ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಮತ್ತೆ ಹಾಡಿತು ಕೋಗಿಲೆ; ಸದಾಶಿವ ಅಮೀನ್ ಮತ್ತೆ ಯಕ್ಷರಂಗಕ್ಕೆ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಬುಧವಾರ, ನವ೦ಬರ್ 11 , 2015

ಬಡಗುತಿಟ್ಟು ಯಕ್ಷಗಾನ ಭಾಗವತಿಕೆಯಲ್ಲಿ ಕ್ರಾಂತಿ ಮೂಡಿಸಿದ ಭಾಗವತ ಕಾಳಿಂಗ ನಾವಡರ ಭಾಗವತಿಕೆಗೆ ಸಹ ಭಾಗವತರಾಗಿ, ಸುಮಾರು 28 ವರ್ಷದ ಹಿಂದೆ ಸಾಲಿಗ್ರಾಮ ಮೇಳದಲ್ಲಿ ಗುರುತಿಸಿಕೊಂಡು ನಾವಡರ ಸಿರಿಕಂಠದಿಂದ ಪ್ರೇರೇಪಿತರಾಗಿ ಅವರದ್ದೇ ರಂಗತಂತ್ರ ಮೈಗೂಡಿಸಿಕೊಂಡು ಸುಮಾರು 6 ವರ್ಷ ಸಾಲಿಗ್ರಾಮ ಮೇಳದಲ್ಲಿ ನಾವಡರ ಒಡನಾಡಿಯಾಗಿ ಅವರ ಪ್ರೀತಿಗೆ ಪಾತ್ರರಾದ ಕೊಕ್ಕರ್ಣೆ ಸದಾಶಿವ ಅಮೀನ್ ಅನಿವಾರ್ಯ ಕಾರಣದಿಂದ ಕಳೆದ 20 ವರ್ಷಗಳಿಂದ ಅಜ್ಞಾತವಾಸದಲ್ಲಿದ್ದು, ಯಾರಿಗೂ ಎಲ್ಲಿದ್ದಾರೆ ಎಂಬ ಯಾವುದೆ ಮಾಹಿತಿ ಇಲ್ಲದೆ, ಯಕ್ಷಗಾನ ಕ್ಷೇತ್ರದಿಂದ ಬಹುದೂರ ಉಳಿದವರು. ದೀರ್ಘ ಕಾಲದ ನಂತರ ನವೆಂಬರ್ 1 ಕನ್ನಡ ರಾಜ್ಯೋತ್ಸವದಂದು ಕೊಕ್ಕರ್ಣೆಯಲ್ಲಿ ಪ್ರಥಮವಾಗಿ ರಂಗಮಂಚವೇರಿ ತನಗೆ ಕೀರ್ತಿ ತಂದಿತ್ತ ನಾಗಶ್ರೀ ಪ್ರಸಂಗದ ಪದ್ಯದ ಮೂಲಕ ಅಪಾರ ಜನರ ಮೆಚ್ಚುಗೆಗೆ ಪಾತ್ರವಾದರು, ಮಾತ್ರವಲ್ಲದೆ ಇದು ಯಕ್ಷಗಾನ ಕ್ಷೇತ್ರಕ್ಕೆ ಇನ್ನೊಬ್ಬ ಪ್ರತಿಭಾವಂತ ಭಾಗವತರ ಪ್ರವೇಶವಾಗುವುದಕ್ಕೆ ನಾಂದಿಯಾಯಿತು.

ಬಾಲ್ಯ, ಶಿಕ್ಷಣ, ಯಕ್ಷ ಪಾದಾರ್ಪಣೆ

ಉಡುಪಿ ತಾಲೂಕು ಕೊಕ್ಕರ್ಣೆಯ ಮೊಗವೀರ ಪೇಟೆಯಲ್ಲಿ ಸುಕ್ರ ಬಂಗೇರ ಮತ್ತು ತುಂಗ ದಂಪತಿಗಳ ಸುಪುತ್ರನಾದ ಸದಾಶಿವ ಅಮೀನ್ ಪ್ರಾಥಮಿಕ ಅಬ್ಯಾಸವನ್ನು ಕೊಕ್ಕರ್ಣೆಯಲ್ಲಿ ಮುಗಿಸಿ ಸುತ್ತಮುತ್ತಲು ನೆಡೆಯುತಿದ್ದ ಮಂದಾರ್ತಿ ಮೇಳದ ಆಟಗಳಿಂದ ಪ್ರೇರೇಪಿತರಾಗಿ ಯಕ್ಷಗಾನದ ಗೀಳು ಮೂಡಿಸಿಕೊಂಡರು. ಉಡುಪಿ ಯಕ್ಷಗಾನ ಕೇಂದ್ರ ಸೇರಿ ಗುರು ನೀಲಾವರ ರಾಮಕೃಷ್ಣಯ್ಯನವರಿಂದ ಭಾಗವತಿಕೆ ಮತ್ತು ದಶಾವತಾರಿ ಹೆರಂಜಾಲು ವೆಂಕಟರಮಣ ಗಾಣಿಗರಿಂದ ನಾಟ್ಯ ಕಲಿತು ಶ್ರೇಷ್ಟ ಮಟ್ಟದ ಕುಂಜಾಲು ಶೈಲಿಯ ಭಾಗವತರಾಗಿ ಮೂಡಿಬಂದರು.

