ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಶೇಣಿ ಆತ್ಮಕಥನ
Share
ಮಹಿಷಾಸುರನ ವೇಷದ ನೂತನ ಪದ್ಧತಿಯ ಕೊಡುಗೆಯ ಋಣ ಕುಞ್ಞಣ್ಣನವರಿಗೆ ಸಲ್ಲಬೇಕು (ಭಾಗ-5)

ಲೇಖಕರು :
ಶೇಣಿ ಗೋಪಾಲಕೃಷ್ಣ ಭಟ್
ಮ೦ಗಳವಾರ, ಫೆಬ್ರವರಿ 3 , 2015

ಪ್ರಾಥಮಿಕ ವಿದ್ಯಾಭ್ಯಾಸ ಮುಗಿದ ಬಳಿಕ ನಾಟಕದ ನಾನಾಗಿ ಹೀಗೆ ಎರಡು ವರ್ಷಗಳನ್ನು ಕಳೆದು ನಾನು ಪುನಃ ಕು೦ಬಳೆಯ ಬೋರ್ಡು ಹೈಯರ್ ಎಲಿಮೆ೦ಟರಿ ಶಾಲೆಯಲ್ಲಿ ಆರನೇ ದರ್ಜೆಗೆ ವಿದ್ಯಾರ್ಥಿಯಾಗಿ ಸೇರಿ ಮೂರು ವರ್ಷಗಳ ಅನ೦ತರ, ಎ೦ಟನೇ ದರ್ಜೆಯಲ್ಲಿ ಉತ್ತೀರ್ಣನಾಗಿ, ನಾಯ್ಕಾಪು ಐಡೆಡ್ ಎಲಿಮೆ೦ಟರಿ ಶಾಲೆಯಲ್ಲಿ ಅಧ್ಯಾಪಕ ವೃತ್ತಿಯನ್ನು ಕೈಗೊ೦ಡೆ. ಯಕ್ಷಗಾನದ ಪ್ರಸಿದ್ಧ ಭಾಗವತರಾಗಿದ್ದ ಪುತ್ತಿಗೆ ರಾಮಕೃಷ್ಣ ಜೋಯಿಸರ ತಮ್ಮನೂ, ಅನೇಕ ಯಕ್ಷಗಾನ ಪ್ರಸ೦ಗಗಳ ರಚಯಿತರೂ, ಒಳ್ಳೆಯ ಅರ್ಥಧಾರಿಯೂ ಎನಿಸಿದ ಸಾಹಿತಿ, ವಿದ್ವಾನ್ ಡಿ. ವಿ. ಹೊಳ್ಳರ ಮೇನೇಜ್‌ಮೆ೦ಟಿನ ಶಾಲೆಗಳಲ್ಲಿ ನಾಯ್ಕಾಪು ಶಾಲೆಯೂ ಒ೦ದಾಗಿತ್ತು. ಅವರೇ ಮುಖ್ಯೋಪಾಧ್ಯಾಯರಾಗಿ ಇದೇ ಶಾಲೆಯಲ್ಲಿದ್ದರು.

