ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ರಾಜವೇಷಗಳ ಅನಭಿಷಿಕ್ತ ದೊರೆ : ಅಳಿಕೆ ರಾಮಯ್ಯ ರೈ

ಲೇಖಕರು :
ಭಾಸ್ಕರ ರೈ ಕುಕ್ಕುವಳ್ಳಿ
ಸೋಮವಾರ, ನವ೦ಬರ್ 16 , 2015

ಯಕ್ಷಗಾನ ರಂಗದಲ್ಲಿ ಅನೇಕ ಧೀಮಂತ ಕಲಾವಿದರು ಆಗಿಹೋಗಿದ್ದಾರೆ. ಆದರೆ ಬಹಳ ಮೊದಲೇ ರಾಜ್ಯಪ್ರಶಸ್ತಿಗೆ ಭಾಜನ‌ರಾಗಿದ್ದ ಹಿರಿಯ ಕಲಾವಿದ ಅಳಿಕೆ ರಾಮಯ್ಯ ರೈಯವರದ್ದು ಪ್ರತ್ಯೇಕ ವ್ಯಕ್ತಿತ್ವ. ಯಕ್ಷಗಾನದ ಇತಿಹಾಸದಲ್ಲಿ ಅವರು ಮರೆಯಲಾಗದ ಮಹಾಚೇತನ. ಅವರು ಬದುಕಿರುತ್ತಿದ್ದರೆ ಈಗ ನೂರು ವರ್ಷ ತುಂಬು ತ್ತಿತ್ತು. ಯಕ್ಷಾಂಗಣದಲ್ಲಿ ಮೆರೆದು ಮರೆಯಾದ ಆ ಮೇರು ನಟನನ್ನು ಶತಮಾನದ ಸ್ಮರಣೆಯೊಂದಿಗೆ ಮರಳಿ ಕಲಾಭಿಮಾನಿಗಳ ಕಣ್ಣೆದುರು ಕಟೆದು ನಿಲ್ಲಿಸುವ ಮಹತ್ವದ ಕೆಲಸವನ್ನು ಇದೀಗ ಮಂಗಳೂರಿನ ಯಕ್ಷಾಂಗಣ ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆ ನಿರ್ವಹಿಸುತ್ತಿದೆ.

ಅಳಿವಿಲ್ಲದ ಕಲಾಸಾಧಕ

ಆರು ದಶಕಗಳ ಕಾಲ ಯಕ್ಷಗಾನ ರಂಗಸ್ಥಳವನ್ನು ಆಳಿದ ಅಳಿಕೆ ರಾಮಯ್ಯ ರೈ ತಿಟ್ಟು-ಮಟ್ಟುಗಳನ್ನು ಮೀರಿ ನಿಂತ ಯಕ್ಷಗಾನದ ಧ್ರುವತಾರೆ. ಪೌರಾಣಿಕ ಪ್ರಸಂಗಗಳ ಧೀರೋದಾತ್ತ ನಾಯಕ. ಪಾರಂಪರಿಕವಾದ ಒಂದು ದೇಶೀ ಕಲೆಗೆ ವ್ಯಕ್ತಿಗತ ವರ್ಚಸ್ಸನ್ನು ಬೆರೆಸಿ ವಿದ್ವಜ್ಜನರೆಲ್ಲ ತಲೆದೂಗುವಂತೆ ಮಾಡಿದ ಚರಿತ್ರ ನಟ. ಅವರನ್ನು ಯಕ್ಷಗಾನದ ಸವ್ಯಸಾಚಿಯೆಂದೇ ಜನ ಹೊಗಳಿದರು. ನೃತ್ಯ, ಅಭಿನಯ, ವೇಷ, ಮಾತುಗಾರಿಕೆ ಹೀಗೆ ನಾಲ್ಕು ಅಂಗಗಳಲ್ಲೂ ಅವರದ್ದು ಎತ್ತರದ ಸಿದ್ಧಿ. ಸ್ತ್ರೀ ವೇಷ, ಪುಂಡುವೇಷ, ರಾಜವೇಷ, ಜತೆಗೆ ತುಳು ಜಾನಪದ ಪ್ರಸಂಗಗಳ ವಿಭಿನ್ನ ನೆಲೆಯ ಪಾತ್ರಗಳು -ಎಲ್ಲದರಲ್ಲೂ ಇತರರಿಗೆ ಅಳಿಕೆ ಆದರ್ಶ .

