆ ಅಶೋಕ ಭಟ್ಟರು ಕೋಪದ ಬದಲು ವಿನೋದವನ್ನು ಹರಿಸಿ ಹನುಮಂತನನ್ನು ಆಕ್ಷೇಪಿಸುತ್ತಾ "ಕುದುರೆಯ ಹಣೆಯ ಬರೆಹದಂತೆ ಬಲುಹು ಇದ್ದುದರಿಂದ ಕಟ್ಟಿದ್ದೇವೆ' ಎಂದರೆ ಹಿರಣ್ಯರು, ಬರೆಹದ ಉಪೋದ್ಘಾತವನ್ನು ಓದಬೇಕು. ರಾಮನ ಮಹಿಮೆಯುಳ್ಳ ಅವತಾರ ಲೋಕಕಲ್ಯಾಣದ ಉದ್ದೇಶದ್ದು. ರಾಮನೇ ತನ್ನನ್ನು ದೇವರೆಂದುಕೊಂಡಿಲ್ಲ. ಜ್ಞಾನಿಗಳು, ಭೃತ್ಯರು ದೇವರೆಂದಿದ್ದಾರೆ. ಚಕ್ರವರ್ತಿಯಾಗಿ ಪಾಪ ಪರಿಮಾರ್ಜನ, ಪುಣ್ಯ ಸಂಚಯನಗಳನ್ನು ಮಾಡಬೇಕು. ಅದಕ್ಕಾಗಿ ಯಜ್ಞ ಎಂದು ವಾದ ಮಂಡಿಸಿದರು. ಅಶೋಕ ಭಟ್ಟರು ರಾಮನಲ್ಲೂ ಮಾನವ ಸಹಜ ಮೌಡ್ಯಗಳಿವೆ ಎಂದು ಸಾಧಿಸಿ ಪ್ರತ್ಯುತ್ತರಿಸಿದರು. ಒಟ್ಟಾರೆ ಈ ಸಂಧಾನ ಪ್ರಕರಣ ತುಸು ದೀರ್ಘ‌ವೆನಿಸಿದರೂ ಸ್ವಾರಸ್ಯಕರವಾಗಿ ಬೆಳೆಯಿತು.

ಉಜಿರೆ ಅಶೋಕ ಭಟ್
ಶತ್ರುಘ್ನ ಪಾತ್ರಧಾರಿ ಸದಾಶಿವ ಅಳ್ವರು ಮೊದಲಿನಿಂದಲೂ ಶತ್ರುಘ್ನನಿಗೆ ತನ್ನ ವ್ಯಕ್ತಿತ್ವವನ್ನು ಬೆಳಗಿಸಲು ದೊರಕಿದ ಸದವಕಾಶ ಎಂಬ ನಿಲುವಿನಿಂದ ಹೊರಟವರು ವೀರಮಣಿಯೊಂದಿಗಿನ ಸಂಕ್ಷಿಪ್ತ ಸಮರ ದಲ್ಲೂ ಪಟ್ಟುಬಿಡದೆ ನಿಂತರು. ಈಶ್ವರನಾಗಿ ಡಾ| ಎಂ. ಪ್ರಭಾಕರ ಜೋಶಿಯವರು ದರ್ಶನಕ್ಕೆ ಮೊದಲು ಪ್ರದರ್ಶನ, ಅದಕ್ಕಾಗಿ ಏರಲು ಎತ್ತು, ತಲೆಯಲ್ಲಿ ಚಂದ್ರ, ಕೈಯಲ್ಲಿ ತ್ರಿಶೂಲ ಎನ್ನುತ್ತಾ ಕೈಲಾಸಕ್ಕೆ ಮತ್ತೆ ಶಿವನಾಗಿ ಹೊರಡುವ ಕಾಲ ಹತ್ತಿರ ಬಂದದ್ದರಿಂದ ಈ ರೂಪ ಇರಲಿ ಎಂದು ಶತ್ರುಘ್ನನಿಗೆ ಎದುರಾದರು. ಸಂಧಾನ ಸೋಗಿನದು, ಕಳಿಸಿದ್ದು "ಮಂಗ'ನನ್ನು ಎಂದರೆ ಹನುಮಂತನ ಯೋಗ್ಯತೆ, ಆತನಲ್ಲಿರುವ ಶಿವಾಂಶಗಳನ್ನು ಸದಾಶಿವ ಶೆಟ್ಟರು ವಿವರಿಸಿದರು. ರಾಮನ ಸೇವಕ ನಾದ ತನಗೆ ಶಿವನ ಬಗ್ಗೆ ವೈರವೋ ಅಗೌರವವೋ ಇಲ್ಲ. ಆದರೆ ವೀರ ಮಣಿಯ ಅಳಿಯನಲ್ಲಿ ಹೋರಾಟ ಇದೆ ಎಂದು ತನ್ನ ನಿಲುವನ್ನು ಗಟ್ಟಿಗೊಳಿಸಿದರು.

