ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಪೈಲಾರು ಯಕ್ಷೋತ್ಸವಕ್ಕೆ ಐದು

ಲೇಖಕರು :
ಎಂ.ನಾ. ಚಂಬಲ್ತಿಮಾರ್‌
ಮ೦ಗಳವಾರ, ಸೆಪ್ಟೆ೦ಬರ್ 29 , 2015
ಸುಳ್ಯ ತಾಲೂಕಿನ ಅಮರಮುಟ್ನೂರು ಗ್ರಾಮದ ಪೈಲಾರು ಎಂಬ ಕುಗ್ರಾಮ ಯಾವ ಆಧುನಿಕ ಸಂಪರ್ಕ ವನ್ನೂ ಹೊಂದಿಲ್ಲ. ಆದರೆ ಈ ಪುಟ್ಟ ಹಳ್ಳಿ ಈಗ ಯಕ್ಷಗಾನ ಜಗತ್ತೇ ಬೆರಗಿನಿಂದ ಕಣ್ಣು-ಕಿವಿ ಅರಳಿಸಿ ನೋಡುವಂತೆ, ಅಲ್ಲಿನ ಕಲಾಸಾಧನೆಯ ಸುದ್ದಿ ಮಾತಾಡುವಂತೆ ಮಾಡು ತ್ತಿದೆ. ಇದಕ್ಕೆ ಕಾರಣ "ಫ್ರೆಂಡ್ಸ್‌ ಕ್ಲಬ್‌' ಎಂಬ ಹೆಸರಿನಲ್ಲಿ ಈ ಊರಿನ ಒಂದಷ್ಟು ತರುಣರು ಕೈಗೊಂಡ ಯಕ್ಷೋಪಾಸನೆ. ಪೈಲಾರು ಎಂಬ ಗ್ರಾಮದಲ್ಲಿ ಪ್ರತೀ ವರ್ಷವೂ ಬೃಹತ್‌ ಯಕ್ಷಗಾನವನ್ನೇರ್ಪಡಿಸುವ ಇವರ ಯಕ್ಷೋಪಾಸನೆ ಈಗ "ಪೈಲಾರು ಯಕ್ಷೋತ್ಸವ' ಎಂದೇ ಪ್ರಸಿದ್ಧವಾಗಿದೆ. ಈ ಬಾರಿ ಸೆ. 11 ಮತ್ತು 12ರಂದು 5ನೇ ವರ್ಷದ ಪೈಲಾರು ಯಕ್ಷೋತ್ಸವ ನಡೆದಿದೆ. ದ್ವಿದಿನ ಯಕ್ಷೋತ್ಸವದಲ್ಲಿ ಪುರುಷರಂತೆಯೇ ಮಹಿಳಾ ಯಕ್ಷಗಾನಕ್ಕೂ ಅವಕಾಶವನ್ನಿತ್ತು, ತಿಟ್ಟು ಭೇದವಿಲ್ಲದೇ ಬಡಗಿನ ಪ್ರದರ್ಶನವನ್ನೂ ಸಂಯೋಜಿಸಿ, ಎರಡು ದಿನದಲ್ಲಿ 102 ಕಲಾವಿದರಿಗೆ ವೇದಿಕೆಯೊದಗಿಸಿ ಪ್ರತಿಭಾ ಪೋಷಣೆ ಮಾಡಿದ ಪೈಲಾರು ಯಕ್ಷೋತ್ಸವ ಇತರೆಲ್ಲ ಬೃಹತ್‌ ಯಕ್ಷಗಾನ ಹಬ್ಬಗಳಿಗಿಂತ ತುಂಬಾ ಭಿನ್ನ, ಪ್ರಾಮಾಣಿಕ.