ಜನಪ್ರಿಯತೆ ಪಡೆದ ತಂದೆ ಮೋನಪ್ಪರೈಗಳ ಜೊತೆಯ ವೇಷ

ವಿಟ್ಲ ಸಮೀಪ ಅಳಿಕೆ ಎಂಬುದು ಸಣ್ಣ ಗ್ರಾಮ. ಇದು ಪ್ರಸ್ತುತ ಸತ್ಯಸಾಯಿ ವಿದ್ಯಾಸಂಸ್ಥೆಯಿಂದ ಹೆಸರುವಾಸಿಯಾಗಿದ್ದರೆ ಅದಕ್ಕೂ ಮುಂಚೆ ಅಳಿಕೆ ರಾಮಯ್ಯ ರೈಯವರ ಹೆಸರಿನಿಂದಾಗಿ ಗುರುತಿಸಲ್ಪಟ್ಟಿತ್ತು. ಯಕ್ಷರಂಗದ ಭೀಷ್ಮಾಚಾರ್ಯರೆಂದೇ ಖ್ಯಾತಿ ಪಡೆದ ಅಳಿಕೆ ಮೋನಪ್ಪರೈ (ಯಕ್ಷಗಾನದವರಿಗೆ ಮೋನು ಶೆಟ್ಟಿ) ರಾಮಯ್ಯ ರೈ ಅವರ ತೀರ್ಥರೂಪರು. ರಾಮಯ್ಯ ರೈ 1915ರ ಮಾರ್ಚ್‌ 17ರಂದು ಜನಿಸಿದರು.

ತಂದೆಯ ನೆರಳಲ್ಲೇ ಯಕ್ಷಗಾನವನ್ನು ಅಭ್ಯಸಿಸಿದ ರಾಮಯ್ಯ ರೈ ತಮ್ಮ 11ನೇ ವಯಸ್ಸಿಗೆ ಇಚ್ಲಂಪಾಡಿ ಮೇಳವನ್ನೇ ಸೇರಿಕೊಂಡರು. ನಾಲ್ಕನೇ ತರಗತಿಗೆ ಅವರ ಓದು ನಿಂತಿತು. ಕಣಿಪುರ ಗೋಪಾಲಕೃಷ್ಣನ ಸನ್ನಿಧಿ ಯಲ್ಲಿ ಮಾಂಬಾಡಿ ನಾರಾಯಣ ಭಾಗವತರು ಅವರಿಗೆ ಗೆಜ್ಜೆ ನೀಡಿ ಆಶೀರ್ವದಿಸಿದರು. ಅಲ್ಲಿಂದ ಅಳಿಕೆ ತಿರುಗಿ ನೋಡಲಿಲ್ಲ. ಯಕ್ಷಗಾನ ಸಾಮ್ರಾಟರಾಗಿ ಮೆರೆದರು.

ಪರಂಪರೆಯಿಂದ ಬಂದ ಬಣ್ಣಗಾರಿಕೆ, ಕುಣಿತಗಳ ವೈಶಿಷ್ಟ್ಯವನ್ನು ಕಾಪಾಡಿಕೊಂಡು ಬಂದ ಅಳಿಕೆಯವರು ತಮ್ಮ ಹದಿಹರೆಯದಲ್ಲಿ ಅಭಿಮನ್ಯುವಾಗಿ ಜೋಡಾಟ ಗಳಲ್ಲಿ ದಿಗಿಣ ಹೊಡೆದು ಇದಿರು ಮೇಳದ ಕಲಾವಿದರು ಸುಸ್ತಾಗಿ ಸೋಲೊಪ್ಪುವಂತೆ ಮಾಡಿದರು. ಪುಂಡುವೇಷಗಳಲ್ಲಿ ಇನ್ನಿಲ್ಲವೆಂಬಂತೆ ಮೆರೆದರು. ಬಳಿಕ ಬಗೆ ಬಗೆಯ ಮನೋಭಾವದ ಸ್ತ್ರೀ ಪಾತ್ರಗಳನ್ನವರು ನಿರ್ವಹಿಸಿದರು. ತಂದೆ ಮೋನಪ್ಪರೈಗಳ ದಶರಥನೊಂದಿಗೆ ಕೈಕೇಯಿಯಾಗಿ, ಹರಿಶ್ಚಂದ್ರನಿಗೆ ಚಂದ್ರಮತಿಯಾಗಿ ಅವರ ಜೋಡಿ ಜನಪ್ರಿಯವಾಗಿತ್ತು. ಪ್ರಸಿದ್ಧ ಸ್ತ್ರೀವೇಷಧಾರಿಗಳಾದ ಪುರುಷೋತ್ತಮ ಭಟ್ಟರು, ಮಂಕುಡೆ ಸಂಜೀವ ಶೆಟ್ಟರು ಮತ್ತು ಕೋಳ್ಯೂರು ರಾಮಚಂದ್ರರಾಯರು, ರಾಮಯ್ಯ ರೈಗಳ ಸ್ತ್ರೀವೇಷ ತಮಗೆ ಆದರ್ಶವಾಗಿತ್ತೆಂದು ಹೇಳುತ್ತಿದ್ದುದು ಅಳಿಕೆಯವರ ಕಲಾವಂತಿಕೆಯ ಹಿರಿಮೆಗೆ ಸಾಕ್ಷಿ.

