ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಅಭಿವ್ಯಕ್ತಿಯ ಅಭಿಮಾನದಿಂದ ರಂಗಸುಖ

ಲೇಖಕರು :
ನಾ.ಕಾರ೦ತ, ಪೆರಾಜೆ
ಶನಿವಾರ, ಸೆಪ್ಟೆ೦ಬರ್ 26 , 2015

"ಅಭಿಮಾನಿಗಳು ಚೌಕಿಯಲ್ಲಿ ಹೆಚ್ಚು ಹೊತ್ತು ಕಾಲ ಕಳೆಯಕೂಡದು. ಪ್ರದರ್ಶನ ನೋಡುತ್ತಾ ಅಭಿವ್ಯಕ್ತಿಗೆ ಅಭಿಮಾನ, ಮೆಚ್ಚುಗೆ ಸೂಚಿಸಿದರೆ ಕಲಾವಿದನಿಗೆ ಹೆಮ್ಮೆ. ವೇಷ ತಯಾರಿಯ ಪ್ರಕ್ರಿಯೆಯನ್ನು ಪೂರ್ತಿ ನೋಡಿಬಿಟ್ಟರೆ ರಂಗದಲ್ಲಿ ಪಾತ್ರವಾಗಿ ಕಲಾವಿದನನ್ನು ಸ್ವೀಕರಿಸಲು ಕಷ್ಟವಾಗುತ್ತದೆ," ಹಿರಿಯ ಕಲಾವಿದರೊಬ್ಬರು ಯಕ್ಷಗಾನದ ಬಣ್ಣದ ಮನೆ(ಚೌಕಿ)ಯಲ್ಲಿ ಆಡಿದ ಮನದ ಮಾತು ಮನನೀಯ. ಎಷ್ಟು ಮಂದಿಗೆ ಹಿತವಾಯಿತೋ ಗೊತ್ತಿಲ್ಲ. ನನಗಂತೂ ಚಿಂತನೆಗೆ ಅವಕಾಶ ಮಾಡಿಕೊಟ್ಟಿತ್ತು. ಇಂತಹುದೇ ಪ್ರಶ್ನೆಯೊಂದು ವಾಟ್ಸಪ್ ಸಾಮಾಜಿಕ ತಾಣದಲ್ಲೂ ಹರಿದು ಬಂದ ನೆನಪು.

ಯಕ್ಷಗಾನಕ್ಕೆ ಅಭಿಮಾನಿಗಳು ಆಸ್ತಿ. ಈಚೆಗಿನ ವರ್ಷದಲ್ಲಂತೂ ಯುವ ಮನಸ್ಸುಗಳು ಅಭಿಮಾನವಿರಿಸಿಕೊಂಡು ಪ್ರೋತ್ಸಾಹಿಸುತ್ತಿರುವುದು ಉತ್ತಮ ಬೆಳವಣಿಗೆ. ಪ್ರದರ್ಶನಗಳಿಗೆ ತುಂಬಿ ತುಳುಕುವ ಸಭಾಭವನವನ್ನು ನೋಡಿದಾಗ ಕಣ್ಣು ತುಂಬಿಬರುತ್ತದೆ. ಕಲಾವಿದರಿಗೂ ಸ್ಫೂರ್ತಿ. ಫೇಸ್ಬುಕ್, ವಾಟ್ಸಪ್ಗಳಲ್ಲಿ ಕಲೆಯ ಕುರಿತು ಮಾತುಕತೆಗಳು ನಿರಂತರ. ಹಾಡು, ಚಿತ್ರ, ಪ್ರದರ್ಶನಗಳ ಅಪ್ಡೇಟ್ ಆಗುತ್ತಿರುತ್ತದೆ. ಸಮಸಾಮಯಿಕ ವಿಚಾರಗಳು ನಾಡಿನೆಲ್ಲೆಡೆ ಪ್ರಸಾರವಾಗುತ್ತದೆ. ವಾಹಿನಿಗಳಲ್ಲಿ ನೇರ ಪ್ರಸಾರ. ಇವೆಲ್ಲವೂ ಕಲೆಯೊಂದರ ಬೆಳವಣಿಗೆಯಲ್ಲಿ ಮೈಲುಗಲ್ಲು.