ಪೈಲಾರು ಕುಗ್ರಾಮ. ಕೃಷಿಕರು ಈ ಊರಿನ ಸಂಪತ್ತು. ಮುಂದಿನ ಪೀಳಿಗೆಯ ಬಾಲ- ಬಾಲೆಯರಲ್ಲಿ ಯಕ್ಷಗಾನಾಸಕ್ತಿ ಮೂಡಿಸಬೇಕೆಂಬ ಕಾಳಜಿಯಿಂದ ರೂಪುಗೊಂಡದ್ದೇ ಪೈಲಾರು ಯಕ್ಷೋತ್ಸವ. ವರ್ಷಂಪ್ರತಿ ಲಕ್ಷಾಂತರ ವ್ಯಯಿಸಿ ದ್ವಿದಿನ ಯಕ್ಷೋತ್ಸವ ನಡೆಸುವ ಫ್ರೆಂಡ್ಸ್‌ ಕ್ಲಬ್‌ಗ ದಾನಿಗಳ ವಿಶೇಷ ನೆರವಿಲ್ಲ, ಸಂಪರ್ಕವೂ ಇಲ್ಲ. ಪ್ರತಿಷ್ಠಿತ ಸಂಸ್ಥೆಗಳ ಅನುದಾನಗಳೂ ಸಿಕ್ಕಿದ್ದಿಲ್ಲ. ಆದರೆ ಪ್ರಾದೇಶಿಕವಾಗಿ ಗ್ರಾಮೀಣ ಜನರೇ ದೇಣಿಗೆ ಸಂಗ್ರಹಿಸಿ ಆಯೋಜಿಸುವ ಯಕ್ಷೋತ್ಸವ ಇದು. ಪೈಲಾರಿನಲ್ಲಿ ಹಳ್ಳಿಗರ ಬೆವರಿನ ಹಣ ಒಟ್ಟಾಗಿ ನಿಜ ಕಲಾರಾಧನೆ ನಡೆಯು ವುದು ಪ್ರಾಮಾಣಿಕ ಕಲಾ ರಾಧನೆಯ ದ್ಯೋತಕ ಎಂದರಿಯ ಬೇಕಾದರೆ ಅದನ್ನು ಕಣ್ತುಂಬಿಕೊಳ್ಳಬೇಕು.

ಪೈಲಾರಿನ ಪಾಲಿಗೆ ಇದು ಪಂಚಮ ವರ್ಷದ ಯಕ್ಷೋತ್ಸವ. ಮೊದಲ ದಿನ ಕ್ಲಬ್ಬಿನ ಆಶ್ರಯದಲ್ಲೇ ಯಕ್ಷಗಾನ ಕಲಿಯುವ ಮಕ್ಕಳಿಂದ ಜಾಂಬವತಿ ಕಲ್ಯಾಣ ಆಖ್ಯಾನದ ಪ್ರದರ್ಶನ. ಇದಕ್ಕೆ ಬೆಳ್ಳಾರೆ ವಿಶ್ವನಾಥ ರೈಗಳ ನಿರ್ದೇಶನ. ಬಳಿಕ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಭೀಷ್ಮ ವಿಜಯ ಪ್ರದರ್ಶನ. ಯಕ್ಷಚಂದ್ರಿಕೆ ಶಶಿಕಾಂತ ಶೆಟ್ಟರ ಪ್ರಸಿದ್ಧ ಅಂಬೆ, ಎಂ.ಎಲ್‌.ಸಾಮಗರ ಭೀಷ್ಮ, ಕೊಂಡದಕುಳಿಯವರ ಸಾಲ್ವ, ಆರೊಡು ಮೋಹನದಾಸ ಶೆಣೈ ಅವರ ಪರಶುರಾಮ ಒಳಗೊಂಡಂತೆ ರಸಾವಿಷ್ಕೃತ ಪ್ರದರ್ಶನಕ್ಕೆ ಸುಬ್ರಹ್ಮಣ್ಯ ಧಾರೇಶ್ವರ ಸಾರಥ್ಯದ ಹಿಮ್ಮೇಳ. ಭೀಷ್ಮ ವಿಜಯವನ್ನು ಗೆಲ್ಲಿಸಿಕೊಟ್ಟದ್ದು ಶಶಿಕಾಂತರ ಅಂಬೆಯ ವಿಶೇಷತೆ. ಪೈಲಾರಿನಂಥ ಗ್ರಾಮಕ್ಕೆ ಇದು ಅಪೂರ್ವವಾಗಿ ದೊರೆತ ಬಡಗಿನ ಆಟ. ಯಕ್ಷಗಾನದಲ್ಲಿ ಅಬ್ಬರವೇ ಅಧಿಕಗೊಂಡು ರಸ ಪ್ರತಿಪಾದನೆ ಸೊರಗುವ ಆಧುನಿಕ ದಿನದಲ್ಲಿ ರಸಾವಿಷ್ಕೃತ ಆಟವೊಂದನ್ನು ಬಡಗಿನಲ್ಲಿ ನೋಡುವಂತಾದದ್ದು ಮೊದಲ ದಿನದ ವಿಶೇಷತೆ.

