ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ  

ಹಿ೦ದಿನ 10 ಸುದ್ದಿಗಳು          ಮು೦ದಿನ 10 ಸುದ್ದಿಗಳು


ಜನವರಿ 27, 2016

ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ಉದ್ಯಮ ರತ್ನ ಪಶಸ್ತಿ ಪ್ರದಾನ

ಬೆಂಗಳೂರು : ಕರ್ನಾಟಕ ಪ್ರದೇಶ ಹೊಟೇಲ್‌ ಮತ್ತು ಉಪಾಹಾರ ಮಂದಿರಗಳ ಸಂಘ ಹಾಗೂ ಬೃಹತ್‌ ಬೆಂಗಳೂರು ಹೊಟೇಲುಗಳ ಸಂಘದ ಸಹಯೋಗದಲ್ಲಿ ಬೆಂಗಳೂರು ರವೀಂದ್ರ ಕಲಾ ಕ್ಷೇತ್ರದಲ್ಲಿ ರವಿವಾರ ನಡೆದ ಉದ್ಯಮ ರತ್ನ ಮತ್ತು ಆತಿಥ್ಯ ರತ್ನ ಪಶಸ್ತಿ ಪ್ರದಾನ ಸಮಾರಂಭದಲ್ಲಿ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಮಂತ್ರಾಲಯ ಮಠದ ಶ್ರೀ 1008 ವಿಭುದೇಂದ್ರತೀರ್ಥ ಶ್ರೀಪಾದರ ಉಪಧಿಸ್ಥಿತಿಯಲ್ಲಿ ಉಡುಪಿಯ ಹೊಟೇಲು ಉದ್ಯಮಿ ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ “ಉದ್ಯಮ ರತ್ನ ಪಶಸ್ತಿ’ ಪ್ರದಾನ ನಡೆಯಿತು.

ನಿಸ್ವಾರ್ಥ ಸೇವೆ, ದಾನ ಹಾಗೂ ಪರೋಪಕಾರದಿಂದ ಜನಾನುರಾಗಿಧಿಯಾಗಿದ್ದು, ಉಡುಪಿಯ ರಂಗಧಿಭೂಮಿ, ಜಿಲ್ಲಾ ಹೊಟೇಲ್‌ ಮಾಲಕರ ಸಂಘ, ತಲ್ಲೂರು ಫ್ಯಾಮಿಲಿ ಟ್ರಸ್ಟ್‌, ಕ್ರಿಶ್ಚಿಯನ್‌ ಹೈಸ್ಕೂಲ್‌ ಹಳೆವಿದ್ಯಾರ್ಥಿ ಸಂಘ, ಚಿಟ್ಟಾಣಿ ಅಭಿಮಾನಿಗಳ ಬಳಗ ಇತ್ಯಾದಿ ಸಂಘ-ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ ಸೇವೆ, ಯಕ್ಷಗಾನ ಕಲಾರಂಗ, ತುಳುಕೂಟ, ಬಂಟರ ಸಂಘ, ಲಯನ್ಸ್‌ಕ್ಲಬ್‌, ಲಾಫ‌ರ್ ಕ್ಲಬ್‌, ನಿತ್ಯಾನಂದ ಕೋ-ಆಪ್‌. ಸೊಸೈಟಿ, ಭಾರತೀಯ ರೆಡ್‌ಕ್ರಾಸ್‌ ಸಂಘ, ಹಿರಿಯ ನಾಗರಿಕರಸಂಘ ಮೊದಲಾದ ಧಾರ್ಮಿಕ, ಸಾಂಸ್ಕೃತಿಕ, ವಿದ್ಯಾ ಕ್ಷೇತ್ರ, ಸಂಘ- ಸಂಸ್ಥೆ ಗಳಲ್ಲಿ ಹಾಗೂ ಹೊಟೇಲು ಉದ್ಯಮ ದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ಪ್ರದಾನ ಮಾಡಧಿಲಾಯಿತು.

ಅವರು ಉಡುಪಿ ಜಿಲ್ಲೆಯ 157 ಶಾಲೆಗಳ ವಿದ್ಯಾರ್ಥಿಗಳು ಹಾಗೂ ಗ್ರಂಥಾಲಯಗಳಿಗೆ 12,000ಕ್ಕೂ ಮಿಕ್ಕಿ ನೀತಿ ಬೋಧಕ ಪುಸ್ತಕಗಳನ್ನು ಉಚಿತವಾಗಿ ವಿತರಿಸಿರುತ್ತಾರೆ. ಜಯನಗರ ಶಾಸಕ ವಿಜಯ ಕುಮಾರ್‌, ಕರ್ಣಾಟಕ ಬ್ಯಾಂಕಿನ ಎಂಡಿ ಜಯರಾಮ ಭಟ್‌, ಕಿಯೋನಿಕ್ಸ್‌ನ ನಿರ್ದೇಶಕ ಯು.ಬಿ. ವೆಂಕಟೇಶ್‌, ಕರ್ನಾಟಕ ಪ್ರದೇಶ ಹೊಟೇಲ್‌ ಮತ್ತು ಉಪಾಹಾರ ಮಂದಿರಗಳ ಸಂಘದ ಅಧ್ಯಕ್ಷ ಎಂ. ರಾಜೇಂದ್ರ, ಗೌ. ಕಾರ್ಯದರ್ಶಿ ಮಧುಕರ ಎಂ. ಶೆಟ್ಟಿ, ಪದಾಧಿಕಾರಿಗಳು, ಬೃಹತ್‌ ಬೆಂಗಳೂರು ಹೊಟೇಲ್‌ಗಳ ಸಂಘದ ಅಧ್ಯಕ್ಷ ಬಿ. ಚಂದ್ರಶೇಖರ ಹೆಬ್ಟಾರ್‌, ಗೌರವಾಧ್ಯಕ್ಷ ಕೆ.ಎನ್‌. ವಾಸುದೇವ ಅಡಿಗ, ಆತಿಥ್ಯರತ್ನ ಪ್ರಶಸ್ತಿ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.



ಕೃಪೆ : karavalikirana




ಜನವರಿ 25, 2016

ದುಬೈಯಲ್ಲಿ ಶ್ರೀಕೃಷ್ಣ ಒಡ್ಡೋಲಗ

ದುಬೈ : ಸುಮಾರು 12 ವರ್ಷಗಳ ಹಿಂದೆ ದುಬೈಯಲ್ಲಿ ಉದ್ಯೋಗ ನಿಮಿತ್ತ ನೆಲೆನಿಂತ ಸಮಾನ ಆಸಕ್ತರು ಒಗ್ಗೂಡಿ ಯಕ್ಷಮಿತ್ರರು ದುಬೈ ಎಂಬ ಸಂಘಟನೆಯ ಮೂಲಕ ಮರಳು ಗಾಡಿನಲ್ಲಿ ಯಕ್ಷಕೃಷಿ ಪ್ರಾರಂಭಿಸಿದರು. ನಿಧಾನವಾಗಿ ದುಬೈ ಯಕ್ಷರಸಿಕರ ಮನದಲ್ಲಿ ನೆಲೆನಿಂತ "ಯಕ್ಷಮಿತ್ರರು' ದುಬೈ ನೆಲದಲ್ಲೂ ಯಕ್ಷಗಾನ ಬೆಳೆಸಬೇಕೆಂಬ ಹೆಬ್ಬಯಕೆಯಿಂದ, ಇಲ್ಲಿಯ ಮಕ್ಕಳಿಗೆ ಯಕ್ಷಗಾನ ತರಬೇತಿ ಕೊಡಲಾರಂಭಿಸಿತು.

