ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಕಲಾರಂಗದ ಬಡಗು ಪ್ರದರ್ಶನ

ಲೇಖಕರು : ಶ್ರೀಧರ ಡಿ.ಎಸ್‌.
ಭಾನುವಾರ, ಆಗಸ್ಟ್ 2 , 2015
ಆಗಸ್ಟ್ 4, 2015

ಕಲಾರಂಗದ ಬಡಗು ಪ್ರದರ್ಶನ

ಉಡುಪಿ : ಉಡುಪಿಯ ಕಲಾರಂಗ ವಾರ್ಷಿಕವಾಗಿ ತನ್ನ ಸದಸ್ಯರಿಗೂ ಸಾರ್ವಜನಿಕರಿಗೂ ತೆಂಕು ಮತ್ತು ಬಡಗು ಯಕ್ಷಗಾನ ಪ್ರದರ್ಶನಗಳನ್ನು ಎರಡು ರವಿವಾರಗಳಲ್ಲಿ ಏರ್ಪಡಿಸುತ್ತದೆ. ಈ ವರ್ಷದ ಬಡಗುತಿಟ್ಟಿನ ಯಕ್ಷಗಾನ ಜು. 12ರಂದು ಪೂರ್ಣಪ್ರಜ್ಞ ಸಭಾಭವನದಲ್ಲಿ ಜರುಗಿತು. ತುಂಬಿ ತುಳುಕಿದ ಸಭಾಂಗಣದಲ್ಲಿ ಎರಡೂ ಆಖ್ಯಾನಗಳು ರಂಗವೈಭವವನ್ನು ಸಾಕ್ಷಾತ್ಕರಿಸಿದವು. ಈ ಎರಡೂ ಪ್ರಸಂಗಗಳು ಬಡಗುತಿಟ್ಟಿನಲ್ಲಿ ಬಹುಜನಪ್ರಿಯ ಪ್ರಸಂಗಗಳೇ. ಕಲಾವಿದರೂ ಅವರವರ ಪಾತ್ರಗಳಲ್ಲಿ ಪ್ರಸಿದ್ಧರೇ.

ಮೊದಲ ಆಖ್ಯಾನ ಸುಭದ್ರಾ ಕಲ್ಯಾಣದಲ್ಲಿ ಪ್ರಸಿದ್ಧ ಭಾಗವತ ಕೊಳಗಿ ಕೇಶವ ಹೆಗಡೆಯವರ ಭಾಗವತಿಕೆಗೆ ಎ. ಪಿ. ಪಾಠಕ್‌, ರಾಕೇಶ ಮಲ್ಯ ಹಿಮ್ಮೇಳನದಲ್ಲಿದ್ದರು.

ಶ್ರೀಕೃಷ್ಣನಾಗಿ ಗೋಪಾಲ ಆಚಾರ್ಯರು ತನ್ನ ಎಂದಿನ ಲಾಲಿತ್ಯದಿಂದ ರಂಜಿಸಿದರು. ಬಡಗಿನ ಪರಂಪರೆಯ ನೆರಿ ಉಡುಗೆಯನ್ನು ಈಗ ಕುಂದಾಪುರದ ಶೈಲಿಯಲ್ಲೂ ಬಿಟ್ಟಹಾಗಿದೆ. ಅರ್ಥಗಾರಿಕೆಗೆ ವಿಸ್ತಾರ ನೀಡದೆ ಯತಿಯೊಂದಿಗೆ - ಬಲರಾಮನೊಂದಿಗೆ ಅನುಭವದ ಸೊಗಸಿನೊಂದಿಗೆ ನಿರೂಪಿಸಿದರು. ಪಾತ್ರನಿರ್ವಹಣೆಯಲ್ಲಿಯ ಸೊÌàಪಜ್ಞತೆ ಇವರ ವಿಶೇಷತೆ. ಯತಿ ಅರ್ಜುನ (ಪ್ರದೀಪ ಸಾಮಗ)- ವೃತ್ತಿ ಕಲಾವಿದರ ನಡುವಿನ ಹವ್ಯಾಸಿ. ಅತ್ಯುತ್ತಮ ನಿರ್ವಹಣೆ.

ಅರ್ಜುನ ಕಡಿಮೆ ಮಾತಿನಲ್ಲಿ ನಾಟಕೀಯ ಧ್ವನಿಗಳನ್ನು ಮೂಡಿಸಬೇಕಾದ ಸವಾಲಿನ ಪಾತ್ರ, ಆಟ-ಕೂಟಗಳಲ್ಲಿ ಈ ಪಾತ್ರ ನಿರ್ವಹಣೆ ಬಹುದೊಡ್ಡ ಸವಾಲು. ದ್ವಯಾರ್ಥದ ಮಾತುಗಳು, ನಾಟಕೀಯತೆ ಮಾತು-ನೃತ್ಯ ಎಲ್ಲದರಲ್ಲೂ ಸೊಗಸಾಗಿ ಮೂಡಿಬಂತು.

