ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಜ್ವಾಜ್ವಲ್ಯಮಾನ 25 ತಿರುಗಾಟ ರಜತ ಚಂದ್ರ

ಲೇಖಕರು : ಸರವು ಕೃಷ್ಣ ಭಟ್‌
ಶುಕ್ರವಾರ, ಡಿಸೆ೦ಬರ್ 18 , 2015

ಇಪ್ಪತ್ತೆ„ದು ವರ್ಷಗಳ ಹಿಂದೆ, ಎಳೆಯ ಹುಡುಗನೊಬ್ಬನನ್ನು ಧರ್ಮಸ್ಥಳದ ಯಕ್ಷಗಾನ ಕೇಂದ್ರಕ್ಕೆ ಸೇರಿಸಲು ಬಂದ ತಾಯಿಯ ಕೊರಗನ್ನು ನೋಡಿ, ಪೂಜ್ಯರಾದ ಶ್ರೀ ವೀರೇಂದ್ರ ಹೆಗ್ಗಡೆಯವರ ಅನುಮತಿ ಪಡೆದು ಯಕ್ಷಗಾನ ಕಲಿಸುವುದಕ್ಕೆ ಹೊರಟದ್ದು ಯಕ್ಷಗಾನ ರಂಗದ ಹಿರಿಯ "ಚಂದ್ರಣ್ಣ' ಎಂದೇ ಕಲಾವಿದರಿಂದ ಕರೆಯಲ್ಪಡುವ ಕೋಳ್ಯೂರು ರಾಮಚಂದ್ರ ರಾಯರು.

ಕೋಳ್ಯೂರು ರಾಮಚಂದ್ರ ರಾಯರ ಶಿಷ್ಯ

ತರಬೇತಿ ನೀಡಿದ ಕೋಳ್ಯೂರು, ಹುಡುಗ ಚಂದ್ರನನ್ನು ತಮ್ಮ ಜತೆಯಲ್ಲಿ ತಾವಿರುವ ಮೇಳಕ್ಕೆ ಕರೆದುಕೊಂಡು ಹೋಗಿ ಸೇರಿಸಿದ್ದರು. ಆಗಿನ ದಿನಗಳೇ ಹಾಗೆ. ಕಲಿಯುವ ಮಕ್ಕಳು ತಮ್ಮ ಪಾತ್ರ ಮುಗಿದ ತತ್‌ಕ್ಷಣ ನಿದ್ದೆ ಮಾಡುವ ದಿನಗಳಲ್ಲ. ಚೌಕಿಗೆ ಇಳಿದ ಕೂಡಲೇ ಸೆಳೆಯುವ ಮೊಬೈಲ್‌ ಫೋನ್‌ಗಳು ಇಲ್ಲದ್ದರಿಂದಲೇ ಚಂದ್ರನಂತಹ‌ ಕಲಾವಿದರು ಬೆಳೆಯುವದಕ್ಕೂ ಯಕ್ಷಗಾನದ ಆಳಕ್ಕೆ ಇಳಿಯುವುದಕ್ಕೂ ಸಾಧ್ಯವಾಯಿತೇನೋ. ಬಾಲಗೋಪಾಲ, ಮುಖ್ಯ ಸ್ತ್ರೀವೇಷ ಹಾಗೂ ಬೆಳಗಿನ ತನಕ ಹಲವಾರು ವೇಷಗಳನ್ನು ಮಾಡಿ ಬೆಳೆದ‌ ಧರ್ಮಸ್ಥಳ ಚಂದ್ರಶೇಖರ ಅವರಿಗೆ ಬಪ್ಪನಾಡು, ಕರ್ನಾಟಕ, ಸಾಲಿಗ್ರಾಮ, ಎಡನೀರು, ಧರ್ಮಸ್ಥಳ ಮುಂತಾದ ಮೇಳಗಳ ರಂಗಸ್ಥಳವೇ ಪಾಠಶಾಲೆಯಾಯಿತು.

