ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಯಕ್ಷಗಾನದಲ್ಲಿ ಆಧುನಿಕ ಅಭಾಸಗಳು ಮತ್ತು ಪರಿಹಾರ (ಭಾಗ-1)

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಗುರುವಾರ, ನವ೦ಬರ್ 14 , 2013

[ ಯಕ್ಷಗಾನ ಕಲಾಕ್ಷೇತ್ರ. (ರಿ. ) ಗುಂಡಿಬೈಲು ಇವರ ಸುವರ್ಣ ಮಹೋತ್ಸವದ ಅಂಗವಾಗಿ ನೆಡೆದ ಗೋಷ್ಟಿಯಲ್ಲಿ ಮಂಡಿಸಿದ ಪ್ರಬಂಧದ ಸಂಕ್ಷಿಪ್ತ ರೂಪ ]

ಸೃಜನಶೀಲತೆಯಿಂದಾಗಿ ನಿತ್ಯ ನೂತನತೆಯಿದ್ದು ಮನರಂಜನೆಯಷ್ಟೇ ಅಲ್ಲದೆ ಮನೋಧರ್ಮ ಪ್ರಯೋಗಕ್ಕೂ ಅವಕಾಶವಿರುವುದೇ ಯಕ್ಷಗಾನದ ವಿಶೇಷತೆ. ಈಗ ಕಾಲಚಕ್ರದ ಉರುಳುವಿಕೆಗೆ ಸಿಕ್ಕಿ ಇತಿಹಾಸವಾಗುತ್ತಿದೆ. ಈ ವಿಶಿಷ್ಟತೆಯೇ ಯಕ್ಷಗಾನ ಕಲೆಯ ಜೀವಾಳ. ಆಧುನಿಕ ಕಂಪ್ಯೂಟರ್ ಬಾಷೆಯಲ್ಲಿ ಹೇಳುವುದಾದರೆ ಪ್ರಸ್ತುತ ಬದುಕಿನ ಸಂಪುಟ ( ಫ಼ೋಲ್ಡರ್) ನಿಂದ ಒರೆಸಲ್ಪಟ್ಟು ( ಡಿಲೀಟ್) ಆಗಿ, ಪುನರ್ಬಳಕೆ ತೊಟ್ಟಿ( ರಿಸೈಕಲ್ ಬಿನ್ ) ಗೆ ಸೇರುತ್ತಿದೆ. ಕಂಪ್ಯೂಟರ್'ನಲ್ಲಿ ಒಂದು ಸೌಲಭ್ಯವೆಂದರೆ ಕಡತಗಳಿಗೆ ಮರುಹುಟ್ಟು ತುಂಬ ಬಹುದು. ಕಲೆಗಳಿಗೆ ಮರುಹುಟ್ಟು ನೀಡುವುದು ಅಸಾದ್ಯ. ಆದ್ದರಿಂದ ಯಕ್ಷಗಾನ ಇತಿಹಾಸ ಸೇರುವ ಪ್ರಕ್ರಿಯೆಯನ್ನು ನಿಲ್ಲಿಸಿ ಈ ಕಲೆಯ ಸಾಂಪ್ರದಾಯಕ ಸ್ವರೂಪ ಉಳಿಯುವಂತೆ ಮಾಡುವ ಸವಾಲು ನಮ್ಮ ಮುಂದಿದೆ. ಇದು ಸಾದ್ಯವೇ? ಇದು ಯಾರಿಗಾಗಿ? ಇದು ಹೇಗಾಗಬೇಕು? ಯಾರಿದನ್ನು ಮಾಡುವವರು? ಮುಂತಾದ ಪ್ರಶ್ನೆಗಳು ಸಾಧುವಾದದ್ದೆ. ಕಲೆಯು ತಾತ್ಕಾಲಿಕ ಸಾಮಾಜಿಕ ಸಂಧರ್ಭದ ಪ್ರಭಾವಕ್ಕೇ ಒಳಗಾಗುವುದು ಸಹಜವೆ. ಇದು ಕಲೆಯ ಸ್ವಾಬಾವಿಕ ಸ್ಥಿತಿ. ಕಾಲಕ್ಕೆ ಒಗ್ಗಿಕೊಳ್ಳುವ ಸ್ವಾಭಾವಿಕ ಅನಿವಾರ್ಯ ಯಕ್ಷಗಾನಕ್ಕೂ ಇದೆ. ಇದಕ್ಕಾಗಿ ಯಕ್ಷಗಾನವು ಹೆಚ್ಚು ಪ್ರಭಾವಶಾಲಿಯಾಗಿದ್ದ ಕಾಲದಲ್ಲಿ ಅದರ ಕಲಾ ಸ್ವರೂಪ ಹೇಗೆ ಇತ್ತೆಂದು ಅಧ್ಯಯನ ನೆಡೆಸಿ ಈ ಕಾಲದಲ್ಲಿ ಅದರ ಪುನರ್ ಸೃಜನ ಕ್ರಿಯೆಯಲ್ಲಿ ತೊಡಗಬೇಕು.