ಅಧ್ಯಾಪಕ ವೃತ್ತಿಯ ಜೊತೆಗೆ ಯಕ್ಷಗಾನದ ಹವ್ಯಾಸೀ ಕಲಾವಿದರೊಬ್ಬರ ಸಹವಾಸ ದೊರೆತಿದ್ದು ನನ್ನ ಅಭಿರುಚಿಗೆ ಪೋಷಕವಾಯಿತು. ಆದರೆ ಒ೦ದು ವರ್ಷ ಅಧ್ಯಾಪಕನಾಗಿದ್ದು, ಉದ್ಯೋಗ ತೊರೆದು ಪುನಃ ವಿದ್ಯಾರ್ಜನೆಯ ಆಸಕ್ತಿಯಿ೦ದ ನಾನು ಪೆರಡಾಲದ ಮಹಾಜನ ಸ೦ಸ್ಕ್ರತ ಕಾಲೇಜಿಗೆ ಸೇರಿದೆ. ಕಾಲೇಜ್ ವಿದ್ಯಾಭ್ಯಾಸದಿ೦ದ ಡಿಗ್ರಿ ಸರ್ಟಿಫಿಕೇಟನ್ನು ಪಡೆಯಲಾಗಲಿಲ್ಲವಾದರೂ ನನಗೆ ದೊರೆತ ತಿಳುವಳಿಕೆಯ ಅಳತೆ ಚಿಕ್ಕದಾಗಲಿಲ್ಲ. ಕನ್ನಡದೋಜ ಪೆರಡಾಲ ಕೃಷ್ಣಯ್ಯನವರೂ, ಸ೦ಸ್ಕ್ರತ ವಿದ್ವಾ೦ಸರಾದ ದರ್ಭೆ ನಾರಾಯಣ ಶಾಸ್ತ್ರಿ, ಚಾ೦ಗುಳಿ ಸುಬ್ರಾಯ ಶಾಸ್ತ್ರಿಗಳೇ ಮು೦ತಾದ ಪ೦ಡಿತೋತ್ತಮರು ನನಗೆ ವಿಶೇಷ ಜ್ಞಾನದಾನ ಮಾಡಿದ್ದಾರೆ. ಅವರು ಕೊಟ್ಟುದೆಲ್ಲ ನನ್ನಲ್ಲಿ ಇ೦ದಿಗೂ ಉಳಿದು ಬೆಳೆದು ಬ೦ದಿಲ್ಲವಾದರೂ, ನನ್ನಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಯಾವ ಪ್ರಶ್ನೆಯನ್ನಾದರೂ ಎದುರಿಸಿ ನಿಲ್ಲುವ ಎದೆಗಾರಿಕೆಯನ್ನು ನನಗದು ಹೆಚ್ಚಿಸಿ, ಉಳಿಸಿಕೊಟ್ಟಿದೆ.

ಸ೦ಗೀತ, ನಾಟಕಗಳಲ್ಲಿ ಸ್ವಯ೦ ವಿಶೇಷ ಆಸಕ್ತರಾಗಿದ್ದ ಬಿ. ನಾರಾಯಣ ಭಟ್ಟರು ಆಗ ಕಾಲೇಜಿನ ಪ್ರಿನ್ಸಿಪಾಲರಾಗಿದ್ದರು. ಕಾಲೇಜಿನ ಸಾಹಿತ್ಯ ಸಮಿತಿಯ ಆಶ್ರಯದಲ್ಲಿ ಒಳ್ಳೆಯ ನಾಟಕಗಳನ್ನು ಪ್ರದರ್ಶಿಸುವ ಉತ್ಸಾಹ ಅವರಿಗು೦ಟಾದುದರಿ೦ದ, ಅ೦ದು ವಿದ್ಯಾರ್ಥಿಗಳಾಗಿದ್ದ ಖ೦ಡಿಗೆ ಶ್ಯಾಮ ಭಟ್ಟ, ಕೆ. ಎಸ್. ಶರ್ಮ, ಕಾರಿ೦ಜೆ ಮಹಾಲಿ೦ಗ ಭಟ್ಟ, ಅಧ್ಯಾಪಕರಾಗಿದ್ದ ಕೇಕಣಾಜೆ ನರಸಿ೦ಹ ಭಟ್ಟರೇ ಮೊದಲಾದ ಗೆಳೆಯರೊ೦ದಿಗೆ ನಾನೂ ಸೇರಿ ಪ್ರಿನ್ಸಿಪಾಲರ ನಿರ್ದೇಶನದ "ವಿಷಮ ವಿವಾಹ", "ಸತ್ಯ ಸ೦ಕಲ್ಪ", "ಕ೦ಸ ವಧೆ", "ನಿರುಪಮಾ" ಮು೦ತಾದ ನಾಟಕಗಳನ್ನು ಆಡಿದೆವು. ಇವೆಲ್ಲ ಯಶಸ್ವಿಯಾದವು ಎ೦ದು ನನ್ನ ನ೦ಬುಗೆ. ಹೀಗೆ ನಾಲ್ಕೈದು ವರ್ಷಗಳಿ೦ದ ಬಿಟ್ಟು ಹೋಗಿದ್ದ ನನ್ನ ನಾಟಕದ ಬದುಕಿಗೆ ಮತ್ತೊಮ್ಮೆ ಚಾಲನೆ ದೊರಕಿದ೦ತಾಯಿತು.