ಸುಮಾರು ಎಪ್ಪತ್ತರ ದಶಕದಲ್ಲಿ ಶ್ರೀ ಮಂದಾರ್ತಿ ಮೇಳಕ್ಕೆ ಸಂಗೀತಗಾರರಾಗಿ ಸೇರಿಕೊಂಡರು. ಸುಂದರವಾದ ಶಾರೀರವಲ್ಲದೆ ಶರೀರವನ್ನೂ ಹೊಂದಿದ ಅವರು ಸಂಗೀತದೊಂದಿಗೆ ಬಾಲ ಕಲಾವಿದನಾಗಿ ವಿಶೇಷವಾಗಿ ಗುರುತಿಸಿಕೊಂಡರು. ನೆಲ್ಲೂರು ಮರಿಯಪ್ಪ ಆಚಾರ್, ಸುರಗಿಕಟ್ಟೆ ಬಸವಗಾಣಿಗರ ಹಿಮ್ಮೇಳ, ಕೋಡಿ ಶಂಕರ ಗಾಣಿಗ ಮೊಳಹಳ್ಳಿ ಹೆರಿಯ, ಹಾರಾಡಿ ಸರ್ವೋತ್ತಮ ಗಾಣಿಗ, ಹೆರಂಜಾಲು ಸುಬ್ಬಣ್ಣ ಗಾಣಿಗ ಪೇತ್ರಿ ಮಾದವ ನಾಯ್ಕರಂತ ಘಟಾನುಘಟಿಗಳಿದ್ದ ಅಂದಿನ ಬೋಜರಾಜ ಹೆಗ್ಡೆಯವರ ಯಜಮಾನಿಕೆಯ ಮಂದಾರ್ತಿ ಮೇಳಕ್ಕೆ ಹೇಳಿಕೊಳ್ಳುವಷ್ಟು ಹರಕೆ ಆಟಗಳಿಲ್ಲದ ಆ ಕಾಲದಲ್ಲಿ ಹೊಸ ಪ್ರಸಂಗ ಆಡುವುದು ಅನಿವಾರ್ಯವಾಗಿತ್ತು. ಆ ವರ್ಷ ಮಂದಾರ್ತಿ ಮೇಳದಲ್ಲಿ ಪ್ರತಿ ದಿನವೂ ಪ್ರದರ್ಶಿತವಾಗುತಿದ್ದ ಶ್ರೀ ದೇವಿ ಬನಶಂಕರಿ ಪ್ರಸಂಗದ ಇವರ ಬಾಲ ಸುದೀರನ ಪಾತ್ರ ಅಪಾರ ಜನಮೆಚ್ಚುಗೆ ಪಡೆಯಿತು. ಪೇತ್ರಿ ಮಾದು ನಾಯ್ಕರ ಚಮೂರ ಕೋಡಿಯವರ ಭದ್ರ ಸದಾಶಿವ ಅಮೀನರ ಬಾಲಸುಧೀರ ಅತ್ತ್ಯಂತ ಯಶಸ್ವಿ ಜೋಡಿಯಾಗಿತ್ತು.