ಎರಡನೇ ದಿನ ಶ್ರೀ ಸಿದ್ಧಿವಿನಾಯಕ ನಾಟ್ಯ ಕಲಾಕೇಂದ್ರ ಸುರತ್ಕಲ್‌ ಇದರ ಸದಸ್ಯೆಯರಿಂದ ಕಾಳಿಂಗ ಮರ್ದನ-ಸುದರ್ಶನ ವಿಜಯ ಆಖ್ಯಾನದ ಮಹಿಳಾ ಯಕ್ಷಗಾನ ಮೊದಲಿಗೆ ನಡೆದು ಕಿಕ್ಕಿರಿದ ಸಂಖ್ಯೆಯ ಪ್ರೇಕ್ಷಕರು ವೀಕ್ಷಿಸಿದರು ಎನ್ನುವುದ ಕ್ಕಿಂತಲೂ ವೃತ್ತಿ ಮೇಳದ ಕಲಾವಿದರಷ್ಟೇ ಪಕ್ವವಾದ ರಂಜನೀಯ ಪ್ರದರ್ಶನದಿಂದ ಪ್ರೇಕ್ಷಕರನ್ನು ಬೆರಗಾಗಿಸಿದರು. ಹೊಸನಗರ ಮೇಳದ ಯುವ ಕಲಾವಿದ ರಕ್ಷಿತ್‌ ಶೆಟ್ಟಿ ಪಡ್ರೆ ಇವರ ನಿರ್ದೇಶನ, ತರಬೇತಿಯಡಿ ರೂಪುಗೊಂಡ ಮಹಿಳಾ ಯಕ್ಷಗಾನ ವೃತ್ತಿಮೇಳದ ಕಲಾ ಪ್ರದರ್ಶನದ ಮಟ್ಟದಲ್ಲಿ ಪ್ರೇಕ್ಷಕರನ್ನು ರಂಜಿಸಿ, ಮಹಿಳಾ ಯಕ್ಷಗಾನಕ್ಕೆ, ಕಲಾವಿದೆ ಯರಿಗೆ ಸ್ಫೂರ್ತಿಯನ್ನು ನೀಡಿತು. ಮೊದಲ ಭಾಗ ಕಾಳಿಂಗ ಮರ್ದನದಲ್ಲಿ ಕಾಳಿಂಗ ಮತ್ತು ದೇವೇಂದ್ರ ನಾಗಿ ಉದಯೋನ್ಮುಖ ಪ್ರತಿಭೆ ಮೈತ್ರಿ ಭಟ್‌ ಮವ್ವಾರು ಭರವಸೆಯ ಕಲಾವಿದೆಯಾಗುವ ಲಕ್ಷಣವಿತ್ತರೆ, ಪುಟಾಣಿ ಪ್ರತಿಭೆ ಕು| ಅದ್ವಿಕಾ ಶೆಟ್ಟಿ ಕೃಷ್ಣನಾಗಿ ಜನಮನ ಗೆದ್ದಳು. ಅನಂತರದ ಸುದರ್ಶನ ವಿಜಯದಲ್ಲಿ ಶುಭದಾ ಶೆಟ್ಟಿ (ವಿಷ್ಣು), ಡಾ| ವರ್ಷಾ ಶೆಟ್ಟಿ (ಲಕ್ಷ್ಮೀ), ಕು| ದಿಶಾ ಶೆಟ್ಟಿ (ಸುದರ್ಶನ) ತಮ್ಮ ಪಾತ್ರಗಳ ಮೂಲಕ ವೃತ್ತಿ ಮೇಳದ ಕಲಾವಿದರಂತೆಯೇ ಪ್ರೇಕ್ಷಕರನ್ನು ಸೆಳೆದು ಪ್ರದರ್ಶನಕ್ಕೆ ಕಳೆಕೊಟ್ಟರು. ಮಹಿಳಾ ಯಕ್ಷಗಾನದ ಈ ಸಾಂ ಕ ಪ್ರದರ್ಶನ ಗೆಲುವು ಪೈಲಾರಿನಂಥ ಹಳ್ಳಿಯಲ್ಲಿ ಯಕ್ಷಗಾನ ಅಭ್ಯಸಿಸುತ್ತಿರುವ ಮಕ್ಕಳಿಗೆ ಪ್ರೋತ್ಸಾಹವನ್ನೂ ಊರ ನಾಗರಿಕರಿಗೆ ಸ್ಫೂರ್ತಿಯನ್ನೂ ಇತ್ತುದು ಸುಳ್ಳಲ್ಲ.

