ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಯಕ್ಷಗಾನ ಹಿಮ್ಮೇಳ ಭಾಗವತಿಕೆ ಮತ್ತು ವಾದನದ ಆಭಾಸಗಳು (ಭಾಗ-2)

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಶುಕ್ರವಾರ, ನವ೦ಬರ್ 15 , 2013

ಯಕ್ಷಗಾನದಲ್ಲಿ ಭಾಗವತಿಕೆಯಷ್ಟು ಕುಲಗೆಟ್ಟ ಅಂಗ ಬೇರೊಂದಿಲ್ಲ. ಕನಿಷ್ಟ ಶ್ರುತಿ ಲಯದ ಜ್ಝಾನವಿಲ್ಲದ ಪ್ರೇಕ್ಷಕರ ಸಿಳ್ಳು ಚಪ್ಪಾಳೆಯೇ ತಮಗೆ ದೊರೆತ ಪ್ರೋತ್ಸಾಹವೆಂದು ಗೊತ್ತಿರುವರಾಗವನ್ನು ಬೇಕಾಬಿಟ್ಟಿ ಎಳೆಯುವ ಭಾಗವತರೇ ಇಂದು ಎಲ್ಲೆಡೆ ಕಾಣುತ್ತಾರೆ. ಪ್ರೇಕ್ಷಕರ ಚಪ್ಪಳೆ ಬರುವ ವರೆಗೆ ಅವರ ಆಲಾಪನೆ ನಿಲ್ಲದು.

ಕಾಳಿಂಗ ನಾವಡರು ಭಾಗವತಿಕೆಯಲ್ಲಿ ಕ್ರಾಂತಿ ಮಾಡಿದವರು. ಹೊಸ ಹೊಸ ರಾಗಗಳನ್ನು ಸಂದರ್ಭಾನುಸಾರ ಬಳಸಿದ್ದು ಮಾತ್ರವಲ್ಲದೆ ಹಳೆಯ ರಾಗಗಳಿಗೆ ಹೊಸ ಸಂಚಾರವನ್ನೂ ನೀಡಿದವರು. ಇಂದು ಎಲ್ಲೆಡೆ ಮರಿ ನಾವಡರೆ. ಬಡಗುತಿಟ್ಟು ಭಾಗವತರಲ್ಲಿ ಒಬ್ಬ ಭಾಗವತನೂ ಸಹ ಮರವಂತೆ ನರಸಿಂಹ ದಾಸರು, ನೆಲ್ಲೂರು ಮರಿಯಪ್ಪ ಅಚಾರರು, ಜಾನುವಾರುಕಟ್ಟೆಯವರ ದಾರಿಯಲ್ಲಿ ಸಾಗಿದವರಿಲ್ಲ. ಒಂದಿಬ್ಬರು ಭಾಗವತರಲ್ಲಿ ಉಪ್ಪೂರರ ಶೈಲಿಯನ್ನು ಗುರುತಿಸ ಬಹುದಾದರೆ ಕುಂಜಾಲು ಶೈಲಿಯ ಭಾಗವತರೇ ಇಂದು ಕಾಣಸಿಗುವುದಿಲ್ಲ. ಪ್ರಣಯ ಸನ್ನಿವೇಷಗಳಿಗೆ ಹಾಸ್ಯಗಾರರಿಗೆ ಸಿನೇಮ ಹಾಡಿಲ್ಲದೆ ಆಗದು. ಈ ರೋಗ ಹವ್ಯಾಸಿ ಭಾಗವತರಿಗೂ ತಾಗಿದೆ. ಹವ್ಯಾಸಿಗಳಿಂದ ಪರಂಪರೆ ಉಳಿಯುತ್ತದೆ ಎನ್ನುವುದು ವೇದಿಕೆಯಲ್ಲಿ ಭಾಷಣಕ್ಕೆ ಸಿಮಿತವಾಗಿದೆ. ಒಂದಿಬ್ಬರು ಹಿರಿಯ ಹವ್ಯಾಸಿ ಭಾಗವತರನ್ನುಳಿದರೆ ಉಳಿದಂತೆ ಎಲ್ಲರೂ ಅನುಕರಣಾಶೂರರೆ. ಅನುಕರಣೆ ಮಾಡಬಾರದು ಎನ್ನುವುದು ನನ್ನ ವಾದವಲ್ಲ. ಅನುಕರಣೆ ಸಹ ಒಂದು ಕಲೆ. ಅದು ಎಲ್ಲರಿಗೂ ಸಿದ್ದಿಸುವುದಿಲ್ಲ ಆದರೆ ಬೇಕಾದುದನ್ನೇ ಮಾಡಬೇಕು. ಇಂತಹ ಅನುಕರಣಶೂರರು ರಾಮಚಂದ್ರ ನಾವಡರನ್ನೋ, ಉಪ್ಪೂರರನ್ನೋ, ಜಾನುವಾರುಕಟ್ಟೆಯವರನ್ನೋ ಅನುಸರಿಸದಿದ್ದುದು ದೌರ್ಭಾಗ್ಯವಲ್ಲದೆ ಮತ್ತೇನು?

