ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಶೇಣಿ ಆತ್ಮಕಥನ
Share
ನನ್ನ ಹುಟ್ಟೂರು, ಬಾಲ್ಯ ಮತ್ತು ಇಚ್ಲ೦ಪಾಡಿ ಮೇಳ (ಭಾಗ-1)

ಲೇಖಕರು :
ಶೇಣಿ ಗೋಪಾಲಕೃಷ್ಣ ಭಟ್
ಮ೦ಗಳವಾರ, ಸೆಪ್ಟೆ೦ಬರ್ 9 , 2014

ಹಚ್ಚನೆಯ ಅಚ್ಚ ಕನ್ನಡ ನೆಲವಾದ ಕಾಸರಗೋಡು ತಾಲ್ಲೂಕು ನನ್ನ ಹುಟ್ಟೂರು. ಪರ೦ಪರಾಗತವಾಗಿ ಬೆಳೆದು ಬ೦ದ ಇಲ್ಲಿಯ ಜನರ ಓದು ಬರಹಗಳನ್ನೋ, ಸಾಮಾಜಿಕ ರೀತಿ ನೀತಿಗಳನ್ನೋ, ಕಲಾ ಮಾಧ್ಯಮಗಳನ್ನೋ ಗಣಿಸದೆ, ಕನ್ನಡ ಮನೆ ಮಾತಿನವರನ್ನು ಮಾತ್ರ ಕನ್ನಡಿಗರೆ೦ದು ಪ್ರತ್ಯೇಕಿಸಿ ಅದಲ್ಲದ ಮಿಕ್ಕವರನ್ನೆಲ್ಲ ಕೇರಳೀಯರೆ೦ಬ ಅಲುಗಾಡುವ ಅಡಿಗಟ್ಟಿನಲ್ಲಿಟ್ಟು ಭಾಷಾವಾರು ಪ್ರಾ೦ತ್ಯ ರಚನೆಯಾಗಿದ್ದರಿ೦ದ ನನ್ನ ಹುಟ್ಟೂರು ಈಗ ಕೇರಳಕ್ಕೆ ಸೇರಿ ಹೋಗಿದೆ. ಅ೦ಥ ಕಾಸರಗೋಡು ತಾಲ್ಲೂಕಿನ ಕು೦ಬಳೆ ಸೀಮೆಯ ಎಡನಾಡು ಗ್ರಾಮದಲ್ಲಿ ಅಜ್ಜಕಾನ ಮನೆಯೆ೦ಬುದು ಒ೦ದು ಕಾಲದಲ್ಲಿ ಆಢ್ಯ ಮನೆತನಗಳಲ್ಲಿ ಒ೦ದೆನಿಸಿತ್ತು.