ಚೌಕಿಯ ವಿಚಾರಕ್ಕೆ ಬರೋಣ. ಹೌದು. ಹಿರಿಯ ಕಲಾವಿದರ ಅನಿಸಿಕೆಗೆ ಕಲಾವಿದನಾಗಿ ನನ್ನದೂ ಸಹಮತ. ಚೌಕಿ ಅಂದರೆ ಕಲಾವಿದರಿಗೆ ಮನೆ ಇದ್ದಂತೆ. ವೇಷಗಳು ಸಿದ್ಧವಾಗುವ ತಾಣ. ಪ್ರದರ್ಶನಕ್ಕೆ ಬೇಕಾದ ವಿಚಾರಗಳು ಅಲ್ಲಿ ಚರ್ಚಿಸಲ್ಪಡುತ್ತವೆ. ಹೆಚ್ಚು ಏಕಾಂತ ಬೇಡುವ ಜಾಗ. ಹೊಸ ಪ್ರಸಂಗವಾದರಂತೂ ಕಲಾವಿದರಿಗೆ ಪೇಚಾಟ. ತಂತಮ್ಮ ಪಾತ್ರಗಳ ಕುರಿತು ಚಿಂತಿಸುವ, ಚಿತ್ರಿಸುವ ಹೊತ್ತಲ್ಲಿ ಇತರ ವಿಚಾರಗಳಿಂದ ದೂರವಿದ್ದಷ್ಟೂ ಪ್ರದರ್ಶನದ ತಯಾರಿ ಸುಪುಷ್ಟಿಯಾಗುತ್ತದೆ.

ಹೀಗಿರುತ್ತಾ ಅಭಿಮಾನಿ ಕಲಾವಿದರ ಜತೆಗೆ ಚೌಕಿಯಲ್ಲೇ ಹೆಚ್ಚು ಹೊತ್ತು ಕಳೆಯುವುದು ಉಳಿದ ಕಲಾವಿದರ ಏಕಾಂತಕ್ಕೆ ತೊಂದರೆಯಾಗುತ್ತದೆ. ಅನಿವಾರ್ಯವಾದರೆ, ಹೆಚ್ಚು ವಿಚಾರಗಳ ಸಮಾಲೋಚನೆ ಇದ್ದರೆ ಚೌಕಿಯ ಹೊರಗೆ ಬಂದು ಮಾತನಾಡಬಹುದು. ಅದರರ್ಥ ಚೌಕಿಯಲ್ಲಿರಲೇಬರಲೇ ಬಾರದು ಎಂದಲ್ಲ. ಕಲಾವಿದರನ್ನು ಮಾತನಾಡಿಸಿ, ಕುಶಲೋಪರಿ ವಿಚಾರಿಸಿ ನಾಲ್ಕೈದು ನಿಮಿಷದಲ್ಲಿ ವಿರಮಿಸಿ ಪ್ರೇಕ್ಷಕರಾಗಿ ಕುಳಿತುಕೊಂಡರೆ ಎಷ್ಟೊಂದು ಚಂದ. ಕಲಾವಿದರನ್ನು ಖಾಸಗಿಯಾಗಿ ಕೇಳಿ. ಅವರು ಚೌಕಿಯಲ್ಲಿ ಹೆಚ್ಚು ಮಾತುಕತೆಯನ್ನು ಇಷ್ಟಪಡುವುದಿಲ್ಲ.

ಕಲಾವಿದರಿಗೂ ಮುಜುಗರ. ತನ್ನ ಅಭಿಮಾನಿಗಳು ಬಂದಾಗ ಕಲಾವಿದ ವೇಷದ ಸಿದ್ಧತೆಯಲ್ಲಿದ್ದಾರೆ ಎಂದಿಟ್ಟುಕೊಳ್ಳಿ. ಬರಿಮೈಯಲ್ಲಿ ಹೇಗೆ ಮಾತನಾಡಿಸಲಿ? ಮಾತನಾಡದಿದ್ದರೆ ಆಭಿಮಾನಕ್ಕೆ ಮಸುಕು. ಮಿತವಾಗಿ ಮಾತನಾಡಿದರೆ ಅಭಿಮಾನಿಗಳು ಬೇಸರ ಪಟ್ಟಾರು ಎನ್ನುವ ಗುಮಾನಿ. ಮನಃಸ್ಥಿತಿಯು ಈ ಗೊಂದಲದಲ್ಲೇ ಸುತ್ತುತ್ತಿರುತ್ತದೆ. ಮುಖವರ್ಣಿಕೆ ಮಾಡುತ್ತಿರುವಾಗ ಹತ್ತಿರ ಕುಳಿತು ಕಳೆದು ಹೋದ ಪ್ರದರ್ಶನಗಳ ಪ್ರಶಂಸೆ, ಗೇಲಿ, ಹಗುರ ಮಾತುಗಳು ತೇಲುವುದನ್ನು ನೋಡಿದ್ದೇನೆ. ಇದರಿಂದ ಕಲಾವಿದನಿಗೆ ಅಂದಿನ ತನ್ನ ಪಾತ್ರಕ್ಕೆ ಮಾನಸಿಕವಾಗಿ ತಯಾರಿಯಾಗಲು ಕಷ್ಟವಾಗುತ್ತದೆ. ನಷ್ಟ ಯಾರಿಗೆ ಹೇಳಿ? ಅವರ ಪಾತ್ರವನ್ನು ನೋಡಲು ಬಂದ ಅಭಿಮಾನಿಗಳಾದ ನಮಗೆ ತಾನೆ?

