ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಸಮಗ್ರ ಲೇಖನ : ಯಕ್ಷಗಾನ ಶಿಕ್ಷಣ ಹೇಗಿರಬೇಕು? (ಭಾಗ-1)

ಲೇಖಕರು :
ಕಡತೋಕಾ ಗೋಪಾಲಕೃಷ್ಣ ಭಾಗವತ
ಶನಿವಾರ, ಜುಲೈ 4 , 2015

ಯಾವುದೇ ಕಲೆಯ ಕಲಿಕೆಯಾಗಲೀ ಔಪಚಾರಿಕವಾದ ಕಲಿಕೆಗೆ ಒಗ್ಗುವಂತಹುದಲ್ಲ. ಬಹುಶಃ ಕಲಾ ಪರಿಣತಿಯು ಹೆಚ್ಚಾಗಿ ಅಮೂರ್ತವಾದ ಸೂತ್ರಗಳಿಗನುಗುಣವಾಗಿ ನಡೆಯುವ ಪ್ರಾಯೋಗಿಕ ಪರಿಣತಿಯಾಗಿರುವುದರಿಂದ ಹೀಗಿರಬಹುದು. ಪ್ರಾಚೀನಕಾಲದಿಂದಲೂ ನಮ್ಮ ದೇಶದಲ್ಲಿಯಂತೂ ಕಲೆಗಳು ಪರಭಾರೆಯಾಗುತ್ತಿದ್ದುದು ಅನೌಪಚಾರಿಕವಾದ ಗುರುಶಿಷ್ಯಪರಂಪರೆಯಲ್ಲಿಯೇ ಸರಿ. ಸಾಮಾನ್ಯವಾಗಿ ಹಿರಿಯ ಸಂಗೀತಗಾರನೋ, ಕಲಾವಿದನೋ ನರ್ತಕನೋ ತನ್ನ ಜೊತೆಗೆ ತಾನು ಇಷ್ಟಪಟ್ಟ ವಿದ್ಯಾಕಾಂಕ್ಷಿಯನ್ನು ಜೊತೆಯಲ್ಲಿಯೇ ಇಟ್ಟುಕೊಂಡು ಕಲಿಸುವುದೇ ಗುರು-ಶಿಷ್ಯ ಪರಂಪರೆ. ಹೀಗೆ ದೊಡ್ಡ ಕಲಾವಿದನ ಅಧಿಕೃತ ಶಿಷ್ಯನ ಸ್ಥಾನ ದೊರೆಯುವುದೆಂದರೆ ಅದು ಯೋಗಾಯೋಗವೆಂದೇ ಪರಿಗಣಿಸಲ್ಪಡುತ್ತಿತ್ತು ಕಾಲವೊಂದಿತ್ತು.

ಪಂ. ಭೀಮಸೇನ ಜೋಶಿ
ಹಿಂದೂಸ್ಥಾನೀ ಸಂಗೀತದ ಚರಿತ್ರೆಯಲ್ಲಿ ಗುರು-ಶಿಷ್ಯರ ನಡುವಿನ ಸಂಬಂಧದ ಕುರಿತು ಅನೇಕ ರೋಚಕ ಘಟನೆಗಳೇ ಇವೆ. ಕರ್ನಾಟಕದವರೇ ಆದ ಪಂ. ಭೀಮಸೇನ ಜೋಶಿಯವರು ಗುರುವಿನ ಅನ್ವೇಷಣೆಯಲ್ಲಿ ವರ್ಷಗಟ್ಟಲೇ ಇಡೀ ಭಾರತವನ್ನೇ ಸುತ್ತಾಡಿದರು. ತಮ್ಮ ಹುಟ್ಟೂರಿನಿಂದ ಇಂದಿನ ಪಾಕಿಸ್ಥಾನದ ಲಾಹೋರಿನವರೆಗೂ ಅಲೆದಾಡಿದ ಅವರು ಕೊನೆಯಲ್ಲಿ ಕುಂದಗೋಳದ ಸವಾಯಿ ಗಂಧರ್ವರ ಅಡಿಯಲ್ಲಿ ಸಂಗೀತಾಭ್ಯಾಸ ಮಾಡತೊಡಗಿದರು. ವಾಗ್ಗೇಯಕಾರ ಮೈಸೂರು ವಸುದೇವಾಚಾರ್ಯರು ಹತ್ತೊಂಬತ್ತನೇ ಶತಮಾನದ ಅಂತ್ಯಭಾಗದಲ್ಲಿ ದೂರದ ತಮಿಳುನಾಡಿನಲ್ಲಿದ್ದ ಅಂದಿನ ಅಗ್ರಮಾನ್ಯ ಕರ್ನಾಟಕೀ ಗಾಯಕ ಪಟ್ಣಂ ಸುಬ್ರಹ್ಮಣ್ಯ ಅಯ್ಯರ್ ಅವರ ಶಿಷ್ಯ ವೃತ್ತಿಯನ್ನು ಪಡೆಯಲು ಪಟ್ಟ ಪ್ರಯತ್ನ ಅವರ ಆತ್ಮಕಥನದಲ್ಲಿ ದಾಖಲಾಗಿದೆ.

