ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ವ್ಯಕ್ತಿ ವಿಶೇಷ
Share
ನಾಟ್ಯ ಶಾಂತಲೆಗೆ ಒಲಿದ `ಶಾಂತಲಾ` ಗೌರವ

ಲೇಖಕರು :
ನಾ.ಕಾರ೦ತ, ಪೆರಾಜೆ
ಗುರುವಾರ, ಜುಲೈ 30 , 2015

ನೃತ್ಯ ಗುರು ಮಾಸ್ಟರ್ ವಿಠಲ ಶೆಟ್ಟರಿಗೆ ಕರ್ನಾಟಕ ಸರಕಾರದ ನಾಟ್ಯ ಶಾಂತಲಾ ಪ್ರಶಸ್ತಿ. ಖುಷಿಪಡುವ ಸುದ್ದಿ. ತೊಂಭತ್ತು ಮೀರಿದ ಮಾಗಿದ ಮನಸ್ಸಿಗೆ ಮುದ ನೀಡುವ ಕ್ಷಣ. 'ಈಗಲಾದರೂ ಬಂತಲ್ಲಾ' ಎಂದು ಅವರ ಶಿಷ್ಯರು ಹೆಮ್ಮೆ ಪಡುವ ಘಳಿಗೆ. ಅಕ್ಷರಾರ್ಥದಲ್ಲಿ ಅರ್ಹರಿಗೆ ಸಂದ ಬಾಗಿನ.

ಭೇಟಿಯಲ್ಲಿ ಕಣ್ಣೀರಾದ ಗುರು-ಶಿಷ್ಯರು

ಅ ಕ್ಷಣವಿನ್ನೂ ಹಸಿಯಾಗಿ ನೆನಪಿದೆ. ಪಾತಾಳ ಪ್ರಶಸ್ತಿಯ ಸಿಹಿ ತಿಳಿಸಲು ವಿಠಲ ಶೆಟ್ಟರ ಮನೆಯ ಗೇಟು ದಾಟಿದ್ದೆವು. ಆಗ ಎಂಭತ್ತೇಳರ ಆಸುಪಾಸಿನಲ್ಲಿದ್ದ ವಿಠಲ ಶೆಟ್ಟರಿಂದ ಸ್ವಾಗತ. ಎಂಭತ್ತರ 'ಯಕ್ಷಶಾಂತಲಾ' ಪಾತಾಳ ವೆಂಕಟ್ರಮಣ ಭಟ್ಟರಿಂದ ಉದ್ದಂಡ ಪ್ರಣಾಮ. ಶಿಷ್ಯನನ್ನು ಹರಸಿ ಮೇಲೆತ್ತಿ ಮನೆಯೊಳಗೆ ಕರೆದುಕೊಂಡು ಹೋದರು. ಹತ್ತು ನಿಮಿಷ ಮೌನ. ಇಬ್ಬರ ಕಣ್ಣಲ್ಲೂ ಕಣ್ಣೀರು. ಎಷ್ಟೋ ವರುಷದ ಅಗಲಿಕೆಯ ವೇದನೆ ಶಿಷ್ಯನಿಗೆ. ತನ್ನಿಂದ ನೃತ್ಯ ಕಲಿತು ಯಕ್ಷಗಾನ ಕ್ಷೇತ್ರದಲ್ಲಿ ಮಿಂಚಿದ ಶಿಷ್ಯನ ಕೀರ್ತಿಗೆ ಸಂತಸ ಗುರುವಿಗೆ. ಸುಮಾರು ಒಂದೆರಡು ತಾಸು ಗುರು-ಶಿಷ್ಯರಿಂದ ಉಭಯಕುಶಲೋಪರಿ. ಕಣ್ಣೀರು, ನಗು, ಸಂದು ಹೋದ ದಿವಸಗಳ ಅನುಭವ ವಿನಿಮಯ.

ಯಕ್ಷಗಾನ ಕ್ಷೇತ್ರದಲ್ಲಿ ನನಗೆ ಸಿಕ್ಕಿದ ಕೀರ್ತಿ ಗುರುವಿಗೆ ಸಲ್ಲಬೇಕು. ಉಚಿತವಾಗಿ ನೃತ್ಯ ಕಲಿಸಿದ್ದಾರೆ. ಹೊಟ್ಟೆಯನ್ನು ತಂಪಾಗಿಸಿದ್ದಾರೆ, ಎತ್ತರಕ್ಕೆ ಬೆಳೆಸಿದ್ದಾರೆ, ಎನ್ನುವ ಪಾತಾಳ ವೆಂಕಟ್ರಮಣ ಭಟ್, ಗುರುವಿನ ಪಾದಕ್ಕೆ ಇನ್ನೊಮ್ಮೆ ಕಣ್ಣೀರಿನ ಆಭಿಷೇಕ ಮಾಡಿದರು. ಜತೆಗಿದ್ದವರೆಲ್ಲಾ ದಂಗು. ಗುರು-ಶಿಷ್ಯ ಸಂಬಂಧದ ಗಾಢತೆ ಇಷ್ಟಿದೆಯಾ? ಜತೆಗೆ ಪ್ರಸ್ತುತ ಕಾಲಘಟ್ಟದ ಗುರು-ಶಿಷ್ಯ ಸಂಬಂಧಗಳ ಢಾಳು ಮುಖಗಳು ಮಿಂಚಿ ಮರೆಯಾದುವು!

