ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ವ್ಯಕ್ತಿ ವಿಶೇಷ
Share
ಹವ್ಯಾಸಿ ತೆಂಕುತಿಟ್ಟು ಮರೆಯಬಾರದ ಉಪ್ಪಳ ಕೃಷ್ಣ ಮಾಸ್ತರ್‌

ಲೇಖಕರು : ಕೆ. ಸದಾಶಿವ
ಗುರುವಾರ, ಸೆಪ್ಟೆ೦ಬರ್ 3 , 2015

ಯಕ್ಷಗಾನ ರಂಗದಲ್ಲಿ ವೃತ್ತಿ ಕಲಾವಿದರು ಮತ್ತು ಹವ್ಯಾಸಿ ಕಲಾವಿದರೆಂಬ ಒಂದು ವರ್ಗೀಕರಣ ಇದೆ. ಯಕ್ಷಗಾನ ಕಲೆಯನ್ನೇ ವೃತ್ತಿಯಾಗಿ ಮಾಡಿಕೊಂಡವರು ವೃತ್ತಿ ಕಲಾವಿದರಾದರೆ, ಯಕ್ಷಗಾನ ಕಲೆಯ ಮೇಲಿನ ಪ್ರೀತಿ ಮತ್ತು ಆಸಕ್ತಿಯಿಂದ ಅದನ್ನು ಕಲಿತು ಅವಕಾಶವಿದ್ದಾಗ ವೇದಿಕೆ ಹತ್ತಿ ಕೇವಲ ಖುಷಿಗಾಗಿ ಪ್ರದರ್ಶನದಲ್ಲಿ ಭಾಗವಹಿಸುವವರು ಹವ್ಯಾಸಿ ಕಲಾವಿದರು. ಆದರೆ ಇತ್ತೀಚಿಗಿನ ವರ್ಷಗಳಲ್ಲಿ ಮಾತ್ರ ವೃತ್ತಿ ಕಲಾವಿದರ್ಯಾರು ಹವ್ಯಾಸಿ ಕಲಾವಿದರ್ಯಾರು ಎಂಬುದನ್ನು ಗುರುತಿಸಲಾಗದ ಸ್ಥಿತಿ ಇದೆ. ಹವ್ಯಾಸಿ ಯಕ್ಷಗಾನ ಕಲಾವಿದರು ಬಡಗು ತಿಟ್ಟಿನಲ್ಲೂ ಇದ್ದಾರೆ, ತೆಂಕುತಿಟ್ಟಿನಲ್ಲೂ ಇದ್ದಾರೆ. ತೆಂಕುತಿಟ್ಟು ಹವ್ಯಾಸಿ ಯಕ್ಷಗಾನ ರಂಗ ಮರೆಯಬಾರದ ಹೆಸರೊಂದಿದೆ, ಅದುವೇ ಉಪ್ಪಳ ಕೃಷ್ಣ ಮಾಸ್ತರ್‌.

70-80ರ ದಶಕದಲ್ಲಿ ಕುಂಬಳೆ, ಕಾಸರಗೋಡು, ಉಪ್ಪಳ, ಬಾಯಾರು, ಬದಿಯಡ್ಕ, ಪುತ್ತೂರು, ಮಂಗಳೂರು ಮುಂತಾದೆಡೆ ಶಾಲಾ ಕಾಲೇಜುಗಳಲ್ಲೂ ಸಂಘಸಂಸ್ಥೆಗಳಲ್ಲೂ ಉತ್ಸಾಹಿ ಯುವಕರಿಗೆ ಯಕ್ಷಗಾನ ಕಲೆಯ ತರಬೇತಿ ನೀಡುತ್ತಾ, ಯಕ್ಷಗಾನ ಪ್ರದರ್ಶನ ಗಳನ್ನು ಏರ್ಪಡಿಸುತ್ತಾ ಓಡಾಡಿದವರು ಕೃಷ್ಣ ಮಾಸ್ತರರು. ಯಕ್ಷಗಾನ ತರಬೇತಿ ಕೇಂದ್ರಗಳಿಲ್ಲದಿದ್ದ ಆ ದಿನಗಳಲ್ಲಿ, ತರಬೇತಿ ನೀಡಬಲ್ಲ ಪೂರ್ಣಾವಧಿ ಯಕ್ಷಗಾನ ಗುರುಗಳೂ ಇಲ್ಲದಿದ್ದ ಆ ಕಾಲದಲ್ಲಿ, ಯಕ್ಷಗಾನ ಕಲೆಯ ಮೇಲೆ ಪ್ರೀತಿ ಹೊಂದಿದ್ದ ಅನೇಕ ಮಂದಿಗೆ ಕೃಷ್ಣ ಮಾಸ್ತರರು ಯಕ್ಷಗಾನದ ಕೆಲಸಕ್ಕಾಗಿ ಊರೂರು ಸುತ್ತಾಡಿದ ಸಾಹಸದ ಕಥೆ ಮರೆಯಬಾರದ ಸಂಗತಿ.