ಹೀಗೆ ಶಿಷ್ಯಸ್ಥಾನ ದೊರೆತಷ್ಟಕ್ಕೆ ಮುಗಿಯಲಿಲ್ಲ; ನಿರಂತರವಾಗಿ ಗುರು ಸೇವೆ ಮಾಡಬೇಕಾಗಿತ್ತು. ಈ ನಡುವೆ ಗುರುವಿಗೆ ಮನಸ್ಸು ಬಂದರೆ ಒಂದಿಷ್ಟು ಹೇಳಿಕೊಡುತ್ತಿದ್ದ. ಐದು ಹತ್ತು ವರ್ಷಗಳವರೆಗೆ ಹೀಗೆ ಶಿಷ್ಯವೃತ್ತಿಯನ್ನು ಕೈಗೊಂಡ ಬಳಿಕ ಒಬ್ಬ ಸಂಗೀತಗಾರ ಸಿದ್ಧನಾಗುತ್ತಿದ್ದ ಮತ್ತು ಸಾರ್ವಜನಿಕವಾಗಿ ಕಾರ್ಯಕ್ರಮವನ್ನು ನೀಡಲು ಸನ್ನದ್ಧನಾಗುತ್ತಿದ್ದ. ಅಂದು ಗಂಭೀರವಾದ ಕಲೆಗಳಿಗೆ ರಾಜಾಶ್ರಯವನ್ನು ಬಿಟ್ಟು ಬೇರೆ ಆಶ್ರಯವಿರಲಿಲ್ಲ. ರಾಜಾಶ್ರಯವೆಂದರೆ ಎಲ್ಲರಿಗೂ ಸಿಗುಂತಹುದಾಗಿರಲಿಲ್ಲ. ರಾಜನನ್ನು ಸಂತುಷ್ಟಿಗೊಳಿಸಿದ ಒಬ್ಬರೋ ಇಬ್ಬರೋ ಮಾತ್ರ ರಾಜಾಶ್ರಯ ಪಡೆಯಲು ಸಫಲರಾಗುತ್ತಿದ್ದರು. ಉಳಿದವರ ಬದುಕು ಕಷ್ಟಸಾಧ್ಯವಾಗಿತ್ತು. ಹೀಗೆ ನಿರಂತರ ಶ್ರಮಪಟ್ಟಾದರೂ ಸರಿ ಸಂಗೀತವನ್ನೋ ಕಲೆಯನ್ನೋ ಕಲಿಯಲೇಬೇಕೆಂಬಷ್ಟು ಪ್ರಾಮಾಣಿಕವಾದ ಮತ್ತು ಆಳವಾದ ಆಸಕ್ತಿಯಿದ್ದವರು ಮಾತ್ರ ಆ ಕಾಲದಲ್ಲಿ ಕಷ್ಟದ ಕಲೆಯ ಬದುಕನ್ನು ಆಯ್ದುಕೊಳ್ಳುತ್ತಿದ್ದರು. ಬಹುಶಃ ಆ ಕಾರಣಕ್ಕಾಗಿಯೇ ಅಗಾಧವಾದ ಪರಿಣತಿಯನ್ನೂ ಸಾಧಿಸುತ್ತಿದ್ದರು ಅಥವಾ ಸಾಧಿಸುವುದು ಅನಿವಾರ್ಯವಾಗಿತ್ತು ಕೂಡ.

