ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಚಿ೦ತನ  

ಪಾರ೦ಪರಿಕ ತೆ೦ಕು ತಿಟ್ಟು ಯಕ್ಷಗಾನದ ಪರಮ ಅಭಿಮಾನಿಯೂ, ಲೇಖಕರೂ ಆಗಿರುವ ‘ರಾಜ್ ಕುಮಾರ್‘ರವರು ಯಕ್ಷಗಾನದ ವಿವಿಧ ಆಯಾಮಗಳ ಬಗ್ಗೆ ಅವರ ಬ್ಲಾಗ್ ( Blog ) http://yakshachintana.blogspot.in (ಯಕ್ಷಚಿ೦ತನ)ದಲ್ಲಿ ಕಳೆದ ೬ ವರ್ಷಗಳಿ೦ದ ವಿವಿಧ ಲೇಖನಗಳನ್ನು ಪ್ರಕಟಿಸುತ್ತಿದ್ದಾರೆ. ಇವರ `ಬ್ಲಾಗ್`ನಲ್ಲಿ ಪ್ರಕಟಗೊ೦ಡ ಲೇಖನಗಳನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸಿರುತ್ತೇನೆ.


***************

ಲೇಖಕರ ಪ್ರಕಟಿತ ಲೇಖನಗಳು


ಪತಂಗ ಚಲನೆಯ ರಜತ ಚಂದ್ರ
ರಂಗದ ಮೇಲಿನ ಜೀವನಕ್ಕೆ ರಜತಪರ್ವವನ್ನು ಆಚರಿಸುವ ಚಂದ್ರಶೇಖರರ ವೇಷ ಕಾಣುವಾಗ ಅದಾಗಲೇ ಇಪ್ಪತ್ತೈದು ಕಳೆಯಿತೆ ? ಎಂಬ ಅನುಮಾನ ಬರುವುದು ಸಹಜ. ದಣಿವರಿಯದ ಸುಂದರ ನಾಟ್ಯ ನೋವರಿಯದ ನಗುಮುಖ, ಪಾತ್ರಕ್ಕೆ ಒಪ್ಪುವ ಹಿತಮಿತವಾದ ಪರಿಶುದ್ದ ಮಾತುಗಾರಿಕೆ. ಎಲ್ಲವನ್ನು ಮೀರಿ ನಿಲ್ಲುವ ಸರಳ ಹಾಗು ವಿನಮ್ರ ನಡತೆ ಹೀಗೆ ಓರ್ವ ಪುಂಡುವೇಷಧಾರಿಯಾಗಿಯೋ ಕಲಾವಿದನಾಗಿಯೋ ಯೋಗ್ಯತೆಗಳು ಏನಿರಬೇಕೋ ಅದೆಲ್ಲವನ್ನು ಹೊಂದಿಕೊಂಡ ರಂಗದ ಪಾದರಸ ಚಲನೆಗೆ ಇಪ್ಪತೈದರ ರಂಗಾನುಭವ ಎಂದರೆ ಅಚ್ಚರಿಯಾಗುತ್ತದೆ.
ಹಕ್ಕು ಸ್ವಾಮ್ಯವೆಂಬ ಭೂತ
ನಮ್ಮಿಂದ ಅಪರಿಹಾರ್ಯವಾದ ದುರಿತಗಳು ಎದುರಾದಾಗ ಭಗವಂತನಿಗೆ ಶರಣಾಗುವುದು ಸ್ವಾಭಾವಿಕ. ಈ ದುರಿತ ಪರಿಹಾರಕ್ಕಾಗಿ ಮಂತ್ರ ಅಥವಾ ಶ್ಲೋಕ ಪಾರಾಯಣವನ್ನು ಮಾಡುತ್ತೇವೆ. ಇದೊಂದು ಆತ್ಮ ತೃಪ್ತಿ. ಇದರಿಂದ ಬಸವಳಿದ ಜೀವನದಲ್ಲಿ ಕಿಂಚಿತ್ತಾದರೂ ಆತ್ಮವಿಶ್ವಾಸ ಗಳಿಸುವ ನಂಬಿಕೆ. ಹೀಗೆ ಮಂತ್ರ ಜಪವನ್ನು ಮಾಡುವಾಗ ಪ್ರತೀ ಮಂತ್ರಕ್ಕೆ ಒಂದು ಋಷಿ ಛಂದಸ್ಸು ಎಂಬುದಿದೆ. ಅದನ್ನು ಕಡ್ಡಾಯವಾಗಿ ಪಠಿಸಲೇ ಬೇಕು. ಇಲ್ಲವಾದರೆ ನಾವು ಗೈಯ್ಯುವ ಕರ್ಮದ ಸತ್ಫಲ ಸಿಗದೇ ಉದ್ದೇಶ ಸಿದ್ಧಿಯಾಗುವುದಿಲ್ಲ. ಗುರು ಮುಖೇನ ಮಂತ್ರೋಪದೇಶವಾದಲ್ಲಿ ಈ ಛಂದಸ್ಸಿನ ಬಗ್ಗೆ ತಿಳಿಯುವುದು ಸಾಧ್ಯವಾಗುತ್ತದೆ. ಏನು ಈ ಛಂದಸ್ಸು?