ಯಕ್ಷಗಾನದ ಸುವರ್ಣ ಯುಗದಲ್ಲಿ ರಂಗಪ್ರವೇಶ ಮಾಡಿದ ಧರ್ಮಸ್ಥಳ ಚಂದ್ರಶೇಖರ ಅವರಿಗೆ ಗುರು ಡಾ| ಕೋಳ್ಯೂರು ರಾಮಚಂದ್ರ ರಾಯರಿಂದ ಸಿಕ್ಕಿದ ಮಾರ್ಗದರ್ಶನ, ತರಬೇತಿ, ಇವರ ರಂಗದ ಮೇಲಿನ ಪಾತ್ರ, ರಂಗದ ಹೊರಗಿನ ವ್ಯಕ್ತಿತ್ವ -ಎರಡನ್ನು ಸಹ ರೂಪಿಸಿವೆ ಎನ್ನುವುದರಲ್ಲಿ ಸಂದೇಹವಿಲ್ಲ. ತಮ್ಮ ದೈನಂದಿನ ವಸ್ತುಗಳನ್ನು ಬಳಸುವ, ಜೋಪಾನವಾಗಿ ಕಾಯ್ದುಕೊಳ್ಳುವ ರೀತಿ, ಅವುಗಳ ಜತೆ ಬೆಸೆಯುವ ಭಾವನಾತ್ಮಕ ಸಂಬಂಧ, ಬೇರೆಯವರಿಗೆ ತನ್ನಿಂದ ನೋವಾಗಬಾರದು ಎಂಬ ಕಾಳಜಿ, ವಿನಯಗುಣ, ಮಿತವ್ಯಯ, ಸಮಯ ಪಾಲನೆ ಮುಂತಾದ ಗುಣಗಳು ಜೀವನಶೈಲಿ ಆದದ್ದು ಕೋಳ್ಯೂರರ ಒಡನಾಟದಿಂದ ಎಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ಚಂದ್ರಶೇಖರ ಧರ್ಮಸ್ಥಳ ಇದೀಗ ಯಕ್ಷಗಾನ ತಿರುಗಾಟದಲ್ಲಿ ಇಪ್ಪತ್ತೆ„ದನೇ ವರ್ಷವನ್ನು ದಾಟಿದ್ದಾರೆ.

ಸವ್ಯಸಾಚಿ ವೇಷಧಾರಿ

ಸ್ತ್ರೀವೇಷ, ಪುಂಡು ವೇಷ, ರಾಜವೇಷ, ಬಣ್ಣದ ವೇಷ ಎಲ್ಲದರಲ್ಲೂ ಸೈ ಎನಿಸುವ ಧರ್ಮಸ್ಥಳ ಚಂದ್ರಶೇಖರ ಅವರ ಅಭಿಮಾನಿ ಬಳಗ ಬಹು ದೊಡ್ಡದು. ಅವರ ಸುಪ್ರಸಿದ್ಧ ವೇಷಗಳ ಪಟ್ಟಿಯೂ ಬಹು ದೊಡ್ಡದು. ಮೇಳದ ತಿರುಗಾಟದಲ್ಲಿ 25 ವರ್ಷಗಳನ್ನು ಪೂರ್ತಿಗೊಳಿಸಿದ ಚಂದ್ರಶೇಖರ ಅವರ ಕಲಾಬದುಕಿನ ಯಶಸ್ಸಿನ ಗುಟ್ಟು ಎಂದರೆ ಅವರ ಶಿಸ್ತು, ಶ್ರದ್ಧೆ, ದುಡಿಮೆ, ಅಧ್ಯಯನ ಶೀಲತೆ, ಹಿತಮಿತವಾಗಿ ರಂಗಕ್ಕೊಪ್ಪುವ ಪಾತ್ರೋಚಿತ- ಸ‌ಮಯೋಚಿತ ಮಾತು, ಪಾತ್ರವನ್ನು ತೆರೆದಿಡುವ ಬಗೆ ಹಾಗೂ ಸುಪ್ರಸಿದ್ದ ಭಾಗವತರುಗಳು ಮತ್ತು ಹಿರಿಯ ಕಲಾವಿದರ ಮಾರ್ಗದರ್ಶನ. ಆದ್ದರಿಂದಲೇ ಅವರ‌ ಕಲಾಬದುಕಿಗೆ ಒಳ್ಳೆಯ ಅವಕಾಶ ನೀಡಿದ ಮೇಳದ ಯಜಮಾನರುಗಳು, ಅವರನ್ನು ರಂಗದಲ್ಲಿ ಬೆಳೆಸಿದ ಭಾಗವತರುಗಳು ಹಿರಿಯ ಕಲಾವಿದರೆಲ್ಲರು ಹೆಮ್ಮೆ ಪಡುವ ಸಮಯ ಬಂದಿದೆ.