ಸ್ವಾತಂತ್ರ್ಯ್ರ ಬಂದ ಮೇಲೆ ಅಥವಾ ಅದಕ್ಕಿಂತ ಸ್ವಲ್ಪ ಮೊದಲೇ ನಮ್ಮ ದೇಶದ ಲಲಿತಕಲೆಗಳಿಗೆ ಹಿಂದಿನ ರಾಜಾಶ್ರಯದ ಬದಲಿಗೆ ಸರ್ಕಾರದ ಪ್ರೋತ್ಸಾಹ ದೊರೆಯತೊಡಗಿತು. ರೇಡಿಯೋ, ದೂರದರ್ಶನದಂತಹ ಮಾಧ್ಯಮಗಳ ಆಗಮನದಿಂದ ಎಲ್ಲ ಸ್ತರದ ಕಲಾವಿದರಿಗೂ ಬೇರೆ ಬೇರೆ ಮಟ್ಟದ ಆರ್ಥಿಕ ಗಳಿಕೆಯ ಅವಕಾಶಗಳು ಹರಿದು ಬಂದವು. ಇವೆಲ್ಲದರ ದೆಸೆಯಿಂದ ಹಿಂದಿನ ಗುರುಶಿಷ್ಯ ಪರಂಪರೆಯು ಮರೆಯಾಗಿ ಔಪಚಾರಿಕವಾಗಿ ಕಲಾ ಶಿಕ್ಷಣವನ್ನು ನೀಡುವ ಸಂಸ್ಥೆಗಳೂ, ಕಲಾಶಾಲೆಗಳೂ ಎಲ್ಲ ರೀತಿಯ ಕಲೆಗಳ ಸಂದರ್ಭದಲ್ಲಿಯೂ ತಲೆಎತ್ತತೊಡಗಿದವು. ವಿಶ್ವವಿದ್ಯಾಲಯಗಳಲ್ಲಿ ಶಿಷ್ಟ ಕಲೆಗಳಾದ ಸಂಗೀತ ಮತ್ತು ನೃತ್ಯದ ಪದವಿಯನ್ನು ನೀಡುವ ಪರಿಪಾಠ ಬೆಳೆಯಿತು. ಪರೀಕ್ಷಾ ಪ್ರಾಧಿಕಾರಗಳು ಸ್ಥಾಪಿಸಲ್ಪಟ್ಟವು. ಪರೀಕ್ಷಾ ಪ್ರಾಧಿಕಾರಗಳೆಂದರೆ ಬಲ್ಲವರಿಂದ ಕಲೆಯ ತರಬೇತಿಯನ್ನು ಹೊಂದಿದವರಿಗಾಗಿ ನಿಯತಕಾಲಿಕಾವಾಗಿ ಉನ್ನತ ಪರೀಕ್ಷೆಯನ್ನು ನಡೆಸಿ ಅಧಿಕೃತ ಮಾನ್ಯತೆಯನ್ನು ನೀಡುವ ಸಂಸ್ಥೆಗಳು. ಕಲಾಪರಿಣತಿಯನ್ನು ಹೊಂದಲು ಗುರುಗಳಿಗಾಗಿ ಉರೂರು ಅಲೆಯುವ ಸ್ಥಿತಿ ಹೋಗಿ ಜನರು ತಮ್ಮ ತಮ್ಮ ಮನೆಯ ಹತ್ತಿರದಲ್ಲಿಯೇ ಕಲಾ ಶಿಕ್ಷಕರಿಂದ ತರಬೇತಿ ಹೊಂದುವ ಮತ್ತು ಹಾಗೇ ತರಬೇತಿ ಹೊಂದಿ ಪದವಿ ಪಡೆದು ಆ ಮೂಲಕ ಕಲೆಗೆ ಸಂಬಂಧಿಸಿದ ಉದ್ಯೋಗವನ್ನು ಪಡೆಯುವ ಅವಕಾಶವೂ ಬರತೊಡಗಿದವು. ಇದರಿಂದ ಕಲಾಕ್ಷೇತ್ರಕ್ಕೆ ಯಾವ ಪ್ರಯೋಜನವಾಯಿತು ಎನ್ನುವುದು ಚರ್ಚಾಸ್ಪದವಾದರೂ ಕಲೆಯ ಕಾರ್ಪಣ್ಯದ ಮಾರ್ಗ ಹಿಡಿದವ ಬದುಕನ್ನೇ ಬಲಿಕೊಟ್ಟಂತೆ ಎಂಬ ಸ್ಥಿತಿ ಹೋಗಿ ಜೀವನೋಪಾಯಕ್ಕಾಗಿ ಕಲೆಯನ್ನೂ ಆಶ್ರಯಿಸಬಹುದೆಂಬ ಆಶಾದಾಯಕ ಬೆಳವಣಿಗೆಯಾದದ್ದಂತೂ ಸತ್ಯ.

ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮ೦ಡಳಿಯ ಮೊದಲ ಸೇವೆಯಾಟ
ಸಾಂಪ್ರದಾಯಿಕ ರಂಗಕಲೆಯಾದ ಯಕ್ಷಗಾನವೂ ಶಿಷ್ಟ ಕಲೆಗಳ ಈ ಮೇಲಿನ ಸ್ಥಿತಿಗಿಂತ ಭಿನ್ನವಾದ ಚರಿತ್ರೆಯನ್ನೇನೂ ಹೊಂದಿಲ್ಲ. ಆರಾಧನಾ ಕಲೆಯಾದ ಯಕ್ಷಗಾನವು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಇಷ್ಟ ದೇವರ ಪ್ರೀತಿಗಾಗಿ ಭಕ್ತರು ನಡೆಸುವ ಪ್ರದರ್ಶನದ ವ್ಯವಸ್ಥೆಯಿಂದಲೇ ಬಹುಕಾಲ ಪೋಷಿಸಲ್ಪಟ್ಟಿತ್ತು ಮತ್ತು ಈ ಸ್ಥಿತಿ ಯಕ್ಷಗಾನ ಪ್ರಚಲಿತದಲ್ಲಿದ್ದ ಹೆಚ್ಚಿನ ಎಲ್ಲ ಪ್ರದೇಶದಲ್ಲಿಯೂ ಒಂದೇ ರೀತಿಯಲ್ಲಿತ್ತು ಎನ್ನಲು ಅಡ್ಡಿಯಿಲ್ಲ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ದೇವಾಲಯದ ಆಶ್ರಯ ಶತಮಾನಗಳಿಂದ ವ್ಯವಸ್ಥಿತವಾಗಿ ಸಿಕ್ಕಿದೆಯಾದರೆ ಉತ್ತರ ಕನ್ನಡ ಮತ್ತು ಶಿವಮೊಗ್ಗಾ ಜಿಲ್ಲೆಗಳಲ್ಲಿ ಮನರಂಜನೆಯ ಮಾಧ್ಯಮವಾಗಿಯೇ ಹಿಂದಿನಿಂದಲೂ ಗುರುತಿಸಲ್ಪಡುತ್ತಿತ್ತೆನ್ನಬಹುದು.

ರಾತ್ರಿಯಿಡೀ ನಿದ್ದೆಗೆಟ್ಟು ಪ್ರದರ್ಶನ ನೀಡಿ ಬೆಳಗಾಗುತ್ತಿದ್ದಂತೆ ಭಾರವನ್ನು ಹೊತ್ತು ಕಾಲ್ನಡಿಗೆಯಿಂದ ಊರೂರು ಸುತ್ತಿ ಮತ್ತೆ ರಾತ್ರಿಯಾಯಿತೆಂದರೆ ಪ್ರದರ್ಶನ ನೀಡುವ ಈ ದುಃಸಾಧ್ಯ ನಿಶಾಚರ ವೃತ್ತಿಯನ್ನು ಕೈಗೊಳ್ಳಲು ಬೇಕಾದ ಶ್ರಮಸಹಿಷ್ಣುತೆ ಮತ್ತು ಪರಿಣತಿ, ಸಂಗೀತದಂತೆ ನಾಲ್ಕು ಗೋಡೆಗಳ ಮಧ್ಯದಲ್ಲಿ ಗುರುವೊಬ್ಬನಿಂದ ಕೇವಲ ಪಾಠ ಹೇಳಿಸಿಕೊಂಡು ಸಾದಿಸುವಂತಹುದಾಗಿರಲಿಲ್ಲ. ಹಾಗಾಗಿ ಮೇಳಗಳೇ ಬಹುಕಾಲ ಯಕ್ಷಗಾನದ ಕಲಿಕಾ ಕೇಂದ್ರಗಳಾಗಿದ್ದವು. ಅಲ್ಲೊಬ್ಬರು ಇಲ್ಲೊಬ್ಬರು ಗುರುವೊಬ್ಬನಿಂದ ಪಾಠ ಹೇಳಿಸಿಕೊಂಡ ನಿದರ್ಶನವಿದೆಯಾದರೂ ಹೆಚ್ಚಿನಂಶ ಮೇಳಗಳಲ್ಲಿ ಹಿರಿಯ ಕಲಾವಿದರ ಸೇವೆ ಮಾಡುತ್ತಾ ರಂಗದ ಎಲ್ಲ ವಿಭಾಗಗಳಲ್ಲಿಯೂ ಕೈಯಾಡಿಸುತ್ತಾ ಕ್ರಮೇಣ ಯಾವುದೋ ಒಂದು ವಿಭಾಗದಲ್ಲಿ ಕಂಡು ಬಂದ ಹೆಚ್ಚಿನ ಯಶಸ್ಸನ್ನು ಗಮನಿಸಿ ಆ ವಿಭಾಗದಲ್ಲಿ ಮುಂದುವರಿದು ಒಂದು ಪೂರ್ಣ ಪ್ರಮಾಣದ ಕಲಾವಿದನಾಗುತ್ತಿದ್ದುದು ಕಲಾವಿದರ ಪರಿಪಾಠವಾಗಿತ್ತು. ಹೀಗೆ ಮೇಳಗಳು ಕಲಿಕಾ ಕೇಂದ್ರವಾಗಿದ್ದ ಸಂಗತಿಯೂ ಕಿರಿಯ ಕಲಾವಿದರು ಹಿರಿಯರ ಸೇವೆ ಮಾಡಿ ಕಲಿಯುತ್ತಿದ್ದ ರೀತಿಯೂ ಮತ್ತು ಹಾಗೆ ಪರಿಣತಿಯನ್ನು ಸಾಧಿಸುವಾಗ ಪಡುತ್ತಿದ್ದ ಪಾಡೂ ಈ ವರೆಗೆ ಪ್ರಕಟವಾದ ಅನೇಕ ಹಿರಿಯ ಕಲಾವಿದರ ಆತ್ಮಕಥನಗಳಿಂದ ನಿರೂಪಿಸಲ್ಪಟ್ಟಿವೆ.

