ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ  

ಹಿ೦ದಿನ 10 ಸುದ್ದಿಗಳು          ಮು೦ದಿನ 10 ಸುದ್ದಿಗಳು


ಫೆಬ್ರವರಿ 27, 2016

ಯಕ್ಷಗಾನಕ್ಕೆ ಬಂಟ್ವಾಳದ ಕೊಡುಗೆ ಹಿರಿದು: ಎಡನೀರು ಶ್ರೀ

ಬಂಟ್ವಾಳ : ಯಕ್ಷಗಾನ ಕ್ಷೇತ್ರದಲ್ಲಿ ಕಳೆದ ಹಲವಾರು ದಶಕಗಳಿಂದ ಬಂಟ್ವಾಳ ತಾಲೂಕು ಅನನ್ಯ ಸೇವೆ ಸಲ್ಲಿ ಸುತ್ತಾ ಬಂದಿದೆ. ಈ ಕ್ಷೇತ್ರಕ್ಕೆ ತಾಲೂಕು ಸಲ್ಲಿಸಿರುವ ಕೊಡುಗೆ ಹಿರಿದು ಎಂದು ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಹೇಳಿದರು. ಬಂಟ್ವಾಳ ತಾಲೂಕು ಎಡನೀರು ಶ್ರೀ ಗೋಪಾಲ ಕೃಷ್ಣ ಯಕ್ಷಗಾನ ಸಪ್ತಾಹ ಸಮಿತಿ ವತಿಯಿಂದ ಪಾಣೆಮಂಗಳೂರಿನ ಮೆಲ್ಕಾರ್ ಆರ್. ಕೆ. ಎಂಟರ್‌ಪ್ರೈಸಸ್ ಎದುರಿನ ಸಭಾಂಗಣದಲ್ಲಿ ನಡೆದ ಕಾಸರ ಗೋಡು-ಎಡನೀರು ಶ್ರೀ ಗೋಪಾಲಕೃಷ್ಣ ಕೃಪಾ ಪೋಷಿತ ಯಕ್ಷಗಾನ ಕಲಾ ಮಂಡಳಿಯವರಿಂದ ನಡೆದ ಯಕ್ಷಗಾನ ಸಪ್ತಾಹದ ಸಮಾರೋಪದಲ್ಲಿ ಅವರು ಆಶೀರ್ವಚನ ನೀಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಯಕ್ಷಗಾನ ಕಲೆಯನ್ನು ಉಳಿಸುವ ಪ್ರಯತ್ನ ಸ್ಥಳೀಯ ಸಂಘ-ಸಂಸ್ಥೆಗಳಿಂದ ನಡೆಯಬೇಕು. ಎಡನೀರು ಮೇಳವು ಕಾಲಮಿತಿ ಯಲ್ಲಿ ಪೌರಾಣಿಕ ಪ್ರಸಂಗಗಳನ್ನು ಪ್ರದರ್ಶಿಸಿ ಸಂಸ್ಕೃತಿ ಉಳಿಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದು ಉದ್ಯಮಿ ಮಾವೆ ದಿನಕರ ಭಟ್ ತಿಳಿಸಿದರು. ಆಧುನಿಕತೆ ಹಾಗೂ ನಗರೀಕರಣದ ಪ್ರಭಾವದಿಂದಾಗಿ ಯಕ್ಷಗಾನ ಕ್ಷೇತ್ರ ಇಂದು ಜನಪ್ರಿಯತೆ ಕಳೆದುಕೊಳ್ಳುತ್ತಿದೆ. ಆದರೆ ಕಲೆಯ ಅಸ್ತಿತ್ವ ಉಳಿಸಲು ಚಿಂತನೆ ನಡೆಸುತ್ತಿರುವ ಯಕ್ಷಗಾನ ಮಂಡಳಿಗಳನ್ನು ಉಳಿಸಿ-ಬೆಳೆಸುವ ಕೆಲಸ ನಡೆಸಬೇಕು. ಈ ಪ್ರಯುಕ್ತ ಗ್ರಾಮೀಣ ಪ್ರದೇಶಗಳಲ್ಲಿ ಯಕ್ಷಗಾನ ಅಧ್ಯಯನ ಕೇಂದ್ರ ಸ್ಥಾಪಿಸುವ ಕೆಲಸ ಆಗಬೇಕೆಂದು ಸಪ್ತಾಹ ಸಮಿತಿ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಅಭಿಪ್ರಾಯಪಟ್ಟರು.

ಯಕ್ಷಗಾನ ಸಪ್ತಾಹ ಸಮಿತಿ ಗೌರವಾಧ್ಯಕ್ಷ ಎ. ಸಿ. ಭಂಡಾರಿ ಉಪಸ್ಥಿತರಿದ್ದರು. ಸಪ್ತಾಹ ಸಮಿತಿ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಸ್ವಾಗತಿಸಿದರು. ಹಿರಿಯ ರಂಗ ಕಲಾವಿದ ಮಂಜು ವಿಟ್ಲ ವಂದಿಸಿದರು. ಉಪನ್ಯಾಸಕ ವಿ. ಸು. ಭಟ್ ನಿರ್ವಹಿಸಿದರು. ಸಮಾರೋಪದ ಬಳಿಕ ಬಂಟ್ವಾಳ ಯಕ್ಷಗಾನ ಸಪ್ತಾಹ ವತಿಯಿಂದ ಶಾಂಭವಿ ವಿಲಾಸ ಯಕ್ಷಗಾನ ಪ್ರದರ್ಶಿಸಲಾಯಿತು. ಫೆ. 18ರಿಂದ 24ರ ತನಕ ನಡೆದ ಯಕ್ಷಗಾನ ಸಪ್ತಾಹದಲ್ಲಿ ಭಕ್ತ ಸುಧಾಮ-ಕೃಷ್ಣಾರ್ಜುನ ಕಾಳಗ, ವೀರ ಅಭಿಮನ್ಯು-ಗದಾಪರ್ವ, ಅತಿಕಾಯ-ಇಂದ್ರಜಿತು, ರತಿ ಕಲ್ಯಾಣ, ಶ್ರೀರಾಮ ವನಗಮನ-ಗಿರಿಜಾ ಕಲ್ಯಾಣ ಪ್ರದರ್ಶನಗೊಂಡಿತು.