ಹೀಗೆ ಕಟ್ಟಿಕೊಂಡ ಯಕ್ಷಮಿತ್ರರ ಮಕ್ಕಳ ತಂಡ ಈಚೆಗೆ ದುಬೈ ತುಳುಕೂಟದ ವತಿಯಿಂದ ಜರಗಿದ ತುಳು ಪರ್ಬದ ಅವಸರದಲ್ಲಿ ಪ್ರದರ್ಶಿಸಿದ ಯಕ್ಷ ತುಣುಕು -ಪರಂಪರೆಯ ಶ್ರೀಕೃಷ್ಣ ಒಡ್ಡೋಲಗ ಅಂದು ಪ್ರದರ್ಶನಗೊಂಡ ಬೇರೆಲ್ಲ ಕಾರ್ಯಕ್ರಮಗಳಿಗಿಂತ ಭಿನ್ನವಾಗಿ ಜನಾಕರ್ಷಣೆ ಪಡೆಯಿತು.

ದುಬೈ ಅಲ್‌ ನಸರ್‌ ಲೀಸರ್‌ಲ್ಯಾಂಡಿನ ಐಸ್‌ರಿಂಕ್‌ ಒಳಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾಗವತರಾಗಿ ಮೆರುಗಿ ತ್ತವರು ಕೃಷ್ಣಪ್ರಸಾದ್‌ ಭಟ್‌ ಸುರತ್ಕಲ್‌. ಹಿಮ್ಮೇಳದಲ್ಲಿ ವೆಂಕಟೇಶ ಶಾಸಿŒ ಪುತ್ತಿಗೆ, ವಿಕ್ರಮ ಶೆಟ್ಟಿ ಕಡಂದಲೆ, ಚಂದ್ರಮೋಹನ್‌ ಶೆಟ್ಟಿಗಾರ್‌ ಮೂಲ್ಕಿ, ಸೀತಾರಾಮ ಶೆಟ್ಟಿ ಚಿಲಿಂಬಿ ಇದ್ದರು.

ಶ್ರೀಕೃಷ್ಣನಾಗಿ ಕು| ಅದಿತಿ ದಿನೇಶ್‌ ಶೆಟ್ಟಿ ಆಕರ್ಷಕ ನಗುಮೊಗದಿಂದ ರಂಜಿಸಿದರು. ಕಾಳಿಂದಿಯಾಗಿ ಕು| ಆದಿತ್ಯ ದಿನೇಶ್‌ ಶೆಟ್ಟಿ, ನೀಲೆಯಾಗಿ ಕು| ಸ್ಮತಿ ಲಕ್ಷ್ಮೀಕಾಂತ ಭಟ್‌, ಭದ್ರೆಯಾಗಿ ಕು| ಪ್ರತೀಕ್‌ ಪಕ್ಕಳ, ಸತ್ಯಭಾಮೆಯಾಗಿ ಕು| ಸಮಂತ ಹೆಗ್ಡೆ, ರುಕ್ಮಿಣಿಯಾಗಿ ಸ್ವಾತಿ ಶರತ್‌ ಆಚಾರ್‌ ಮಿಂಚಿದರು. ತುಳು ಪರ್ಬಕ್ಕಾಗಿಯೆ ಆಗಮಿಸಿದ್ದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಕಲಾವಿದರನ್ನು ಅಶೀರ್ವದಿಸಿ ಮೆಚ್ಚುಗೆಯ ಮಾತುಗಳನ್ನಾಡಿದ್ದು ಯಕ್ಷಮಿತ್ರರ ಪಾಲಿಗೆ ಹೆಮ್ಮೆಯೇ ಸರಿ.

ಈ ಪ್ರದರ್ಶನದ ಯಶಸ್ಸಿನಲ್ಲಿ ಯಕ್ಷಮಿತ್ರರ ಬೆನ್ನೆಲುಬಾಗಿ ಚಿದಾನಂದ ಪೂಜಾರಿ ವಾಮಂಜೂರು ಮತ್ತು ದಿನೇಶ್‌ ಶೆಟ್ಟಿ ಕೊಟ್ರಂಜ ಅವರ ಕೊಡುಗೆ ಗಮನಾರ್ಹ. ಮುಖ ವರ್ಣಿಕೆ, ವೇಷಭೂಷಣಗಳಲ್ಲಿ ಸಹಕರಿಸಿದವರು ವಾಸು ಬಾಯಾರು, ದಿನೇಶ್‌ ಬಿಜೈ, ರಿತೇಶ್‌ ಕುಮಾರ್‌, ಬಾಲಕೃಷ್ಣ ಶೆಟ್ಟಿಗಾರ್‌, ಹರೀಶ್‌ ಯೆಯ್ನಾಡಿ, ವಸಂತ ಶೇರ್ವೆಗಾರ್‌, ಗಿರೀಶ್‌ ನಾರಾಯಣ ಕಾಟಿಪಳ್ಳ. ಪ್ರದರ್ಶನದ ಪರಿಕಲ್ಪನೆ- ನಿರ್ದೇಶನ ನಾಟ್ಯಗುರುಗಳಾದ ಶೇಖರ್‌ ಡಿ. ಶೆಟ್ಟಿಗಾರ್‌ ಕಿನ್ನಿಗೋಳಿ ಅವರದ್ದಾಗಿತ್ತು.



ಕೃಪೆ : udayavani




ಜನವರಿ 18, 2016

ಯಕ್ಷಗಾನಕ್ಕೆ ಪ್ರತ್ಯೇಕ ಪ್ರಶಸ್ತಿ: ನಿರ್ಣಯ

ಶಿವಮೊಗ್ಗ : ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ ಹಾಗೂ ಜಿಲ್ಲೆಯ ಎಲ್ಲ ಯಕ್ಷಗಾನ ಕಲಾ ಪೋಷಕರ ಸಂಯುಕ್ತ ಆಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರಲ್ಲಿ ಏರ್ಪಡಿಸಿದ್ದ ಮೂರು ದಿನದ 11ನೇ ಅಖಿಲ ಭಾರತ ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನ ಭಾನುವಾರ ಸಂಜೆ ಮುಕ್ತಾಯಗೊಂಡಿತು.