``ಪಾದ ಪ್ರತೀಕ್ಷ `` ಹೊಸ ಪ್ರತೀಕ್ಷೆಗಳೊಂದಿಗೆ
ಶ್ರೀರಾಮ ಕಂಡ ವಿವಿಧ್ಯಮಯ ವ್ಯಕ್ತಿತ್ವದ ಶಬರಿಯ ಈ ಕಥಾನಕವೇ ಹೊಸನಗರ ಮೇಳದ “ಪಾದ ಪ್ರತೀಕ್ಷ” ಎಂಬ ಪ್ರಸಂಗ. ಒಂದಿಷ್ಟು ಅಬ್ಬರ, ಒಂದಿಷ್ಟು ಹಾಸ್ಯ ಶೃಂಗಾರ ಹೀಗೆ ಆರಂಭದಲ್ಲಿ ಕಂಡು ಬರುವ ಈ ಪ್ರಸಂಗ ಅಂತ್ಯದಲ್ಲಿ ಬಹಳ ಅರ್ಥಗರ್ಭಿತ ಮಂಗಳ ಹಾಡುತ್ತದೆ. ರಾಮಾಯಣ ಪ್ರಸಂಗಗಳಲ್ಲಿ ಶಬರೀ ಪ್ರಸಂಗ ಯಕ್ಷಗಾನದ ಬಯಲಾಟದಲ್ಲಿ ರಂಗವೇರುವುದು ಬಹಳ ಅಪರೂಪ. ಅಪರೂಪದ ಪ್ರಸಂಗ ರಂಗದ ಮೇಲೆ ತಂದ ಕಾರ್ಯ ಶ್ಲಾಘನೀಯ. ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಪ್ರಯೋಗಿಸುವ ನಿಟ್ಟಿನಲ್ಲಿ ಸಾಗಬೇಕು.
ಬಲಿಪ ಅಮೃತ ಭವನ
ಜನ ಜೀವನದಲ್ಲಿ ಸಂಸ್ಕೃತಿ ಜೀವಂತವಾಗಿ ಇದೆ ಎಂದಾದರೆ ಅಲ್ಲಿ ಕಲೆಯೂ ತನ್ನ ಪ್ರಭಾವವನ್ನು ಬೀರಿ ಬೆಳೆದಿದೆ ಎಂದರ್ಥ. ಕಲೆಗೂ ಜನ ಜೀವನಕ್ಕೂ, ಆ ಜೀವನವು ಬಿಂಬಿಸುವ ಸಂಸ್ಕೃತಿಗೂ ಅವಿನಾಭಾವ ಸಂಬಂಧ. ಅದಕ್ಕಾಗಿ ಕಲೆಯನ್ನು ಜನಜೀವನದ ಕನ್ನಡಿ ಎಂದು ಕರೆಯುವುದು. ಸಂಸ್ಕೃತಿಯ ಬೇರುಗಳು ಜನ ಜೀವನದಲ್ಲಿ ವಿಶಾಲವಾಗಿಯೂ ಆಳವಾಗಿಯೂ ಹಬ್ಬಿರುತ್ತದೆ. ಕಲೆ, ಆ ಬೇರಿಗೆ ಜೀವ ಜಲದಂತೆ. ಒಬ್ಬ ಕಲಾವಿದ ಸಮಾಜದಿಂದ ಗುರುತಿಸಲ್ಪಟ್ಟಾಗ, ಆತನ ಕಲೆಯನ್ನು ಗುರುತಿಸಿದಂತೆ. ಆ ಕಲಾವಿದನನ್ನು ಅಂಗೀಕರೀಸಿದಾಗ ಆ ಕಲೆ ಆತನಿಂದ ಜೀವಸೆಲೆಯನ್ನು ಹೀರಿಕೊಂಡಿದೆ ಎಂದು ಭಾವಿಸಬಹುದು.
ಯಕ್ಷಗಾನ ಕಲಾರಂಗ : ಯಕ್ಷ ಸನ್ಮಾನ
ಯಕ್ಷಗಾನ ಲೋಕದ ಪ್ರತಿಷ್ಠಿತ ಸಂಸ್ಥೆಯೊಂದರ ಕಾರ್ಯಕ್ರಮ ಆದಿತ್ಯವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು. ಹಾಗಾಗಿ ಅದನ್ನು ಕಾಣುವ ಒಂದು ಅವಕಾಶವೂ ಒದಗಿಬಂತು. ಯಕ್ಷಗಾನ ಕಲಾರಂಗ ಉಡುಪಿ, ಯಕ್ಷಗಾನದ ಒಂದು ಪ್ರತಿಷ್ಠಿತ ಸಂಸ್ಥೆ. ಹಾಗಾಗಿ ಅದರ ಕಾರ್ಯಕ್ರಮಗಳು ಸಹಜವಾಗಿ ಬಹಳ ನಿರೀಕ್ಷೆಯನ್ನು ಹುಟ್ಟು ಹಾಕಿತ್ತು. ನಲ್ವತ್ತರ ಪ್ರಬುದ್ಧ ವಯಸ್ಸಿನ ಒಂದು ಸಂಸ್ಥೆಯ ಸಂಭ್ರಮದ ಕಾರ್ಯಕ್ರಮ. ಸಂಭ್ರಮದ ಸ್ಮರಣೆಯಲ್ಲಿ ಯಕ್ಷಗಾನ ರಂಗದ ಬಹುಮಾನ್ಯ ಹಿರಿಯ ಕಲಾವಿದರಿಗೆ ಸನ್ಮಾನ. ಪ್ರತಿಯೊಬ್ಬ ಯಕ್ಷಗಾನ ಅಭಿಮಾನಿಯೂ ಅಭಿಮಾನ ಪಟ್ಟುಕೊಳ್ಳಬೇಕಾದ ಒಂದು ಕಾರ್ಯಕ್ರಮ.
