ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಯಕ್ಷಗಾನದಲ್ಲಿ ಆಧುನಿಕ ಅಭಾಸಗಳು : ಪ್ರೇಕ್ಷಕರು ಮತ್ತು ಮೇಳದ ಯಜಮಾನರು ( ಭಾಗ-3)

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಸೋಮವಾರ, ನವ೦ಬರ್ 18 , 2013

ಕಲೆಗೆ ಬೆಲೆ ಸಿಗುವುದು ಅದನ್ನು ಅಸ್ವಾದಿಸುವ ಪ್ರೇಕ್ಷಕರಿಂದ. ಕೃತಿಗೆ ಹೇಗೆ ಕೊಂಡು ಓದುವವ ಬೇಕೋ ಹಾಗೇಯೇ ಕಲೆಗೆ ಬಂದು ನೋಡುವವ ಬೇಕು. ಅಪಾರ ಓದುಗರಿದ್ದಾರೆಂಬುವುದು, ಅಪಾರ ಪ್ರೇಕ್ಷಕರಿದ್ದರೆಂಬುದು ಕೃತಿಯ ಯಾ ಕಲೆಯ ಮಾನದಂಡವಾಗಲಾರದು. ಅನೇಕ ಸಲ ಒಳ್ಳೆಯ ಪುಸ್ತಕ, ಸೃಷ್ಟಿಶೀಲ ಪ್ರದರ್ಶನಗಳು ವನಸುಮವಾಗಿ ಕಳಪೆ ಪ್ರದರ್ಶನಗಳು ಚೆನ್ನಾಗಿ ಹಣ ಗಳಿಸಿದ ಉದಾಹರಣೆಗಳಿವೆ. ಯಕ್ಷಗಾನ ಕಲೆಯು ಪ್ರೇಕ್ಷಕರ ಒಲವಿನ ಬಲವನ್ನಷ್ಟೆ ಅವಲಂಬಿಸಿದೆ. ಇದಕ್ಕೆ ಸರಕಾರದ ಪ್ರೋತ್ಸಾಹವಿಲ್ಲ, ಆಶ್ರಯವಿಲ್ಲ. ಪ್ರೇಕ್ಷಕರನ್ನು ಸೆಳೆಯದ ಹೊರತು ಕಲಾವಿದ ಬದುಕುವಂತಿಲ್ಲ. ಅದಕ್ಕಾಗಿ ರಂಗಸ್ಥಳ ಸೃಷ್ಟಿಶೀಲವಾಗದೆ ನಿರ್ವಾಹವಿಲ್ಲ. ಟೆಂಟ್ ಹಾಕಿ ಟಿಕೇಟು ನೀಡಿ ಆಟ ಆಡಲು ಆರಂಬಿಸಿದ ನಂತರ ಪ್ರೇಕ್ಷಕರು ವಿವಿದ ಅರ್ಥಿಕ ವರ್ಗಗಳಲ್ಲಿ ಹಂಚಲ್ಪಟ್ಟಿದ್ದಾರೆ. ಫ಼ಸ್ಟ್, ಸೆಕೆಂಡ್, ಕ್ಲಾಸ್ ಗೆ ಆಸನಗಳು, ನೆಲ ಹೀಗೆ. ಇಲ್ಲಿ ಆಸಕ್ತರಿಗಿಂತ ಖರೀದಿಸುವ ಶಕ್ತಿ ಮುಖ್ಯ ಅದಕ್ಕಾಗಿ ರಂಗಸ್ಥಳದಲ್ಲಿ ಪ್ರತೀ ವರ್ಷ ಹೊಸ ಪ್ರಸಂಗಗಳು, ನಾಟಕೀಯತೆ ಹೆಚ್ಚಾಗಿದೆ. ಕಥೆಯಲ್ಲಿ ನಾಯಕ, ನಾಯಕಿ ಹಾಸ್ಯ ಪಾತ್ರಗಳು ಹೆಚ್ಚಾಗಿವೆ. ಪರಂಪರೆಯ ಎರಡನೇ ವೇಷ, ಪುರುಷವೇಷ, ಬಣ್ಣದ ವೇಷ, ಒಡ್ಡೋಲಗ ಮುಂತಾದ ಪರಿಕಲ್ಪಣೆಗಳು ಮೂಲೆಗೆ ಸರಿದು ಯಕ್ಷಗಾನದ ಒಟ್ಟು ಸ್ವರೂಪವೇ ಬದಲಾಗಿದೆ. ಈ ಎಲ್ಲಾ ಪರಿಕಲ್ಪನೆಗಳಿಗೆ ಮೇಳದ ಯಜಮಾನರು, ಕಲಾವಿದರು ಕೊಡುವ ಉತ್ತರ ಒಂದೆ ‘ಪ್ರೇಕ್ಷಕರಿಗೆ ಇದೇ ಬೇಕು’ ಜನ ಇದನ್ನೇ ಬಯಸುತ್ತಾರೆ.