ಸಮ್ಮೇಳನದಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಯಕ್ಷಗಾನ ಮಹತ್ವದ ಕಲೆಯಾಗಿರುವುದರಿಂದ ಇದರ ಬಗ್ಗೆ ಹೆಚ್ಚಿನ ಅಧ್ಯಯನ ಮತ್ತು ಸಂಶೋಧನೆಗೆ ಸಹಾಯವಾಗುವ ನಿಟ್ಟಿನಲ್ಲಿ ಪ್ರತ್ಯೇಕ ಯಕ್ಷಗಾನ ವಿಶ್ವವಿದ್ಯಾಲಯ ಆರಂಭಿಸಬೇಕು. ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಪದವಿ ತರಗತಿವರೆಗೆ ಯಕ್ಷಗಾನದ ಆಯ್ದ ಪದ್ಯಗಳನ್ನು ಪಠ್ಯದಲ್ಲಿ ಅಳವಡಿಸಿ ಮಕ್ಕಳಲ್ಲಿ ಯಕ್ಷಗಾನದ ಅಭಿರುಚಿ ಬೆಳೆಯುವಂತೆ ಮಾಡುವುದು. ಯಕ್ಷಗಾನ ಹಾಗೂ ಬಯಲಾಟಕ್ಕಾಗಿಯೇ ಪ್ರತ್ಯೇಕ ಅಕಾಡೆಮಿ ಸ್ಥಾಪಿಸುವುದು. ಪೌರಾಣಿಕ ಯಕ್ಷಗಾನ ಪ್ರಸಂಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲವೊಂದು ವಿಕೃತಿಗಳು ನುಸುಳುತ್ತಿದ್ದು, ಅವುಗಳನ್ನು ನಿವಾರಿಸುವುದು.

ಯಕ್ಷಗಾನಕ್ಕೆ ಸಂಬಂಧಪಟ್ಟಂತೆ ಯಾವುದೇ ಕರಪತ್ರಗಳನ್ನು ಮುದ್ರಿಸಿದರೂ ಅದರಲ್ಲಿ ಪ್ರಸಂಗ ಕರ್ತರ ಹೆಸರನ್ನು ಮುದ್ರಿಸಬೇಕು. ದೇವಿಮಹಾತ್ಮೆ ಯಕ್ಷಗಾನ ಪ್ರಸಂಗ ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಪ್ರದರ್ಶನ ಕಂಡಿರುವುದರಿಂದ ಇದನ್ನು ರಾಷ್ಟ್ರೀಯ ದಾಖಲೆ ಎಂದು ಮಾನ್ಯ ಮಾಡಬೇಕು ಎಂದು ಸಮ್ಮೇಳನದಲ್ಲಿ ನಿರ್ಣಯಿಸಲಾಗಿದೆ.

ಪ್ರಸ್ತುತ ಬೇರೆ ಪ್ರಶಸ್ತಿಗಳೊಂದಿಗೆ ಸೇರಿಸಿ ಯಕ್ಷಗಾನಕ್ಕೂ ಪ್ರಶಸ್ತಿ ನೀಡಲಾಗುತ್ತಿದೆ. ಇದರ ಬದಲು ಯಕ್ಷಗಾನಕ್ಕೆ ಪ್ರತ್ಯೇಕವಾಗಿ ಪ್ರಶಸ್ತಿ ನೀಡಬೇಕು. ಯಕ್ಷಗಾನ ಪೌರಾಣಿಕ ಪ್ರಸಂಗಗಳ ಮರು ಮುದ್ರಣ ಮಾಡಬೇಕು. ಶಿವಮೊಗ್ಗದ ಕುವೆಂಪು ರಂಗಮಂದಿರವನ್ನು ರಾತ್ರಿ 12ರ ತನಕ ಯಕ್ಷಗಾನಕ್ಕೆ ನೀಡಬೇಕೆಂದು ನಿರ್ಣಯ ಕೈಗೊಳ್ಳಲಾಗಿದೆ.

ಸಮಾರೋಪ ಸಮಾರಂಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಎಸ್.ಎನ್.ಪರಾಜೆ, ಸಮ್ಮೇಳನಾಧ್ಯಕ್ಷ ಡಿ.ಎಸ್.ಶ್ರೀಧರ್, ಸಾಗರದ ಎಂ.ಆರ್. ಲಕ್ಷ್ಮೀನಾರಾಯಣ, ರಘುರಾಮ ದೇವಾಡಿಗ, ಭಾಸ್ಕರ್ ಬಾರ‌್ಯ, ಮಧುಸೂದನ್ ಐತಾಳ್, ಲಕ್ಷ್ಮೀನಾರಾಯಣ ಕಾಶಿ, ರವಿಶಂಕರ್ ಬಡೆಕ್ಕಿಲ, ವಿದ್ವಾನ್ ದತ್ತಮೂರ್ತಿ ಭಟ್ ಮತ್ತಿತರರು ಇದ್ದರು. ಡಾ.ಶುಭಾ ಮರವಂತೆ ಸ್ವಾಗತಿಸಿದರು. ಸಿ.ಪಾಂಡುರಂಗರಾವ್ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಯಕ್ಷಗಾನ ಸಾಧಕರನ್ನು ಸನ್ಮಾನಿಸಲಾಯಿತು. ನಂತರ ಬಡಗತಿಟ್ಟಿನ ಅಂಬಾ ಶಪಥ ಪ್ರಸಂಗ ಕುರಿತು ಮಹಿಳೆಯರು ಯಕ್ಷಗಾನ ಪ್ರದರ್ಶಿಸಿದರು.



ಕೃಪೆ : vijaykarnataka




ಜನವರಿ 16, 2016

ಸಾಹಿತ್ಯ ಚರಿತ್ರೆಯಲ್ಲಿ ಯಕ್ಷಕಾವ್ಯದ ನಿರ್ಲಕ್ಷ್ಯ: ಡಿ.ಎಸ್.ಶ್ರೀಧರ

ಶಿವಮೊಗ್ಗ : ನಮ್ಮ ಸಾಹಿತ್ಯ ಚರಿತ್ರೆಯಲ್ಲಿ ಯಕ್ಷ ಕಾವ್ಯದ ಕುರಿತು ತೀರಾ ನಿರ್ಲಕ್ಷ್ಯವಾದದು ಸ್ಪಷ್ಟವಿದ್ದು ಅದು ಇಂದಿಗೂ ಮುಂದುವರಿದಿದೆ ಎಂದು 11ನೇ ಅಖಿಲ ಭಾರತ ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನ 2016ರ ಅಧ್ಯಕ್ಷ ಡಿ.ಎಸ್.ಶ್ರೀಧರ ಹೇಳಿದರು.

ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ ಹಾಗೂ ಜಿಲ್ಲೆಯ ಎಲ್ಲಾ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಆರಂಭಗೊಂಡ ಮೂರು ದಿನದ ಸಮ್ಮೇಳನದಲ್ಲಿ ಮಾತನಾಡಿದರು.