ವೃತ್ತಿ ಮಾಡುತ್ತಾ ಕಲಿಯುವ ಈ ಮೇಳದ ಕಲಿಕೆಯು ಕ್ರಮೇಣ ಮಾಯವಾಗುವುದಕ್ಕೆ ಮೇಳ ಪರಂಪರೆ ವಿಘಟನೆಗೊಂಡದ್ದೊಂದೇ ಕಾರಣವಾಗಿರಲಿಲ್ಲ ಮತ್ತು ಈ ಅಂಶವನ್ನು ಕೂಡ ನಾವು ಗಮನಿಸುವ ಅಗತ್ಯವಿದೆ. ಮೇಳ ಪರಂಪರೆ ವಿಘಟನೆಯಾಯಿತು ಎಂದರೆ ಮೇಳಗಳು ಇಲ್ಲವಾದವು ಅಂತರ್ಥವಲ್ಲ. ಮೇಳಗಳು ಇಂದಿಗೂ ಇವೆ ಆದರೆ ಮೇಳದ ಆಂತರಿಕ ವ್ಯವಸ್ಥೆಯಲ್ಲಿ ಐವತ್ತು ಅರವತ್ತರ ದಶಕಗಳ ನಂತರ ಗಣನೀಯವಾದ ಬದಲಾವಣೆಯಾದದ್ದನ್ನು ಗುರುತಿಸಬಹುದು. ಹಿಂದೆ ಒಂದು ಮೇಳವೆಂದರೆ ಒಂದು 'ಘರಾಣೆ' ಅಥವಾ ಒಂದು ಕುಟುಂಬ ಅಥವಾ ಮನೆತನದಂತೆಯೇ ಇತ್ತು. ಒಂದು ಮೇಳದ ಪ್ರಮುಖ ಕಲಾವಿದರು ಇನ್ನೊಂದು ಮೇಳಕ್ಕೆ ಹೋಗುತ್ತಿರಲಿಲ್ಲ; ಒಂದು ಮೇಳದ ರಂಗ ನಡೆಗೂ ಇನ್ನೊಂದು ಮೇಳದ ರಂಗನಡೆಗೂ ಜನಸಾಮಾನ್ಯರು ಕೂಡ ಗುರುತಿಸಬಹುದಾದಷ್ಟು ಅಂತರವಿತ್ತು; ಒಂದೇ ತಿಟ್ಟಾದರೂ ಒಂದೇ ಪ್ರಸಂಗದ ಪ್ರದರ್ಶನವಾದರೂ ಹೊಡೆದು ಕಾಣುವ ವ್ಯತ್ಯಾಸವಿತ್ತು. ಕ್ರಮೇಣ ಸಂಪರ್ಕ ಸಂವಹನ ಬೆಳೆದಂತೆ ಮತ್ತು ರಂಗಭೂಮಿಯು ಹೆಚ್ಚು ಹೆಚ್ಚು ವ್ಯಾಪಾರೀಕರಣಗೊಂಡಂತೆ ಹೀಗೆ ಒಂದೇ ಮೇಳದಲ್ಲಿ ಬದುಕು ಕಂಡುಕೊಂಡಿದ್ದ ಕಲಾವಿದರು ಅನಿವಾರ್ಯವಾಗಿ ಬೇರೆ ಮೇಳಕ್ಕೆ ಸೇರಬೇಕಾದ ಅಥವಾ ಅಪರೂಪಕ್ಕಾದರೂ ಬೇರೆ ಮೇಳದ ಕಲಾವಿದರೊಂದಿಗೆ ಕುಣಿಯದಿದ್ದರೆ ಅಪ್ರಸ್ತುತರಾಗುವ ಭಯದ ಸ್ಥಿತಿ ನಿರ್ಮಾಣವಾಯಿತು.