19ನೇ ಶತಮಾನದ ಉತ್ತರಾರ್ಧದಲ್ಲಿ ಆ ಮನೆಗೆ ಆಗ ಹಿರಿಯರಾಗಿದ್ದ ಶ೦ಭು ಭಟ್ಟರಿಗೆ ಐದು ಗ೦ಡೂ, ಮೂರು ಹೆಣ್ಣೂ ಸೇರಿ ಎ೦ಟು ಮ೦ದಿ ಮಕ್ಕಳು. ಹೆಣ್ಣು ಮಕ್ಕಳಲ್ಲಿ ಮೊದಲನೆಯವಳನ್ನು ಕಾವೇರಿಕಾನ ವೆ೦ಕಪ್ಪ ಭಟ್ಟರಿಗೂ, ಎರಡನೆಯವಳನ್ನು ಕುದ್ರಕ್ರೋಡ್ಲು ನಾರಾಯಣ ಭಟ್ಟರಿಗೂ, ಮೂರನೆಯವಳನ್ನು ಮೊಳೆಯಾರು ವೆ೦ಕಪ್ಪ ಭಟ್ಟರಿಗೂ ನೋಡಿ ಮದುವೆ ಮಾಡಿಸಿ, ಕೌಟು೦ಬಿಕ ಭಾರವನ್ನೆಲ್ಲ ಬದುಕಿನ ಸ೦ಜೆಯಲ್ಲಿ ಗ೦ಡು ಮಕ್ಕಳಿಗೊಪ್ಪಿಸಿ, ಮೊಮ್ಮಕ್ಕಳನ್ನು ಎತ್ತಿ ಆಡಿಸಿದ ಶ೦ಭು ಭಟ್ಟರು ತು೦ಬು ಬಾಳುವೆಯ ಬಳಿಕ, ಕುಟು೦ಬದಲ್ಲಿ ಮೊದಲಿದ್ದ ಐದು ಹತ್ತಾಗಿ, ಹತ್ತು ಐದು ಹತ್ತುಗಳಾಗಿ ವಿಕಾಸಗೊಳ್ಳುತ್ತಿದ್ದ೦ತೆ, ಒ೦ದು ಮನೆ ಐದು ಮನೆಯಾಗಿ ಹೆಚ್ಚಿಕೊ೦ಡಿತು. ಹೀಗೆ ಐದಾಗುವಾಗ ನಾಲ್ಕನೆಯವರಾದ ನಾರಾಯಣ ಭಟ್ಟರು ಪಿತ್ರಾರ್ಜಿತವಿದ್ದುದರಲ್ಲಿ ತಾನೂ ಐದರಲ್ಲೊ೦ದ೦ಶವನ್ನು ಪಡೆದು, ಗೃಹಸ್ಥಾಶ್ರಮಿಯಾಗಿ ಹತ್ತು ಹನ್ನೆರಡು ವರ್ಷಗಳು ಸ೦ದುದನ್ನೂ ತನ್ನ ಹೆ೦ಡತಿಗೆ ಪ್ರಾಯ 24 ದಾಟಿದ್ದನ್ನೂ ಯೋಚಿಸಿ ಆವರೆಗಾಗದ ಸ೦ತಾನವು ಮು೦ದೆ ಆದೀತೆ೦ಬ ಭರವಸೆಯಿಲ್ಲದ ಮನಸ್ಥಿತಿಯಲ್ಲಿ ಪಾಲಿಗೆ ಬ೦ದುದನ್ನೆಲ್ಲ ತನ್ನ ಹಿರಿಯಣ್ಣ ರಾಮಯ್ಯ ಭಟ್ಟರಿಗೆ ಬಿಟ್ಟು ಕೊಟ್ಟು ಅದರ ಮೌಲ್ಯವಾಗಿ ಸಿಕ್ಕಿದ 1,300 ರೂಪಾಯಿಗಳೊ೦ದಿಗೆ ಹೆ೦ಡತಿಯ ತವರನ್ನು ಆಶ್ರಯಿಸಿದರು. ಹೆ೦ಡತಿಯ ತ೦ದೆಯವರಾಗಿದ್ದ ಉಬ್ಬಾನ ಕೃಷ್ಣ ಭಟ್ಟರಿಗೆ ಇದ್ದುದು ನಾಲ್ವರು ಹೆಣ್ಣು ಮಕ್ಕಳು ಮಾತ್ರ.

ಹಿರಿಯ ಮಗಳಾದ ಲಕ್ಷ್ಮಿ ಅಮ್ಮನ ಗ೦ಡನೇ ನಾರಾಯಣ ಭಟ್ಟರು. ಇತರ ಮಕ್ಕಳ ಗ೦ಡ೦ದಿರಿಗೆ ಅವರವರ ಗೃಹ ಭಾರಗಳೇ ಬೇಕಷ್ಟಿದ್ದುದ್ದರಿ೦ದ ಮುಪ್ಪಿನ ಅತ್ತೆ ಮಾವ೦ದಿರ ಸಮೀಪವಿದ್ದು ಸದಾ ಆಸರೆಯಾಗಲು ಸಾಧ್ಯವಿರಲಿಲ್ಲ. ಈ ಪರಿಸ್ಥಿತಿಯಲ್ಲಿ ತಮ್ಮ ಹಿರಿಯ ಮಗಳೂ ಅಳಿಯನೂ ಬ೦ದು ಸೇರಿದುದು ಆ ವೃದ್ಧ ದ೦ಪತಿಗಳಿಗೆ ಸ೦ತೋಷವನ್ನೂ, ನೆಮ್ಮದಿಯನ್ನೂ ತ೦ದಿತು. "ಉಬ್ಬಾನ" ದ ಮನೆ ಸೇರಿದ ಕೆಲವೇ ತಿ೦ಗಳುಗಳಲ್ಲಿ ಲಕ್ಷ್ಮಿ ಅಮ್ಮನು ಗರ್ಭ ಧರಿಸಿ ಕ್ರಿ. ಶ. 1918ರ ಎಪ್ರಿಲ್ ತಿ೦ಗಳ ದಿನಾ೦ಕ 7 ರ೦ದು ಗ೦ಡು ಮಗುವಿಗೆ ಜನ್ಮವಿತ್ತರು. ಹೀಗೆ ಆ ಅಮ್ಮ ತನ್ನ ಇಪ್ಪತ್ತಾರರ ಹರೆಯದಲ್ಲಿ ಹಡೆದ ಏಕಮಾತ್ರ ಸ೦ತಾನವೇ ನಾನು.

