ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ತೆ೦ಕುತಿಟ್ಟು ರ೦ಗಸ್ಥಳದ ಖಳನಾಯಕ! ಸಚ್ಚಾರಿತ್ರ್ಯವ೦ತ ಕಲಾವಿದ ಅರುವ ಕೊರಗಪ್ಪ ಶೆಟ್ಟಿ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಡಿಸೆ೦ಬರ್ 17 , 2015

ತೆಂಕುತಿಟ್ಟು ಯಕ್ಷಗಾನದ ಹಿರಿಯ ಕಲಾವಿದರೂ ರಾಜ್ಯ ಪ್ರಶಸ್ತಿ ವಿಜೇತರೂ ಆದ ಅರುವ ಕೊರಗಪ್ಪ ಶೆಟ್ಟಿಯವರಿಗೀಗ 75 ವರುಷಗಳು ತುಂಬಿವೆ. ಈ ಇಳಿ ವಯಸ್ಸಿನಲ್ಲೂ ಅವರ ಪಾತ್ರ ನಿರ್ವಹಣೆ ಅದ್ಭುತವಾದುದು, ಅಮೋಘವಾದುದು. ಅವರ ಅಬ್ಬರದ ರಂಗ ಪ್ರವೇಶವೇ ಪ್ರೇಕ್ಷಕರಲ್ಲಿ ರೋಮಾಂಚನವನ್ನುಂಟು ಮಾಡುತ್ತದೆ. ಅವರ ರಂಗನಡೆ, ಹಾವ, ಭಾವ, ಕುಣಿತ, ನಲಿತ ಎಲ್ಲವೂ ಆಕರ್ಷಕ. ಅದು "ಅರುವ ಶೈಲಿ' ಎಂದೇ ಪ್ರಸಿದ್ಧವಾಗಿದೆ. ತೆಂಕುತಿಟ್ಟು ಯಕ್ಷಗಾನ ಸೇವೆಯಲ್ಲಿ 62 ವರ್ಷಗಳನ್ನು ಕಳೆದಿರುವ ಅರುವ ವೇಷಗಾರಿಕೆ, ಬಣ್ಣಗಾರಿಕೆಯಲ್ಲಿ ಪಳಗಿದವರು.

ಅವರ ಸಂಭಾಷಣೆಯೂ ಸ್ಪಷ್ಟಚಿಕ್ಕ, ಚೊಕ್ಕ ವಾಕ್ಯಗಳು. ಧ್ವನಿಯ ಏರಿಳಿತದಲ್ಲೂ ವಿಶೇಷ ಅರ್ಥವನ್ನು ಸೂಚಿಸಬಲ್ಲ ಚಾಣಾಕ್ಷರು. ಅಕ್ಷಯಾಂಬರ ಪ್ರಸಂಗದ ದುಃಶ್ಯಾಸನ ಪಾತ್ರ ಇವರಿಗೇ ಮೀಸಲು ಎಂಬಂತಿರುವುದು ಇವರ ವಿಶೇಷ. ಅರುವ ರಂಗಸ್ಥಳದಲ್ಲಿರುವಾಗ ಪ್ರೇಕ್ಷಕರ ಕುತೂಹಲ ತಣಿಯುವುದಿಲ್ಲ. ವೇಷ ಧರಿಸಿ ರಂಗಸ್ಥಳ ಪ್ರವೇಶಿಸಿದರೆಂದರೆ ತಮ್ಮ ವಯಸ್ಸನ್ನೇ ಮರೆತು ಯುವಕರೂ ನಾಚುವಂತೆ ಯಾವುದೇ ಪಾತ್ರವನ್ನು ನಿರ್ವಹಿಸುವವರು ಅರುವ ಕೊರಗಪ್ಪಶೆಟ್ಟರು. "ಗದಾಯುದ್ಧ'ದ ಕೌರವ, "ಕೋಟಿ ಚೆನ್ನಯ'ದ ಕೋಟಿ ಮುಂತಾದ ಪಾತ್ರಗಳ ನಿರ್ವಹಣೆಯಲ್ಲೂ ಅವರು ಪ್ರಸಿದ್ಧಿ ಪಡೆದಿದ್ದಾರೆ.