ರಾತ್ರಿಯಿಂದ ರಾತ್ರೆಗೆ ಐವತ್ತು ಅದಕ್ಕೂ ಹೆಚ್ಚು ದೂರದಲ್ಲಿ ಟೆಂಟ್ ಹಾಕಿ ನಿನ್ನೆಯ ಪ್ರೇಕ್ಷಕರ ಪ್ರತಿಕ್ರಿಯೆ ಏನು ಅಂತ ತಿಳಿಯಲು ಸಮಯವಿಲ್ಲದ ರೀತಿ ಸಾಗುವ ಮೇಳಗಳು ಈ ತೀರ್ಮಾನಕ್ಕೆ ಬರಲು ಒಂದೇ ಕಾರಣ ಅದು ಗಲ್ಲಾ ಪೆಟ್ಟಿಗೆ. ಒಂದೇ ಊರಿನಲ್ಲಿ ನಾಲ್ಕು ದಿನ ಟೆಂಟ್ ಹಾಕುವ ಧೈರ್ಯ ಯಾರಿಗೂ ಇಲ್ಲವಾಗಿದೆ, ಕಾರಣ ಮರುದಿನ ಪ್ರೇಕ್ಷಕರ ಪ್ರತಿಕ್ರಿಯೆ ಏನು ಇರಭಹುದೆಂಬ ಆತ್ಮ ವಿಶ್ವಾಸವಿಲ್ಲ. ಇದು ಕಡಿಮೆ ಜನ ಆಟಕ್ಕೆ ಬರುವ ಮೂಲಕ ವ್ಯಕ್ತವಾದರೆ ಆಟಕ್ಕೆ ಸಂಚಕಾರ. ಆದ್ದರಿಂದ ರಾತ್ರಿಯಿಂದ ರಾತ್ರಿಗೆ ಊರು ಬದಲಾವಣೆ ಅನಿವಾರ್ಯ. ಹೀಗಾದಾಗ ಅಪರೂಪಕ್ಕೆ ಆಟಕ್ಕೆ ಬರುವ ಪ್ರೇಕ್ಷಕರ ಕುತೂಹಲವನ್ನು ಅವರ ಅಭಿರುಚಿಯೆಂದು ಭ್ರಮಿಸುವ ಅಪಾಯಕಾರಿ ಪ್ರವೃತ್ತಿ ಕಂಡುಬರುತ್ತಿದೆ. ಕಲೆಯ ಸ್ವರೂಪ ರಕ್ಷಣೆಯ ಕುರಿತಾದ ಕಾಳಜಿ ಇರುವ ಪ್ರೇಕ್ಷಕರು ಬಹಳ ಜವಬ್ದಾರಿಯುತವಾದ ಪಾತ್ರ ನಿರ್ವಹಣೆಗೆ ಸಿದ್ದರಾಗಬೇಕಾಗಿದೆ. ಅವುಗಳು-

