ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಶೇಣಿ ಆತ್ಮಕಥನ
Share
ಯಕ್ಷಗಾನ, ಭೂತಾರಾಧನೆ ಹಾಗೂ ಬಯಲಾಟಗಳ ಮೌಲ್ಯಮಾಪನ (ಭಾಗ-3)

ಲೇಖಕರು :
ಶೇಣಿ ಗೋಪಾಲಕೃಷ್ಣ ಭಟ್
ಶನಿವಾರ, ನವ೦ಬರ್ 22 , 2014

ಯಕ್ಷಗಾನ ರ೦ಗಭೂಮಿಯಲ್ಲಿ ಆಳಿ ಬಾಳಿದ ಈ ಬಹುಸ೦ಖ್ಯಾತರಾದ ಕಲಾವಿದರೆಲ್ಲ ಆರ್ಥಿಕ - ಸಾಮಾಜಿಕ ರ೦ಗಗಳಲ್ಲಿ ಹಿ೦ದುಳಿದವರೆನಿಸಿಕೊ೦ಡ ಮಲೆಯಾಳ ಮಾತೃಭಾಷೆಯವರೇ ಆದ ಗಾಣಿಗ, ಜಾಡ, ಬೋವಿ, ಮಣಿಯಾಣಿಗಳೆ೦ಬ ವರ್ಗದವರೇ ಆಗಿದ್ದಿರಬೇಕೇ? ಇವರೇ ಮೊದಲಿಗೆ ಇದರ ಸೃಷ್ಟಿಕರ್ತರಾದರೆ? ಎ೦ಬ ಪ್ರಶ್ನೆ ಹುಟ್ಟುತ್ತದೆ. ಎ೦ತಿದ್ದರೂ ಯಕ್ಷಗಾನದ ಹುಲುಸಾದ ಬೆಳೆಗೆ ಇವರ ದೇಣಿಗೆಯ೦ತೂ ವಿಪುಲವಾಗಿತ್ತೆ೦ಬುದು ಸ್ಪಷ್ಟವಾಗಿದೆ. ಈ ವಿಚಾರಕ್ಕೆ ಪೂರಕವಾಗಿ - ಬಡಗುತಿಟ್ಟಿನಲ್ಲಿಯೂ ಹೆಸರಾ೦ತ ಕಲಾವಿದರನೇಕರು ಗಾಣಿಗ ಮೊಗವೀರಾದಿ ವರ್ಗದವೇ ಆಗಿದ್ದುದೂ, ಆಗಿರುವುದೂ ಗ್ರಾಹ್ಯ ವಿಷಯವಾಗಿದೆ.

ಗಗ್ಗರ ( ಭೂತಾರಾಧನೆಯ ವೇಷಧಾರಿಯ ಗೆಜ್ಜೆ )
ಈ ಸ೦ಬ೦ಧವನ್ನು ಚಿ೦ತಿಸುತ್ತಿದ್ದ೦ತೆ ನನಗೆ ಹೀಗೆ ಹೊಳೆಯುತ್ತದೆ. ಕೇರಳದ ಒತ್ತಿನ ನಮ್ಮ ಕನ್ನಡ ಜಿಲ್ಲೆಯಲ್ಲಿ; ಭೂತಾರಾಧನೆಯ ಜನಪದ ಧರ್ಮ ಪ್ರಚಲಿತವಷ್ಟೆ. ಭೂತಾರಾಧನೆಯ ವಿಶಿಷ್ಠ ಪ್ರಕ್ರಿಯೆಗೂ, ಯಕ್ಷಗಾನದ ಪರಿಕಲ್ಪನೆಗೂ ಬಹು ಹತ್ತಿರದ ನ೦ಟಿದೆ. ಸ೦ಧಿಪಾಡ್ದನಗಳನ್ನು ವಿಶಿಷ್ಠವಾದ ಲಯಗತಿಯಲ್ಲಿ ಹಿಮ್ಮೇಳದ ಹೆ೦ಗಸರು ಕೊರಳೆತ್ತಿ ಹಾಡುವರು. ಚಿಕ್ಕದುಡಿಯೊ೦ದು ಹಾಡಿನ ಗತಿಗೆ ತಾಳವನ್ನು ಕಲ್ಪಿಸುವುದು. ವೇಷಧಾರಿಯು (ಭೂತ ಕಟ್ಟುವವನು) ತಾನು ಯಾವ ಭೂತವನ್ನು ಪ್ರತಿನಿಧಿಸುವನೋ, ಆ ಭೂತದ ವಿಶಿಷ್ಠ ಸ್ವಭಾವಕ್ಕೆ ತಕ್ಕ೦ತೆ ಮುಖವರ್ಣಿಕೆಯನ್ನು ರಚಿಸುತ್ತ, ಗಗ್ಗರವನ್ನು ಕಾಲಿಗೆ ಕಟ್ಟಿಕೊ೦ಡು (ಗಗ್ಗರ = ಗೆಜ್ಜೆಯ ಮೂಲರೂಪ?) ಕುಣಿಯುವನು - ಸಾಮಾಜಿಕ ಪರಿಷತ್ತಿನ ಮು೦ದು.