ಪ್ರಧಾನ ಪಾತ್ರಧಾರಿ ಬಡಗಿನ ಪ್ರಖ್ಯಾತ ಕೃಷ್ಣ ಯಾಜಿಯವರ ಬಲರಾಮ, ಮಹಾಬಲ ಹೆಗಡೆಯವರ ಇದೇ ಪಾತ್ರದ ಪಡಿಯಚ್ಚು. ಪಾತ್ರದಲ್ಲಿ ಅನುಭವ-ರಂಗನಡೆ ಎಲ್ಲವೂ ಚೆನ್ನಾಗಿಯೇ ಸಾಗಿತು. ಇಂದಿನ ಪ್ರೇಕ್ಷಕರಿಗೆ ಹಿಂದಿನ ರೀತಿಯ ಪಾತ್ರ ನಿರ್ವಹಣೆಯ ರೀತಿ ಹೇಗಿತ್ತು ಎಂಬುದನ್ನು ತೋರಿಸಿಕೊಟ್ಟರು. ಕಾಸರಕೋಡು ಶ್ರೀಧರ ಭಟ್ಟರ ವನಪಾಲಕ ಚುರುಕು-ಚಾಲಾಕು ಎರಡರಲ್ಲೂ ಯಶಸ್ವಿ. ಹೇಗೋ ಬಂದು ಸೇರಿಕೊಂಡ-ಬಹುಭಾಷೆಯಲ್ಲಿ ಅರ್ಜುನನ್ನು ಮಾತಾಡಿಸುವ ಅಸಂಬದ್ಧವನ್ನು ಬಿಟ್ಟುದು ಇವರ ಹೆಚ್ಚುಗಾರಿಕೆ.

ಎರಡನೆಯ (ನಿಜದ) ಅರ್ಜುನನಾಗಿ ಸುಜಯೀಂದ್ರ ಹಂದೆಯವರಿಗೆ ಸಮಯದ ಅಭಾವ ಕಾಡಿತು. ಕೌರವ (ಬಾಲಕೃಷ್ಣ ನಾಯ್ಕ), ಕರ್ಣ (ಸಂತೋಷ ನಾಯ್ಕ), ದುಶಾÏಸನ (ಸಂತೋಷ್‌) -ಸಮಯ ಮಿತಿಯಲ್ಲಿ ನಿರ್ವಹಿಸಿದರು. ಬದಲಿ ಕಲಾವಿದನಾಗಿ ಭಾಗವಹಿಸಿದ ವಿದ್ಯಾರ್ಥಿ ಸಮರ್ಥರ ಸುಭದ್ರೆಗೆ ಸಾಂದರ್ಭಿಕವಾಗಿ ಮೆಚ್ಚಿಕೊಳ್ಳಲೇಬೇಕು. ಒಟ್ಟಂದದಲ್ಲಿ ಈ ಪ್ರಸಂಗ ಸಿದ್ಧಮಾದರಿಯಲ್ಲೇ ಸಾಗಿತು.

ಎರಡನೆಯ ಆಖ್ಯಾನ ಕೀಚಕ ವಧೆಗೆ ರಾಘವೇಂದ್ರ ಆಚಾರ್ಯರ ಭಾಗವತಿಕೆ, ಸುನಿಲ್‌ ಭಂಡಾರಿ- ರಾಮಕೃಷ್ಣ ಮಂದಾರ್ತಿ ಇವರ ಹಿಮ್ಮೇಳ. ಈ ಪ್ರಸಂಗದ ಆಕರ್ಷಣೀಯ ಅಂಶದಲ್ಲಿ ಭಾಗವತಿಕೆಯೂ ಒಂದು. ಪಕ್ಕನೆ ನಾವುಡರನ್ನು ನೆನಪಿಸುವ ಸುಸ್ವರ. ಮನರಂಜನೆಗಳದ್ದೇ ಪರಂಪರೆ-ಜಾನಪದೀಯ , ಆಲಾಪನೆಗಳನ್ನು ಸೊಗಸಾಗಿ ನಿರೂಪಿಸಿದರು.

ಸೈರಂಧ್ರಿಯಾಗಿ ಸುಬ್ರಹ್ಮಣ್ಯ ಹೆಗಡೆ ಭಾವಪೂರ್ಣ ಮಾತುಗಳಿಂದ ದ್ರೌಪದಿಯ ಚಿತ್ರವನ್ನು ಸೊಗಸಾಗಿ ಕಟ್ಟಿಕೊಟ್ಟರು. ಪೀಠಿಕೆಯಲ್ಲಿ ತನ್ನನ್ನು ಏನಾಗುತ್ತೀಯೇ ಎಂದು ಯಾರೂ ಕೇಳಲಿಲ್ಲ ಎಂಬುದು ಸರಿಯಾಗಲಿಲ್ಲ. ಸೈರಂಧ್ರಿಯ ಭಾವ ಪ್ರಕಟಣೆ, ಚಿಂತನೆ ಮಾತುಗಳಲ್ಲಿ ಮೂಡಿತು.

