ಸದಾ ಸ್ಮರಣೀಯ ಶೇಖರ್ ವಿ. ಶೆಟ್ಟಿ ಬೆಳ್ಮಣ್
ಲೇಖಕರು : ತಾರಾನಾಥ ವರ್ಕಾಡಿ
ಸೋಮವಾರ, ಸೆಪ್ಟೆ೦ಬರ್ 28 , 2015
|
ಕಲೆಗಾಗಿ ಸರ್ವಸ್ವವನ್ನೂ ಸಮರ್ಪಿಸಿದ ಕೆಲವೇ ಮಂದಿ ಕಲಾವಿದರಲ್ಲಿ ಓರ್ವ ಶೇಖರ್ ವಿ. ಶೆಟ್ಟಿ ಬೆಳ್ಮಣ್. ಕಲಾವಿದನಾಗಿ, ಸಂಘಟಕನಾಗಿ, ಪೋಷಕನಾಗಿ, ಪ್ರಸಂಗಕರ್ತನಾಗಿ, ಮೇಳದ ಯಜಮಾನನಾಗಿ ಕಲಾಸೇವೆ ಮಾಡಿ ವಿಧಿಯ ಕ್ರೂರ ಆಟಕ್ಕೆ ಬಲಿಯಾದ ಶೇಖರ್ ವಿ. ಶೆಟ್ಟಿ ಬೆಳ್ಮಣ್ ಯಕ್ಷಲೋಕ ಕಂಡ ಅಪರೂಪದ ವ್ಯಕ್ತಿ.
|
ಬಾಲ್ಯ, ಶಿಕ್ಷಣ ಹಾಗೂ ವೃತ್ತಿ
ಬೆಳ್ಮಣ್ ಗ್ರಾಮದ ಸುಂದರಿ-ವಾಸು ಶೆಟ್ಟಿ ದಂಪತಿಯ ಸುಪುತ್ರ ಶೇಖರ್ ಸ್ಥಳೀಯ ಶಾಲೆಗಳಲ್ಲೇ ಬಾಲ್ಯದ ವಿದ್ಯಾಭ್ಯಾಸ ಪೂರೈಸಿದರು. ಬೆಳ್ಮಣ್ ಸರಕಾರಿ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿ ಮುಂಬಯಿಗೆ ತೆರಳಿದರು. ಇವರ ಮಾವ ನಾರಾಯಣ ಶೆಟ್ಟರು ಹೋಟೆಲ್ ಉದ್ಯಮಿ. ಮಾವನ ಕೃಪೆಯಿಂದ ಮುಂದಿನ ವಿದ್ಯಾಭ್ಯಾಸ ನಿರಾತಂಕವಾಗಿ ಸಾಗಿತು. ಸಿ.ಎ. ಮಾಡಿ ಮುಂಬಯಿಯಲ್ಲಿ ಧಾರಾಳ ಸಂಪಾದಿಸುತ್ತಿದ್ದ ಶೇಖರ ಶೆಟ್ಟರ ಬದುಕಿಗೆ ಒಂದು ತಿರುವು ನೀಡಿದ್ದು ಯಕ್ಷಗಾನ.
ಮುಂಬಯಿ ಅಸಲ್ಫೆಯ ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿ ಹಾಗೂ ಶ್ರೀ ದುರ್ಗಾ ಪರಮೇಶ್ವರೀ ಯಕ್ಷಗಾನ ಮಂಡಳಿ, ಸಾಕಿನಾಕ ಇದರ ಖಾಯಂ ಕಲಾವಿದರಾಗಿದ್ದ ಈ ಏಕಲವ್ಯ ಸಾಧಕ ಹಲವಾರು ವೇಷಗಳನ್ನು ನಿರ್ವಹಿಸಿ ಜನಪ್ರಿಯರಾಗಿದ್ದರು. ಮುಂಬಯಿಯ ಕಲಾ ತಂಡಗಳನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದ ಶೇಖರ ಶೆಟ್ಟರು ವೃತ್ತಿಪರ ಕಲಾವಿದರನ್ನು ಮುಂಬಯಿಗೆ ಕರೆಸಿ ಅನೇಕ ಪ್ರದರ್ಶನಗಳನ್ನು ನೀಡಿ ಸಮರ್ಥ ಸಂಘಟಕ ಎಂಬ ಕೀರ್ತಿಗೆ ಪಾತ್ರರಾಗಿದ್ದರು.