ಶೀನಪ್ಪ ರೈಗಳ ರಾಜಗಾ೦ಭೀರ್ಯಕ್ಕೆ ರಾಜ್ಯೋತ್ಸವ ಪ್ರಶಸ್ತಿಯ ಗರಿ
`` ಬಲ್ಲಿರೇನಯ್ಯಾ.......ಯಾರೆಂದುಕೊಳ್ಳಬಲ್ಲಿರಿ.....ಹಾಗೆಂದುಕೊಳ್ಳಬಹುದು. ಬಂದಂತಹ ಕಾರ್ಯ ಅನೇಕವಿದೆ....`` ಯಕ್ಷಗಾನದ ಒಡ್ಡೋಲಗದ ಆದ್ಯ ಮಾತುಗಳಿವು. ಮುಖ್ಯವಾಗಿ ರಾಜವೇಶವೊಂದು ಪ್ರವೇಶಗೊಂಡು ಸಿಂಹಾಸನಾರೂಢವಾದ ಮೇಲೆ ಗತ್ತಿನಿಂದ ಸಭೆಯನ್ನು ನಾಲ್ದೆಸೆಗೆ ನೋಡಿ ಹೇಳುವಂತಹ ಈ ಮಾತಿನಿಂದಲೇ ಪ್ರೇಕ್ಷಕನನ್ನು ಸನ್ನಿಗೊಳಪಡಿಸುತ್ತವೆ. ಅದರಲ್ಲೂ ತೆಂಕುತಿಟ್ಟು ಯಕ್ಷಗಾನದ ಪ್ರವೇಶದ ಅಬ್ಬರದ ವೈಶಿಷ್ಟ್ಯ ಆ ಸೊಗಸು ಪೂರ್ಣವಾಗಿ ಅನುಭವಿಸಿದ್ದಲ್ಲಿ ಯಕ್ಷಗಾನದ ಮುಂದಿನ ಸನ್ನಿವೇಶಕ್ಕೆ ಪ್ರೇಕ್ಷಕ ಅಣಿಯಾದಂತೆ. ತೆಂಕುತಿಟ್ಟು ಯಕ್ಷಗಾನದ ರಾಜಗಾಂಭೀರ್ಯವನ್ನು ತೋರಿದ ಪ್ರಮುಖರ ಹೆಸರನ್ನು ಇಂದು ಯಕ್ಷಗಾನ ಅಭಿಮಾನಿಗಳಲ್ಲಿ ಕೇಳಿನೋಡಿ, ಆ ಪಟ್ಟಿಯಲ್ಲಿ ಮೊದಲು ಕಂಡು ಬರುವ ಹೆಸರು ಸಂಪಾಜೇ ಶೀನಪ್ಪ ರೈಗಳದ್ದು.
ಮೂಡಣದ ಪ್ರೇರಕ ಶಕ್ತಿ ಮೂಡಂಬೈಲು
ಯಕ್ಷಗಾನದಂತಹ ಒಂದು ಪಾರಂಪರಿಕ ಕಲೆ ಬೆಳೆದು ಬರಬೇಕೆಂದರೆ ಅದಕ್ಕೆ ಪರಂಪರೆಯೇ ತೆರೆದು ನಿಲ್ಲಿಸಿದ ಒಂದು ಹಾದಿ ಮುಖ್ಯವಾಗುತ್ತದೆ. ಎಳೆಯ ಕರು ಭೂಮಿಗೆ ತಾಯಿ ಒಡಲಿಂದ ಬಿದ್ದಾಗ ಅದರ ಮುಂದಿನ ಪ್ರವೃತ್ತಿಗೆ ಯಾವುದೇ ಶಾಸ್ತ್ರ ಸಮ್ಮತವಾದ ಜೀವನ ಕ್ರಮ ಸಿದ್ಧವಾಗಿರುವುದಿಲ್ಲ. ತಾಯಿ ಹಸು ಬಿದ್ದ ಕರುವನ್ನು ಸ್ವಪ್ರಚೋದನೆಯಿಂದಲೆ ತಡವುತ್ತದೆ, ಮತ್ತು ಆಮುಖೇನ ಆ ಕಂದ ಕರುವಿಗೆ ಅತ್ಯಂತ ಪ್ರಾಥಮಿಕವಾಗಿ ಸಿಗಬೇಕಾದ ಆರೈಕೆಯ ಅವಶ್ಯಕತೆಯನ್ನು ಬಾಹ್ಯ ಪ್ರಚೋದನೆ ಇಲ್ಲದೇನೆ ಅದು ನೀಡುತ್ತದೆ. ಕಂದ ಕರುವು ತೀರಾ ಅಪರಿಚಿತ ಕ್ಷೇತ್ರಕ್ಕೆ ಬಂದ ಒಡನೆ ಕರುವು ಎದ್ದು ನಿಲ್ಲುವುದಕ್ಕೆಪ್ರಯತ್ನಿಸಿ ಎದ್ದು ನಿಂತೊಡನೆ ತಾಯಿ ಕೆಚ್ಚಲನ್ನು ಅರಸಿ ಬಾಯಿ ಹಾಕಿ ಬಿಡುತ್ತದೆ.