ಚಂದ್ರಶೇಖರ ಧರ್ಮಸ್ಥಳ
ಜನನ : ನವೆ೦ಬರ್ 22, 1975
ಜನನ ಸ್ಥಳ : ಧರ್ಮಸ್ಥಳ
ಬೆಳ್ತ೦ಗಡಿ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
ಕಲಾಸೇವೆ:
ಕಳೆದ 25 ವರ್ಷಗಳಿ೦ದ ಬಪ್ಪನಾಡು, ಕರ್ನಾಟಕ, ಸಾಲಿಗ್ರಾಮ, ಎಡನೀರು, ಧರ್ಮಸ್ಥಳ ಮೇಳಗಳಲ್ಲಿ ಸವ್ಯಸಾಚಿ ಕಲಾವಿದರೆಣಿಸಿ, ಪ್ರಸ್ತುತ ತೆ೦ಕುತಿಟ್ಟಿನ ಬಹು ಬೇಡಿಕೆಯ ಅಗ್ರಮಾನ್ಯ ಪು೦ಡುವೇಷದಾರಿ.
ಇಪ್ಪತ್ತೈದು ವರ್ಷಗಳ ಮೇಳದ ತಿರುಗಾಟ ಮತ್ತು ಮಳೆಗಾಲದಲ್ಲಿ ಶ್ರೀಧರ ಭಂಡಾರಿಯವರ ಜತೆ ಯಕ್ಷ ಪ್ರವಾಸದ ಅನುಭವ ಒಂದೆಡೆಯಾದರೆ, ಯಕ್ಷಗಾನದ ಹೊರಜಗತ್ತಿಗೆ ಹೆಚ್ಚಾಗಿ ತೆರೆದುಕೊಂಡದ್ದು ವಿದ್ಯಾ ಕೋಳ್ಯೂರರ ಯಕ್ಷಮಂಜೂಷದ ತಿರುಗಾಟದಲ್ಲಿ. ದೇಶದ ಇಪ್ಪತ್ತು ರಾಜ್ಯಗಳಲ್ಲಿ ಕನ್ನಡ ಮಾತ್ರವಲ್ಲ, ಹಿಂದಿ ಯಕ್ಷಗಾನದಲ್ಲಿ ಸಮರ್ಥವಾಗಿ ಪಾತ್ರನಿರ್ವಹಿಸಿದ ಯಕ್ಷ ಮಂಜೂಷದ ಅಚ್ಚುಮೆಚ್ಚಿನ ಕಲಾವಿದ ಚಂದ್ರಶೇಖರ ಧರ್ಮಸ್ಥಳ. ಹೊರ ನಾಡಿಗರಿಗೆ, ಹೊರಭಾಷಿಗರಿಗೆ, ಹೊರದೇಶಿಗರಿಗಾಗಿ ಮಾಡುವ ಯಕ್ಷಗಾನದ ಪ್ರಸ್ತುತೀಕರಣ ಹೇಗಿರಬೇಕೆಂಬ ವಿದ್ಯಾ ಕೋಳ್ಯೂರರ ಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಧರ್ಮಸ್ಥಳ ಚಂದ್ರಶೇಖರ್‌ ಅವರ ಕೊಡುಗೆ ಶ್ಲಾಘನೀಯ. 10 ವರ್ಷಗಳ ಉತ್ತರಭಾರತದ ತಿರುಗಾಟ, ಮೂರು ವರ್ಷ ಗಳ ಅಮೆರಿಕ ಪ್ರವಾಸ, ಲಂಡನ್‌ ಪ್ರವಾಸ ಇಂದು ಇತಿಹಾಸ. ಚಂದ್ರಣ್ಣ ತಂಡದಲ್ಲಿದ್ದರೆ ಯಕ್ಷಮಂಜೂಷಕ್ಕೆ ಹತ್ತಾನೆ ಬಲ.