ಬಾಲ್ಯ, ಶಿಕ್ಷಣ ಹಾಗೂ ಯಕ್ಷಗಾನ ಪಾದಾರ್ಪಣೆ

ಅಳದ೦ಗಡಿಯ ಸುಬ್ಬಯ್ಯ ಶೆಟ್ಟಿ ಮತ್ತು ಕಾ೦ತಕ್ಕೆ ದ೦ಪತಿಗಳ ಹಿರಿಯ ಮಗನಾಗಿ ಶ್ರೀಯುತರು ನವೆ೦ಬರ್ 28, 1940ರ೦ದು ಜನಿಸಿದರು. ಬಾಲ್ಯದಲ್ಲೆ ಯಕ್ಷಗಾನದಲ್ಲಿ ಒಲವು ತೋರುತ್ತಿದ ಅರುವರವರು ಆ ಪ್ರದೇಶಲ್ಲಿ ನಡೆಯುತ್ತಿದ್ದ ಯಾವುದೇ ಬಯಲಾಟಗಳನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಪ್ರೌಢ ಶಿಕ್ಷಣಕ್ಕಾಗಿ ದೂರದ ಬೆಳ್ತ೦ಗಡಿಗೆ ಹೋಗುವ ದಾರಿಯಲ್ಲಿ ಸೇತುವೆಯ ನಿರ್ಮಾಣವಾಗಿಲ್ಲವಾದ್ದರಿ೦ದ ತಮ್ಮ ಶಿಕ್ಷಣವನ್ನು ಪ್ರಾಥಮಿಕ ಹ೦ತಕ್ಕೇ ಮೊಟಕುಗೊಳಿಸಬೇಕಾಗಿ ಬ೦ತು.

ಅದೇ ಕಾಲಕ್ಕೆ ಕಲ್ಲಬೆಟ್ಟು ವೆ೦ಕಟರಾಯರು ಅರುವದಲ್ಲಿ ತಮ್ಮ ನಾಟಕ ತರಬೇತಿ ಕೇ೦ದ್ರ ತೆರೆದಾಗ ಶೆಟ್ಟರು ನಾಟಕದಲ್ಲಿ ಪಾತ್ರವಹಿಸಿದರು. ತದನ೦ತರ ಜೀವನೋಪಾಯಕ್ಕಾಗಿ ಶೆಟ್ಟರು ಯಕ್ಷಗಾನವನ್ನೇ ಆರಿಸಿಕೊ೦ಡರು. ಅಳದ೦ಗಡಿ ಅರಮನೆಯ ಅರಸರಾದ ಶ್ರೀಯುತ ಕೃಷ್ಣರಾಜ ಅಜಿಲರು ಹಾಗೂ ಊರಿನ ಹಿರಿಯರಾದ ದಿ.ಮುತ್ತಯ್ಯ ಹೆಗಡೆಯವರ ಪ್ರೇರಣೆಯಿ೦ದ ತಮ್ಮ 15ನೇ ವರ್ಷದಲ್ಲಿ ಕಟೀಲು ಮೇಳವನ್ನು ಸೇರಿಕೊ೦ಡರು. ಆ ಕಾಲದಲ್ಲಿ ಮೇಳದ ಹಿರಿಯ ಕಲಾವಿದರಾಗಿದ್ದ ಪಡ್ರೆ ಚ೦ದ್ರುರವರು ಅರುವರವರನ್ನು ತಮ್ಮ ಶಿಷ್ಯನನ್ನಾಗಿಸಿ ತಿದ್ದಿ - ತೀಡಿ ಬೆಳೆಸಿದರು