ಕುಂಬಳೆ ಸುಂದರರಾಯರ ತಮ್ಮ

ಮುಖ್ಯವಾಗಿ ಕೃಷ್ಣ ಮಾಸ್ತರರು ಓರ್ವ ಉತ್ತಮ ಯಕ್ಷಗಾನ ಕಲಾವಿದರಾಗಿದ್ದರು. ಅವರು ಕಲಾವಿದರಾಗಲು ಅವರು ಹುಟ್ಟಿ ಬೆಳೆದ ಪರಿಸರವೇ ಕಾರಣವೆನ್ನಬಹುದು. ಯಕ್ಷಗಾನದ ತವರೂರು ಎನ್ನ ಬಹುದಾದ ಕುಂಬಳೆ ಅವರ ಹುಟ್ಟೂರು. ಇವರ ಅಜ್ಜ ಕಾಯರ್ಪಾಡಿ ಅಯ್ಯಪ್ಪನವರು ಯಕ್ಷಗಾನ ಕಲಾವಿದರಾಗಿದ್ದವರು. ತಂದೆ ಅಟ್ಟೆಗೋಳಿ ಶಂಕರನವರು ಹವ್ಯಾಸಿ ಯಕ್ಷಗಾನ ಕಲಾವಿದರೂ ಭಾಗವತಿಕೆಯನ್ನು ಬಲ್ಲವರೂ ಆಗಿದ್ದರು. ಕೃಷ್ಣ ಮಾಸ್ತರರ ಅಣ್ಣ (ದೊಡ್ಡಪ್ಪನ ಮಗ) ಕುಂಬಳೆ ಸುಂದರರಾಯರು ಪ್ರಸಿದ್ಧ ಯಕ್ಷಗಾನ ಕಲಾವಿದರೇ ಆಗಿದ್ದರು. ಇಂತಹ ಕುಂಬಳೆಯ ಕಲಾ ಪರಿಸರದಲ್ಲಿ ಕೃಷ್ಣ ಮಾಸ್ತರರು ಯಕ್ಷಗಾನವನ್ನು ನೋಡಿ ಕಲಿತೇ ಕಲಾವಿದರಾಗಿ ಬೆಳೆದರು.