ಪಂಡಿತ ಕವಿಗಳ ಕಾಲದಲ್ಲಿ ರಂಗಕೃತಿಗಳಾದ ಯಕ್ಷಗಾನ ಪ್ರೌಢ ಕೃತಿಗಳಲ್ಲ ಎಂದು ನಿರ್ಲಕ್ಷಿಸಲಾಯಿತು. ಯಕ್ಷಗಾನದ ಕವಿಗಳು ಪ್ರಚಾರ ಬಯಸಲಿಲ್ಲ. ಆದರೆ ಸಾಹಿತ್ಯ ರಚನೆ ಸಂದರ್ಭದಲ್ಲಿ ಅವರ ಹೆಸರನ್ನು ಕೃತಿಯೊಂದಿಗೆ ನಮೂದಿಸುವ ಸೌಜನ್ಯ ಯಾರಿಗೂ ಬಾರದಿರುವುದು ದುರಂತ ಎಂದರು.

ಯಕ್ಷಗಾನ ವಲಯದ ಹೊರಗಿನವರು ಈ ಕಲೆಗೆ ಅಪರಿಚಿತರಾದುದರಿಂದಲೋ, ಸರಿಯಾಗಿ ತಿಳಿಸುವವರ ದೊರೆಯದ ಕಾರಣಕ್ಕೋ ನಿರ್ಲಕ್ಷಿಸಿರಬಹುದು. ಆದರೆ ಯಕ್ಷಗಾನದ ವಯಲದೊಳಗೆ ಇರುವ ಸಾಹಿತ್ಯಾಸಕ್ತರು, ಸಾಹಿತ್ಯ ಸಂಘಟನೆಗಳು ನಿರ್ಲಕ್ಷಿಸಿದ್ದು ಸರಿಯಲ್ಲ. ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನಗಳಲ್ಲೂ ಯಕ್ಷ ಸಾಹಿತ್ಯ ಪ್ರಸ್ತಾಪವಾದ್ದು ಕಡಿಮೆ. ಇನ್ನು ಮೇಳಗಳಲ್ಲಿ ಕೊನೆಯ ಪ್ರಯೋಗವಾಗಿರುತ್ತದೆ. ಪ್ರಸಂಗದ ಹೆಸರು ಮಾತ್ರ ಇರುತ್ತದೆ. ರಚಯಿತನ ಹೆಸರು ಎಲ್ಲೂ ಕಾಣದು. ಇಂದಿಗೂ ಬಹಳಷ್ಟು ಕಲಾವಿದರಿಗೆ ತಾವು ಅಭಿನಯಿಸುತ್ತಿರುವ, ಹಾಡುತ್ತಿರುವ ಪದ್ಯಗಳ ಕವಿ ಯಾರು ಎಂಬುದು ತಿಳಿದೇ ಇಲ್ಲ. ಮುದ್ರಿತ ಪ್ರಸಂಗಗಳಲ್ಲೂ ಕವಿಯ ಹೆಸರಿಲ್ಲದಿರುವುದು ಘೋರ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚೆಗೆ ತಮಗೆ ಬೇಕಾದಷ್ಟೇ ಭಾಗವನ್ನು ಸಂಗ್ರಹಿಸಿ ಪ್ರಕಟಿಸುವ ಚಾಳಿ ಬೆಳೆದಿದ್ದು ಅಲ್ಲೂ ಮೂಲ ಕವಿಗಳ ಹೆಸರು ಕಾಣಿಸುವುದಿಲ್ಲ. ಸಂಪಾದಕರ ಹೆಸರಿನಲ್ಲೇ ಪ್ರಸಂಗಗಳೂ ಸ್ಥಾಪಿತವಾಗಿಬಿಟ್ಟಿವೆ. ಹಿಂದಿನಿಂದಲೂ ಭಾಗವತರು ತಮಗೆ ಬೇಕಾದಷ್ಟೇ ಭಾಗವನ್ನು ಹಸ್ತಪ್ರತಿಯಲ್ಲಿ ಬರೆದಿಟ್ಟುಕೊಂಡು ಹಾಡುತ್ತಿದ್ದುದರಿಂದ ಕವಿಪರಿಚಯದ ಭಾಗ ಲುಪ್ತವಾಗಿ ಕೃತಿಯ ಕವಿ ಅಜ್ಞಾತನಾಗಿ ಬಿಟ್ಟಿದ್ದಾನೆ. ಈಗಲೂ ಜೆರಾಕ್ಸ್ ಮಾಡಿಸುವಾಗ ಪ್ರದರ್ಶನದ ಪಠ್ಯದ ಭಾಗವನ್ನು ಮಾತ್ರ ಬಳಸಿಕೊಳ್ಳುತ್ತಿರುವುದು ಕಂಡುಬರುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಮಾತನಾಡಿ, ಯಕ್ಷಗಾನ ಕಲೆಯ ಸ್ಥಿತಿ ಹಿಂದಿಗಿಂತ ಇಂದು ಚೆನ್ನಾಗಿದೆ ಎಂದು ಕಂಡುಬಂದರೂ ಎಷ್ಟು ಜನ ಎಳೆಯರು ಇದನ್ನು ಕಲಿಯಲು ಮುಂದೆ ಬರುತ್ತಿದ್ದಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ. ನಿರೀಕ್ಷಿತ ಮಟ್ಟಕ್ಕೆ ಈ ಕಲೆಯನ್ನು ಕಲಿಯಲು ಮುಂದೆ ಬಾರದಿರುವುದಕ್ಕೆ ಯಕ್ಷಗಾನ ಕಲಾವಿದರಿಂದ, ಭಾಗವತರಿಗೆ ಸರಕಾರದಿಂದ ಮನ್ನಣೆ, ಪ್ರೋತ್ಸಾಹ, ನಿವೃತ್ತಿ ವೇತನ ಮತ್ತಿತರ ಸೌಕರ್ಯ ಇಲ್ಲದಿರುವುದೇ ಕಾರಣ. ನಿವೃತ್ತಿ ನಂತರ ಬದುಕಿಗೆ ಏನು ಮಾಡಬೇಕು ಎಂಬ ಆತಂಕ ಅರ್ಥದಾರಿ, ಕಲಾವಿದ ಮತ್ತು ಸಂಗೀತ ವಾದಕನಿಗೆ ಕಾಡುತ್ತಿದೆ ಎಂದರು.

ಯಕ್ಷಗಾನವನ್ನು ಹವ್ಯಾಸಕ್ಕಾಗಿ ಕಲಿಯುವವರ ಸಂಖ್ಯೆ ಹೆಚ್ಚುತ್ತಿದೆ. ಹವ್ಯಾಸಿ ಕಲಾವಿದರಿಂದ ಉಳಿದು ಬೆಳೆಯುತ್ತಿದೆ. ಹೀಗಾಗಿ ಹವ್ಯಾಸಿ ಕಲಾವಿದರು ಹೆಚ್ಚಿನ ಅಭ್ಯಾಸದ ಕಡೆಗೆ ಗಮನ ಹರಿಸಬೇಕು. ಶಾಲೆ ಪಠ್ಯ ಪುಸ್ತಕದಲ್ಲಿ ಯಕ್ಷಗಾನದ ಪ್ರಸಂಗವೊಂದನ್ನು ಸೇರ್ಪಡೆ ಮಾಡಿ ಯುವ ಜನತೆಯಲ್ಲಿ ಇದರ ಬಗ್ಗೆ ಆಸಕ್ತಿ ಮೂಡಿಸಬೇಕು ಎಂದರು.

