ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಮದ್ದಳೆಯ ಮೋಡಿಗಾರ ಕರ್ಕಿ ಪ್ರಭಾಕರ ಭಂಡಾರಿ

ಲೇಖಕರು :
ಡಾ. ರಾಧಾಕೃಷ್ಣ ಉರಾಳ
ಶನಿವಾರ, ಆಗಸ್ಟ್ 1 , 2015

ಯಕ್ಷಗಾನ ಕಲೆ ಹಿಮ್ಮೇಳ ಮುಮ್ಮೇಳಗಳ ಸಮನ್ವಯದಲ್ಲಿ ರಂಗದ ಮೇಲೆ ಕಲಾವಿದರು ಕಟ್ಟುವ ಒಂದು ಪೌರಾಣಿಕ ಭ್ರಮಾಲೋಕ. ಯಕ್ಷಗಾನದ ಒಂದನೇಯ ವೇಷಧಾರಿ, ಮುಖ್ಯ ಸೂತ್ರಧಾರಿಯೆನಿಸಿದ ಭಾಗವತರಿಗೆ ಜೊತೆಯಾಗಿ ನಿಲ್ಲುವ ಅವರ ಹಾಡಿನ ಮೋಡಿಗೆ ಕೂಡಿ ಪೂರಕವಾಗಿ ನುಡಿಸುತ್ತಾ ಪಾತ್ರವನ್ನೂ ಕುಣಿಸುವ ಚಮತ್ಕಾರಿಕೆ, ಸೂಕ್ಷ್ಮತೆಯನ್ನು ಬಲ್ಲವರು ಮದ್ದಳೆಗಾರ. ರಾಗದಲ್ಲಿ ಬೆರೆತು ಮೃದು, ಮಧ್ಯಮ ನುಡಿತಗಳ ಮೂಲಕ ಹಲವು ರಸ ಉತ್ಪಾದಿಸುವ, ಅಬ್ಬರದ ಮೂಲಕ ನಿಬ್ಬರೆಗಾಗಿಸುವ ಶಕ್ತಿಯಿರುವುದು ಇವರಿಗೆ. ಮದ್ದಳೆಯ ನುಡಿತಗಳು ಸರಿ ಇಲ್ಲವಾದರೆ ರಂಗದಲ್ಲಿ ಪ್ರಸಂಗ ಕಟ್ಟುವುದಕ್ಕೆ ಮಾರಕವಾಗಿ ಮದ್ದಳೆವಾದಕರಾಗುವ ಬದಲು ಬಾಧಕನೆನೆಸಿಕೊಳ್ಳುತ್ತಾರೆ. ಗುಂಪು, ಛಾಪು, ಹೊರಳಿಕೆಗಳ ಮಿಳಿತದೊಂದಿಗೆ ಭಾಗವತರಿಗೂ ರಂಗಾಭಿವ್ಯಕ್ತಿಗೂ ಪೂರಕವಾಗಿ, ಪ್ರೇರಕರಾಗಿದ್ದ ಒಬ್ಬ ಶ್ರೇಷ್ಠ ಮದ್ದಳೆಗಾರರೆನಿಸಿದವರು ಪ್ರಭಾಕರ ಭಂಡಾರಿ.

