ಅಗಲಿದ ಬಯಲಾಟದ ಅಗ್ರಮಾನ್ಯ ಹಾಸ್ಯಗಾರ ಮಡಾಮಕ್ಕಿ ಜಯರಾಮ ಶೆಟ್ಟಿ
ಲೇಖಕರು : ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಭಾನುವಾರ, ಆಗಸ್ಟ್ 9 , 2015
|
ಯಕ್ಷಗಾನದ ಬಯಲಾಟ ರಂಗಭೂಮಿಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ಪರಂಪರೆಯ ರಾಜ ಹಾಸ್ಯಗಾರನಾಗಿ ಗುರುತಿಸಿಕೊಂಡ ಮಡಾಮಕ್ಕಿ ಜಯರಾಮ ಶೆಟ್ಟರು ಇನ್ನು ನೆನಪು ಮಾತ್ರ. ತನ್ನ ಅರವತ್ತರ ಪ್ರಾಯದಲ್ಲಿ ಅವರು ದೈವಾಧೀನರಾಗಿದ್ದಾರೆ.
|
ಕೊರ್ಗು ಹಾಸ್ಯಗಾರರ ಶಿಷ್ಯ
ಕುಂದಾಪುರ ತಾಲೂಕು ಮಡಾಮಕ್ಕಿಯ ಶಿರಂಗೂರು ಎಂಬಲ್ಲಿ ಹಿರಿಯ ಯಕ್ಷಗಾನ ಕಲಾವಿದ ಸೋಮಯ್ಯ ಶೆಟ್ಟರ ಪುತ್ರರಾದ ಇವರು ತಂದೆಯಿಂದಲೇ ಯಕ್ಷಗಾನ ಹೆಜ್ಜೆಗಾರಿಕೆ ಕಲಿತು ಶ್ರೀ ಮಂದಾರ್ತಿ ಮೇಳದಲ್ಲಿ ಗೆಜ್ಜೆ ಕಟ್ಟಿದರು. ಅಲ್ಲಿಯೇ ಬಾಲಗೋಪಾಲ ಒಡ್ಡೋಲಗದ ವೇಷ ಮಾಡುತಿದ್ದ ಅವರು ಆಗ ಮೇಳದಲ್ಲಿದ್ದ ಬಡಗುತಿಟ್ಟು ಹಾಸ್ಯದ ದಂತಕಥೆ ಹಾಲಾಡಿ ಕೊರ್ಗು ಹಾಸ್ಯಗಾರರ ಕಣ್ಣಿಗೆ ಬಿದ್ದರು. ಕೊರ್ಗು ಹಾಸ್ಯಗಾರರೇ ಸ್ವತಹ ತಮಗೆ ಬಂದ ಚಿಕ್ಕಪುಟ್ಟ ಹಾಸ್ಯ ಪಾತ್ರಗಳನ್ನು ಶೆಟ್ಟರಿಂದ ಮಾಡಿಸತೊಡಗಿದರು.
ನಂತರ ಕೆಲವು ವರ್ಷ ಮಂದಾರ್ತಿ ಮೇಳದಲ್ಲಿ ಕೊರ್ಗು ಹಾಸ್ಯಗಾರರಿಗೆ ಸಹ ಹಾಸ್ಯಗಾರರಾಗಿ ಗುರುತಿಸಿಕೊಂಡರು. ಅವರು ಸಾಂಪ್ರಾದಾಯದ ಹಾಸ್ಯಗಾರರಾಗಿ ಗುರುತಿಸಿಕೊಳ್ಳಲು ಅಂದಿನ ಪರಂಪರೆಯ ಹಿಮ್ಮೇಳವಾದ ಜಾನುವಾರುಕಟ್ಟೆ ಗೋಪಾಲ ಕಾಮತ್. ಗೋರ್ಪಾಡಿ ವಿಠಲ ಕಾಮತ್. ಮತ್ಯಾಡಿ ನರಸಿಂಹ ಶೆಟ್ಟಿ, ಚಂಡೆಯ ಕಿಟ್ಟು, ಸುರಗಿಕಟ್ಟೆ ಬಸವ ಗಾಣಿಗರು ಪ್ರಮುಖರು. ಮೇಳದಲ್ಲಿದ್ದ ಹಿರಿಯ ಕಲಾವಿದರಾದ ಉಡುಪಿ ಬಸವ, ಮೊಳಹಳ್ಳಿ ಹೆರಿಯ, ಪೆರ್ಡೂರು ರಾಮ, ವಂಡಾರು ಬಸವ ನಾಯರಿ, ಕೋಡಿ ಶಂಕರ ಗಾಣಿಗ, ನಗರ ಜಗನ್ನಾಥ ಶೆಟ್ಟಿ , ಹಳ್ಳಾಡಿ ಮಂಜಯ್ಯ ಶೆಟ್ಟಿ ಅವರನ್ನು ತಿದ್ದಿ ತೀಡಿ ಪ್ರೋತ್ಸಾಹಿಸಿದವರು.