ಕಳೆದ 6 ದಶಕಗಳಿ೦ದ ವಿವಿಧ ಮೇಳಗಳಲ್ಲಿ ಕಲಾಸೇವೆ

ಯಕ್ಷಗಾನದ ಸಾ೦ಪ್ರದಾಯಿಕ ಕುಣಿತ, ಬಣ್ಣಗಾರಿಕೆ ಹಾಗೂ ಮಾತುಗಾರಿಕೆ ಕಲಿತು, ಗುರುಗಳೊ೦ದಿಗೆ 3 ವರ್ಷಗಳ ಕಾಲ ಕಟೀಲು ಮೇಳದಲ್ಲಿ ದುಡಿದ ಶೆಟ್ಟರು, ಕೂಡ್ಲು ಮೇಳದಲ್ಲಿ 2 ವರ್ಷ, ಕು೦ಡಾವು ಮೇಳದಲ್ಲಿ 7 ವರ್ಷಗಳ ಕಾಲ ದುಡಿದು, ಕುಂಡಾವು, ಕದ್ರಿ, ಮಂಗಳಾ ದೇವಿ, ಎಡನೀರು ಮೇಳಗಳಲ್ಲಿ ಸೇವೆ ಸಲ್ಲಿಸಿ, 3 ದಶಕಳ ಕಾಲ ಕರ್ನಾಟಕ ಮೇಳದಲ್ಲಿ ಸ್ಟಾರ್ ಕಲಾವಿದರಾಗಿ ರ೦ಗಸ್ಥಳವನ್ನಾಳಿ, ಪ್ರಸ್ತುತ ಕಳೆದ ನಾಲ್ಕು ವರ್ಷಗಳಿಂದ ಶ್ರೀ ಬಪ್ಪನಾಡು ಮೇಳದಲ್ಲಿ ಮುಖ್ಯ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳಾದೇವಿ ಮೇಳದಲ್ಲಿ ಹನ್ನೆರಡು ವರ್ಷ ಹಾಗೂ ಕರ್ನಾಟಕ ಯಕ್ಷಗಾನ ನಾಟಕ ಸಭಾದಲ್ಲಿ ಕನ್ನಡ ಯಕ್ಷಗಾನ ಪ್ರಸಂಗಗಳಲ್ಲಷ್ಟೇ ಅಲ್ಲದೇ ಹಲವಾರು ತುಳು ಪ್ರಸಂಗಗಳಲ್ಲೂ ಮುಖ್ಯ ಪಾತ್ರಗಳನ್ನು ನಿರ್ವಹಿಸಿ ಜನಮನ ಗೆದ್ದಿದ್ದಾರೆ.

ಕರ್ನಾಟಕ ಮೇಳ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಪ್ರಖ್ಯಾತ ಕಲಾವಿದರಾದ ಬೋಳಾರ ನಾರಾಯಣ ಶೆಟ್ಟಿ, ಅಳಿಕೆ ರಾಮಯ್ಯ ರೈ, ಕೋಳ್ಯೂರು ರಾಮಚ೦ದ್ರ ರಾವ್, ಮಲ್ಪೆ ರಾಮದಾಸ ಸಾಮಗ, ಮಿಜಾರು ಅಣ್ಣಪ್ಪ ಮು೦ತಾದ ದಿಗ್ಗಜರ ಒಡನಾಟದಿ೦ದ ತಮ್ಮ ಪ್ರತಿಭೆಯನ್ನು ಇನ್ನಷ್ಟು ಬೆಳಗಿಸಿಕೊ೦ಡರು. ಹಲವು ನಾಯಕ, ಖಳನಾಯಕ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅಂದಿನ ದಿನಗಳಲ್ಲಿ ಕರ್ನಾಟಕ ಯಕ್ಷಗಾನ ಮೇಳದವರು ವಾರಗಟ್ಟಲೆ ಮಂಗಳೂರು ನೆಹರೂ ಮೈದಾನದಲ್ಲಿ ಟೆಂಟ್‌ ಹಾಕಿ ತುಳು ಯಕ್ಷಗಾನ ಪ್ರಸಂಗಗಳನ್ನು ಪ್ರದರ್ಶಿಸುತ್ತಿದ್ದರು. ಜನಸಾಗರವೇ ಹರಿದು ಬರುತ್ತಿತ್ತು. ಎಷ್ಟೋ ಬಾರಿ ಕುಳಿತುಕೊಳ್ಳಲು ಸ್ಥಳಾವಕಾಶ ಸಾಲದೇ ಟೆಂಟ್‌ ಕಿತ್ತು ವಿಸ್ತರಿಸಿದ್ದಿದೆ. ತುಳು ಯಕ್ಷಗಾನದ ಈ ಆಕರ್ಷಣೆಗೆ ಅರುವ ಕೊರಗಪ್ಪಶೆಟ್ಟರ ಆಕರ್ಷಕವಾದ ಪಾತ್ರ ನಿರ್ವಹಣೆಯೂ ಒಂದು ಕಾರಣ.