ಎತ್ತರ ಸ್ವಲ್ಪ ಕಡಿಮೆ ಇದ್ದದ್ದರಿಂದಲೂ ಚುರುಕಿನ ಚಲನೆಯವರಾಗಿದ್ದರಿಂದಲೂ ಸಹಜ ವಾಗಿ ಅವರು ಓರ್ವ ಪುಂಡು ವೇಷ ಕಲಾವಿದರಾದರು. ಅಭಿಮನ್ಯು, ಬಭುವಾಹನ, ಪರಶುರಾಮ, ಲಕ್ಷ್ಮಣ, ಶ್ವೇತಕುಮಾರ, ಕೃಷ್ಣ ಮುಂತಾದ ಪಾತ್ರಗಳಲ್ಲಿ ಅವರು ಮಿಂಚಿದ್ದರು. ರಂಗಸ್ಥಳ ತುಂಬುವ ಇವರ ನಾಟ್ಯಗಾರಿಕೆಯನ್ನು ಕಂಡು ಕುಂಬಳೆ ಸುಂದರರಾಯರು ಒಮ್ಮೆ ಹೇಳಿದ್ದುಂಟು, ""ನಿನ್ನ ಕಾಲು ನನಗೆ ಸಿಗುತ್ತಿದ್ದರೆ ನಾನು ಲೋಕವನ್ನೇ ಗೆಲ್ಲುತ್ತಿದ್ದೆ.'' ಆಗ ಕೃಷ್ಣ ಮಾಸ್ತರರು, "ನಿಮ್ಮ ನಾಲಗೆ ನನಗೆ ಸಿಗುತ್ತಿದ್ದರೆ ನಾನೂ ಲೋಕವನ್ನು ಗೆಲ್ಲುತ್ತಿದ್ದೆ'' ಎಂದು ಉತ್ತರಿಸಿದರಂತೆ.

ಸರ್ವಾ೦ಗೀಣ ಕಲಾವಿದ

ಕೃಷ್ಣ ಮಾಸ್ತರರು ಓರ್ವ ಯಕ್ಷಗಾನ ವೇಷಧಾರಿ ಮಾತ್ರವಲ್ಲ, ಅವರು ಚೆಂಡೆ ನುಡಿಸುತ್ತಿದ್ದರು, ಮದ್ದಳೆ ಬಾರಿಸುತ್ತಿದ್ದರು, ಭಾಗವತಿಕೆಯನ್ನೂ ತಿಳಿದಿದ್ದರು, ತಾಳಮದ್ದಳೆಯ ಅರ್ಥಧಾರಿಯೂ ಆಗಿದ್ದರು. "ಚಿಕ್ಕ ಬೊಕ್ಕರ ಕಾಳಗ' ಎಂಬ ಒಂದು ಸಾಮಾಜಿಕ ಕಥೆಯ ಪ್ರಸಂಗವನ್ನೂ ಬರೆದು ಪ್ರಕಟಿಸಿದ್ದರು. ಭರತನಾಟ್ಯ, ನಾಟಕ, ಹರಿಕಥೆ ಮುಂತಾದುವುಗಳಲ್ಲೂ ಪ್ರಾವೀಣ್ಯ ಗಳಿಸಿದ್ದರು.
ಉಪ್ಪಳ ಕೃಷ್ಣ ಮಾಸ್ತರ್‌
ಜನನ : 1938
ಜನನ ಸ್ಥಳ : ಕುಂಬಳೆ, ಕಾಸರಗೋಡು ಜಿಲ್ಲೆ,
ಕೇರಳ ರಾಜ್ಯ