ಈ ಭೂತ ಕಟ್ಟುವ ಜನ ಸಾಮಾನ್ಯವಾಗಿ; ಅಸ್ಪ್ರಶ್ಯರೆ೦ದು ಪರಿಗಣಿಸಲ್ಪಟ್ಟಿದ್ದ ಹೊಲೆಯರು. (ಇವರಲ್ಲಿ ಪರವರು, ನಲ್ಕೆಯವರು ಇತ್ಯಾದಿ ಪ್ರಭೇದಗಳಿವೆ.) ಬೇರಾರೂ ಭೂತ ಕಟ್ಟಬಾರದು. ಕಟ್ಟಲಾರರು. ಇದು ಸಾಮಾಜಿಕ ವಿಧಿ. ಹಾಗೆ೦ದು ಭೂತದ ಪರಿವಾರವನ್ನು ಪ್ರತಿನಿಧಿಸುವವರು (ಪೂಜಾರಿ ಇತ್ಯಾದಿ) ಅಸ್ಪೃಶ್ಯರಲ್ಲದ ಇತರ ಹಿ೦ದುಳಿದ ಜನವರ್ಗ.

ಭೂತಾರಾಧನೆಯಲ್ಲಿ ಸೇರಿದ ಆರಾಧನೆ ಮತ್ತು ಕಲಾವ೦ತಿಕೆಯ ಮನೋಧರ್ಮವೇ, ಅದರಲ್ಲಿ ನೇರವಾಗಿ ಭಾಗವಹಿಸಲಾರದ ಈ ಜನವರ್ಗವನ್ನು ಪ್ರಚೋದಿಸಿತು ಎ೦ದು ಸಕಾರಣವಾಗಿ ಊಹಿಸಲು ಸಾಧ್ಯ. ಈ ಪ್ರಚೋದನೆಯೇ ಸೃಷ್ಟಿಶೀಲ ಒತ್ತಡವಾಗಿ ಅಭಿವ್ಯಕ್ತಿಗೆ ತುಡಿಯುತ್ತ ಯಕ್ಷಗಾನವಾಗಿ ಹೊಮ್ಮಿತೆ? ಆದ್ದರಿ೦ದಲೇ ಯಕ್ಷಗಾನದಲ್ಲಿ ಆರಾಧನೆ ಮತ್ತು ಕಲಾವ೦ತಿಕೆಗಳೆರಡೂ ಸಮ್ಮಿಲಿತವಾದದ್ದಿರಬಹುದು. ಈಗ ಭೂತಾರಾಧನೆ ಮತ್ತು ಯಕ್ಷಗಾನದ ಪ್ರಕ್ರಿಯೆಗಳನ್ನು ವಿವರವಾಗಿ ಹೋಲಿಸೋಣ.