ಮನೆಯೇ ಕಲೆಯ ಪಾಠಶಾಲೆ

ಉತ್ತರಕನ್ನಡ ಜಿಲ್ಲೆಯ ವಾದ್ಯ ನುಡಿಸುವ ಭಂಡಾರಿ ಸಮಾಜ (ದೇವಾಡಿಗರು) ವಾಲಗ ವಾದ್ಯದಂತೆಯೇ ಚಂಡೆ ಮದ್ದಳೆಯ ನುಡಿತದಲ್ಲೂ ಸಾಟಿಯಿಲ್ಲದ ಅಪ್ರತಿಮ ಕಲಾವಿದರು. ಯಕ್ಷಗಾನಕ್ಕೆ ಹೆಸರಾದ ಕರ್ಕಿಯ ಇಂತಹ ಒಂದು ಕಲಾ ಕುಟುಂಬದಿಂದ ಬಂದವರು ಪ್ರಭಾಕರ ಭಂಡಾರಿಯವರು 1941ರಲ್ಲಿ ಜನಿಸಿದರು. ಬಾಲ್ಯದಿಂದಲೇ ಯಕ್ಷಗಾನದ ಸೆಳೆತಕ್ಕೊಳಗಾಗಿ ಐದನೇಯ ವಯಸ್ಸಿಗೇ ವಿದ್ಯೆಗೆ ವಿದಾಯ ಹೇಳಿದ ಅವರಿಗೆ ಮನೆಯೇ ಕಲೆಯ ಕಲಿಕೆಗೆ ಪಾಠಶಾಲೆಯಾಯಿತು.

ತಂದೆ ಪಾಂಡುರಂಗ ಭಂಡಾರಿಯವರೇ ಮೊದಲ ಗುರುವಾದರು. ಅಜ್ಜ ಕೇಶವ, ಸಹೋದರ ಸತ್ಯನಾರಾಯಣರು ಕೂಡಾ ತಮ್ಮ ಬೆರಳುಗಳನ್ನು ಮದ್ದಳೆಯ ಮೇಲೆ ನಾಟ್ಯವಾಡಿಸಿ ಕೇಳುಗರನ್ನ ನಾದಲೋಕದಲ್ಲಿ ತೇಲಿಸಿದ ಮಾಂತ್ರಿಕ ಶಕ್ತಿಯುಳ್ಳವರು. ಆ ಮನೆಯ ಮತ್ತೊಂದು ಕುಡಿಯಾಗಿರುವ ಪ್ರಭಾಕರ ಭಂಡಾರಿಯವರು, ಅಣ್ಣನ ಮೂಲಕ ಗುಂಡಬಾಳ ಮೇಳಕ್ಕೆ ಚಂಡೆಯ ವಾದಕರಾಗಿ ಪಾದಾರ್ಪಣೆ ಮಾಡಿದರು.

ಮೃದು ನಡತೆಯ ಅಜಾತಶತ್ರು

ಬಡಗು ತಿಟ್ಟಿನ ಯಕ್ಷಗಾನದಲ್ಲಿ ಪದಾಭಿನಯಕ್ಕೆ ಮಹತ್ವ ಬಂದಾಗ ಮದ್ದಳೆಯ ನುಡಿತಗಳೂ ಮುಖ್ಯವೆನಿಸಿ, ಭಾಗವತರ ಹಾಡಿಗೆ ಪೂರಕವಾಗಿ ಸನ್ನಿವೇಶದ ರಸ ಭಾವಗಳನ್ನರಿತು ನುಡಿಸುವ ವೇಷಧಾರಿಯ ಚಲನೆಯನ್ನರಿತು ಕುಣಿಸುವ ಹೊಂದಾಣಿಕೆಯಿಂದ ಮಾತ್ರ ಪ್ರದರ್ಶನ ಪ್ರೇಕ್ಷಕರನ್ನು ಸೆಳೆಯುವುದಕ್ಕೆ ಸಾಧ್ಯ. ಈ ಮೂಲತತ್ವವನ್ನು ಚೆನ್ನಾಗಿ ಅರಿತಿದ್ದರಿಂದಲೇ ಪ್ರಭಾಕರ ಭಂಡಾರಿಯವರ ಮದ್ದಳೆಯೆಂದರೆ ನಾರಣಪ್ಪ ಉಪ್ಪೂರರು, ಕಾಳಿಂಗ ನಾವಡರು, ನೆಬ್ಬೂರರು, ಕಡತೋಕ ಮೊದಲಾದ ಭಾಗವತ ದಿಗ್ಗಜರಿಗೂ ಶಂಭು ಹೆಗಡೆ, ಮಹಾಬಲ ಹೆಗಡೆ, ಕರ್ಕಿ ಹಾಸ್ಯಗಾರರು, ಚಿಟ್ಟಾಣಿ ರಾಮಚಂದ್ರ ಹೆಗಡೆ, ಸಿರಿಯಾರ ಮಂಜು, ಅರಾಟೆ ಮಂಜುನಾಥ, ಐರೋಡಿ ಗೋವಿಂದಪ್ಪ, ಕೃಷ್ಣಯಾಜಿಯವರಂತ ಹಿರಿಯ ವೇಷಧಾರಿಗಳಿಗೂ ಬಹಳ ಪ್ರಿಯವಾಗಿತ್ತು. ಸುಖವಾದ ವಾದನ, ಸ್ಪಷ್ಟ ಮೃದು ನುಡಿತಗಳು ರಸಾನುಭೂತಿಗೆ ಸಹಕರಿಸಿ, ವೇಷಧಾರಿಯ ಮಾತುಗಳಿಗೂ ಪೂರಕವಾಗಿ ಕೊಡುವ ಸಣ್ಣ ನುಡಿತಗಳಿಂದ ಸದಾ ಪ್ರಸಂಗದ ಭಾಗವಾಗಿರುತ್ತಿದ್ದುದು ಯುವ ಮದ್ದಳೆಗಾರರಿಗೆ ಮಾದರಿಯೆನ್ನಬಹುದು.