 1. ವಿಚಾರ ವಿಮರ್ಶೆಯ ಮೂಲಕ ಕಲಾಸ್ವರೂಪದ ಕುರಿತಾದ ಆಳವಾದ ಅರಿವನ್ನು ಗಳಿಸಬೇಕು. ಯಕ್ಷಗಾನದ ವಿವಿಧ ಅಂಗಗಳ ಬಗ್ಗೆ, ಭಾಗವತಿಕೆ, ನೃತ್ಯ, ಅಭಿನಯ, ವೇಷಭೂಷಣದ ಬಗ್ಗೆ ಸಮಗ್ರ ಪ್ರಾತ್ಯಕ್ಷಿಕೆ, ತರಭೇತಿ ಶಿಬಿರ, ವಿಚಾರ ಸಂಕಿರಣಗಳ ಮೂಲಕ ಕಲೆಯ ಸತ್ವವನ್ನು ಪರಿಚಯಿಸಬೇಕು.

 2. ಯಕ್ಷಗಾನ ಕಲಾವಿದರೊಂದಿಗೆ ಪ್ರಸ್ತುತ ಬದಲಾವಣೆ ಬಗ್ಗೆ ತೆರೆದ ಮನಸ್ಸಿನಿಂದ ಚರ್ಚೆ, ವ್ಯವಸಾಯಿ ಹವ್ಯಾಸಿ ಕಲಾವಿದರ ಮುಖಾಮುಖಿ, ವಿಚಾರ ವಿನಿಮಯ. ಅನುಸರಿಸಲು ಯೋಗ್ಯವಾದ ಉತ್ತಮ ಮಾದರಿಗಳನ್ನು ತೋರಿಸಬೇಕು.

 3. ನವೀನ ಕಳಪೆ ಆಟಗಳನ್ನು ನೋಡಿ ಅಲ್ಲಿ ನೆಡೆಯುವ ಕಲಾವಿಕೃತಿಗಳ ಬಗ್ಗೆ ವಿಮರ್ಶೆ ಪ್ರಕಟಿಸ ಬೇಕು. ಅನೇಕಸಲ ಇಂತಹ ವಿಕೃತಿಗಳನ್ನು ನೋಡುವುದು ಬೇಡ ಎಂದು ದೂರ ಉಳಿಯುತ್ತಾರೆ. ಈ ಬಗೆಯ ನಿರ್ಲಿಪ್ತತೆ ಕಲೆಗೆ ಮಾರಕ. ಇದು ಪರೋಕ್ಷವಾಗಿ ಅಂತಹದ್ದನ್ನು ಸಹಕರಿಸಿದಂತೆ.

 4. ಮೇಳಗಳ ಯಜಮಾನರಿಗೆ ತಾವು ನೋಡಿದ ಪ್ರದರರ್ಶನದ ಒಳ್ಳೆಯ ಹಾಗು ಕೆಟ್ಟ ಅಂಶಗಳನ್ನು ಮನದಟ್ಟು ಮಾಡಬೇಕು. ಯಜಮಾನರ ಆಸಕ್ತಿ ಕಲೆಕ್ಷನ್ ಮೇಲೆ ಆದ್ದರಿಂದ ರಂಗಸ್ಥಳದ ಆಗು ಹೋಗುಗಳ ಬಗ್ಗೆ ನಿಗಾ ಇಡಲಾರರು. ಅನೇಕ ಯಜಮಾನರು ಯಕ್ಷಗಾನದ ಪರಿಣತರೂ ಅಲ್ಲ, ಹಾಗಾಗಿ ಯಾವುದೆ ಗುಣಾತ್ಮಕ ಸಲಹೆಯನ್ನು ಖಂಡಿತ ಅವರು ಪರಿಗಣಿಸಿ ರಂಗದ ಶಿಸ್ತನ್ನು ಕಾಪಾಡಬಲ್ಲರು. ಕಲಾವಿದರಿಗೂ ತಿದ್ದಿಕೊಳ್ಳುವಂತೆ ಸೂಚಿಸಬಲ್ಲರು.