ಬಳಿಕ ತೆಂಕುತಿಟ್ಟಿನ ಸುಪ್ರಸಿದ್ಧ ಕಲಾವಿದರಿಂದ ಮತ್ಸ್ಯಾವಾತಾರ -ಮಾಯಾತಿಲೋತ್ತಮೆ- ಮಹಿಷ ಮರ್ದಿನಿ ಎಂಬ ಬಯಲಾಟ ಇಡೀ ರಾತ್ರಿ ಪ್ರದರ್ಶನ ಗೊಂಡು ಯಕ್ಷೋತ್ಸವಕ್ಕೆ ಕಳೆ ಏರಿಸಿತು. ದ್ವಿದಿನ ಯಕ್ಷೋತ್ಸವದ ನಡುವೆ ಪ್ರತೀವರ್ಷವೂ ಹಿರಿಯ ಕಲಾವಿದರನ್ನು ಗುರುತಿಸಿ ಸಮ್ಮಾನಿಸುವುದು ವಾಡಿಕೆ. ಈ ಬಾರಿ ಸಮ್ಮಾನಿತರಾದವರು ಹಿರಿಯ ಕಲಾವಿದ ರೆಂಜಾಳ ರಾಮಕೃಷ್ಣ ರಾಯರು. ದ್ವಿದಿನ ಯಕ್ಷೋತ್ಸವದಲ್ಲಿ ಮೊದಲ ದಿನ ಉದ್ಘಾಟನೆ, ದ್ವಿತೀಯ ದಿನ ಸಮಾರೋಪ ಏರ್ಪಡಿಸಿ, ಊರ ಗಣ್ಯರನ್ನೆಲ್ಲ ವೇದಿಕೆಯೇರಿಸಿ ಚೊಕ್ಕ ಸಭೆ ನಡೆಸುವುದು, ಕಲಾಪೋಷಣೆಯ ಮಾತುಗಳನ್ನಾಡಿ ಸುವುದು ಇಲ್ಲಿ ವಾಡಿಕೆ. ಕಳೆದ ಐದು ವರ್ಷಗಳಿಂದ ನಡೆಯುತ್ತಿರುವ ಯಕ್ಷೋತ್ಸವದಲ್ಲಿ ಕಲಾವಿದರಿಗೆ ಆದರಾತಿಥ್ಯ, ಸಂತೃಪ್ತಿಯನ್ನೊದಗಿಸುವ ಗೌರವ ಧನ ನೀಡಿ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುತ್ತಿದೆ. ಪೈಲಾರು ಯಕ್ಷೋತ್ಸವ ನಗರದ ಆಡಂಬರವಿಲ್ಲದ ಕುಗ್ರಾಮವೊಂದರ ಯಕ್ಷಜಾತ್ರೆ. ಇಲ್ಲಿನ ಯಕ್ಷಗಾನವನ್ನು ಸಂಯೋಜಿಸಿದವರು ಹೊಸನಗರ ಮೇಳದ ಕಲಾವಿದ ಜಯಾನಂದ ಸಂಪಾಜೆ.