ಯುವ ಜನರ ಪ್ರೀತಿಯ "ಚಂದ್ರಣ್ಣ'

ಯಕ್ಷಗಾನದ ಒಬ್ಬ ಅದ್ಭುತ ಕಲಾವಿದ, ಇಂದಿನ ಸುಪ್ರಸಿದ್ಧ ಪುಂಡುವೇಷಧಾರಿ, ಯುವ ಜನರ "ಚಂದ್ರಣ್ಣ' ತಾಂತ್ರಿಕವಾಗಿ ಬಲು ಚುರುಕು. ನಮ್ಮ ಯಕ್ಷ ಮಂಜೂಷದ ತಿರುಗಾಟದ ದಿನಗಳಲ್ಲಿ ಬಹಳ ಹತ್ತಿರದಿಂದ ಅವರ ಕೌಶಲವನ್ನು ಗಮನಿಸಿ ದ್ದೇನೆ. ತಾಂತ್ರಿಕವಾಗಿ ನಮಗೆ ಬಿಡಿಸಲಾಗದ‌ ವಿಚಾರಗಳನ್ನು ಬಹಳ ಬೇಗನೆ ಗಮನಿಸಿ, "ಅದು ಹಾಗಲ್ಲ ಅಣ್ಣಾ' ಎಂದು ಬಗೆಹರಿಸುತ್ತಿದ್ದ ರೀತಿಯನ್ನು ನೋಡಿ ನಾವೆಲ್ಲ ಬೆರಗಾದದ್ದಿದೆ. ಶ್ರಮದ ದುಡಿಮೆಯ ಜತೆ ಕುಶಲತೆಯ ದುಡಿಮೆಯನ್ನು ಬಲ್ಲ ಕಲಾಸಕ್ತನೊಬ್ಬ ಅದನ್ನು ವೃತ್ತಿಯಾಗಿ ಸ್ವೀಕರಿಸಿ ಎತ್ತರಕ್ಕೆ ಏರಿ ಜನಮನ್ನಣೆ ಗಳಿಸುವಲ್ಲಿ ಹಿಂದುಳಿಯ ಲಾರ ಎಂಬುದಕ್ಕೆ ಧರ್ಮಸ್ಥಳ ಚಂದ್ರಶೇಖರ ಅವರೇ ಸಾಕ್ಷಿ.

