ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಕಂದಾವರ ಪ್ರಶಸ್ತಿ ಪುರಸ್ಕ್ರುತ ಭಾಗವತ ಸುರೇಶ ಶೆಟ್ಟಿ ಶಂಕರನಾರಾಯಣ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಶನಿವಾರ, ನವ೦ಬರ್ 7 , 2015

ಯಕ್ಷಗಾನದ ಮೌಲ್ಯಾಧಾರಿತ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ಪ್ರತಿಷ್ಟಾನದವರು ಕೊಡಮಾಡುವ ಮೂರನೇ ವರ್ಷದ ಪ್ರಶಸ್ತಿಗೆ ಬಡಗುತಿಟ್ಟಿನ ಪ್ರಸಿದ್ದ ಭಾಗವತ ಸುರೇಶ ಶೆಟ್ಟಿಯವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ರಘುರಾಮ ಶೆಟ್ಟಿಯವರ ಸಹಸ್ರ ಚಂದ್ರ ದರ್ಶನ, ಅಬಿನಂದನಾ ಕಾರ್ಯಕ್ರಮ, ಅಬಿನಂದನಾ ಗ್ರಂಥ ಬಿಡುಗಡೆ ಸಮಾರಂಭ ನವಂಬರ್ 15 ರಂದು ಜಂಟಿಯಾಗಿ ಕುಂದಾಪುರದಲ್ಲಿ ನೆರವೇರಲಿದೆ. ಬಳಿಕ ಗಾನವೈವಿಧ್ಯ ಕಾರ್ಯಕ್ರಮ ನೆರವೇರಲಿದೆ.

ಬಡಗುತಿಟ್ಟಿನ ಯುವ ಪ್ರತಿಭಾವಂತ ಭಾಗವತರಲ್ಲಿ ಸುರೇಶ ಶೆಟ್ಟರೂ ಒಬ್ಬರು. ಕುಟುಂಬದ ಹಿರಿಯ ಬಂದುಗಳ ವಿರೋಧವಿದ್ದರೂ ಕಾಳಿಂಗ ನಾವಡರ ಭಾಗವತಿಕೆಯಿಂದ ಪ್ರೇರೇಪಿತರಾಗಿ ಯಕ್ಷಗಾನ ಭಾಗವತಿಕೆಯನ್ನು ಆಯ್ಕೆ ಮಾಡಿಕೊಂಡು ವೃತ್ತಿರಂಗದಲ್ಲಿ ಉತ್ತುಂಗಕ್ಕೆ ಏರಿದವರು.

ಕುಂದಾಪುರ ತಾಲೂಕು ಹಿಲಿಯಾಣ ಎಂಬಲ್ಲಿ ಸಂಕಾಪುರ ಶಿವರಾಮ ಶೆಟ್ಟಿ ಮತ್ತು ಕುಸುಮಾ ಶೆಟ್ಟಿ ದಂಪತಿಗಳ ಪುತ್ರನಾಗಿ 1967ರಲ್ಲಿ ಜನಿಸಿದ ಅವರು ಎಂಟನೇ ತರಗತಿ ವಿದ್ಯಾಭ್ಯಾಸ ಮೊಟುಕುಗೊಳಿಸಿ ಯಕ್ಷಗಾನ ರಂಗಕ್ಕೆ ಕಾಲಿಟ್ಟವರು. ಆ ಕಾಲದಲ್ಲಿ ಮನೆಯವರು ಮತ್ತು ಸಮಾಜದವರಿಂದ ತೀವ್ರ ವಿರೋದವಿದ್ದರೂ ತಂದೆಯವರು ಯಕ್ಷಗಾನ ಕಲಾಸಕ್ತರೂ ಸ್ವಥ ಅರ್ಥದಾರಿಯೂ ಆಗಿದ್ದರಿಂದ ಇವರ ಆಸೆ ಚಿಗುರೊಡೆಯಲು ಸಹಾಯಕವಾಯ್ತು. ಹಾರಾಡಿಯ ಖ್ಯಾತ ಕಲಾವಿದರ ಒಡನಾಡಿ ಇವರ ತಂದೆ, ಸೀತಾನದಿ ಪ್ರಶಸ್ತಿ ಪುರಸ್ಕ್ರತ ಶಿವರಾಮ ಶೆಟ್ಟರು ಕಾಳಿಂಗ ನಾವಡರ ನಿಕಟವರ್ತಿಯೂ ಆಗಿದ್ದರು. ಕಲೆಯ ಬಗ್ಗೆ ಅತ್ಯಂತ ಪ್ರೀತಿ ಇದ್ದ ಅವರು ತನ್ನ ಮಗ ಉತ್ತಮ ಭಾಗವತನಾಗಬೇಕೆಂಬ ಹಂಬಲ ಇರಿಸಿಕೊಂಡವರು.