ಸುದೇಷ್ಣೆಯಾಗಿ ಮಂಟಪ ಪ್ರಭಾಕರ ಉಪಾಧ್ಯಾಯರದು ರಂಗಾನುಭವದ ಪಾತ್ರ. ನೃತ್ಯ-ಮಾತುಗಳು ಭಾವಪೂರ್ಣವಾಗಿ ಮೂಡಿಬಂದವು. ರಂಗದ ಪ್ರತಿಯೊಂದು ಕ್ಷಣವನ್ನು ತನ್ಮಯತೆಯಿಂದ ನಿರ್ವಹಿಸಿದರು. ಕೆಲವೆಡೆ ಆ ಪಾತ್ರ ಅಷ್ಟೆಲ್ಲ ಚಿಂತನಶೀಲವೇ ಅನಿಸಿತು. ಕೆಲವೆಡೆ ಮಾತುಗಳು ನಾಟಕದ ಶೈಲಿಗೆ ವಾಲಿದ್ದೂ ಇದೆ. ಯಕ್ಷಗಾನದ ದೃಷ್ಟಿಯಿಂದ ಕಲಾವಿದ ಬಿಡಬಹುದಾದ, ಕಲಾವಿದರ ದೃಷ್ಟಿಯಿಂದ ಯಕ್ಷಗಾನದವರು ಪಡೆಯಬಹುದಾದ ಅನೇಕ ಅಂಶಗಳು ಇದ್ದವು. ಎದ್ದು ಕಾಣಿಸಿದ ಪಾತ್ರ. ಕೀಚಕನಾಗಿ ಕೊಂಡದಕುಳಿಯವರದ್ದು ಪ್ರಬುದ್ಧ ನಿರ್ವಹಣೆ. ವಿಜಯ (ಚಪ್ಪರಮನೆ ಶ್ರೀಧರ ಹೆಗಡೆ)- ಕೀಚಕರ ಜೋಡಿಯೂ ಚೆನ್ನಾಯ್ತು. ಕಾಲಮಿತಿಯನ್ನು ಗಮನಿಸಿ ಕೆಲವು ಭಾಗಗಳಲ್ಲಿ ಮಾತನ್ನು ಕಡಿಮೆ ಮಾಡಬಹುದಿತ್ತು. ವೇಷದ ಅಬ್ಬರ, ಅಭಿನಯದ ಸೊಗಸು ಚೆನ್ನಾಗಿ ಮೂಡಿಬಂತು. ದೊರೆಯ ಪಾತ್ರದವರಿಗೆ (ಉಮೇಶ್‌) ಸುದೇಷ್ಣೆಯೊಂದಿಗೆ ಹೊಂದುವಲ್ಲಿ ಕಷ್ಟವಾದಂತಿತ್ತು. ಹಾಸ್ಯಗಾರರ ಚಾತುರ್ಯ ಪ್ರೇಕ್ಷಕರನ್ನು ಬಹುವಾಗಿ ರಂಜಿಸಿತು.

ವಲಲ (ಥಂಡಿಮನೆ ಶ್ರೀಪಾದ ಭಟ್‌) ಸೊಗಸಿನ, ಸಾಮರ್ಥ್ಯಪೂರ್ಣ ನಿರ್ವಹಣೆ. ಪೀಠಿಕೆಯಲ್ಲಿ ಪಾತ್ರದ ಸ್ಥಾಪನೆ, ಅನಂತರವೂ ದ್ರೌಪದಿಯೊಂದಿಗಿನ ಸಂಭಾಷಣೆ ಚೆನ್ನಾದ ನಿರೂಪಣೆ. ಭೀಮಸೇನನ ಛಾಪು, ಜಾಪು ಪ್ರಬುದ್ಧವಾಗಿದ್ದವು.

ಕಾಲಮಿತಿಯ ಕಾರ್ಯಕ್ರಮವಾದುದರಿಂದ ಕಲಾವಿದರು ಸಾಕಷ್ಟು ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಅದರ ಕೊರತೆ ಕಾಣಿಸಿಕೊಂಡಿತು. ಭಾಗವತರು ಆಲಾಪಿಸುವಾಗ ತಟ್ಟಿದ ಚಪ್ಪಾಳೆ ನಿಜವಾಗಿಯೂ ಚೆನ್ನಾಗಿದ್ದ ಪದ್ಯಕ್ಕೆ ದೊರೆಯಲಿಲ್ಲ.

ಒಟ್ಟಿನಲ್ಲಿ ಕಲಾರಂಗದ ಈ ಅಪೂರ್ವ ಸಾಧನೆ ದಾಖಲೆಯ ಪ್ರೇಕ್ಷಕ ವರ್ಗ, ಅಚ್ಚುಕಟ್ಟಿನ ಪ್ರಯೋಗ ಎರಡು ದೃಷ್ಟಿಯಿಂದಲೂ ಅಭಿನಂದನೀಯ.

ಕೃಪೆ : udayavani

Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