ಕೃಪೆ : vijaykarnataka




ಫೆಬ್ರವರಿ 23, 2016

ತೆಕ್ಕಟ್ಟೆ : ಚಂದ್ರಕಲಾ ಯಕ್ಷೊತ್ಸವ ಸಮಾರೋಪ, ಅಭಿನಂದನೆ ಮತ್ತು ಗುರುವಂದನೆ

ತೆಕ್ಕಟ್ಟೆ : 24-2-2016 ರಂದು ತೆಕ್ಕಟ್ಟೆ ಕೊಮೆಯ ಹೆಗ್ಡೆಕೆರೆ ಬೊಬ್ಬರ್ಯ ದೈವಸ್ಥಾನದ ಪ್ರಾಂಗಣದಲ್ಲಿ ಯಶಸ್ವಿ ಕಲಾವೃಂದ (ರಿ. ) ಕೊಮೆ, ತೆಕ್ಕಟ್ಟೆ ಇದರ 2015-16ನೇ ಸಾಲಿನ ಚಂದ್ರಕಲಾ ಯಕ್ಷೊತ್ಸವದ ಸಮಾರೋಪ ಮತ್ತು ಚಿತ್ರಕಲೆ ಗುರುಗಳಾದ ಗಿರೀಶ್ ವಕ್ವಾಡಿ, ಸುಗಮ ಸಂಗೀತ ಗುರುಗಳಾದ ಶ್ರೀಮತಿ ಶಾರದಾ ಹೊಳ್ಳ, ತಬಲಾ ಗುರುಗಳಾದ ಶ್ರೀ ಹರಿದಾಸ್ ಪೈ ಬ್ರಹ್ಮಾವರ, ಯೋಗ ಗುರುಗಳಾದ ನಾರಾಯಣ ಮೈಯ್ಯ, ಕರಾಟೆ ಗುರುಗಳಾದ ವಿ. ಸುಂದರಂ, ಭರತನಾಟ್ಯ ಗುರುಗಳಾದ ಶ್ರೀಮತಿ ಶ್ರೀವಿದ್ಯಾ ಉಡುಪಿ, ಯಕ್ಷಗಾನ ಭಾಗವತಿಕೆಯ ಗುರುಗಳಾದ ಕೆ. ಪಿ. ಹೆಗಡೆ, ಮದ್ದಲೆ-ಚಂಡೆ ಗುರುಗಳಾದ ದೇವದಾಸ್ ಕೂಡ್ಲಿ, ಯಕ್ಷ ನೃತ್ಯ ಗುರುಗಳಾದ ಕೊಕೂರು ಸೀತಾರಾಮ ಶೆಟ್ಟಿಯವರಿಗೆ ಗುರುವಂದನೆ ಸಲ್ಲಿಸಲಾಯಿತು. ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆನಂದ ಸಿ. ಕುಂದರ್ ಮತ್ತು ಗೀತಾನಂದ ಫೌಂಡೇಷನ್ ಟ್ರಸ್ಟಿಗಳಾದ ಗೀತಾ ಏ. ಕುಂದರ್ ರವರನ್ನು ಅಭಿನಂದನೆಯನ್ನು ಮಾಡಲಾಯಿತು.

ಅಂದು ಅತಿಥಿಗಳಾಗಿ ಭಾಗವಹಿಸಿದ ಉದ್ಯಮಿ ಪ್ರೇಮಾನಂದ ಶೆಟ್ಟಿಯವರು ಯಶಸ್ವಿ ಕಾರ್ಯಕ್ರಮ ನಡೆಸುವ ಯಶಸ್ವಿ ಕಲಾವೃಂದದವರಿಗೆ ವಂದಿಸುತ್ತಾ ಹಾಲಿನೊಳಗಿರುವ ಬೆಣ್ಣೆಯಂತೆ, ಬೀಜದೊಳಗಿರುವ ಎಣ್ಣೆಯಂತೆ ತೆರೆಯ ಹಿಂದೆ ತುಂಬಾ ಕೆಲಸ ಮಾಡುತ್ತಿರುವ ಸಂಸ್ಥೆ ಇದಾಗಿದೆ. ಇಂದು ಎಲ್ಲಾ ಪ್ರಕಾರದ ಕಾರ್ಯಕ್ರಮ ನಡೆಯಿತು. ಶಾಲಾ-ಕಾಲೇಜುಗಳಲ್ಲಿ ಬಿಟ್ಟರೆ ಒಂದು ಸಂಘ, ಸಂಸ್ಥೆಯಲ್ಲಿ ಮೊದಲ ಬಾರಿಗೆ ಈ ತರದ ಕಾರ್ಯಕ್ರಮ ನೋಡುತ್ತಿದ್ದೇನೆ ಎಂದು ಹೇಳಿದರು.

ಅಭಿನಂದನೆ ಪಡೆದ ಆನಂದ ಸಿ. ಕುಂದರ್ ರವರು ಮಾತನಾಡಿ ಯಶಸ್ವಿ ಕಲಾವೃಂದವು ಕಳೆದ 10 ವರ್ಷಗಳಿಂದ ಬಹಳ ಚಟುವಟಿಕೆ ಮಾಡಿದೆ. ಯಕ್ಷಗಾನಕ್ಕೆ ತುಂಬಾ ಹುಮ್ಮಸ್ಸು ಕೊಡುತ್ತಾ ಇರುವುದು ಹೆಮ್ಮೆ ಎನಿಸುತ್ತದೆ.

ನಮ್ಮ ಶ್ರೀಮಂತ ಕಲೆ ಓದು ಬರಹ ತಿಳಿಯದ ಜನರಿಗೆ ರಾಮಾಯಣ, ಮಹಾಭಾರತ, ಭಾಗವತದ ಕತೆಗಳಲ್ಲಿ ಅಡಕವಾಗಿರುವ ಉದಾತ್ತ ತತ್ವಗಳನ್ನು ತಿಳಿಯ ಪಡಿಸಿದ ಕಲೆಯಾಗಿದೆ. ಯಾವುದೇ ಕಲೆಯಾಗಲೀ ತನ್ನ ಪರಿಣಾಮವನ್ನು ಪ್ರೇಕ್ಷಕರ ಮೇಲೆ ಬೀರ ಬೇಕಾದರೆ ಅಂತಹ ಕಲೆಯಲ್ಲಿ ಕ್ರಿಯೆಗಳು ಮಿತವಾಗಿ ಅರ್ಥ ವ್ಯಾಪ್ತಿ, ಮೌಲ್ಯ ಹೆಚ್ಚಬೇಕು. ಆಗ ಕಲೆಯ ಪರಿಣಾಮ ಹೆಚ್ಚಾಗುತ್ತದೆ. ಇಂದು ಮೇಳಗಳಲ್ಲಿ ನುರಿತ ಕಲಾವಿದರ ಕೊರತೆ ತುಂಬಾ ಇದೆ. ಇಂಥಹ ಯಕ್ಷಗಾನ ತರಗತಿಯಿಂದ ಕಲಾವಿದರ ಕೊರತೆಯನ್ನು ನೀಗಿಸಬಹುದು ಎಂದರು.

ಹಾಗೆ ವೇದಿಕೆಯಲ್ಲಿ ಜ್ಯೋತಿಷ್ಯರಾದ ರಮೇಶ್ ರಾವ್, ಶನೈಶ್ಚರ ದೇವಸ್ಥಾನ ಆಡಳಿತ ಮುಕ್ತೇಶರರಾದ ಬಸವ ಪೂಜಾರಿ, ಅಭಿಮಾನ್ ಯುವಕ ಮಂಡಲದ ಅಧ್ಯಕ್ಷರಾದ ರಾಜು ಪೂಜಾರಿ, ಶ್ರೀಮತಿ ಗೀತಾ ಏ. ಕುಂದರ್, ಮಲ್ಯಾಡಿ ಶಿವರಾಮ ಶೆಟ್ಟಿ ಮತ್ತು ಕೊಕೂರು ಸೀತಾರಾಮ ಶೆಟ್ಟಿಯವರು ಉಪಸ್ಥಿತರಿದ್ದರು. ಹೆರಿಯ ಮಾಸ್ತರ್ ವರದಿ ವಾಚನ ಮಾಡಿದರು. ಸೀತಾರಾಮ ಶೆಟ್ಟಿ ಕೆ. ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆ ಹಾಗೂ ಧನ್ಯವಾದವನ್ನು ಸುಜಯೀಂದ್ರ ಹಂದೆ ನಿರ್ವಹಿಸಿದರು. ಕಾರ್ಯಕ್ರಮದ ಮೊದಲು ತರಗತಿ ವಿದ್ಯಾರ್ಥಿಗಳಿಂದ ಚಿತ್ರ ಕುಂಚ ಪ್ರದರ್ಶನ ಪ್ರದರ್ಶನ, ಸುಗಮ ಸಂಗೀತ, ತಬಲಾ-ಹರ್ಮೋನಿಯಂ ಜುಗಲ್ ಬಂದಿ, ಯೋಗ ವಿಹಾರ, ಕರಾಟೆ ರಿಯು ಶೋ, ಭರತನಾಟ್ಯ, ಕಾರ್ಯಕ್ರಮ ನಡೆಯಿತು. ನಂತರ ಯಕ್ಷಗಾನದಲ್ಲಿ ನವ ಭಾಗವರ ರಂಗಪ್ರವೇಷ ಮತ್ತು ಯಶಸ್ವಿ ಮಕ್ಕಳ ಮೇಳದ ಕಲಾವಿದರಿಂದ ದ್ರೌಪದಿ ಪ್ರತಾಪ ಯಕ್ಷಗಾನ ಪ್ರದರ್ಶನ ನಡೆಯಿತು.