ಈ ಎಲಾ ಪೂರಕ ಅಂಶಗಳಿಂದ ಸ್ವತಹ ತಂದೆಯವರು ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಗುರು ನೀಲಾವರ ರಾಮಕೃಷ್ಣಯ್ಯ, ಹೆರಂಜಾಲು ಗೋಪಾಲ ಗಾಣಿಗರ ಸುಪರ್ದಿಗೆ ಇವರನ್ನು ಸೇರಿಸಿದರು. ಹೆರಂಜಾಲು ಗೋಪಾಲ ಗಾಣಿಗರಿಂದ ಹೆಜ್ಜೆಗಾರಿಕೆ ತಾಳ ಲಯ ಕಲಿತ ಇವರು ನಂತರ ಗುರು ಕೆ. ಪಿ ಹೆಗಡೆ ಮತ್ತು ಸದಾನಂದ ಐತಾಳರಿಂದ ಭಾಗವತಿಕೆ ಕಲಿತು ಯುವ ಭಾಗವತರಾಗಿ ಮೂಡಿ ಬಂದರು. ಶಾಸ್ತೋಕ್ತವಾಗಿ ಹೆಜ್ಜೆಗಾರಿಕೆಯನ್ನು ಉಡುಪಿ ಕೇಂದ್ರದಲ್ಲಿ ಕಲಿತ ಇವರು ಉತ್ತಮ ನೃತ್ಯ ಪಟುವಾಗಿ ಮೂಡಿ ಬಂದರು.

ಶ್ರೀ ಸಾಲಿಗ್ರಾಮ ಮೇಳದಲ್ಲಿ ಕಾಳಿಂಗ ನಾವಡರು ಮೆರೆದಾಡುತಿದ್ದ ಕಾಲದಲ್ಲಿ ಸಂಗೀತಗಾರರಾಗಿ ಸೇರಿಕೊಂಡ ಇವರು ಮತ್ತೆ ಹಿಂದಿರುಗಿ ನೋಡಲಿಲ್ಲ. ಬಳಿಕ ಕಮಲಶಿಲೆ ಮತ್ತು ಹಾಲಾಡಿ ಮೇಳದ ತಿರುಗಾಟದಲ್ಲಿ ಹಳೆಯ ನಡೆಯನ್ನು ಕರತಗ ಮಾಡಿಕೊಂಡರು. ಆಗ ತಾನೇ ಹೊಸದಾಗಿ ಡೇರೆಮೇಳವಾದ ಶ್ರೀ ಪೆರ್ಡೂರು ಮೇಳದ ಭಾಗವತರಾಗಿ ಸುಬ್ರಮಣ್ಯ ಧಾರೇಶ್ವರರ ಸಹ ಭಾಗವತರಾಗಿ ನಿರಂತರ 20 ವರ್ಷ ಕಲಾಸೇವೆ ಮಾಡಿದ ಅವರದ್ದು ಪೆರ್ಡೂರು ಮೇಳದ ತಿರುಗಾಟವೇ ಅವರ ಯಕ್ಷಗಾನದ ಸುವರ್ಣಯುಗ.