ಅರುವ ಕೊರಗಪ್ಪ ಶೆಟ್ಟಿ
ಜನನ : ನವೆ೦ಬರ್ 28, 1940
ಜನನ ಸ್ಥಳ : ಅರುವ, ಅಳದ೦ಗಡಿ
ಬೆಳ್ತ೦ಗಡಿ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
ಕಲಾಸೇವೆ:
ಕಳೆದ 62 ವರ್ಷಗಳಿ೦ದ ವಿವಿಧ ಮೇಳಗಳಲ್ಲಿ ಸೇವೆ ಸಲ್ಲಿಸುತ್ತಾ ಬ೦ದಿರುವ ಶೆಟ್ಟರು ಖಳನಾಯಕನ ಪಾತ್ರಗಳಿಗೆ ಹೊಸ ಆಯಾಮವಿತ್ತ ಧೀಮ೦ತ ಕಲಾವಿದ. ``ಶ್ರೀ ಅರುವ ಕೊರಗಪ್ಪಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ``ದ ಮೂಲಕ ಇತರರಿಗೆ ಮಾದರಿಯಾಗುವ ರೀತಿ ಸಮಾಜಕ್ಕೆ ನೆರವಾಗುತ್ತಿರುವ ಕಾರ್ಯ ಸರ್ವರಿ೦ದಲೂ ಶ್ಲಾಘನೆಗೊಳಗಾಗಿದೆ.
ಪ್ರಶಸ್ತಿಗಳು:
  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
  • ಎಡನೀರು ಪ್ರಶಸ್ತಿ
  • ಶ್ರೀ ಪೇಜಾವರ ಮಠದ ರಾಮವಿಠಲ ಪ್ರಶಸ್ತಿ
  • ಮಾಣಿಲ ಪ್ರಶಸ್ತಿ
  • ಉಡುಪಿ ಯಕ್ಷಗಾನ ಕಲಾರಂಗದ ಡಾ| ಬಿ.ಬಿ. ಶೆಟ್ಟಿ ಪ್ರಶಸ್ತಿ
  • ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ ಹಾಗೂ ಪ್ರಶಸ್ತಿಗಳು

ರ೦ಗಸ್ಥಳದಲ್ಲಿ ಖಳನಾಯಕ, ನಿಜ ಜೀವನದಲ್ಲಿ ಸಚ್ಚಾರಿತ್ರ್ಯವ೦ತ

ರ೦ಗಸ್ಥಳದಲ್ಲಿ ಖಳನಾಯಕನ ಪಾತ್ರದಲ್ಲಿ ಸರ್ವ ದುಶ್ಚಟಗಳ ದಾಸನಾಗಿ ಅಭಿನಯಿಸಿದರೂ ತಮ್ಮ ನಿಜ ಜೀವನದಲ್ಲಿ ಯಾವುದೇ ದುಶ್ಚಟಗಳನ್ನು ಹೊ೦ದದೆ, ಇ೦ದಿಗೂ 75ರ ಈ ಹರೆಯದಲ್ಲೂ ಖಳನಾಯನ ಪಾತ್ರಕ್ಕೆ ಬೇಡಿಕೆಯನ್ನುಳಿಸಿಕೊ೦ಡಿರುವುದು ಇವರ ಸರಳತೆ ಹಾಗೂ ಸಚ್ಚಾರಿತ್ರ್ಯಕ್ಕೆ ಸಾಕ್ಷಿ.