ಈಶ್ವರ -ಹನುಮರ ಯುದ್ಧ ಭಾಗದಲ್ಲಿ ಮತ್ತೆ ಸಂಧಾನದ ಔಚಿತ್ಯ, ರಾಮನನ್ನು ದೇವರೆಂದು ಹೇಳಿದವನೇ ವಿರೋಧಿಸುವ ವ್ಯತಿರಿಕ್ತ ನಡೆ ಚರ್ಚಿತವಾಯಿತು. ಈಶ್ವರನ ವರವನ್ನು ಹನುಮ ತಿರಸ್ಕರಿಸಿದಾಗ ಶ್ರೀರಾಮ ವಿಭೂತಿಮತ್‌ ಶಕ್ತಿಗಳನ್ನು ಗೌರವಿಸುವವನು, ಅವನ ಭಕ್ತ ನಾಗಿ ಹನುಮ ವರವನ್ನು ತಿರಸ್ಕರಿಸಬಾರದೆಂದು ಡಾ| ಜೋಶಿಯವರ ಪ್ರತಿಪಾದನೆ ಸೊಗಸಾಗಿತ್ತು. ಶ್ರೀರಾಮನಾಗಿ ಕೆರೆಗದ್ದೆ ವೆಂಕಟರಮಣರು "ಶಿವರಾಮ' ತಣ್ತೀವನ್ನು ಬಿಂಬಿಸುತ್ತಾ ಸಮಾರೋಪ ಮಾಡಿದರು.

ಹನುಮ ವಾತ್ಸಲ್ಯ

1-6-2015ರಂದು ಹನುಮ ವಾತ್ಸಲ್ಯ (ಸೌಗಂಧಿಕಾಹರಣ) ಪದ್ಯಾಣ ಗಣಪತಿ ಭಟ್ಟ , ಪದ್ಯಾಣ ಶಂಕರನಾರಾಯಣ ಭಟ್ಟ ಹಾಗೂ ಚೈತನ್ಯ ಪದ್ಯಾಣರ ಸಮರ್ಥ ಹಿಮ್ಮೇಳದೊಂದಿಗೆ ರೂಪುಗೊಂಡಿತು.