ಬಡಗಿನ ಪ್ರಮುಖ ಮೇಳಗಳಲ್ಲಿ ದುಡಿಮೆ
ಬಯಲಾಟದಲ್ಲಿ ಪ್ರಸಿದ್ದರಾಗಿದ್ದ ಅವರು ಬಳಿಕ ಸಾಲಿಗ್ರಾಮ ಮೇಳಕ್ಕೆ ಸೇರಿ ಕಿನ್ನಿಗೋಳಿ ಮುಖ್ಯಪ್ರಾಣರಿಗೆ ಸಹ ಹಾಸ್ಯಗಾರರಾಗಿ ಕಾಣಿಸಿಕೊಂಡರು. ಕಾಳಿಂಗ ನಾವಡರ ಸಮರ್ಥ ಬಾಗವತಿಕೆ ಜಲವಳ್ಳಿ, ಅರಾಟೆ, ಶಿರಿಯಾರ ಮಂಜುನಾಯ್ಕ್, ಐರೋಡಿ ಗೋವಿಂದಪ್ಪ, ಕೋಟ ವೈಕುಂಟನವರೊಂದಿಗೆ ಅವರು ಅಭಿನಯಿಸಿದ ರತಿರೇಖಾ, ಸತಿ ಸೀಮಂತಿನಿ, ಚಲುವೆ ಚಿತ್ರಾವತಿ ಮುಂತಾದ ಹೊಸ ಪ್ರಸಂಗದಲ್ಲಿ ಅವರ ಹಾಸ್ಯಪಾತ್ರ ಜನಮನ ರಂಜಿಸಿತ್ತು.
|
ಮಡಾಮಕ್ಕಿ ಜಯರಾಮ ಶೆಟ್ಟಿ |
 |
ಜನನ |
: |
1955 |
ಜನನ ಸ್ಥಳ |
: |
ಶಿರಂಗೂರು, ಮಡಾಮಕ್ಕಿ
ಕುಂದಾಪುರ ತಾಲೂಕು
ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ
|
ಕಲಾಸೇವೆ:
ಯಕ್ಷಗಾನದ ಬಯಲಾಟ ರಂಗಭೂಮಿಯಲ್ಲಿ 45 ವರ್ಷಗಳ ದೀರ್ಘಕಾಲ ಮಂದಾರ್ತಿ, ಸಾಲಿಗ್ರಾಮ, ಅಮೃತೇಶ್ವರಿ, ಹಾಲಾಡಿ, ಮಡಾಮಕ್ಕಿ ಮೇಳಗಳಲ್ಲಿ ಹಾಸ್ಯಗಾರನಾಗಿ ಕಲಾಸೇವೆ
|
ಮರಣ ದಿನಾ೦ಕ |
: |
ಆಗಸ್ಟ್ ,2015 |
|
|