ರಾಗಗಳ ಅಸಮರ್ಪಕ ಬಳಸುವಿಕೆಯಿಂದ ರಂಗದಲ್ಲಿ ಅಭಾಸವಾಗುವುದುಂಟು. ಇಂದಿನ ಯುವ ಭಾಗವತರು ತಮಗೆ ಹೊಸರಾಗಗಳ ಹಿಡಿತವುಂಟು ಎಂದು ಸಿಕ್ಕ ಸಿಕ್ಕಲ್ಲಿ ಬಳಸಿದಲ್ಲಿ ರಂಗದ ಹಿಡಿತ ಸಡಿಲವಾಗುತ್ತದೆ. ಕಿವಿಗೆ ಹಿತವಾಗುತ್ತದೆಂದು ಚಾರುಕೇಶಿ, ಬಹುದಾರಿ, ಬೇಹಾಗ್, ಚಾಂದ್, ಮಾಲ್ ಕಂಸ್, ಕಲಹರಪ್ರಿಯ, ಕಲಾವತಿ, ವ್ರಂದಾವನಸಾರ್ಂಗ, ವಾಸಂತಿ, ರೇವತಿ, ಮುಂತಾದ ರಾಗಗಳನ್ನು ಸ೦ದರ್ಭವಲ್ಲದ ಸಂಧರ್ಭದಲ್ಲಿ ಬಳಸಿದರೆ ರಂಗದ ಕಾವು ಉಳಿಯದು. ಪೌರಾಣಿಕ ಪ್ರಸಂಗಗಳಿಗೆ ತನ್ನದೇ ಆದ ''ಹೇಳುವಣಿಗೆ'' ಅಥಮಟ್ಟು ಇದೆ. ಅದೇ ಮಟ್ಟಿನಲ್ಲಿ ಸಿಗುವ ಸಂತೋಷ ಬೇರೋಂದು ಹೊಸ ರಾಗ ಹಾಕಿದಾಗ ಸಿಗದು. ಪೌರಾಣಿಕ ಪ್ರಸಂಗದ ಪದ್ಯಗಳನ್ನು ಭೈರವಿ, ಕಾಂಭೋಧಿ, ಆರಭಿ, ಕಲ್ಯಾಣಿ, ಕೇದಾರಗೌಳ, ಬಿಲಹರಿ, ಮೋಹನ, ಸಾವೇರಿರಾಗದಲ್ಲಿ ಹಾಡುವುದು ಚಾಲ್ತಿ. ಕರುಣ, ಶ್ರಂಗಾರದ ರಸಗಳಿಗೆ ಸಂಗಿತದ ಹೊಸರಾಗ ಬಳಸಬಹುದು.