ಐದು ಸಾವಿರ ಮಂದಿಗೆ ನೃತ್ಯ ಕಲಿಸಿದ ಗುರು

ನೃತ್ಯ ಗುರು ಮಾಸ್ಟರ್ ವಿಠಲ ಶೆಟ್ಟಿ ಒಂದು ಕಾಲ ಘಟ್ಟದ ಕಲಾ ವಿಸ್ಮಯ. ಏಳು ದಶಕದ ಹಿಂದೆ ಮಹಾನ್ ಗುರು ರಾಜನ್ ಅಯ್ಯರ್ ಅವರ ಕರಕಮಲ ಸಂಜಾತ. ದಿ.ಎಂ.ಎ.ದೇವಾಡಿಗರಿಂದ ಸಂಗೀತಾಭ್ಯಾಸ. 1964ರಿಂದ ನೃತ್ಯಕೌಸ್ತುತ ಗುರುಕುಲ ಆರಂಭ.

ಚಲನಚಿತ್ರ ರಂಗದ ಮಿನುಗುತಾರೆ ಕಲ್ಪನಾ ವಿಠಲ ಶೆಟ್ಟರ ಶಿಷ್ಯೆ. 'ಆರ್ಥಿಕವಾಗಿ ಗಟ್ಟಿಯಾಗಿಲ್ಲದ ಅವಳಿಗೆ ಹತ್ತು ರೂಪಾಯಿ ಶಿಷ್ಯವೇತನ ನೀಡುತ್ತಿದ್ದೆ,' ನೆನಪಿಸಿಕೊಳ್ಳುತ್ತಾರೆ. ಚಿತ್ರರಂಗದತ್ತ ವಾಲಿದ ಕಲ್ಪನಾ, ಅರ್ಧದಲ್ಲೇ ನೃತ್ಯಮೊಟಕು. ಆದರೆ ಕಲಿತಷ್ಟು ವಿದ್ಯೆ ವಜ್ರದ ರೇಖೆ. ಅಭಿನಯಿಸಿದ ಬಹುತೇಕ ಚಿತ್ರಗಳಲ್ಲಿ ನೃತ್ಯದ ಸೊಗಸು.

ಮಾಸ್ಟರ್ ವಿಠಲ ಶೆಟ್ಟಿ
ಜನನ : 1992
ಕಲಾಸೇವೆ
ಚಲನಚಿತ್ರ ರಂಗದ ಮಿನುಗುತಾರೆ ಕಲ್ಪನಾರೊಡಗೊ೦ಡು ಸುಮಾರು ಐದು ಸಾವಿರ ಮಂದಿಗೆ ನೃತ್ಯ ಕಲಿಸಿದ ಗುರು.

ಪ್ರಶಸ್ತಿಗಳು:
 • ಕರ್ನಾಟಕ ಸರ್ಕಾರದ ನಾಟ್ಯ ಶಾಂತಲಾ ಪ್ರಶಸ್ತಿ
 • ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ
 • ಕರ್ನಾಟಕ ಸ೦ಗೀತ ನೃತ್ಯ ಅಕಾಡೆಮಿಯ ಕಲಾಶ್ರೀ ಪ್ರಶಸ್ತಿ
 • 2013ರ ಪಾತಾಳ ಪ್ರಶಸ್ತಿ
 • ಹಲವಾರು ನೃತ್ಯ ಸ೦ಸ್ಥೆಯಿ೦ದ ನೂರಾರು ಪ್ರಶಸ್ತಿ ಹಾಗೂ ಸನ್ಮಾನಗಳು
ಕೀರ್ತಿ ಬಂದಾಗ ಎಲ್ಲವೂ ಮರೆವು! ನೃತ್ಯ ಆರಾಧನೆ. ಹಣ ಮಾಡುವ ದಂಧೆಯಲ್ಲ. ಎಷ್ಟೇ ಜನಪ್ರಿಯತೆ ಬರಲಿ, ಏರಿದ ಏಣಿಯನ್ನು ಮರೆಯಬಾರದಲ್ಲಾ, ಎನ್ನುವ ವಿಠಲ ಶೆಟ್ಟರಿಗೆ ಸಿನಿಮಾ ರಂಗದಲ್ಲಿ ಹೇರಳ ಅವಕಾಶಗಳು ಬಂದಿದ್ದುವು. ಸಿನಿಮಾಕ್ಕಿಂದ ನೃತ್ಯ ಅಧ್ಯಾಪಕನಾಗಿರುವುದರಲ್ಲಿ ಖುಷಿ ಕಂಡರು.