ರಾಜವೇಷಗಳ ಅನಭಿಷಿಕ್ತ ದೊರೆ

ರಾಜವೇಷದಲ್ಲಂತೂ ರಾಮಯ್ಯ ರೈ ತೆಂಕುತಿಟ್ಟಿನ ಅನಭಿಷಿಕ್ತ ದೊರೆಯಾಗಿ ಮೆರೆದರು. ಬಡಗಿನಲ್ಲಿ ಹಾರಾಡಿ ರಾಮ ಗಾಣಿಗರಿಗೆ ಈ ಹೆಸರಿದೆ. ವಿವಿಧ ಮನೋಭಾವದ ಪಾತ್ರಗಳಲ್ಲಿ ಅವರು ಅಚ್ಚಳಿಯದ ಛಾಪು ಮೂಡಿಸಿದ್ದಾರೆ. ಅವರ ರಾಮ, ದುಶ್ಶಂತ, ನಳ, ಹರಿಶ್ಚಂದ್ರ, ಸುಧನ್ವ ಪಾತ್ರಗಳು ಪ್ರಸಿದ್ಧ. ಋತುಪರ್ಣ ಪಾತ್ರ ಅವರಿಗೇ ಮೀಸಲು ಎಂಬಂತಿತ್ತು. ಅಳಿಕೆಯವರ ಋತುಪರ್ಣ ಹಾಗೂ ಮಿಜಾರು ಅಣ್ಣಪ್ಪರ ಬಾಹುಕ ಯಕ್ಷರಂಗದಲ್ಲಿ ಒಂದು ದಂತಕಥೆಯಾಗಿ ಉಳಿದಿದೆ. ತುಳುಪ್ರಸಂಗಗಳ ಹಲವು ಪಾತ್ರಗಳಲ್ಲಿ ಅವರನ್ನು ಮೀರಿಸುವವರಿರಲಿಲ್ಲ. ಈ ಪರಂಪರೆ ಮುಂದುವರಿಸಲು ಅವರು ಶಿಷ್ಯರನ್ನು ತಯಾರು ಮಾಡದಿರುವುದು ಒಂದು ಕೊರತೆಯಾಗಿ ಕಾಣುತ್ತಿದೆ.

ಅಳಿಕೆ ರಾಮಯ್ಯ ರೈ
ಜನನ : ಮಾರ್ಚ್‌ 17, 1915
ಜನನ ಸ್ಥಳ : ಅಳಿಕೆ ಗ್ರಾಮ, ವಿಟ್ಲ
ಬ೦ಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ

ಕಲಾಸೇವೆ:
ಆರು ದಶಕಗಳ ಕಾಲ ಯಕ್ಷಗಾನ ರಂಗಸ್ಥಳವನ್ನು ಆಳಿದ ಅಳಿಕೆ ರಾಮಯ್ಯ ರೈಯವರು ಪುಂಡು ವೇಷ ಸ್ತ್ರೀ ವೇಷಗಳಲ್ಲಿ ದುಡಿದರೂ, ರಾಜವೇಷಗಳಿಗೆ ಹೊಸ ಭಾಷ್ಯವನ್ನೆ ಬರೆದ ಕಲಾವಿದರು.