ಬಪ್ಪನಾಡು ಮೇಳ'ದ ಯಜಮಾನ
1980ರ ದಶಕ ತೆಂಕುತಿಟ್ಟು ಯಕ್ಷಗಾನದ ಸುವರ್ಣ ಕಾಲ. ಅನೇಕ ಮೇಳಗಳ ಆವಿರ್ಭಾವ ಆ ಕಾಲಕ್ಕೇ ಆಯಿತು. ಊರಿಗೆ ಬಂದು ಮೇಳ ಕಟ್ಟಬೇಕೆಂದು ತೀರ್ಮಾನಿಸಿದ ಬೆಳ್ಮಣ್, "ಬಪ್ಪನಾಡು ಮೇಳ'ದ ಯಜಮಾನರಾದರು. ಮೊದಲ ವರ್ಷ ಪ್ರತೀ ಕ್ಯಾಂಪುಗಳೂ ಬಂಪರ್ ಕಲೆಕ್ಷನ್ ಮಾಡುತ್ತಾ ತಿರುಗಾಟ ನಡೆಸಿದರೆ ಮರುವರ್ಷ ರಿಪ್ಪರ್ ಚಂದ್ರನ್‌ನ ಭಯದಿಂದ ತುಳುವರು ಆಟ ನೋಡುವುದನ್ನೇ ಬಿಟ್ಟು ಬಿಟ್ಟರು. ಮೇಳಗಳು ಒಂದೊಂದಾಗಿ ವಿಶ್ರಾಂತಿಗೆ ಹೊರಟವು. ಹಾಗೆ ಮಲಗಿದ ತೆಂಕಿನ ಡೇರೆಮೇಳಗಳು ಮತ್ತೆ ಚೇತರಿಸಲಿಲ್ಲ. ಮತ್ತೆ ತಿರುಗಾಟ ಪ್ರಯತ್ನಿಸಿದ ಮೇಳಗಳು ಪ್ರವಾಹದ ವಿರುದ್ಧ ಈಜಿದಂತಾಯಿತು.
|
ಶೇಖರ್ ವಿ. ಶೆಟ್ಟಿ ಬೆಳ್ಮಣ್ |
 |
ಜನನ ಸ್ಥಳ |
: |
ಬೆಳ್ಮಣ್ಣು
ಕಾರ್ಕಳ ತಾಲೂಕು
ಉಡುಪಿ ಜಿಲ್ಲೆ
ಕೇರಳ ರಾಜ್ಯ
|
ಕಲಾಸೇವೆ:
ಕಲೆಗಾಗಿ ಸರ್ವಸ್ವವನ್ನೂ ಸಮರ್ಪಿಸಿದ ಕೆಲವೇ ಮಂದಿ ಕಲಾವಿದರಲ್ಲಿ ಓರ್ವ ಶೇಖರ್ ವಿ. ಶೆಟ್ಟಿ ಬೆಳ್ಮಣ್. ಕಲಾವಿದನಾಗಿ, ಸಂಘಟಕನಾಗಿ, ಪೋಷಕನಾಗಿ, ಪ್ರಸಂಗಕರ್ತನಾಗಿ, ಮೇಳದ ಯಜಮಾನನಾಗಿ ಕಲಾಸೇವೆ
|
ಮರಣ ದಿನಾ೦ಕ |
: |
1990 |
|
|
ಎರಡು ವರ್ಷ ಬಪ್ಪನಾಡು ಮೇಳದ ತಿರುಗಾಟ ನಡೆಸಿ ಸೋತು ಸುಣ್ಣವಾದ ಶೇಖರ ಶೆಟ್ಟರು ಮುಂದಿನ ವರುಷ ಬೆಳ್ಮಣ್ ಮೇಳದ ಯಜಮಾನ ರಾದರು. ದುರದೃಷ್ಟವಶಾತ್ ಆ ಮೇಳವೂ ಮುನ್ನಡೆಯಲಿಲ್ಲ. ಅದೇ ವರ್ಷ ಮೇಳದ ವ್ಯಾನ್ ಅಪಘಾತಕ್ಕೀಡಾಯಿತು. ಕೈ ನೀಡಿದ ಕಲಾವಿದರಿಗೆಲ್ಲ ಕಡ್ಲೆಪುರಿಯಂತೆ ನೋಟುಗಳನ್ನು ಕೊಡುತ್ತಿದ್ದ ಶೇಖರ್ ವಿ. ಶೆಟ್ಟಿ ಬೆಳ್ಮಣ್ ಕಳೇವರವಾಗಿ ಕಾಲನ ಕುಲುಮೆಯಲ್ಲಿ ಕರಗಿ ಹೋದರು.