ಪ್ರೋ/. ಎಸ್. ವಿ. ಉದಯ ಕುಮಾರ ಶೆಟ್ಟಿ
ಇಂದು ಯಕ್ಷಗಾನ ಕುಸಿಯುತ್ತಿರುವ ಮರಳಿನ ಮೇಲೆ ನಿಂತ ಹಾಗಿದೆ. ಅರ್ಥಿಕ, ಔದ್ಯೋಗಿಕ ಕ್ಷೇತ್ರದಲ್ಲಾಗುವ ಸಿತ್ಯಂತರಗಳು ಹೊಸದಾದ ಸಾಮಾಜಿಕ ಸಂಕೀರ್ಣತೆಯನ್ನು ರೂಪಿಸಿವೆ. ಇಲ್ಲಿ ಕಲೆಗಿರುವ ಅವಕಾಶ ಸ್ವರೂಪ ಬೇರೆಯೇ ತೆರನದ್ದು. ಆರ್ಥಿಕತೆಯ ದೃಷ್ಟಿಯಿಂದ ನೋಡಿದರೆ ಕಲಾವಿದರ ದುಡಿಮೆಗೂ ವೇತನಕ್ಕೂ ಸಂಭಂದವೇ ಇಲ್ಲ. ಎಳವೆಯಲ್ಲಿಯೇ ಕಲೆಯ ಹುಚ್ಚಿನಿಂದ ಕಲಿಕೆಯಲ್ಲಿ ಹಿಂದೆ ಬಿದ್ದು ಮುಂದೆ ಕಲಾವಿದನಾಗಿ ಎಷ್ಟೇ ಪ್ರಸಿದ್ದನಾದರೂ ಅಂದು ತನ್ನ ಸಹಪಾಠಿಯಾಗಿದ್ದವ ಸಾಫ಼್ಟ್ ವೇರ್ ಇಂಜಿನೀಯರ್ ಆಗಿ ಕೈ ತುಂಬ ಸಂಬಳ ತೆಗೆದು ಕೊಳ್ಳುವಾಗ ''ನಾನೂ ಚೆನ್ನಾಗಿ ಕಲಿತು ಉದ್ಯೋಗ ಹಿಡಿಯ ಬೇಕಿತ್ತು ಎಣಿಸುವುದು'' ತಪ್ಪಲ್ಲ. ಹೊಗಳಿಕೆ, ನಮಸ್ಕಾರಗಳ ಹೊರತಾಗಿ ಕಲಾವಿದರಿಗೆ ಆರ್ಥಿಕ ಭದ್ರತೆ ಇಲ್ಲವೇ ಇಲ್ಲ. ''ನನ್ನ ತಲೆಮಾರಿಗೆ ಇದು ಸಾಕು ನನ್ನ ಮಕ್ಕಳಿಗೆ ಇದು ಬೇಡ'' ಇದು ಕಲಾವಿದರೆಲ್ಲರ ಸಾರ್ವತ್ರಿಕ ಅಬಿಪ್ರಾಯ. ಹಾಗಾಗಿ ಕೆಲವು ಉತ್ತರ ಕನ್ನಡದ ಕಲಾವಿದರನ್ನು ಬಿಟ್ಟರೆ ಹೆಚ್ಚಿನ ಕಲಾವಿದರ ಮಕ್ಕಳಿಗೆ ಯಕ್ಷಗಾನದ ಗ೦ಧಗಾಳಿಯೂ ತಿಳಿದಿಲ್ಲ. ಕೆಲವು ಕಲಾವಿದರ ಸಂಸಾರಗಳು ಯಕ್ಷಗಾನವನ್ನು ದ್ವೇಷಿಸುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಯಕ್ಷಗಾನದಲ್ಲಿ ಬಡತನವನ್ನೆ ಅರ್ಹತೆಯಾಗಿ ಉಳಿಸಿದರೆ ಕಲೆಯ ಸ್ವರೂಪ ರಕ್ಷಣೆ ಸಾದ್ಯವಿಲ್ಲ.