ಸಾಲಿಗ್ರಾಮ ಮೇಳದಲ್ಲಿ ಮಿ೦ಚು

ಕೆಲವು ವರ್ಷ ಮಂದಾರ್ತಿ ಮೇಳದಲ್ಲಿ ಸೇವೆ ಸಲ್ಲಿಸುತಿದ್ದ ಇವರು. ಸಾಲಿಗ್ರಾಮ ಮೇಳದಲ್ಲಿ ಕಾಳಿಂಗ ನಾವಡರೊಂದಿಗೆ ಇದ್ದ ನೆಲ್ಲೂರು ಮರಿಯಪ್ಪಾಚಾರರಿಂದ ತೆರವಾದ ಸ್ಥಾನವನ್ನು ತುಂಬಲು ಕರೆಬಂತು. ಸುಮಾರು ಎಂಬತ್ತರ ದಶಕದಲ್ಲಿ ಸಾಲಿಗ್ರಾಮ ಮೇಳದಲ್ಲಿ ನಾಗಶ್ರೀ ಪ್ರಸಂಗ ಮೆರೆಯುತಿದ್ದ ಕಾಲ.
ಕೊಕ್ಕರ್ಣೆ ಸದಾಶಿವ ಅಮೀನ್
ಜನನ ಸ್ಥಳ :
ಕೊಕ್ಕರ್ಣೆ , ಉಡುಪಿ ಜಿಲ್ಲೆ , ಕರ್ನಾಟಕ ರಾಜ್ಯ
ಕಲಾಸೇವೆ:
ಸುಮಾರು ಎಪ್ಪತ್ತರ ದಶಕದಲ್ಲಿ ಮಂದಾರ್ತಿ , ಸಾಲಿಗ್ರಾಮ, ಸೌಕೂರು, ಸಿರಸಿ ಮೇಳದಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿ, 20 ವರ್ಷಗಳ ನ೦ತರ ಮತ್ತೆ ಭಾಗವತಿಕೆಗೆ ತೊಡಗಿಕೊ೦ಡಿರುತ್ತಾರೆ.
ಘಟಾನುಘಟಿ ಕಲಾವಿದರಿದ್ದ ಕಾಲಘಟ್ಟದಲ್ಲಿ ನಾಗಶ್ರೀ ಪ್ರಸಂಗದ ಮುಂದಿನ ವರ್ಷದ ಪ್ರದರ್ಶನಗಳಿಗೆ ಮರಿಯಪ್ಪ ಆಚಾರ್ಯರು ಆಡಿಸುತಿದ್ದ ಪೂರ್ವಾರ್ಧದ ಭಾಗಕ್ಕೆ ಅಮೀನರ ಪ್ರವೇಶವಾಗಿ ಒಂದೇ ವರ್ಷದಲ್ಲಿ ಸಮರ್ಥ ಭಾಗವತರಾಗಿ ಗುರುತಿಸಿಕೊಂಡರು. ಸಮರ್ಥ ಗುರು ನೀಲಾವರದವರಿಂದ ಗಟ್ಟಿಯಾದ ಕುಂಜಾಲು ಶೈಲಿ, ಮಂದಾರ್ತಿ ಮೇಳದಲ್ಲಿ ಮರಿಯಪ್ಪ‌ ಆಚಾರ್ಯರೊಂದಿಗೆ ದೀರ್ಘಕಾಲದ‌ ಒಡನಾಟ, ಮೇಳದಲ್ಲಿ ಕಾಳಿಂಗ ನಾವಡರಿಂದ ಹೊರಹೊಮ್ಮುತಿದ್ದ ಎರಡು ವಿಶಿಷ್ಟ ಶೈಲಿ, ಅಪೂರ್ವವಾದ ರಂಗತಂತ್ರ, ಕರ್ಕಿ ಪ್ರಬಾಕರ ಭಂಡಾರಿ ಶಂಕರ ಭಾಗವತ ಗಜಾನನ ಭಂಡಾರಿ, ಮಂದಾರ್ತಿ ರಾಮಕೃಷ್ಣಯ್ಯರ ಹಿಮ್ಮೇಳ ಇವುಗಳು ಅಮೀನರನ್ನು ಸಮರ್ಥ ಕುಂಜಾಲು ಶೈಲಿಯ ಭಾಗವತರನ್ನಾಗಿ ಗುರುತಿಸುವಲ್ಲಿ ಸಹಕಾರಿಯಾಯಿತು.