ಕೆಲವು ಯುವ ಭಾಗವತರಿಗೆ ಪದ್ಯವನ್ನು ಬೇಕಾಬಿಟ್ಟಿ ಎಳೆದು ಮೂರ್ನಾಲ್ಕು ಸಾರಿ ಪುನರಾವರ್ತನೆ ಮಾಡುವುದು ರೂಢಿಯಾಗಿ ಬಿಟ್ಟಿದೆ. ಉದಾ; ದ್ರೌಪದಿ ಪ್ರತಾಪದ ಭೀಮನ ಪದ್ಯ ‘ಬಾರಲೇ ಕೀರವಾಣಿ’ ಇದನ್ನು ಗಂಬೀರವಾಗಿ ತೋಡಿ ಮುಂತಾದ ರಾಗದಲ್ಲಿ ಹೇಳಿದಾಗ ಎರಡನೇ ವೇಷದ ಗತ್ತು ಉಳಿಯುತ್ತದೆ, ಬದಲಾಗಿ ಬಾರಲೇ, ಬಾರಲೆ.. ಬಾರಲೇ.. ಎಂದು ಪುನರಾವರ್ತನೆ ಮಾಡಿದಾಗ ಭೀಮನ ಪಾತ್ರಧಾರಿ ಏನು ಮಾಡ ಬೇಕು? ಅಲ್ಲದೆ ಕಾಂಬೋದಿ ರಾಗದಲ್ಲಿ ಹೇಳಬೇಕಾದ ದ್ರೌಪದಿಯ ''ಏನಿದೇನೆಂಬೆ ನೀರ'' ಪದ್ಯ ನೀರಸವಾಗಿ ಬಿಡುತ್ತದೆ. ಹಳೆಯ ಭಾಗವತರ ಕ್ಯಾಸೆಟ್ಟು ಕೇಳುವುದರಿಂದ ಇದು ಸಾದ್ಯವಾಗುತ್ತದೆ. ಆದರೆ ಇಂದಿನ ಕಲಾವಿದರಲ್ಲಿ ಕೇಳುವ, ಓದುವ ಗುಣ ಇಲ್ಲದಾಗಿದೆ.

ವಿದ್ಯುತ್ತ್ ಚಾಲಿತ ಶ್ರುತಿ ಪೆಟ್ಟಿಗೆ ರಂಗದ ಇನ್ನೊ೦ದು ಅಭಾಸ. ಇದು ವ್ಯವಸ್ಥಾಪಕರ ಹಣ ಉಳಿಸಬಲ್ಲದು, ಅದರೆ ಸರಿಯಾದ ಶ್ರುತಿ ನಿಲ್ಲದ ಇಂತಹ ಪರಿಕರಗಳಿಂದ ಏರುಶ್ರುತಿಯಲ್ಲಿ ಹಾಡುವುದು ಕಷ್ಟ. ಮೂರು ಕೆಂಪು ರುಮಾಲುಗಳು ಒಂದೇ ನೇರದಲ್ಲಿ ಕುಳಿತಾಗ ರಂಗದ ಅಂದವೇ ಬೇರೆ ಆದರೆ ಈಗ ಆ ಜಾಗದಲ್ಲಿ ಭಾಗವತ ಮದ್ದಳೆಗಾರರಿಬ್ಬರೆ ಕುಳಿತು ರಂಗದಲ್ಲಿ ಏನನ್ನೋ ಕಳೆದು ಕೊಂಡಂತ್ತಣಿಸುತ್ತದೆ. ದೇವಸ್ಠಾನದ ನಗಾರಿಯಂತೆ ವಿದ್ಯುಚ್ಚಾಲಿತ ಶ್ರುತಿ ಪೆಟ್ಟಿಗೆ ಸದ್ಯ ಬರಲಿಲ್ಲವಲ್ಲ ಅದೇ ಪುಣ್ಯವೆಂದುಕೊಳ್ಳೋಣ.

ಯಕ್ಷಗಾನ ಪದ್ಯಗಳು ಛಂದಸ್ಸಿನಿಂದ ಕೂಡಿದವು. ಹಲವು ಬಗೆಯ ತಾಳಗಳಿಂದ ಕೂಡಿದ್ದು ಇದನ್ನು ಮಟ್ಟು ಎನ್ನುವುದು. ಯಕ್ಷಗಾನದ ಶಾಲೆಗಳಿಲ್ಲದ ಕಾಲದಲ್ಲಿ ಐಗಳ ಮಠದಲ್ಲಿ ತಾಳಗಳ ಪರಿಚಯ ಪದ್ಯದ ಮೂಲಕವೇ ಆಗುತಿತ್ತು ಮದ್ದಳೆಗಾರರಿಗೆ ಪದ್ಯ ಹೇಳಲು ಬರುತ್ತಿತ್ತು. ಒಳ್ಳೆಯ ಮದ್ದಳೆಗಾರರು ಭಾಗವತಿಕೆ ಬಲ್ಲವರಾಗಿರಬೇಕು. ಮದ್ದಳೆಗಾರನಿಗೆ ಭಾಗವತನಷ್ಟೇ ಜವಬ್ದಾರಿ ತಿಳುವಳಿಕೆ ಬೇಕಾಗುತ್ತದೆ. ಭಾಗವತ ಮತ್ತು ನಟನ ಮದ್ಯದ ಸಮನ್ವಯಕಾರನೇ ಮದ್ದಳೆಗಾರ. ಹಾಡುಗಾರ ಮತ್ತು ನಟರ ಮನೋಧರ್ಮಕ್ಕನುಗುಣವಾಗಿ ನುಡಿಸುವುದರೊಂದಿಗೆ ಪ್ರಸಂಗದ ಪಾತ್ರವಾಗಿರಬೇಕು. ತನ್ನ ಕೆಲಸ ಬಾರಿಸುವುದು ಮಾತ್ರ ಎಂದು ಸುಮ್ಮನೆ ಕುಳಿತುಕೊಳ್ಳುವುದು, ಮಾತನಾಡುತ್ತಿರುವುದು, ಆಗಾಗ ಶ್ರುತಿ ಹೊಂದಿಸುತ್ತಿರುವುದು ಅಭಾಸವಲ್ಲದೆ ಮತ್ತೇನು.