ಮನೆಯಲ್ಲಿನ ಪಾಠದ ಹೊರತಾಗಿ ಕಿನ್ನೀರು ನಾರಾಯಣ ಹೆಗಡೆ, ಬೆಳಿಂಜ ತಿಮ್ಮಪ್ಪ ನಾಯಕರು, ಹಿರಿಯಡ್ಕ ಗೋಪಾಲರಾಯರು, ಮದ್ದಲೆಗಾರರ ಒಡನಾಟದ ಆದರ್ಶದಲ್ಲಿ ಹೊಸ ನುಡಿತದ ಚಮತ್ಕಾರಿಕತೆಯ ಜೊತೆಗೆ ನುಡಿತದ ಸೂಕ್ಷ್ಮತೆಯನ್ನು ಮೈಗೂಡಿಸಿಕೊಳ್ಳುವುದು ಕಲೆಯ ಅರಳುವಿಕೆಗೆ ಅಗತ್ಯ ಎಂಬುದನ್ನು ಕಲಿತರು. ಅಂದಿನ ಮದ್ದಳೆಯ ದಿಗ್ಗಜರಿಗೆ ಸರಿಸಾಠಿಯೆನ್ನುವಂತೆ ಬೆಳೆದರು. ರಂಗದ ಕಲಾವಿದನ, ಹಾಡುಗಾರನ ಭಾವ ರಸಾಭಿವ್ಯಕ್ತಿಗೆ ಇಂಬು ನೀಡುವಂತೆ ಔಚಿತ್ಯವರಿತ ಮದ್ದಳೆಯ ನುಡಿತಗಳಿಂದ ಗಮನ ಸೆಳೆದವರು. ಯಕ್ಷರಂಗದಲ್ಲಿ ಮದ್ದಲೆಯ ಮೃದು ನುಡಿತದಂತೆಯೇ ಜೀವನರಂಗದಲ್ಲಿಯೂ ಮೃದು ನಡತೆಯವರಾಗಿ ಅಜಾತಶತ್ರುವೆನಿಸಿದವರು.

ಕರ್ಕಿ ಪ್ರಭಾಕರ ಭಂಡಾರಿ
ಜನನ : 1941
ಜನನ ಸ್ಥಳ : ಕರ್ಕಿ, ಹೊನ್ನಾವರ ತಾಲೂಕು
ಉತ್ತರ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
ಕಲಾಸೇವೆ :
ಸುಮಾರು ನಾಲ್ಕೂವರೆ ದಶಕಗಳ ಕಾಲ ಕೊಳಗಿಬೀಸ, ಗುಂಡಬಾಳಾ, ಅಮೃತೇಶ್ವರೀ, ಕರ್ಕಿ, ಇಡಗುಂಜಿ, ಸಾಲಿಗ್ರಾಮ ಮೇಳಗಳಲ್ಲಿ ಪ್ರಧಾನ ಮದ್ದಳೆಗಾರರಾಗಿ ಸೇವೆ.