ಒಂದು ಯುಗಾಂತ್ಯ ಕಥನ
ಸ್ಥಿತ ಪ್ರಜ್ಞತೆ ಮನುಷ್ಯನ ಪರಿಪಕ್ವತೆಯನ್ನು ತೋರಿಸುತ್ತದೆ. ಹರುಷಕ್ಕೆ ಹಿಗ್ಗದ ದುಃಖಕ್ಕೆ ಬಗ್ಗದ, ನೋವು ನಲಿವಿಗೆ ಸ್ಥಿರವಾಗಿ ನಿಲ್ಲುವವನನ್ನು ಸ್ಥಿತ ಪ್ರಜ್ಞ ಎಂದು ಹೇಳಬಹುದು. ಈ ಪರಿಪಕ್ವತೆ ಸುಲಭವಾಗಿ ಸಿದ್ಧಿಸುವುದಿಲ್ಲ. ಜೀವನಾನುಭವದ ರಸಭಾವವನ್ನು ಹೀರಿ ಸ್ವೀಕರಿಸಿದ ರೀತಿಯಲ್ಲಿ ಈ ಸಾಧನೆಯ ಗುರಿ ಅಡಗಿದೆ. ಬೆಂಕಿಯೆಂದು ತಿಳಿಯದೆ ಪತಂಗ ಹಾರುವುದುಂಟು. ಮನುಷ್ಯ ಮಾತ್ರ ಬೆಂಕಿ ಎಂದು ತಿಳಿದು, ಆ ಸುಡುವ ಅನುಭವವಾದರೂ ಅದೇ ಬೆಂಕಿಗೆ ಹಾರುವಲ್ಲಿ ಸ್ವಾರ್ಥಿಯಾಗಿಬಿಡುತ್ತಾನೆ. ಪರಿಣಾಮ ಅರಿತಿದ್ದರೂ ಸ್ವಾರ್ಥ ಅಳಿಸುವುದಿಲ್ಲ. ಇದು ಬದುಕಿನ ವಾಸ್ತವ ದರ್ಶನ ಅಂತ ಹೇಳಬಹುದಾದರೂ ಇದನ್ನೆಲ್ಲ ಮೀರಿ ನಿಂತ ವ್ಯಕ್ತಿತ್ವದ ದರ್ಶನ ಮತ್ತದರ ಅನುಭವವಾಯಿತು. ಇದು ಮಧುರ ಅನುಭವವೋ ಅಲ್ಲ ವಾಸ್ತವದ ಅರಿವೋ ನನ್ನ ಮನಸ್ಸು ಗೊಂದಲದಲ್ಲಿ ಮುಳುಗುತ್ತದೆ.
ಮಾತು ಮೌನವಾಯಿತು
ಅದು ನಾವೆಲ್ಲ ಬುದ್ದಿ ಮಲೆತು ಆಟನೋಡುವ ಹುಚ್ಚು ಹಿಡಿಸಿಕೊಂಡ ಬಾಲ್ಯದ ಸಮಯ. ಅಕ್ಕಪಕ್ಕದ ಬಯಲುಗಳಲ್ಲಿ ನಡೆಯುವ ಕಟೀಲು ಮೇಳದ ಆಟಗಳು ಇರುಳಲ್ಲೂ ಹಗಲಲ್ಲೂ ಕಾಡುತ್ತಿದ್ದವು. ಶುಲ್ಕವಿಲ್ಲದೇ ಸಿಗುತ್ತಿದ್ದ ಧಾರಾಳ ಮನರಂಜನೆಯಲ್ಲಿ ಕಟೀಲು ಮೇಳದ ಆಟಗಳೆಂದರೆ ಬಾಲ್ಯದ ಬಲು ಮುಖ್ಯ ಹಂತ ಎಂದು ಈಗ ಅನಿಸುತ್ತದೆ. ಕೈಯಲ್ಲಿ ನಾಲ್ಕಾಣೆಯ ಪಾವಲಿಯಲ್ಲೇ ಬೆಳಗು ಮಾಡುತ್ತಿದ್ದ ಕಟೀಲು ಮೇಳದ ಆಟಗಳೆಷ್ಟು ಅಪ್ಯಾಯಮಾನವಾಗಿತ್ತೋ ಅದರಲ್ಲಿ ನಿಯಮಿತವಾಗಿ ಕಾಣುವ ವೇಷಗಳು ಆ ಕಲಾವಿದರ ಮುಖವೂ ಅಪ್ಯಾಯಮಾನವಾಗಿತ್ತು. ಅಂತಹ ಮುಖಗಳಲ್ಲಿ ಕಂಡು ಬಂದ ಸುಂದರ ಮುಖವೇ ಶ್ರೀ ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿಯವರದ್ದು.
ಯಕ್ಷಗಾನದ ವಿಷಯಾಂತರಗಳ ಒಂದು ಪ್ರವರ
ಯಕ್ಷಗಾನ ಅಸ್ವಾದನೆಯೂ ಒಂದು ವಿದ್ಯೆ ಎಂದು ಹಲವು ಸಲ ಅನ್ನಿಸಿದ್ದಿದೆ. ಯಕ್ಷಗಾನದಲ್ಲಿ ಬಹು ಮುಖೀ ರಂಜನೆ ಇದೆಯೇನೋ ಸತ್ಯ. ನಾಟ್ಯ ಗಾಯನ ನಾಟಕೀಯತೆಯಂತೆ, ವಿನೋದ ಭಾವುಕ ಅದರ ಜತೆಗೆ ಚಿಂತನೆ ರಂಜನೆ ಯಕ್ಷಗಾನವನ್ನು ಪರಿಪಕ್ವ ಕಲೆಯ ಶಿಖರವನ್ನಾಗಿಸಿದೆ. ಆದರೂ ಇಂತಹ ಕಲೆಯ ಅಸ್ವಾದನೆ ತಿಳಿಯದೇ ಇದ್ದಲ್ಲಿ ಆ ಪರಿಪಕ್ವತೆ ಅಪೂರ್ಣವೆಂದೇ ಅನಿಸಲ್ಪಡುತ್ತದೆ. ಮಿತ್ರರೊಬ್ಬರು, ಇವರು ಮಿತ್ರವರ್ಗಕ್ಕೆ ತನ್ನನ್ನು ತಾನು ಸೇರಿಸಿಕೊಂಡವರು ಎಂದರೂ ಸೂಕ್ತ, ಅವರು ಕರೆ ಮಾಡಿ ನಿತ್ಯವು ನನ್ನಿಂದ ಸಿಗುವ ಯಕ್ಷಗಾನ ಪದಗಳ ಬಗ್ಗೆ ಮಾತನಾಡತೊಡಗಿದರು. ಎಂದೋ ಮರೆತು ಹೋಗಿದ್ದ ಮಂಡೆಚ್ಚ, ಕಡತೋಕರ ಸ್ವರವನ್ನು ಕೇಳಿದಾಗ ತಮ್ಮ ಬಾಲ್ಯದ ದಿನಗಳನ್ನು ನೆನಸಿಕೊಂಡರು.