 5. ಕಲೆಯ ಕುರಿತಾದ ಪ್ರೇಕ್ಷಕರು ಸಂಘಟಿತರಾಗಿ ಯಕ್ಷಗಾನ ಕಲಾವಿದರ ಕ್ಷೇಮ ಹಾಗು ಭದ್ರತೆಗಾಗಿ ಯೋಜನೆಗಳನ್ನು ಆರಂಬಿಸಬೇಕು. ಕಲಾವಿದರು ಅಭದ್ರತೆಯಿಂದ ಮುಕ್ತರಾದರೆ ಕಲೆಯ ಬಗ್ಗೆ ಸ್ವತಂತ್ರವಾಗಿ ಚಿಂತಿಸಬಲ್ಲರು. ಇವೆಲ್ಲವೂ ಪ್ರೇಕ್ಷಕರ ನೆಲೆಯಲ್ಲಿನ ಚಿಂತನೆಯಾದರೆ ಯಜಮಾನರ/ಸಂಘಟಕರ ನೆಲೆಯಲ್ಲಿ ಯೋಚಿಸಿದಾಗ -

  • ಸಮರ್ಪಕ ಆಸನ ವ್ಯವಸ್ಥೆ : ಟೆಂಟಿನಾಟವಿರಲಿ, ಬಯಲಾಟವಿರಲಿ ಸಮರ್ಪಕವಾದ ಆಸನ ವ್ಯವಸ್ಥೆ ಬೇಕು. ಅದನ್ನು ಆಯಾ ಮೇಳಗಳು ವ್ಯವಸ್ಥೆ ಮಾಡಬೇಕು. ತಗಲುವ ವೆಚ್ಚವನ್ನು ಹರಕೆದಾರರು ಬರಿಸಬೇಕು. ಹರಕೆ ಆಟಗಳಲ್ಲಿ ಸಮರ್ಪಕ ಆಸನ ವ್ಯವಸ್ಥೆಯಿಲ್ಲದೆ ಸಹೃದಯಿ ವಿಮರ್ಶಕರು ಕಲಾರಸಿಕರು ಪ್ರದರ್ಶನದಿಂದ ದೂರ ಉಳಿಯುತ್ತಾರೆ.

  • ವೇಷಭೂಷಣ : ಕೆಲವು ಮೇಳಗಳಲ್ಲಿ ಅತೀ ಹಳೆಯ ಬಣ್ಣ ಮಾಸಿದ ಬಟ್ಟೆಬರೆ ಮಣಿ ಸಾಮಾನನ್ನು ಬಳಸಳಾಗುತ್ತದೆ. ಪರಿಣಾಮ ವೇಷಗಳು ನವರಾತ್ರಿಯ ಹಗಲು ವೇಷದಂತೆ ಕಾಣುತ್ತವೆ. ಸಂಘಟಕರು ವೇಷಭೂಷಣಗಳನ್ನು ಕನಿಷ್ಟ ಮೂರು ವರ್ಷಕ್ಕೊಮ್ಮೆಯಾದರೂ ಹೊಸದಾಗಿ ತಯಾರಿಸಬೇಕು. ಯಕ್ಷಗಾನದ ಬಹುಸಂಖ್ಯಾತರನ್ನು ಆಕರ್ಷಿಸುವುದು ವೇಷಭೂಷಣವೇ.