ಕಲಾಸೇವೆ:
ಚೆಂಡೆವಾದನ, ಮದ್ದಳೆವಾದನ, ಭಾಗವತಿಕೆ, ತಾಳಮದ್ದಳೆಯ ಅರ್ಥಧಾರಿ, ಭರತನಾಟ್ಯ, ನಾಟಕ, ಹರಿಕಥೆ ಮುಂತಾದುವುಗಳಲ್ಲೂ ಹೀಗೆ ಎಲ್ಲಾ ಪ್ರಾಕಾರಗಳಲ್ಲೂ ಪ್ರಾವಿಣ್ಯತೆಯ ಮೆರೆದ, ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರಾಗಿದ್ದುಕೊ೦ಡು, 60-70ರ ದಶಕದಲ್ಲಿ ಕಾಸರಗೋಡು ಮತ್ತು ಮ೦ಗಳೂರು ಪ್ರದೇಶಗಳಲ್ಲಿ ಅಸ೦ಖ್ಯಾತ ಕಲಾವಿದರಿಗೆ ಯಕ್ಷಶಿಕ್ಷಣ ಕೊಡಿಸಿದ ಗುರುಗಳು.
ಪ್ರಶಸ್ತಿಗಳು:
 • 1987-88ರಲ್ಲಿ ಕೇರಳ ಸರ್ಕಾರದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ
 • 1994ರಲ್ಲಿ ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ
 • 1996-97ರಲ್ಲಿ ಕರ್ನಾಟಕ ಜನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ
 • ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ ಹಾಗೂ ಪ್ರಶಸ್ತಿಗಳು
ಸ್ವಲ್ಪ ಮಟ್ಟಿಗೆ ಮ್ಯಾಜಿಕ್‌ ಕಲೆಯನ್ನೂ ಕರಗತ ಮಾಡಿಕೊಂಡಿದ್ದರು. ಅಂದಿನ ದಿನಗಳಲ್ಲಿ ಅನೇಕ ಶಾಲಾ ಕಾಲೇಜುಗಳ ವಾರ್ಷಿಕೋತ್ಸವಗಳಲ್ಲಿ ಮಕ್ಕಳಿಗೆ ಭರತನಾಟ್ಯ, ಸಮೂಹ ನೃತ್ಯ, ನಾಟಕ, ಯಕ್ಷಗಾನಗಳಲ್ಲಿ ತರಬೇತಿ ನೀಡುತ್ತಿದ್ದದ್ದು ಮಾತ್ರವಲ್ಲ , ನೇಪಥ್ಯದಲ್ಲೂ ಪ್ರಸಾಧನ, ವೇಷಭೂಷಣಗಳಲ್ಲಿ ಸಹಕರಿಸಿ ಕಾರ್ಯಕ್ರಮ ಯಶಸ್ವಿಯಾಗುವುದಕ್ಕೆ ನೆರವಾಗುತ್ತಿದ್ದರು.

ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ

ಕೃಷ್ಣ ಮಾಸ್ತರರಿಗೆ ಮೊದಲು ಅವರ ಅಜ್ಜನ ಹೆಸರೇ ಇತ್ತು. ಹಾಗಾಗಿ ಇಂದಿಗೂ ಅವರನ್ನು ಅನೇಕ ಮಂದಿ ಅಯ್ಯಪ್ಪ ಮಾಸ್ತರ್‌ ಎಂದೇ ಕರೆಯುತ್ತಾರೆ. ಆರಂಭದಲ್ಲಿ ಕುಂಬಳೆಯ ನಾರಾಯಣಮಂಗಲ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ಅವರು ಬಳಿಕ ಉಪ್ಪಳದ ಶಾರದಾ ಬೋವಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡಿದ್ದರು. ಬೆಳಗ್ಗಿನಿಂದ ಸಂಜೆ ತನಕ ಶಾಲೆಯಲ್ಲಿರುತ್ತಿದ್ದ ಅವರು, ಸಂಜೆ ಶಾಲೆ ಬಿಟ್ಟೊಡನೆ ಬಸ್‌ ಹತ್ತಿ ಯಾವುದೋ ಊರಿಗೆ ಹೊರಟುಬಿಡುತ್ತಿದ್ದರು. ಅಲ್ಲಿ ಯಕ್ಷಗಾನ, ನಾಟಕ, ನೃತ್ಯ ಇತ್ಯಾದಿಗಳನ್ನು ಕಲಿಸುತ್ತಾ ರಾತ್ರಿ ಅಲ್ಲೇ ಉಳಿದು, ಮರುದಿನ ಬೆಳಗ್ಗೆ ಊರಿಗೆ ಮರಳಿ ಎಂದಿನಂತೆ ಶಾಲಾ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ದಿನಗಳೆಷ್ಟೋ.