ಫೆಬ್ರವರಿ 23, 2016

ಯಕ್ಷಗಾನ ಕಲೆ ಸ್ಥಾಯಿಯಾಗಿ ಉಳಿಯಬೇಕು : ಕಮಲಾದೇವಿ ಪ್ರಸಾದ ಆಸ್ರಣ್ಣ

ಮಂಗಳೂರು : ಯಕ್ಷಗಾನ ಕ್ಷೇತ್ರಕ್ಕೆ ವಿದ್ವಾಂಸರ ಪ್ರವೇಶವಾದ ಬಳಿಕ ಅದು ಕೇವಲ ಜನಪದೀಯ ಕಲೆಯಾಗಿ ಉಳಿಯದೇ ಶ್ರೀಮಂತ ಕಲೆಯಾಗಿ ಹೊರ ಹೊಮ್ಮಿತು. ಯಕ್ಷರಂಗದಲ್ಲಿ ಹೊಸತನ ಕಾಯ್ದುಕೊಳ್ಳುವುದರೊಂದಿಗೆ ಈ ಕಲೆ ಸ್ಥಾಯಿಯಾಗಿ ಉಳಿಯುವಲ್ಲಿ ಕಲಾವಿದರು, ಕಲಾ ರಸಿಕರು ಮತ್ತು ಸಂಘಟಕರು ಗುರುತರ ಪಾತ್ರ ವಹಿಸಬೇಕು ಎಂದು ಶ್ರೀ ಕ್ಷೇತ್ರ ಕಟೀಲಿನ ವಿದ್ವಾನ್‌ ಕಮಲಾದೇವಿ ಪ್ರಸಾದ ಆಸ್ರಣ್ಣ ಅವರು ಹೇಳಿದರು.

ನಗರದ ಎಸ್‌ಡಿಎಂ ಕಾನೂನು ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರದ ವತಿಯಿಂದ ಎರಡು ದಿನ ಕಾಲ ನಡೆಯುವ "ಯಕ್ಷೋತ್ಸವ-ರಜತ ಸಂಭ್ರಮ-2016' ಅಂತರ್‌ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆಯನ್ನು ಅವರು ಸೋಮವಾರ ಉದ್ಘಾಟಿಸಿದರು.

ಯಕ್ಷಗಾನದಿಂದ ನಮ್ಮ ಕರಾವಳಿ ಕನ್ನಡ ನಾಡಿನ ಪ್ರಭಾವಳಿಯಾಗಿ ಪ್ರಕಾಶಿಸುತ್ತಿದೆ. ಈ ಕ್ಷೇತ್ರದಲ್ಲಿ ಪ್ರಸ್ತುತ ಹಲವು ಅಭಿವೃದ್ಧಿಗಳು ನಡೆಯುತ್ತಿವೆ. ಆದರೂ ಕಲೆಯ ಮೂಲ ಸ್ವರೂಪ ಕಾಯ್ದುಕೊಳ್ಳುವಲ್ಲಿ ಕಲಾವಿದರು, ಪ್ರೇಕ್ಷಕರ ಹೊಣೆಗಾರಿಕೆ ಮಹತ್ತರವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ವಿದ್ವಾಂಸ ಡಾ| ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರರಾವ್‌, ಪ್ರೊ| ಅರಳ ರಾಜೇಂದ್ರ ಶೆಟ್ಟಿ, ಬೆಳಪು ದೇವಿಪ್ರಸಾದ್‌ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.

ಪ್ರಾಂಶುಪಾಲ ಡಾ| ತಾರಾನಾಥ್‌, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ದಿವ್ಯಾ ರಾವ್‌, ಯಕ್ಷೋತ್ಸವ ವಿದ್ಯಾರ್ಥಿ ಸಂಚಾಲಕರಾದ ಸೋಹನ್‌ ಆಳ್ವ, ಜೀವನ್‌ಕುಮಾರ್‌ ಮೊದಲಾದವರು ಉಪಸ್ಥಿತರಿದ್ದರು.

ಯಕ್ಷೋತ್ಸವ ಸಂಚಾಲಕ ಸಾಯಿನಾಥ್‌ ಮಲ್ಲಿಗೆಮಾಡು ಸ್ವಾಗತಿಸಿದರು. ನರೇಶ್‌ ಮಲ್ಲಿಗೆಮಾಡು ವಂದಿಸಿದರು. ರಕ್ಷಿತಾ ನಿರೂಪಿಸಿದರು.





ಕೃಪೆ : udayavani




ಫೆಬ್ರವರಿ 21, 2016

ಪುಳಿಂಚರಿಂದ ಯಕ್ಷಗಾನಕ್ಕೆ ಸ್ಮರಣೀಯ ಸೇವೆ

ಮಂಗಳೂರು : ಯಕ್ಷಗಾನದ ಮೂಲಕ ಕರಾವಳಿಯ ಶ್ರೀಮಂತಿಕೆ ಜಗದಗಲ ವಿಸ್ತಾರ ಪಡೆದುಕೊಂಡಿದ್ದು, ಇದರಲ್ಲಿ ನೂರಾರು ಯಕ್ಷಸಾಧಕರ ಪರಿಶ್ರಮವಿದೆ. ಈ ನಿಟ್ಟಿನಲ್ಲಿ ಯಕ್ಷಗಾನದ ಮೇರು ಕಲಾವಿದ ದಿ| ಪುಳಿಂಚ ರಾಮಯ್ಯ ಶೆಟ್ಟಿ ಯಕ್ಷಗಾನಕ್ಕೆ ನೀಡಿದ ಸೇವೆ ಸ್ಮರಣೀಯ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

ಪುಳಿಂಚ ಸೇವಾ ಪ್ರತಿಷ್ಠಾನ ಮಂಗ ಳೂರು ಆಶ್ರಯದಲ್ಲಿ ಬಂಟ್ವಾಳ ಬಾಳ್ತಿಲ ಗ್ರಾಮದ ಶ್ರೀ ಕಾರಣೀಕದ ಕಲ್ಲುರ್ಟಿ ದೈವಸ್ಥಾನದಲ್ಲಿನ ಬಯಲು ರಂಗ ಮಂಟಪದಲ್ಲಿ ಶನಿವಾರ ಸಂಜೆ ನಡೆದ "ಪುಳಿಂಚ ಪ್ರಶಸ್ತಿ ಹಾಗೂ ಪುಳಿಂಚ ಸೇವಾ ರತ್ನ ಪುರಸ್ಕಾರ ಪ್ರದಾನ' ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