ಪ್ರಶಸ್ತಿಗಳು:
  • ಮೈಸೂರು ರಾಜ್ಯದ ರಾಜ್ಯ ಪ್ರಶಸ್ತಿ
  • ಸಂಗೀತ - ನಾಟಕ ಅಕಾಡೆಮಿಯ ಪ್ರಶಸ್ತಿ
  • ಬೆಂಗಳೂರು, ಮುಂಬಯಿ, ಮದರಾಸುಗ ಸೇರಿದ೦ತೆ ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ
  • ದೆಹಲಿ ಕರ್ನಾಟಕ ಸಂಘದ ವಸಂತ ಶೆಟ್ಟಿ ಬೆಳ್ಳಾರೆಯವರ ನೇತೃತ್ವದಲ್ಲಿ ಅಳಿಕೆ ಸಂಸ್ಮರಣ ಗ್ರಂಥ ಪ್ರಕಟವಾಗಿದೆ
ಮರಣ ದಿನಾ೦ಕ : ಆಗಸ್ಟ್‌ 21, 1989
""ಅಳಿಕೆಯವರು ಶೀಘ್ರಕೋಪಿ. ಆದರೆ ಅಷ್ಟೇ ಮೃದುಹೃದಯಿ. ಮಕ್ಕಳಿಗೆ ಒಂದು ಪೆಟ್ಟೂ ಕೊಟ್ಟವರಲ್ಲ'' ಎಂದು ಅವರ ಪುತ್ರ, ಈಗ ದುಬೈಯಲ್ಲಿರುವ ದುರ್ಗಾಪ್ರಸಾದ್‌ ರೈ ನೆನಪಿಸಿಕೊಳ್ಳುತ್ತಾರೆ. ಅವರು ಹುಟ್ಟಿ ಬೆಳೆದದ್ದು ಅಳಿಕೆಯಲ್ಲಾದರೂ ಕೊನೆಯ 30 ವರ್ಷಗಳನ್ನು ಉಪ್ಪಿನಂಗಡಿ ಸಮೀಪ ಹಿರೇಬಂಡಾಡಿ ಯಲ್ಲಿ ಕಳೆದಿದ್ದರು. ಅಳಿಕೆ ದಂಪತಿಯ ಇಬ್ಬರು ಗಂಡು ಮತ್ತು ನಾಲ್ವರು ಹೆಣ್ಣು ಮಕ್ಕಳು ಉದ್ಯೋಗ ಮತ್ತಿತರ ಕ್ಷೇತ್ರಗಳಲ್ಲಿ ಸಂತೃಪ್ತಿಯಿಂದಿದ್ದಾರೆ.