ತನ್ನೆಲ್ಲ ಕಲಾಚಟುವಟಿಕೆಗಳ ನಡುವೆ ಅವರು ತಮ್ಮ ಅಧ್ಯಾಪನ ವೃತ್ತಿಯನ್ನು ಕಡೆಗಣಿಸಿದ್ದಿಲ್ಲ . ಅತ್ಯಂತ ತನ್ಮಯತೆಯಿಂದ ಪಾಠ ಮಾಡುತ್ತಿದ್ದ ಅವರು ಓರ್ವ ಉತ್ತಮ ಶಿಕ್ಷಕರೂ ಆಗಿದ್ದರು. ಆದ ಕಾರಣದಿಂದಲೇ ಅವರು ಕೇರಳ ಸರ್ಕಾರ 1987-88 ರಲ್ಲಿ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ , 1994 ರಲ್ಲಿ ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ , 1996-97 ಕರ್ನಾಟಕ ಜನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು.

ಕೃಷ್ಣ ಮಾಸ್ತರರು ಸದಾ ಲವಲವಿಕೆಯುಳ್ಳ, ಉತ್ಸಾಹಿ ಸ್ವಭಾವದ ಓರ್ವ ವ್ಯಕ್ತಿಯಾಗಿದ್ದರು. ಓಟದಂತಹ ವೇಗದ ನಡಿಗೆ, ಅರಳು ಹುರಿದಂಥ ಮಾತು, ಮುಖದಲ್ಲಿ ಎಂದೂ ತಪ್ಪದ ನಗು - ಇದು ಅವರ ವ್ಯಕ್ತಿತ್ವದ ಭಾಗವಾಗಿತ್ತು. ವೈಯಕ್ತಿಕ ನೋವು ಯಾ ದುಃಖದ ವಿಷಯಗಳನ್ನು ಹೇಳುವಾಗಲೂ ಅವರ ಮುಖದಲ್ಲಿ ನಗೆ ತಪ್ಪುವುದಿಲ್ಲವಾಗಿತ್ತು.

ಅನಾರೋಗ್ಯಕ್ಕೊಳಗಾಗಿದ್ದಾರೆ ನಗುಮೊಗದ ಮಾಸ್ತರ್

ಅಂತಹ ಕೃಷ್ಣ ಮಾಸ್ತರರ ಇಂದಿನ ಸ್ಥಿತಿ ಮಾತ್ರ ಅವರ ಶಿಷ್ಯರಿಗೂ ಅಭಿಮಾನಿಗಳಿಗೂ ಬೇಸರ ತರಿಸದಿರದು. 77ರ ಹರೆಯದ ಕೃಷ್ಣ ಮಾಸ್ತರರು ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯಕ್ಕೊಳಗಾಗಿ, ಮನೆಯಿಂದ ಹೊರಬರಲಾರದ ಸ್ಥಿತಿಯಲ್ಲಿದ್ದಾರೆ. ಈಗ ಅವರಲ್ಲಿ ಉಳಿದುಕೊಂಡಿರುವುದು ಮುಖದಲ್ಲಿರುವ ಆ ತುಂಬು ನಗೆ ಮಾತ್ರ.

ಈಗ ಮನೆಗೆ ಬರುವವರನ್ನು ಅವರು ಸ್ವಾಗತಿಸುವುದು, ಮಾತನಾಡಿಸುವುದು, ವಿದಾಯ ಹೇಳುವುದು ತನ್ನ ಮುಖದಲ್ಲಿರುವ ಒಂದು ನಗೆಯ ಮೂಲಕ ಮಾತ್ರ. ಆದರೆ ಅದೇ ನಗೆಯನ್ನು ಬೀರುತ್ತ ಒಂದು ಕಾಲದಲ್ಲಿ ಮಂಗಳೂರು, ಕಾಸರಗೋಡು, ಪುತ್ತೂರು ನಡುವಿನ ಹವ್ಯಾಸಿ ಯಕ್ಷಗಾನ ರಂಗವನ್ನು ಅವರು ಬೆಳೆಸಿದ್ದು ಮಾತ್ರ ಮರೆಯಬಾರದ ಸಂಗತಿ.

****************

ಕೃಪೆ : udayavani


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
     ತಾಜಾ ಲೇಖನಗಳು
   
  ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
  ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
  ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
   
  © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