ಆಶಯ ಭಾಷಣ ಮಾಡಿದ ವಿದ್ವಾನ್ ದತ್ತಮೂರ್ತಿ ಭಟ್, ವಾಚಕ ಮತ್ತು ಅಭಿನಯದಲ್ಲಿ ಜಾತಿ ಬೇಧ ಇಲ್ಲದಿರುವುದು ಯಕ್ಷಗಾನದಲ್ಲಿ ಮಾತ್ರ. ಜತೆಗೆ ವಿದ್ಯೆ ಇಲ್ಲದವರೂ ಇದರಲ್ಲಿ ಯಶಸ್ವಿಯಾಗಿದ್ದಾರೆ. ನಾಲ್ಕು ಕಂಬಗಳ ನಡುವೆ ಜಗತ್ತನ್ನೇ ತೋರಿಸುವ ಶಕ್ತಿ ಹೊಂದಿರುವ ಯಕ್ಷಗಾನದ ಉಳಿವು ಮತ್ತು ಅಭಿವೃದ್ಧಿಗೆ ಯಕ್ಷಗಾನ ವಿಶ್ವವಿದ್ಯಾಲಯ ಸ್ಥಾಪನೆಯ ಅಗತ್ಯ ಇದೆ. ಈ ಮೂಲಕ ಸಮಾಜದ ಎಲ್ಲಾ ಸ್ತರದ ಜನರ ಮನೆ ಬಾಗಿಲಿಗೆ ಯಕ್ಷಗಾನವನ್ನು ಕೊಂಡೊಯ್ಯಬೇಕಿದೆ ಎಂದರು. ಚಿತ್ರದುರ್ಗ ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಮ್ಮೇಳನ ಉದ್ಘಾಟಿಸಿದರು.

ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ಜಿಪಂ ಅಧ್ಯಕ್ಷ ಕಲಗೋಡು ರತ್ನಾಕರ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ಬಿ.ಗಣಪತಿ, ಹಿರಿಯ ಯಕ್ಷಗಾನ ಕಲಾವಿದರಾದ ನಂದಳಿಕೆ ಬಾಲಚಂದ್ರರಾವ್ ಮತ್ತು ಎಂ.ಕೆ.ರಮೇಶ್ ಆಚಾರ್ ಮತ್ತು ಪ್ರತಿಷ್ಠಾನದ ಅಧ್ಯಕ್ಷ ಎಸ್.ಎನ್.ಪಂಜಾಜೆ ಉಪಸ್ಥಿತರಿದ್ದರು.ಯು.ಮಧುಸೂದನ ಐತಾಳ ಸ್ವಾಗತಿಸಿದರು. ಎಚ್.ಗುರುನಂದನ್ ಮತ್ತು ಸಿ.ಪಾಂಡುರಂಗರಾವ್ ನಿರೂಪಿಸಿದರು.



ಕೃಪೆ : vijaykarnataka




ಜನವರಿ 9, 2016

ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಎನ್‌ಎಸ್‌ಡಿ ಕಲಾವಿದರು

ಉಡುಪಿ : ದಿಲ್ಲಿಯ ರಾಷ್ಟ್ರೀಯ ನಾಟಕ ಶಾಲೆಯ 30 ಮಂದಿ ಕಲಾವಿದರು ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಗುರು ಬನ್ನಂಜೆ ಸಂಜೀವ ಸುವರ್ಣರಿಂದ ಯಕ್ಷಗಾನದ ನಾಟ್ಯಾಭಿನಯಗಳನ್ನು ಕಲಿಯುತ್ತಿದ್ದಾರೆ. ಇವರಲ್ಲಿ 21 ಮಂದಿ ನಟನಟಿಯರಿದ್ದರೆ ಉಳಿದ ಒಂಬತ್ತು ಮಂದಿ ವಿನ್ಯಾಸಕಾರರು.

ದೇಶ-ವಿದೇಶಗಳಲ್ಲಿ ಯಕ್ಷಗಾನ ತರಗತಿಗಳನ್ನು ನಡೆಸಿರುವ ಬನ್ನಂಜೆ ಸಂಜೀವ ಸುವರ್ಣರಿಗೆ ಈ ಅನುಭವ ಹೊಸತೇನೂ ಅಲ್ಲ. ಈ ಸಲ 1695ರಲ್ಲಿ ದೇವಿದಾಸ ಬರೆದ ಚಕ್ರವ್ಯೂಹ ಪ್ರಸಂಗವನ್ನು ಹಿಂದಿ ಭಾಷೆಯಲ್ಲಿ ರಂಗಕ್ಕೇರಿಸುತ್ತಿದ್ದಾರೆ. ಪ್ರಸಂಗ ಪಠ್ಯ ವನ್ನು ಕವಯಿತ್ರಿ ಮಾಧವಿ ಭಂಡಾರಿ ಹಿಂದಿಗೆ ಅನುವಾದಿಸು ತ್ತಿದ್ದಾರೆ. ಚಕ್ರವ್ಯೂಹ ಪ್ರಸಂಗದ ಪಾತ್ರಗಳಿಗೆ ಬೇಕಾಗು ವಷ್ಟು ಮಾತ್ರವಲ್ಲ, ಇಡೀ ಯಕ್ಷಗಾನದ ರಾಗ, ಮಟ್ಟ, ತಾಳ, ಹೆಜ್ಜೆ , ಅಭಿನಯಗಳ ಪ್ರಾಥಮಿಕ ಪರಿಚಯ ವನ್ನು ವಿದ್ಯಾರ್ಥಿಗಳಿಗೆ ಮಾಡಿಸುವುದು ಕೂಡ ಈ ಕಲಿಕೆಯ ಮುಖ್ಯ ಉದ್ದೇಶವಾಗಿದೆ. ಎನ್‌ಎಸ್‌ಡಿ ನಿರ್ದೇಶಕ ವಾಮನ ಕೇಂದ್ರೆ, ಶೈಕ್ಷಣಿಕ ವ್ಯವಹಾರಗಳ ಡೀನ್‌ ಶಂತನು ಬೋಸ್‌ ಈಗಾಗಲೇ ಕೇಂದ್ರಕ್ಕೆ ಭೇಟಿ ಕೊಟ್ಟು ಯಕ್ಷಗಾನ ತರಗತಿಗಳನ್ನು ವೀಕ್ಷಿಸಿದ್ದಾರೆ.

ಯಕ್ಷಗಾನ ಕೇಂದ್ರದಲ್ಲಿ ಲಕ್ಷ್ಯ, ಲಕ್ಷಣಾಧಾರಿತ ಪಾಠಕ್ರಮದ ಸಂಪ್ರದಾಯವಿರುವುದರಿಂದ ಹೊರನಾಡಿನ ವಿದ್ಯಾರ್ಥಿಗಳಿಗೆ ಕಲಿಸುವುದಕ್ಕೆ ಸುಲಭ, ಅವರು ಬೇಗನೆ ಗ್ರಹಿಸುವುದಕ್ಕೂ ಅನುಕೂಲವಾಗುತ್ತದೆ.