ಬಣ್ಣದ ವೇಷವೊಂದು ರಂಗಕ್ಕೆ ತನ್ನ ಪ್ರವೇಶಕ್ಕಿಂತ ಐದಾರು ಗಂಟೆಗಳ ಮೊದಲೇ ತಯಾರಿ ಬಯಸುತ್ತದೆ. ಚಿಟ್ಟಿ ಇಡುವ ಕೆಲಸ ಸೂಕ್ಷ್ಮತೆ ಮತ್ತು ಎಚ್ಚರವನ್ನು ಬೇಡುವ ಜ್ಞಾನ. ಏಕಾಗ್ರತೆಯೇ ಬಣ್ಣಗಾರಿಕೆಯ ಸುಭಗತನಕ್ಕೆ ಮಾನದಂಡ. ಸ್ವಲ್ಪ ಹೆಚ್ಚು ಕಮ್ಮಿ ಆದರಂತೂ ವೇಷ ಅಂದಗೆಡುತ್ತದೆ. ವೇಷ ತಯಾರಿಯ ಪ್ರತಿಹಂತಕ್ಕೂ ನಾವು ಪ್ರತ್ಯಕ್ಷದರ್ಶಿಗಳಾದರೆ ಆ ವೇಷ ರಂಗಕ್ಕೆ ಬಂದಾಗ ರಮ್ಯಾದ್ಭುತ ಲೋಕವನ್ನು ಅನುಭವಿಸಲು ಕಷ್ಟವಾಗುತ್ತದೆ.

ಕಲಾವಿದರು ಬೇರೆ ಬೇರೆ ಪ್ರದರ್ಶನಗಳಲ್ಲಿ ಭಾಗವಹಿಸಿ ಬಂದಿರುವಾಗ ನಿದ್ರಾವಿಹೀನತೆಯಿಂದ ಸುಸ್ತಾಗಿರುವುದು ಸಹಜ. ಚೌಕಿಗೆ ಬೇಗನೆ ಬಂದು ವಿಶ್ರಾಂತಿಯಲ್ಲಿರುತ್ತಾರೆ. ಅಂತಹ ಕಲಾವಿದರನ್ನು ಎಬ್ಬಿಸಿ ನಮ್ಮ ಅಭಿಮಾನವನ್ನು ಮಾತಿನ ಮೂಲಕ ಹರಿಸುವುದನ್ನು ಕಣ್ಣಾರೆ ನೋಡಿದ್ದೇನೆ. ಅನುಭವಿಸಿದ್ದೇನೆ. ಇದರಿಂದಾಗಿ ಕಲಾವಿದರಿಗೆ ಪಾತ್ರವನ್ನು ನಿರೀಕ್ಷಿತ ರೀತಿಯಲ್ಲಿ ಅಭಿವ್ಯಕ್ತಿಸಲು ತ್ರಾಸವಾಗುತ್ತದೆ. ಅಂತಹ ಹೊತ್ತಲ್ಲಿ ಅಭಿಮಾನಿಗಳಾದ ನಾವೇ, ’ಛೇ... ಇವತ್ತು ಅವರ ಪಾತ್ರ ಸೊರಗಿದೆ. ಮೊನ್ನೆ ಚೆನ್ನಾಗಿತ್ತು' ಎಂದು ಗೊಣಗುತ್ತೇವೆ.