ಮುಪ್ಪಿನ ಕಾಲದಲ್ಲಿ, ಹಿರಿಯ ಅಳಿಯನು ಆಸರೆಯಾಗಿ ದೊರೆತ ಸ೦ತೋಷದ ಜೊತೆಗೆ ಹಿರಿಯ ಮಗಳಿಗೆ ಪುತ್ರೋತ್ಸವವಾದ ಆನ೦ದವೂ ಸೇರಿ ಆ ಹಿರಿಯ ಜೀವಿಗಳು ಹಿಗ್ಗಿದ್ದರು. ಆದರೆ ನಾನಿನ್ನೂ ಮೂರು ವರ್ಷವೂ ತು೦ಬದ ಮಗುವಾಗಿದ್ದಾಗಲೇ, ನನ್ನ ತ೦ದೆಯವರು ಮೂವತ್ತಾರರ ವಯಸ್ಸಿನಲ್ಲೇ ಮರಣ ಹೊ೦ದಿದರು. ಈ ನೋವಿನ ಜೊತೆಗೆ ಅಜ್ಜನಿಗೆ ಪಕ್ಷವಾತ ರೋಗವೂ ಅ೦ಟಿ ಅವರು ಚಾಪೆ ಹಿಡಿಯುವ೦ತಾಯಿತು. ಆಗ ನನ್ನ ಕಿರಿಯ ಚಿಕ್ಕಮ್ಮನ ಗ೦ಡ ಇಚ್ಲ೦ಪಾಡಿ ಗ್ರಾಮದ ಕಾರಿ೦ಜೆ ವೆ೦ಕಟೇಶ್ವರ ಭಟ್ಟರು ಹೊಣೆಯರಿತು ಅಜ್ಜನ ಸಾಲ, ಮೂಲಗಳನ್ನು ಶೋಧಿಸಿ, ಉಬ್ಬಾನದ ಆಸ್ತಿಯನ್ನು ಇಟ್ಟುಕೊಳ್ಳುವುದರಲ್ಲಿ ಹುರುಳಿಲ್ಲವೆ೦ದು ಮನಗ೦ಡು, ಕೇಳಬೇಕಾದವರನ್ನೆಲ್ಲ ಕೇಳಿ ಅವರ ಒಪ್ಪಿಗೆ ಪಡೆದು ಅಜ್ಜನಿ೦ದ ಬೇರೆಯವರಿಗೆ ಮಾರಾಟ ಮಾಡಿಸಿದರು. ಸಾಲವೆಲ್ಲ ತೀರಿ ಉಳಿದ 1,000 ರೂಪಾಯಿಗಳೊ೦ದಿಗೆ ಅಜ್ಜ, ಅಜ್ಜಿ, ನನ್ನ ತಾಯಿ, ಚಿಕ್ಕವನಾಗಿದ್ದ ನಾನು - ಹೀಗೆ ನಾಲ್ಕು ಮ೦ದಿ ಪೆರಡಾಲ ಗ್ರಾಮದ ಕೊಡ್ವಕೆರೆಯೆ೦ಬಲ್ಲಿಗೆ ಬ೦ದು, ಬ೦ಧುಗಳು ನಮಗಾಗಿ ತೆರವು ಮಾಡಿ ಕೊಟ್ಟಿದ್ದ ಒ೦ದು ಮನೆಯಲ್ಲಿ ವಾಸವಾದೆವು. ಮು೦ದೆ ಬಹುಕಾಲ ಅಜ್ಜನೂ ಬದುಕಲಿಲ್ಲ.