ಕೃಪೆ : udayavani




ಜನವರಿ 9, 2016

ಬಾಯಾರು ಶೇಖರ ಶೆಟ್ಟಿಯವರಿಗೆ ವಿಟ್ಲ ಜೋಶಿ ಪ್ರತಿಷ್ಠಾನದ ಪುರಸ್ಕಾರ

ವಿಟ್ಲ :
ವಿಟ್ಲ ಜೋಶಿ ಪ್ರತಿಷ್ಠಾನದಿಂದ ಕೊಡಲ್ಪಡುವ ಮೊದಲ ಶತಮಾನೋತ್ಸವ ಪುರಸ್ಕಾರಕ್ಕೆ ಶೇಖರ ಶೆಟ್ಟಿ ಬಾಯಾರು ಆಯ್ಕೆ ಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಜ. 10ರಂದು ಮುಳಿಗದ್ದೆಯ ಹೆದ್ದಾರಿ ಶಾಲಾ ವಠಾರದಲ್ಲಿ ನಡೆಯಲಿದೆ.

1965ರಲ್ಲಿ ಕಾಸರಗೋಡು ಜಿಲ್ಲೆಯ ಬಾಯಾರು ಗ್ರಾಮದ ಕುಳಾರು ಎಂಬಲ್ಲಿ ಪ್ರಸಿದ್ಧ ಸ್ತ್ರೀ ವೇಷಧಾರಿ ಐತಪ್ಪಶೆಟ್ಟಿ ಹಾಗೂ ಕಲ್ಯಾಣಿ ದಂಪತಿಯ ಪುತ್ರರಾಗಿ ಜನಿಸಿದ ಶೇಖರ ಶೆಟ್ಟಿಯವರು ವೃತ್ತಿಯಲ್ಲಿ ಶಿಕ್ಷಕನಾದರೂ ತಮ್ಮ ಬಿಡುವಿನ ಸಮಯವನ್ನು ಯಕ್ಷಶಿಕ್ಷಣಕ್ಕೆ ಮುಡಿಪಾಗಿರಿಸಿದ ಯಕ್ಷಗುರು. ಬಾಯಾರು ಪ್ರಕಾಶಚಂದ್ರ ರಾವ್‌ ಅವರಿಂದ ಯಕ್ಷಗಾನ ನಾಟ್ಯ ತರಬೇತಿ ಪಡೆದ ಇವರು ಪರಿಸರದ ಶಾಲೆ ಭಜನಾ ಮಂಡಳಿ ಹಾಗೂ ಕಲಾವೃಂದಗಳಲ್ಲಿ ಮಕ್ಕಳ ಯಕ್ಷಗಾನ ಪ್ರದರ್ಶನಗಳಿಗೆ ಪೂರಕವಾಗಿ ತರಬೇತಿ ನೀಡಿದ ಕಲಾಸಕ್ತರು.

ಯಕ್ಷಗಾನ ವೇಷಧಾರಿ, ಭಾಗವತರಾಗಿ, ಭಜನಾಕಾರರಾಗಿ, ನಾಟಕ ರಚನಾಕಾರರಾಗಿ ಹಾಗೂ ಜಾನಪದ ನೃತ್ಯ ತರಬೇತುದಾರರಾಗಿ ಇವರದು ಬಹುಮುಖ ಪ್ರತಿಭೆ.

ಕೃಪೆ : udayavani




ಜನವರಿ 5, 2016

ಪ್ರೋ. ಎಸ್. ವಿ. ಉದಯ ಕುಮಾರ ಶೆಟ್ಟರಿಗೆ ರಾಜ್ಯಮಟ್ಟದ ಸಹೃದಯ ಪ್ರಶಸ್ತಿ

ಸಾಗರ : ಯಕ್ಷಗಾನ ಚಿಂತಕ, ಲೇಖಕ ಮಣಿಪಾಲದ ಎಂ. ಐ. ಟಿ ಕಾಲೇಜಿನ ಪ್ರಾಧ್ಯಾಪಕ ಪ್ರೋ. ಎಸ್. ವಿ. ಉದಯ ಕುಮಾರ ಶೆಟ್ಟರಿಗೆ ರಾಜ್ಯ ಮಟ್ಟದ ಸಹೃದಯ ಪ್ರಶಸ್ತಿಯನ್ನು ಸಾಗರದಲ್ಲಿ ನಡೆದ ಸಾಗರೋತ್ಸವ ಸಮಾರಂಬದಲ್ಲಿ ವಿಧಾನ ಸಭಾ ಅಧ್ಯಕ್ಷ ಕಾಗೋಡು ತಿಮ್ಮಪ್ಪನವರು ಪ್ರದಾನ ಮಾಡಿದರು. ಹಿರಿಯ ಸಾಹಿತಿ ನಾ. ಡಿಸೋಜ ಅಭಿನಂದನಾ ಬಾಷಣ ಮಾಡಿದರು. ಕೆಳದಿ ಸಂಸ್ಥಾನದ ರಾಜಗುರು ಡಾ/ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನೀದ್ಯ ವಹಿಸಿದ್ದರು. ಶ್ರೀ ಎಂ. ಕೆ. ಶ್ರೀರಂಗಯ್ಯ ಜಿಲ್ಲಾದಿಕಾರಿಗಳು ಚಿತ್ರದುರ್ಗ, ಶ್ರೀ ಸಿಗಂದೂರು ಕ್ಷೇತ್ರದ ದರ್ಮದರ್ಶಿ ಸಿಗಂದೂರು ರಾಮಪ್ಪ, ಅರ್ಚಕ ಶೇಷಗಿರಿ ಭಟ್ ಮುಂತಾದವರು ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ರಾಜ್ಯದ ವಿವಿದ ಜಿಲ್ಲೆಗಳ ಹತ್ತು ಜನ ಗಣ್ಯರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ಯಕ್ಷಗಾನ ಕ್ಷೇತ್ರದಿಂದ ಶೆಟ್ಟರಿಗೆ ಈ ಪ್ರಶಸ್ತಿ ಸಂದಿತ್ತು. ಸಹೃದಯ ಬಳಗದ ಅದ್ಯಕ್ಷ ಜಿ. ನಾಗೇಶ್ ಸ್ವಾಗತಿಸಿದರು. ವಿವಿದ ಜಿಲ್ಲೆಗಳ ಕಲಾವಿದರಿಂದ ಭರತ ನಾಟ್ಯ, ವಿನೋದಾವಳಿ ನಗೆಹಬ್ಬ ನೆರವೇರಿತು. ಸಹಸ್ರಾರು ಪ್ರೇಕ್ಷಕರು ಭಾಗವಹಿಸಿದ್ದರು . ಸಾಗರ ಸುತ್ತ ಪತ್ರಿಕಾ ಬಳಗ ಕಾರ್ಯಕ್ರಮ ಸಂಘಟಿಸಿತ್ತು.