ನಾಗಶ್ರೀ ಪ್ರಸಂಗದಲ್ಲಿ ಐರೋಡಿ ಗೋವಿಂದಪ್ಪ ಮತ್ತು ಜಲವಳ್ಳಿ ವೆಂಕಟೇಶ ರಾಯರ ಶ್ವೇತದತ್ತ - ಸುದರ್ಶನ ಪಾತ್ರಗಳ ಸಂವಾದ ಭಾಗದ ಮದ್ಯಮಾವತಿ ರಾಗದ ವಿಶಿಷ್ಟ ಏಕತಾಳದ “ ಬಾರಯ್ಯ ಭಾವಯ್ಯ” ಪದ್ಯ ಅಪಾರ ಸಂಖ್ಯೆಯ ಹಿಮ್ಮೇಳ ಪ್ರೀಯರನ್ನು ರಂಜಿಸಿತ್ತು. ಉದಯವಾಣಿ ದಿನ ಪತ್ರಿಕೆಯ ವಿಂಶತಿ ಅಂಗವಾಗಿ ಸಾಲಿಗ್ರಾಮ ಮೇಳದವರಿಂದ ಪ್ರದರ್ಶಿತವಾಗಿದ್ದ ಕೃಷ್ಣಾರ್ಜುನ ಮತ್ತು ದ್ರೌಪದಿ ಪ್ರತಾಪ ಪ್ರಸಂಗದಲ್ಲಿ ನಾವಡರೊಂದಿಗೆ ಇವರು ಹಾಡುಗಳು ಭಾಗವತಿಕೆಯ ಗರಿಷ್ಟ ಸಾದ್ಯತೆಯನ್ನು ಬಿಂಬಿಸಿತ್ತು. ಪೌರಾಣಿಕ ಪ್ರಸಂಗಳ ಆಶಯ ಕೆಡದ ಹಾಗೆ ನಾವಡರ ರಂಗತಂತ್ರವನ್ನು ಕರಗತ ಮಾಡಿಕೊಂಡಿದ್ದ ಇವರು ಕುಂಜಾಲು ಶೈಲಿಯ ಪ್ರಾತಿನಿಧಿಕರಾಗಿದ್ದರು.

ಅನಿರೀಕ್ಷಿತ ಅಜ್ಞಾತವಾಸ, ಭರವಸೆಯ ಪುನಾರಾಗಮನ

ನಾವಡರ ನಿಧನದ ವರ್ಷ ಸಾಲಿಗ್ರಾಮ ಮೇಳವನ್ನು ಬಿಟ್ಟು ಒಂದು ವರ್ಷ ಶ್ರೀ ಸೌಕೂರು ಮೇಳದಲ್ಲಿ ಸೇವೆ ಸಲ್ಲಿಸಿದರು. ಬಳಿಕ ಶಿರಿಯಾರ ಮುದ್ದಣ್ಣ ಶೆಟ್ಟಿಯವರಿಂದ ಹೊಸದಾಗಿ ಪ್ರಾರಂಭಗೊಂಡ ಶ್ರೀ ಸಿರಸಿ ಮಾರಿಕಾಂಬ ಮೇಳದಲ್ಲಿ ಕೆ. ಪಿ ಹೆಗಡೆ ಮತ್ತು ಹೆರಂಜಾಲು ಗೋಪಾಲ ಗಾಣಿಗರೊಂದಿಗೆ ಕೆಲವು ವರ್ಷ ಸಹ ಭಾಗವತರಾಗಿ ದುಡಿದರು. ಮಲ್ಪೆ ರಾಮದಾಸ ಸಾಮಗ, ತೆಕ್ಕಟ್ಟೆ ಆನಂದ ಮಾಸ್ತರ್, ಕುಂಜಾಲು ರಾಮಕೃಷ್ಣ, ಎಂ. ಎ. ನಾಯಕ್, ಗೋಡೆ ನಾರಾಯಣ ಹೆಗಡೆ ಮುಂತಾದ ಕಲಾವಿದರಿದ್ದ ಆ ಮೇಳದಲ್ಲಿ ಸ್ವಥ ಇವರು ರಚಿಸಿದ ಸ್ವಪ್ಣ ಸಾಮ್ರಾಜ್ಯ, ಮದನ ಮಂಜರಿ, ಭಾಗ್ಯಮಂಜರಿ ಮುಂತಾದ ಪ್ರಸಂಗಗಳು ಹಲವಾರು ಪ್ರಯೋಗಗಳನ್ನು ಕಂಡವು.