ಸಾಲಿಗ್ರಾಮ ಮಕ್ಕಳ ಮೇಳ ರೂಪಿಸಿದ ಎಚ್. ಶ್ರೀಧರ ಹಂದೆ
ಕಲಾವಿದರು ಸ್ವತಂತ್ರವಾಗಿ ರಂಗದಲ್ಲಿ ಇದಿರುಬದಿರಾದರು. ಇದರ ಫಲವಾಗಿ ಮೇಳಗಳ ಆಂತರಿಕ ವ್ಯವಸ್ಥೆ ಶಿಥಿಲವಾಯಿತು. ಇದು ಎಲ್ಲಿಯವರೆಗೆ ಹೋಯಿತೆಂದರೆ ಒಂದು ತಿಟ್ಟಿನವರು ಇನ್ನೊಂದು ತಿಟ್ಟಿನ ಮೇಳಕ್ಕೆ ಸೇರುವಲ್ಲಿಯವರೆಗೆ ನಡೆಯಿತು. ಯಾವ ಪೂರ್ವ ತಯಾರಿಯೂ ಇಲ್ಲದೇ ಕಲಾವಿದರಿಬ್ಬರು ರಂಗದಲ್ಲಿ ಮಾತ್ರ ಎದುರಾದರೂ ಶಿಸ್ತಿನ ಪ್ರದರ್ಶನ ನೀಡಲು ಸಾಧ್ಯವಾಗುವ, ಒಂದು ಕಾಲದಲ್ಲಿ ಇದರ ಗುಣವಾಗಿದ್ದ ಯಕ್ಷಗಾನದ ಅನನ್ಯ ಆಶು ತಂತ್ರಗಳೇ ಈ ರಂಗಭೂಮಿಗೆ ಮಾರಕವಾಗುತ್ತಿವೆಯೇ ಎಂಬ ಅನುಮಾನ ಬರುವಷ್ಟು ಇಲ್ಲಿಯ ಮೇಳ ವ್ಯವಸ್ಥೆ ವಿಘಟಿತವಾಗತೊಡಗಿತು. ಒಂದು ಕಡೆ ವ್ಯವಸಾಯೀ ಮೇಳಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸಾಮಾನ್ಯ ಕಲಾವಿದರಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಬೇಡಿಕೆ ಬರತೊಡಗಿತು. ವ್ಯವಸಾಯೀ ಸ್ವರೂಪ ಬದಲಾದಂತೆ ಮತ್ತು ಉಳಿದ ಎಲ್ಲ ಕ್ಷೇತ್ರಗಳಂತೆ ಯಕ್ಷಗಾನದಲ್ಲಿಯೂ ಔಪಚಾರಿಕ ಶಿಕ್ಷಣ ಕೇಂದ್ರಗಳು ಎಪ್ಪತ್ತರ ಆಸುಪಾಸಿನಲ್ಲಿ ಪ್ರಾರಂಭವಾದವು.

ಡಾ. ಶಿವರಾಮ ಕಾರಂತರು ಸ್ಥಾಪಿಸಿದ ಉಡುಪಿಯ ಯಕ್ಷಗಾನ ಕೇಂದ್ರವನ್ನು ಹೊರತು ಪಡಿಸಿದರೆ ಆ ಕಾಲಘಟ್ಟದಲ್ಲಿ ಪ್ರಾರಂಭವಾದ ಯಕ್ಷಗಾನ ತರಬೇತಿ ಕೇಂದ್ರಗಳ ಮೂಲ ಉದ್ದೇಶ ವ್ಯವಸಾಯೀ ಮೇಳಗಳಿಗೆ ಬೇಕಾದ ಕಲಾವಿದರನ್ನು ಸಿದ್ಧಪಡಿಸುವುದೇ ಆಗಿತ್ತು. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮತ್ತು ಉಡುಪಿ ಜಿಲ್ಲೆ ಹಂಗಾರಕಟ್ಟೆಯಲ್ಲಿ ಹಾಗೂ ಉಡುಪಿಯಲ್ಲಿ ಸುಸಜ್ಜಿತವಾದ ಯಕ್ಷಗಾನ ಕೇಂದ್ರಗಳು ಪ್ರಾರಂಭವಾದವು. ಎಂಬತ್ತರ ದಶಕದಲ್ಲಿ ಉತ್ತರ ಕನ್ನಡ ಜಿಲ್ಲೆ ಗುಣವಂತೆಯಲ್ಲಿ ದಿ. ಕೆರೆಮನೆ ಶಂಭು ಹೆಗಡೆಯವರ ಮುಂದಾಳುತನದಲ್ಲಿ ಯಕ್ಷಗಾನ ತರಬೇತಿ ಕೇಂದ್ರವು ಪ್ರಾರಂಭವಾಯಿತು. ಇದರ ಜೊತೆಗೆ ಅರೆಕಾಲಿಕ ತರಬೇತಿಗಳೂ ಪ್ರಾರಂಭವಾದವು. ಅರೆಕಾಲಿಕ ತರಬೇತಿ ಎಂದರೆ ನಿವೃತ್ತ ಕಲಾವಿದರು ಅಥವಾ ಬಿಡುವಿನ ವೇಳೆಯಲ್ಲಿ ವೃತ್ತಿ ಕಲಾವಿದರೂ ಆಸಕ್ತರಿಗೆ ಯಕ್ಷಗಾನದ ವಿವಿಧ ವಿಭಾಗಗಳಲ್ಲಿ ಸಮಯಾವಕಾಶವಿದ್ದಾಗ ಆರ್ಥಿಕ ಪ್ರತಿಫಲಕ್ಕಾಗಿಯಾಗಲೀ, ಉಚಿತವಾಗಿಯಾಗಲೀ ತರಬೇತಿ ನೀಡುವ ಅರೆ ಔಪಚಾರಿಕ ವ್ಯವಸ್ಥೆ ಎನ್ನಬಹುದು. ಇದು ಎಲ್ಲ ಪ್ರದೇಶಗಳಲ್ಲಿಯೂ ಇದೇ ಕಾಲಘಟ್ಟದಲ್ಲಿ ಪ್ರಾರಂಭವಾಯಿತು. ಉಡುಪಿ ಜಿಲ್ಲೆಯಲ್ಲಿ ಎಪ್ಪತ್ತರ ದಶಕದಲ್ಲಿ ಕಾರ್ಕಡ ಶ್ರೀನಿವಾಸ ಉಡುಪ ಮತ್ತು ಎಚ್. ಶ್ರೀಧರ ಹಂದೆಯವರ ಮುಂದಾಳುತನದಲ್ಲಿ ಪ್ರಾರಂಭವಾದ 'ಸಾಲಿಗ್ರಾಮ ಮಕ್ಕಳ ಮೇಳ' ಬಾಲಕರ ಮಟ್ಟದಲ್ಲಿಯಾದರೂ ಮೇಳ ಪರಂಪರೆ ಮತ್ತು ಸಾಂಪ್ರದಾಯಿಕ ಪದ್ಧತಿಗಳನ್ನು ಉಳಿಸಿಕೊಳ್ಳುವ ಉನ್ನತ ದೂರದರ್ಶಿತ್ವವನ್ನು ಹೊಂದಿದ್ದು ವಿದೇಶೀ ನೆಲದಲ್ಲಿ ಪ್ರಥಮ ಪ್ರದರ್ಶನ ನೀಡಿದ ಯಕ್ಷಗಾನ ತಂಡವೆಂಬ ಹೆಗ್ಗಳಿಕೆಗೂ ಪಾತ್ರವಾಯಿತು. ತೊಂಬತ್ತರ ದಶಕದವರೆಗೂ ತರಬೇತಿ ಕೇಂದ್ರಗಳು ರಂಗಭೂಮಿಗೆ ಬೇಕಾದ ಕಲಾವಿದರನ್ನು ತಯಾರುಮಾಡತೊಡಗಿದವು.

