ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸ೦ಘ - ಸ೦ಸ್ಥೆ
Share
ಕಟೀಲು ಮಕ್ಕಳ ಮೇಳಕ್ಕೆ ಸಪ್ತಮ ವರ್ಷದ ಸಂಭ್ರಮ
ಲೇಖಕರು : ವಾದಿರಾಜ ಕಲ್ಲೂರಾಯ
ಬುಧವಾರ, ನವ೦ಬರ್ 4 , 2015

ಯಕ್ಷಗಾನ ಕಟೀಲು ಶ್ರೀದೇವಿಗೆ ಅತ್ಯಂತ ಪ್ರಿಯವಾದ ಕಲೆ. ಅಪಾರ ಯಕ್ಷಗಾನ ಪ್ರೇಮಿಯೂ ಸ್ವತಃ ಕಲಾವಿದರೂ ಆಗಿರುವ ಶ್ರೀ ಹರಿನಾರಾಯಣದಾಸ ಆಸ್ರಣ್ಣರು ಕ್ಷೇತ್ರದ ಆನುವಂಶಿಕ ಅರ್ಚಕರಲ್ಲಿ ಒಬ್ಬರು. ಇವರು ಈ ಕಲೆಯ ಪ್ರಸರಣಕ್ಕಾಗಿ ಸಂಸ್ಥಾಪಿಸಿದ ಸಂಸ್ಥೆ ಶ್ರೀ ದುರ್ಗಾ ಮಕ್ಕಳ ಮೇಳ.

ಮಕ್ಕಳ ಮೇಳ ಎಂದು ಹೆಸರಿದ್ದರೂ ಮೇಳ ಅಲ್ಲವದು. ಯಕ್ಷಗಾನದ ತರಬೇತಿಗೆ ಇರುವ ಕೇಂದ್ರ. ಮಕ್ಕಳಲ್ಲಿ ಯಕ್ಷಗಾನದ ತಿಳಿವಿಗೆ ಈ ಕೇಂದ್ರವೇ ಹೊರತು ಮೇಳಕ್ಕಾಗಿ ಅಲ್ಲ. ಹಾಗಾಗಿ ಇಲ್ಲಿ ಪ್ರದರ್ಶನಕ್ಕೆ ಹೆಚ್ಚಿನ ಪ್ರಾಧಾನ್ಯ ಇಲ್ಲ. ಮಕ್ಕಳಿಗೆ ಸಭಾಕಂಪನ ಇರಬಾರದು ಎನ್ನುವ ಕಾರಣಕ್ಕೋಸ್ಕರ ವರ್ಷಕ್ಕೆ 40ಕ್ಕಿಂತ ಹೆಚ್ಚಿನ ಪ್ರದರ್ಶನ ನೀಡದೆ, ಯಕ್ಷಗಾನವನ್ನು ಕಲಿಯು ವುದರಿಂದ ಮಕ್ಕಳು ಕಲಾವಿದರಾಗಿ, ಸಹೃದಯ ಕಲಾಪ್ರೇಕ್ಷಕರಾಗಿ, ಕಲಾಪೋಷಕರಾಗಿ ಬೆಳೆಯ ಬೇಕು ಎನ್ನುವ ಸದಾಶಯ, ಕಲೆಯ ಮೂಲ ಸ್ವರೂಪಕ್ಕೆ ಭಂಗ ಬಾರದಂತೆ ವಿದ್ಯಾರ್ಥಿಗಳು ಕಲಿಯಬೇಕೆನ್ನುವ ಸತ್‌ಸಂಕಲ್ಪದೊಂದಿಗೆ ಶ್ರೀ ದುರ್ಗಾಮಕ್ಕಳ ಮೇಳ ಹುಟ್ಟಿಕೊಂಡಿತು.

ಈ ಕೇಂದ್ರದಲ್ಲಿ ಯಕ್ಷಗಾನದ ಎಲ್ಲ ಅಂಗಗಳನ್ನು ಕಲಿಸಿಕೊಡುವುದು ಹೌದಾದರೂ ಅದಕ್ಕೊಂದು ನಿಯಮವಿದೆ. ಶನಿವಾರ ಮಧ್ಯಾಹ್ನ ಚೆಂಡೆ, ಮದ್ದಳೆ ತರಬೇತಿ, ರವಿವಾರ ಬೆಳಗ್ಗೆ ಭಾಗವತಿಕೆ, ಮಧ್ಯಾಹ್ನ ನಾಟ್ಯ, ಸರಕಾರಿ ರಜಾದಿನಗಳಲ್ಲಿ ಬಣ್ಣಗಾರಿಕೆ -ಹೀಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದ ರೀತಿಯಲ್ಲಿ ಎಲ್ಲವೂ ಶಿಸ್ತುಬದ್ಧ. ಪರೀಕ್ಷೆಯ ತಿಂಗಳುಗಳಲ್ಲಿ ತರಬೇತಿ ಹಾಗೂ ಪ್ರದರ್ಶನ ನೀಡದೆ ಉಳಿದ ಸಮಯದಲ್ಲೂ ರಾತ್ರಿ 10ರ ಒಳಗೆ ಮಕ್ಕಳು ಮನೆ ಸೇರುವ ಹಾಗೆ ನೋಡಿಕೊಳ್ಳುವುದು ಈ ಮಕ್ಕಳ ಮೇಳದ ಬದ್ಧತೆಗೆ ಸಾಕ್ಷಿ.