ಪ್ರಾತ್ಯಕ್ಷಿಕೆಗಳು, ಪ್ರದರ್ಶನಗಳು, ಕಾರ್ಯಾಗಾರಗಳು, ಯೋಜನೆಗಳು, ಪ್ರಯಾಣ ಸಿದ್ಧತೆಗಳು ಎಲ್ಲದರಲ್ಲಿಯೂ ಯಕ್ಷಮಂಜೂಷಕ್ಕೆ ಚಂದ್ರಶೇಖರ ಅವರ ಕೊಡುಗೆ ಅನನ್ಯ ವಾದುದು. ದುಬೈ, ಮಸ್ಕತ್‌, ಅಮೆರಿಕ, ಇಂಗ್ಲೆಂಡ್‌ ಸೇರಿದಂತೆ ಯಕ್ಷಗಾನ ಪ್ರದರ್ಶನ ನೀಡಿದ ಹೊರದೇಶಗಳು, ಭಾರತದ ಬಹುತೇಕ ರಾಜ್ಯಗಳು, ಮಾಡಿದ ಪಾತ್ರಗಳು, ನೋಡಿ ಮೆಚ್ಚಿದ ಅಪಾರ ಜನಸಂಖ್ಯೆ - ಇವೆಲ್ಲ ಕೇವಲ ಅಂಕಿ ಅಂಶಗಳಾಗಿರದೆ, ಚಂದ್ರಶೇಖರ ಅವರ 25 ವರ್ಷಗಳ ಯಕ್ಷಗಾನ ಕಲಾ ಬದುಕಿನಲ್ಲಿ ಪ್ರತ್ಯೇಕವಾಗಿ ಎದ್ದು ಕಾಣುವ ಸಾಧನೆಯ ಅಂಶಗಳಾಗಿವೆ. ರಂಗಸ್ಥಳದಲ್ಲಿ ಅದೆಷ್ಟು ಪ್ರಖರತೆಯನ್ನು ತೋರಿದರೂ ಹೊರಜಗತ್ತಿನಲ್ಲಿ ಅಷ್ಟೇ ಸರಳ, ಸಜ್ಜನಿಕೆಯ, ಸಂಕೋಚ ಸ್ವಭಾವದವರು ಚಂದ್ರಶೇಖರ. ಇವರ ಕೊಡುಗೆಯನ್ನು ಗುರುತಿಸಿ, ಗೌರವಿಸಿ, ಬೆಂಬಲಿಸಿ ಸಂಭ್ರಮಿಸುವ ಸರದಿ ಅಭಿಮಾನಿಗಳದ್ದು.

ಮಂಗಳೂರಿಲ್ಲಿ "ರಜತ ಚಂದ್ರ' ಕಾರ್ಯಕ್ರಮ

ಯಕ್ಷ ಜಗತ್ತಿನ ಬೆನ್ನೆಲುಬಾಗಿರುವ ಟಿ. ಶ್ಯಾಮ ಭಟ್ಟರ ಗೌರವಾಧ್ಯಕ್ಷತೆಯಲ್ಲಿ, ದುಬೈಯ ಪ್ರಭಾಕರ ಸುವರ್ಣ ಅವರ ಅಧ್ಯಕ್ಷತೆಯಲ್ಲಿ ಇದೇ ಡಿಸೆಂಬರ್‌ ತಿಂಗಳ 20ರಂದು ಬೆಳಗ್ಗಿ ನಿಂದ ರಾತ್ರೆಯ ತನಕ ಮಂಗಳೂರಿನ ಸರಕಾರೀ ಕಾಲೇಜಿನ ಆವರಣದಲ್ಲಿ ನಡೆಯಲಿರುವ "ರಜತ ಚಂದ್ರ' ಕಾರ್ಯಕ್ರಮವು "ಗುರುವಂದನೆ', "ಸಮ್ಮಾನ', "ಗೌರವಾರ್ಪಣೆ', "ಕಲಾಕಾಣಿಕೆ'ಗಳ ಮಹೋನ್ನತ ಸರಣಿಯೇ ಹೌದು.

****************

ಚಂದ್ರಶೇಖರ ಧರ್ಮಸ್ಥಳಯವರ ಕೆಲವು ವಿಡಿಯೊಗಳು

ಅಭಿಮನ್ಯುವಿನ ಪಾತ್ರದಲ್ಲಿ
ಶಿಶುಪಾಲನ ಪಾತ್ರದಲ್ಲಿ
ಗಣಮಣಿಯ ಪಾತ್ರದಲ್ಲಿ
****************ಚಂದ್ರಶೇಖರ ಧರ್ಮಸ್ಥಳಯವರ ಕೆಲವು ಛಾಯಾ ಚಿತ್ರಗಳು ( ಕೃಪೆ : ನಾಗೇಶ್ ಕೆ ಎಸ್ ಆಚಾರ್ಯ, ರಾಮ್ ನರೇಶ್ ಮ೦ಚಿ ಮತ್ತು ಅ೦ತರ್ಜಾಲದ ಅನಾಮಿಕ ಮಿತ್ರರು )****************ಕೃಪೆ : udayavani


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