"ಪುಳಿಂಚ ಸಂಸ್ಮರಣಾ ಗ್ರಂಥ' ಅನಾವರಣಗೊಳಿಸಿದ ಆಳ್ವಾಸ್‌ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಎಂ. ಮೋಹನ್‌ ಆಳ್ವ ಮಾತನಾಡಿ, ಪುಳಿಂಚ ರಾಮಯ್ಯ ಶೆಟ್ಟಿ ಯಕ್ಷಗಾನಕ್ಕೆ ಹೊಸ ಭಾಷ್ಯ ಬರೆಯುವಲ್ಲಿ ಯಶಸ್ವಿಯಾದರು. ಪ್ರಸಕ್ತ ಅವರ ನೆನಪಿನಲ್ಲಿ ಯಕ್ಷಗಾನ ಸಾಧಕರನ್ನು ಗುರುತಿಸಿ ಸಮ್ಮಾನಿಸುವ ನಿಟ್ಟಿನಲ್ಲಿ ಅವರ ಪುತ್ರ ಶ್ರೀಧರ ಶೆಟ್ಟಿ ಪುಳಿಂಚ ನಡೆಸುತ್ತಿರುವ ಕಾರ್ಯಕ್ರಮ ಅರ್ಥಪೂರ್ಣ ಎಂದರು.

ಯಕ್ಷಗಾನದ ಹಿರಿಯ ಸಾಧಕರಾದ ಮಿಜಾರು ಅಣ್ಣಪ್ಪ, ಡಾ| ಕೋಳ್ಯೂರು ರಾಮಚಂದ್ರ ರಾವ್‌, ಕುಂಬ್ಳೆ ಸುಂದರ್‌ ರಾವ್‌, ಕೆ.ಎಚ್‌. ದಾಸಪ್ಪ ರೈ, ಅನಂತರಾಮ ಬಂಗಾಡಿ, ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರಿಗೆ ಪುಳಿಂಚ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿವೃತ್ತ ಎಎಸ್‌ಐ ಕೇಪು ಗೌಡ, ದೈವ ನರ್ತಕ ಪದ್ಮ ಪಂಬದ ಅವರಿಗೆ ಪುಳಿಂಚ ಸೇವಾ ರತ್ನ ಪುರಸ್ಕಾರ ಪ್ರದಾನ ಮಾಡಲಾಯಿತು.

ಶ್ರೀ ಕಟೀಲು ಮೇಳದ ಸಂಚಾಲಕ ಕಲ್ಲಾಡಿ ದೇವೀಪ್ರಸಾದ್‌ ಶೆಟ್ಟಿ ದೀಪ ಪ್ರಜ್ವಲನ ನಡೆಸಿದರು. ಆರ್‌ಎಸ್‌ಎಸ್‌ ಪ್ರಮುಖ ಪ್ರಕಾಶ್‌ ಪಿ.ಎಸ್‌. ಅಧ್ಯಕ್ಷತೆ ವಹಿಸಿದ್ದರು. ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಭಾಸ್ಕರ್‌ ರೈ ಕುಕ್ಕುವಳ್ಳಿ ಅವರು "ಪುಳಿಂಚ' ಸ್ಮತಿ-ಕೃತಿ ಗ್ರಂಥ ಪರಿಚಯ ಮಾಡಿದರು. ಶಾಸಕಿ ಶಕುಂತಳಾ ಶೆಟ್ಟಿ, ವಿ. ಪರಿಷತ್‌ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌ ಉಪಸ್ಥಿತರಿದ್ದರು.

ಪುಳಿಂಚ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ವಕೀಲ ಶ್ರೀಧರ ಶೆಟ್ಟಿ ಪುಳಿಂಚ ಸ್ವಾಗತಿಸಿದರು. ಪುಳಿಂಚ ಚಿಟ್ಸ್‌ ಮ್ಯಾನೇಜಿಂಗ್‌ ಡೈರೆಕ್ಟರ್‌ ಪ್ರತಿಭಾ ಶ್ರೀಧರ ಶೆಟ್ಟಿ ಪುಳಿಂಚ ವಂದಿಸಿದರು. ದಯಾನಂದ ಕತ್ತಲ್‌ಸಾರ್‌ ನಿರ್ವಹಿಸಿದರು.





ಕೃಪೆ : udayavani




ಫೆಬ್ರವರಿ 19, 2016

ನಾಳೆ ಪುಳಿಂಚ ಪ್ರಶಸ್ತಿ ಪ್ರದಾನ, ಕೃತಿ ಬಿಡುಗಡೆ

ಮಂಗಳೂರು : ಯಕ್ಷಗಾನದ ಹಿರಿಯ ಬಣ್ಣದ ವೇಷಧಾರಿ, ತುಳು ಪ್ರಸಂಗಗಳ ಹಾಸ್ಯ ನಟ ಹಾಗೂ ಪ್ರಸಂಗಕರ್ತ ದಿ. ಪುಳಿಂಚ ರಾಮಯ್ಯ ಶೆಟ್ಟಿ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಹಾಗೂ ಕೃತಿ ಬಿಡುಗಡೆ ಫೆ.20ರಂದು ಮಧ್ಯಾಹ್ನ 2 ಗಂಟೆಗೆ ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ಚೆಂಡೆ ಕಾರಣಿಕ ಕಲ್ಲುರ್ಟಿ ದೈವಸ್ಥಾನದಲ್ಲಿ ನಡೆಯಲಿದೆ ಎಂದು ಪುಳಿಂಚ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶ್ರೀಧರ ಶೆಟ್ಟಿ ಪುಳಿಂಚ ತಿಳಿಸಿದ್ದಾರೆ.

ದಿ. ಪುಳಿಂಚ ರಾಮಯ್ಯ ಶೆಟ್ಟಿ
ಹಿರಿಯ ಯಕ್ಷಗಾನ ಕಲಾವಿದರಾದ ಮಿಜಾರು ಅಣ್ಣಪ್ಪ, ಡಾ. ಕೋಳ್ಯೂರು ರಾಮಚಂದ್ರ ರಾವ್, ಕುಂಬ್ಳೆ ಸುಂದರ ರಾವ್, ಕೆ.ಎಚ್. ದಾಸಪ್ಪ ರೈ, ಅನಂತರಾಮ ಬಂಗಾಡಿ ಮತ್ತು ಬೊಟ್ಟಕೆರೆ ಪುರುಷೋತ್ತಮ ಪೂಂಜಾ ಅವರಿಗೆ ಪುಳಿಂಚ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನಿವೃತ್ತ ಎಎಸ್‌ಐ ಕೇಪುಗೌಡ ಮತ್ತು ದೈವನರ್ತಕ ಪದ್ಮ ಪರಂಬ ಅವರಿಗೆ ಪುಳಿಂಚ ಸೇವಾ ರತ್ನ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದರು.