ಸುರೇಶ ಶೆಟ್ಟಿ ಶಂಕರನಾರಾಯಣ
ಜನನ :
ಫೆಬ್ರವರಿ 17, 1967
ಜನನ ಸ್ಥಳ :
ಸಂಕಾಪುರ, ಹಿಲಿಯಾಣ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ , ಕರ್ನಾಟಕ ರಾಜ್ಯ
ಕಲಾಸೇವೆ:
ಸಾಲಿಗ್ರಾಮ, ಕಮಲಶಿಲೆ ಮತ್ತು ಹಾಲಾಡಿ ಮೇಳಗಳಲ್ಲಿ ತಿರುಗಾಟ ನಡೆಸಿ, ಕಳೆದ 20 ವರ್ಷಗಳಿ೦ದ ಪೆರ್ಡೂರು ಮೇಳದಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿರುತ್ತಾರೆ
ಪ್ರಶಸ್ತಿಗಳು:
ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ, ಪುರಸ್ಕಾರಗಳು
ಪ್ರಥಮ ವರ್ಷದ ಶೂದ್ರತಪಸ್ವಿನಿ ಪ್ರಸಂಗದಿಂದ ಪ್ರಾರಂಭಗೊಂಡು ಚಾರು ಚಂದ್ರಿಕೆ, ಪದ್ಮಪಲ್ಲವಿ, ಮಾನಸಮಂದಾರ ನಾಗನಂದನೆ, ನಾಗವಲ್ಲಿ, ದಾಮಿನಿ ಬಾಮಿನಿ, ಶಿವಾನಿ ಭವಾನಿ ಮುಂತಾದ ಪ್ರಸಂಗಗಳಲ್ಲಿ ಅವರ ಆಧುನಿಕ ಶೈಲಿಯ ಪದ್ಯಗಳು ಯುವ ಪ್ರೇಕ್ಷಕನ್ನು ಯಕ್ಷಗಾನದತ್ತ ಸೆಳೆದು ಆದುನಿಕ ಪ್ರೇಕ್ಷಕರ ಪ್ರಶಂಸೆಗೂ, ಮಡಿವಂತ ಸಂಪ್ರದಾಯ ಪ್ರೇಕ್ಷಕರ ಟೀಕೆಗೂ ಒಳಗಾದರು. ಸ್ಥಿತಪ್ರಜ್ಞೆಯಿಂದ ಟೀಕೆ ಮತ್ತು ಪ್ರಶಂಸೆಯನ್ನು ಸಮನಾಗಿ ಸ್ವೀಕರಿಸಿದ ಅಪರೂಪದ ಕಲಾವಿದರೆಣಿಸಿದರು. ಸ್ವಪ್ರೇರಣೆಯಿಂದ ನಿವೃತ್ತಿ ಘೋಷಿಸಿಕೊಂಡ ಇವರು ಈಗ ಅತಿಥಿ ಭಾಗವತರಾಗಿ ಕಾಣಿಸಿಕೊಳ್ಳುತಿದ್ದಾರೆ. ಕನಿಷ್ಟ ಮುಂದಿನ 20 ವರ್ಷ ಕಲಾವ್ಯವಸಾಯ ಮಾಡಬಲ್ಲ ಭಾಗವತ ಇಷ್ಟು ಬೇಗನೇ ನಿವೃತ್ತಿ ಘೋಷಿಸಿದ್ದು ಕಲಾಭಿಮಾನಿಗಳ ದೌರ್ಭಾಗ್ಯ ಎನ್ನಬಹುದಾಗಿದೆ.

ಯಾವೂದೇ ಶ್ರುತಿಯಲ್ಲಿಯೂ ಭಾವಪೂರ್ಣವಾಗಿ ಹಾಡುವ ಸುಖವಾದ ಸ್ವರವಿದ್ದ ಅವರು ಶರೀರ ಶಾರೀರ ಸಂಪತ್ತು ಹೊಂದಿದವರು. ಪೌರಾಣಿಕವಿರಲಿ ಆಧುನಿಕವಿರಲಿ ಅವರ ಮಧುರ ಗಾನಸುಧೆ ಕೇಳುಗರಿಗೆ ಶ್ರವಣಸುಖ ನೀಡುತ್ತದೆ. ಕೋಮಲ ಕಂಠ, ಶಬ್ದಗಳ ಸ್ಪಷ್ಟ ಉಚ್ಚಾರ, ಛಂದಸ್ಸಿಗನುಗುಣವಾಗಿ ಹ್ರಸ್ವ ದೀರ್ಘಗಳ ವ್ಯತ್ಯಾಸ, ರಾಗಗಳ ಬಳಕೆಯಲ್ಲಿ ಜಾಣ್ಮೆ ಕಲಾವಿದನನ್ನು ಅವನ ಸಾದ್ಯತೆಯನ್ನು ಪರಿಗಣಿಸಿ ರಂಗದಲ್ಲಿ ದುಡಿಸಿಕೊಳ್ಳುವ ಚಾಕಚಕ್ಯತೆ ಶೆಟ್ಟರ ಭಾಗವತಿಕೆಯ ವಿಶೇಷತೆ.