ಕಟೀಲು ದೇವಳದ ಆಶ್ರಯದ ಕಟೀಲು ಪ್ರಾಥಮಿಕ ಶಾಲೆಯಲ್ಲಿ ಈ ತರಗತಿಗಳು ನಡೆಯುತ್ತವೆ. ಆದರೆ ಇದು ಕೇವಲ ಕಟೀಲಿನ ಶಾಲೆಗೆ ಸೀಮಿತವಲ್ಲ. ಪ್ರತಿವರ್ಷ ಪತ್ರಿಕಾ ಜಾಹೀರಾತು ಮೂಲಕ ವಿದ್ಯಾರ್ಥಿಗಳನ್ನು ಕರೆದು ತರಬೇತಿ ಪ್ರಾರಂಭ. ಪಡುಬಿದ್ರೆ, ಬಜಪೆ, ಕಿನ್ನಿಗೋಳಿ, ಪಾಣೆಮಂಗಳೂರುವರೆಗಿನ ವಿದ್ಯಾರ್ಥಿಗಳು ಇಲ್ಲಿ ತರಬೇತಿಗೊಂಡಿದ್ದಾರೆ. ಮಕ್ಕಳ ಹೆತ್ತವರು ಹಾಗೂ ಸಮಾಜ ವಾರ್ಷಿಕೋತ್ಸವದ ದಿನ ಸ್ವಯಂಸೇವಕರಾಗಿ ದುಡಿಯುವುದು, ಏಳು ವರ್ಷಗಳಲ್ಲಿ 200 ವಿದ್ಯಾರ್ಥಿಗಳಿಗೆ ತರಬೇತಿ ಈ ತಂಡದ ಕಾರ್ಯಕ್ಷಮತೆಯನ್ನು ಹೇಳುತ್ತದೆ.

ನಾಟ್ಯ ಕ್ಷೇತ್ರಕ್ಕೆ ಕೊಡುವಷ್ಟೇ ಪ್ರಾಧಾನ್ಯವನ್ನು ಅರ್ಥಗಾರಿಕೆಗೂ ಕೊಡಬೇಕೆಂಬ ಸದುದ್ದೇಶದಿಂದ ಮಕ್ಕಳನ್ನು ಆ ನಿಟ್ಟಿನಲ್ಲಿ ಸಿದ್ಧಗೊಳಿಸಲು ಈ ವರ್ಷದಿಂದ ಸರ್ಪಂಗಳ ಈಶ್ವರ ಭಟ್ಟರ ಗುರುತ್ವದಲ್ಲಿ, ಒಂದು ಪ್ರಸಂಗದ ಕಥಾ ಆಶಯವನ್ನು ಹೇಳಿ (ಅಂದರೆ ಅರ್ಥವನ್ನು ಬರೆದುಕೊಡದೆ), ಪದ್ಯದ ಆಶಯವನ್ನು ಹೇಳಿ, ಮಕ್ಕಳಿಂದಲೇ ಅರ್ಥ ಹೇಳಿಸುವ ತರಬೇತಿ ಯನ್ನು ನೀಡಲಾಗುತ್ತದೆ. ಅಲ್ಲದೆ ದಿವಾಣ ಶಿವಶಂಕರ ಭಟ್ಟರಿಂದ ಮುಖವರ್ಣಿಕೆ ಶಿಬಿರ, ಗುರು ಗೋವಿಂದ ಭಟ್ಟರಿಂದ ವಿಶೇಷ ನಾಟ್ಯ ತರಬೇತಿ ನೀಡಲಾಗುತ್ತಿದೆ.