ದಿ.ಪುಳಿಂಚ ರಾಮಯ್ಯ ಶೆಟ್ಟಿ ಅವರ ಬದುಕು ಸಾಧನೆ ಗಳನ್ನೊಳಗೊಂಡ ಪುಳಿಂಚ ಸ್ಮೃತಿ- ಕೃತಿ ಗ್ರಂಥವನ್ನು ಬಿಡುಗಡೆ ಗೊಳಿಸಲಾಗುವುದು. ಡಾ. ಎಂ. ಮೋಹನ್ ಆಳ್ವ ಕೃತಿ ಬಿಡುಗಡೆ ಗೊಳಿಸಲಿದ್ದಾರೆ. ಕಟೀಲು ಯಕ್ಷಗಾನ ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಹೊಸದಿಗಂತದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಪಿ.ಎಸ್., ಹಿರಿಯ ವಿಮರ್ಶಕ ಡಾ. ಎಂ. ಪ್ರಭಾಕರ ಜೋಷಿ, ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಶಾಸಕಿ ಶಕುಂತಳಾ ಶೆಟ್ಟಿ, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ಬಾಳ್ತಿಲ ಗ್ರಾಪಂ ಅಧ್ಯಕ್ಷ ವಿಠಲ್ ನಾಯ್ಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಸ್ಮೃತಿ- ಕೃತಿ ಗ್ರಂಥದ ಸಂಪಾದಕ ಭಾಸ್ಕರ ರೈ ಕುಕ್ಕುವಳ್ಳಿ, ಪುಳಿಂಚ ಸೇವಾ ಪ್ರತಿಷ್ಠಾನದ ಕೋಶಾಧಿಕಾರಿ ಪ್ರತಿಭಾ ಶ್ರೀಧರ ಶೆಟ್ಟಿ, ಸುನಿಲ್ ಕುಮಾರ್ ಶೆಟ್ಟಿ ಬೆಜ್ಜದಗುತ್ತು, ಸತೀಶ್ ಪೂಜಾರಿ ಚೆಂಡೆ ಬಾಳ್ತಿಲ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.



ಕೃಪೆ : vijaykarnataka




ಫೆಬ್ರವರಿ 13, 2016

ಕುಮಟಾ ಹವ್ಯಕ ಸಭಾಭವನದಲ್ಲಿ ಇಂದಿನಿಂದ ಯಕ್ಷೋತ್ಸವ ಕಾರ್ಯಕ್ರಮ

ಕುಮಟಾ : ಯಕ್ಷಗಾನ ಸಂಶೋಧನಾ ಕೇಂದ್ರ ಕುಮಟಾ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಫೆ.13 ಹಾಗೂ 14ರಂದು ಪಟ್ಟಣದ ಹವ್ಯಕ ಸಭಾಭವನದಲ್ಲಿ ಯಕ್ಷೋತ್ಸವ ಕಾರ್ಯಕ್ರಮ ನಡೆಯಲಿದೆ. ಯಕ್ಷೋತ್ಸವದಲ್ಲಿ ಹೊಸ ಚಿಗುರು ಹಳೆಬೇರು (ರಾಗ-ರಸ-ಶೋಧ), ಸಂಶೋಧಕರಿಗೆ ಸನ್ಮಾನ, ಮೋಹಮೇನಕೆ ಯಕ್ಷಗಾನ, ಯಕ್ಷ-ಗಾನ-ನತ್ಯ-ಚಿತ್ರ, ಗೀರಾಮಾಯಾಣ, ಗಾನಸೌರಭ ಹಾಗೂ ಯಕ್ಷಗಾನ ವರ್ಣಚಿತ್ರ ಪ್ರದರ್ಶನ ನಡೆಯಲಿದೆ. ಫೆ.13ರಂದು 3 ಗಂಟೆಗೆ ಡಾ.ರೇವತಿ ರಾವ್ ಕಾರ್ಯಕ್ರಮ ಉದ್ಘಾಟಿಸುವರು. ನಂತರ ಹೊಸ ಚಿಗುರು ಹಳೆಬೇರು ಕಾರ್ಯಕ್ರಮದಲ್ಲಿ ಪರಂಪರೆಯ ಹಾಡುಗಳನ್ನು ಕಮಲಾ ಹೆಗಡೆ ಗುಣವಂತೆ (ಹಾಡಿನ ಕಮಲಕ್ಕ), ಪವಿತ್ರಾ ಕೆ. ಭಟ್ ಯಾಣ ಹಾಗೂ ರಾಧಾ ಹೆಗಡೆ ರಾಗಿಹೊಸಳ್ಳಿ ಹಾಡಲಿದ್ದಾರೆ.

ಅದೇ ಮಟ್ಟು ಹಾಗೂ ರಾಗದಲ್ಲಿ ಸರ್ವೇಶ್ವರ ಹೆಗಡೆ ಮುರೂರು ಯಕ್ಷಗಾನ ಪದ್ಯಗಳನ್ನು ಹಾಡುವರು. ಮದ್ದಳೆಯಲ್ಲಿ ಅನಂತಪದ್ಮನಾಭ ಪಾಠಕ ಸಹಕರಿಸುವರು. 'ಸಂಶೋಧಕರಿಗೆ ಸನ್ಮಾನ' ಕಾರ್ಯಕ್ರಮದಲ್ಲಿ ಕಬ್ಬಿನಾಲೆ ವಸಂತ ಭಾರಧ್ವಾಜ ಅವರನ್ನು ಸನ್ಮಾನಿಸಲಾಗುವುದು. ಉಮೇಶ ಶಾಸ್ತ್ರಿ ಭಾಗವಹಿಸಲಿದ್ದಾರೆ. ಸಂಜೆ 6.30ರಿಂದ 8.30 ರವರೆಗೆ ಮಂಟಪ ಪ್ರಭಾಕರ ಉಪಾಧ್ಯ ಹಾಗೂ ತಂಡದವರಿಂದ 'ಮೋಹಮೇನಕೆ' ಯಕ್ಷಗಾನ ನಡೆಯುವುದು. ಫೆ.ರಂದು ಬೆಳಗ್ಗೆ 10ರಿಂದ ಯಕ್ಷ-ಗಾನ-ನತ್ಯ-ಚಿತ್ರ ಎಂಬ ಅಪರೂಪದ ಕಾರ್ಯಕ್ರಮ ನಡೆಯುವುದು.

ಭಾಗವತರಾಗಿ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರೊಂದಿಗೆ ಮದ್ದಳೆ, ಚಂಡೆಯಲ್ಲಿ ಸುನೀಲ ಭಂಡಾರಿ ಹಾಗೂ ರಾಕೇಶ ಮಲ್ಯ ಸಹಕರಿಸುವರು. ನೃತ್ಯಾಭಿನಯದಲ್ಲಿ ಉದಯ ಕಡ್ಬಾಳ ಹಾಗೂ ಸುಬ್ರಹ್ಮಣ್ಯ ಯಲಗುಪ್ಪ ಭಾಗವಹಿಸುವರು. ಸನ್ನಿವೇಶದ ಚಿತ್ರಣವನ್ನು ನೀರ್ನಳ್ಳಿ ಗಣಪತಿ ಅವರು ಚಿತ್ರಕಲೆಯಲ್ಲಿ ಪ್ರದರ್ಶಿಸುವರು. ಜತೆಯಲ್ಲಿ ಜಿ.ಡಿ. ಭಟ್ಟ ಕೆಕ್ಕಾರು ಹಾಗೂ ಇತರ ಕಲಾವಿದರಿಂದ ಯಕ್ಷಗಾನ ವರ್ಣಚಿತ್ರ ಪ್ರದರ್ಶನ ನಡೆಯಲಿದೆ. ಮಧ್ಯಾಹ್ನ 2ರಿಂದ 3.30ರವರೆಗೆ ಶ್ರೀಪಾದ ಭಟ್ ಹಾಗೂ ಸಂಗಡಿಗರಿಂದ ಗೀತ ರಾಮಾಯಣ ಕಾರ್ಯಕ್ರಮ ನಡೆಯುವುದು.