ಸಮಾನಮನಸ್ಕ ಗೆಳೆಯರ ಚಿಂತನಚಾವಡಿಯಾಗಿ 2002ರಲ್ಲಿ ಹುಟ್ಟಿಕೊಂಡ ಸಂಸ್ಥೆ ಫ್ರೆಂಡ್ಸ್‌ ಕ್ಲಬ್‌. ಯುವಜನರಲ್ಲಿ ಮತ್ತು ಮಕ್ಕಳಲ್ಲಿ ಹಾಗೂ ಮಹಿಳೆ ಯರಲ್ಲಿ ಯಕ್ಷಗಾನ ಕಲಾಭಿರುಚಿ ಮೂಡಿಸಿ ಪರಂಪರೆ ಕೈದಾಟಿಸಬೇಕೆಂಬುದೇ ಇವರ ಗುರಿ. ಈ ನಿಟ್ಟಿನಲ್ಲಿ ಮಕ್ಕಳ ಯಕ್ಷಗಾನ, ಮಹಿಳಾ ಯಕ್ಷಗಾನ, ಮಕ್ಕಳ ಬೇಸಗೆ ಶಿಬಿರ, ಮುಖವರ್ಣಿಕೆ ಶಿಬಿರ, ಯಕ್ಷವೇಷ-ನಾಟ್ಯ ಕಾರ್ಯಾಗಾರ, ಸುಗಮ ಸಂಗೀತ ಶಿಬಿರ, ಜಾನಪದ ನೃತ್ಯತರಬೇತಿ ಸಹಿತ ಕಲಾ-ಕ್ರೀಡಾ ಕಾರ್ಯಕ್ರಮಗಳನ್ನು ನಿರಂತರ ಏರ್ಪಡಿಸುವ ಮೂಲಕ ಕ್ಲಬ್‌ ಈ ಊರಿನ ಸಾಂಸ್ಕೃತಿಕ ಶಕ್ತಿಯಾಗಿ ತಲೆ ಎತ್ತಿನಿಂತಿದೆ. ಕುಗ್ರಾಮದಲ್ಲಿ ಕಲೆ ಮತ್ತು ಕಲಾವಿದರು ರೂಪುಗೊಳ್ಳಬೇಕೆಂಬ ಕಾಳಜಿಯಿಂದ ನಡೆಯುವ ಇಲ್ಲಿನ ನಿಜ ಕಲಾರಾಧನೆಯಲ್ಲಿ ಆಡಂಬರವಿಲ್ಲ, ಆತ್ಮಸಮರ್ಪಣೆಯ ಪ್ರಾಮಾಣಿಕತೆಯಿದೆ. ವಾಸ್ತವದಲ್ಲಿ ಪ್ರೋತ್ಸಾಹ ಸಲ್ಲಬೇಕಾದುದು ಇಂಥ ಊರಿಗೆ... ಇಂಥ ಸಂಸ್ಥೆಗೆ.

*********************


ಕೃಪೆ : udayavani


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
pradeep kumar (10/13/2015)
Inspirational artical for the youngsters who spend thier money and time for unwanted things congragulation for Team Pailar i To wanted join u for the next programme great MR Chambalthimar Thank You
Vengopala kamabaru(9/29/2015)
good work by the club
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