ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಬದುಕಿನಲ್ಲಿ ಶುದ್ಧತೆಯನ್ನು ಕಾಪಾಡಿದ ಹಾಸ್ಯಗಾರ - ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ

ಲೇಖಕರು :
ನಾ.ಕಾರ೦ತ, ಪೆರಾಜೆ
ಬುಧವಾರ, ಡಿಸೆ೦ಬರ್ 9 , 2015

ಸುಮಾರು 1998ನೇ ಇಸವಿ ಇರಬೇಕು. ಭಾಸ್ಕರ ರೈ ಕುಕ್ಕುವಳ್ಳಿಯವರ ಸಂಯೋಜನೆಯ 'ಪಾಪಣ್ಣ ವಿಜಯ' ಪ್ರಸಂಗದ ಪ್ರದರ್ಶನ. ಬಾಳಪ್ಪ ಶಟ್ಟರ 'ಪಾಪಣ್ಣ' ಪಾತ್ರ. ಪೂರ್ವಾರ್ಧದ ಗುಣಸುಂದರಿ ಕೀರ್ತಿಶೇಷ ಕಾವೂರು ಕೇಶವನವರು. ಉತ್ತರಾರ್ಧದ ಪಾತ್ರವನ್ನು ನಾನು ನಿರ್ವಹಿಸಬೇಕಾದ ಸಂದರ್ಭ ಒದಗಿತ್ತು. ಆಗ ಚೌಕಿಯಲ್ಲಿ ಹೇಳಿದ ಮಾತು ನೆನಪಿದೆ : "ಪಾತ್ರದ ಸ್ವಭಾವವನ್ನು ಸಮಾಜದಿಂದಲೇ ಕಲಿತುಕೊಳ್ಳಬೇಕು. ನಮ್ಮ ಮಧ್ಯೆ ಇರುವ ಪಾಪಣ್ಣ-ಗುಣಸುಂದರಿ ಪಾತ್ರಗಳಂತಹ ಸ್ವಭಾವದವರನ್ನು ನೋಡಬೇಕು. ಅದರಂತೆ ಚಿತ್ರಿಸಬೇಕು. ನೋಡಿದ ಚಿತ್ರ ಏನಿದೆಯೋ ರಂಗದಲ್ಲಿ ಅದೇ ನಾವಾಗಬೇಕು. ಸಮಾಜವನ್ನು ನೋಡದೆ ಅಭಿವ್ಯಕ್ತಿ ಹೇಗೆ ಸಾಧ್ಯ. ಎಲ್ಲಾ ರಸಗಳು ನಮ್ಮ ನಡುವೆಯೇ ಇದೆ. ಅದರ ಜ್ಞಾನವಿದ್ದರೆ ಅಭಿವ್ಯಕ್ತಿ ಸುಲಭ."

'ಪಾಪಣ್ಣ' ಪಾತ್ರವನ್ನು ಜ್ಞಾಪಿಸಿಕೊಂಡರೆ ಸಾಕು. ಪೆರುವಡಿ ನಾರಾಯಣ ಭಟ್ ಮತ್ತು ಬಾಳಪ್ಪರು ನೆನಪಾಗುತ್ತಾರೆ. ರಂಗದಲ್ಲಿರುವುದು ಪಾತ್ರವೆಂಬುದನ್ನು ಪ್ರೇಕ್ಷಕರು ಮರೆಯುವಂತಹ ತಾಜಾ ಅಭಿವ್ಯಕ್ತಿ. ವರ್ತಮಾನದ ರಂಗವನ್ನೊಮ್ಮೆ ನೋಡಿ. ಹಾಸ್ಯಗಾರರು ನಿರ್ವಹಿಸುವ ಹಾಸ್ಯದ ಹೊರತಾದ ಪಾತ್ರಗಳೆಲ್ಲವೂ ಹಾರಿಬಿದ್ದು ನಗುತ್ತಿವೆ! ಆದರೆ ಈ ಇಬ್ಬರು ಮಹನೀಯರ 'ನಾರದ, ಬ್ರಹ್ಮ, ಮುನಿಗಳು, ವಿಪ್ರರು...'ಪಾತ್ರಗಳೆಲ್ಲವೂ ನಿಜದ ಹತ್ತಿರಕ್ಕೆ ಬರುವಂತಹುಗಳು.