ಸುಮಾರು ಐದು ಸಾವಿರ ಮಂದಿಗೆ ನೃತ್ಯ ಕಲಿಸಿದ ಗುರು. ಉಳ್ಳಾಲ ಮೋಹನ್ ಕುಮಾರ್, ಪ್ರೇಮನಾಥ್, ಶ್ರೀನಿವಾಸ ಶೆಣೈ, ರವೀಂದ್ರನಾಥ್ ಪಂಡಿತ್.. ಇವರ ಗರಡಿಯಲ್ಲಿ ಪಳಗಿದವರು. ಸಾಮಾನ್ಯವಾಗಿ ಭರತನಾಟ್ಯದ ರಂಗಪ್ರವೇಶ ಪ್ರಕ್ರಿಯೆ ಆರ್ಥಿಕ ಗಟ್ಟಿತನ ಇದ್ದಷ್ಟೂ ವಿಜೃಂಭಿಸುತ್ತದೆ. ಬೇಕೋ ಬೇಡ್ವೋ ಎಂಬುದು ಬೇರೆ ಪ್ರಶ್ನೆ. ಈ ರೀತಿಯ ಆಡಂಬರಕ್ಕೆ ಒಗ್ಗದ ವಿಠಲ ಮಾಸ್ಟ್ರು; ಗೌಜಿಯಿಲ್ಲದೆ, ಗುರುದಕ್ಷಿಣೆಯನ್ನೂ ಸ್ವೀಕರಿಸದೆ ರಂಗಪ್ರವೇಶವನ್ನು ಮಾಡಿಸಿ ಮನ್ನಣೆ ಗಳಿಸಿದರು. .

80ರ ದಶಕದಲ್ಲಿ ವಿದೇಶಗಳಲ್ಲೂ ತರಬೇತಿ ಮತ್ತು ಪ್ರದರ್ಶನ

1981ರಲ್ಲಿ ಸ್ವೀಡನ್ ದೇಶದಿಂದ ಕರೆ. ಅಲ್ಲಿನ ಕಲಾ ಸಂಸ್ಥೆಯೊಂದರಿಂದ ಮೂರು ತಿಂಗಳ ತರಬೇತಿ ಮತ್ತು ಪ್ರದರ್ಶನಕ್ಕಾಗಿ ಆಹ್ವಾನ. ಸ್ವೀಡನ್, ಓಸ್ಲೋ, ಕೋಪೆನ್ಹೆಗನ್, ಸ್ಟಾಕ್ಹೋಂ - ಗಳಲ್ಲಿ ನಾಲ್ಕು ನೃತ್ಯ ಪ್ರದರ್ಶನ. ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಪ್ರದರ್ಶನ. ಮಾಧ್ಯಮಗಳಿಂದ ಮುಕ್ತ ಪ್ರಶಂಸೆ. ವಿಮಾನದಲ್ಲಿ ಹಾರಿದ ಅಂದಿನ ಕ್ಷಣವನ್ನು ರೋಚಕವಾಗಿ ಹೇಳಿದ್ದರು.

ವಿಠಲ ಶೆಟ್ಟರಿಗೆ ಶಾಸ್ತ್ರೀಯ ನೃತ್ಯಗಳಿಗಿಂತ ರೂಪಕಗಳತ್ತ ಒಲವು. ಪೌರಾಣಿಕ, ಚಾರಿತ್ರಿಕ, ಐತಿಹಾಸಿಕ ಕಥಾಹಂದರದ ರೂಪಕಗಳು ಕಳೆದರ್ಧ ಶತಮಾನದೀಚೆಗೆ ಜನಪ್ರಿಯ. ಭರತನಾಟ್ಯದತ್ತ ಯುವಕ ಯುವತಿಯರು ಆಸಕ್ತರಾಗುವುದು ಸಂತೋಷದಾಯಕ. ಅದೊಂದು ಟೈಂಪಾಸ್ ಹವ್ಯಾಸವಾಗಬಾರದು, ಎನ್ನುವ ಇವರು, 'ಈಚೆಗೇಕೋ ತರಗತಿಗಳು ಪೂರ್ತಿ ಉದ್ಯಮವಾಗಿದೆ' ಎಂದು ವಿಷಾದಿಸುತ್ತಾರೆ.