ಯಕ್ಷಗಾನದ ಸರ್ವತೋಮುಖ ಅಭಿವೃಧ್ಧಿಗಾಗಿ ಅಕಾಡೆಮಿ ಸ್ಥಾಪನೆಯಾಗಿರುವ ಈ ಸಂಕ್ರಮಣ ಘಟ್ಟದಲ್ಲಿ ಆಧುನಿಕ ಆಭಾಸಗಳಿಂದ ಈ ಅನನ್ಯ ಕಲೆಯನ್ನು ಉಳಿಸಿ ಕೋಳ್ಳುವುದು ಹೇಗೆ ಎಂಬ ಪ್ರಶ್ನೆ ಮುಡಲು ಕಾರಣಗಳು ಹಲವು

  • ಪ್ರಸಂಗ ಸಾಹಿತ್ಯ ಛಂದಸ್ಸು, ಯಾವುದರಲ್ಲೂ ಪರಿಪೂರ್ಣತೆಯಿಲ್ಲದ ಬೇಕಾಬಿಟ್ಟೀ ಪ್ರಸಂಗಕರ್ತರು ಮತ್ತು ದಾರಿ ತಪ್ಪಿದ ಆಧುನಿಕ ಪ್ರಸಂಗಗಳು
  • ಸಾಂಗತ್ಯವಿಲ್ಲದ ಹಿಮ್ಮೇಳ ಮುಮ್ಮೇಳ. ಭಾಗವತಿಕೆ ಮತ್ತು ವಾದನದಲ್ಲಿ ಆಭಾಸ
  • ಯಕ್ಷಗಾನದಿಂದ ಬಹುದೂರ ಉಳಿದಿರುವ ಯುವ ಜನಾಂಗ_ಭರವಸೆಯ ಹೊಸ ಕಲಾವಿದರು ರೂಪುಗೊಳ್ಳದಿರುವುದು.
  • ಸಹೃದಯಿ ವಿಮರ್ಶಕ ಪ್ರೇಕ್ಷಕರು ಯಕ್ಷಗಾನಕ್ಕೆ ಬರದಿರುವುದು
  • ಆಯಾ ವಿಭಾಗದಲ್ಲಿ ಪರಿಣತರಲ್ಲದವರು ತಮಗೆ ತೋಚಿದ ಹಾಗೆ ವಿಮರ್ಶೆ ಮಾಡುವುದು
  • ಯಕ್ಷಗಾನದ ಬಗ್ಗೆ ಏನೇನೂ ತಿಳಿಯದವರು ವೇದಿಕೆಯಲ್ಲಿ ಮನಬಂದ್ಂತೆ ಹಲಬುವುದು
  • ಕಲೆಯ ಬಗ್ಗೆ ಪ್ರೀತಿ ಕಳಕಳಿ ಇಲ್ಲದವರು ಕಾರ್ಯಕ್ರಮ ಸಂಘಟಿಸುವುದು ಮತ್ತು ಮೇಳ ನೆಡೆಸುವುದು
  • ಕೇವಲ ಸ್ವಪ್ರಚಾರಕ್ಕಾಗಿ ತನಗೆ ಯಕ್ಷಗಾನ ಗೊತ್ತಿದೆ ನಾನು ವೇಷ ಮಾಡಿದ್ದೇನೆ ಎಂದು ತೋರಿಸಿಕೊಳ್ಳುವ ಕೆಲವು ಯುವಕರು. ರಾಜಕಾರಣಿಗಳು, ಇತ್ಯಾದಿ.