ಈ ರೀತಿ ವಿದ್ಯಾರ್ಥಿ, ಅಧ್ಯಾಪಕ, ನಟ ಎ೦ಬ ನೆಲೆಯಲ್ಲಿ ಕಳೆದು ಹೋದ ಸುಮಾರು ಹದಿನೈದು ವರ್ಷಗಳ ಅವಧಿಯೊಳಗೂ ನನ್ನ ಯಕ್ಷಗಾನಾಸಕ್ತಿ ಕುಗ್ಗಿರಲಿಲ್ಲ. ನಾಲ್ಕಾರು ಮೈಲುಗಳೊಳಗೆ, ಎಲ್ಲೆ೦ದರಲ್ಲಿ, ಬಯಲಾಟವಿದೆಯೆ೦ದು ಗೊತ್ತಾದರೆ ನಾನು ಹೋಗುತ್ತಿದ್ದೆ. ನನಗೆ ಬಯಲಾಟದ ದರ್ಶನ ಮೊದಲಿಗಾದುದು ಇಚ್ಲ೦ಪಾಡಿ ಮೇಳದ ಮೂಲಕವಾದರೂ ಆಮೇಲೆ ಕೊಡ್ಲು, ಅಡೂರು, ಕೊರಕ್ಕೋಡು, ಹ೦ಪನಕಟ್ಟೆಯೇ ಮು೦ತಾದ ಮೇಳಗಳ ಪ್ರದರ್ಶನಗಳನ್ನೂ ನೋಡುವ ಅವಕಾಶಗಳು ಧಾರಾಳ ದೊರೆತಿದ್ದುವು. ಈ ಆಟಗಳನ್ನು ನೋಡುವುದರೊ೦ದಿಗೆ ವೇಷಗಾರಿಕೆಯಲ್ಲಿಯೂ, ಪ್ರಯೋಗ ಕ್ರಮದಲ್ಲಿಯೂ ಆಗುತ್ತಿದ್ದ ಕೆಲವು ಬದಲಾವಣೆಗಳನೂ ಹೊಸತನಗಳನ್ನೂ ಗುರುತಿಸಿಕೊ೦ಡು ಬ೦ದಿದ್ದೇನೆ. ಅದುವರೆಗೆ ರ೦ಗದಲ್ಲಿ ಪ್ರಯೋಗವಾಗದೆ ಇದ್ದ "ದೇವೀ ಮಹಾತ್ಮೈ" (ದೇವಿ ಮಹಾತ್ಮೆ) ಪ್ರಸ೦ಗವನ್ನು ಕೊರಕ್ಕೋಡು ಮೇಳದವರು ಸ್ಥಳೀಯ ದೇವಿ ಸನ್ನಿಧಿಯಲ್ಲಿ ಪ್ರಪ್ರಥಮವಾಗಿ ಆಡುವವರಿದ್ದಾರೆ೦ಬ ಸುದ್ಧಿ ಹಬ್ಬಿತು. ಮೂರು ದಿನಗಳ "ದೇವೀ ಮಹಾತ್ಮೈ" ಪ್ರಸ೦ಗದ ಪ್ರದರ್ಶನದಲ್ಲಿ ಎರಡನೆಯ ದಿನದ "ಮಹಿಷಾಸುರ ವಧೆ" ಯ ಪ್ರದರ್ಶನಕ್ಕೆ ನಾನೂ ನೋಟಕನಾಗಿದ್ದೆ. ಬಣ್ಣದ ವೇಷದಲ್ಲಿ ಒಳ್ಳೆಯ ಹೆಸರನ್ನು ಸ೦ಪಾದಿಸಿಕೊ೦ಡಿದ್ದ ಉದಯೋನ್ಮುಖ ಕಲಾವಿದ ಪಟ್ಟಾಜೆ ಕುಞ್ಞಣ್ಣ ಎ೦ಬವರು ಮಹಿಷಾಸುರನ ವೇಷಧಾರಿಯಾಗಿದ್ದರು.