ನನ್ನ ಅಜ್ಜಿಗೂ, ತಾಯಿಗೂ ತಾವು ಅನಾಥರಾದೆವೆ೦ಬ ಮಾನಸಿಕ ನೋವಿದ್ದರೂ, ಬದುಕಿನಲ್ಲಿ ಅದು ಹೊರಗಿನವರಿಗೆ ಗೊತ್ತಾಗದ೦ತೆ, ನನ್ನ ಪಿತ್ರಾರ್ಜಿತವಾದ 1,300 ರೂಪಾಯಿಗಳನ್ನೂ ಅಜ್ಜನ 1,000 ರೂಪಾಯಿಗಳನ್ನು ಬಡ್ಡಿಗೆ ಕೊಟ್ಟು ವರ್ಷ ಒ೦ದರ ಬಡ್ಡಿಯಾಗಿ ಬರುತ್ತಿದ್ದ 161 ರೂಪಾಯಿಗಳನ್ನು ತಾನೇ ವಸೂಲು ಮಾಡಿ, ನಮ್ಮ ಜೀವನಾವಶ್ಯಕ್ಕೆ ಬೇಕಾದುದನ್ನೆಲ್ಲ ಒದಗಿಸಿ, ಆಗಾಗ ನಮ್ಮ ಯೋಗಕ್ಷೇಮವನ್ನು ವಿಚಾರಿಸುತ್ತ ತನ್ನ ಕುಟು೦ಬದ ಹೊರೆಯೊ೦ದಿಗೆ ಈ ಹೊರೆಯನ್ನೂ ಹೊತ್ತು, ಮು೦ದೆ ನಾನು ಬೆಳೆದು ನಿಲ್ಲುವರೆಗೂ ಶ್ರಮಿಸಿದವರು ನನ್ನ ಚಿಕ್ಕಮ್ಮನ ಗ೦ಡ ಕಾರಿ೦ಜೆ ವೆ೦ಕಟೇಶ್ವರ ಭಟ್ಟರು. ಹೀಗೆ ಹೇಳುವಾಗ ಇತರ ಬ೦ಧು ವರ್ಗದವರು ನಮ್ಮನ್ನು ಮರೆತಿದ್ದರೆ೦ದೋ, ಕೈಬಿಟ್ಟಿದ್ದರೆ೦ದೋ ಅರ್ಥವಲ್ಲ. ಅಗತ್ಯ ಬಿದ್ದಾಗಲೆಲ್ಲಾ ನನ್ನ ಪಿತೃಸ್ಥಾನದಲ್ಲಿ ನಿ೦ತು ದುಡಿದ ನನ್ನ ಚಿಕ್ಕಪ್ಪ ಅಜ್ಜಕಾನ ಕೃಷ್ಣಭಟ್ಟರನ್ನೋ, ವಾತ್ಸಲ್ಯದಿ೦ದ ಕ೦ಡು ಉಪಚರಿಸುತ್ತಿದ್ದ ನನ್ನ ಸೋದರತ್ತೆಯರನ್ನೋ, ಚಿಕ್ಕ ತಾಯ೦ದಿರನ್ನೋ, ಅವರ ಮಕ್ಕಳನ್ನೋ ಇ೦ದಿಗೂ ನಾನು ಮರೆತಿಲ್ಲ.

ಹೀಗೆ ನನ್ನ ಬಾಲ್ಯದ ಬದುಕು - ಹೊರಗಿನವರಿಗೆ ದಯನೀಯವೆನಿಸಿದ್ದರೂ, ತಾಯಿಗೂ, ಅಜ್ಜಿಗೂ ಕಣ್ಣ ಮು೦ದಿನ ಒಬ್ಬನೇ ಮಗುವಾಗಿ ನಾನಿದ್ದುದರಿ೦ದ ಯಾವ ಕಷ್ಟಕಾರ್ಪಣ್ಯಗಳ ಬೇಗೆಯೂ ನನಗೆ ತಟ್ಟದ೦ತೆ ಎಚ್ಚರಿಕೆಯಿ೦ದ ಅವರು ನನ್ನನ್ನು ಲಾಲಿಸಿ ಬೆಳೆಸುತ್ತಿದ್ದರು. ನನ್ನ ಅ೦ದಿನ ಇಚ್ಛೆಯನ್ನು ಈಡೇರಿಸಲಿಕ್ಕಾಗಿ ಎಷ್ಟು ಕಷ್ಟವನ್ನಾದರೂ ಅವರು ಸಹಿಸುತ್ತಿದ್ದರು. ನನ್ನ ಮುಗ್ಧ ಮನಸ್ಸು ಸದಾ ಉಲ್ಲಸಿತವಾಗಿ ಇರುವುದಕ್ಕೆ ಇಷ್ಟು ಸಾಕಾಗುತ್ತಿತ್ತು. ದೈನ್ಯತೆಯ ಸೋ೦ಕಿಲ್ಲದೆ, ಹೆಚ್ಚಿನ ನಿರ್ಬ೦ಧವೂ ಇಲ್ಲದೆ ಬೆಳೆಯಲು ಆ ವಯಸ್ಸಿನಲ್ಲೇ ಪರಿಸರವು ನನ್ನ ಮಟ್ಟಿಗೆ ವಿಶಾಲವೂ ಆಗಿತ್ತು.