ರಾಷ್ಟ್ರಪತಿ ಡಾ. ಎಸ್‌. ರಾಧಾಕೃಷ್ಣನ್‌ರವರಿ೦ದ ಮೆಚ್ಚುಗೆ

ಕಣಿಪುರ ಗೋಪಾಲಕೃಷ್ಣನ ಎದುರು ಗೆಜ್ಜೆ ಕಟ್ಟಿದ ರಾಮಯ್ಯ ರೈ 1984ರಲ್ಲಿ ಕಟೀಲು ಭ್ರಮರಾಂಬೆಯ ಸನ್ನಿಧಿಯಲ್ಲಿ ಗೆಜ್ಜೆ ಬಿಚ್ಚಿ ಯಕ್ಷಗಾನಕ್ಕೆ ವಿದಾಯ ಹೇಳಿ ದರು. ರಾಮಯ್ಯ ರೈ ಅವರಿಗೆ ಮೈಸೂರು ರಾಜ್ಯದ ರಾಜ್ಯಪ್ರಶಸ್ತಿ ಮೊದಲೇ ಬಂದಿತ್ತು. ಬೆಂಗಳೂರು, ಮುಂಬಯಿ, ಮದರಾಸುಗಳ ಕಲಾಭಿಮಾನಿಗಳು ಅವರನ್ನು ಸಮ್ಮಾನಿಸಿದ್ದರು. ರಂಗಸ್ಥಳದ ಮೇಲೆ ಅವರ ವೇಷ ನೋಡಿ ರಸಿಕರು ಚಿನ್ನದುಂಗುರ, ಕೈಕಡಗ, ಪವನುಗಳನ್ನು ನೀಡಿದ ಉದಾಹರಣೆಗಳು ಸಾಕಷ್ಟಿವೆ. ಭಾರತದ ಎರಡನೆಯ ರಾಷ್ಟ್ರಪತಿ ಡಾ. ಎಸ್‌. ರಾಧಾಕೃಷ್ಣನ್‌ ಇದಿರು ಅದ್ಭುತವಾಗಿ ನರ್ತಿಸಿ, ರಾಷ್ಟ್ರಮಟ್ಟದಲ್ಲಿ ಗೌರವಿಸಲ್ಪಟ್ಟಿರುವ ಅಳಿಕೆಯವರಿಗೆ ಸಂಗೀತ - ನಾಟಕ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ. ದೆಹಲಿ ಕರ್ನಾಟಕ ಸಂಘದ ವಸಂತ ಶೆಟ್ಟಿ ಬೆಳ್ಳಾರೆಯವರ ನೇತೃತ್ವದಲ್ಲಿ ಅಳಿಕೆ ಸಂಸ್ಮರಣ ಗ್ರಂಥ ಪ್ರಕಟವಾಗಿದೆ. ಯಕ್ಷರಂಗದ ಉತ್ತುಂಗವನ್ನು ತಲುಪಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದ ಅಳಿಕೆ ರಾಮಯ್ಯ ರೈ ಆಗಸ್ಟ್‌ 21, 1989ರಲ್ಲಿ ಇಹಲೋಕವನ್ನು ತ್ಯಜಿಸಿದರು.

ಅಶಕ್ತ ಕಲಾವಿದರ ನೆರವಿಗೆ ಅಳಿಕೆ ರಾಮಯ್ಯ ರೈ ಟ್ರಸ್ಟ್‌

ಕಲಾಭಿಮಾನಿಗಳ ಹೃದಯದಲ್ಲಿ ಅಳಿಕೆಗೆ ಅಳಿವಿಲ್ಲ. ಅವರು ಗತಿಸಿ ಎರಡು ದಶಕಗಳು ಸಂದಿವೆ. ಇದೀಗ ಅವರ ಮಕ್ಕಳು ಮತ್ತು ಕುಟುಂಬಸ್ಥರು 2009ರಲ್ಲಿ ಅಳಿಕೆ ರಾಮಯ್ಯ ರೈ ಟ್ರಸ್ಟ್‌ ಒಂದನ್ನು ರಚಿಸಿದ್ದು, ಪ್ರತಿ ವರ್ಷ ಈರ್ವರು ಅಶಕ್ತ ಕಲಾವಿದರಿಗೆ ರೂ. 20,000 ಸಹಾಯನಿಧಿಯನ್ನು ನೀಡಲು ಯೋಜಿಸಿದೆ. ಈಗಾಗಲೇ ಸುಮಾರು 10 ಮಂದಿ ಕಲಾವಿದರು ಅದರ ಫ‌ಲಾನುಭವಿಗಳಾಗಿದ್ದಾರೆ.

ಅಳಿಕೆ ರಾಮಯ್ಯ ರೈ ಅವರದು ಈಗ ಶತಮಾನದ ನೆನಪು. ಇದೇ ನ.15 ರಿಂದ 21ರ ವರೆಗೆ ಯಕ್ಷಾಂಗಣ ಮಂಗಳೂರು ಸಂಸ್ಥೆಯು ಮಂಗಳೂರು ವಿಶ್ವವಿದ್ಯಾನಿಲಯದ ಡಾ| ದಯಾನಂದ ಪೈ ಮತ್ತು ಶ್ರೀ ಸತೀಶ್‌ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಇವರ ಸಹಯೋಗದಲ್ಲಿ ತೃತೀಯ ವರ್ಷದ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ ಯಕ್ಷಗಾನ ತಾಳಮದ್ದಳೆ ಸಪ್ತಾಹವನ್ನು ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ಏರ್ಪಡಿಸಿದ್ದು, ಈ ಸಂದರ್ಭದಲ್ಲಿ ಅಳಿಕೆ ನೂರರ ನೆನಪು ಕಾರ್ಯಕ್ರಮ ಹಮ್ಮಿಕೊಂಡಿದೆ. ನ.15ರಂದು ಉದ್ಘಾಟನೆ, ಅಳಿಕೆ ಸಂಸ್ಮರಣೆ ಕಾರ್ಯಕ್ರಮಗಳಿವೆ. ಅಂದಿನಿಂದ ಪ್ರತಿದಿನ ಕ್ರಮವಾಗಿ ಬ್ರಹ್ಮಕಪಾಲ, ದಕ್ಷಯಜ್ಞ, ರಾಜಾದಂಡಕ, ಮಾಯಕೊದ ಬಿನ್ನೆದಿ, ರಾಮಾಂಜನೇಯ, ಗದಾಯುದ್ಧ, ಶ್ರೀರಾಮದರ್ಶನ ಪ್ರಸಂಗಗಳ ತಾಳ ಮದ್ದಳೆ ಜರಗಲಿದ್ದು ನ.21ರಂದು ಸಪ್ತಾಹ ಸಮಾರೋಪ ಮತ್ತು ದಿ| ಬೆಟ್ಟಂಪಾಡಿ ಬಾಳಪ್ಪಶೆಟ್ಟಿ ಪ್ರಶಸ್ತಿ ಪ್ರದಾನವೂ ನಡೆಯಲಿದೆ.