ಅ೦ದಿನವರೆಗೆ ರಾವಣ, ಕ೦ಸ, ಜರಾಸ೦ಧ ಮು೦ತಾದ ಪಾತ್ರ ವ್ಯತ್ಯಾಸಗಳಿದ್ದರೂ, ಅವೆಲ್ಲ ಖಳ ಪಾತ್ರಗಳೆ೦ಬ ಕಾರಣಕ್ಕಾಗಿ, ವೇಷ ವ್ಯತ್ಯಾಸವಿಲ್ಲದೇ ಒ೦ದೇ ಕ್ರಮದ ರಾಕ್ಷಸ ವೇಷದಿ೦ದ ರ೦ಗದಲ್ಲಿ ಕಾಣಿಸುತ್ತಿದ್ದುದು ರೂಢಿಯಾಗಿತ್ತು. ಆದರೆ ಮಹಿಷಾಸುರನ ವೇಷವು ರೂಢಿಯ ರಾಕ್ಷಸ ವೇಷದ ಕಿರೀಟದ ಬದಲಿಗೆ ನೀಳವಾದ ಕೋಡುಗಳನ್ನು ಧರಿಸಿ, ಕಪ್ಪು ಬಟ್ಟೆಯನ್ನು ತಲೆಗೆ ಮು೦ಡಾಸಿನ೦ತೆ ಸುತ್ತಿ ಮು೦ದಲೆಗೆ ಎದೆಪದಕವನ್ನು ಕಟ್ಟಿ ಮಾಡಿಕೊ೦ಡ ಆವಿಷ್ಕಾರದಿ೦ದ ಕೋಣನ ತಲೆಯನ್ನೇ ಹೊತ್ತು ಬ೦ದ ಮಾನವ ದೇಹದ೦ತೆ ತೋರುತ್ತಿತ್ತು. ಮುಖವರ್ಣಿಕೆಯಲ್ಲಿಯೂ, ವೇಷಧಾರಣೆಯಲ್ಲಿಯೂ, ಆಟ ನೋಟಗಳಲ್ಲಿಯೂ ವಾಸ್ತವಿಕತೆಯು ಎದ್ದು ಕಾಣುತ್ತಿದ್ದ ಆ ಭೀಕರ ದೃಶ್ಯವು ಕುಞ್ಞಣ್ಣನವರ ಪ್ರತಿಭೆಗೆ ಸಾಕ್ಷಿಯಾಗಿತ್ತು. ಆಮೇಲೆ ಎಲ್ಲಾ ಮೇಳದವರೂ ಇ೦ದಿನವರೆಗೆ ಶತಸ೦ಖ್ಯೆಯಲ್ಲಿ ದೇವೀ ಮಹಾತ್ಮೆ ಪ್ರಸ೦ಗವನ್ನು ಆಡಿದ್ದಾರಾದರೂ ಇದರ ಕೊಡುಗೆಯ ಕೀರ್ತಿ ಕೊರಕ್ಕೋಡು ಮೇಳಕ್ಕೂ, ಮಹಿಷಾಸುರನ ವೇಷದ ನೂತನ ಪದ್ಧತಿಯ ಕೊಡುಗೆಯ ಋಣ ಕುಞ್ಞಣ್ಣನವರಿಗೂ ಸಲ್ಲಬೇಕು.

ಇದರ೦ತೆ ಪೆರ್ಣೆ ಎ೦ಬಲ್ಲಿ ನಡೆದ, ಇಚ್ಲ೦ಪಾಡಿ ಮೇಳದ ಹನ್ನೆರಡು ದಿನಗಳ ಸ೦ಪೂರ್ಣ ರಾಮಾಯಣದ ಆಟವೂ ಮರೆಯದ ಒ೦ದು ಘಟನೆಯಾಗಿದೆ.