  • ಕಲಾವಿದರಿಗೆ ಸಮಾನ ಗೌರವ : ಮೇಳದ ಕಲಾವಿದರೆಲ್ಲ ಸಮಾನರು. ಎಲ್ಲರಿಗೂ ಸಂಘಟಕರು ಸಮಾನ ಗೌರವ ನೀಡಬೇಕು. ಜಾತಿ, ಜಾತಿಗಳ ಮದ್ಯೆ ಭೇದ ತರಬಾರದು. ಇತರೆಲ್ಲಡೆಯಂತೆ ಯಕ್ಷಗಾನಕ್ಕೂ ಬಡಿದ ಈ ರೋಗವನ್ನು ಕಿತ್ತೆಸೆದಾಗಲೆ ಈ ಕಲೆಗೆ ಮುಕ್ತಿ. ಯಕ್ಷಗಾನ ಸಂಘಟಿಸುವ ಕೆಲವು ದೇವಾಲಯಗಳು ಜಾತಿ ಭೇದ, ಪಂಕ್ತಿ ಭೇದ ಮಾಡುವುದರಿಂದ ಕಲಾವಿದರು ಒಂದೇ ಕುಟುಂಬದವರಾಗಿ ಬಾಳುವ ಸೌಹಾರ್ದ ವಾತಾವರಣ ಮೂಡೂವುದಿಲ್ಲ. ಚೌಕಿಯಲ್ಲಿ ಕಲಾವಿದನ ಯೋಗ್ಯತೆಗನುಗುನವಾಗಿ ಜಾಗವಿರಭೇಕೆ ವಿನಹ ಜಾತಿಯಿಂದಲ್ಲ. ಯಕ್ಷಗಾನ ಕಲೆಗಾಗಿ ಏನನ್ನೂ ಮಾಡದೆ ವೇದಿಕೆಯೇರಿ ಉದ್ದುದ್ದ ಭಾಷಣ ಮಾಡುವವರಿಗೆ ಸನ್ಮಾನಿಸುವ ಬದಲು ಕಲಾವಿದರಿಗೆ ಅದು ಸಲ್ಲಬೇಕು. ತೆರೆಯ ಹಿಂದೆ ಕಲಾವಿದರಿಗೆ ಸಹಕರಿಸುವವರನ್ನು ಗುರುತಿಸಬೇಕು. ಪದೇ, ಪದೆ ಖ್ಯಾತನಾಮಮರಿಗೆ ಸನ್ಮಾನ ಮಾಡುವ ಬದಲು ಉದಯೋನ್ಮುಖರನ್ನು ಗುರುತಿಸುವಂತಾಗಬೇಕು. ಕಲೆಗೆ ಜಾತಿಯ ಸೋಂಕು ತಗಲಿದರೆ‌ಅದು ಕಲೆಯಾಗದು ‘ಕಲೆ’ ಯಾಗುತ್ತದೆ.

  • ಧ್ವನಿ ಮತ್ತು ಬೆಳಕು : ರಂಗದಲ್ಲಿ ಎರಡು ಉದ್ದನೆ ಮೈಕು ಬಳಸಿ ಕಲಾವಿದರ ಮುಖ ಕಾಣದಿರುವಂತೆ ಮಾಡುವುದರ ಬದಲು, ಸಾದ್ಯವಾದಲ್ಲಿ ಸಣ್ಣ ಮೈಕನ್ನು ಕಲಾವಿದರ ಬಟ್ಟೆಗೆ ಸಿಕ್ಕಿಸಿ ಕೊಳ್ಳುವಂತಾದರೆ ಸೂಕ್ತ. ಚೌಕಿ ಹಾಗು ರಂಗದಲ್ಲಿ ಟ್ಯೂಬ್ ಲೈಟನ್ನೂ ನಿಷೇದಿಸಿ ಹ್ಯಾಲೋಜನ್ ಬಲ್ಬ್ ಬಳಸಬೇಕು