ಸಂಜೆ 4.10ರಿಂದ ಗಾನ ಸೌರಭ ಕಾರ್ಯಕ್ರಮವನ್ನು ಕುಮಟಾದ ಸದಭಿರುಚಿಯ ಸಾಂಸ್ಕೃತಿಕ ಸಂಗಮ 'ಸೌರಭ' ಹಾಗೂ ಬೆಂಗಳೂರಿನ ಸಪ್ತಕ ಸಂಸ್ಥೆಗಳು ಜಂಟಿಯಾಗಿ ಸಂಘಟಿಸಿವೆ. ಇದರಲ್ಲಿ ಹಿಂದೂಸ್ತಾನಿ ಗಾಯಕ ಪಂ. ಸಂಜೀವ ಅಭ್ಯಂಕರ ಪುಣೆ ಇವರಿಂದ ಗಾಯನ ಹಾಗೂ ಅಭಂಗವಾಣಿ ನಡೆಯಲಿದೆ. ಪಂ.ರವೀಂದ್ರ ಯಾವಗಲ್ ತಬಲಾ ಸಾಥ್ ನೀಡುವರು ಹಾಗೂ ಸಂವಾದಿನಿಯಲ್ಲಿ ಪಂ.ವ್ಯಾಸಮೂರ್ತಿ ಕಟ್ಟಿ ಸಹಕರಿಸುವರು.



ಕೃಪೆ : vijaykarnataka




ಫೆಬ್ರವರಿ 8, 2016

ಕಲಾಭಿಮಾನಿಗಳ ಮಹತ್ವ ಸಾರಿದ ಸನ್ಮಾನ

ಶಿರಸಿ : ಕಲಾಕೊಡುಗೆಗೆ ಯಕ್ಷಗಾನದ ಕಲಾವಿದರನ್ನು ಗೌರವಿಸುವುದನ್ನು ಕೇಳಿದ್ದೇವೆ, ನೋಡಿದ್ದೇವೆ...ಆದರೆ ಇಲ್ಲಿ ಯಕ್ಷಕಲೆಯನ್ನು ನಿರಂತರವಾಗಿ ವೀಕ್ಷಣೆಯ ಮೂಲಕ ಕಲಾ ಜೀವಂತಿಕೆಗೆ ಪ್ರೇರಕರಾದ ಕಲಾಭಿಮಾನಿಗಳನ್ನು ಹದಯಸ್ಪರ್ಶಿಯಾಗಿ ಸನ್ಮಾನಿಸಲಾಯಿತು....ಈ ಮೂಲಕ ಕಲೆ ಉಳಿವಿಗೆ ಕಲಾವಿದರಷ್ಟೇ ಅಲ್ಲದೇ ಕಲಾಪ್ರೇಕ್ಷಕರೂ ಅಷ್ಟೇ ಮಹತ್ವ ಎಂಬುದನ್ನು ಸಾರಿ ಹೇಳಲಾಯಿತು.

ಇಂಥದ್ದೊಂದು ಅಪರೂಪದ ಕಾರ್ಯಕ್ರಮ ನಗರದ ತೋಟಗಾರರ ಕಲ್ಯಾಣ ಮಂಟಪದಲ್ಲಿ ಭಾನುವಾರ ಸಂಜೆ ಆಯೋಜನೆಯಾಗಿತ್ತು. ಇಲ್ಲಿಯ ಯಕ್ಷಪ್ರಿಯ ಬಳಗದ ವಾರ್ಷಿಕೋತ್ಸವದಲ್ಲಿ ಇಂಥ ವಿಧಾಯಕ, ವಿಭಿನ್ನ ಕಾರ್ಯಕ್ರಮ ಸಂಘಟನೆಯಾಗಿ ಮೆಚ್ಚುಗೆಗೆ ಪಾತ್ರವಾಯಿತು. ವೇದಿಕೆಯಲ್ಲಿ ಅಭಿನಯಿಸಿ ಕಲಾಸಕ್ತರನ್ನು ರಂಜಿಸುವ, ತಮ್ಮ ಮಾತುಗಾರಿಕೆ ಮೂಲಕ ಮನತಟ್ಟುವ, ಪೌರಾಣಿಕ ಪಾತ್ರಗಳಿಗೆ ಜೀವ ತುಂಬುವ ಕಲಾವಿದರನ್ನು ಗೌರವಿಸಿ ಇನ್ನಷ್ಟು ಕಲಾಸಾಧನೆಗೆ ಪ್ರೇರಣೆ ನಿರಂತರವಾಗಿ ಸಂಘಟನೆ ಮೂಲಕ ನಡೆಯುತ್ತಿರುತ್ತದೆ. ಆದರೆ ಇಂಥ ಕಲಾವಿದರ ಕಲಾಪ್ರತಿಭೆ ವೀಕ್ಷಿಸಿ ಪರಂಪರಾ ಕಲೆ ಉಳಿಸುವುದಕ್ಕೆ ಮುಂಭಾಗದಲ್ಲಿ ಪ್ರೇಕ್ಷಕರ ಅಗತ್ಯವೂ ಅಷ್ಟೇ ಅವಶ್ಯ. ಕಲಾವಿದರಿದ್ದೂ ಕಲಾಭಿಮಾನಿಗಳಿಲ್ಲದಿದ್ದರೆ ಪ್ರಯೋಜನವಿಲ್ಲದಂತಾಗುತ್ತದೆ. ಇದನ್ನು ಮನಗಂಡ ಯಕ್ಷಪ್ರಿಯ ಬಳಗ ಅಪರೂಪದ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಈ ಭಾಗದ 15ಮಂದಿ ಕಲಾಪ್ರೇಕ್ಷಕರನ್ನು ಗೌರವಿಸಿತು.