ಪ್ರಶಸ್ತಿಗಳು :
2002ರ ಸಾಲಿನಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸೇರಿದ೦ತೆ ಹಲಾವಾರು ಸ೦ಘ-ಸ೦ಸ್ಥೆಗಳಿ೦ದ ಪುರಸ್ಕೃತರು.

ಚರ್ಮವಾದ್ಯಗಳ ತಯಾರಿಸುವಲ್ಲಿಯೂ ಪರಿಣಿತರು

ಸುಮಾರು ನಾಲ್ಕೂವರೆ ದಶಕಗಳ ಕಾಲ ಕೊಳಗಿಬೀಸ, ಗುಂಡಬಾಳಾ, ಅಮೃತೇಶ್ವರೀ, ಕರ್ಕಿ, ಇಡಗುಂಜಿ, ಸಾಲಿಗ್ರಾಮ ಮೇಳಗಳಲ್ಲಿ ಪ್ರಧಾನ ಮದ್ದಳೆಗಾರರಾಗಿದ್ದ ಭಂಡಾರಿಯವರು ನಾರಣಪ್ಪ ಉಪ್ಪೂರರು, ನೆಬ್ಬೂರರು, ಕಡತೋಕರು, ಮೊದಲಾದ ಯಕ್ಷಲೋಕದ ಅಪ್ರತಿಮರ ನೆಚ್ಚಿನ ಮದ್ದಳೆವಾದಕರಾಗಿ ಜೊತೆಯಾದವರು. ವಿದೇಶದಲ್ಲೂ ಮದ್ದಳೆಯ ನಾದ ಹೊಮ್ಮಿಸಿದವರು. 2002ರ ಸಾಲಿನಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನೂ ಪಡೆದವರು.

ಕಸವಿಲ್ಲದ ಕಸಬುದಾರಿಯೆನಿಸಿದವರು. ಕೇವಲ ಮದ್ದಳೆವಾದನಕ್ಕೆ ಸೀಮಿತಗೊಳ್ಳದೆ ಕಲೆಯ ವಿವಿಧ ಕ್ಷೇತ್ರಗಳಲ್ಲಿಯೂ ಗಮನಾರ್ಹವಾಗಿ ಬೆಳೆದವರು.. ಚಂಡೆ ಮದ್ದಳೆ, ತಬಲಾ ಮೊದಲಾದ ಚರ್ಮವಾದ್ಯಗಳನ್ನು ತಯಾರಿಸುವಲ್ಲಿ ಪರಿಣಿತರು. ತಾಸುಮಾರು, ಶೃತಿ, ಡೋಳು, ಶಹನಾಯಿಗಳನ್ನೂ ನುಡಿಸುವ ನಿಪುಣರು. ಮಣ್ಣಿನಿಂದ ಅತ್ಯುತ್ತಮ ಗಣೇಶನ ಕಲಾಕೃತಿಗಳನ್ನು ನಿರ್ಮಿಸುವ ಅಪರೂಪದ ಅಸಾಮಾನ್ಯ ಕಲಾವಿದರು. ಕುಂಟನನ್ನೂ ಕುಣಿಸಬಲ್ಲರು ಎಂದು ಹೊಗಳಿಸಿಕೊಂಡವರು. ಇವರ ಮಕ್ಕಳಾದ ಪರಮೇಶ್ವರ, ಮಂಜುನಾಥ ಕೂಡಾ ಮೇಳಗಳಲ್ಲಿ ಶ್ರೇಷ್ಠ ಮದ್ದಳೆಗಾರರಾಗಿ ಗುರ್ತಿಸಿಕೊಂಡವರು.