ನಂತರ ಬಡುಗುತಿಟ್ಟಿನ ಇನ್ನೊಬ್ಬ ಹಿರಿಯ ಹಾಸ್ಯಗಾರ ಹಳ್ಳಾಡಿ ಜಯರಾಮ ಶೆಟ್ಟರೊಂದಿಗೆ ಸಹ ಹಾಸ್ಯಗಾರರಾಗಿ ಬೋಜರಾಜ ಹೆಗ್ಡೆಯವರ ಮಂದಾರ್ತಿ ಮೇಳವನ್ನು ಪುನಹ ಸೇರಿದ ಅವರು ಆಗ ಅಲ್ಲಿ ಪ್ರಚಲಿತವಾಗಿದ್ದ ಶ್ರೀ ದೇವಿ ಬನಶಂಕರಿ, ಸತಿ ಸುಶೀಲೆ, ಮುಂತಾದ ಹೊಸ ಪ್ರಸಂಗದಲ್ಲಿ ಇವರೀರ್ವರ ಅವಳಿ ಹಾಸ್ಯಪಾತ್ರಗಳು ಜನಪ್ರೀಯವಾಗಿತ್ತು. ಬಳಿಕ ಅಮೃತೇಶ್ವರಿ, ಹಾಲಾಡಿ ಮೇಳದಲ್ಲಿ ತಿರುಗಾಟ ಮಾಡಿದ ಅವರ ದೀರ್ಘಕಾಲದ ತಿರುಗಾಟ ಮಡಾಮಕ್ಕಿ ಶಿವರಾಮ ಭಟ್ಟರ ಸಂಚಾಲಕತ್ವದ ಮಡಾಮಕ್ಕಿ ಮೇಳದಲ್ಲಿ. ಜೀವಿತದ ಕೊನೆಯವರೆಗೆ ಅಲ್ಲಿಯೇ ಸೇವೆ ಸಲ್ಲಿಸಿದ್ದರು
ಪರಂಪರೆಯ ಹಾಸ್ಯದ ನಡೆ ಕುಣಿತಾಭಿನಯಗಳ ಸಿದ್ಧಿ
ಅನೇಕ ಬಯಲಾಟ ಮೇಳಗಳಲ್ಲಿ ಪರಂಪರೆಯ ನಡೆಯಂತೆ ಹಾಸ್ಯ ಪಾತ್ರಗಳನ್ನು ನಿರ್ವಹಿಸುತಿದ್ದ ಅವರು ಕೊರ್ಗು ಹಾಸ್ಯಗಾರರ ಹಾಸ್ಯದ ನಡೆ ಕುಣಿತಾಭಿನಯ, ಮುಖವರ್ಣಿಕೆಗಳನ್ನು ಕರಗತ ಮಾಡಿಕೊಂಡಿದ್ದರು. ಅವುಗಳನ್ನು ತಾವು ನಿರ್ವಹಿಸುತಿದ್ದ ವಿವಿದ ಪಾತ್ರಗಳ ಮೂಲಕ ನೆನಪಿಸುತಿದ್ದರು. ವನಪಾಲಕನೋ, ದ್ವಾರಪಾಲಕನ ವೇಷದಲ್ಲಿ ಏಕತಾಳದ ಪ್ರಾರಂಭದ ಮುಕ್ತಾಯಕ್ಕೆ ಕೈಯಲ್ಲಿ ಹಿಡಿದ ಕೋಲನ್ನೂರಿ ಎತ್ತರಕ್ಕೆ ಹಾರಿ ಕೋಲಿನ ತುದಿಯವರೆಗೆ ಹಾರುವ ಕಲೆಯನ್ನು ಕರಗತಮಾಡಿಕೊಂಡಿದ್ದರು.