ಸ೦ಧಿ - ಪಾಡ್ದನಗಳು ಕಥಾ ವಿವರಗಳು ಹುದುಗಿರುವ ಹಾಡುಗಬ್ಬಗಳು. ಆ ಕಥನಕ್ಕೆ ತಕ್ಕ೦ತೆ ಭೂತದ ಕುಣಿತ. ಭೂತದ ಪ್ರವೇಶಕ್ಕೆ ಮುನ್ನ "ಕೊಡಿಯಡಿ" ಎನ್ನುವ, ಭೂತದ ಮುಖವಾಡವನ್ನೋ, ಆಯುಧವನ್ನೋ ಎತ್ತರದ ವೇದಿಕೆಯಲ್ಲಿರಿಸಿ "ಸನ್ನಿಧಾನ" ನಿರ್ಮಿತಿಯಾಗಬೇಕು. ಇದನ್ನು ಯಕ್ಷಗಾನದ ಪರಿಭಾಷೆಯಲ್ಲಿ ಚೌಕಿ ಎ೦ದು ಕರೆಯಬಹುದು. ಚೌಕಿಯಲ್ಲಿ, ರಾಜಕಿರೀಟವೊ೦ದನ್ನು ಎತ್ತರದಲ್ಲಿಟ್ಟು ದೀಪ ಹಚ್ಚಿ "ಸಾನ್ನಿಧ್ಯ" ನಿರ್ಮಿಸುವರು. ಭೂತಾವೇಷದ ಪ್ರಾರ೦ಭವೂ, ಅ೦ತ್ಯವೂ ಕೊಡಿಯಡಿಯಲ್ಲೇ. ಹಾಗೇ ಯಕ್ಷಗಾನದಲ್ಲೂ, ಚೌಕಿಯಲ್ಲೇ ಆರ೦ಭ, ಅಲ್ಲೇ ಕೊನೆ ಯಕ್ಷಾವೇಶಕ್ಕೆ.

ಗುಳಿಗ ಭೂತಾರಾಧನೆಯ ವೇಷಧಾರಿಯ ಮುಖವರ್ಣಿಕೆ
ಹಾಗೇ ಋತು ಪರಿಕ್ರಮದಲ್ಲಿ, ಭೂತಾರಾಧನೆ ಆರ೦ಭವಾಗುವುದು ದೀವಳಿಗೆ ಹಬ್ಬದ ನ೦ತರ. "ಪತ್ತನಾಜೆ" ಯ೦ದು ಆರಾಧನೆಗೆ ಕೊನೆ. ಇದು ಯಕ್ಷಗಾನಕ್ಕೂ ಅತ್ಯ೦ತ ಸಮರ್ಪಕವಾಗಿ ಅನ್ವಯಿಸುತ್ತದೆ. ಭೂತ ಕಟ್ಟುವವನು ತಾನು "ಗಗ್ಗರ" ಕಟ್ಟಲು ಸಾಮಾಜಿಕರ ಅನುಮತಿ ಕೇಳುವುದು ವಾಡಿಕೆ. ಯಕ್ಷರ೦ಗದಲ್ಲೂ ಗೆಜ್ಜೆ ಕಟ್ಟುವ ಮುನ್ನ ಚೌಕಿಯಲ್ಲಿ ನೆರೆದ ಹಿರಿಯರಿ೦ದ ಅನುಮತಿ ಬೇಡುವನು. ಯಕ್ಷಗಾನ ಪ್ರಬ೦ಧಗಳು ವೀರ - ರೌದ್ರರಸ ಪ್ರಧಾನ ಎ೦ಬುದು ಸರ್ವವಿದಿತವೇ ಆಗಿದೆ. ಈ ರಸಾಭಿವ್ಯಕ್ತಿಯು ಪಾರ೦ಪರಿಕವಾಗಿ ರ೦ಗದಲ್ಲಿ ಹೇಗೆ ಸ೦ಭವಿಸುತಿತ್ತು ಎ೦ಬುದನ್ನು ಅರಿತವರು "ಭೂತಾವೇಶ" ವೆ೦ದೇ ಇದನ್ನು ಕರೆದಾರು. ಅದೇ ಆರ್ಭಟ; ಅದೇ ಪಾರಣೆಯ ಕ್ರಮ; ಅದೇ ಪ೦ಜು ಬೆಳಕಿನ ರಮ್ಯಾದ್ಭುತ ನೋಟ; ಅದೇ ಆಗಮನ - ನಿರ್ಗಮನಗಳ ವೈಖರಿ. ಭೂತ ಬಿರಿದಾಗಿನ ಕುಣಿತದ ರೀತಿಯೇ ಯಕ್ಷಲೋಕದ ಬಣ್ಣದ ರಾಕ್ಷಸನದೂ ಆಗಿರುವಾಗ, ಈ ಯಕ್ಷಗಾನದ ಸೃಷ್ಟಿಕರ್ತರು ತಮ್ಮ ಸೃಷ್ಟಿಗೆ ತಾವು ಕ೦ಡ ಭೂತಾರಾಧನೆಯನ್ನೇ ಮಾದರಿಯಾಗಿ ಕಲ್ಪಿಸಿಕೊ೦ಡರೋ ಹೇಗೆ ಎ೦ದು ನನ್ನ ಮನಸ್ಸನ್ನು ಕಾಡುತ್ತಿರುತ್ತದೆ.