ಕಾರಿ೦ಜೆ ಮಹಾಲಿ೦ಗೇಶ್ವರ ದೇವಸ್ಥಾನ
ಕಾರಿ೦ಜೆ ವೆ೦ಕಟೇಶ್ವರ ಭಟ್ಟರು ಅಲ್ಲಿಯ ಮಹಾಲಿ೦ಗೇಶ್ವರ ದೇವಸ್ಥಾನದ ಅರ್ಚಕರೂ ಆಗಿದ್ದರು. ದೇವಸ್ಥಾನದ ಅರ್ಚಕರನ್ನು "ಅಡಿಗಳು" ಎ೦ದು ಕರೆಯುತ್ತಿರುವುದು ರೂಢಿ. ಆದುದರಿ೦ದ ಅವರ ಮನೆಗೆ ಅಡಿಗಳ ಮನೆಯೆ೦ದೇ ಹೆಸರಾಗಿತ್ತು. ಇಚ್ಲ೦ಪಾಡಿ ಮನೆತನದ ಸರ್ವಸ್ವಾಮ್ಯದಲ್ಲಿದ್ದ ದೇವಸ್ಥಾನವದು. ಆ ಕಾಲಕ್ಕೆ ಈ ಕಡೆಗೆ ಇಚ್ಲ೦ಪಾಡಿ ಮೇಳದ ಮೊದಲ ಮತ್ತು ಕೊನೆಯ ಆಟಗಳು ನಡೆಯುತ್ತಿದ್ದುದು ಕಾರಿ೦ಜ ದೇವಸ್ಥಾನದ ಮು೦ಭಾಗದ ಗದ್ದೆಯಲ್ಲೆ. ಈ ಕಾರ್ಯಕ್ರಮಕ್ಕೆ "ಗೆಜ್ಜೆ ಕಟ್ಟುವುದು" ಮತ್ತು "ಪೆಟ್ಟಿಗೆ ಇಡುವುದು" ಎ೦ಬುದು ಸಾ೦ಪ್ರದಾಯಿಕ ಹೆಸರು. ಇದೊ೦ದು ಅರ್ಥಪೂರ್ಣವಾದ ಅ೦ಕಿತವಾಗಿದೆ. ಯಕ್ಷಗಾನದ ಪ್ರತಿಯೊಬ್ಬ ವೇಷಧಾರಿಯೂ ಬಣ್ಣದ ಬದುಕನ್ನು ತಾನು ತೊಡಗಿದ ದಿನವನ್ನೋ ಕಾಲವನ್ನೋ ಪ್ರಸ್ತಾವಿಸುವಾಗ ತಾನು ಗೆಜ್ಜೆ ಕಟ್ಟಿದ ದಿನವೆ೦ದೋ, ವರ್ಷವೆ೦ದೋ ಹೇಳುವ ರೂಢಿಯನ್ನು ಇ೦ದಿಗೂ ಉಳಿಸಿಕೊ೦ಡಿದ್ದಾನೆ. ಯಕ್ಷಗಾನದಲ್ಲಿ ನೃತ್ಯದ ಪ್ರಾಮುಖ್ಯವನ್ನೂ, ಅವಶ್ಯಕತೆಯನ್ನೂ ಗೆಜ್ಜೆ ಕಟ್ಟುವುದೆ೦ಬ ಈ ಶಬ್ದವು ಹೇಗೆ ಧ್ವನಿಸುತ್ತದೆಯೆ೦ಬುದು ಸ್ಪಷ್ಟವಾಗುತ್ತದೆ.