ಬಾಹುಕ, ರಕ್ಕಸದೂತ ಮುಂತಾದ ಪಾತ್ರಗಳಲ್ಲಿ ಅವರ ಮುಖವರ್ಣಿಕೆ ಕೊರ್ಗು ಹಾಸ್ಯಗಾರರ ಪಡಿಯಚ್ಚು. ಬಹಳ ಅವಸರದಲ್ಲೂ ವಿವಿದ ಮುಖವರ್ಣಿಕೆಗಳನ್ನು ಅದ್ಭುತವಾಗಿ ಚಿತ್ರಿಸಿದವರು ಕೊರ್ಗು ಹಾಸ್ಯಗಾರರು. ಅಂತಹ ಅಪರೂಪದ ಚಾಕಚಕ್ಯತೆ ಜಯರಾಮ ಶೆಟ್ಟರಿಗೆ ಸಿದ್ದಿಸಿತ್ತು. ಹೊಟ್ಟೆಗೆ ಭಟ್ಟೆ ಕಟ್ಟಿ ದೊಡ್ಡಹೊಟ್ಟೆಮಾಡಿಕೊಂಡು ಅದರಮೇಲೆ ಅಂಗಿಹಾಕಿ ಶರೀರ ಅಲುಗಿಸದೆ ಹೊಟ್ಟೆ ಮಾತ್ರ ಅಲುಗಿಸುವಂತ ಅಪರೂಪದ ಕಲೆಯೂ ಅವರಿಗೆ ಸಿದ್ದಿಸಿತ್ತು. ಜೋಡಾಟದ ಸಂದರ್ಭದಲ್ಲಿ ದ್ವಾರಪಾಲಕನ ಪಾತ್ರದಲ್ಲಿ ವಿರೋಧಿಗಳನ್ನು ಎದುರಿಸುವ ದ್ವಾರಪಾಲಕನಾಗಿ ಮೊದಲೇ ಹಾಕಿಕೊಂಡಿದ್ದ ಹತ್ತಾರು ಅಂಗಿಗಳನ್ನು ಒಂದಾದಮೇಲೊಂದರಂತೆ ಕಳಚಿ ಬಿಸಾಡುವ ಕ್ರಮ ಅವರ ಹಾಸ್ಯದಲ್ಲಿ ವಿಶೇಷ. ಇಂದಿನ ಕಲಾವಿದರಲ್ಲಿ ಕಮಲಶಿಲೆ ಮಹಾಬಲ ಹಾಸ್ಯಗಾರ್. ರವೀಂದ್ರ ಹಾಸ್ಯಗಾರ್, ಲಕ್ಷಣ ಭಂಡಾರಿ ಮತ್ತು ಎಳಬೇರು ಶೇಖರ ಶೆಟ್ಟರಲ್ಲಿ ಜಯರಾಮ ಶೆಟ್ಟರ ಹಾಸ್ಯದ ಛಾಯೆಯನ್ನು ಗುರುತಿಸಬಹುದು.
ತಾವು ಮಾಡುತಿದ್ದ ಪಾತ್ರಗಳಲ್ಲಿ ವೈಯಕ್ತಿಕ ಸಂಬಾಷಣೆಯಲ್ಲಿ ಸಮಯ ಹಾಳುಮಾಡದೆ ಪಾತ್ರೋಚಿತವಾಗಿ ಮಾತನಾಡುತಿದ್ದ ಶೆಟ್ಟರು ಸಮಕಾಲೀನ ಕಲಾವಿದರಲ್ಲಿ ಅಗ್ರಶ್ರೇಣಿಯ ಭಾಗವತರು. ಮದ್ಯೆ ಮದ್ಯ ಕೆಲವು ವರ್ಷ ತಿರುಗಾಟ ನಿಲ್ಲಿಸಿ ಹೋಟೆಲ್ ಉದ್ಯಮ ನಡೆಸದೆ ಇದ್ದು ಮೇಳದಲ್ಲೇ ಮುಂದುವರಿದಿದ್ದರೆ ಇಂದು ಬಡಗುತಿಟ್ಟಿನ ಹಾಸ್ಯಪರಂಪರೆಯಲ್ಲಿ ಅಗ್ರಶ್ರೇಣಿಯ ಕಲಾವಿದನನ್ನಾಗಿ ಜನ ಅವರನ್ನು ಗುರುತಿಸುತಿದ್ದರು. ದೀರ್ಘ ಕಾಲ ಎಲೆಮರೆಯ ಕಾಯಾಗಿ ಉಳಿದಿದ್ದ ಅವರು ಯಾವ ಸಂಘಟಣೆಯಿಂದಲೂ ಗುರುತಿಸಲ್ಪಡದಿದ್ದದು ವಿಪರ್ಯಾಸ. ಪ್ರಚಾರ ಸನ್ಮಾನ ಪ್ರಶಸ್ತಿ ಪುರಸ್ಕಾರದಿಂದ ದೂರ ಉಳಿದು ಸುದೀರ್ಘ 40 ವರ್ಷ ಬಡಗುತಿಟ್ಟು ಬಯಲಾಟ ರಂಗಭೂಮಿಯಲ್ಲಿ ಗುರುತಿಸಿಕೊಂಡ ಶೆಟ್ಟರ ನಿಧನದಿಂದ ಬಡಗುತಿಟ್ಟು ಹಾಸ್ಯಲೋಕ ಬಡವಾಗಿದೆ.
|
|
|