  • ಯಕ್ಷಗಾನ ಅಕಾಡೆಮಿ : ಇದೀಗ ರೂಪುಗೊಂಡಿರುವ ಯಕ್ಷಗಾನ ಅಕಾಡೆಮಿ ಬಹಳಷ್ಟು ಕಾರ್ಯಗಳನ್ನು ಮಾಡಬಹುದು. ಯಾವುದೇ ಹೇಳಹೆಸರಿಲ್ಲದ ಸಂಘ ಸಂಸ್ಥೆಗೆ ಅವರ ಸ್ವಂತ ಕಾರ್ಯಕ್ರಮಗಳಲ್ಲಿ ಅಕಾಡೆಮಿ ಸಹಭಾಗಿತ್ವವಹಿಸಬಾರದು. ಒಬ್ಬ ವ್ಯಕ್ತಿಯೇ ಒಂದು ಸಂಸ್ಥೆ ಎಂದುಹೇಳಿ ಕೊಳ್ಳುತ್ತಾ ಸ್ವಹಿತಾಸಕ್ತಿಯ ಕಾರ್ಯಕ್ರಮಗಳಿಗೆ ಅಕಾಡೆಮಿ ಸಹಕಾರ ನೀಡುವಾಗ ಜಾಗರೂಕತೆಯಿಂದ ಅದರ ಕಾರ್ಯಚಟುವಟಿಕೆಯ ಬಗ್ಗೆ ನಿಗಾವಹಿಸಬೇಕು. ಅಂತವರಿಗೆ ಸಹಕಾರ ನೀಡುವ ಬದಲು ಅಕಾಡೆಮಿ ಪ್ರತ್ಯೇಕವಾಗಿ ಉಪಯುಕ್ತ ಕಾರ್ಯಕ್ರಮ ನೀಡಬಹುದು. ಯಕ್ಷಗಾನ ಸಮ್ಮೇಳನವನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಹಾಗೆ ಪ್ರತೀ ವರ್ಷ ಮಾಡಿ ನಿರ್ಣಯಗಳನ್ನು ತೆಗೆದುಕೊಳ್ಳಬಹುದು. ಆದರೆ ಅಂತಹ ನಿರ್ಣಯಗಳು ಕಡತಗಳಾಗಿ ಉಳಿಯಬಾರದು. ಯಕ್ಷಗಾನದ ಸಮಗ್ರ ಮಾಹಿತಿ ಕೋಶ, ಕಲಾವಿದನ ಸಮಗ್ರ ಮಾಹಿತಿ ಪುಸ್ತಕ ತುರ್ತಾಗಿ ಆಗಬೇಕಾಗಿದೆ. ಕನ್ನಡ ಎಂ. ಎ. ಹಂತದಲ್ಲಿ ಕರ್ನಾಟಕದ ಎಲ್ಲಾ ವಿಶ್ವ ವಿದ್ಯಾನಿಲಯದಲ್ಲಿ ಯಕ್ಷಗಾನವು ಕಡ್ಡಾಯ ಪಠ್ಯಕ್ರಮವಾಗಬೇಕು. ಯಕ್ಷಗಾನದ ಅದ್ಯಯನವು ಭಾರತೀಯ ಸಂಸ್ಕತಿಯ ಅಧ್ಯಯನವಾಗಿರುತ್ತದೆ. ಕಲೆ, ಸಂಸ್ಕೃತಿ ಒಟ್ಟಾಗಿ ಸಾಗಬೇಕು. ಆಗ ಬಾಳು ಹಸನಾಗುತ್ತದೆ, ಕಲೆ ಬೆಳಗುತ್ತದೆ.


 6. ಆಧುನಿಕ ಆಭಾಸಕ್ಕೆ ಕಲಾವಿದರು ಕಾರಣರೇ?

  ಪ್ರದರ್ಶನದಲ್ಲಿನ ಅಭಾಸಕ್ಕೆ ಕಲಾವಿದರೇ ಕಾರಣವೆನ್ನುವವರಿಗೆ ಒಂದು ಕಿವಿಮಾತು. ವರ್ಷ ಪೂರ್ತಿ ಹೊಸ ಪ್ರಸಂಗದಲ್ಲಿ ಹೊಟ್ಟೆಪಾಡಿಗಾಗಿ ಅಭಿನಯಿಸಿದ ಕಲಾವಿದ ಅಪರೂಪಕ್ಕೊಮ್ಮೆ ದೊರೆತ ಪೌರಾಣಿಕ ಪ್ರಸಂಗಗಳಲ್ಲಿ, ಮಳೆಗಾಲದಲ್ಲಿ ನೆಡೆಯುವ ಕಾರ್ಯಕ್ರಮಗಳಲ್ಲಿ ಸಾಂಪ್ರದಾಯವಾಗಿ, ಯಕ್ಷಗಾನೀಯವಾಗಿ ಪ್ರದರ್ಶನ ನೀಡಬಲ್ಲರು ಎನ್ನುವುದಕ್ಕೆ ನಮ್ಮಲ್ಲಿ ಸಾಕಷ್ಟು ಪುರಾವೆಗಳಿವೆ.