ಬೆ೦ಗಳೂರಿನ ಯಕ್ಷ ದೇಗುಲ ಸ೦ಸ್ಥೆಯಲ್ಲಿ ಯಕ್ಷಗಾನ ನೃತ್ಯಾಭ್ಯಾಸ ಪಡೆಯುತ್ತಿರುವ ಬಾಲಕಿಯರು.
ಇದೀಗ ಸರ್ಕಾರವು ಯಕ್ಷಶಿಕ್ಷಣಕ್ಕೆ ಅನುದಾನವನ್ನು ಕೊಡುತ್ತಿದ್ದರೂ ಕಲಾ ಕೇಂದ್ರಗಳಿಗೆ ವಿದ್ಯಾರ್ಥಿಗಳ ಕೊರತೆಯಿದೆಯೆಂಬ ಕೂಗು ತರಬೇತಿ ಕೇಂದ್ರದ ಆಡಳಿತ ವರ್ಗದಿಂದ ಕೇಳಿ ಬರುತ್ತಿದೆ. ಹೀಗೆ ವಿದ್ಯಾರ್ಥಿಗಳ ಕೊರತೆಯುಂಟಾಗಿದೆ ಎಂದರೆ ಯಕ್ಷಗಾನವನ್ನು ಕಲಿಯುವವರ ಸಂಖ್ಯೆ ಕಡಿಮೆಯಾಗಿದೆ ಎಂದೇನೂ ಅರ್ಥವಲ್ಲ. ಸತ್ಯಕ್ಕೆ ಈಗ ಯಕ್ಷಗಾನವನ್ನು ಆಸಕ್ತಿಯಿಂದ ಕಲಿಯುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಆದರೆ ಯಕ್ಷಗಾನವನ್ನು ಜೀವನೋಪಾಯದ ವೃತ್ತಿಯನ್ನಾಗಿ ಸ್ವೀಕರಿಸುವ ಉತ್ಸಾಹಿಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ಪೂರ್ಣ ಅವಧಿಯ ಕಲಿಕಾಕೇಂದ್ರಗಳು ಮಾತ್ರ ವಿದ್ಯಾರ್ಥಿಗಳ ಕೊರತೆಯನ್ನು ಎದುರಿಸುತ್ತಿವೆ. ಇದರ ಜೊತೆಗೆ ವೃತ್ತಿಯಾಗಿ ಸ್ವೀಕರಿಸುವ ಅಭ್ಯರ್ಥಿಗಳಿಗೂ ವೃತ್ತಿ ಪರಿಣತಿಯನ್ನು ಸಾಧಿಸಲು ಮತ್ತು ಪ್ರಾಥಮಿಕ ಪರಿಣತಿಯನ್ನು ಹೊಂದಲು ಬೇರೆ ಸುಲಭದ ಮಾರ್ಗಗಳಿವೆ ಎಂಬ ವಾಸ್ತವವನ್ನೂ ಗಮನಿಸಬಹುದು. ಸದ್ಯ ನಡೆಯುತ್ತಿರುವ ಕೇಂದ್ರಗಳಲ್ಲಿಯ ತರಬೇತಿಯು ಸ್ಪರ್ಧಾತ್ಮಕ ಗುಣಮಟ್ಟದ್ದಲ್ಲ ಎಂಬುದೂ ಗಮನಾರ್ಹ.