15ಮಂದಿಗೆ ಗೌರವಾರ್ಪಣೆ: ಯಕ್ಷ ಕಲೆಯ ವೀಕ್ಷಣೆಯನ್ನು ನಿರಂತರವಾಗಿ ಜೀವನದ ಭಾಗವಾಗಿಸಿಕೊಂಡಿರುವ ನಾರಾಯಣ ಹೆಗಡೆ ಆಡಳ್ಳಿ, ಶ್ರೀನಿವಾಸರಾವ್ ಕಂಚಿಕೊಪ್ಪ, ಸುಬ್ರಾಯ ಹೆಗಡೆ ಶಿಂಗನಳ್ಳಿ, ಆರ್.ಜಿ.ಭಟ್ಟ ಶಿರಸಿ, ಗಣಪತಿ ಭಟ್ಟ ತುಡಗುಣಿ, ಜಿ.ಆರ್.ಹೆಗಡೆ ಆಲ್ಮನೆ, ರಾಮಕಷ್ಣ ಭಟ್ಟ ಕಗ್ಗುಂಡಿ, ಐ.ಪಿ.ಹೆಗಡೆ ಗೋಳಗೋಡ, ಚಂದ್ರಶೇಖರ ಶೆಟ್ಟಿ ಶಿರಸಿ, ಗಣಪತಿ ಹೆಗಡೆ ವಾರಣಾಸಿಮನೆ, ಎಸ್.ಎಸ್.ಭಟ್ಟ ಶಿರಸಿ, ವಾಸುದೇವ ಶಾನಭಾಗ, ಉಮೇಶ ಭಟ್ಟ ವರ್ಗಾಸರ, ವಿರೂಪಾಕ್ಷ ಭಾಗವತ ಶೀಗೇಹಳ್ಳಿ, ಗಣೇಶ ಎಸ್.ಹೆಗಡೆ ಕೆಶಿನ್ಮನೆ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಯಕ್ಷಗಾನ ಭಾಗವತ ನಾರಾಯಣ ಭಾಗವತ ನೆಬ್ಬೂರು, ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ, ಉದ್ಯಮಿ ಉಪೇಂದ್ರ ಪೆ, ಕಲಾಪೋಷಕ ಆರ್.ಜಿ.ಭಟ್ಟ ವರ್ಗಾಸರ , ಯಕ್ಷಪ್ರಿಯ ಬಳಗದ ಕಮಲಾಕರ ಹೆಗಡೆ ಕೂಗ್ತೆಮನೆ, ಗಿರಿಧರ ಕಬ್ನಳ್ಳಿ ಪಾಲ್ಗೊಂಡಿದ್ದರು.



ಕೃಪೆ : vijaykarnataka




ಫೆಬ್ರವರಿ 8, 2016

ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾ ಮಂಡಳಿ ಪ್ರಶಸ್ತಿ ಪ್ರದಾನ

ಉಡುಪಿ : ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾ ಮಂಡಳಿಯ 58ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವು ರವಿವಾರ ಅಂಬಲಪಾಡಿ ದೇವಸ್ಥಾನದ ಆವರಣದಲ್ಲಿ ಜರಗಿತು.

ಕಿದಿಯೂರು ಆಚಾರ್ಯ ಪ್ರಶಸ್ತಿಯನ್ನು ಇಂದ್ರಾಳಿ ಪ್ರಭಾಕರ ಆಚಾರ್ಯ, ಕಪ್ಪೆಟ್ಟು ಬಾಬು ಶೆಟ್ಟಿಗಾರ್‌ ಪ್ರಶಸ್ತಿಯನ್ನು ರಾಧಾಕೃಷ್ಣ ನಾಯಕ್‌ ಹಾಗೂ ಕುತ್ಪಾಡಿ ಆನಂದ ಗಾಣಿಗ ಪ್ರಶಸ್ತಿಯನ್ನು ಪುಂಡರೀಕಾಕ್ಷ ಉಪಾಧ್ಯ ಅವರು ಸ್ವೀಕರಿಸಿದರು.

ಶ್ರೀ ಅಂಬಲಪಾಡಿ ದೇವಸ್ಥಾನನದ ಧರ್ಮದರ್ಶಿ ಡಾ| ನಿ.ಬೀ. ವಿಜಯ ಬಲ್ಲಾಳ್‌ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಸದಸ್ಯ ಪಳ್ಳಿ ಕಿಶನ್‌ ಹೆಗ್ಡೆ, ಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಗಣೇಶ್‌ ರಾವ್‌, ಹಟ್ಟಿಯಂಗಡಿ ಶ್ರೀ ಮರಲಾದೇವಿ ದೇವಸ್ಥಾನದ ಧರ್ಮದರ್ಶಿ ಮಂಜುನಾಥಯ್ಯ ಉಪಸ್ಥಿತರಿದ್ದರು.

ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾ ಮಂಡಳಿ ಅಧ್ಯಕ್ಷ ಮುರಲಿ ಕಡೆಕಾರ್‌ ಸ್ವಾಗತಿಸಿದರು. ಕಾರ್ಯದರ್ಶಿ ಕೆ.ಜೆ. ಕೃಷ್ಣ ವರದಿ ವಾಚಿಸಿದರು. ನಟರಾಜ ಉಪಾಧ್ಯ ಕಾರ್ಯಕ್ರಮ ನಿರ್ವಹಿಸಿದರು. ಮಂಜುನಾಥ ತೆಂಕಿಲ್ಲಾಯ ವಂದಿಸಿದರು.



ಕೃಪೆ : udayavani




ಫೆಬ್ರವರಿ 4, 2016

ಪಾರ್ತಿಸುಬ್ಬ ಪ್ರಶಸ್ತಿ: ತಿಮ್ಮಾರೆಡ್ಡಿ ಆಯ್ಕೆ

ಬೆಂಗಳೂರು : ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ 2015ರ ಪ್ರಶಸ್ತಿ ಪ್ರಕಟವಾಗಿದ್ದು, ಹೊಸಪೇಟೆ ತಾಲೂಕು ಬಯಲು ಗದ್ದಿಗೇರಿಯ ಬಯಲಾಟ ಕಲಾವಿದ ಗುಂಡ್ಲ ವದ್ದಿಗೇರಿ ತಿಮ್ಮಾರೆಡ್ಡಿ (76) ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯೂ ಒಂದು ಲಕ್ಷ ರೂ. ನಗದು, ಪ್ರಶಸ್ತಿ ಫ‌ಲಕ ಮತ್ತು ಪ್ರಮಾಣ ಪತ್ರವನ್ನು ಒಳಗೊಂಡಿರುತ್ತದೆ ಎಂದು ಹೇಳಿದರು.

10 ಕಲಾವಿದರಿಗೆ ಗೌರವ ಪ್ರಶಸ್ತಿ

2015ರ ವಾರ್ಷಿಕ ಗೌರವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದ್ದು, 10 ಮಂದಿ ಹಿರಿಯ ಕಲಾವಿದರಿಗೆ ಗೌರವ ಪ್ರಶಸ್ತಿ ನೀಡಲಾಗುವುದು.