ಶೇಖರ್ ವಿ. ಬೆಳ್ಮಣ್ ಉತ್ತಮ ಕಲಾವಿದರಾಗಿದ್ದರು. `` ಬಂಗಾರದ ತೊಟ್ಟಿಲ್`` , ``ರಕ್ತರಾತ್ರಿ`` , ``ಮಾಮಿ ಪದ್ದಕ್ಕೆ`` ಅವರಿಂದ ರಚನೆಗೊಂಡ ಪ್ರಸಂಗಗಳು. ಒಡನಾಡಿಗಳೊಂದಿಗೆ ಬಹಳ ಆತ್ಮೀಯವಾಗಿ ಇರುತ್ತಿದ್ದ ಇವರದು ಸ್ನೇಹಶೀಲ ವ್ಯಕ್ತಿತ್ವ. ಬಹಳ ಸಾತ್ವಿಕ. ಹಣದ ವಿಷಯದಲ್ಲಿ ಧಾರಾಳಿ. ಕಲಾವಿದರಿಗೆಲ್ಲಾ ಅಕ್ಕರೆಯ ಯಜಮಾನ.
ಸರಿಸುಮಾರು ಇಪ್ಪತ್ತೈದು ವರುಷಗಳ ಹಿಂದೆ ಶೇಖರ್ ವಿ. ಶೆಟ್ಟಿ ಬೆಳ್ಮಣ್ ನಮ್ಮೊಂದಿಗಿದ್ದರು. ಆದರೆ ಇಂದು ನಮ್ಮೊಡನಿಲ್ಲ. ಅವರ ನೆನಪು ಕಲಾಭಿಮಾನಿಗಳ ಮನದಾಳದಿಂದ ಮರೆಯಾಗಲಿಲ್ಲ. ಬೆಳ್ಮಣ್ ಅವರ ಹೆಸರನ್ನು ಚಿರಸ್ಥಾಯಿಯಾಗಿಸಲು ಅವರ ಅಳಿಯ ಅಜಿತ್ ಶೆಟ್ಟಿ ಸಂಕಲ್ಪಿಸಿದ್ದಾರೆ. ಮುಂಬಯಿಯಲ್ಲಿ ಹೋಟೆಲ್ ಉದ್ಯಮಿಯಾಗಿರುವ ಅಜಿತ್ ಕಳೆದೆರಡು ವರುಷಗಳಿಂದ ಮಾವನ ಸಂಸ್ಮರಣಾ ಕಾರ್ಯಕ್ರಮ ನಡೆಸುತ್ತಿದ್ದಾರೆ. ಪ್ರತೀ ವರುಷ ಕಲಾವಿದನೋರ್ವನಿಗೆ ಕೊಡಮಾಡುವ ಸಮ್ಮಾನಕ್ಕೆ ಈ ವರುಷ ಬೆಳ್ಮಣ್ ಮೇಳದಲ್ಲಿದ್ದು , ಅಂದಿನ ಅಪಘಾತದಲ್ಲಿ ವಿಕಲಾಂಗರಾದ ಮೋಹನ ಬೈಪಾಡಿತ್ತಾಯರು ಆಯ್ಕೆಯಾಗಿದ್ದಾರೆ.
****************
ಕೃಪೆ :
udayavani
|
|
|