ಪೆರ್ಡೂರು ಮೇಳದಲ್ಲಿ ಗೋಪಾಲಾಚಾರ್ಯರ ಅಭಿಮನ್ಯು, ರಾಮ ನಾಯರಿಯವರ ಸುಭದ್ರೆ ಹೀಗೆ ಅಭಿಮನ್ಯು ಕಾಳಗ ಹಲವಾರು ಯಶಸ್ವಿ ಪ್ರಯೋಗ ಕಾಣುವಲ್ಲಿ ಸುರೇಶ ಶೆಟ್ಟರ ಕೊಡುಗೆಯೂ ಗಮನಾರ್ಹ. ನಾಗವಲ್ಲಿ ಪ್ರಸಂಗದ ನವೀನ ಹಾಡು “ಪಟ ಪಟ ಗಾಳಿಪಟ” ಹಾಡು ಅತ್ಯಂತ ಯಶಸ್ವಿಯಾದರೂ ಗಿಮಿಕ್ ಭಾಗವತರೆಂಬ ಹಣೆಪಟ್ಟಿ ಬಂದರೂ, ಅದನ್ನು ಗಿಮಿಕ್ ಅನ್ನುವ ಬದಲು ಪ್ರಯೋಗಶೀಲತೆ ಎನ್ನಬಹುದಾಗಿದೆ. ರಾಮಾಯಣ ಪ್ರಸಂಗಗಳಲ್ಲಿ ಗುರು ಹೆರಂಜಾಲು ಮತ್ತು ಕೆ. ಪಿ ಹೆಗಡೆಯವರ ಮಾರ್ಗದರ್ಶನದಲ್ಲಿ ಉತ್ತಮ ಭಾಗವತರೆಣಿಸಿದ ಇವರ ರಾಮಾಂಜನೇಯ, ಕುಶಲವ, ಚಂದ್ರಾವಳಿ ಗದಾಯುದ್ದ, ಅಭಿಮನ್ಯು ಕಾಳಗದ ಪದ್ಯಗಳು ಚಿರನೂತನ. ಪೌರಾಣಿಕ ಪ್ರಸಂಗದಲ್ಲಿ ಕಪ್ಪು ಮೂರರ ಶ್ರುತಿಯವರೆಗೂ ಲೀಲಾಜಾಲವಾಗಿ ಹಾಡುವ ಸುಖವಾದ ಸ್ವರ ಸಾಮರ್ಥ್ಯ ಇವರಿಗಿದೆ.

ವ್ಯವಹಾರದಲ್ಲಿ ಶುದ್ದಹಸ್ತ ಸಚ್ಯಾರಿತ್ಯ ಹೊಂದಿದ ಇವರೂ ರಂಗದ ಹೊರಗೂ ಸಜ್ಜನ ಕಲಾವಿದ ಮೇಳದ ಸರ್ವ ಕಲಾವಿದರಿಂದಲೂ ಮನ್ನಣೆ ಯಜಮಾನರ ಪ್ರೀತಿಗೆ ಪಾತ್ರರಾದ ಇವರು ಯಕ್ಷಗಾನ ಭಾಷೆಯಲ್ಲಿ ಕೂಟಕ್ಕೆ ಬೇಕಾದ ಕಲಾವಿದ. ಅನೇಕ ಯುವ ಕಲಾವಿದರನ್ನು ಯಾವುದೇ ವೃತ್ತಿ ಮಾತ್ಸರ್ಯವಿಲ್ಲದೇ ಪ್ರೇಕ್ಷಕ ಜಗತ್ತಿಗೆ ತೋರಿಸಿಕೊಟ್ಟ ಹೃದಯ ಶ್ರೀಮಂತಿಕೆಯ ವ್ಯಕ್ತಿ. ಬೆಂಗಳೂರು ಮುಂಬೈಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ ಇವರಿಗೆ ಹಲವಾರು ಸನ್ಮಾನಗಳು ಸಂದಿವೆ. ಕಂದಾವರ ರಘುರಾಮ ಶೆಟ್ಟರ ಹಲವಾರು ಪ್ರಸಂಗಳಿಗೆ ಭಾಗವತಿಕೆಯ ಕಂಠದಾನ ಮಾಡಿದ ಇವರಿಗೆ ಕಂದಾವರ ಪ್ರತಿಷ್ಟಾನದ ಈ ಸಾಲಿನ ಪ್ರಶಸ್ತಿ ಯೋಗ್ಯವಾಗಿಯೇ ಸಂದಿದೆ.

***********************

ಸುರೇಶ ಶೆಟ್ಟಿಯವರ ಭಾಗವತಿಕೆಯ ಕೆಲವು ದೃಶ್ಯಾವಳಿಗಳು************************


ಸುರೇಶ ಶೆಟ್ಟಿಯವರ ಕೆಲವು ಛಾಯಾ ಚಿತ್ರಗಳು

( ಕೃಪೆ : ಅ೦ತರ್ಜಾಲದ ಅನಾಮಿಕ ಯಕ್ಷಗಾನಾಭಿಮಾನಿಗಳು )

ಸಮಾರ೦ಭವೊದರಲ್ಲಿ ಸನ್ಮಾನ
ಪತ್ನಿಯವರೊ೦ದಿಗೆ ಸುರೇಶ್ ಶೆಟ್ಟಿಯವರು
ತರುಣರಾಗಿದ್ದಾಗ ಹೀಗಿದ್ದರು
Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