ಬಾಳಪ್ಪ ಶೆಟ್ಟರು ಗತಿಸಿ (ಜೂನ್ 2005) ದಶಕವಾಯಿತು. ಎಂಭತ್ತು ವರುಷಗಳ ತುಂಬು ಬದುಕು. ಸುಮಾರು ನಾಲ್ಕು ದಶಕಗಳ ಕಾಲ ಬಣ್ಣದ ಬದುಕು. ಹಾಗೆಂತ ಅವರಿಗೆ ಬದುಕು ಬಣ್ಣವಲ್ಲ, ಬದ್ಧತೆಯ ಮೂಟೆ. ಸ್ಪಷ್ಟ ನಿಲುವಿನ ಜೀವನ. ಹಗುರ ಮಾತನ್ನಾಡದೆ, ತಾನೂ ಹಗುರವಾಗದ ಅವರ ನೆನಪು ಅದು ಮಾಸದ ನೆನಪು. ಮಾನದ ನೆನಪು.

1930ರ ಆಜೂಬಾಜು. ಪುತ್ತೂರು ತಾಲೂಕಿನ ಪಾಣಾಜೆಯಲ್ಲಿ ದಿ.ಕವಿಭೂಷಣ ಕೆ.ಪಿ.ವೆಂಕಪ್ಪ ಶೆಟ್ಟರ ಯಕ್ಷಾಳ್ತನ. ಬಾಲಸುಬ್ರಹ್ಮಣ್ಯ ಯಕ್ಷಗಾನ ಸಂಘದ ಮೂಲಕ ಶಿಷ್ಯರ ರೂಪೀಕರಣ. ಕವಿಭೂಷಣರ ಇನ್ನೋರ್ವ ಶಿಷ್ಯ ದಿ.ಕೋರ್ಮಂಡ ಮಂಜಪ್ಪ ರೈ ಅವರೊಂದಿಗೆ ಬಾಳಪ್ಪ ಶೆಟ್ಟರ ಸ್ನೇಹ. ಯಕ್ಷಗಾನ ಅರ್ಥಗಾರಿಕೆಗೆ ಶ್ರೀಕಾರ. ಅನುಭವ ಪಕ್ವತೆಗೆ ಗಟ್ಟಿಗರ ಒಡನಾಟ. ಕುಂಬಳೆಯ ಕಾವು ಕಣ್ಣರಿಂದ ನಾಟ್ಯಾಭ್ಯಾಸ.

ಬೆಟ್ಟಂಪಾಡಿಯಲ್ಲಿ ಮಧೂರು ನಾರಾಯಣ ಹಾಸ್ಯಗಾರರ ಕೂಡ್ಲು ಮೇಳವು ಟೆಂಟ್ ಊರಿತ್ತು. ಬಾಳಪ್ಪ ಶೆಟ್ಟರು ಆಟ ನೋಡಲು ಹೋಗಿದ್ದರು. ಹಾಸ್ಯಗಾರರ ಒತ್ತಾಯಕ್ಕೆ ಹಾಸ್ಯ ಪಾತ್ರವೊಂದನ್ನು ಮಾಡಿದರು. ಪ್ರತಿಭೆಯನ್ನು ಗುರುತಿಸಿದ ಹಾಸ್ಯಗಾರರು ಮೇಳಕ್ಕೆ ಸೇರಿಸಿಕೊಂಡರು. ಹಾಸ್ಯ, ಹಾಸ್ಯೇತರ ಪಾತ್ರಗಳ ನಿರ್ವಹಣೆ. ಮುಂದೆ ಮೂಲ್ಕಿ ಮೇಳಕ್ಕೆ ಜಿಗಿತ. ಕಾಲಮಿತಿಯ ವೈರಾಗ್ಯ(!)ದ ಬಳಿಕ ಪುನಃ ಕೂಡ್ಲು ಮೇಳದಿಂದ ವ್ಯವಸಾಯ. ಅಲ್ಲಿ ಶೇಣಿ ಗೋಪಾಲಕೃಷ್ಣ ಭಟ್ಟರ ಒಡನಾಟ. ಮುಂದೆ ಸುರತ್ಕಲ್, ಇರಾ, ಕರ್ನಾಟಕ ಕಲಾವಿಹಾರ.. ಮೇಳಗಳ ತಿರುಗಾಟದ ಫಲವಾಗಿ ಹೆಸರಿನೊಂದಿಗೆ 'ಹಾಸ್ಯಗಾರ' ಹೊಸೆಯಿತು.