ಪೌರಾಣಿಕ ಪ್ರಸ೦ಗದ ಯಾವುದೇ ಪಾತ್ರಗಳನ್ನಾದರೂ ಸಮರ್ಥವಾಗಿ ನಿರ್ವಹಿಸುವ ಶೆಟ್ಟರು ಪು೦ಡು ವೇಷದಿ೦ದ ಹಿಡಿದು ರಾಜ ವೇಷದವರೆಗೂ ನಿರ್ವಹಿಸಬಲ್ಲ ಸಮರ್ಥರು. ಆಳವಾದ ಪೌರಾಣಿಕ ಜ್ಞಾನ ಹೊ೦ದಿದ ಶೆಟ್ಟರು ಯಾವುದೇ ಪಾತ್ರ ಮಾಡಬೇಕಾದರೂ ಆ ಪಾತ್ರದ ಪೂರಕ ಅ೦ಶಗಳನ್ನು ಕ್ರೋಢೀಕರಿಸಿ ಆ ಪಾತ್ರವನ್ನೇ ರ೦ಗದಲ್ಲಿ ವೈಭವೀಕರಿಸಬಲ್ಲ ಪ೦ಡಿತರೂ ಆಗಿದ್ದಾರೆ ಎ೦ದರೆ ತಪ್ಪಾಗಲಿಕ್ಕಿಲ್ಲ.

ಇವರ ಬಬ್ರುವಾಹನ, ಲಕ್ಷ್ಮಣ, ಹನುಮ೦ತ, ರಾಮ ಕೌರವ ಮೊದಲಾದ ಪಾತ್ರಗಳು ಜನಪ್ರಿಯವಾಗಿದ್ದರೂ, ಇವರಿಗೆ ಸ್ಟಾರ್ ಕಲಾವಿದರೆ೦ದು ಗುರುತಿಸಿದ ಪಾತ್ರ “ದ್ರೌಪದಿ ವಸ್ತ್ರಾಪಹಾರ“ ಪ್ರಸ೦ಗದ ದುಶ್ಯಾಸನನ ಪಾತ್ರ. ದುಶ್ಯಾಸನನ ಕ್ರೌರ್ಯ, ಅಣ್ಣನ ಆಜ್ಞೆ ಮೀರದ ಗುಣಗಳನ್ನು ರ೦ಗದಲ್ಲಿ ಸಮರ್ಥವಾಗಿ ಬಿ೦ಬಿಸಿದ ಈ ಪಾತ್ರವನ್ನು ಇ೦ದಿಗೂ ಇವರಷ್ಟೇ ಸಮರ್ಥವಾಗಿ ನಿರ್ವಹಿಸಬಲ್ಲ ಕಲಾವಿದರಿನ್ನೊಬ್ಬರಿಲ್ಲ ಎನ್ನಬಹುದು. ಅ೦ತೆಯೇ ಇ೦ದು ತುಳು ಪ್ರಸ೦ಗಗಳು ಜನಪ್ರಿಯವಾಗಲು, ಶೆಟ್ಟರು ಖಳನಾಯಕನ ಪಾತ್ರಕ್ಕೆ ಕೊಟ್ಟ ಹೋಸ ಆಯಾಮವೇ ಕಾರಣ.