ಪ್ರಶಸ್ತಿ ಹಾಗೂ ಸನ್ಮಾನಗಳು

ನೃತ್ಯಕ್ಕಾಗಿಯೇ ಬದುಕು. ಅದನ್ನವರು ಆರಾಧಿಸಿದ್ದಾರೆ. ಪೂಜಿಸಿದ್ದಾರೆ. ಹಾಗಾಗಿ ಕಲಾ ದೇವಿ ಒಲಿದಿದ್ದಾಳೆ. ನಾಲ್ದೆಸೆ ಕೀರ್ತಿ ನೀಡಿದ್ದಾಳೆ. ಪ್ರಶಸ್ತಿ, ಬಿರುದುಗಳು ಮುಡಿಯೇರಿವೆ. ಆಸಕ್ತಿ ಗರಿಕೆದರಿದಾಗ ಗೆಜ್ಜೆ ಕಂಪಿಸುತ್ತದೆ. ಆ ಕಂಪನದೊಳಗೆ ಬದುಕಿನ ಹಿನ್ನೋಟವಿದೆ. ಹೆಜ್ಜೆಗಳ ಸದ್ದಿದೆ. ನೂರಾರು ಮನಸ್ಸುಗಳಿವೆ. ವಯೋಸಹಜವಾಗಿ ನೆನಪು ಕೈಕೊಡುತ್ತಿದ್ದರೂ ಗೆಜ್ಜೆಯ ಸದ್ದಿಗೆ ಕಿವಿಯರಳುತ್ತದೆ.

ಸರಕಾರದ ಪ್ರತಿಷ್ಠಿತ ಶಾಂತಲಾ ಪ್ರಶಸ್ತಿಯ ನಿರೀಕ್ಷೆ ಶೆಟ್ಟರಿಗಿಲ್ಲ. ಅವರಿಗದು ಬೇಕಾಗಿಯೂ ಇಲ್ಲ. ಆದರೆ ಸರಕಾರದ ಪ್ರಶಸ್ತಿ ಅಂದ ಮೇಲೆ ಅದಕ್ಕೆ ಪ್ರತ್ಯೇಕ ಮಾನ-ಸಂಮಾನ. ನೃತ್ಯ ವಿಭಾಗಕ್ಕೆ ಮೀಸಲಾದ ಪ್ರಶಸ್ತಿ. ಈ ಖುಷಿಯನ್ನು ಅನುಭವಿಸಲು ವಯಸ್ಸು ಅಡ್ಡಿಬರುತ್ತಿದೆ. ಕಂಗ್ರಾಟ್ಸ್ಗಳನ್ನು ಸ್ವೀಕರಿಸಲು ಮಾಗಿದ ದೇಹ ಸಹಕರಿಸುತ್ತಿಲ್ಲ. ಹತ್ತು ವರುಷಗಳ ಹಿಂದೆ ಪ್ರಶಸ್ತಿ ಬರಬೇಕಿತ್ತು.

ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸ೦ಗೀತ ನೃತ್ಯ ಅಕಾಡೆಮಿಯ ಕಲಾಶ್ರೀ ಪ್ರಶಸ್ತಿ ಜೊತೆಗೆ ಹಲವಾರು ನೃತ್ಯ ಸ೦ಸ್ಥೆಯಿ೦ದ ನೂರಾರು ಪ್ರಶಸ್ತಿ ಹಾಗೂ ಸನ್ಮಾನಗಳಿಗೆ ಭಾಜನರಾಗಿರುತ್ತಾರೆ

ಡಾ.ಶೇಣಿಯವರು ತನಗೆ ಡಾಕ್ಟರೇಟ್ ಬಂದಾಗ ಹೇಳಿದ್ದರು, "ಪ್ರಶಸ್ತಿ, ಗೌರವ, ಸಂಮಾನಗಳನ್ನೆಲ್ಲಾ ಅರುವತ್ತರ ಒಳಗೆ ಕೊಡಿ. ಅದನ್ನು ಕಲಾವಿದ ಅನುಭವಿಸಬೇಕು. ಆ ಖುಷಿಯು ಅವರಿಗೆ ಸ್ಫೂರ್ತಿಯ ಕ್ಯಾಪ್ಸೂಲು."ಕೃಪೆ : yakshamatu.blogspot

Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
     ತಾಜಾ ಲೇಖನಗಳು
   
  ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
  ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
  ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
   
  © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