ಶ್ರೇಷ್ಟ ಸಂಘಟಕರಾದ ಇವರು ಮಣಿಪಾಲದ ಗೋಲ್ಡನ್ ಜುಬಿಲೀ ಹಾಲ್ ನಲ್ಲಿ ಮಳೆಗಾಲದಲ್ಲಿ ಹಲವಾರು ಯಕ್ಷಗಾನ ಕಾರ್ಯಕ್ರಮ ಸಂಘಟಿಸಿದ್ದರು. ಬೆಂಗಳೂರು ಮತ್ತು ಮುಂಬೈನಲ್ಲಿ ಆ ಕಾಲದಲ್ಲಿ ಹಲವಾರು ಅಭಿಮಾನಿಗಳನ್ನು ಹೊಂದಿದ್ದರು. ಪತ್ನಿ ಮೀನಾಕ್ಷಿ ಇಬ್ಬರು ಮಕ್ಕಳೊಂದಿಗೆ ಹುಬ್ಬಳ್ಳಿಯಲ್ಲಿ ವಾಸವಾಗಿರುವ ಇವರು ಸುಮಾರು ಇಪ್ಪತ್ತು ವರ್ಷದಿಂದ ವ್ಯವಹಾರದಲ್ಲಿ ನಷ್ಟ ಅನುಭವಿಸಿ ಅಜ್ಞಾತವಾಗಿ ಉಳಿದಿದ್ದರು. ಅಮೀನರ ಪುನರಾಗಮನ ಬಡಗುತಿಟ್ಟು ಯಕ್ಷಗಾನದ ಮಟ್ಟಿಗೆ ಭಾಗವತಿಕೆಯ ಹೊಸ ಆಶಾಕಿರಣವಾಗಬಹುದು ಎಂಬುದು ಕಲಾಭಿಮಾನಿಗಳ ಆಶಯ. ಈಗಾಗಲೆ ಹಲವಾರು ಆಟಗಳಿಗೆ ಕರೆಬಂದಿದ್ದು ಮುಂದೆ ಪೂರ್ಣಕಾಲಿಕ ಭಾಗವತನಾಗಿ ಮೂಡಿ ಬರುವ ಮುನ್ಸೂಚನೆಯಾಗಿದೆ.

***********************

ಕೊಕ್ಕರ್ಣೆ ಸದಾಶಿವ ಅಮೀನರ ಭಾಗವತಿಕೆಯ ಕೆಲವು ದೃಶ್ಯಾವಳಿಗಳು************************


ಕೊಕ್ಕರ್ಣೆ ಸದಾಶಿವ ಅಮೀನರ ಕೆಲವು ಛಾಯಾ ಚಿತ್ರಗಳು

( ಕೃಪೆ : ಸುದೇಶ್ ಶೆಟ್ಟಿ ಮತ್ತು ಅ೦ತರ್ಜಾಲದ ಅನಾಮಿಕ ಯಕ್ಷಗಾನಾಭಿಮಾನಿಗಳು )

30 ವರ್ಷಗಳ ಹಿ೦ದೆ ಹೀಗಿದ್ದರು ನಮ್ಮ ಅಮೀನರು
ಸಿರಿಕ೦ಠದ ಭಾಗವತ ದಿವ೦ಗತ ಕಾಳಿ೦ಗ ನಾವಡರೊ೦ದಿಗೆ
ಪ್ರಸ್ತುತ ಸಾಲಿಗ್ರಾಮ ಮೇಳದ ಪ್ರಧಾನ ಭಾಗವತರಾದ ರಾಘವೇ೦ದ್ರ ಮಯ್ಯರೊ೦ದಿಗೆ
ಕಾಳಿ೦ಗ ನಾವಡರ ಮೊಮ್ಮಗಳು ನಾಗಶ್ರೀ ಶಾಸ್ತ್ರಿ ಹಾಗೂ ವಿದ್ಯಾಧರ ಜಳವಳ್ಳಿಯವರೊ೦ದಿಗೆ
ಬಾಲ್ಯದಲ್ಲಿ ಹೀಗಿದ್ದರು ನಮ್ಮ ಅಮೀನರು

Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
(11/14/2015)
adbuta bhagavata
ಶ್ರೀರಾಮ ಡೋಂಗ್ರೆ(11/12/2015)
ಶ್ರೀಯುತ ಸದಾಶಿವ ಅಮೀನ್ ಅವರೇ, ಕಲಾತಪಸ್ಸಿಗೆ ಹಿಂದಿರುಗಿದ ನಿಮಗೆ ಶುಭಾಶಯಗಳು. ಈಗಾಗಲೇ ಸಿದ್ಧಿಯನ್ನು ಹೊಂದಿರುವ ನಿಮಗೆ ತಪಸ್ಸು ಕೇವಲ ನೆಪಮಾತ್ರ. ರಂಗವನ್ನು ಮುನ್ನಡೆಸುತ್ತ ಕಲಾರಸಿಕರನ್ನು ತಣಿಸುತ್ತ ಅನೇಕ ವಸಂತಗಳನ್ನು ಕಳೆಯಿರಿ ಎಂದು ಹಾರೈಕೆ.
ಕಟೀಲು ಸಿತ್ಲ ರಂಗನಾಥ ರಾವ್(11/11/2015)
ನನ್ನ ಇಷ್ಟದ ಬಡಗುತಿಟ್ಟು ಭಾಗವತರು
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