************************


ಅಳಿಕೆ ರಾಮಯ್ಯ ರೈರವರ ಕೆಲವು ಛಾಯಾ ಚಿತ್ರಗಳು

( ಕೃಪೆ : ಸುಬ್ರಹ್ಮಣ್ಯ ಭಟ್ ಹಾಗೂ ಅ೦ತರ್ಜಾಲದ ಅನಾಮಿಕ ಯಕ್ಷಗಾನಾಭಿಮಾನಿಗಳು )

ಅಳಿಕೆಯವರ ಋತುಪರ್ಣ

ಕುಳಿತವರು (ಎಡದಿಂದ ಬಲಕ್ಕೆ ) ಶ್ರೀ ನಿಡ್ಲೆ ನರಸಿಂಹ ಭಟ್ , ಶ್ರೀ. ಬೋಳಾರ ನಾರಾಯಣ ಶೆಟ್ಟಿ ,ಶ್ರೀ ವಿಟ್ಲ ಗೋಪಾಲಕೃಷ್ಣ ಜೋಶಿ , ಶ್ರೀ.ಎಂ.ನಾರಾಯಣ ಭಟ್ (ಅಳಿಕೆ) ಶ್ರೀ ಬಲಿಪ ನಾರಾಯಣ ಭಾಗವತ , ಶ್ರೀ ಅಳಿಕೆ ರಾಮಯ್ಯ ರೈ ,ಶ್ರೀ ಕದ್ರಿ ವಿಷ್ಣು
ಮೊದಲ ಸಾಲಿನಲ್ಲಿ ನಿಂತವರು : ಶ್ರೀ ಎಂ.ವಾಸುದೇವ ಪ್ರಭು , ಶ್ರೀ.ಕೆ.ಸಂಜೀವ ಶೆಟ್ಟಿ , ಶ್ರೀ ಗೋಪಾಲಕೃಷ್ಣ ಕುರುಪ್ , ಶ್ರೀ ಬಣ್ಣದ ಕುಟ್ಯಪ್ಪು, ಶ್ರೀ ಕೋಳ್ಯುರ್ ರಾಮಚಂದ್ರ ರಾವ್ , ಶ್ರೀ ಕೆ.ವಿ. ಸುಬ್ಬಾ ರಾವ್ , ಶ್ರೀ ಅಡ್ಕಸ್ಥಳ ನಾರಾಯಣ ಶೆಟ್ಟಿ
ನಿಂತವರಲ್ಲಿ ಕೊನೆಯ ಸಾಲು : ಶ್ರೀ ಡೊಂಬ, ಶ್ರೀ ಯು. ಗಂಗಾಧರ ಭಟ್ , ಶ್ರೀ.ಕೇದಗಡಿ ಗುಡ್ಡಪ್ಪ ಗೌಡ , ಶ್ರೀ ಪಡ್ರೆ ಕುಮಾರ ಮತ್ತು ಶ್ರೀ ಪಡ್ರೆ ಚಂದು

( ಮಾಹಿತಿ : ಸುಬ್ರಹ್ಮಣ್ಯ ಭಟ್ ballirenayya ಬ್ಲಾಗ್ )

ಕೃಪೆ : udayavani


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