ಹೇಗಿದ್ದರೂ ಸ೦ಶೋಧನೆಗೆ ವಿಷಯವಾದ ಒ೦ದು ರಹಸ್ಯವಿದೆಯೆ೦ದು ನನಗನಿಸುತ್ತಿದೆ. ಈ ರಹಸ್ಯವು ಬೆಳಕಿಗೆ ಬ೦ದಾಗ, ಯಕ್ಷಗಾನವು ವಿಶಿಷ್ಠ ಕಲೆಯೇ ಆಗಿದ್ದರೂ, ಅವಿದ್ಯಾವ೦ತರ ಕೈಯಲ್ಲಿ ಬೆಳೆದು ಪಾಮರ ರ೦ಜಕ ಭಾಗಗಳೇ ಹೆಚ್ಚಿದ್ದವೆ೦ದೋ, ಹಿ೦ದುಳಿದ ವರ್ಗದವರ ಕೇಳೀವಿಲಾಸವೆ೦ದೋ ಬಗೆದು ವಿದ್ವಾ೦ಸರೂ ಮಡಿವ೦ತರೂ ಯಕ್ಷಗಾನವನ್ನು ತಿರಸ್ಕರಿಸುತ್ತಿದ್ದರೋ ಹೇಗೆ೦ಬುದು ವ್ಯಕ್ತವಾದೀತು. ಈ ಸಾಕ್ಷಾತ್ಕಾರವು ಯಾವ ಸತ್ಯವನ್ನಾದರೂ ಬಯಲಾಗಿಸಲಿ. ಆಗಿ ಹೋದ ಈ ಕಲಾವಿದರು ಪಾ೦ಡಿತ್ಯಾದಿ ವಿಷಯಗಳಲ್ಲಿ ಹಿ೦ದುಳಿದವರಾಗಿದ್ದು, ಅವರ ಪಾಮರತ್ವದ ಕೊಡುಗೆಯಾಗಿ ಯಕ್ಷಗಾನದಲ್ಲಿ ಕೆಲವು ಆಭಾಸಗಳೋ, ದೋಷಗಳೋ, ಲೋಪಗಳೋ ಕಾಣಿಸಿ ಅವು ಉಳಿದು ಬ೦ದುದು ನಿಜವೇ ಆದರೂ, ಇತರ ಗುಣಾ೦ಶಗಳನ್ನು ಗ್ರಹಿಸಿ, ಅವರ ಕಲ್ಪನಾ ಸಾಮರ್ಥ್ಯವನ್ನು ಬರೆಗಣ್ಣಿ೦ದ ಕಾಣುವಾಗ ಕಲಾಪ್ರಜ್ಞೆಯುಳ್ಳ ಯಾವ ಸಹೃದಯಿಯಾದರೂ ತಲೆದೂಗಲೇ ಬೇಕಾಗುತ್ತದೆ.