ಮೇಳದ ಮಕ್ಕಳು ಉಡುಪಿ ಪರ್ಯಾಯ ದರ್ಬಾರ್‌, ಮಡಿಕೇರಿ ಸಾಹಿತ್ಯ ಸಮ್ಮೇಳನ, ಕೆರೆಮನೆ ರಾಷ್ಟ್ರೀಯ ನಾಟ್ಯೋತ್ಸವ, ಸ್ವರ್ಣವಲ್ಲಿ ಮುದ್ರಾನು ಸಂಧಾನ ಕಾರ್ಯಾಗಾರ, ಸಂಸ್ಕೃತಿ ಇಲಾಖೆ ಕಾರ್ಯಕ್ರಮಗಳು ಹೀಗೆ ರಾಜ್ಯ- ಹೊರರಾಜ್ಯಗಳಲ್ಲಿ ಯಶಸ್ವೀ ಪ್ರದರ್ಶನ ನೀಡಿ ದ್ದಾರೆ. ದೇವೀ ಮಾಹಾತ್ಮೆ ಕಾರ್ಯಾಗಾರ, ಹಿಮ್ಮೇಳ ಕಾರ್ಯಾಗಾರ ರಂಗಸಂಭ್ರಮ-2014, ಜಿಲ್ಲಾ ಸಾಹಿತ್ಯ ಸಮ್ಮೇಳನದ ಯಕ್ಷೋಪಾಸನಾ ಶಿಬಿರ, ಯಕ್ಷಸತ್ಸಂಗ ಹೀಗೆ ಅನೇಕ ಕಾರ್ಯಕ್ರಮಗಳ ಸಹಭಾಗಿತ್ವ ವಹಿಸಿಕೊಂಡು ಈ ಮಕ್ಕಳ ಮೇಳ ಕಲಾಪ್ರೀತಿಗೆ ಪ್ರತಿಮೆಯಾಗಿದೆ.

ಸಪ್ತಮ ವರ್ಷದ ವಾರ್ಷಿಕ ಕಲಾಪರ್ವ ಅ.30ರಿಂದ ನ.1ರವರೆಗೆ ಕಟೀಲು ಸರಸ್ವತೀ ಸದನದಲ್ಲಿ ನಡೆಯಲಿದ್ದು ದುರ್ಗಾ ಮಕ್ಕಳ ಮೇಳ ಸಹಿತ ವಿವಿಧ ಮಕ್ಕಳ ಮೇಳದ ಪ್ರದರ್ಶನಗಳು, ಸಾಧಕ ಸಮ್ಮಾನ ನಡೆಯಲಿವೆ. ಯಕ್ಷಗಾನ ಪ್ರದರ್ಶನದ ಅಪೂರ್ವ ಸಾಂಪ್ರದಾಯಿಕ ಅಂಗಗಳಾದ ಕೋಡಂಗಿ, ಬಾಲಗೋಪಾಲ, ಚಂದಭಾಮಾ, ಷಣ್ಮುಖ ಸುಬ್ರಾಯ, ಅರ್ಧನಾರೀಶ್ವರ, ರಂಗ ರಂಗಿ ಅರೆಪಾವಿನಾಟ, ಕೃಷ್ಣ, ಕಾರ್ತವೀರ್ಯ, ರಾವಣ, ಹನೂಮಂತ, ರಾಮ, ಪಾಂಡವರ ಒಡ್ಡೋಲಗ, ಮುಖ್ಯ ಸ್ತ್ರೀವೇಷ, ಚಪ್ಪರಮಂಚ, ಕೋಲಾಟ, ಪೀಠಿಕೆ ಸ್ತ್ರೀವೇಷ, ಯಕ್ಷ-ಗಾನಾಮೃತವನ್ನು ದುರ್ಗಾ ಮಕ್ಕಳ ಮೇಳದ ವಿದ್ಯಾರ್ಥಿಗಳು ಗುರುಗಳಾದ ಹರಿನಾರಾಯಣ ಬೈಪಡಿತ್ತಾಯ, ಲೀಲಾವತಿ ಬೈಪಡಿತ್ತಾಯ, ರಾಜೇಶ್‌ ಐ. ಅವರ ಮಾರ್ಗದರ್ಶನದಲ್ಲಿ ಪ್ರದರ್ಶಿಸಲಿದ್ದಾರೆ. ಕಟೀಲು ಆರು ಮೇಳಗಳ ಯಜಮಾನರಾದ ಕಲ್ಲಾಡಿ ದೇವಿಪ್ರಸಾದ ಶೆಟ್ಟರ ಸಂಪೂರ್ಣ ಸಹಕಾರ ಈ ಮಕ್ಕಳ ಮೇಳಕ್ಕಿದೆಯೆಂಬುದು ಉಲ್ಲೇಖನೀಯ.


*********************
ಕೃಪೆ : udayavani


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಬೀರಪ್ಪ ಶಂಭೋಜಿ(12/7/2015)
Beerappa Shambhoji ಲೇಖನ ತುಂಬಾ ಚೆನ್ನಾಗಿದೆ. ತಮಗೆ ಅಭಿನಂದನೆಗಳು
ಪೂರಕ ಲೇಖನಗಳು
     ತಾಜಾ ಲೇಖನಗಳು
   
  ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
  ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
  ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
   
  © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