ಬಲಿಪ್ಪಜ್ಜನಿಗೆ 75 ಅಂತೆ!!!!
ಯಕ್ಷಗಾನ ಎಂದರೆ ಪರಂಪರೆಯಿಂದ ಬಂದ ಜಾನಪದ ಕಲೆ. ಈ ಪರಂಪರೆಯಲ್ಲಿ ಯಕ್ಷಗಾನ ಪರಂಪರೆಯ ಉತ್ತರದಾಯಿತ್ವದಿಂದ ಕಲೆಯ ರೂವಾರಿಯಾಗಿ ಮೆರೆದವರು ಹಿರಿಯ ಭಾಗವತ ಶ್ರೀ ಬಲಿಪ ನಾರಾಯಣ ಭಾಗವತರು. ಯುಕ್ಷಗಾನದಲ್ಲಿ ಹಾಡುಗಾರಿಕೆಯಿಂದ ರಂಗಸ್ಥಳದ ಸೂತ್ರಧಾರನಾಗಿ ಅತ್ಯುನ್ನತ ಸ್ಥಾನ ಭಾಗವತರದ್ದು. ಹಾಗಾಗಿ ಇಲ್ಲಿ ಆ ಸ್ಥಾನದಲ್ಲಿ ಇದ್ದವರನ್ನು “ ಭಾಗವತ್ರೆ....” ಅಂತ ಗೌರವದಿಂದ ಸಂಭೋಧಿಸುವುದು ಕೂಡ ಒಂದು ಪರಂಪರೆಯ ಅಂಗ. ಆದರೆ ಹೀಗೆ ಕರೆಯುವಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ಸಂಭೋಧಿಸಿ ಕರೆಯುವಂತಹ ಸ್ಥಾನ ವ್ಯಕ್ತಿತ್ವ ಗಳಿಸಿಕೊಂಡಿದ್ದರೆ ಅದು ಬಲಿಪ್ಪರು ಮಾತ್ರ. ಯಾಕೆಂದರೆ ಇವರನ್ನು ಭಾಗವತ ಎಂದು ಕರೆದರೆ ಅದಕ್ಕೆ ಯಕ್ಷಗಾನ ಪ್ರಪಂಚಕ್ಕೆ ಹೊರತಾಗಿಯೂ ಆಕ್ಷೇಪ ಇರಲಾರದು.
ಯಕ್ಷಗಾನದಲ್ಲಿ ಉಚ್ಚಾರ ಶುದ್ದಿ
ಒಂದು ಯಕ್ಷಗಾನ ಬಯಲಾಟ. ಪುಂಡು ವೇಶದ ಪ್ರವೇಶ. ತಾಯಿ ಕರೆದಾಗ ಬರುವ ವೇಷವದು. ಕೋಲ್ಮಿಂಚಿನಂತೆ ಪ್ರವೇಶಿಸಿದ ವೇಶ ಒಂದಷ್ಟು ಹೊತ್ತು ಪ್ರೇಕ್ಷಕರ ಕೈ ಬಾಯಿ ದಣಿಯುವಹಾಗೆ ದಿಗಿಣ ಸುತ್ತಿ ನಿಂತುಬಿಟ್ಟಿತು. ಕುಣಿತ ಬಹಳ ಆಕರ್ಷಕವಾಗಿತ್ತು. ಕುಣಿತವೊಂದೇ ಎಲ್ಲವನ್ನು ಹೇಳುವಂತಿದ್ದರೆ ಅನ್ನಿಸಿದ್ದು ಮಾತನಾಡಲು ತೊಡಗುವಾಗ. ಆ ಪಾತ್ರ ಮಾತನಾಡ ತೊಡಗಿದ್ದು ಹೀಗೆ “ ಅಮ್ಮಾ....ನೀಣು ಕರೆದಾಗ ಓಡೋಡಿ ಬಂದೆ............ಜೋರು ಹಸಿವಾಗುತ್ತಿದೆಯಮ್ಮ. ನಾಣು ಹೇನನ್ನು ತಿನ್ನಲಿ?” ಎಂತಹಾ ಆಭಾಸ ! ಪ್ರಾಥಮಿಕ ಶಿಕ್ಷಣದ ತಳಹದಿ ಕುಸಿದ ಅನುಭವವಾಗುತ್ತದೆ.
ರಾಮ ನಿನ್ನ ಬಾಣ ತಾಗಿದಾಮೇಲೆ..............