ಕಲಾಕದಂಬ ಆರ್ಟ್ ಸೆಂಟರ್ ಸಂಸ್ಥೆಯ ಕಾಳಿಂಗ ನಾವಡ ಪ್ರಶಸ್ತಿ

ರಂಗದಲ್ಲಿ ನಾವಡರ ಹಾಡಿನ ಮೋಡಿಗೆ ಮದ್ದಲೆಯಲ್ಲಿ ಜೋಡಿಯಾಗಿ, ಮದ್ದಲೆಯ ಮೇಲೆ ಬೆರಳು ಹೊರಳಿಸಿ ನಾದನಾವಿನ್ಯತೆಯನ್ನರಳಿಸಿ, ಉಪ್ಪೂರುರರು ತಿಮ್ಮಪ್ಪ ನಾಯಕರ ಜೋಡಿಯಂತೆ ನಾವಡ, ಪ್ರಭಾಕರ ಭಂಡಾರಿಯವರ ಜೋಡಿ ಎಂದು ನೋಡಿ ಬರುವ ಎಂಬಂತೆ ಮಾಡಿ, ಪ್ರೇಕ್ಷಕರಲ್ಲಿ ಅವರ್ಣನೀಯ ರಸಾನುಭೂತಿ ಮೂಡಿಸಿದ, ಯಕ್ಷ ಲೋಕವನ್ನಾಳಿ ಅಭಿಮಾನಿಗಳಿಂದ, ವೇಷಧಾರಿಗಳು ಹಾಗೂ ಭಾಗವತ ದಿಗ್ಗಜರುಗಳಿಂದ ಸೈ ಸೈ ಎನಿಸಿಕೊಂಡ ಅವರ ಯಕ್ಷಗಾನ ಕ್ಷೇತ್ರದಲ್ಲಿನ ಪರಿಶ್ರಮ, ಅನುಭವವನ್ನು ಗುರ್ತಿಸಿ ಬೆಂಗಳೂರಿನ ಕಲಾಕದಂಬ ಆರ್ಟ್ ಸೆಂಟರ್ ಸಂಸ್ಥೆಯು, ಯಕ್ಷಗಾನ ಕ್ಷೇತ್ರದಲ್ಲಿ ಪ್ರತಿಷ್ಠಿತವೆನಿಸಿರುವ 2015ರ ಸಾಲಿನ ಕಾಳಿಂಗ ನಾವಡ ಪ್ರಶಸ್ತಿ ಯನ್ನು ದಿನಾಂಕ ಆಗಸ್ಟ್ 9, 2015 ರಂದು ಬೆಂಗಳೂರಿನ ಕೆ.ಹೆಚ್. ಕಲಾಸೌಧದಲ್ಲಿ ನೀಡುತ್ತಿರುವುದು ಸಂತಸದ ಸಂಗತಿ.

*********************




ಕೆರೆಮನೆ ಶಿವಾನ೦ದ ಹೆಗಡೆಯವರೊ೦ದಿಗೆ





Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Mahabaleshwar Hegde(8/6/2015)
ಉತ್ತರಕನ್ನಡದ ಪಾರಂಪರಿಕವಾದ ಗತ್ತುಗಳನ್ನು ಚೆನ್ನಾಗಿ ಬಲ್ಲ ತಾನು ಕಾಣಿಸಿಕೊಳ್ಳಲು ಹವಣಿಸದೆ ವೇಷಧಾರಿಗಳನ್ನು ಕುಣಿಸುವ ಪ್ರೇರಿಸುವ ಅದ್ಭುತ ಮದ್ದಳೆಕಾರ
Vinayak Avadhani(8/6/2015)
Asamanya kalavida. Ivara hagu Satyanarayana Bhandari chendeya jodiya majave bere.
Vasudeva Bhat(8/6/2015)
Saligrama meladalli ivara maddale vadan adbutha, aa nenapu ivagalu mareyalagaddu




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