ಕುಂದಾಪುರದ ಕಲಾವಿದ ಕಂದಾವರ ರಘುರಾಮಶೆಟ್ಟಿ (ಯಕ್ಷಗಾನ ಪ್ರಸಂಗಕರ್ತ, ಬಡಗುತಿಟ್ಟು), ಹೊನ್ನಾವರ ತಾಲೂಕು ಕೊಂಡಾಕುಳಿಯ ಹಡಿನಬಾಳ ಶ್ರೀಪಾದ ಹೆಗಡೆ (ಯಕ್ಷಗಾನ ಕಲಾವಿದ ಬಡಾ ಬಡಗು), ಮಂಗಳೂರಿನ ಅಸೈಗೊಳಿಯ ಬೊಟ್ಟಿಕೆರೆ ಪುರುಪೋತ್ತಮ ಪೂಂಜಾ(ಭಾಗವತರು ತೆಂಕುತಿಟ್ಟು), ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ ರಾಮನಾಯ್ಕ (ಯಕ್ಷಗಾನ ಪ್ರಸಾದನ), ವಿಜಯಪುರ ಬಸವನ ಬಾಗೇವಾಡಿ ತಾಲೂಕಿನ ಅವ್ವಪ್ಪ ಸಣ್ಣಪ್ಪ ಅಳ್ಳಿಚಂಡಿ(ಶ್ರೀಕೃಷ್ಣ ಪಾರಿ ಜಾತ), ಚಿಕ್ಕೋಡಿ ತಾಲೂಕು ಧುಳಗವಾಡಿಯ ಯಮುನಾಬಾಯಿ ಲಕ್ಷ್ಮಣ ಕಲಾಚಂದ್ರ (ಸಣ್ಣಾಟ), ಹಾಸನ ಜಿಲ್ಲೆ ಆಲೂರು ತಾಲೂಕು ಮರಸುಕೊಪ್ಪಲಿನ ಗೌರಮ್ಮ (ತೊಗಲುಗೊಂಬೆಯಾಟ), ಬಳ್ಳಾರಿ ಜಿಲ್ಲೆ ಕೂಡ್ಲಗಿ ತಾಲೂಕಿನ ಎಸ್‌. ಸೊಲ್ಲಮ್ಮ (ಬಯಲಾಟ), ಮಧುಗಿರಿ ತಾಲೂಕು ತೋಟ ಮಡಗಲು ಗ್ರಾಮದ ಸಣ್ಣ ತಿಮ್ಮಯ್ಯ (ಮೂಡಲಪಾಯ ಯಕ್ಷಗಾನ) ಹಾಗೂ ಚಿತ್ರದುರ್ಗದ ಬೆಳಗಟ್ಟದ ಎ.ಕೆ.ಮಾರಯ್ಯ(ಬಯಲಾಟ ಮದ್ದಳೆಗಾರ) ಅವರನ್ನು ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

50 ಸಾವಿರಕ್ಕೆ ಹೆಚ್ಚಳ

ಕಳೆದ ಬಾರಿ ವಾರ್ಷಿಕ ಗೌರವ ಪ್ರಶಸ್ತಿ ಪುರಸ್ಕೃತರಿಗೆ ತಲಾ 10 ಸಾವಿರ ರೂ.ಗಳನ್ನು ನಗದು ಬಹುಮಾನವಾಗಿ ನೀಡಲಾಗುತ್ತಿತ್ತು. ಆದರೆ 2015ರ ಸಾಲಿನಲ್ಲಿ ಈ ಮೊತ್ತವನ್ನು ರಾಜ್ಯ ಸರಕಾರ 50 ಸಾವಿರ ರೂ.ಗಳನ್ನು ಕೊಡಲು ತೀರ್ಮಾನಿಸಿದೆ ಎಂದು ಅಕಾಡೆಮಿ ಅಧ್ಯಕ್ಷ ನಾಡೋಜ ಬೆಳಗಲ್ಲು ವೀರಣ್ಣ ತಿಳಿಸಿದರು.



ಕೃಪೆ : udayavani




ಜನವರಿ 30, 2016

ಯಕ್ಷಗಾನ ವಿಶ್ವಮಾನ್ಯ ಕಲೆ : ಡಾ.ನಿ.ಬೀ ವಿಜಯ ಬಲ್ಲಾಳ್

ಬ್ರಹ್ಮಾವರ : ಕರಾವಳಿ ಭಾಗದ ಯಕ್ಷ ಗಾನ ಕಲೆ ಇಂದು ವಿಶ್ವಮಾನ್ಯವಾಗಿದೆ. ಜಾತಿ ಬೇಧವಿಲ್ಲದೆ ಸುಸಂಸ್ಕೃತರಾಗಿ ಬಾಳಲು ನಮ್ಮ ಹಿರಿಯರು ಯಕ್ಷಗಾನದ ಮೂಲಕ ಕಂಡು ಕೊಂಡರು. ಇಂದಿನ ಯುವ ಪೀಳಿಗೆ ಇದರ ಬಗ್ಗೆ ಆಸಕ್ತಿ ತಾಳಿ ಕಲಿತಾಗ ಅದು ಮುಂದೆ ಬೆಳೆದು ಕಿರಿಯರಿಗೆ ದಾರಿ ದೀಪವಾಗುತ್ತದೆ ಎಂದು ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬೀ ವಿಜಯ ಬಲ್ಲಾಳ್ ಹೇಳಿದರು.

ಬೈಕಾಡಿಯ ಬೈಕಾಡ್ತಿ ಅಮ್ಮನವರ ಯಕ್ಷಗಾನ ಕಲಾ ಸಂಘದ ದ್ವಿತೀಯ ವಾರ್ಷಿಕೋತ್ಸವ ಮತ್ತು ಬೈಕಾಡ್ತಿ ಯಕ್ಷ ಪ್ರಶಸ್ತಿ ಪ್ರಧಾನ ಹಾಗೂ ನೂತನ ಕೃತಿ ನಾಗ ತೇಜಸ್ವಿ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಯುವಕರ ಯಕ್ಷಗಾನ ಸಂಘ ಹುಟ್ಟಿಕೊಳ್ಳುತ್ತಿರು ವುದು ಕಂಡಾಗ ಯಕ್ಷಗಾನಕ್ಕೆ ಖಂಡಿತಾ ಅಳಿವಿಲ್ಲ ಅನಿಸುತ್ತದೆ. ಇದಲ್ಲದೇ ಯಕ್ಷ ಶಿಕ್ಷಣದ ಮೂಲಕ ಅನೇಕ ಕಲಾವಿದರು ಮತ್ತು ಪ್ರೇಕ್ಷಕರು ಸೃಷ್ಟಿಯಾಗುತ್ತಿರು ವುದು ಒಳ್ಳೆಯ ವಿಚಾರ ಎಂದು ಹೇಳಿದರು.

ಸಮಾರಂಭದಲ್ಲಿ ಬ್ರಹ್ಮಾವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸುರೇಂದ್ರ ಶೆಟ್ಟಿ, ಬೈಕಾಡ್ತಿ ಅಮ್ಮನವರ ದೇವಸ್ಥಾನದ ಆಡಳಿತ ಮೊಕ್ತೇಸರ ಜಯಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.

ಇದೇ ಸಂದರ್ಭ ರಾಧಾಕೃಷ್ಣ ಚೇರ್ಕಾಡಿ ಇವರಿಗೆ ಬೈಕಾಡ್ತಿ ಯಕ್ಷ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಸವ ಶೆಟ್ಟಿ ಬೈಕಾಡಿ ಇವರನ್ನು ಗೌರವಿಸ ಲಾಯಿತು. ಕೃತಿ ರಚನಾಕಾರರಾದ ರಿತೇಶ್ ಮತ್ತು ಪ್ರಶಾಂತ್ ಇವರನ್ನು ಸನ್ಮಾನಿಸಲಾಯಿತು. ರಾಜೇಶ್ ಆಚಾರ್ಯ ಸ್ವಾಗತಿ ಸಿದರು. ವಿಶ್ವ ರೂಪ ಮಧ್ಯಸ್ಥ ವಂದಿಸಿ ದರು. ದಯಾನಂದ ಕಾರ್ಯಕ್ರಮ ನಿರೂ ಪಿಸಿದರು. ನಂತರ ಸಂಘದ ಸದಸ್ಯರಿಂದ ನೂತನ ಪ್ರಸಂಗ ನಾಗ ತೇಜಸ್ವಿ ಯಕ್ಷಗಾನ ಪ್ರದರ್ಶನ ನಡೆಯಿತು.



ಕೃಪೆ : prajavani




ಹಿ೦ದಿನ 10 ಸುದ್ದಿಗಳು          ಮು೦ದಿನ 10 ಸುದ್ದಿಗಳು


ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