ಬಡಗುತಿಟ್ಟಿನ ಅಮೃತೇಶ್ವರಿ, ಪೆರ್ಡೂರು ಮೇಳಗಳಲ್ಲೂ ಬಾಳಪ್ಪರ ತಿರುಗಾಟ ಮುಂದುವರಿಯಿತು. ಮಲ್ಪೆ ಶಂಕರನಾರಾಯಣ ಸಾಮಗರ ಸಾಂಗತ್ಯ. ಕರ್ನೂರು ಕೊರಗಪ್ಪ ರೈಯವರ ಕದ್ರಿ ಮೇಳದಲ್ಲಿ ಪ್ರಧಾನ ಹಾಸ್ಯಗಾರರಾಗಿ ಮುಂದುವರಿದರು. ಕೀರ್ತಿಗಳು ಹುಡುಕಿ ಬಂದುವು. ಭೀಷ್ಮವಿಜಯ, ದಕ್ಷಾಧ್ವರ ಪ್ರಸಂಗದ 'ವೃದ್ಧವಿಪ್ರ', ಕೃಷ್ಣಲೀಲೆಯ 'ಅಗಸ, ಮಂತ್ರವಾದಿ', ನಳಚರಿತ್ರೆಯ 'ಬಾಹುಕ', ಊರ್ವಶಿ ಶಾಪದ 'ಚಿತ್ರಸೇನ'; ನಾರದ, ಗೂಢಚಾರ, ಋಷಿಗಳು.. ಹೀಗೆ ವಿವಿಧ ಭಾವಗಳ ಪಾತ್ರಗಳೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ. ಹಾಸ್ಯದ ಹೊನಲಿನಲ್ಲಿ ಎಂದೂ ಕೂಡಾ ರಂಗದಲ್ಲಿ ಹಾಸ್ಯೇತರ ಪಾತ್ರಗಳನ್ನು ಹೊಸಕಿ ಹಾಕಿಲ್ಲ! ಇವರದು 'ನಕ್ಕು' ನಗಿಸುವ ಹಾಸ್ಯವಲ್ಲ. 'ತಾನು ನಗದೆ' ಇತರರನ್ನು ನಗಿಸುವ ಹಾಸ್ಯ.

ಶೆಟ್ಟರಿಗೆ ಆರಂಭದಲ್ಲೊಮ್ಮೆ ಕಲಾಬದುಕಿನಲ್ಲಿ ತೃಪ್ತಿಯಿದ್ದರೂ ನೆಮ್ಮದಿಯಿರಲಿಲ್ಲ. 'ಕಿಸೆ ಭಾರ'ವಾದುದೇ ಹೆಚ್ಚು. ಕೈಯಲ್ಲಿ ಕಾಸಿಲ್ಲದೆ ಚೀಲದೊಳಗಿದ್ದ ಟಾರ್ಚ್ ನ್ನು ಮಾರಾಟ ಮಾಡಿ ಊರು ಸೇರಿದ ಘಟನೆಯನ್ನು ರೋಚಕವಾಗಿ ಹೇಳಿ ನಗುತ್ತಿದ್ದರು. ನಗಿಸುತ್ತಿದ್ದರು. ಆ ನಗುವಿನ ಹಿಂದಿನ ನೋವು ಎಂದೂ ನಕ್ಕದ್ದಿಲ್ಲ! ಕಲಾವಿದರಿಗೆ 'ಸಹಜ'ವಾಗಿ ಅಂಟುವ ವಿಕಾರಗಳು ಬಾಳಪ್ಪರ ಹತ್ತಿರ ಸೋಂಕಿಲ್ಲ. ಉತ್ತಮರ ಸಹವಾಸದ ಫಲ. ಬದುಕಿನ ಇಳಿ ಹೊತ್ತಲ್ಲಿ ಅಪಘಾತದಿಂದಾಗಿ ಹಾಸ್ಯ ತಟಸ್ಥವಾಯಿತು. ನಗು ಅಳುವುದಕ್ಕೆ ತೊಡಗಿತು! ಅವರೊಂದಿಗಿದ್ದ ಪಾತ್ರಗಳು ಮೌನವಾದುವು.

ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ
ಜನನ ದಿನಾ೦ಕ : 1925
ಜನನ ಸ್ಥಳ : ಪದ್ಯಾಣ, ಪುತ್ತೂರು ತಾಲೂಕು,
ದಕ್ಷಿಣ ಕನ್ನಡ ಜಿಲ್ಲೆ , ಕರ್ನಾಟಕ ರಾಜ್ಯ
ಕಲಾಸೇವೆ:
ಬಡಗುತಿಟ್ಟಿನ ಅಮೃತೇಶ್ವರಿ, ಪೆರ್ಡೂರು ಮೇಳಗಳೂ ಸೇರಿದ೦ತೆ, ತೆ೦ಕು ತಿಟ್ಟಿನ ಕದ್ರಿ, ಮೂಲ್ಕಿ , ಕೂಡ್ಲು, ಸುರತ್ಕಲ್, ಇರಾ, ಕರ್ನಾಟಕ ಮೇಳಗಳಲ್ಲಿ ಅಗ್ರಮಾನ್ಯ ಹಾಸ್ಯಗಾರರಾಗಿ ಕಲಾಸೇವೆ.
ಪ್ರಶಸ್ತಿಗಳು:
 • ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಪ್ರಶಸ್ತಿ
 • ಭಾಸ್ಕರ ರೈ ಕುಕ್ಕುವಳ್ಳಿ ಸಂಪಾದಕತ್ವದ, 1983ರಲ್ಲಿ 'ಯಕ್ಷಿಕಾ' ಎನ್ನುವ ಅಭಿನಂದನಾ ಗ್ರಂಥ
 • ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ


ಪುತ್ತೂರಿನಲ್ಲಿ ಬೆಟ್ಟಂಪಾಡಿ ಬಾಳಪ್ಪ ಶೆಟ್ಟರಿಗೆ ಅವರ ಅಭಿಮಾನಿಗಳು 1983ರಲ್ಲಿ 'ಯಕ್ಷಿಕಾ' ಎನ್ನುವ ಅಭಿನಂದನಾ ಗ್ರಂಥವನ್ನು (ಸಂಪಾದಕರು - ಭಾಸ್ಕರ ರೈ ಕುಕ್ಕುವಳ್ಳಿ) ಸಮರ್ಪಿಸಿದ್ದರು. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರು. ಪತ್ನಿ ಸರ್ವಾಣಿ. ಒಂದು ಹೆಣ್ಣು, ಮೂವರು ಗಂಡು ಮಕ್ಕಳನ್ನು ಪಡೆದಿರುವ ಸಂಸಾರಿ. ಬಾಳ ದೀವಿಗೆ 2005ರಲ್ಲಿ ನಂದಿದಾಗ, ಅವರ ಹಿರಿಯ ಮಗ ಸುಂದರ ಶೆಟ್ಟರು 'ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಯಕ್ಷ ಪ್ರತಿಷ್ಠಾನ'ವನ್ನು ಹುಟ್ಟು ಹಾಕಿದರು.

ಮಂಗಳೂರಿನ 'ಯಕ್ಷಾಂಗಣ'ವು ನವೆಂಬರ್ 15 - 21ರ ತನಕ ತೃತೀಯ ವರುಷದ 'ಯಕ್ಷಗಾನ ತಾಳಮದ್ದಳೆ ಸಪ್ತಾಹ' ಏರ್ಪಡಿಸಿತ್ತು. ಇದರ ಸಮಾರೋಪದಂದು (೨೧ರಂದು) ಬಾಳಪ್ಪ ಶೆಟ್ಟರ ನೆನಪಿನ ಪ್ರಶಸ್ತಿ ಪ್ರದಾನವೂ ಜರುಗಲಿದೆ. ಎಪ್ಪತ್ತೈದರ ಹರೆಯದ ವೇಷಧಾರಿ, ಅರ್ಥಧಾರಿ, ನಿವೃತ್ತ ಶಿಕ್ಷಕ ನುಳಿಯಾಲು ಸಂಜೀವ ರೈಯವರಿಗೆ ಪ್ರಶಸ್ತಿ ಪ್ರದಾನ.

ಶುದ್ಧ ಹಸ್ತದ, ಜೀವನದ ಹಿರಿಯರ ಹೆಸರಿನ ಈ ಪ್ರಶಸ್ತಿಯ ಹಿಂದಿನ ಆಶಯ ಮತ್ತು ಮನಸ್ಸು ರಾಜ್ಯ ಪ್ರಶಸ್ತಿಗಿಂತಲೂ ಹಿರಿದು.**************


ಕೃಪೆ : yakshamatu.blogspot


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
     ತಾಜಾ ಲೇಖನಗಳು
   
  ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
  ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
  ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
   
  © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