ವಿಟ್ಲ ಶಂಭು ಶರ್ಮ
ಭೀಮನ ಪಾತ್ರಧಾರಿ ವಿಟ್ಲ ಶಂಭು ಶರ್ಮರು ಧರ್ಮಜನ ಧರ್ಮದ ನಡೆ ಭೀಮನನ್ನು ಬಂಡೆಯಾಗಿಸಿದ ಬಗೆಯನ್ನು ಕರುಣಾಜನಕವಾಗಿ ಚಿತ್ರಿಸಿದರು. ದ್ರೌಪದಿಯಾಗಿ ಡಾ| ಕೋಳ್ಯೂರು ರಾಮಚಂದ್ರ ರಾಯರು ಬಂಡೆಯೇ ಭೀಮನೋ ಭೀಮನೇ ಬಂಡೆಯೋ ಎಂಬ ಕೌತುಕ ದೊಂದಿಗೆ ತೊಡಗಿ ಬಂಡೆಗೆ ಬಂಡೆಯಾಗಿರುವ ಭೀಮನೇಕೆ ಹೀಗಾದ ಎನ್ನುತ್ತಾ ಕುಗ್ಗಿದರೆ ಭಾಷೆ ಬಂಜೆಯಹುದು ಕೌರವನ ಆಯುಷ್ಯದಲ್ಲಿ ಇನ್ನೆಷ್ಟು ಉಳಿದಿದೆ ಎಂದು ಲೆಕ್ಕ ಹಾಕಿ ಎಂದು ಪ್ರಚೋದಿಸಿದರು.

ಕುಂಬಳೆ ಸುಂದರರಾಯರ ಹನುಮಂತನ ಪಾತ್ರ ಭೀಮನ ಕಡೆಗೆ ಕರುಣೆ, ವಾತ್ಸಲ್ಯಗಳನ್ನು ಹರಿಸಿತು. ಮರೆವು ಹನುಮಂತನಿಗೆ ಸಹಜವೆಂಬ ಅವರ ಮಾತು, ಆತನ ಸತ್ತಾÌತಿಶಯದ ಬಗೆಗೆ ವಿವರ ನೀಡಿದ ಬಗೆ ಸೊಗಸಾಗಿತ್ತು. ಕುಬೇರನ ಪಾತ್ರ ಪೆರ್ಮುದೆ ಜಯ ಪ್ರಕಾಶ ಶೆಟ್ಟರದು. ವನಪಾಲಕನಾಗಿ ಡಾ| ಹರೀಶ ಜೋಶಿಯವ ರೊಂದಿಗೆ ಸದಭಿರುಚಿಯ ಹಾಸ್ಯದ ಹೊನಲನ್ನು ಹರಿಯಿಸಿದರು.

ಒಟ್ಟಿನಲ್ಲಿ ಈ ತಾಳಮದ್ದಳೆ ಸಪ್ತಾಹ ಅರಿವಿನ ಹರಿವನ್ನು ಹರಿಸಿದ ಸರಸ್ವತೀ ನದಿ, ರಾಮಸೀತೆಯರ ಚರಿತೆಯ ಮಹತ್ತಿನೊಂದಿಗೆ ಹನುಮಂತನ ಚರಿತೆಯ ಮಹತ್ವಿಕೆಯನ್ನು ಕಾಣಿಸಿದ ಜ್ಞಾನಸತ್ರವಾಯಿತು. ಹಳೆಬೇರು, ಹೊಸ ಚಿಗುರು ಕೂಡಿಕೊಂಡ ಕಲಾವಿದರ ಕಲಾವೃಕ್ಷ, ಹಳೆಯ ಪ್ರಶ್ನೆಗಳಿಗೆ ಹೊಸ ಉತ್ತರಗಳು, ಹೊಸ ಪ್ರಶ್ನೆಗಳಿಗೆ ಹಳತರಲ್ಲಿ ಉತ್ತರ ಮೂಡಿದ ವಿದ್ವದೊYàಷ್ಠಿ, ಕಾಲಮಿತಿಯೊಂದಿಗೆ ಕಾಲವನ್ನು ಮೀರುವ ಚಿಂತನೆಯ ಲಹರಿ - ಯಕ್ಷಗಾನ ಕಲಾರಂಗದ ಗುಂಗು ಹಿಡಿಸುವ ಸೊಗಸಾದ ಕಾರ್ಯಕ್ರಮವೆಂದು ಕಂಡಿದ್ದೇನೆ.ಕೃಪೆ : udayavani


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