ಡಿಸೆ೦ಬರ್ 31, 2015

ಪ್ರೋ ಎಸ್. ವಿ. ಉದಯ ಕುಮಾರ ಶೆಟ್ಟಿಯವರಿಗೆ ರಾಜ್ಯ ಮಟ್ಟದ ಸಹೃದಯ ಪ್ರಶಸ್ತಿ

ಸಾಗರ :
ಮಣಿಪಾಲ ಎಂ. ಐ. ಟಿ. ಪ್ರಾದ್ಯಾಪಕ ಯಕ್ಷಗಾನ ಬಾಗವತ ಕಲಾವಿದ, ವಿಮರ್ಶಕ ಲೇಖಕ ಎಸ್. ವಿ. ಉದಯಕುಮಾರ ಶೆಟ್ಟರಿಗೆ ಸಾಗರದ ಸಹೃದಯ ಬಳಗ, ಮತ್ತು ಇತಿಹಾಸ ವೇದಿಕೆ ನೀಡುವ ರಾಜ್ಯಮಟ್ತದ ಸಹೃದಯ ಪ್ರಶಸ್ತಿ ನೀಡಲಾಗಿದೆ ರಾಜ್ಯಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹತ್ತು ಜನ ಗಣ್ಯರಲ್ಲಿ ಯಕ್ಷಗಾನ ಕ್ಷೇತ್ರದ ಸಾದನೆಗಾಗಿ ಶೆಟ್ಟರಿಗೆ ಈ ಪ್ರಶಸ್ತಿ ಸಂದಿದೆ. 2016ರ ಸಾಲಿನ ಈ ಪ್ರಶಸ್ತಿಯನ್ನು ಜನವರಿ 2ರಂದು ಸಾಗರದಲ್ಲಿ ನೆಡೆಯುವ ಸಾಗರೋತ್ಸವದಲ್ಲಿ ಹಿರಿಯ ಕವಿ ನಾ. ಡಿಸೋಜ ಅವರು ಪ್ರದಾನ ಮಾಡಲಿದ್ದಾರೆ.

ಎಸ್. ವಿ ಉದಯ ಕುಮಾರ ಶೆಟ್ಟರು ಆಕಾಶವಾಣಿ ದೂರದರ್ಶನದ ಕಲಾವಿದರಾಗಿದ್ದು ಹಲವಾರು ಆಟ ಕೂಟಗಳಲ್ಲಿ ಕಳೆದ 40 ವರ್ಷದಿಂದ ಬಾಗವತರಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಅವರ ಹಲವಾರು ಯಕ್ಷಗಾನ ಸಂಬಂದಿ ಲೇಖನಗಳು ನೂರಾರು ಕಲಾವಿದರ ಪರಿಚಯ ಲೇಖನಗಳು ನಾಡಿನ ಅನೇಕ ಪತ್ರಿಗಳಲ್ಲಿ ಕಳೆದ 25 ವರ್ಷಗಳಿಂದ ಪ್ರಕಟಗೊಂಡಿದೆ. ಕರಾವಳಿ ಬಂಟರ ಬಳಗ ಪತ್ರಿಕೆಯ ಗೌರವ ಸಂಪಾದಕರಾದ ಇವರಿಗೆ 2008ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, 2009ರ ಯಕ್ಷಶ್ರೀ ಪ್ರಶಸ್ತಿ. 2006ರ ಸೀತಾನದಿ ಪ್ರಶಸ್ತಿ ಹಾಗೂ 2013ರ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಸಹಿತ ಹಲವಾರು ಸನ್ಮಾನಗಳು ಸಂದಿವೆ.






ಡಿಸೆ೦ಬರ್ 29, 2015

ಪಾತಾಳ ವೆಂಕಟ್ರಮಣ ಭಟ್ಟರಿಗೆ ಅಗರಿ ಪ್ರಶಸ್ತಿ ಪ್ರದಾನ

ಸುರತ್ಕಲ್ : ಯಕ್ಷಗಾನ ಕಲೆ ಮತ್ತಷ್ಟು ಕ್ರಿಯಾಶೀಲತೆ ರೂಢಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಹಿರಿಯ ಕಲಾವಿದರು ಮಾರ್ಗದರ್ಶನ ನೀಡಬೇಕು ಎಂದು ಸಾಹಿತಿ ಡಾ.ತಾಳ್ತಜೆ ವಸಂತ ಕುಮಾರ್ ಹೇಳಿದರು.

ಸುರತ್ಕಲ್‌ನ ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣಾ ವೇದಿಕೆ ವತಿಯಿಂದ ನೀಡಲಾಗುವ ಅಗರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶುಕ್ರವಾರ ಅವರು ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣೆ ಮತ್ತು ಅಭಿನಂದನಾ ಭಾಷಣ ಮಾಡಿದರು.

ಅಗರಿ ಶ್ರೀನಿವಾಸ ಭಾಗವತ ಅವರಂತಹ ಹಿರಿಯ ತಲೆಮಾರಿನ ಯಕ್ಷಗಾನ ಕಲಾವಿದರ ಸಾಧನೆ ಆದರ್ಶಗಳು ಕಿರಿಯರಿಗೆ ಮಾರ್ಗದರ್ಶಕವಾಬೇಕು ಎಂದರು.

10ನೇ ವರ್ಷದ ಅಗರಿ ಪ್ರಶಸ್ತಿಯನ್ನು ಪ್ರಸಿದ್ಧ ಸ್ತ್ರೀ ವೇಷಧಾರಿ ಪಾತಾಳ ವೆಂಕಟ್ರಮಣ ಭಟ್ಟರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿಯ 10 ಸಾವಿರ ರೂ. ನಗದು, ಸ್ಮರಣಿಕೆ ಪ್ರಶಸ್ತಿ ಪತ್ರ ಒಳಗೊಂಡಿದೆ.

ಸನ್ಮಾನ ಸ್ವೀಕರಿಸಿ ಪಾತಾಳ ವೆಂಕಟ್ರಮಣ ಭಟ್ಟ ಮಾತನಾಡಿದರು. ಹರಿದಾಸ ವಾದೀಶ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಿನ್ಸಿಪಾಲ್ ಪ್ರೊ ಕೂಸ ಮೊಯ್ಲಿ, ಯಕ್ಷಗಾನ ಕಲೆ ಈ ಕಾಲಘಟ್ಟದಲ್ಲಿ ಇನ್ನಷ್ಟು ಕ್ರಿಯಾಶೀಲತೆ ರೂಢಿಸಿಕೊಳ್ಳಬೇಕು ಎಂದರು.

ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ಬಿ.ಎಂ. ರಾವ್, ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣಾ ವೇದಿಕೆಯ ಕೋಶಾಕಾರಿ ಪ್ರೊ.ಗಿರಿಧರ್ ಹತ್ವಾರ್, ಅಗರಿ ದಿನೇಶ ರಾವ್, ಗೌರವಾಧ್ಯಕ್ಷ ಅಗರಿ ರಘುರಾಮ ಭಾಗವತ್, ಅಧ್ಯಕ್ಷ ಪಿ.ಪರಮೇಶ್ವರ ಐತಾಳ್, ಅಗರಿ ಭಾಸ್ಕರ ರಾವ್, ಗಣೇಶಪುರ ಗಿರೀಶ್ ನಾವುಡ, ಪ್ರಸಿದ್ಧ ಪಣಂಬೂರು ಉಪಸ್ಥಿತರಿದ್ದರು.