ಚೆಂಡೆಯು ವೀರ ರೌದ್ರಾದಿ ಸನ್ನಿವೇಶ, ಒಡ್ಡೋಲಗ ಪ್ರಯಾಣ, ಮುಂತಾದ ಕಡೆ ಸೂಕ್ತವಾದರೂ ಇತ್ತೀಚಿಗೆ ಸೌಮ್ಯವೂ ಸೇರಿ ಎಲ್ಲಾ ಪದ್ಯಗಳಿಗೂ ಚೆಂಡೆ ಬಾರಿಸುವ ಕ್ರಮ ಬಂದಿದೆ. ಪದ್ಯ ಸಾಹಿತ್ಯಕ್ಕೆ ಪೂರಕವಾಗಿ, ಮದ್ದಳೆಯನಾದಕ್ಕೆ ಹೊಂದಿಸಿ ಚೆಂಡೆ ನುಡಿಸ ಬೇಕಾಗಿದೆ ನಾಟ್ಯಕ್ಕೆ ಚೆಂಡೆ ಉತ್ಸಾಹ ನೀಡಿದರೂ‌ ಅದಕ್ಕೆ ಬಿಗಿತಸಿಗುವುದು ಮದ್ದಳೆಯ ಘಾತದ ಪೆಟ್ಟುಗಳಿಂದ. ಚೆಂಡೆ ಸ್ವತಂತ್ರ ವಾದನವಲ್ಲ, ಮದ್ದಳೆ ಪೆಟ್ಟಿನೊಂದಿಗೆ ಕೂಡಿದಾಗ ಚೆಂಡೆಯ ನಾದ ಹಿತವಾಗಿರುತ್ತದೆ. ಕೇವಲ ಚೆಂಡೆಯ ಶಬ್ದ ಕೇಳಲು ಹಿತವೆಣಿಸದು. ಕೆಲವೊಂದು ಶೃಂಗಾರದ ಪದ್ಯಗಳಲ್ಲಿ ಚೆಂಡೆ ಮದ್ದಳೆಗಳನ್ನು ಪ್ರತ್ಯೇಕವಾಗಿ ಬಾರಿಸುವ ಕ್ರಮ ಬಂದಿದೆ. ಇದರಿಂದ ಯಾವುದೇ ರಸ ನಿರ್ಮಾಣವಾಗಲು ಸಾದ್ಯವಿಲ್ಲ. ಭಾಗವತರ ಮಟ್ಟದಲ್ಲಿ ವಾದನಗಾರರು ಗುರುತಿಸಲ್ಪಡುವುದಿಲ್ಲ ಎನ್ನುವುದು ವಾದನಗಾರರ ಅಳಲು. ಇದಂತೂ ಸ್ವಲ್ಪಮಟ್ಟಿಗೆ ಸತ್ಯ.

******************

ಯಕ್ಷಗಾನದಲ್ಲಿ ಆಧುನಿಕ ಅಭಾಸಗಳು ಮತ್ತು ಪರಿಹಾರ ( ಭಾಗ-1)

ಯಕ್ಷಗಾನದಲ್ಲಿ ಆಧುನಿಕ ಅಭಾಸಗಳು : ಪ್ರೇಕ್ಷಕರು ಮತ್ತು ಮೇಳದ ಯಜಮಾನರು ( ಭಾಗ-3)




Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