ರಾಮ ನಿನ್ನ ಬಾಣ ತಾಗಿದಾ ಮೇಲಿನ ಪಾರಮಾರ್ಥಿಕದ ಬಗ್ಗೆ ಹೇಳುವಾಗ, ರಂಗದ ಮೇಲೆ ಮೋಕ್ಷ ಸಾಧನೆಯ ಮಾತನ್ನಾಡುವಾಗ ಒಂದು ಕ್ಷಣವಾದರೂ ಈ ಜೀವಭಾವದ ಸಂಭಂಧದ ಅರಿವಾಗದದಿರುತ್ತದೆಯೆ? ಮನುಷ್ಯನ ಹುಟ್ಟು ಸಾವಿನ ನಡುವಿನ ನಶ್ವರ ಜೀವನದ ಅರ್ಥವೇನು ಎಂದರಿವಾಗಿರುತ್ತದೆ. ಒಂದು ವೇಳೆ ಇದರ ಅರಿವಾಗದೇ ಇದ್ದರೆ, ಕಲಾವಿದನಾಗಿ ವಾಲಿಯಾಗಿ ಪರಕಾಯ ಪ್ರವೇಶ ಸಾಧ್ಯವಾಗುವುದಿಲ್ಲ. ಮಾತ್ರವಲ್ಲ ಪರಿ ಪೂರ್ಣ ವಾಲಿಯ ಪಾತ್ರವೂ ಅಗುವುದಕ್ಕೆ ಸಾಧ್ಯವಿಲ್ಲ. ರಂಗದ ಮೇಲಿನ ವಾಲಿಯ ಮಾತಿಗೆ ನಾವು ಆಸನದ ತುದಿಗೆ ಬಂದು , ಕಣ್ಣು ತುಂಬಿ ಭಾವಪರವಶರಾಗಿ ಚಪ್ಪಾಳೆ ಹೊಡೆಯುತ್ತೇವೆ. ಭಾಗವತರು ಮಂಗಳ ಹಾಡಿದಾಗ ನಮ್ಮ ಭಾವನೆಗಳಿಗೂ ಮಂಗಳ ಹಾಡಿಬಿಡುತ್ತೇವೆ. ಮತ್ತೆ ಯಥಾ ಪ್ರಕಾರ ರಾಗದ್ವೇಷದ ಪ್ರಪಂಚದ ಒಳ ಹೊಕ್ಕು ಸಾಮನ್ಯರೇ ಆಗಿಬಿಡುತ್ತೇವೆ. ಇದಲ್ಲವೇ ವಿಪರ್ಯಾಸ?
ಪಾತ್ರಾವಲೋಕನ
``ಕೇಳು ಜನಮೇಜಯನೆ ಕುರುಕುಲ ಮಾನಧನನಿಗೆ ಗೈದ ದ್ರೋಹವ...`` ಕುರುಕ್ಷೇತ್ರದ ಯುದ್ದದ ಕೊನೆಯಲ್ಲಿ ಭೀಮನಿಂದ ಕೌರವ ಹತನಾದಾಗ ದ್ರೋಣ ಪುತ್ರ ಅಶ್ವತ್ಥಾಮ ಕ್ರೋಧಗೊಂಡು ಸಿಡಿಲಿನಂತೆ ಪ್ರವೇಶಿಸುವ ಸನ್ನಿವೇಶದ ಪದವಿದು. ಆರಂಭದಿಂದಲೇ ಪ್ರಸಂಗಕ್ಕೆ ಕಿಚ್ಚು ಹಚ್ಚಿದಂತಾಗಿ ಪ್ರಸಂಗ ನಡೆ ತೀವ್ರವಾಗಿರುತ್ತದೆ. ರೋಮಾಂಚಿತನಾಗುವ ಪ್ರೇಕ್ಷಕ ವೃಂದ ಪ್ರಸಂಗದ ಮುಂದಿನ ನಡೆಗೆ ಕಾತುರವಾಗುತ್ತ ಬಂದ ಅಶ್ವತ್ಥಾಮನ ದಿಗಿಣವನ್ನು ನೋಡುತ್ತದೆ. ಈ ದಿಗಿಣದಿಂದಲೇ ಕಥೆಯ ಮುಂದಿನ ಹಂದರವನ್ನು ಮರೆಯಬಾರದಲ್ಲ? ಕುರುಕ್ಷೇತ್ರದ ಯುದ್ದ ಮುಗಿದ ನಂತರ ಕೊನೆಯದಿನ ರಾತ್ರಿ ಅಶ್ವತ್ಥಾಮನ ರಾತ್ರಿಯಾಗಿಬಿಡುತ್ತದೆ. ತಾನು ಬ್ರಾಹ್ಮಣನೆಂಬುದನ್ನು ಮರೆತು ಪೈಶಾಚಿಕ ಕೃತ್ಯವನ್ನೇ ಎಸಗಿಬಿಡುತ್ತಾನೆ. ಘೋರ ರಾತ್ರಿಯ ಭೀಭತ್ಸ ಸನ್ನಿವೇಶದ ಚಿತ್ರಣವೇ ರಕ್ತ ರಾತ್ರಿ ಪ್ರಸಂಗ. ರನ್ನನ ಗಧಾಯುದ್ದದ ಹಲವಾರು ಪದಗಳನ್ನು ಹೊಸೆದು ಸೃಷ್ಟಿಸಿದ ಜನಪ್ರಿಯ ಪ್ರಸಂಗವಿದು.
ಬಲಿಪ ವಿಚಾರ ಸಂವಾದ
ಸುಮಾರು 50 ವರ್ಷಗಳ ಸುದೀರ್ಘ ಕಾಲದ ಭಾಗವತಿಕೆ. ಯಕ್ಷಗಾನದ ಪೂರ್ವರಂಗ ಸಂಗೀತವನ್ನು ನಿಖರವಾಗಿ ಬಲ್ಲ ಏಕೈಕ ಭಾಗವತ ಎಂಬ ಹೆಗ್ಗಳಿಕೆ. ಪರಂಪರೆಯ ಯಕ್ಷಗಾನಕ್ಕೊಂದು ಮನ್ನಣೆ ನೀಡಿ ಇಂದಿಗೂ ಶುದ್ಧ ಯಕ್ಷಗಾನ ಶೈಲಿಯನ್ನು ಉನ್ನತ ಕಂಠಸಿರಿಯಿಂದ ಹಾಡುವ ತಾಕತ್ತುಳ್ಳ ಅಮೂಲ್ಯ ಸ್ವರಹೊಂದಿದ ಭಾಗವತರು. ತೆ೦ಕು ತಿಟ್ಟಿನ ಯಕ್ಷಗಾನದ ಪರಮ ಅಭಿಮಾನಿಯೂ ಲೇಖಕರೂ ಆಗಿರುವ ರಾಜ್ ಕುಮಾರ್ ಅವರ ಬ್ಲಾಗ್ http://yakshachintana.wordpress.com ನಲ್ಲಿ ಪ್ರಕಟಗೊ೦ಡ ಈ ಸ೦ದರ್ಶನವನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸಲಾಗಿದೆ.
ದುರ್ಬಲ ಪ್ರಸಂಗ
ಕಲಾವಿದ ಎಂದ ಮೇಲೆ ಒಂದಲ್ಲ ಒಂದು ಗಂಭೀರವಾದ ದೌರ್ಬಲ್ಯ ಹೊಂದಿರಬೇಕೆಂಬ ಸಹಜ ನಿಯಮವಿದೆ. ಕಲೆಯೇ ಒಂದು ದೌರ್ಬಲ್ಯವಾಗಿ ಅದಕ್ಕೆ ಸಮಾನಾಂತರವಾಗಿ ಇನ್ನೊಂದು ದೌರ್ಬಲ್ಯ ಜತೆಯಲ್ಲೇ ಇದ್ದು ಕೊಂಡು ಇನ್ನೊಂದು ಸಮಾನಾಂತರದ ಹಾದಿಯನ್ನು ಕ್ರಮಿಸದಂತೆ ಪ್ರೇರೇಪಿಸುತ್ತದೆ. ಇದು ಅರಿವಿದ್ದೂ ಅನಿವಾರ್ಯವೆಂಬಂತೆ ಅಪ್ಪಿಕೊಳ್ಳುವುದು ಮನಸ್ಸಿನ ದಾಸ್ಯವನ್ನು ಬಿಂಬಿಸುತ್ತದೆ. ಯಾವುದೇ ದೌರ್ಬಲ್ಯವೆಂದು ಪರಿಗಣಿಸಲ್ಪಡುತ್ತದೋ ಅದು ಎಂದು ಮುಖ್ಯ ಕ್ರಿಯೆಗೆ ಪೂರಕವಾಗಿರುವುದಕ್ಕೆ ಸಾಧ್ಯವೇ ಇಲ್ಲ. ಎಣ್ಣಿ ಬತ್ತಿದ ದೀಪ ತಾನಾಗಿ ಆರಿಹೋದ ಮೇಲೆ ಅದಕ್ಕೆ ಎಣ್ಣೆಯ ಬದಲು ನೀರು ಹಾಕಿದರೂ ಅಲ್ಲಿದ್ದ ಎಣ್ಣೆ ಸತ್ವವನ್ನು ಹೀರಿ ಮೊದಲಿನ ಪ್ರಭೆಯಲ್ಲೇ ಕ್ಷಣ ಹೊತ್ತು ಉರಿಯುತ್ತದೆ.
“ಅಭಿಮಾನಂ ದಂತ ಭಗ್ನಂ “
``ಕಲಾವಿದ`` ಎಂದರೆ ಕಲೆಯನ್ನು ತನ್ನೊಳಗೆ ಆವಾಹಿಸುವವನು ಎಂದು ಕರೆಸಲ್ಪಡುತ್ತಾನೆ. ಪ್ರಕೃತಿ ಸಹಜವಲ್ಲದ, ಇತರರಿಗಿಲ್ಲದ ಗುಣಗಳನ್ನು ವಿಶಿಷ್ಟ ರೂಪದಲ್ಲಿ ತನ್ನಲ್ಲಿ ಹೊಂದಿಕೊಂಡು ಇರುವ ಗುಣಗಳು ಕಲೆ ಎನಿಸಲ್ಪಡುತ್ತದೆ. ತನ್ನಲ್ಲಿರುವ ಗುಣ ಯಾವುದೇ ಆದರೂ ಕಲೆ ಎನಿಸಿಕೊಳ್ಳಬೇಕಿದ್ದರೆ ಅದರ ವೈಶಿಷ್ಟ್ಯತೆಯನ್ನು ಅನುಭವಿಸುವರಿರಬೇಕು. ಇಲ್ಲಿ ಕಲಾವಿದ ಮತ್ತು ಪ್ರೇಕ್ಷಕ ಒಂದು ತಕ್ಕಡಿಯ ತಟ್ಟೆಗಳಿದ್ದಂತೆ. ಇವುಗಳು ಸಮಾನ ಮಟ್ಟದಲ್ಲಿದ್ದರೆ ಅದು ಸಂತುಲನೆಯನ್ನು ಕಾಯ್ದುಕೊಳ್ಳುತ್ತದೆ. ಆದರೆ ಇದರಲ್ಲಿ ಒಂದು ಪರಿಮಿತಿಯನ್ನು ದಾಟಿದಾಗ ಅಸಹಜವಾಗಿ ಸಂತುಲನೆಯನ್ನು ಕಳೆದುಕೊಂಡು ಕಲೆ ಎಂಬುದು ಯಾವುದರಿಂದ ಗುರುತಿಸಲ್ಪಡಬೇಕೋ ಅಲ್ಲಿ ಅದು ಅದಾಗಿರುವುದೇ ಇಲ್ಲ.