ಆಧುನಿಕ ಪ್ರಸಂಗ ಮತ್ತು ಆಭಾಸಗಳು

ಆಧುನಿಕ ಪ್ರಸಂಗಗಳು ಆಭಾಸದಿಂದ ಕೂಡಿದೆ ಎನ್ನುವುದು ಸತ್ಯ. ಪೌರಾಣಿಕವಲ್ಲದ ಪ್ರಸಂಗಗಳನ್ನು‌ ಆಧುನಿಕ‌ ಎನ್ನುವುದು ಧ್ವನಿಪೂರ್ಣ‌ ಅರ್ಥವಾದರೆ, ತೀರಾ ‌ಇತ್ತೀಚಿಗೆ ರಚನೆಯಾದವು, ಎನ್ನುವುದು ಸೂಕ್ತ. ಹಿಂದೆ, 16ನೇ ಶತಮಾನದಲ್ಲಿ ರಚನೆಗೊಂಡ''ಕರಿಭಂಟ ಕಾಳಗ'' ಎಂಬ ಪ್ರಸಂಗ ಪೌರಾಣಿಕಕ್ಕೆ ಹೊರತಾದುದು. ಪೌರಾಣಿಕದಿಂದಲೇ ಮೂಡಿಬಂದ ಪ್ರಕ್ಷಿಬ್ದ ಹೊಸಪ್ರಸಂಗಗಳಾದ ಕನಕಾಂಗಿ ಕಲ್ಯಾಣ, ಕೃಷ್ಣಾರ್ಜುನ, ರಾಮಾಂಜನೇಯ, ದ್ರೌಪದೀ ಪ್ರತಾಪ, ರುಕ್ಮಾವತಿ ಕಲ್ಯಾಣ, ವೀರಮಣಿ ಕಾಳಗ ಮುಂತಾದ ಪ್ರಸಂಗಗಳ ಕಥೆ ಹೊಸದೇ ಆದರೂ ಮೂಲ ಕಥೆಗೆ ಒಂದಲ್ಲ ಒಂದು ರೀತಿಯಲ್ಲಿ ಸಂಬಂದ ಹೊಂದಿವೆ. ಯಕ್ಷಗಾನಕ್ಕೆ ಹೊಂದಿಕೆ ಆಗಲಾರದೆಂದು ತಿಳಿದು ಮುದ್ದಣ್ಣನು ಹರ್ಷನ ಪ್ರೀಯದರ್ಶಿನಿ ನಾಟಕವನ್ನು ಯಕ್ಷಗಾನದಲ್ಲಿ ರತ್ನಾವತಿ ಕಲ್ಯಾಣವೆಂದು ರೂಪಿಸಿದರೂ ಮಾಂಡವ್ಯ ಮುನಿ ಹೇಳಿದ ಕಥೆಯಂದೇ ಬಿಂಬಿಸಿದನು.

ಕರ್ಣಾರ್ಜುನ ಕಾಳಗದ ಒ೦ದು ದೃಶ್ಯ
ದೇವಾಲಯಗಳಿಂದ ಹೊರಡುವ ಕೆಲವು ಮೇಳಗಳು ಆಡುವ ಕ್ಷೇತ್ರ ಮಹಾತ್ಮೆ ಪ್ರಸಂಗಗಳು ಹಲವಾರು ಆಭಾಸದಿಂದ ಕೂಡಿದ್ದು ಜಾತಿ ನಿಂದನೆ, ಜಾತಿಗಳ ವೈಭವೀಕರಣ, ವೃತ್ತಿ, ವ್ಯಕ್ತಿ ನಿಂದನೆ, ಪ್ರಾಂತ್ಯಗಳ ವೈಭವೀಕರಣದಿಂದ ಕೂಡಿದ್ದು ಅವುಗಳನ್ನು ಪರೀಷ್ಕರಿಸುವ ಅಗತ್ಯವಿದೆ.