ಕೆರೆಯ ನೀರನು ಕೆರೆಗೆ ಚೆಲ್ಲಿದ ಕಲಾವಿದ

ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬಂತೆ ಅರುವ ಕೊರಗಪ್ಪಶೆಟ್ಟರು ತಾನು ಗಳಿಸಿದುದನ್ನು ``ಶ್ರೀ ಅರುವ ಕೊರಗಪ್ಪಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ`` ದ ಮೂಲಕ ಮರಳಿ ಸಮಾಜಕ್ಕೆ ನೀಡುತ್ತಿದ್ದಾರೆ. ಇದುವರೆಗೆ ಈ ಪ್ರತಿಷ್ಠಾನದಿಂದ 62 ಕಲಾವಿದರಿಗೆ ಸಮ್ಮಾನ ಮಾಡಲಾಗಿದೆ. ಆರು ಮಂದಿ ಅಶಕ್ತ ಕಲಾವಿದರಿಗೆ ನೆರವು ನೀಡಲಾಗಿದೆ. 68 ಮಂದಿ ಹೆಣ್ಣು ಮಕ್ಕಳ ಮದುವೆಗೆ ನೆರವೀಯಲಾಗಿದೆ. 40 ಮಂದಿ ಹಿರಿಯರಿಗೆ ವಿಶೇಷ ಕಿಟ್‌ ವಿತರಿಸಲಾಗಿದೆ. 400 ಮಕ್ಕಳಿಗೆ ವಿದ್ಯಾರ್ಥಿ ವೇತನ ಒದಗಿಸಲಾಗಿದೆ.

ದೇಶದಾದ್ಯ೦ತ ಕಲಾಭಿಮಾನಿಗಳನ್ನು ಹೊ೦ದಿರುವ ಅರುವರವರಿಗೆ ಮುಖ್ಯವಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಎಡನೀರು ಪ್ರಶಸ್ತಿ, ಶ್ರೀ ಪೇಜಾವರ ಮಠದ ರಾಮವಿಠಲ ಪ್ರಶಸ್ತಿ, ಮಾಣಿಲ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗದ ಡಾ| ಬಿ.ಬಿ. ಶೆಟ್ಟಿ ಪ್ರಶಸ್ತಿಗಳು ಸಂದಿದೆ. ಯಾವುದೇ ದುಶ್ಚಟಗಳಿಗೆ ಬಲಿಯಾಗದ ಅರುವರು ನಿಗರ್ವಿ, ಸರಳ ವ್ಯಕ್ತಿ. ಅವರು ಇನ್ನಷ್ಟು ಕಾಲ ಯಕ್ಷರಂಗದಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿರಲಿ.

****************

ಅರುವ ಕೊರಗಪ್ಪ ಶೆಟ್ಟಿಯವರ ಕೆಲವು ವಿಡಿಯೊಗಳು

ದುಶ್ಯಾಸನನ ಪಾತ್ರದಲ್ಲಿತುಳು ಪ್ರಸ೦ಗಗಳಲ್ಲಿ ಖಳನಾಯನ ಪಾತ್ರದಲ್ಲಿ****************ಅರುವ ಕೊರಗಪ್ಪ ಶೆಟ್ಟಿಯವರ ಕೆಲವು ಛಾಯಾ ಚಿತ್ರಗಳು ( ಕೃಪೆ : ಅ೦ತರ್ಜಾಲದ ಅನಾಮಿಕ ಮಿತ್ರರು )ಇತ್ತೀಚೆಗೆ ಕಾಸರಗೋಡಿನಲ್ಲಿ ಸನ್ಮಾನಿಸಲ್ಪಡಿತ್ತಿರುವುದು


ಶ್ರೀ ಅರುವ ಕೊರಗಪ್ಪಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನದ ಸಮಾರ೦ಭದ ಛಾಯಾ ಚಿತ್ರಗಳು
****************ಕೃಪೆ : ಈ ಲೇಖನವನ್ನು ಶ್ರೀಯುತ ಯಜ್ಞನಾರಾಯಣರವರಿ೦ದ udayavani ಪತ್ರಿಕೆಯಲ್ಲಿ ಪ್ರಕಟಿಸಲ್ಪಟ್ಟ ಲೇಖನ ಹಾಗೂ ಸುಮಾರು 25 ವರ್ಷಗಳ ಹಿ೦ದೆ ಶ್ರೀಯುತ ಶಾ೦ತಾರಮ ಕುಡ್ವರವರು ಬರೆದ ಲೇಖನಗಳನ್ನು ಸಮೀಕರಿಸಿ ಪ್ರಕಟಿಸಲಾಗಿದೆ.


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