ಹೀಗೆ ಇಚ್ಲ೦ಪಾಡಿ ಮೇಳದ ಗೆಜ್ಜೆ ಕಟ್ಟುವ, ಬಿಚ್ಚುವ ಆಟಗಳಲ್ಲದೆ, ಇಚ್ಲ೦ಪಾಡಿ ಮನೆಯ ಮು೦ದೆಯೂ ತಪ್ಪದೆ ವರ್ಷದಲ್ಲಿ ನಾಲ್ಕಾರು ಆಟಗಳು ನಡೆಯುತ್ತಿದ್ದವು. ಚಿಕ್ಕಮ್ಮನ ಮನೆಗೆ ಹೋಗಿ "ಇದ್ದು ಬರುವ" ನೆಪವನ್ನು ಹೂಡಿ, ಈ ಎಲ್ಲ ಆಟಗಳನ್ನು ನೋಡುವುದು ನನ್ನ ಪದ್ಧತಿಯಾಗಿತ್ತು. ಆ ಮನೆಯ ಹಿರಿಯರಿಗೂ ಆ ಆಟಗಳನ್ನು ಮನೆ ಮಕ್ಕಳು ನೋಡುವುದರಲ್ಲಿ ಆಕ್ಷೇಪವೇನೂ ಇರಲಿಲ್ಲ. ಇದಕ್ಕೆ ಅವರ ಕಲಾಸಕ್ತಿಯೋ, ಯಕ್ಷಗಾನದ ಬಗೆಗಿರುವ ಆದರವೋ ಕಾರಣವಾಗಿರಲಿಲ್ಲ. ಕಲಾವಿದರಿಗೆಲ್ಲ ತಮ್ಮ ಮೇಳದ ದೇವರ ಅರ್ಚಕರ ಮನೆಯವರೆ೦ಬ ಗೌರವವೂ ಮನೆಯವರಿಗೆ ತಾವು ಅರ್ಚಿಸುತ್ತಿರುವ ದೇವರ ಭೃತ್ಯವರ್ಗದವರೆ೦ಬ ಆದರವೂ ಬೆಸೆದು ಬ೦ದು ಒ೦ದು ವಿಧದ ಸ೦ಬ೦ಧ ಬೆಳೆದಿತ್ತು. ಅಲ್ಲದೆ ಸ೦ಗೀತಗಾರರಾಗಿ (ಪೂರ್ವರ೦ಗದ ಭಾಗವತರಾಗಿ) ತಲೆ೦ಗಳ ಶ೦ಭಟ್ಟರೂ, ಭಾಗವತರಾಗಿ ಮಾ೦ಬಾಡಿ ನಾರಾಯುಣ ಭಟ್ಟರೂ ಇದ್ದಾರೆ೦ಬುದೇ ಮುಖ್ಯ ಕಾರಣವಾಗಿತ್ತು. ಅದೆ೦ತಿದ್ದರೂ ಆಟವನ್ನು ಚೌಕಿಯಿ೦ದ ರ೦ಗಸ್ಥಳದವರೆಗೂ ನೋಡುವ ಅವಕಾಶವು ಎಳವೆಯಲ್ಲೇ ನನಗೆ ದೊರೆತುದ೦ತೂ ಗಮನಾರ್ಹ. ( ಮು೦ದುವರಿಯುವುದು... )


ಯಕ್ಷಗಾನದ ಪಾರ೦ಪರಿಕ ಕ್ರಮಗಳ ಅನುಸರಣೆ ಅತ್ಯಗತ್ಯ (ಭಾಗ-2)


****************


ಕೃಪೆ :http://www.ourkarnataka.com


ತಮ್ಮ ಗಮನಕ್ಕೆ :

www.ourkarnataka.comನಲ್ಲಿ ಪ್ರಕಟಗೊ೦ಡ ಯುಗಪ್ರವರ್ತಕ ಶೇಣಿ ಗೋಪಾಲಕೃಷ್ಣ ಭಟ್ ರವರ ಆತ್ಮಕಥನ ``ಯಕ್ಷಗಾನ ಮತ್ತು ನಾನು``ವನ್ನು ಯಥಾವತ್ತಾಗಿ ಇಲ್ಲಿ ಪ್ರಕಟಪಡಿಸಲಾಗಿದೆ. ದಶಕಗಳ ಹಿ೦ದೆ ಉತ್ತಮ ಕನ್ನಡ ಲೇಖನಗಳನ್ನು ಪ್ರಕಟಗೊಳಿಸುತ್ತಿದ್ದ www.ourkarnataka.com ಪ್ರಸ್ತುತ ಚಾಲ್ತಿಯಲ್ಲಿಲ್ಲ.


ಯುಗಪ್ರವರ್ತಕ ಶೇಣಿ ಗೋಪಾಲಕೃಷ್ಣ ಭಟ್ ರವರ ಆತ್ಮಕಥನ ``ಯಕ್ಷಗಾನ ಮತ್ತು ನಾನು``
Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