ಈಗ, ನಗರದಲ್ಲಿಯಾಗಲೀ, ಗ್ರಾಮೀಣ ಪ್ರದೇಶದಲ್ಲಿಯಾಗಲೀ ಮಕ್ಕಳು, ಹವ್ಯಾಸಿಗಳು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಯಕ್ಷಗಾನ ಕಲಿಯಲು ಮುಂದೆ ಬರುತ್ತಿದ್ದಾರೆ. ಯಕ್ಷಗಾನವನ್ನು ವೃತ್ತಿಯನ್ನಾಗಿ ಮಾಡುವ ಉದ್ದೇಶ ಈ ವರ್ಗಕ್ಕೆ ಇಲ್ಲವಾದ್ದರಿಂದ ಇವರಿಗೆ ಅನುಕೂಲವಾದ ಕಲಿಕೆಯು ಅರೆಕಾಲಿಕ ತರಬೇತಿಯದೇ ಆಗಿದೆ.

ಸಾಂಪ್ರದಾಯಿಕ ಅಂಶಗಳಿಗೆ ಮಹತ್ವವಿಲ್ಲವಾಗಿ ಪಾರಂಪರಿಕ ಪದ್ಧತಿಗಳನ್ನು ಹೇಗೆ ಬೇಕಾದರೂ ಪ್ರಸ್ತುತಪಡಿಸಬಹುದೆಂಬ ಸ್ಥಿತಿ ಕಲೆಯ ಮುಖ್ಯ ವಾಹಿನಿಯಲ್ಲಿದ್ದಾಗ ಅದನ್ನು ಗಂಭೀರವಾಗಿ ಕಲಿಯಬೇಕಾದ ಅನಿವಾರ್ಯತೆ ಆಸಕ್ತರಿಗೆ ಉಂಟಾಗುವುದಿಲ್ಲ. ಯಕ್ಷಗಾನದಂತಹ ಕಲೆಗಳಲ್ಲಿ ಗುರುಮುಖೆನ ಕಲಿಯುವುದಕ್ಕಿಂತಲೂ ಅನುಭವದಿಂದ ಗಳಿಸುವುದು ಬಹಳವಿದೆ ಎಂಬ ಮನೋಧರ್ಮವು ವ್ಯವಸ್ಥಿತವಾದ ಕಲಿಕೆಯು ಅನವಶ್ಯಕವೆಂಬ ಮನೋಭಾವವನ್ನು ಬೆಳೆಸುತ್ತದೆ. ಯಕ್ಷಗಾನದ ಕಲಿಕಾ ವಲಯದಲ್ಲಿಯೂ ಸರಿಸುಮಾರು ಇಂತಹದ್ದೇ ಮನೋಧರ್ಮ ಪ್ರಚಲಿತದಲ್ಲಿರುವಂತೆ ಕಾಣುತ್ತದೆ. ಆದ್ದರಿಂದಲೇ ಯಕ್ಷಗಾನ ಕಲಿಯುವುದೆಂದರೆ ನೃತ್ಯದ ಹೆಜ್ಜೆಗಾರಿಕೆಯನ್ನು ಕಲಿಯುವುದು ಮಾತ್ರ ಎಂಬ ಕಲ್ಪನೆ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮತ್ತು ಬದಲಾದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಹಿನ್ನೆಲೆಯಲ್ಲಿ ಯಕ್ಷಗಾನ ಶಿಕ್ಷಣದ ಸವಾಲುಗಳನ್ನು ವಿಶ್ಲೇಷಿಸಬೇಕಾಗುತ್ತದೆ.

****************
ಸಮಗ್ರ ಲೇಖನ : ಯಕ್ಷಗಾನ ಶಿಕ್ಷಣ ಹೇಗಿರಬೇಕು? (ಭಾಗ-2)

ಲೇಖಕರು ``ಯಕ್ಷರಂಗ`` ಮಾಸಪತ್ರಿಕೆಯ ಸಂಪಾದಕರು

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