ರ೦ಗದಲ್ಲಿ ಪ್ರಸವವೇದನೆಯನ್ನೂ, ತೆರೆಯೊಳಗೆ ಹೆರಿಗೆಯಾಗುವುದನ್ನೂ ದೃಶ್ಯ ಶ್ರವ್ಯಗಳಿ೦ದ ಪ್ರದರ್ಶಿಸುವುದರ ಜೊತೆಗೆ ಹಾಸ್ಯಗಾರನು ಎಲ್ಲಾ ಹೊಣೆ ಹೊತ್ತವನಾಗಿ - ಪ್ರೇಕ್ಷಕರಾಗಿ ಬ೦ದ ಹೆ೦ಗಸರ ಸಭೆಯಲ್ಲಿ ಹೆರಿಸಬಲ್ಲವರು ಯಾರಾದರೂ ಇದ್ದರೆ ಬರಬೇಕಾಗಿ ಆಹ್ವಾನಿಸುವುದೂ, ಬ೦ದರೆ ಒ೦ದು ಸೇರು ಅಕ್ಕಿ ಜೊತೆಗೆ ತೆ೦ಗಿನಕಾಯಿಯೊ೦ದನ್ನೂ ಸ೦ಭಾವನೆಯಾಗಿ ನೀಡುವ ಘೋಷಣೆಯನ್ನು ಮಾಡುವುದೂ, ಹಾಸ್ಯವಾಗದೆ, ಹಾಸ್ಯಾಸ್ಪದವಾಗಿತ್ತು. ಇಷ್ಟಾಗುವಾಗ ಒಳಗಿನಿ೦ದ - ಮಗು ಹುಟ್ಟಿದ ಸೂಚನೆಯಾಗಿ - ಶಿಶುವಿನ ಅಳು ಕೇಳಿಸುವುದೂ, ಆಮೇಲೆ ಬಾಣ೦ತಿಯ ಸೋಗಿನಲ್ಲಿ ಹಾಸ್ಯಗಾರನ ಜೊತೆಯಾಗಿ "ಹಾಲು ಬೆಣ್ಣೆ ಕೊಡಿರವ್ವ" ಎ೦ಬ ಭಾಗವತರ ಹಾಡಿನೊ೦ದಿಗೆ, ರ೦ಗವನ್ನತಿಕ್ರಮಿಸಿ ಸಭೆಯನ್ನು ಪ್ರವೇಶಿಸಿ, ದೃಢವರ್ಮನ ಹೆ೦ಡತಿಯೋ, ಕೃತವೀರ್ಯನ ಹೆ೦ಡತಿಯೋ ಆಗಿರುವ ಮಹಾರಾಣಿಯ ಪಾತ್ರವೂ ಭಿಕ್ಷೆಯನ್ನೆತ್ತುವುದೂ ಮು೦ತಾದ ಆಭಾಸಗಳು ಯಕ್ಷಗಾನ ಬಯಲಾಟದಲ್ಲಿದ್ದುವು.

ಯಕ್ಷಗಾನದಲ್ಲಿ ಅಜ್ಜಿಯ ವೇಷ (ಸಾ೦ದರ್ಭಿಕ ಚಿತ್ರ)
"ರತಿಯ ಮೇಳದೊಳಿರ್ಪ ಕಾಮನು" ಎ೦ಬ ಭಾಗವತರ ಹಾಡಿನೊ೦ದಿಗೆ ತೆರೆ ಸರಿದು ರ೦ಗದಲ್ಲಿ ಒ೦ದೇ ಚಾಪೆಯಲ್ಲಿ ಮಲಗಿದ್ದ ರತಿ ಮನ್ಮಥರು ಕಾಣಿಸಿಕೊಳ್ಳೂತ್ತಿದ್ದುದೂ, ಶೂರ್ಪನಖಾ ವಿವಾಹದ ದೃಶ್ಯಾ೦ತ್ಯದಲ್ಲಿ ಅವರದ್ದೇ ಕಲ್ಪನೆಯ ಚಿತ್ರವಾಗಿದ್ದ ಕು೦ಟು ಕಾಲಿನ, ಎ೦ಟು ಡೊ೦ಕಿನ, ವಿಕೃತ ರೂಪದ ವಿದ್ಯುಜ್ಜಿಹ್ವನ ಮೇಲೆ ಶೂರ್ಪನಖಿಯು ಬಿದ್ದು ಹೊರಳಾಡುತ್ತಿದ್ದುದೂ ಅ೦ದಿನ ದಿನಗಳಲ್ಲಿ ರ೦ಗದ ಕ್ರಮಗಳಾಗಿದ್ದವು.

ಋಷಿಮುನಿಗಳ ಪಾತ್ರಗಳೆಲ್ಲ ವೇಷದಿ೦ದಲೂ ಭಾಷೆಯಿ೦ದಲೂ ತೀರಾ ಕೆಳಮಟ್ಟದವುಗಳೆನೆಸಿದ್ದುವು. ಇ೦ಥ ಕೆಲವು ದೋಷಪೂರ್ಣ ಅ೦ಶಗಳು ಈಗ ಉಳಿದಿಲ್ಲ. ಚಿಕ್ಕ೦ದಿನಲ್ಲಿ ನನಗೂ, ಅಪ್ರಬುದ್ಧ ಜನಕ್ಕೂ ಇವೆಲ್ಲ ರ೦ಜಕಗಳಾಗಿದ್ದುವಾದರೂ ಇ೦ಥವುಗಳನ್ನು ತೊರೆಯುವುದರ ಜೊತೆಗೆ ಮರೆತೇ ಬಿಡಬೇಕೆ೦ಬ ನಿರ್ಣಯಕ್ಕೆ ಮೂವತ್ತು ವರ್ಷಗಳ ಹಿ೦ದೆಯೇ ಬ೦ದಿದ್ದೇನೆ.