  ತಿರುಗಾಟವಿಡೀ ದೊಂಬರಾಟದಂತ ಹೊಸ ಪ್ರಸಂಗಗಳಲ್ಲಿ ಅಭಿನಯಿಸಿದ ಬಡಗಿನ ಇಬ್ಬರು ಖ್ಯಾತನಾಮರಾದ ಬಳ್ಕೂರು ಕೃಷ್ನ ಯಾಜಿ ಮತ್ತು ತೀರ್ಥಳ್ಳಿ ಗೋಪಾಲಾಚಾರರು ಪೌರಾಣಿಕ ಪ್ರಸಂಗಗಳಲ್ಲಿ ಅಷ್ಟೇ ಅದ್ಬುತವಾಗಿ ಅಭಿನಯಿಸಬಲ್ಲರು. ಹಾಗೆಯೇ ತಿರುಗಾಟವಿಡೀ ದೇವಿ ಮಹಾತ್ಮೆ, ಕ್ಷೇತ್ರ ಮಹಾತ್ಮೇಯಂತ ಪ್ರಸಂಗಗಳಲ್ಲಿ ಯಕ್ಷಗಾನೇತರ ವೇಷಮಾಡುವ ಗೋವಿಂದ ಭಟ್ಟರು, ಅರುವ ಕೊರಗಪ್ಪ ಶೆಟ್ಟರು ಸಾಂಪ್ರದಾಯಬದ್ದವಾಗಿ ಪ್ರದರ್ಶನ ನೀಡಬಲ್ಲರು ಎನ್ನುವುದಕ್ಕೆ ಯಕ್ಷಗಾನ ಕಲಾರಂಗ ಆಯೋಜಿಸಿದ ಮಳೆಗಾಲದ ಕಾರ್ಯಕ್ರಮಗಳೇ ಸಾಕ್ಷಿ.

  ವರ್ಷಪೂರ್ತಿ ಮಂದಾರ್ತಿ ಕ್ಷೇತ್ರ ಮಹಾತ್ಮೆ, ಮಾರಣಕಟ್ಟೆ ಕ್ಷೇತ್ರ ಮಹಾತ್ಮೆಯಂತಹ ಪ್ರಸಂಗಗಳಲ್ಲಿ ಅನಿವಾರ್ಯವಾಗಿ ವೇಷ ಮಾಡುವ ಐರೋಡಿ ಗೋವಿಂದಪ್ಪ, ನರಾಡಿ ಬೋಜರಾಜ ಶೆಟ್ಟಿ, ಎಂ. ಎ. ನಾಯ್ಕ, ನೀಲಾವರ ಮಹಾಬಲ ಶೆಟ್ಟಿ, ಐರಬೈಲು ಆನಂದ ಸೆಟ್ಟಿ, ಆಜ್ರಿ ಗೋಪಾಲ ಗಾಣಿಗರಂತವರಿಂದ ಪೌರಾಣಿಕ ಪ್ರದರ್ಶನ ಏರ್ಪಡಿಸಿದರೆ ಅದ್ಬುತ ಯಶಸ್ಸನ್ನು ನಿರೀಕ್ಷಿಸಬಹುದು. ಹಾಸ್ಯವೇ ಅಭಾಸವಾಗಿರುವ ಇಂದಿನ ಹೊಸ ಪ್ರಸಂಗಗಳಲ್ಲಿ ವರ್ಷವಿಡೀ ಹಾಸ್ಯಗಾರರಾಗಿರುವ ಹಳ್ಳಾಡಿ ಜಯರಾಮ ಶೆಟ್ಟರಿಂದ ಪೌರಾಣಿಕ ಪ್ರಸಂಗಗಳಲ್ಲಿ ಕುಂಜಾಲು ರಾಮಕೃಷ್ಣರ ನೆಡೆಯನ್ನು ಗುರುತಿಸಬಹುದು.