ಭಾಗವತೋ ಅಭಿನಂದನಮ್
ನಮ್ಮ ಮಿತ್ರರ ಅಥವ ನಮ್ಮ ಆತ್ಮೀಯರಲ್ಲಿ ಯಾರೋ ಒಬ್ಬರು ಮದುವೆಯಾಗಲು ಯೋಗ ಕೂಡಿಬರದೆಯೋ ಸಂಗಾತಿಯ ಹೊಂದಾಣಿಕೆಯಾಗದೆಯೋ ಹಲವರ ಮರುಕಕ್ಕೆ ಕಾರಣರಾಗುತ್ತಾರೆ. ಎಲ್ಲಾ ಅರ್ಹತೆ ಇದ್ದು ಮದುವೆಯ ಯೋಗ ಕೂಡದೇ ಇದ್ದಲ್ಲಿ ಏನು ಮಾಡೋಣ? ಮದುವೆಯಾಗಲಿಲ್ಲ ಹೆಣ್ಣು ಅಥವಾ ಗಂಡು ಸಿಗಲಿಲ್ಲ ಎಂದು ಆತ ತನ್ನ ಸ್ವಭಾವ ಬದಲಿಸಿ ಕೆಟ್ಟವನಾಗುವುದಕ್ಕೆ ಸಾಧ್ಯವೇ? ಬಂದದ್ದು ಅನುಭವಕ್ಕೆ ಎಂದು ಪ್ರಾರಭ್ದದ ಹಾದಿಯನ್ನು ಸವೆಸುತ್ತಾ ಬದುಕುವುದು ರೂಢಿ. ಆದರೆ ಅಂಥವನು ಒಂದು ದಿನ ತನ್ನ ಮದುವೆ ಆಮಂತ್ರಣ ಹಿಡಿದು ಕೈ ಮುಂದೆ ಒಡ್ದಿದಾಗ ಕಿರುನಗುವೊಂದು ಬರದೆ ಉಳಿಯಲು ಸಾಧ್ಯವೇ? ಆ ಆಮಂತ್ರಣ ಓದುತ್ತಿದ್ದಂತೆ ಸಂಭ್ರಮಿಸುವ ಮನಸ್ಸಾಗುತ್ತದೆ. ಮದುವೆಯ ದಿನಾಂಕ ನೋಡಿ ತಮ್ಮ ಪುರುಸೊತ್ತನ್ನು ಲೆಕ್ಕ ಹಾಕುತ್ತದೆ ನಮ್ಮ ಮನಸ್ಸು. ಇತ್ತೀಚೆಗೆ `` ರಘುರಾಮಾಭಿನಂದನಮ್`` ಎಂಬ ಆಮಂತ್ರಣದ ಕರೆಯೋಲೆ ನೋಡಿದಾಗಲೂ ಇದೇ ಭಾವ ಸುಳಿದುದಕ್ಕೆ ಅಚ್ಚರಿ ಪಡಬೇಕೋ ತಿಳಿಯದು. ಯಾಕೆಂದರೆ ಯಕ್ಷಗಾನದ ತಮ್ಮ ಪ್ರತಿಭೆಯಿಂದ ಹಿರಿಯ ದೈತ್ಯ ಭಾಗವತ ಅಂತಲೇ ಹೇಳಬಹುದು ಶ್ರೀ ಪುತ್ತಿಗೆ ರಘುರಾಮ ಹೊಳ್ಳರು ಸನ್ಮಾನಿಸಲ್ಪಡುತ್ತಾರೆ ಎಂದಾಗ ಮುಖದಲ್ಲಿ ಕಿರುನಗುವೊಂದು ಮೂಡದೇ ಇದ್ದರೆ, ಅವರ ಹಾಡುಗಾರಿಕೆಗೆ ಕೈಚಪ್ಪಾಳೆ ತಟ್ಟಿದುದಕ್ಕೆ ಅರ್ಥಉಂಟೇ?
ಪರಂಪರೆಯ ಯಕ್ಷಗಾನ ಹಾಗೂ ಸೃಜನ ಶೀಲತೆ
ಇದು ಬಹಳ ಚರ್ಚೆಯಲ್ಲಿರುವ ವಿಷಯ. ಮೊದಲಾಗಿ ಈ ಪರಂಪರೆಯ ಆರಂಭ ಎಲ್ಲಿಂದ ಆಯಿತು ಒಂದು ಕಾಲದಿಂದ ಒಂದು ಕ್ರಮ ಬೆಳೆದು ಬಂದು ಮುಂದಿನ ತಲೆಮಾರಿಗೆ ಅದುವೇ ಒಂದು ಪರಂಪರೆಇದುಯಾಯಿತು. ಯಕ್ಷಗಾನದಲ್ಲೂ ಅದೇ ಪರಂಪರೆ ಶುರುವಾಯಿತು. ಅ ಕ್ಷೇತ್ರದ ಯುಗ ಪ್ರವರ್ತಕರಿಂದ ಬದಲಾವಣೆಯನ್ನು ಕಂಡು ಬೆಳೆಯುತ್ತಾ ಬಂತು.ಹೀಗಿದ್ದರೂ ಪ್ರತಿಯೊಂದು ಆವಿಷ್ಕಾರವಾದಾಗಲೂ ವಿವಾದಗಳು ಅದರ ಜತೆಯಲ್ಲೇ ಉಂಟಾಗಿತ್ತು.

ಇಂದು ಯಾವುದೇ ಕಲೆಗೆ ನವೀಕರಣಕ್ಕೆ ಮಾದರಿಯಾದ ಕ್ಷೇತ್ರ ಚಲನ ಚಿತ್ರ.. ಈ ಸಿನಿಮ ಎಂಬ ಕ್ಷೇತ್ರ ಹಲವು ಕಲೆಯ ಬದಲಾವಣೆಯಲ್ಲಿ ಪ್ರಧಾನ ಪಾತ್ರವಹಿಸಿದೆ. ಮೊದಲು ಭಾರತಿಯ ಸಿನಿಮಾ, ಕಥೆ ಪೌರಾಣಿಕ ಘಟನೆಗಳನ್ನೇ ಅವಲಂಬಿಸಿತ್ತು.
ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