ಈ ದಿನಗಳಲ್ಲಿಯೂ "ಬ್ರಹ್ಮಕಪಾಲ" ದ ಈಶ್ವರನಾಗಲಿ, "ಬಪ್ಪನಾಡು ಕ್ಷೇತ್ರ ಮಹಾತ್ಮೆ" ಯ ಭಿಕ್ಷುಕಿಯಾಗಲಿ ಭಿಕ್ಷಾಪಾತ್ರವನ್ನು ಹಿಡಿದು ಸಭಾಸದರಿ೦ದ ಹಣಕಾಸುಗಳನ್ನು ಸ೦ಗ್ರಹಿಸುವುದನ್ನು ನಾನು ಆಕ್ಷೇಪಿಸುತ್ತೇನೆ. ಪಾತ್ರಗಳು ರ೦ಗದ ಹೊರಗೆ ಬ೦ದಾಗ ಕಥಾಪಾತ್ರಗಳಾಗಿರುವುದಿಲ್ಲ. ಅದು ಅಭಿನಯವೂ ಆಗಿರುವುದಿಲ್ಲ. ಹಾಸ್ಯದ ಹೆಸರಿನಲ್ಲಿ ಔಚಿತ್ಯದ ಗಡಿ ಮೀರಿ ಧರಿಸಲ್ಪಡುವ ವಿಕೃತ ವೇಷಗಳಾಗಲಿ, ಪ್ರಾಕೃತ ನಡೆನುಡಿಗಳಾಗಲಿ, ರ೦ಗದ ರ೦ಗನ್ನೇರಿಸುವ ನೆಪದಿ೦ದ ಗ್ರಾಹ್ಯವಾಗಬಾರದೆ೦ದು ನನ್ನ ಅಭಿಮತ.

ಮದುವೆ ಸೀತಾರಾಮರದ್ದೇ ಆಗಲಿ ಅಥವಾ ತುಳಸೀ ಜಲ೦ಧರರದ್ದೇ ಆಗಲಿ, ಅಲ್ಲಿ ಮದುವೆ ಮಾಡಿಸಲೆ೦ದು ಬರುವ ಪುರೋಹಿತನ ಪಾತ್ರದಿ೦ದ, ಪೌರಾಣಿಕ ಕಾಲದ ರಾಜವೈಭವದ ಮದುವೆಯ ಚಿತ್ರವನ್ನೇ ಅಪಹಾಸ್ಯಕ್ಕೀಡು ಮಾಡಿದ೦ತಾಗುವ ಸ೦ಭವವೇ ಹೆಚ್ಚಾಗಬಹುದಾದ್ದರಿ೦ದ, ಮಾತಿನಿ೦ದಲೇ ಮದುವೆ ಮುಗಿಸುವುದು ಎಷ್ಟೋ ಮೇಲೆ೦ಬವರಲ್ಲಿ ನಾನೂ ಒಬ್ಬನಾಗಿದ್ದೇನೆ.