ನಿತ್ಯಾನಂದ ಕಾರಂತ ಪೊಳಲಿ ಅಭಿನಂದನಾ ಪತ್ರ ವಾಚಿಸಿದರು. ಪ್ರೊ. ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು.

ಪಿ. ಶ್ರೀಧರ್ ಐತಾಳ್ ಸ್ವಾಗತಿಸಿದರು. ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣಾ ವೇದಿಕೆ ಕಾರ್ಯದರ್ಶಿ ಅಗರಿ ರಾಘವೇಂದ್ರ ರಾವ್ ವಂದಿಸಿದರು. ಗೋವಿಂದದಾಸ ಕಾಲೇಜಿನ ಯಕ್ಷಗಾನ ಮತ್ತು ಲಲಿತ ಕಲಾ ಅಧ್ಯಯನ ಕೇಂದ್ರದ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕೃಪೆ : vijaykarnataka




ಡಿಸೆ೦ಬರ್ 27, 2015

ತೆಕ್ಕಟ್ಟೆ ಹಯಗ್ರೀವ ಕಲಾಮಂಟಪದಲ್ಲಿ ``ರುಕ್ಮಿಣಿ ಸ್ವಯಂವರ`` ಯಕ್ಷಗಾನ ಪ್ರದರ್ಶನ

ತೆಕ್ಕಟ್ಟೆ : 24-12-2014 ರಂದು ತೆಕ್ಕಟ್ಟೆಯ ಹಯಗ್ರೀವ ಕಲಾಮಂಟಪದಲ್ಲಿ ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಇವರ ಚಂದ್ರಕಲಾ ಯಕ್ಷೊತ್ಸವ ಸರಣಿ ಕಾರ್ಯಕ್ರಮದ ಸಂದರ್ಭ ಸಾಹಿತಿ ಸುರೇಂದ್ರ ಶೆಟ್ಟಿ ತೆಕ್ಕಟ್ಟೆ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಶ್ರೀಯುತರು ಯಕ್ಷಗಾನವನ್ನು ಮೂಲರೂಪಕ್ಕೆ ಚ್ಯುತಿ ಬಾರದಂತೆ ಉಳಿಸಿಕೊಳ್ಳುವ ಬಗೆಗೆ ಹಿರಿಯ ಕಲಾವಿದರೆಲ್ಲರೂ ಭೇದ ಮರೆತು ಒಂದಾಗಬೇಕೆಂದು ಕರೆಕೊಟ್ಟರು. ಹೊಸ ತಲೆಮಾರಿನ ಯುವ ಜನಾಂಗ ಯಕ್ಷಗಾನವನ್ನು ಪ್ರೀತಿಸುತ್ತಾ ಅದನ್ನು ವಿರೂಪಗೊಳಿಸುತ್ತಿರುವುದರ ಬಗೆಗೆ ಖೇದವನ್ನು ವ್ಯಕ್ತ ಪಡಿಸಿದರು. ಯಶಸ್ವಿ ಕಲಾವೃಂದದಂತಹ ಸಂಸ್ಥೆಗಳು ನಿಸ್ವಾರ್ಥದಿಂದ ಅದರ ಉಳಿಯುವಿಕೆಗಾಗಿ ಹೋರಾಡುತ್ತಿರುವ ಬಗ್ಗೆ ಮುಕ್ತ ಕಂಠದಿಂದ ಶ್ಲಾಘಿಸಿದರು.

ಶ್ರೀಯುತರನ್ನು ಸನ್ಮಾನಿಸಿ ಮಾತನಾಡಿದ ಯಕ್ಷಾಂಗಣ ಟ್ರಸ್ಟ್ನ ಕಲಾವಿದ ಲಂಬೋದರ ಹೆಗಡೆಯವರು ಚಪ್ಪಾಳೆಯ ಮೋಹವನ್ನು ಮರೆತಲ್ಲಿ ಮಾತ್ರ ನೈಜ ಕಲೆಯನ್ನು ಉಳಿಸಿ ಬೆಳೆಸಲು ಸಾಧ್ಯ. ಹಾಗಾಗಿ ನೋಡುವ ಪ್ರೇಕ್ಷಕನೂ ಕಲಾವಿದನಾಗಿರಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕೈಲಾಸ ಕಲಾ ಕ್ಷೇತ್ರದ ಅಧ್ಯಕ್ಷರಾದ ಶ್ರೀಯುತ ಕೊಯಿಕೂರು ಸೀತಾರಾಮ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಸಭಾಧ್ಯಕ್ಷರಾದ ಮಲ್ಯಾಡಿ ಸೀತಾರಾಮ ಶೆಟ್ಟಿಯವರು ಯಕ್ಷಗಾನಕ್ಕೆ ಪ್ರೇಕ್ಷಕರ ಕೊರತೆಯಾಗಬಾರದು ಎನ್ನುವ ಕಳಕಳಿಯನ್ನು ವ್ಯಕ್ತ ಪಡಿಸಿದರು. ಹೆರಿಯ ಮಾಸ್ಟರ್ ಕಾರ್ಯಕ್ರಮವನ್ನು ನಿರೂಪಿಸಿ, ಧನ್ಯವಾದವನ್ನು ಮತ್ಯಾಡಿ ಚಂದ್ರಶೇಖರ ಶೆಟ್ಟಿ ನಿರ್ವಹಿಸಿದರು.

ಕಾರ್ಯಕ್ರಮದ ತರುವಾಯ ಯಕ್ಷಾಂಗಣ ಟ್ರಸ್ಟ್ ಇವರಿಂದ ರುಕ್ಮಿಣಿ ಸ್ವಯಂವರ ಎನ್ನುವ ಸುಂದರ ಯಕ್ಷಗಾನ ಕಥಾನಕ ಪ್ರದರ್ಶನಗೊಂಡಿತು. ಕಲಾವಿದರಾಗಿ ಲಂಬೋದರ ಹೆಗಡೆ, ಗಣಪತಿ ಭಟ್, ಶಿವಾನಂದ ಕೋಟ, ಮಾದವ ಮಣೂರು,ದೇವರಾಜ್ದಾಸ್, ಸುಜಯೀಂದ್ರ ಹಂದೆ, ಕಡಬಾಳು ಉದಯ ಹೆಗಡೆ, ಕಡ್ಲೆ ಗಣಪತಿ ಹೆಗಡೆ, ನವೀನ ಕೋಟ, ಉಪ್ಪುಂದ ಗಣೇಶ, ವಿಶ್ವನಾಥ ಶೆಟ್ಟಿ, ನರಸಿಂಹ ತುಂಗ, ಲಕ್ಮಣ ಇನ್ನಿತರರು ಪಾಲ್ಗೊಂಡರು.








ಹಿ೦ದಿನ 10 ಸುದ್ದಿಗಳು          ಮು೦ದಿನ 10 ಸುದ್ದಿಗಳು


ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