ಈಗಿನ ಬಹುತೇಕ ಪ್ರದರ್ಶನಗಳಲ್ಲಿ ಪ್ರತಿಭಾವಂತ ಛಾಯಾಗ್ರಾಹಕರ ಕೈಚಳಕ ನಿಜಕ್ಕೂ ಅದ್ಭುತ. ಇವರು ಚೌಕಿ ಮತ್ತು ರಂಗಕ್ಕೆ ಏಕಕಾಲದಲ್ಲಿ ಕಣ್ಗಾವಲಿನಲ್ಲಿರುತ್ತಾರೆ. ಕಲಾವಿದರನ್ನು 'ಮಾತನಾಡಿಸದೆ' ತಮ್ಮಷ್ಟಕ್ಕೆ ಬೇಕಾದ ಕೋನದಲ್ಲಿ ಚಿತ್ರಗಳನ್ನು ಕ್ಲಿಕ್ಕಿಸುವ ಯಕ್ಷಪ್ರಿಯರ ಕೈಚಳಕಕ್ಕೆ ಬೆರಗಾಗಿದ್ದೇನೆ. ಚಿತ್ರಗಳೇ ಒಂದು ಪ್ರದರ್ಶನ. ಅದಕ್ಕೆ ಭಾವ, ಭಾವನೆಯನ್ನು ಆವಾಹಿಸುವ ಮನಸ್ಸನ್ನು ಸಜ್ಜುಗೊಳಿಸುವ ಛಾಯಾಗ್ರಾಹಕ ಬಂಧುಗಳ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಯಕ್ಷಗಾನವೊಂದು ಕಲೆ. ಅದರೊಳಗಿನ ಜೀವಸತ್ವದ ಅಭಿವ್ಯಕ್ತಿ ಕಲಾವಿದನಿಂದ. ಹಾಗಾಗಿ ಕಲೆ ಮತ್ತು ಕಲಾವಿದ ಒಂದೇ ಸರಳರೇಖೆಯಲ್ಲಿದ್ದಾಗ ಪ್ರದರ್ಶನದ ನಿಜಸುಖ ಅನುಭವಿಸಲು ಸಾಧ್ಯವಾಗುತ್ತದೆ. ಪಾತ್ರಗಳು ನಮ್ಮೊಳಗೆ ರಿಂಗಣಿಸಲು ಸಹಾಯವಾಗುತ್ತದೆ.

ಅಭಿಮಾನದ ಪರಾಕಾಷ್ಠೆಯಲ್ಲಿ ಕಲೆ ಮತ್ತು ಕಲಾವಿದ ಪ್ರತ್ಯೇಕಗೊಳ್ಳುತ್ತಿದ್ದಾನೆ ಎಂದು ಅನಿಸುತ್ತದೆ. ಹೀಗಾಗದಂತೆ ಅಭಿಮಾನಿಗಳಾದ ನಾವು ಎಚ್ಚರವಾಗುವುದೇ ಕಲೆಗೆ ಮತ್ತು ಕಲಾವಿದನಿಗೆ ಕೊಡುವ ಮಾನ-ಸಂಮಾನ. ನಮ್ಮೊಳಗೆ ವೈಯಕ್ತಿಕ ಅಭಿಮಾನಕ್ಕಿಂತಲೂ ಕಲಾಭಿಮಾನಕ್ಕೆ ಸ್ಥಾನ ಮೀಸಲಿರಿಸೋಣ.

*********************
ಕೃಪೆ : yakshamatu.blogspot


ಫೊಟೊ ಕೃಪೆ : ಕಟೀಲು ಸಿತ್ಲ ರ೦ಗನಾಥ ರಾವ್ ಮತ್ತು ಅ೦ತರ್ಜಾಲದ ಅನಾಮಿಕ ಮಿತ್ರರುShare

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Dinesh Uchil(9/27/2015)
Sathyavada mathu. Khandita prekshakaru chouki ge hogudannu adastu nirbhandisbeku. Chauki ge hogi kalavidarige irisumurusu kirikiri untu maduva sannivesha erpadutade. Kalavida makeup maduvaga ekagrate,tadyanmate ge bhanga barlu bahudu. Kalabhimanigalu idannu gamanisbeku.
jayakar acharya(9/26/2015)
hahaha idu sathya. kelavarige ondu reethiya photoda hucchukooda ide. chowkiyalli kalavidarugalige mukthavagi veshadalli thodagalu athava vesha thodalu kastavagva paristhithi nirmanavagide. elli yavaga yava reethi photo thegedu watsp fbli hariyabidtharo anno bhayadindle athijagarukaragirbekagthade
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