ಯಕ್ಷಗಾನ ವೇಷಧಾರಿಯ ಗೆಜ್ಜೆ
ಹೀಗೆಯೇ ಕೆಲವು ಅಪಶಕುನಗಳ ಸೃಷ್ಟಿಯಲ್ಲಿ ಹಾಸ್ಯಗಾರರ ದೃಷ್ಟಿ, ಶ೦ಖ ಲಿಖಿತರು, ಚ೦ಡ ಅಮರ್ಕರೇ ಮು೦ತಾದ ಆಚಾರ್ಯರನ್ನು ಅವರು ಪ್ರದರ್ಶಿಸುವ ರೀತಿ ಇವೆಲ್ಲ ಸ೦ಸ್ಕರಣಗೊ೦ಡೇ ತೀರಬೇಕಾದ ಅಗತ್ಯ ಹೆಚ್ಚಿದೆ. ಇವುಗಳ ಪ್ರಾಚೀನತೆಯನ್ನೇ ಪರ೦ಪರೆಯೆ೦ದು ಮಾನಿಸುವುದು ಕಲೋಚಿತವೂ ಅಲ್ಲ, ಕಾಲೋಚಿತವೂ ಅಲ್ಲ. ಯಕ್ಷಗಾನದಲ್ಲಿ ಮಾತುಗಾರಿಕೆಗೊ೦ದು ಅರ್ಹ ಸ್ಥಾನವಿದ್ದು, ಮಿಕ್ಕ ಎಲ್ಲಾ ಸನ್ನಿವೇಶಗಳಲ್ಲಿಯೂ, ಭಾವ ಪ್ರಕಟಣೆಗೆ ಅದನ್ನೇ ಪ್ರಧಾನವಾಗಿ ಅವಲ೦ಬಿಸುವಾಗ, ರಾಕ್ಷಸ ವೇಷದ ಮತ್ತು ಹನುಮ೦ತನ ವೇಷದ ತೆರೆಪೊರಪ್ಪಾಡಿನಲ್ಲಿ ಮಾತ್ರ ಕಥಕ್ಕಳಿಯ೦ತೆ ತೋರುವ ಹಸ್ತಾಭಿನಯಗಳ ಅವಶ್ಯಕತೆಯಿದೆಯೆ? ಇದನ್ನು ಉಪೇಕ್ಷಿಸಿದರೆ ಯಕ್ಷಗಾನ ಕಲೆಗೆ ದೊಡ್ಡ ನಷ್ಟವಾದೀತೆ?

ಈ ಬಗ್ಗೆ ನನ್ನಷ್ಟಕ್ಕೆ ಆಲೋಚಿಸಿದಾಗ "ಬಿಟ್ಟರೆ ನಷ್ಟವೂ ಇಲ್ಲ; ಇಟ್ಟುಕೊ೦ಡರೆ ಲಾಭವೂ ಇಲ್ಲ" ಎ೦ಬ ತಿರ್ಮಾನಕ್ಕೆ ಬ೦ದವನಿದ್ದೇನೆ. ನಮ್ಮದಲ್ಲವಾದುದನ್ನು ನಾವು ಧರಿಸಿಕೊ೦ಡು ಎರವಲು ತ೦ದ ನಗಗಳಿಗೆ ಪ್ರದರ್ಶನವನ್ನೋ ಪ್ರಚಾರವನ್ನೋ ನೀಡಬೇಕಾದ ಕೆಲಸವನ್ನು ಮಾಡಬೇಕಾಗಿಲ್ಲ. ಹೀಗೆ ನನ್ನ ಬಾಲ್ಯದ ಆರನೇ ವಯಸ್ಸಿನಿ೦ದ ಹದಿನಾರರ ವಯಸ್ಸಿನ ಹತ್ತು ವರ್ಷಗಳ ಅ೦ತರದ ವಿದ್ಯಾರ್ಥಿ ಜೀವನದ ಅವಧಿಯಲ್ಲಿ ನಾನು ಕ೦ಡ ಬಯಲಾಟಗಳಲ್ಲಿ ಕೆಲವನ್ನು ನೆನಪಿಸಿಕೊ೦ಡು - ಇ೦ದಿನ ನನ್ನ ದೃಷ್ಟಿಕೋನದಲ್ಲಿ - ಅ೦ದಿನ ಬಯಲಾಟಗಳ ಮೌಲ್ಯ ಮಾಪನವನ್ನು ಮಾಡಿದ್ದೇನೆ.

( ಮು೦ದುವರಿಯುವುದು... )


ನಾಟಕಗಳ ಅನುಭವ ನನ್ನ ಕಲಾಜೀವನದ ಗೆಲುವಿಗೆ ಮೂಲಧನವಾಯ್ತು (ಭಾಗ-4)


****************


ಕೃಪೆ :http://www.ourkarnataka.com


ಯುಗಪ್ರವರ್ತಕ ಶೇಣಿ ಗೋಪಾಲಕೃಷ್ಣ ಭಟ್ ರವರ ಆತ್ಮಕಥನ ``ಯಕ್ಷಗಾನ ಮತ್ತು ನಾನು``
Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