ಡೇರೆ ಮೇಳಗಳು ಅಸ್ತಿತ್ವಕ್ಕೆ ಬಂದ ಮೆಲೆ ಹೊಸ ಪ್ರಸಂಗಗಳ ಭರಾಟೆ ಅತಿಯಾಯಿತು. ಪ್ರೇಕ್ಷಕರ ರುಚಿಯನ್ನು ತಣಿಸುವಂತಹ ನವನವೀನ ಕಥಾನಕಗಳಿಗೆ ಪ್ರಸಂಗಕರ್ತನು ಮೊರೆಹೋಗಬೇಕಾಯಿತು. ಕೋಳಿಪಡೆ, ಕಂಬಳ, ಕೋಲ, ನಾಗ ದರ್ಶನಗಳೂ ರಂಗಸ್ಥಳ ಏರಿದವು. ಪುಂಡುವೇಷಧಾರಿಯು ಸ್ತ್ರೀವೇಷಧಾರಿಯ ಪಾದಕ್ಕೆ ಮುತ್ತಿಕ್ಕುವ ಅಸಹಜ ಭಂಗಿಗಳು ಆಂಗಿಕ ಚಲನೆಯಲ್ಲಿ ಸೇರ್ಪಡೆಗೊಂಡವು. ಸಿನೇಮಾ ಕಥೆಗಳು, ಬೇತಾಳ ಕಥೆಗಳಿಗೆ ಬೇರೆಯವರಿಂದ ಪದ್ಯ ರಚಿಸಿ ''ಶ್ರೀಯುತರು'' ವಿರಚಿತ ಎಂಬ ಅಘೋಷಿತ ಪ್ರಸಂಗಕರ್ತರು ಮೂಡಿಬಂದರು. ಪೌರಾಣಿಕ ಪ್ರಸಂಗಗಳನ್ನು ಆಯ್ದುಕೊಂಡು ಅವುಗಳಲ್ಲಿ ಸಮಕಾಲೀನ ಸಮಸ್ಯೆಗಳನ್ನು ಸಮೀಕರಿಸಿ ರಚಿಸಿದಾಗ ಪ್ರಸಂಗ ಪರಿಪೂರ್ಣವಾಗುತ್ತದೆ. ಅಮೃತ ಸೋಮೇಶ್ವರರು ''ಭುವನ ಭಾಗ್ಯ''ದಲ್ಲಿ ಪರಿಸರ ಸಂರಕ್ಷಣೆಯನ್ನು, ರಾಘವ ನಂಬಿಯಾರರು ''ಅಮರೇಂದ್ರ ಪದ ವಿಜಯೀ''ಯಲ್ಲಿ ದಲಿತೋದ್ದಾರಣೆಯನ್ನೂ, ಕಂದಾವರ ರಘುರಾಮ ಶೆಟ್ಟರು ''ಶೂದ್ರ ತಪಸ್ವಿನಿ''ಯಲ್ಲಿ ಮಹಿಳಾ ಶಕ್ತಿಯನ್ನು ಬಿಂಬಿಸಿದ್ದಾರೆ. ಆದರೆ ಇತ್ತೀಚಿಗೆ ನವನವೀನ ಪ್ರಸಂಗಕರ್ತರು ನವ ನವೀನ ಕಥಾನಕಗಳಿಗೆ ಮೊರೆ ಹೋಗುತಿದ್ದಾರೆ. ಪ್ರೇಕ್ಷಕರನ್ನು ಸೆಳೆಯಲು ಮೇಳದ ವ್ಯವಸ್ಥಾಪಕರು ಇಂತಾಹ ಪ್ರಸಂಗಕರ್ತರ ಮೊರೆ ಹೋಗುತ್ತಿದ್ದಾರೆ.