  ಪೌರಾಣಿಕ ಪ್ರಸಂಗಗಳಲ್ಲಿ ಹಿರಿಯ ಭಾಗವತರನ್ನು ನೆನಪಿಸಬಲ್ಲ ಸುಬ್ರಹ್ಮಣ್ಯ ಧಾರೇಶ್ವರ, ಕೆ. ಪಿ. ಹೆಗಡೆ, ಹೆರಂಜಾಲು ಗೋಪಾಲ ಗಾಣಿಗ, ಸುಬ್ರಹ್ಮಣ್ಯ ಅಚಾರರಂತ ಭಾಗವತರಿಗು ಕೊರತೆಯಿಲ್ಲ. ಇವೆಲ್ಲ ಕೇವಲ ಕೆಲವು ಉದಾಹರಣೆಗಳು. ಇದು ಹೊಟ್ಟೆ ಪಾಡಿಗಾಗಿ ಬದುಕುವ ಕಲೆ ಬೇರೆ, ಹ್ರದಯದಿಂದ ಬರುವ ನೈಜ ಕಲೆ ಬೇರೆ ಅನ್ನುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ? ಹಾಗಿದ್ದಲ್ಲಿ ಆಭಾಸಗಳಿಗೆ ಕಲಾವಿದ ಹೊಣೆಗಾರನೆ ? ಯೋಚಿಸಬೇಕು.


1972ರಲ್ಲಿ ಡಾ.ಕಾರಂತರು ಉಡುಪಿಯಲ್ಲಿ ಬಡಗುತಿಟ್ಟಿನ ಭಾಗವತರನ್ನೆಲ್ಲಾ ಸೇರಿಸಿ ಸಾಂಪ್ರದಾಯಬದ್ದ ಹಾಡುಗಳನ್ನೆಲ್ಲಾ ದಾಖಲಿಸಿದ್ದು ಮಾತ್ರವಲ್ಲದೆ ಹಾಡುಗಾರಿಕೆಯಲ್ಲಿ ಪದ್ಯದ ಭಾವ ಹೇಗಿರಬೇಕೆಂದು ಒಳನೋಟ ನೀಡಿದರು. ಈ ಶಿಭಿರದ ಪ್ರಭಾವ ಪರೋಕ್ಷವಾಗಿ ಬಡಗುತಿಟ್ಟಿನ ಭಾಗವತರಿಗೆ ಲಭಿಸಿತ್ತು. ದಿ. ಕಾಳಿಂಗ ನಾವಡರು ತಮ್ಮ ಗಾನಶೈಲಿಯಲ್ಲಿ ಇದನ್ನೆಲ್ಲ ರೂಡಿಸಿಕೊಂಡಿದ್ದರು. ಮೀಸೆ ಮೂಡುವ ಮೊದಲೆ ಪರಿಪೂರ್ಣ ಭಾಗವತರಾಗುವಲ್ಲಿ ಅವರ ಶ್ರಮಪೂರ್ಣ ದುಡಿಮೆ, ಹಿರಿಯರ ಮಾರ್ಗದರ್ಶನವೇ ಕಾರಣವಾಗಿತ್ತು. ಕಲಾವಿದರಿಗೆ ಕಲಿಯುವ ಹಠಬೇಕು, ಜ್ಝಾನದ ಹಸಿವುಬೇಕು. ಅ. ನ. ಕೃ. ಹೇಳಿದ ಹಾಗೆ ಹಸಿವು, ಬಡತನಗಳು ಕಲಿಸುವಷ್ಟು ಜ್ಝಾನವನ್ನು ಯಾವ ವಿಶ್ವವಿಧ್ಯಾನಿಲಯಗಳೂ ಕಲಿಸಲಾರವು ಅಲ್ಲವೇ?

******************

ಯಕ್ಷಗಾನದಲ್ಲಿ ಆಧುನಿಕ ಅಭಾಸಗಳು ಮತ್ತು ಪರಿಹಾರ ( ಭಾಗ-1)

ಯಕ್ಷಗಾನ ಹಿಮ್ಮೇಳ ಭಾಗವತಿಕೆ ಮತ್ತು ವಾದನದ ಆಭಾಸಗಳು ( ಭಾಗ-2)
Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