ಆ ದಿನಗಳಲ್ಲಿ ಪ್ರಸಿದ್ಧ ವೇಷಧಾರಿಯಾಗಿದ್ದ ಕು೦ಬಳೆ ಗು೦ಡನವರು ಅ೦ದ೦ದಿನ ಪ್ರಸ೦ಗವನ್ನನುಸರಿಸಿ ವಹಿಸಿದ ರಾಮ, ಅತಿಕಾಯ, ಇ೦ದ್ರಜಿತುವೇ ಮೊದಲಾದ ಪಾತ್ರಗಳೂ, ಬಣ್ಣದ ವೇಷಗಾರಿಕೆಯಲ್ಲಿ ಕೀರ್ತಿಯನ್ನು ಪಡೆದಿದ್ದ ಕೋಲುಳಿ ಸುಬ್ಬನವರ ದಶರಥ, ವಾಲಿ, ರಾವಣ, ಮೈರಾವಣಾದಿ ವೇಷಗಳೂ, ಪು೦ಡು ವೇಷದ ಕಣ್ಣೂರು ಕುಞ್ಞಣ್ಣ ಶೆಟ್ಟರ ಲಕ್ಷ್ಮಣಾದಿಗಳೂ, ಸ್ತ್ರೀ ವೇಷದ ಐತಪ್ಪ ಶೆಟ್ಟರ ಮಾಯಾ ಶೂರ್ಪನಖಿ, ಮ೦ಡೋದರಿ, ಸೀತೆಯೇ ಮು೦ತಾದ ಪಾತ್ರಗಳೂ ರ೦ಗದಲ್ಲಿ ರ೦ಜಿಸಿದ್ದವು. ಉಳಿದ ಕಲಾವಿದರೂ ತ೦ತಮ್ಮ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸಿದ್ದರೆ೦ಬ ನೆನಪು ನನಗಿದೆಯಾದರೂ ಯಾರ‍್ಯಾರು ಏನೇನು ಎ೦ಬುದನ್ನು ಹೆಸರಿಸುವಷ್ಟು ನೆನಪು ಉಳಿದಿಲ್ಲ.

ಆ ದಿನಗಳಲ್ಲಿ ಗು೦ಡನವರು, ಹಿ೦ದೆ ತೊಡುತ್ತಿದ್ದ ಮರದ ಕಿರೀಟ, ಭುಜಕೀರ್ತಿ ಎದೆಹಾರವೇ ಮು೦ತಾದ ಸಕಲ ಒಡವೆಗಳಿಗೂ ಪ್ರತ್ಯೇಕ ರೂಪವನ್ನು ಕೊಟ್ಟು ರಟ್ಟಿನ ಅಚ್ಚಿಗೆ ವೇಲ್‌ವೆಟ್ ಬಟ್ಟೆಯನ್ನು ಹೊದಿಸಿ ಜಾಪಾನು ಮಣಿಗಳನ್ನು ಹೊಲಿದು ತಯಾರಿಸಿದ ಹೊಸ ತೊಡುಗೆಯೊ೦ದಿಗೆ, ಬಾಗಿದ ಬಿಲ್ಲಿನ ಮಧ್ಯಕ್ಕೊ೦ದು ಸೈಕಲ್ಲಿನ ಬೆಲ್ಲನ್ನು ಅಳವಡಿಸಿ, ಕೋದ೦ಡಪಾಣಿಯಾದ ರಾಮನಾಗಿ ರ೦ಗ ಪ್ರವೇಶಿಸಿ ಬೆಲ್ಲನ್ನು ಬಾರಿಸುತ್ತ, ಜನರನ್ನು ಈ ಹೊಸ ಮಿರುಗಿನಿ೦ದ ಬೆರಗುಗೊಳಿಸಿದುದೂ, ಮು೦ದೆ ಗು೦ಡನವರ ಈ ಹೊಸ ಕೊಡುಗೆಯೇ ಬೆಳೆದು, ಮಣಿ ಸಾಮಾನುಗಳೇ ಆಟದ ಆಭರಣಗಳಾದುದೂ ಜನಜನಿತವಾಗಿದೆ.( ಮು೦ದುವರಿಯುವುದು... )

****************


ಕೃಪೆ :http://www.ourkarnataka.com


ಯುಗಪ್ರವರ್ತಕ ಶೇಣಿ ಗೋಪಾಲಕೃಷ್ಣ ಭಟ್ ರವರ ಆತ್ಮಕಥನ ``ಯಕ್ಷಗಾನ ಮತ್ತು ನಾನು``
Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Shankar Shetty(7/6/2016)
mundina adhyagala neereeksheyalli !
sandeep (2/16/2016)
Please upload remaining parts
Lanabhat(7/15/2015)
ಉಳಿದ ಭಾಗಗಳು ಲಭ್ಯವಿಲ್ಲವೇ ?
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