ಇತ್ತೀಚಿಗೆ ಬಂದ ಕೆಲವು ಪ್ರಸಂಗಗಳು ಅಳತೆಗೆ ಸರಿಯಾಗಿ ಹೊಲಿಸಿದ ಅಂಗಿಯಂತೆ ಯಾವುದೇ ಮೇಳದ ನಿರ್ಧಿಷ್ಟ ಕಲಾವಿದನನ್ನು ಗಮನದಲ್ಲಿಟ್ಟುಕೊಂಡು ರಚಿಸಿದಂತಿದೆ. ಆ ಮೇಳದ ಒಬ್ಬ ಕಲಾವಿದ ಜಾರಿದರೂ, ಕೃತಿ ಸತ್ತಂತೆ. ಕಲಾವಿದರು ರಜೆ ಮಾಡಿದರಂತೂ ಮುಗಿಯಿತು. ಹಾಸ್ಯವೆ ಪ್ರಧಾನವಾಗಿರುವ ಇಂದಿನ ಪ್ರಸಂಗಗಳಿಂದ ಕಲಾವಿದ ಬೆಳೆಯಲಾರ. ವರ್ಷಕ್ಕೊಂದು ಪಾತ್ರಕ್ಕೆ ಹೊಂದಿಕೊಳ್ಳುವಾಗಲೇ ಕಲಾವಿದರ ಆಯುಷ್ಯ ಮುಗಿಯುತ್ತದೆ. ಹೀಗೆ ಕಲಾವಿದನಿಗಾಗಿ ಪ್ರಸಂಗ ರಚನೆಯಾಗದೆ ಪ್ರಸಂಗದ ಪಾತ್ರಗಳಿಗೆ ಕಲಾವಿದನು ಹೊಂದಿಕೊಳ್ಳುವಂತೆ ಪ್ರಸಂಗ ರಚನೆಯಾಗಬೇಕು. ಇಂತಹ ಪ್ರಸಂಗಗಳು ತಾತ್ಕಾಲಿಕ ಮನೋರಂಜನೆ ನೀಡಿದರೂ ಯಕ್ಷಗಾನ ರಂಗದಲ್ಲಿ ಸ್ಥಿರವಾಗಿ ನಿಲ್ಲಲಾರವು. ಅಲ್ಲದೆ ಕಲಾವಿದನ ಬೆಳವಣಿಗೆಗೆ ಸಹಕಾರಿಯಾಗಲಾರವು. ಆದ್ದರಿಂದ ಪೌರಾಣಿಕ ಕಥಾಹಂದರವುಳ್ಳ ಅದರಲ್ಲೂ ರಂಗತಂತ್ರಕ್ಕೇ ಒಪ್ಪುವ ಗಟ್ಟಿ ಕಥಾವಸ್ತುಗಳು ಇಂದಿನ ದಿನಕ್ಕೆ ಅನಿವಾರ್ಯ. ಪುರಾಣ ಗರ್ಭದಲ್ಲಿರುವ ಉತ್ತಮ ಕಥೆಗಳನ್ನು ಆಯ್ದುಕೊಂಡು ರಂಗತಂತ್ರಕ್ಕೆ ಒಳಪಡುವಂತೆ ನಾಟಕೀಯ ಅಂಶವನ್ನು ಹೊಂದಿಸಿಕೊಂಡು ರಸಭಾವಕ್ಕನುಗುಣವಾಗಿ ಛಂದೋಬದ್ದವಾಗಿ ಪದ್ಯ ರಚಿಸಿ ರಂಗಕ್ಕೆ ತಂದರೆ ಯಕ್ಷಗಾನ ಕಲೆ ತನ್ನ ಮೂಲ ಸ್ವರೂಪವನ್ನು ಉಳಿಸಿಕೋಂಡು ಬೆಳೆಯುಂತಾಯಿತು. ಈ ದಶೆಯಲ್ಲಿ ಪ್ರಸಂಗಕರ್ತರ ಹೊಣೆಗಾರಿಕೆ ಮಹತ್ವದ್ದಾಗಿದೆ.

******************

ಯಕ್ಷಗಾನ ಹಿಮ್ಮೇಳ ಭಾಗವತಿಕೆ ಮತ್ತು ವಾದನದ ಆಭಾಸಗಳು ( ಭಾಗ-2)

ಯಕ್ಷಗಾನದಲ್ಲಿ ಆಧುನಿಕ ಅಭಾಸಗಳು : ಪ್ರೇಕ್ಷಕರು ಮತ್ತು ಮೇಳದ ಯಜಮಾನರು ( ಭಾಗ-3)
Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